ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮತದಾರರಿಗೆ ಮಾನ್ಯತೆಯೇ ಇಲ್ಲವೇ?' – ನಾ ದಿವಾಕರ್ ಕೇಳ್ತಾರೆ

ನಾ ದಿವಾಕರ

ಅತ್ಯಂತ ಶ್ರೇಷ್ಠ ಎನ್ನಬಹುದಾದ ಭಾರತದ ಸಂವಿಧಾನದಲ್ಲಿ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ. ಸಮಾನತೆಯ ದೃಷ್ಟಿಯಿಂದ ಚುನಾಯಿತ ಪ್ರತಿನಿಧಿಗಳಿಗೂ ಕೆಲವು ಹಕ್ಕುಗಳನ್ನು ದಯಪಾಲಿಸಲಾಗಿದೆ. ಶಾಸನ ಸಭೆಗೆ ಒಮ್ಮೆ ಆಯ್ಕೆಯಾದ ಪ್ರತಿನಿಧಿಗೆ ಮತ್ತೊಮ್ಮೆ ಸಂಸತ್ತಿಗೆ ಆಯ್ಕೆಯಾಗಲು, ಸಂಸತ್ ಸದಸ್ಯರಿಗೆ ಶಾಸನಸಭೆಗೆ ಆಯ್ಕೆಯಾಗಲು, ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಿಗೆ ಒಮ್ಮೆಲೆ ಸ್ಪರ್ಧಿಸಲು ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಪ್ರಜಾ ಪ್ರಾತಿನಿಧ್ಯ ಸಂಹಿತೆಗೆ ಅನುಗುಣವಾಗಿ ಈ ಉದಾತ್ತ ನಿಯಮವನ್ನು ಸಂವಿಧಾನ ಕರ್ತೃಗಳು ದಯಪಾಲಿಸಿರಬೇಕು. ಆದರೆ ಅವಕಾಶಗಳನ್ನು ಬಳಸಿಕೊಳ್ಳುವ ಭರದಲ್ಲಿ ಮೂಲ ಪ್ರಜಾತಾಂತ್ರಿಕ ಮೌಲ್ಯಗಳನ್ನೂ ಲೆಕ್ಕಿಸದೆ ದುರುಪಯೋಗವಾದಾಗ ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತದೆ. ಭಾರತದ ರಾಜಕಾರಣಿಗಳು ಏಕ್ ಧಕ್ಕಾ ಔರ್ ದೋ ಸಂವಿಧಾನ್ ಕೊ ತೋಡ್ ದೋ (ಅಯೋಧ್ಯೆ ಘೋಷಣೆಯ ಅಪಭ್ರಂಶ) ಎಂದು ಮುನ್ನಡೆಯುತ್ತಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಮಾಧ್ಯಮಗಳ ಕೃಪೆಯಿಂದ ಈಗಾಗಲೇ ಸ್ವಘೋಷಿತ ಭಾರತದ ಪ್ರಧಾನಮಂತ್ರಿಯಾಗಿ ಬಿಂಬಿಸಲ್ಪಡುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಮ್ಮ ಆಯ್ಕೆ ಶತಃಸಿದ್ಧ ಎಂಬ ವಿಶ್ವಾಸ ಇದ್ದಾಗ್ಯೂ ವಡೋದರಾ ಮತ್ತು ವಾರಣಾಸಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ವಿಜಯಿಯಾದಲ್ಲಿ ಮತ್ತೊಂದು ಉಪಚುನಾವಣೆ ಅನಿವಾರ್ಯವಾಗುತ್ತದೆ. ಇದು ಪಕ್ಷಾತೀತವಾದ ಪರಂಪರೆಯಾಗಿ ಬೆಳೆದುಬಂದಿದ್ದು, ತಮ್ಮ ಸಾಧನೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಸ್ವತಃ ವಿಶ್ವಾಸವಿಲ್ಲದ ರಾಜಕಾರಣಿಗಳು ಈ ತಂತ್ರ ಅನುಸರಿಸುತ್ತಾರೆ. ಪ್ರಜಾ ಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಈ ಸವಲತ್ತನ್ನು ರದ್ದುಪಡಿಸಲು ಚುನಾವಣಾ ಆಯೋಗ ಶಿಫಾರಸು ಮಾಡಿದ್ದರೂ ಕ್ಯಾರೇ ಅನ್ನುವವರಿಲ್ಲ. ಎಷ್ಟಾದರೂ ಸಂವಿಧಾನ ಆಳ್ವಿಕರ ಸ್ವತ್ತಾಗಿದೆ ಅಲ್ಲವೇ ? ಕಾರ್ಯಾಂಗ, ನ್ಯಾಯಾಂಗಕ್ಕೆ ಬೆಲೆ ಎಲ್ಲಿದೆ ?

ಕರ್ನಾಟಕದಲ್ಲಿ ಮತ್ತೊಂದು ರೀತಿಯ ಪ್ರಹಸನ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 2004ರ ವಿಧಾನಸಭಾ ಚುನಾವಣೆಗಳಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಿಜೆಪಿಯೊಡನೆ ಮೈತ್ರಿ ಸಾಧಿಸುವ ಮೂಲಕ ಮುಖ್ಯಮಂತ್ರಿಯಾಗಿಯೂ ಆಯ್ಕೆಯಾದರು. ಕೆಲ ಕಾಲ ಅಧಿಕಾರದ ರುಚಿ ಕಂಡು ಪದಚ್ಯುತರಾದ ನಂತರ 2009ರಲ್ಲಿ ಅದೇಕೋ ರಾಜ್ಯ ರಾಜಕಾರಣ ಬೇಡ ಎನಿಸಿತು. ದೆಹಲಿಯ ಸವಿ ಅನುಭವಿಸುವ ಮಹದಾಕಾಂಕ್ಷೆಯಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಮತ್ತೊಂದು ಉಪಚುನಾವಣೆ. ಲೋಕಸಭೆಯಲ್ಲಿ ಏನು ಸಾಧಿಸಿದರೋ ತಿಳಿಯದು. ಪುನಃ ರಾಜ್ಯ ರಾಜಕಾರಣಕ್ಕೆ ಮರಳುವ ಇಚ್ಚೆ ಮೂಡಿತು. ಬಹುಶಃ ಕರ್ನಾಟಕದ ಜನತೆಗೆ ಮತ್ತಷ್ಟು ಸೇವೆ ಸಲ್ಲಿಸುವ ಆಕಾಂಕ್ಷೆ ಮೂಡಿತೋ ಏನೋ. 2013ರಲ್ಲಿ ನಡೆದ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸಿದರು. ಪುನಃ ಗೆಲುವು. ಮತ್ತೊಮ್ಮೆ ಲೋಕಸಭೆ ಸ್ಥಾನಕ್ಕೆ ಉಪ ಚುನಾವಣೆ. ಲಭಿಸಿದ್ದ ವಿರೋಧ ಪಕ್ಷ ನಾಯಕನ ಸ್ಥಾನ ಕಳಚಿ ಬಿಜೆಪಿಗೆ ಒಲಿಯಿತು. ಕೃಪೆ, ಯಡಿಯೂರಪ್ಪನವರ ರಾಜಕೀಯ ಶೀರ್ಷಾಸನ ಮತ್ತು ಬಿಜೆಪಿ ಸೇರ್ಪಡೆ. ಈಗ ಮತ್ತೊಮ್ಮೆ ಮಾನ್ಯ ಕುಮಾರಸ್ವಾಮಿಯವರು ದೆಹಲಿ ಗದ್ದುಗೆಯತ್ತ ನಡೆದಿದ್ದಾರೆ. 16ನೆಯ ಲೋಕಸಭೆ ಪ್ರವೇಶಿಸಿ ಕರ್ನಾಟಕದ ಜನತೆಗೆ ಇನ್ನೂ ಹೆಚ್ಚಿನ ಮೌಲಿಕ ಸೇವೆ ಸಲ್ಲಿಸಲು ಸಜ್ಜಾಗುತ್ತಿದ್ದಾರೆ. ಮತ್ತೊಂದು ಉಪಚುನಾವಣೆಗೆ ಕರ್ನಾಟಕದ ಜನತೆ ಸಜ್ಜಾಗಬೇಕಿದೆ. ಇವರೊಡನೆ ಯಡಿಯೂರಪ್ಪ ಸೇರಿದಂತೆ ಒಂಭತ್ತು ಶಾಸಕರು ಸ್ಪರ್ಧಿಸುತ್ತಿದ್ದಾರೆ.
ಇಲ್ಲಿ ಪ್ರಶ್ನೆ ಉದ್ಭವಿಸುವುದು ಕೇವಲ ಸಂವಿಧಾನವನ್ನು ಕುರಿತಾದದ್ದು ಅಲ್ಲ. ಈ ಪ್ರಭೃತಿಗಳನ್ನು ಆಯ್ಕೆ ಮಾಡಿ ಶಾಸನಸಭೆ-ಸಂಸತ್ತಿಗೆ ಕಳುಹಿಸುವ ಮತದಾರರನ್ನು ಕುರಿತಾದದ್ದು. ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ವಿಧಾನಸಭೆಯಲ್ಲಿ ಶ್ರಮಿಸಿ ನಮ್ಮನ್ನು ಉದ್ಧಾರ ಮಾಡುತ್ತಾರೆ ಎಂಬ ಭ್ರಮೆಯಲ್ಲಿ ಸಾರ್ವಭೌಮ ಪ್ರಜೆಗಳು ತಮ್ಮ ನೇತಾರರಿಗೆ ತಮ್ಮ ಅಮೂಲ್ಯ ಮತ ನೀಡಿ ಆಯ್ಕೆ ಮಾಡಿ ಕಳುಹಿಸುತ್ತಾರೆ. ಆದರೆ ಈ ಪ್ರತಿನಿಧಿಗಳು ಮತದಾರರ ವಿಶ್ವಾಸಕ್ಕೆ, ಅಮೂಲ್ಯ ಮತಕ್ಕೆ, ಆಕಾಂಕ್ಷೆಗಳಿಗೆ, ಮೌಲ್ಯಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡದೆ, ಬಳಸಿ ಬಿಸಾಡುವ ತ್ಯಾಜ್ಯದಂತೆ ಕಡೆಗಣಿಸಿ ತಮಗೆ ಅನುಕೂಲಕರವಾದ ಹಸಿರು ಹುಲ್ಲನ್ನು ಅರಸಿ ಮುನ್ನಡೆಯುತ್ತಿರುತ್ತಾರೆ. ಏಕೆ ಮತದಾರರ ಸಾಂವಿಧಾನಿಕ ಹಕ್ಕಿಗೆ ಮೌಲ್ಯವೇ ಇಲ್ಲವೇ ? ಉಪಚುನಾವಣೆಯ ಖರ್ಚನ್ನು ಭರಿಸುವವರಾರು ? ಈ ಪ್ರಭೃತಿಗಳ ಕಪ್ಪೆ ಹಾರಾಟಕ್ಕೆ ಮತದಾರರ ಒಪ್ಪಿಗೆ ಪಡೆಯಲಾಗಿದೆಯೇ ? ಇವರ ಸ್ವಾರ್ಥ ರಾಜಕಾರಣಕ್ಕೆ ರಾಜ್ಯದ ಬೊಕ್ಕಸವೇಕೆ ಬಲಿಯಾಗಬೇಕು ? ನಿಮ್ಮ ಒಂದು ಮತವೂ ಅಮೂಲ್ಯ ಎಂದು ಹೇಳುವ ಆಳುವ ವರ್ಗಗಳಿಗೆ ಈ ಮತವನ್ನು ತ್ಯಾಜ್ಯದಂತೆ ನಿರ್ಲಕ್ಷಿಸುವ ಹಕ್ಕು ನೀಡಿದವರಾದರೂ ಯಾರು ? ನೈತಿಕ ಮೌಲ್ಯಗಳಂತೂ ರಾಜಕಾರಣದಲ್ಲಿ ಇಲ್ಲ ಕನಿಷ್ಠ ಸಾಂವಿಧಾನಿಕ ಮೌಲ್ಯಗಳಾದರೂ ಇರಬೇಕಲ್ಲವೇ ?

‍ಲೇಖಕರು avadhi

14 April, 2014

1 Comment

  1. M.A.Sriranga

    ದಿವಾಕರ್ ಅವರಿಗೆ–ನಮ್ಮ ಸಂವಿಧಾನದಲ್ಲಿ ತಾವು ಹೇಳಿರುವುದರ ಜತೆಗೆ ಇನ್ನೂ ಇತರ “ಅನಪೇಕ್ಷಣೀಯ ” (not required ಎಂಬ ಅರ್ಥದಲ್ಲಿ ) ಅಂಶಗಳು ಇವೆ. ಆದರೆ ಸಂವಿಧಾನದಲ್ಲಿನ ಇಂತಹ ಅಂಶಗಳನ್ನು ತೆಗೆದು ಹಾಕಲು ಆಳುವ ಪಕ್ಷಕ್ಕೆ absolute majority ಬೇಕು. ಒಂದು ವೇಳೆ ಅದೂ ಇದೆ ಎಂದು ಭಾವಿಸೋಣ. ಆಗ “ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ”, “ಮಾನವ ಹಕ್ಕುಗಳ ದಮನ” ಇತ್ಯಾದಿಗಳ ಹೆಸರಿನಲ್ಲಿ ಪಾರ್ಲಿಮೆಂಟ್ ನ ಹೊರಗೆ,ಒಳಗೆ ಗಲಾಟೆಗಳು, ಪ್ರದರ್ಶನಗಳು ಪ್ರಾರಂಭವಾಗುತ್ತವೆ. ಟಿ ವಿ ,ಪತ್ರಿಕೆಗಳಲ್ಲಿ ದಿನಗಟ್ಟಲೆ ಚರ್ಚೆಗಳು ,ಆರೋಪ,ಪ್ರತ್ಯಾರೋಪಗಳ ಸಿಡಿಲು,ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತವೆ. ಪ್ರಜಾಪ್ರಭುತ್ವ ಬೇಕೆಂದರೆ ಕೆಲವು not required ಅಂಶಗಳ ಜತೆ ಬಾಳ್ವೆ ನಡೆಸಲೇಬೇಕು. ಇಂದು absolute majority ಇರುವ ಪಕ್ಷದ ಸರ್ಕಾರ ಒಂದುವೇಳೆ ಸಂವಿಧಾನಕ್ಕೆ ತಿದ್ದುಪಡಿ ತಂದು “ಅನಪೇಕ್ಷಣೀಯ” ಕಲಂಗಳನ್ನು ತೆಗೆದುಹಾಕಿತು ಎಂದೇ ಇಟ್ಟುಕೊಳ್ಳೋಣ ,ಆಗ ಮುಂದಿನ ಚುನಾವಣೆಯಲ್ಲಿ ಇದೇ ವಿರೋಧ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗುತ್ತದೆ. ತಾನೇ ಹಗ್ಗ ಕೊಟ್ಟು ತನ್ನ ಕೈಗಳನ್ನು ಕಟ್ಟಿಸಿಹಾಕಿಕೊಳ್ಳಲು ಯಾವ ಪಕ್ಷ ಸಿದ್ಧವಾಗಿದೆ?– ಎಂ ಎ ಶ್ರೀರಂಗ ಬೆಂಗಳೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading