ಎ ಆರ್ ಮಣಿಕಾಂತ್
ಉಪಾಸನೆ. ಗೀತೆರಚನೆ: ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ್. ಗಾಯನ: ಎಸ್. ಜಾನಕಿ.
ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ ||ಪ||
ಸಾಮಗಾನ ಪ್ರಿಯೆ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಕಾರ ಷಡ್ಜದ ಶರ ತರಂಗಿಣಿ
ಸಾಗರ ಸಂಗಮ ಸರಸವಿಹಾರಿಣಿ ||1||
ಶಿವತಾಂಡವದ ಡಮರು ನಿನಾದ
ನಾದಬ್ರಹ್ಮನಾ ಓಂಕಾರ ನಾದ ಆ..ಆ..ಆ..
ನಾದದ ಲೀಲಾ ಆಗಮ ವೇದಾ, ನಾದ
ವೇದ ಶಿವೇ… ನಾದ ವೇದ ಶಿವೇ ನಿನ್ನ ವಿನೋದ ||2||
ಸಂಗೀತ ಸುಧೆಯ ಚೈತನ್ಯಧಾರೆ
ಕಣಕಣ ನೀನೇ ಕರುಣಾಪೂಣರ್ೇ
ನವಭಾವ ನವಜೀವ ನೀ ತುಂಬಿ ಬಾರೇ
ನವರಸ ವಾಹಿನಿ ನೀ ದಯೆ ತೋರೆ ||3||
ಶಾರದೆ, ವಕೀಲರೊಬ್ಬರ ಮಗಳು. ಅವಳಿಗೆ ಚಿಕ್ಕಂದಿನಿಂದಲೂ ಸಂಗೀತದಲ್ಲಿ ಅಪಾರ ಆಸಕ್ತಿ. ತಮ್ಮ ಮನೆಗೆ ಹತ್ತಿರವೇ ಇದ್ದ ವಿದ್ವಾನ್ ಅನಂತ ಶಾಸ್ತ್ರಿಯವರಲ್ಲಿ ಸಂಗೀತ ಕಲಿಯಬೇಕೆಂದು ಆಕೆಗಿಷ್ಟ. ಈ ಬೇಡಿಕೆಗೆ ಮೊದಲು ನಿರಾಕರಣೆಯ ಮಾತಾಡುವ ಶಾಸ್ತ್ರಿಗಳು, ನಂತರ ಪಾಠ ಹೇಳಿಕೊಡಲು ಸಮ್ಮತಿಸುತ್ತಾರೆ. ತಮಗೆ ತಿಳಿದಿದ್ದ ಎಲ್ಲವನ್ನೂ ಹೇಳಿಕೊಡುತ್ತಾರೆ. ಶ್ರದ್ಧಾಭಕ್ತಿಯಿಂದ ಸಂಗೀತ ಕಲಿಯುವ ಶಾರದೆ, ಸಾಕ್ಷಾತ್ ಶಾರದೆಯ ಪ್ರತಿರೂಪವೇ ಆಗುತ್ತಾಳೆ. ಈ ನಡುವೆ ಮದುವೆಯ ಪ್ರಸ್ತಾಪ ಬಂದಾಗ, `ನನ್ನನ್ನು ಮಾತ್ರವಲ್ಲ, ನನ್ನ ಸಂಗೀತವನ್ನೂ ಪ್ರೀತಿಸಬೇಕು’ ಎಂಬ ಷರತ್ತು ಹಾಕಿಯೇ ಮದುವೆಯಾಗುತ್ತಾಳೆ. ಕಾಲಾಂತರದಲ್ಲಿ ತನಗೆ ಸಂತಾನಯೋಗವಿಲ್ಲವೆಂದು ತಿಳಿದಾಗ ಕುಟುಂಬದ ಎಲ್ಲರನ್ನೂ ಪ್ರಯಾಸದಿಂದ ಒಪ್ಪಿಸಿ, ತನ್ನ ತಂಗಿಯನ್ನೇ ಗಂಡನಿಗೆ ಮದುವೆ ಮಾಡಿಸುತ್ತಾಳೆ. ನಂತರ ತಾನು ನಿಶ್ಚಿಂತೆಯಿಂದ ಸಂಗೀತಾಭ್ಯಾಸದಲ್ಲಿ ತನ್ಮಯಳಾಗುತ್ತಾಳೆ.
