ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಣಿಲಾಲ್ ಭೌಮಿಕ್ ಬರೆದ 'ಕೋಡ್ ನೇಮ್ ಗಾಡ್' ಬೆಳೆಸಿದ ಚರ್ಚೆ

ಬ್ರಹ್ಮಾಂಡವೆಂಬ ವಿಸ್ಮಯದ ಸುತ್ತ

-ಜಿ ಪಿ ಬಸವರಾಜು

ಬ್ರಹ್ಮಾಂಡ ಎನ್ನುವುದು ನಿಜವೆ, ಕಲ್ಪನೆಯೇ? ‘ನಿಜ’ದ ನಿಲುಕಿಗೆ ಸಿಕ್ಕದೇ ಇರುವುದನ್ನೆಲ್ಲ ನಾವು ಕಲ್ಪನೆ ಎಂದೇ ಭಾವಿಸುತ್ತೇವೆ. ಬ್ರಹ್ಮಾಂಡ ನಿಜವೂ ಹೌದು; ಕಲ್ಪನೆಯೂ ಹೌದು. ಇದು ನಮ್ಮ ಜಗತ್ತು ಎಂದು ಭಾವಿಸುವ ಜಗತ್ತಿನ ಆಚೆಗೂ ಚಾಚಿಕೊಂಡಿರುವ ಇನ್ನೆಷ್ಟೋ ಜಗತ್ತುಗಳಿವೆ ಎಂಬುದನ್ನು ವಿಜ್ಞಾನ ನಮಗೆ ತೋರಿಸಿಕೊಟ್ಟಿದೆ. ಇದನ್ನೇ ನಾವು ಬ್ರಹ್ಮಾಂಡ ಎಂದು ಕರೆದು ನಮ್ಮ ಊಹೆಗೊಂದು ಚೌಕಟ್ಟನ್ನು ಹಾಕಲು ನೋಡಿದ್ದೇವೆ. ಈ ಬ್ರಹ್ಮಾಂಡ ಎಷ್ಟು ದೊಡ್ಡದು, ಎಷ್ಟು ವಿಸ್ತಾರಕ್ಕೆ ಚಾಚಿಕೊಂಡಿದೆ? ಎಡ್ವಿನ ಹಬಲ್ ಬರುವವರೆಗೆ ನಮ್ಮ ಬ್ರಹ್ಮಾಂಡಕ್ಕೊಂದು ಮಿತಿ ಇದ್ದಂತೆ ಭಾಸವಾಗುತ್ತಿತ್ತು. ಬ್ರಹ್ಮಾಂಡ ಬದಲಾಗದ ಒಂದು ಸ್ಥಿರ ವಸ್ತು ಎನ್ನುವ ನಂಬಿಕೆಯೂ ಇತ್ತು. ಆದರೆ ಹಬಲ್ ಟೆಲಿಸ್ಕೋಪ್ನಲ್ಲಿ ಕಂಡ, ತೋರಿಸಿಕೊಟ್ಟ ಬೆಚ್ಚಿಬೀಳಿಸುವ ಸತ್ಯಗಳು ಬ್ರಹ್ಮಾಂಡ ಎನ್ನವುದು ನಮ್ಮ ಕಲ್ಪನೆಗೂ ಮೀರಿದ ಲೋಕ ಎನ್ನುವುದು ನಮಗೆಲ್ಲ ತಿಳಿಯಿತು.