ಹೀಗಿರುವಾಗಲೇ, ಅದೇ ಊರಿನ ಮುಖಂಡ ನೀಲಕಂಠಯ್ಯ, ತನ್ನ ಮಗ ಶಂಕರಾಭರಣನಿಗೆ ಸಂಗೀತ ಕಲಿಸುವಂತೆ ಅನಂತಶಾಸ್ತ್ರಿಯವರಲ್ಲಿ ಕೇಳಿಕೊಳ್ಳುತ್ತಾನೆ. `ಬದುಕಲ್ಲಿ ಶಿಸ್ತೇ ಇಲ್ಲದವರಿಗೆ ಸಂಗೀತವೆ’ ಎಂದು ಶಾಸ್ತ್ರಿಯವರು ತಿರಸ್ಕರಿಸುತ್ತಾರೆ. ಇದರಿಂದ ಸಿಟ್ಟಿಗೆದ್ದ ನೀಲಕಂಠಯ್ಯ, ಶಾಸ್ತ್ರಿಗಳಿಗೂ-ಶಾರದೆಗೂ ಅನೈತಿಕ ಸಂಬಂಧವಿದೆಯೆಂದು ಪುಕಾರು ಹಬ್ಬಿಸುತ್ತಾನೆ. ಇದನ್ನು ನಂಬಿದ ಶಾರದೆಯ ಗಂಡನ ಮನೆಯವರು, ಮುಂದೆ ಸಂಗೀತ ಕಛೇರಿ ನಡೆಸಬಾರದೆಂದು ತಾಕೀತು ಮಾಡುತ್ತಾರೆ. ಅವರ ಸಿಡಿಮಿಡಿಯ ಹಿಂದಿರುವ ಕಾರಣ ತಿಳಿಯದ ಶಾರದೆ, ಸಂಸ್ಥೆಯೊಂದರ ಆಹ್ವಾನ ಮನ್ನಿಸಿ ಕಛೇರಿ ನಡೆಸುತ್ತಾಳೆ. ಇದರಿಂದ ಸಿಟ್ಟಿಗೆದ್ದ ಶಾರದೆಯ ಗಂಡ, ಕಛೇರಿ ಮುಗಿಸಿ ಬಂದವಳನ್ನು ಮನೆಗೆ ಸೇರಿಸುವುದಿಲ್ಲ. ಪರಿಣಾಮ, ಆಕೆ ನಡುರಾತ್ರಿಯಲ್ಲಿ, ಅನಿವಾರ್ಯವಾಗಿ ತಂದೆಯ ಮನೆಗೆ ಬರುತ್ತಾಳೆ.
ಆಗಲೇ ಎಲ್ಲ ವಿಷಯ ತಿಳಿದ ಶಾರದೆಯ ತಾಯ್ತಂದೆ, ಬೆಳಗ್ಗೆ ಶಾಸ್ತ್ರಿಗಳ ಬಳಿ ಬಂದು- `ಊರ ಜನ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. `ಮುಂದೆ ಸಂಗೀತ ಕಛೇರಿ ನೀಡದಿರುವಂತೆ ಶಾರದೆಗೆ ನೀವೇ ಹೇಳಿ. ಆಕೆ ನಿಮ್ಮ ಮಾತು ಕೇಳ್ತಾಳೆ. ಆಕೆ ಸಂಗೀತಕ್ಕೇ ಅಂಟಿಕೊಂಡರೆ ಗಂಡನಿಂದ ದೂರಾಗಬೇಕಾಗುತ್ತೆ’ ಎನ್ನುತ್ತಾರೆ. ಎಲ್ಲ ವಿಷಯ ತಿಳಿದ ಶಾಸ್ತ್ರಿಗಳು ದಿಗ್ಭ್ರಾಂತರಾಗುತ್ತಾರೆ. ನಂತರ ಶಾರದೆಯ ಬಳಿ ಬಂದು- `ಮುಂದೆ ಸಂಗೀತ ಕಛೇರಿ ನಡೆಸದಂತೆ’ ಮಾತು ಪಡೆಯುತ್ತಾರೆ. ನಂತರ ಮನೆಗೆ ಬಂದವರೇ, ಶಿಷ್ಯೆಗೆ ದ್ರೋಹ ಬಗೆದೆ ಎಂದು ಭಾವಿಸಿ, ಪ್ರಾಯಶ್ಚಿತ್ತಕ್ಕಾಗಿ ತಮ್ಮ ಕೈಗಳನ್ನೇ ಸುಟ್ಟುಕೊಳ್ಳುತ್ತಾರೆ.
ಇಷ್ಟೆಲ್ಲ ಆದ ನಂತರ, ಶಂಕರಾಭರಣನಿಗೆ ನಡೆದಿದ್ದೆಲ್ಲ ಅರ್ಥವಾಗುತ್ತದೆ. ಆತ ಶಾಸ್ತ್ರಿಗಳ ಬಳಿ ಬಂದು ಕ್ಷಮೆ ಕೇಳುತ್ತಾನೆ. ಅವರಿಗೆ ಚಿಕಿತ್ಸೆ ಕೊಡಿಸುತ್ತಾನೆ. ತನ್ನ ತಂದೆಯ ಕುತಂತ್ರವೇ ಎಲ್ಲ ಅನಾಹುತಕ್ಕೂ ಮೂಲ ಎಂದು ಎಲ್ಲರಿಗೂ ವಿವರಿಸಿ ಹೇಳುತ್ತಾನೆ. ವಿಷಯ ತಿಳಿದವರೆಲ್ಲ ತಮ್ಮ ತಪ್ಪು ಅರಿತು ಪಶ್ಚಾತ್ತಾಪಪಡುವ ವೇಳೆಗೆ ಶಾರದೆ ಮನೆಯಿಂದ ಕಾಣೆಯಾಗಿರುತ್ತಾಳೆ. `ಆಕೆ ಬೇರೆಲ್ಲೂ ಹೋಗಿಲ್ಲ, ಕನ್ಯಾಕುಮಾರಿಗೆ ಹೋಗಿರುತ್ತಾಳೆ’ ಎನ್ನುವ ಶಾಸ್ತ್ರಿಗಳೊಂದಿಗೆ ಶಾರದೆಯ ಇಡೀ ಕುಟುಂಬ ಬರುತ್ತದೆ. ಆಕೆಯನ್ನು ಕನ್ಯಾಕುಮಾರಿಯಲ್ಲಿ ಕಂಡ ಶಾಸ್ತ್ರಿಗಳು- `ವೀಣೆ ನುಡಿಸಬೇಡ ಎಂದು ಹಿಂದೊಮ್ಮೆ ಈ ನಾಲಿಗೆ ಹೇಳಿತ್ತು. ಈಗ ಅದೇ ನಾಲಿಗೆ ನುಡಿಸು ತಾಯೀ ಎನ್ನುತ್ತಿದೆ. ನುಡಿಸು ತಾಯೀ’ ಎನ್ನುತ್ತಾರೆ.
ಶಾರದೆ, ಗುರುಗಳಿಗೆ ನಮಸ್ಕರಿಸಿ, ವೀಣೆಯನ್ನು ಎತ್ತಿಕೊಂಡು ಕನ್ಯಾಕುಮಾರಿ ದೇವಿಯೆಡೆಗೆ ಓಡಿಹೋಗುತ್ತಾಳೆ. ನಂತರದ ಕೆಲವೇ ಕ್ಷಣಗಳಲ್ಲಿ ಗಂಧರ್ವರೂ ತಲೆದೂಗುವಂಥ ಈ ಹಾಡು ಕೇಳಿಬರುತ್ತದೆ: `ಭಾರತ ಭೂಶಿರ ಮಂದಿರ ಸುಂದರಿ/ಭುವನ ಮನೋಹರಿ ಕನ್ಯಾಕುಮಾರೀ…’
ಈ ಹಾಡು `ಉಪಾಸನೆ’ ಚಿತ್ರದ್ದು. ಈ ಹಾಡಿನ ಮಾಧುರ್ಯಕ್ಕೆ ಉಳಿದವರು ಹಾಗಿರಲಿ, ನಿದರ್ೇಶಕ ಪುಟ್ಟಣ್ಣ ಕಣಗಾಲ್ ಅವರೇ ಮರುಳಾಗಿದ್ದರು. ಮುಂದೊಮ್ಮೆ ಆ ಹಾಡನ್ನು ಕನ್ಯಾಕುಮಾರಿಯಲ್ಲಿ ಚಿತ್ರಿಸಿದ್ದೇಕೆ ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದರು: `ಉಪಾಸನೆಯ ನಾಯಕಿ, ಮನೆಯ ಎಲ್ಲರಿಂದ ತಿರಸ್ಕೃತಗೊಂಡು ಒಂಟಿಯಾದಾಗ ಯಾವುದಾದರೂ ದೇವಾಲಯವಿರುವ ಕಡೆಗೆ ಹೋಗಿಬಿಡಲು ನಿರ್ಧರಿಸುತ್ತಾಳೆ. ಈ ದೃಶ್ಯಕ್ಕೆ ಲೊಕೇಶನ್ ಹುಡುಕುತ್ತಾ ನಾನು ಕನ್ಯಾಕುಮಾರಿಗೆ ಬಂದೆ. ಅಲ್ಲಿರುವ ವಿವೇಕಾನಂದರ ಸ್ಮಾರಕವನ್ನೂ, ಕನ್ಯಾಕುಮಾರಿಯ ದೇವಾಲಯವನ್ನೂ ನೋಡಿ ಬೆರಗಾದೆ. ಆ ಜಾಗದಲ್ಲೇ ಶೂಟಿಂಗ್ ಮಾಡಬೇಕು. ಆ ಮೂಲಕ ನಮ್ಮ ಸಂಸ್ಕೃತಿ, ವಿವೇಕಾನಂದರ ಸಂದೇಶವನ್ನು ಎಲ್ಲರಿಗೂ ತಿಳಿಸಬೇಕು ಅನ್ನಿಸಿತು. ಹಾಗೆಯೇ ಮಾಡಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಕನ್ಯಾಕುಮಾರಿಗೆ ಹೋಗಿ ವಿವೇಕಾನಂದರ ಸ್ಮಾರಕದಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಸಿದ ನಿದರ್ೇಶಕ ಎಂದರೆ ನಾನೇ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ…’
* * *
ಈ ಹಾಡು ಬರೆದವರು ಪುಟ್ಟಣ್ಣ ಕಣಗಾಲ್ ಅವರ ಜೀವದ ಗೆಳೆಯ ವಿಜಯನಾರಸಿಂಹ. ಲೊಕೇಶನ್ ಹುಡುಕುವ ನೆಪದಲ್ಲಿ ಗೆಳೆಯನನ್ನೂ ಕನ್ಯಾಕುಮಾರಿಗೆ ಕರೆದೊಯ್ದ ಪುಟ್ಟಣ್ಣ ಹೇಳಿದರಂತೆ: `ನೋಡೋ ವಿಜಯಾ, ಕ್ಲೈಮ್ಯಾಕ್ಸ್ನ ಇಲ್ಲಿ ಶೂಟ್ ಮಾಡ್ತೀನಿ. ನಾಯಕಿ ತನ್ನ ಕುಟುಂಬದವರನ್ನೆಲ್ಲ ತ್ಯಜಿಸಿ ಅಧ್ಯಾತ್ಮಕ್ಕೆ ಶರಣಾಗುವ ಸಂದರ್ಭ ಹಾಡಲ್ಲಿ ಬರಬೇಕು. ನಾಯಕಿಯ ಕುಟುಂಬ ಅಂದ್ರೆ ಅಲ್ಲಿ ಆಕೆಯ ತಂದೆ-ತಾಯಿ, ಅತ್ತೆ-ಮಾವ, ತಂಗಿ, ಗಂಡ, ಗುರುಗಳು ಎಲ್ಲರೂ ಇರುತ್ತಾರೆ. ಅವರನ್ನೆಲ್ಲ ಮರೆತು ಆಕೆ ಹಾಡಬೇಕು. ಆದರೆ, ಆಕೆಯ ಮನಸ್ಸಿನ ಹೊಯ್ದಾಟ, ಸಂಕಟ, ದೂರದಲ್ಲೆಲ್ಲೋ ಇರುವ ಅನುಭಾವದ ಸಂತೋಷವೆಲ್ಲ ಹಾಡಿನಲ್ಲಿ ಬರಬೇಕು. ಆಕೆ ವೀಣೆ ನುಡಿಸ್ತಾ ಹಾಡ್ತಾಳೆ ತಾನೆ? ಹಾಗಾಗಿ ಸಂಗೀತದ ಒಂದು ವೃತ್ತವೇ ಇರುವಂಥ ಹಾಡು ಬೇಕು’ ಎಂದರಂತೆ.
ಅದಕ್ಕೆ ಒಪ್ಪಿದ ವಿಜಯನಾರಸಿಂಹ ನಂತರದ ಕ್ಷಣಗಳಲ್ಲಿ ನಾಯಕಿಯ ಪಾತ್ರವನ್ನು ಕಣ್ಮುಂದೆ ತಂದುಕೊಂಡರು. ಈ ಹಾಡು ಶುರುವಾಗುವ ಮುನ್ನ- ಗುರುಗಳನ್ನು ಕಂಡ ನಾಯಕಿ ಓಡಿಬರುತ್ತಾಳೆ. ನಂತರ ಅವರಿಗೆ ನಮಸ್ಕರಿಸಿ ವೀಣೆ ಎತ್ತಿಕೊಂಡು ಓಡುತ್ತಾಳೆ. ಸಂಗೀತದಲ್ಲಿ ಆರೋಹಣ ಮತ್ತು ಅವರೋಹಣ ಕ್ರಮವಿದೆಯಲ್ಲ? ಅದಕ್ಕೆ ಇದೊಂದು ಸಂಕೇತವಾಗಲಿ ಅಂದುಕೊಂಡರಂತೆ. ಹೀಗೆ ಓಡಿಬಂದ ನಾಯಕಿ ಒಂದು ಕಡೆ ಕುಳಿತು- ಕನ್ಯಾಕುಮಾರಿಯ ಸ್ತುತಿಗೆ ಆರಂಭಿಸುತ್ತಾಳೆ. `ಭುವನ ಮನೋಹರಿ ಕನ್ಯಾಕುಮಾರೀ’ ಎನ್ನುತ್ತಾ ಭಾವಪರವಶಳಾಗುತ್ತಾಳೆ. ಅದರರ್ಥ, ಕನ್ಯಾಕುಮಾರಿ ಎಂಬುದು ಇಲ್ಲಿ ಶಾಂತಿಗೊಂದು ಸಂಕೇತ. ಭಕ್ತಿಗೆ ಉಪಮೆ. ಅಷ್ಟೇ ಅಲ್ಲ, ಅದು ಸಾಗರಕ್ಕೂ ಸಂಕೇತ. ಅದು ಅಧ್ಯಾತ್ಮದ ಸಾಗರವೂ ಹೌದು. ಸಂಗೀತದ ಸಾಗರ ಕೂಡ ಹೌದು. ಹೀಗೆ, ದೇವಿಯನ್ನು ಸ್ತುತಿಸುತ್ತಾ ಮೊದಲ ಚರಣ ಮುಗಿಸಿ ಕತ್ತೆತ್ತಿ ನೋಡಿದ ಶಾರದೆಗೆ, ಕುಟುಂಬದ ಎಲ್ಲರೂ ಕಾಣಿಸುತ್ತಾರೆ. ತಕ್ಷಣವೇ ಅವಳ ಮನಸ್ಸು ಗೊಂದಲಕ್ಕೆ ಬೀಳುತ್ತದೆ. ಸಂಸಾರವೋ, ಅಧ್ಯಾತ್ಮವೋ ಎಂಬ ಹೊಯ್ದಾಟ ಶುರುವಾಗುತ್ತದೆ. ಆಕೆಯ ಎದೆಯ ತುಂಬಾ ಚಂಡೆ-ಮದ್ದಳೆಯ ಸದ್ದು!
ಹೀಗೆಲ್ಲ ಯೋಚಿಸಿದ ವಿಜಯನಾರಸಿಂಹ, ಆಲ್ಲಿಗೆ-`ಶಿವತಾಂಡವದ ಡಮರು ನಿನಾದ’ ಎಂಬ ಸಾಲು ತಂದರು. ಎರಡೇ ಕ್ಷಣದಲ್ಲಿ ಆಕೆಯ ಮನಸ್ಸು ಮತ್ತೆ ಅಧ್ಯಾತ್ಮವನ್ನೇ ಧ್ಯಾನಿಸುತ್ತದೆ ಎಂದು ಹೇಳಲು `ನಾದ ಬ್ರಹ್ಮನ ಓಂಕಾರ ನಾದ’ ಎಂಬ ಹೊನ್ನಿನಂಥ ಸಾಲು ಜೋಡಿಸಿದರು. ನಂತರ ಯಾವುದೋ ಮಾಯೆಯಂತೆ, ತಂತಾನೇ ದಾರಿ ಮಾಡಿಕೊಳ್ಳುವ ಪ್ರವಾಹದಂತೆ ಹಾಡು ಮುಂದುವರಿದು, ಮುಗಿಯಿತು!
ಸಂಗೀತ ಸಾಗರದಲ್ಲಿ ಅದ್ದಿ ತೆಗೆದಂತಿದ್ದ ಈ ಹಾಡು ಕಂಡು ಅಕ್ಷರಶಃ ಕುಣಿದಾಡಿದರಂತೆ ಪುಟ್ಟಣ್ಣ. ನಂತರ ಸಂಗೀತ ನಿದರ್ೇಶಕ ವಿಜಯಭಾಸ್ಕರ್ ಮುಂದೆ ನಿಂತು- `ಈ ಹಾಡಿನ ಕಣಕಣದಲ್ಲೂ ಸಂಗೀತ ಇರಬೇಕು. ಸಂಗೀತದ ಬಗ್ಗೆ ಗೊತ್ತಿಲ್ಲದವರೂ ಕೂಡ ಹಾಡಿಗೆ ತಲೆದೂಗಬೇಕು. ಅಂಥ ಸಂಗೀತ ಒದಗಿಸಿ’ ಅಂದರಂತೆ. ಸವಾಲುಗಳಿಗೆ ಎಂದೂ ಹಿಂಜರಿಯದಿದ್ದ ವಿಜಯಭಾಸ್ಕರ್, ಈ ಹಾಡಿಗೆ ಸಾರಮತಿ ರಾಗ ಅಳವಡಿಸಿದರು. ವೀಣೆ ಮತ್ತು ಮೃದಂಗವನ್ನು ಮುಖ್ಯವಾಗಿ ಬಳಸಿದರು. ಆರೋಹಣ, ಅವರೋಹಣವನ್ನು ಪ್ರತಿ ಚರಣದಲ್ಲೂ ತಂದರು, ಮೆಲೋಡಿ ಕಳೆದುಹೋಗದಂತೆ, ಭಾವಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡರು. ಅಷ್ಟೇ ಅಲ್ಲ, ಈ ಹಾಡಲ್ಲಿ ನಟಭೈರವಿ, ಹಿಂದೋಳ ರಾಗ, ತಂದರು. ಪಂಚಮಸ್ವರ ಇರುವಂತೆಯೂ ನೋಡಿಕೊಂಡರು. ಹಾಡಿನ ಅಕ್ಷರಕ್ಷರವೂ ಹಿಂದುಮುಂದಾಗದಂತೆ ಸ್ವರಪ್ರಸ್ತಾರ ಹಾಕಿದರು. ಗಂಧರ್ವರೂ ಅಸೂಯೆ ಪಡುವಂಥ ಸಿರಿಕಂಠದ ಎಸ್. ಜಾನಕಿಯವರು ಈ ಹಾಡಿಗೆ ‘ಅಮರತ್ವ’ದ ಅಮೃತ ಕುಡಿಸಿಬಿಟ್ಟರು.
ಸಾರಮತಿ ರಾಗದಲ್ಲಿ ರಾಗಸಂಯೋಜನೆ ತುಂಬಾ ಕಷ್ಟ. ಈವರೆಗೆ ಬಂದಿರುವ ಅಷ್ಟೂ ಕನ್ನಡ ಚಿತ್ರಗಳಲ್ಲಿ `ಸತಿ ಸುಕನ್ಯ’ ಚಿತ್ರದ `ಎನಿತು ರಮ್ಯವಯ್ಯಾ’, `ಸತಿ-ಶಕ್ತಿ’ಯ `ತಿಲ್ಲಾನ’, ಉಪಾಸನೆಯ `ಭಾರತ ಭೂಶಿರ…’, ಮಲಯಮಾರುತದ `ಎಲ್ಲೆಲ್ಲು ಸಂಗೀತವೇ…’ ಹಾಡುಗಳಲ್ಲಿ ಮಾತ್ರ ಸಾರಮತಿ ರಾಗದ ಬಳಕೆಯಾಗಿದೆ ಎನ್ನುವ ಹೆಸರಾಂತ ವೀಣೆ ಕಲಾವಿದ ಎಚ್.ಆರ್.ಕೆ. ಪ್ರಸಾದ್- `ಈ ನಾಲ್ಕರ ಪೈಕಿ `ಉಪಾಸನೆ’ಯ ಹಾಡು ಒಂದು ಕೈ ಮೇಲಿದೆ ಅನಿಸುತ್ತೆ’ ಎನ್ನುತ್ತಾ ಕನ್ಯಾಕುಮಾರಿಗೆ ಕೂತಲ್ಲಿಂದಲೇ ಕೈಮುಗಿದರು.
ಮುಂದಿನ ಸ್ವಾರಸ್ಯ ಕೇಳಿ: `ಉಪಾಸನೆ’ ಬಿಡುಗಡೆಯ ನಂತರ `ಭಾರತ ಭೂಶಿರ ಮಂದಿರ ಸುಂದರಿ’ ಹಾಡು ವಿಪರೀತ ಜನಪ್ರಿಯವಾಯಿತು. ಈ ಹಾಡಿನ ಮಾಧುರ್ಯ, ಅದು ಹೊಮ್ಮಿಸಿದ ಭಕ್ತಿಭಾವಕ್ಕೆ ಮರುಳಾದ ಕನ್ಯಾಕುಮಾರಿ ದೇವಾಲಯದ ಆಡಳಿತ ಮಂಡಳಿ- ಈ ಹಾಡಿದ್ದ ಗ್ರಾಮಾಫೋನ್ ತಟ್ಟೆ ತರಿಸಿಕೊಂಡು ಬೆಳಗಿನ ಸುಪ್ರಭಾತದ ಹಾಡಿನಂತೆ ತುಂಬ ದಿನಗಳಕಾಲ ಪ್ರಸಾರ ಮಾಡಿತಂತೆ. ಚಲನಚಿತ್ರಗೀತೆಯೊಂದು ದೇವಾಲಯದಲ್ಲಿ ಪ್ರಾರ್ಥನೆಯಂತೆ ಮೊಳಗಿದ್ದು ಅದೇ ಮೊದಲೇನೋ…
ಸ್ವಾಮಿ ವಿವೇಕಾನಂದರ ಸ್ಮಾರಕವಿರುವ ಜಾಗದಲ್ಲಿ ಇಂಥದೊಂದು ಹಾಡು ಕೇಳಿಬರುವ ಕಲ್ಪನೆಯೇ ಅಮೋಘವಾದದ್ದು. ಅಂಥದೊಂದು ಗೀತೆಯ ಸೃಷ್ಟಿಗೆ ಕಾರಣರಾದ ವಿಜಯನಾರಸಿಂಹ, ವಿಜಯಭಾಸ್ಕರ್, ಎಸ್. ಜಾನಕಿ ಹಾಗೂ ದಿ. ಗ್ರೇಟ್ ಪುಟ್ಟಣ್ಣ ಕಣಗಾಲ್ ಅವರಿಗೆ ನಮಸ್ಕಾರ.
ಮಣಿಕಾಂತ್ ಬರೆದಿದ್ದಾರೆ: ಭಾರತ ಭೂಶಿರ ಮಂದಿರ ಸುಂದರಿ
ನಿಮಗೆ ಇವೂ ಇಷ್ಟವಾಗಬಹುದು…





0 Comments