ಕಾಲ ಮತ್ತು ದೇಶಗಳ (ಟೈಂ ಅಂಡ್ ಸ್ಪೇಸ್) ಮೂಲಕ ಈ ಬ್ರಹ್ಮಾಂಡವನ್ನು ಅರಿಯಲು ಮನುಷ್ಯ ಪ್ರಯತ್ನಿಸಿರುವುದು ನಮಗೆ ಕಾಣುತ್ತದೆ. ಮಿಲಿಯಾಂತರ ಮೈಲುಗಳ ದೂರದಲ್ಲಿರುವ ಗ್ರಹ, ತಾರೆ, ನೀಕಾರಿಕೆಗಳು, ಅವುಗಳ ನಡುವಿರುವ, ಗ್ರಹಿಕೆಗೆ ನಿಲುಕದ ಸೂಕ್ಷ್ಮ ಸಂಬಂಧ, ಆಕಾಶದಲ್ಲಿರುವ ಲೆಕ್ಕಕ್ಕೆ ಸಿಕ್ಕದಷ್ಟು ನಕ್ಷತ್ರ ಪುಂಜಗಳು (ಗೆಲಾಕ್ಸಿಗಳು), ಇವೆಲ್ಲದರ ನಡುವೆ ಇರುವ ಭೂಮಿ, ಇದರ ಜೀವ ಜಗತ್ತು ಇದೆಲ್ಲ ನಮಗೆ ಅರ್ಥವಾಗದೆ ಗೊಂದಲಕ್ಕೀಡಾಗುತ್ತೇವೆ. ಪೂರ್ಣತೆಯ ಕಲ್ಪನೆ ಮತ್ತು ಶೂನ್ಯದ ಕಲ್ಪನೆಗಳ ಮಧ್ಯೆ ವ್ಯತ್ಯಾಸವೇ ಇಲ್ಲ ಎಂದು ವಿಜ್ಞಾನಿಗಳೂ ಹೇಳಿದಾಗ ನಮ್ಮ ಗೊಂದಲ ಇನ್ನಷ್ಟು ಹೆಚ್ಚಾಗಿ ನಮ್ಮ ಅರಿವಿನ ಮಿತಿ ಎಷ್ಟೊಂದು ಕುಬ್ಜ ಎನಿಸುತ್ತದೆ. ಆದರೂ ಮನುಷ್ಯ ಈ ಬ್ರಹ್ಮಾಂಡವನ್ನು ತಿಳಿಯಲು, ಕಾಲ-ದೇಶಗಳ ಸಂಬಂಧವನ್ನು ತನ್ನ ಅರಿವಿನ ಚೌಕಟ್ಟಿಗೆ ತಂದುಕೊಳ್ಳಲು ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಬಂದಿದ್ದಾನೆ. ಒಂದು ಕಡೆ ವಿಜ್ಞಾನ ಮತ್ತೊಂದು ಕಡೆ ತತ್ವಜ್ಞಾನ. ಇವೆರಡೂ ಚಲಿಸುತ್ತಿರುವ ದಿಕ್ಕು ಬೇರೆಬೇರೆಯಾಗಿರುವಂತೆ ಕಂಡರೂ, ತಲುಪಲು ನಿರ್ಧರಿಸಿಕೊಂಡಿರುವ ಗುರಿ ಒಂದೇ ಎನ್ನಿಸುತ್ತದೆ.
ನಮಗಿರುವ ಕಾಲ, ದೂರದ ಇನ್ನೊಂದು ಗ್ರಹಕ್ಕಿರುವ ಕಾಲ, ಬಿಲಿಯಾಂತರ ಗ್ರಹ ತಾರೆಗಳು ಕಟ್ಟಿಕೊಡುವ ಕಾಲ, ಈ ಬ್ರಹ್ಮಾಂಡವೆನ್ನುವ ಊಹೆಗೆ ಸಿಕ್ಕದ ಉದ್ದಗಲ ವಿಸ್ತಾರ-ಇದು ಯಾವುದೂ ಮನುಷ್ಯ ಕಲ್ಪನೆಗೆ ನಿಖರವಾಗಿ ಸಿಕ್ಕುವುದೇ ಇಲ್ಲ.
ಈ ಬ್ರಹ್ಮಾಂಡ ಯಾವಾಗ ಹುಟ್ಟಿತು, ಇದರ ಕೊನೆ ಯಾವಾಗ; ಅಥವಾ ಕೊನೆ ಮೊದಲೆಂಬುದೇ ಇದಕ್ಕೆ ಇಲ್ಲವೇ? ತನ್ನ ಅರಿವಿನ ಮಿತಿಯಲ್ಲಿ, ಅನುಭವದ ಪಾತಳಿಯಲ್ಲಿ ಮೊದಲು, ಕೊನೆಗಳನ್ನು ಕಂಡುಕೊಂಡ ಮನುಷ್ಯ ಅದೇ ಜಾಡಿನಲ್ಲಿ ಈ ಬ್ರಹ್ಮಾಂಡದ ಕೊನೆ ಮೊದಲುಗಳನ್ನೂ ಹುಡುಕುತ್ತಿದ್ದಾನೆಯೇ? ಇದೆಲ್ಲವನ್ನು ದಾಟಿದ, ಕೊನೆಮೊದಲುಗಳೇ ಇಲ್ಲದ ಸ್ಥಿತಿಯೊಂದು ಇರಬಹುದೇ? ಅಥವಾ ಈ ಬ್ರಹ್ಮಾಂಡವೆಂಬ ನಿರಂತರ ಪ್ರವಾಹದಲ್ಲಿ ಕೊನೆಮೊದಲಿಗೆ ಅರ್ಥವೇ ಇಲ್ಲವೇ? ‘ಮಹಾಸ್ಫೋಟ’ ಸಿದ್ಧಾಂತ ವಿವರಿಸುವುದು ಏನು? ಈ ಮಹಾಸ್ಫೋಟ ಎಂಬುದು ಕಿವಿಗಡಚಿಕ್ಕುವ ಮಹಾ ಸದ್ದೇ? ಅಥವಾ ಸದ್ದೇ ಇಲ್ಲದ ಸ್ಫೋಟವೇ? ಈ ಮಹಾಸ್ಫೋಟವನ್ನು ಕೇಳಿದವರು ಯಾರು? ಅಪಾರ ವಿಸ್ತಾರಕ್ಕೆ ಚಾಚಿಕೊಂಡಿರುವ ಈ ಬ್ರಹ್ಮಾಂಡದಲ್ಲಿ ನಡೆದ ಮಹಾಸ್ಫೋಟ ಕೇಳಬೇಕೆಂದೇನೂ ಇಲ್ಲ. ಇದರ ಬೆನ್ನುಹತ್ತಿದ ವಿಜ್ಞಾನ ಕಂಡುಕೊಂಡ ಸತ್ಯಗಳೇ ಬೇರೆ. ಮಹಾಸ್ಫೋಟದಿಂದ ಬಾಹ್ಯಾಕಾಶ ವಿಸ್ತರಿಸಿತು, ಬಾಹ್ಯಾಕಾಶವೂ ವಿಸ್ತರಿಸಬಲ್ಲದು-ಈ ಸತ್ಯ ಬೆಚ್ಚಿಬೀಳಿಸುತ್ತದೆ. ಬಾಹ್ಯಾಕಾಶದ ಬಗೆಗಿನ ನಮ್ಮ ಕಲ್ಪನೆಯನ್ನೇ ತಲೆಕೆಳಗೆ ಮಾಡುತ್ತದೆ. ಬ್ರಹ್ಮಾಂಡ ವಿಜ್ಞಾನ (ಕಾಸ್ಮೊಲಜಿ) ಇವತ್ತು ವಿಜ್ಞಾನಿಗಳ ಅತ್ಯಂತ ಕುತೂಹಲದ ಕ್ಷೇತ್ರವಾಗಿ ವಿಜ್ಞಾನಿಗಳನ್ನು ಕೆಣಕುತ್ತಿದೆ; ಹೊಸ ಹೊಸ ಅಧ್ಯಯನಗಳಿಗೆ ಪ್ರೇರೇಪಿಸುತ್ತಿದೆ.
ವಿಜ್ಞಾನದ ಜೊತೆಜೊತೆಯಲ್ಲಿಯೇ ಅಧ್ಯಾತ್ಮವೂ ತನ್ನ ಹಾದಿಯಲ್ಲಿ ನಡೆದು ಇಂಥ ಪ್ರಶ್ನೆಗಳನ್ನು ಕಾಲಾಂತರದಿಂದ ಎದುರುಗೊಳ್ಳುತ್ತಲೇ ಇದೆ.
ಅಂತೂ ಮನುಷ್ಯನ ಹುಡುಕಾಟ ನಿಂತಿಲ್ಲ.

ಮನುಷ್ಯ ಕೇಂದ್ರದಿಂದ ಈ ಹುಡುಕಾಟಕ್ಕೆ ಹೊರಟ ಬುದ್ಧ ‘ತಪಸ್ಸಿ’ಗೆ, ಧ್ಯಾನಕ್ಕೆ ಕುಳಿತ ಎನ್ನುವುದರ ಅರ್ಥ ಏನು? ಮೊದಲು ತನ್ನ ದೇಹವನ್ನು ಎಲ್ಲ ರೀತಿಯ ದಂಡನೆಗೂ ಒಳಪಡಿಸಿದ ಬುದ್ಧ ಇದರಿಂದ ಹೆಚ್ಚು ಪ್ರಯೋಜವಾಗಲಾರದೆಂಬುದನ್ನು ಕಂಡುಕೊಂಡ. ದೇಹ-ಮನಸ್ಸುಗಳಿಗಿರುವ ಗಾಢ ಸಂಬಂಧವನ್ನು ಅರಿತುಕೊಂಡ. ಒಂದೆಡೆ ಕುಳಿತು ಮನಸ್ಸಿನ ಯಾನವನ್ನು ಕೈಗೊಂಡ. ಈ ಯಾನ ಎಂದರೆ ಕಾಲವನ್ನು ಅರಿಯುವ ಪ್ರಯತ್ನವಾಗಿಯೇ ಕಾಣಿಸುತ್ತದೆ. ಹಿಂದೆ ಹಿಂದೆ ಸರಿದು ಮತ್ತೆ ಇವತ್ತಿಗೆ ಮರಳಿ ಬರುವುದು. ಈ ಕಾಲಯಾನ ಎಂಬುದು ನಮ್ಮ ನಂಬಿಕೆಯ ಜನ್ಮಾಂತರಗಳ ಪರ್ಯಟನವನ್ನು ಕೈಗೊಳ್ಳಲು ಪ್ರೇರೇಪಿಸಿರುವಂತೆಯೂ ಕಾಣಿಸುತ್ತದೆ. ಹಿಂದಿನ ಜನ್ಮದಲ್ಲಿ ತಾನೇನಾಗಿದ್ದೆ, ಎನ್ನುವುದರ ಅರ್ಥ ಕಾಲಯಾನದಲ್ಲಿ ಹಿಮ್ಮುಖದ ನಡೆ. ವರ್ತಮಾನ ಕಾಲವನ್ನು ಮೀರಿ ಭೂತ, ಭವಿಷ್ಯತ್ತುಗಳಲ್ಲಿ ಚಲಿಸುವುದು.
ಕಾಲವನ್ನು ಅರಿಯುವುದು ಅಥವಾ ಕಾಲದ ಮಿತಿಯನ್ನು ಕಂಡುಕೊಳ್ಳುವುದು ವಿಜ್ಞಾನದ ಹುಡುಕಾಟದಲ್ಲಿ ಮುಖ್ಯ ಪ್ರಯತ್ನ. ಬೆಳಕಿನ ಚಲನೆ, ಜ್ಯೋತಿರ್ವರ್ಷಗಳು, ವಿಸ್ತರಿಸುತ್ತಿರುವ ಬ್ರಹ್ಮಾಂಡ, ಗ್ರಹಗಳ ನಡುವಿನ ಅಂತರ, ಈ ಹಿನ್ನೆಲೆಯಲ್ಲಿ ತಲೆಕೆಳಗಾಗುವ ಕಾಲದ ಕಲ್ಪನೆ ಇತ್ಯಾದಿ ಸಿಕ್ಕುಸಿಕ್ಕಾದ ಸಂಗತಿಗಳ ವಿಶ್ಲೇಷಣೆಯಲ್ಲಿ ತೊಡಗಿರುವ ವಿಜ್ಞಾನ ಕಾಲಕಾಲಕ್ಕೆ ಕಂಡುಕೊಳ್ಳುತ್ತಿರುವ ಹೊಸ ಹೊಸ ಸಂಗತಿಗಳು ಮನುಷ್ಯನ ಅರಿವಿನ ಮಿತಿಯನ್ನು ಮತ್ತೆ ಮತ್ತೆ ನೆನಪಿಸುತ್ತ ಹೋಗಿವೆ. ಕಾಲ ನಮ್ಮ ಕೈಗೆ ಸುಲಭಕ್ಕೆ ಎಟಕುವ ಸಂಗತಿಯಲ್ಲ; ಹಾಗೆಯೇ ದೇಶ ಎಂಬ ಖಾಲಿ ಜಾಗವೂ.
ಅಂಡಾಂಡ, ಬ್ರಹ್ಮಾಂಡ, ಪಿಂಡಾಂಡ ಇತ್ಯಾದಿ ಪರಿಭಾಷೆಯಲ್ಲಿ ನಮ್ಮ ಅಧ್ಯಾತ್ಮ ಜಿಜ್ಞಾಸುಗಳು ಕಂಡುಕೊಳ್ಳಲು ಹೊರಟದ್ದು ಈ ತಿಳುವಳಿಕೆಯನ್ನೇ. ವಿಜ್ಞಾನಕ್ಕೆ ಕಾಣುವುದು, ಕಾಣಿಸುವುದು, ಸಿದ್ಧಾಂತಗಳನ್ನು ರೂಪಿಸಿ ಆ ಮೂಲಕ ಸಾಧಿಸಿ ತೋರಿಸುವುದು ಮುಖ್ಯವಾದರೆ, ಅಧ್ಯಾತ್ಮಕ್ಕೆ ತನ್ನದೇ ಆದ ಸಿದ್ಧಾಂತಗಳಿವೆ; ತತ್ವಗಳಿವೆ; ತರ್ಕಗಳಿವೆ. ಅಧ್ಯಾತ್ಯ ತನ್ನೊಳಗನ್ನು ಮೊದಲು ತಡಕಲು ಹೇಳುತ್ತದೆ. ದೇಹ ಮತ್ತು ಆತ್ಮವೆಂದು ವಿಭಜಿಸಿ ನೋಡುತ್ತದೆ; ಇವೆರಡರ ಅಂತರವನ್ನು ಮೀರಲು ಹೇಳುತ್ತದೆ. ಅಹಂ ಬ್ರಹ್ಮಾಸ್ಮಿ ಎಂದು, ತಾನೇ ಬ್ರಹ್ಮ ಎಂದು ತಿಳಿಯಲು ಪ್ರೇರೇಪಿಸುತ್ತದೆ. ತಾನು ಬ್ರಹ್ಮಾಂಡದೊಳಗೊ, ತನ್ನೊಳಗೆ ಬ್ರಹ್ಮಾಂಡವೊ ಎಂಬ ಅರಿವಿಗೆ ಕೈಚಾಚುತ್ತದೆ. ಈ ತರ್ಕ, ವಿಶ್ಲೇಷಣೆಗಳಲ್ಲೇ ತನ್ನನ್ನು ಅರಿಯಲು, ತನ್ನ ಜಗತ್ತನ್ನು ಅರಿಯಲು ಎಡೆಮಾಡಿಕೊಡುತ್ತದೆ. ಇದು ಬೇರೆಯವರ ಮುಂದೆ ಸಾಧಿಸಿ ತೋರಿಸುವ ವಿದ್ಯೆಯಲ್ಲ; ಪ್ರಯೋಗವಲ್ಲ. ಯಾವ ಗುರುವೂ ತನ್ನ ಶಿಷ್ಯನಿಗೆ ಇದನ್ನು ತೋರಿಸಿ ಅವನನ್ನು ನಂಬಿಸಲಾರ; ‘ನೀನೇ ಹುಡುಕು’ ಎನ್ನುತ್ತಾನೆ; ‘ನೀನೇ ಕಂಡುಕೋ’ ಎನ್ನುತ್ತಾನೆ. ಹುಡುಕಾಟ ನಡೆಸಬೇಕಾದವನು ಶಿಷ್ಯನೇ. ಕಂಡುಕೊಳ್ಳುವುದು ಏನೇ ಇದ್ದರೂ ಶಿಷ್ಯ ಅದನ್ನು ಸ್ವಯಂ ಸಾಧಿಸಿಕೊಳ್ಳಬೇಕು. ಇತರರಿಗೆ ತೋರಿಸಬೇಕಾದದ್ದು ಇಲ್ಲ ಎಂದಾಗ ಇದು ಅನೇಕ ಕುಚೇಷ್ಟೆಗಳಿಗೂ ಹಾದಿಮಾಡಿಕೊಡಬಹುದು. ಕಪಟಿಗಳ ಆಡುಂಬೋಲವೂ ಆಗಬಹುದು. ಆದರೆ ನಿಜವಾದ ಹುಡುಕಾಟಕ್ಕೆ ಮುಂದಾಗುವವನಿಗೆ ಇಲ್ಲಿ ದಾರಿಗಳಿವೆ ಎಂಬುದು ನಿಜ. ಪೂರ್ವದ ಅನೇಕ ಪರಂಪರೆಗಳು, ಜ್ಞಾನಮಾರ್ಗಗಳು ಇದನ್ನು ತೋರಿಸಿಕೊಟ್ಟಿವೆ. ಇದು ಬಹುದೊಡ್ಡ ಹಾದಿ; ಪುರಾತನ ಪರಂಪರೆ. ನಮ್ಮ ವೇದೋಪನಿಷತ್ತುಗಳಲ್ಲಿರುವ ಚಿಂತನೆ, ತಾವೋ ತತ್ವಗಳು ಮತ್ತು ಇಂಥ ಹಲವಾರು ಮಾರ್ಗಗಳು ಈ ಪರಂಪರೆಯನ್ನು ತೋರಿಸುತ್ತವೆ. ಈ ಜ್ಞಾನವನ್ನು ಉಪೇಕ್ಷಿಸಲು ಆಗದು.
ಆಧುನಿಕ ವಿಜ್ಞಾನ ಹೊಸ ಹೊಸ ಚಾಚುಗಳನ್ನು ತೋರಿಸುತ್ತಲೇ ಇದೆ. ಇಪ್ಪತ್ತನೇ ಶತಮಾನದ ಮಹಾಪ್ರತಿಭಾವಂತ ಆಲ್ಬಟರ್್ ಐನ್ಸ್ಟೀನ್ ತೋರಿಸಿಕೊಟ್ಟ ಅನೇಕ ಸತ್ಯಗಳ ಮೇಲೆ ನಡೆದ ಪ್ರಯೋಗಗಳು ಇನ್ನಷ್ಟು ದಾರಿಗಳನ್ನು ತೆರೆದಿವೆ. ಭೌತವಿಜ್ಞಾನ, ಖಗೋಳಶಾಸ್ತ್ರ, ಗಣಿತಶಾಸ್ತ್ರ, ಕಾಸ್ಮೋಲಜಿಗಳಲ್ಲಿ ನಡೆದಿರುವ ಅದ್ಭುತ ಅಧ್ಯಯನಗಳು ಈ ಬ್ರಹ್ಮಾಂಡದ ಹೊಸ ಹೊಸ ರೂಪಗಳನ್ನು, ಇವುಗಳಿಗಿರುವ ಆಯಾಮಗಳನ್ನು ತೋರಿಸಿಕೊಡುತ್ತಲೇ ಇವೆ. ಈ ಶತಮಾನದ ಇನ್ನೊಂದು ಮಹಾನ್ ಪ್ರತಿಭೆಯಾಗಿರುವ ಸ್ಟೀಫನ್ ಹಾಕಿಂಗ್ ನಡೆಸುತ್ತಿರುವ ಪ್ರಯೋಗಗಳು, ಕೃಷ್ಣರಂಧ್ರದಿಂದ ವಿಕಿರಣಗಳು ಹೊಮ್ಮುತ್ತಿರುವುದಾಗಿ ಅವರು ಹೇಳುತ್ತಿರುವ ಹೊಸ ಸಂಗತಿ ಇವೆಲ್ಲ ನಮ್ಮನ್ನು ಇನ್ನಷ್ಟು ಬೆಚ್ಚಿಬೀಳಿಸುತ್ತಿವೆ; ಅಷ್ಟೇ ಅಲ್ಲ ಈ ಬ್ರಹ್ಮಾಂಡದ ‘ವಿಶ್ವರೂಪ’ ದರ್ಶನವನ್ನು ಮಾಡಿಸುತ್ತಿವೆ.
ಆಧ್ಯಾತ್ಮಿಕ ಹುಡುಕಾಟ ಎನ್ನುವುದು ಪ್ರತಿಫಲಾಪೇಕ್ಷಿಗಳಿಗೆ ಹುಡುಕಾಟವೇ ಅಲ್ಲದಿರಬಹುದು. ವಿಜ್ಞಾನದ ಹುಡುಕಾಟ ಅಪರಮಿತ ಎಂದು ಹೇಳಿದರೂ ಅದರ ಪ್ರಯೋಜನ ಲೋಕಕ್ಕೇ ತೆರೆದಿರುತ್ತದೆ. ಈ ಪ್ರಯೋಜನ, ಪ್ರತಿಫಲ ಇತ್ಯಾದಿ ಲೌಕಿಕದ ಆಚೆಗೆ, ಕೆಲವು ವಿಸ್ಮಯಗಳನ್ನು ಅರಿಯಲು ಹೊರಡುವ ಮನಸ್ಸುಗಳನ್ನು ವಿಜ್ಞಾನ ಎಲ್ಲಿಯವರೆಗೆ ಕರೆದೊಯ್ಯಬಹುದು? ಈ ಬ್ರಹ್ಮಾಂಡದ ರಹಸ್ಯವನ್ನು ಅದು ಪೂರ್ಣವಾಗಿ ಬಿಡಿಸಬಲ್ಲದೇ?
ಶೂನ್ಯ ಮತ್ತು ಪೂರ್ಣತೆಯ ನಡುವಿನ ಸಂಬಂಧವನ್ನು ಅಧ್ಯಾತ್ಮ ಚಿಂತನೆ ತನ್ನದೇ ರೀತಿಯಲ್ಲಿ ವಿವರಿಸುತ್ತದೆ. ವಿಜ್ಞಾನದ ಚಿಂತನೆಯೂ ಇದಕ್ಕೆ ಹತ್ತಿರವಾಗಿರುವಂತೆ ಕಾಣಿಸುತ್ತದೆ. ಬಾಹ್ಯಾಕಾಶ ಎನ್ನುವುದು ಒಂದು ಶೂನ್ಯದಂತೆ ಕಂಡರೂ, ‘ಬ್ರಹ್ಮಾಂಡದಲ್ಲಿರುವ ಎಲ್ಲ ತಾರೆಗಳ ಒಟ್ಟು ಚೈತನ್ಯಕ್ಕಿಂತ ಅತಿಶಯವಾದ ಚೈತನ್ಯ ಬಾಹ್ಯಾಕಾಶ ಶೂನ್ಯದಲ್ಲಿದೆ’ ಎಂದು ವಿಜ್ಞಾನ ಹೇಳುತ್ತಿದೆ.
ಅಧ್ಯಾತ್ಮ ಮತ್ತು ವಿಜ್ಞಾನದ ನಡುವಣ ಈ ಚರ್ಚೆಯೇ ಕುತೂಹಲಕಾರಿ. ಅನೇಕ ವಿಜ್ಞಾನಿಗಳು ಈ ದಿಕ್ಕಿನಲ್ಲಿ ಚಿಂತಿಸಿರುವುದೂ ಇದೆ. ದೊಡ್ಡ ಭೌತವಿಜ್ಞಾನಿ, ಲೇಸರ್ ತಂತ್ರಜ್ಞಾನದ ಸಹ ಸಂಶೋಧಕ, ಭಾರತೀಯ (ಕೊಲ್ಕತ್ತಾ) ಮೂಲದ ಡಾ.ಮಣಿಲಾಲ್ ಭೌಮಿಕ್, ತಮ್ಮ ಕೃತಿ ‘ಕೋಡ್ ನೇಮ್ ಗಾಡ್’ನಲ್ಲಿ ಇಂಥ ಚರ್ಚೆಯೊಂದನ್ನು ಬೆಳೆಸಿದ್ದಾರೆ. ಭಾರತೀಯ ತತ್ವಚಿಂತನೆಯ, ಆಧ್ಯಾತ್ಮಿಕ ಪರಂಪರೆಯ ಪರಿಚಯವೂ ಅವರಿಗಿರುವುದರಿಂದ ಹಲವು ಸಂಗತಿಗಳನ್ನು ಅವರು ಈ ಕೃತಿಯಲ್ಲಿ ಅರ್ಥಪೂರ್ಣವಾಗಿ ಚರ್ಚಿಸಿದ್ದಾರೆ. (‘ಅಭಿನವ’ ಈ ಕೃತಿಯ ಅನುವಾದವನ್ನು ಕನ್ನಡದಲ್ಲಿ ಪ್ರಕಟಿಸಿದೆ. ಅನುವಾದಕರು ಡಾ.ಕೆ.ಪುಟ್ಟಸ್ವಾಮಿ). ಭೌಮಿಕ್ ಅವರ ಚಿಂತನೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ತಕ್ಕ ಸಿದ್ಧತೆಯೂ ಬೇಕಾಗುತ್ತದೆ.
 

‍ಲೇಖಕರು G

22 December, 2014

2 Comments

  1. bm basheer

    ಮಣಿ ಭೌಮಿಕ್ ಅವರ ಕಾಸ್ಮಿಕ್ ಡಿಟೆಕ್ಟಿವ್ ಕೂಡ ಚೆನ್ನಾಗಿದೆ. ಆ ಕೃತಿಯ ಕುರಿತಂತೆ ನನ್ನ ಖುಷಿಯನ್ನು ಈ ಹಿಂದೆ ಹಂಚಿ ಕೊಂಡಿದ್ದೆ. http://gujariangadi.blogspot.in/2012/02/blog-post_04.html

  2. Palahalli Vishwanath

    1940-50 ರ ಸಮಯದಲ್ಲಿ ಎರಡು ವಿಶ್ವ ಸಿದ್ಧಾ೦ತಗಳಿದ್ದವು. ಒ೦ದು ಮಹಾ ಸ್ಫೋಟ. ಎರ್ಡನೆಯದು ನಿರ೦ತರ್ ಸ್ಥಿರ (ಸ್ಟೆಡಿಸ್ಟೇಟ್) ಸಿದ್ಧಾ೦ತ. ಈ ಎರಡನೆಯ ಸಿದ್ಧಾ೦ತದಲ್ಲಿ ವಿಶ್ವಕ್ಕೆ ಮೊದಲೂ ಇಲ್ಲ,ಕೊನೆಯೂ ಇಲ್ಲ. ತಾತ್ವಿಕವಾಗಿ ಅನೆಕ ವಿಜ್ಞಾನಿಗಳಿಗೆ ಸ್ತೇಡಿ ಸ್ಟೇಟ್ಸಿದ್ಧಾ೦ತ ಇಷ್ತವಾಗಿದ್ದಿತು. ಆದರೆ ೧೯೬೦ ಮತ್ತು ಅನ೦ಅರದ ಪ್ರಯೋಗಗಳ ಪರಿಣಾಮಗಳು ಮಾಹಾಸ್ಫೋಟ ಸ್ರಿಯಾದ ಸಿದ್ಧಾ೦ತ ಎ೦ದು ತೋರಿಸಿದವು. ಮಹಾಸ್ಫೋಟ್ ಸಿದ್ಧಾ೦ತದಲ್ಲಿ ಇ೦ದಿನ ಬಗ್ಗೆ ಒ೦ದು ಭವಿಷ್ಯ ನುಡಿ (ಪ್ರಿಡಿಕ್ಷನ್_ಇದ್ದಿತು ಅದು‌ಏನೆ೦ದರೆ ವಿಶ್ವದ ಮೊದಲಲ್ಲಿ ತಾಪಮಾನ ಅತಿ ಹೆಚ್ಚು (ಬಿಲಿಯ) ಡಿಗ್ರಿಗಳಿದ್ದು ವಿಶ್ವತಣ್ನಗಾಗಿ ಹೋಗಿ ಇ೦ದು ಬಹಳ ಕಾಡಿಮೆ ( ಮೂರು ಡಿಗ್ರಿ ಕೆಲ್ವಿನ್ – ಇದುತಾಪಮಾನದ ಬೇರೆಯ ಅಳತೆ) ಇರಬೆಕು ಎ೦ಬ ನಿರೀಕ್ಷೆ ಇದ್ದಿತು. ೧೯೬೫ರಲ್ಲಿ ವಿಶ್ವದಲ್ಲಿ ಎಲ್ಲೆಲ್ಲೂ ಇಷ್ಟು ಕಡೀಮೆ ಉಷ್ಣಾತೆ ಇದೆ ಎ೦ದು ಪ್ರಯೊಗಗಳು ತೋರಿಸಿದವು ಸ್ಥಿರ ವಿಶ್ವ ಸಿದ್ಧಾ೦ತದಲ್ಲಿ ಇದ್ರ ಬಗ್ಗೆ ಯಾವ ಯೋಚನೆಯೂಇರಲಿಲ್ಲ. ಆದ್ದರಿ೦ದ ಸ್ಥಿರ್ ವಿಶ್ವ ಸಿದ್ಧಾ೦ತ ತಿರಸ್ಕರಿಸಲ್ಪಟ್ಟಿತು. ವಿಶ್ವಕ್ಕೆ ಶುರು ಇದೇ ಎನ್ನುವುದು ಕೆಲವು ವಿಜ್ಞಾನಿಗಳಿಗೆ ಹಾಸ್ಯಾಸ್ಪದವಾಗಿ ಕಾಣಿಸಿ ಆ ಸಿದ್ಧಾ೦ತಕ್ಕೆ ಬಿಗ್ಯ್ ಬ್ಯಾ೦ಗ್ ಎನ್ನುವ ಹೆಸ್ರು ಕೊಟ್ತರು. ಅದೇ ಕ್ರಮೆನ ಅ೦ಟುಕೊ೦ದಿತು. ಆದ್ದರಿ೦ದ ಸಿದ್ಧಾ೦ತ ಎಷ್ಟೇ ಸು೦ದರ (ತಾತ್ವಿಕ) ವಾಗಿದ್ದರೂ ಪ್ರಯೋಗಗಳು ಆ ಸಿದ್ಧಾ೦ತಕ್ಕೆ ಸಾಕ್ಷಿ ಒದಗಿಸದಿದ್ದರೆ ಅದನ್ನು ತಿರಸ್ಕರಿಸಬೆಕಾಗುತ್ತದೆ ! (೨) ಮಹಾಸ್ಫೊಟ ೧೩.೭ ಬಿಲಿಯ ವರ್ಷ್ಗಳ ಹಿ೦ದೆ ನಡೆಯಿತು ಎ೦ದು ಹೇಳುತ್ತಾರೆ.ಆದರೆ ವಿಜ್ಞಾನ್ದಲ್ಲಿ ಅದಕ್ಕೆ ಮು೦ಚೆ ಏನಿತ್ತು, ಎನಾಯಿತು ಎ೦ಬ ಪ್ರಶ್ನೆಗಳಿಗೆ ಉತ್ತರವಿಲ್ಲ. ಅದು ವಿಜ್ಞಾನದ ಕೊರತೆಯಲ್ಲ. ವಿಜ್ಞಾಆನ ಇರುವುದೇ ಆ ರೀತಿ. ಗೊತ್ತಿಲ್ಲ ಎ೦ದರೆ ಗೊತ್ತಿಲ್ಲ ಅಷ್ಟೇ ! ಮನುಷ್ಯನಮನಸ್ಸು ಮಹಾಸ್ಫೋಟದ ಹಿ೦ದಿನದನ್ನು ಹುಡೂಕುತ್ತದೆ, ಆದರೆ ವಿಜ್ಞಾನ ಶುರುವಾಗುವುದು ಮಹಾಸ್ಫೋಟ ನಡೆದ ಒ೦ದೆರಡು ಕ್ಷಣದ ನ೦ತರ
    ಲೇಖನಕ್ಕೆ ಧನ್ಯವಾದಗಳು( ಇಷ್ಟವಿದ್ದಲ್ಲಿ ವೈಜ್ಞಾನಿಕ ಅ೦ಶಗಳ ಬಗ್ಗೆ ನನ್ನ ಒ೦ದು ಪುಸ್ತಕವಿದೆ – ಭೂಮಿಯಿ೦ದ ಬಾನಿನತ್ತ (ನವಕರ್ನಾಟಕ) ಅದನ್ನು ತಾವು ನೋಡಬಹುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading