ಎ ಆರ್ ಮಣಿಕಾಂತ್ ಬರೆದ ‘ಗಲ್ಲಾಪೆಟ್ಟಿಗೆಗಿಂತ ಗಲ್ಲ ಸವರುವ ಅಮ್ಮನೇ ಮುಖ್ಯ…’ ಎಂಬ ಲೇಖನ ‘ಅವಧಿ’ಯಲ್ಲಿ ‘ಅವನ ಹೆಸರು ಪ್ರಕಾಶ್’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ
ಇದನ್ನು ಓದಿದ ವಿಮರ್ಶಕ ಡಾ ಬಿ ಆರ್ ಸತ್ಯನಾರಾಯಣ ಅವರು ಮಣಿಕಾಂತ್ ಗೊಂದು ಪ್ರಶ್ನೆ ಕೇಳಿದ್ದಾರೆ. ಓದಿ
ಪ್ರೀತಿಯ ಮಣಿಕಾಂತ್ ಒಳ್ಳೆಯ ಸಂದೇಶವುಳ್ಳ ಕಥೆ!.
ಆಶ್ಚರ್ಯವೆಂದರೆ ಸುಮಾರು ಎರಡು ವರ್ಷಗಳ ಹಿಂದೆ ನಮ್ಮ ಕಾಲೇಜಿನಲ್ಲಿ ನಡೆದ ಪರ್ಸನಾಲಿಟಿ ಡೆವಲಪ್ಮೆಂಟ್ ಪ್ರೊಗ್ರಾಮಿನಲ್ಲಿ ಒಬ್ಬ ಸಂಪನ್ಮೂಲ ವ್ಯಕ್ತಿ ಇದೇ ಕಥೆಯನ್ನು ಹೇಳಿದ್ದರು. ಅದು ಅಮೇರಿಕಾದ ಒಬ್ಬ ಉದ್ಯಮಿಯ ಜೀವನದಲ್ಲಿ ನಡೆದಂತೆ ಇತ್ತು. ನೀವು ಅದರ ದೇಸೀ ವರ್ಷನ್ ಅನ್ನು ಚೆನ್ನಾಗಿ ನಿರೂಪಿಸಿದ್ದೀರ. ಅಭಿನಂದನೆಗಳು.
ಆದರೂ ನನ್ನದೊಂದು ಪ್ರಶ್ನೆಯಿದೆ.
ಪ್ರಕಾಶ್ ಮತ್ತು ನೀವೂ ಇಬ್ಬರೂ ನಮ್ಮ ನಡುವೆ ಇರುವಂತಹವರು. ಪ್ರಕಾಶ್ ಪುಸ್ತಕಗಳನ್ನು ಅಂತೆಯೇ ನಿಮ್ಮ ಅಂಕಣ ಮತ್ತು ಪುಸ್ತಕಗಳನ್ನು ಪ್ರೀತಿಯಿಂದ ೋದಿ ನಾವೂ ಆಸ್ವಾದಿಸಿದ್ದೇವೆ. ಹೀಗೆ ಒಬ್ಬರ ಬೆನ್ನನ್ನು ಒಬ್ಬರು ಕೆರೆದುಕೊಳ್ಳವ ಅವಶ್ಯಕತೆ ಏನಿದೆ? ನಿಜವಾಗಿಯೂ ತುರಿಕೆ ಇದ್ದಾಗ ಕೆರೆದುಕೊಳ್ಳುವುದಕ್ಕೆ ನನ್ನ ಆಕ್ಷೇಪಣೆಯೇನಿಲ್ಲ!
ಸಾವಿರ ಬಾರಿ ಹೇಳಿದರೆ ಸುಳ್ಳೂ ನಿಜವಾಗುತ್ತದೆ ಎಂಬುದು ಲೋಕಾರೂಢಿ ಮಾತು ಮಾತ್ರ ಎಂಬ ಎಚ್ಚರ ಒಬ್ಬ ಬರಹಗಾರನಿಗಿರಬೇಕಾದ ಮೂಲಭೂತ ಅಗತ್ಯ ಎಂಬ ಮಾತನ್ನು ನೀವೂ ಒಪ್ಪುತ್ತೀರಿ ಎಂದುಕೊಂಡಿದ್ದೇನೆ.
ಇಂತಿ ನಿಮ್ಮ ಸಹೃದಯ ಓದುಗರ ಪರವಾಗಿ
ಡಾ ಬಿ ಆರ್ ಸತ್ಯನಾರಾಯಣ








:):):)
##&&??????
!!!!!!!!!!!!!!!!!!!!!!!!!
ಸತ್ಯನಾರಾಯಣ್ ಸಾರ್ ನಮಸ್ತೆ ನಿಮ್ಮ ಅನಿಸಿಕೆ ಓದಿದೆ, ಯಾಕೋ ಹೇಳಬೇಕಾದ ವಿಚಾರ ಸ್ಪಷ್ಟವಾಗಿ ನೀವು ಹೇಳಿಲ್ಲ ಅನ್ನಿಸಿತು. ಇಲ್ಲಿ ಮಣಿಕಾಂತ್ ಲೇಖನ ದಲ್ಲಿ ಬರೆದಿದ್ದ ವಿಚಾರ ಎರಡು ವರ್ಷಗಳ ಹಿಂದೆ ನಿಮ್ಮ ಕಾಲೇಜಿನಲ್ಲಿ ನಡೆದ ಪರ್ಸನಾಲಿಟಿ ಡೆವಲಪ್ಮೆಂಟ್ ಪ್ರೊಗ್ರಾಮಿನಲ್ಲಿ ಒಬ್ಬ ಸಂಪನ್ಮೂಲ ವ್ಯಕ್ತಿ ಇದೇ ಕಥೆಯನ್ನು ಹೇಳಿದ್ದ ನೆನಪನ್ನು ದಾಖಲಿಸಿದ್ದೀರಿ, ಒಳ್ಳೆಯದು ಆದರೆ ನಿಮಗೆ ತಿಳಿದಿದ್ದ ವಿಚಾರ ನಮಗೆ ಆಗಲಿ ಅಥವಾ ಮಣಿಕಾಂತ್ ಗೆ ಆಗಲಿ ಗೊತ್ತಿರಲಿಲ್ಲ , ಯಾವುದೋ ಕಥೆಯನ್ನು ಕೇಳಿ ಅದರಿಂದ ಪ್ರೇರಿತವಾಗಿ ಇಲ್ಲಿನ ನೆಲಕ್ಕೆ ಒಗ್ಗುವ ಹಾಗೆ ಕಥೆ ಬರೆದರೆ ಅದು ಕೃತಿಚೌರ್ಯ ಆಗುತ್ತದೆಯೇ ಎಂಬುದು ತಿಳಿಯುತ್ತಿಲ್ಲ . ಮತ್ತೊಂದು ವಿಚಾರ ಪ್ರಕಾಶ್ ಹಾಗು ಮಣಿಕಾಂತ್ ಇಬ್ಬರೂ ನೀವೇ ಹೇಳುವಂತೆ ನಮ್ಮ ನಡುವೆ ಇರುವ ಒಳ್ಳೆಯ ಗೆಳೆಯರೇ, ಇಬ್ಬರ ಬರವಣಿಗೆಯನ್ನು ಎಲ್ಲರೂ ಓದುತ್ತೇವೆ. ಆದರೆ ಇಲ್ಲಿ ಅನಾವಶ್ಯಕವಾಗಿ ಬೆನ್ನುಕೆರೆಯುವ ಮಾತು ಯಾಕೆ ಬಂತೋ ನಾ ಕಾಣೆ. ಪರಸ್ಪರ ಬೆನ್ನು ಕೆರೆದು ಯಾವ ಪೌರುಷ ಮೆರೆಯ ಬೇಕು ಇಬ್ಬರು, ಈಗಾಗಲೇ ಅವರ ಜೀವನದಲ್ಲಿ ಸಾಧನೆ ಮಾಡಿದ್ದಾರೆ ಈಗ ಇದರ ಅವಶ್ಯಕತೆ ಇದೆಯೇ, ದಯವಿಟ್ಟು ತಪ್ಪು ತಿಳಿಯ ಬೇಡಿ ನಾನು ಯಾರ ಪರ ಅಥವಾ ವಿರೋಧವಾಗಿ ಈ ಅನಿಸಿಕೆ ಬರೆಯುತ್ತಿಲ್ಲ. ಕನ್ನಡ ಬ್ಲಾಗ್ ಅಂಗಳದಲ್ಲಿ ನಾವೆಲ್ಲರೂ ಪರಸ್ಪರ ಬೆನ್ನು ತಟ್ಟುತ್ತಾ ಜೊತೆಯಾಗೀ ಸಾಗೋಣ. ನಮ್ಮ ಸಂತೋಷಕ್ಕಾಗಿ ಬರೆಯುವುದರಿಂದ ಯಾರಿಗೂ ಅಪಾಯವಿಲ್ಲ. ಅಥವಾ ಬ್ಲಾಗ್ ಬರೆದು ಯಾವ ಪಾರೋತೊಷಕ ಅಥವಾ ಸನ್ಮಾನ ಮಾಡಿಸಿ ಕೊಳ್ಳುವ ಅವಶ್ಯಕತೆ ಯಾರಿಗೂ ಇಲ್ಲಾ ಅನ್ನಿಸುತ್ತೆ. ಇದು ನನ್ನ ನೇರ ಅಭಿಪ್ರಾಯ , ಒಳ್ಳೆಯ ವಾತಾವರಣ ನಿರ್ಮಾಣ ಮಾಡಿ ಕನ್ನಡ ಬ್ಲಾಗ್ ಲೋಕ ಬೆಳಗಲು ಎಲ್ಲರೂ ಕೈಜೋಡಿಸೋಣ ಬನ್ನಿ .
ಶ್ರೀ ಬಾಲಸುಬ್ರಹ್ಮಣ್ಯ ಮತ್ತು ಚಿನ್ಮಯಭಟ್ಟ ಅವರಿಗೆ ನಮಸ್ಕಾರಗಳು. ಬೆನ್ನು ಕೆರೆಯುವ ಮಾತನ್ನು ನಾನು ಸ್ವಲ್ಪ ತಮಾಷೆಯಾಗಿಯೇ ಬಳಸಿದ್ದೇನೆ. ನಾವುಗಳು ಬೇಟಿಯಾದಾಗ ಒಬ್ಬರಿಗೊಬ್ಬರು ಕಿಚಾಯಿಸಿಕೊಂಡು ಕಾಲೆಳೆದುಕೊಂಡು ಮಾತನಾಡುತ್ತೀವಲ್ಲ; ಆ ರೀತಿ. ಅದರ ಬಗ್ಗೆ ಅಷ್ಟೊಂದು ಬೇಸರ ಬೇಡ.
ಇನ್ನು ಸಾಹಿತ್ಯದಲ್ಲಿ ಸ್ವೀಕರಣದ ಬಗ್ಗೆ. ನಾನು ಯಾವತ್ತೂ ಸ್ವೀಕರಣವನ್ನು ವಿರೋಧಿಸಿಲ್ಲ. ಇನ್ನೊಂದು ಕಲಾಕೃತಿಯನ್ನು, ಸಾಹಿತ್ಯವನ್ನು ಅವಲೋಕಿಸುವುದರಿಂದ ಪ್ರಭಾವಿತರಾಗಿ, ಕಾಲಧರ್ಮವನ್ನು ಅನುಸರಿಸಿ, ತಮ್ಮ ದರ್ಶನಗಳ ಹಿನ್ನೆಲೆಯಲ್ಲಿ ಹೊಸರೀತಿಯಲ್ಲಿ ಅದನ್ನು ಕಟ್ಟಿಕೊಡುವುದು ಯಾವತ್ತಿಗೂ ಇದ್ದದ್ದೇ ಆಗಿದೆ.ಇದು ಒಂದು ರೀತಿಯಲ್ಲಿ ‘ಹಳೆಯ ಒಡವೆಯನ್ನು ಮುರಿಸಿ, ಹೊಸ ವಿನ್ಯಾಸದಲ್ಲಿ ಮತ್ತೆ ಮಾಡಿಸಿಕೊಂಡಂತೆ.’ ಅಂತಹ ಸಂದರ್ಭದಲ್ಲಿ, ಹೊಸ ಹೊಸ ಪಾತ್ರಗಳನ್ನೇ, ಸನ್ನಿವೇಶಗಳನ್ನೇ ಸೃಷ್ಟಿ ಮಾಡಿಕೊಳ್ಳುವುದೂ ಸಹಜ.
ಆದರೆ, ನನ್ನ ಪ್ರಶ್ನೆ ಅತ್ಯಂತ ಸರಳ: ಬೇರೊಬ್ಬರ ಅನುಭವವನ್ನು, ಒಂದು ಕಥೆಯಂತೆ ನಿರೂಪಿಸಿದ್ದರೆ, ತೊಂದರೆಯಿಲ್ಲ. ಆದರೆ, ನಮ್ಮ ನಿಮ್ಮ ನಡುವೆ ಇರುವ ಸ್ನೇಹಿತರ ಬದುಕಿನಲ್ಲಿಯೇ ಅದು ನಡೆದಿರುವಂತೆ ಚಿತ್ರಿಸುವುದು ಎಷ್ಟು ಸರಿ? ಪ್ರಕಾಶ್ ಮತ್ತು ಮಣಿಕಾಂತ್ ಇಬ್ಬರೂ ನಿರ್ಮಲ ಮನಸ್ಸಿನವರೇ ಆಗಿದ್ದಾರೆ. ಅದನ್ನು ಬೇರೊಬ್ಬರ ಅನುಭವದ ಹಿನ್ನೆಲೆಯಲ್ಲಿ, ದಾಖಲಿಸುವ ಅಗತ್ಯವಿದೆಯೇ? ಅಥವಾ ಈ ಘಟನೆ ಪ್ರಕಾಶ್ ಅವರ ಬದುಕಿನಲ್ಲಿಯೂ ನಡೆದಿದೆಯೇ? ಹಾಗೆ ನೆಡೆದಿದ್ದರೆ, ನಾನು ಎತ್ತಿರುವ ಪ್ರಶ್ನೆಗಳೆಲ್ಲವೂ ತನ್ನಿಂತಾನೆ ಅಪ್ರಸ್ತುತವಾಗಿಬಿಡುತ್ತವೆ.
ಬಾಲು ಸರ್, ನನಗೆ ಲೇಖನ ಬರೆಯುವ ಉದ್ದೇಶವಿದ್ದರೆ, ಎಲ್ಲವನ್ನೂ ವಿವರವಾಗಿಯೇ ಬರೆಯಬಹುದಾಗಿತ್ತು. ಆದರೆ ಇದೊಂದು ಆ ಕ್ಷಣದ ಪ್ರತಿಕ್ರಿಯೆ ಅಷ್ಟೆ. ಅದು ಹೀಗೆ ಒಂದು ಪ್ರತ್ಯೇಖ ಪುಟವಾಗಿ ಪ್ರಕಟವಾಗುತ್ತದೆ ಎಂಬ ಕಲ್ಪನೆಯಾದರೂ ನನಗಿರಲು ಸಾಧ್ಯವೆ!? ಅಷ್ಟಕ್ಕೂ, ಮಣಿಕಾಂತ್ ಕೃತಿಚೌರ್ಯ ಮಾಡಿದ್ದಾರೆ ಎಂದು ನಾನು ಹೇಳಿಯೇ ಇಲ್ಲ!
ಇದು ನನಗೆ ಹೊಸದಾದ ಅನುಭವ ನೀಡಿದ ಲೇಖನ. ನಾನು ಓದಿಕೊಂಡಿರುವ ಸಾಹಿತ್ಯ ಮಿತಿಯ ಮಟ್ಟಿಗೆ ಹೊಸದು. ನನ್ನ ಪ್ರತಿಕ್ರಿಯೆ ಪ್ರತ್ಯೇಖ ಪುಟವಾಗಿ ಪ್ರಕಟವಾದಾಗ, ನನಗನ್ನಿಸಿದ್ದು: ಸಾಹಿತ್ಯದ ವಸ್ತು, ಮತ್ತು ಅದರ ಆಯ್ಕೆ, ಋಣಭಾರ ಇವುಗಳ ಬಗ್ಗೆ ಒಂದಷ್ಟು ಉತ್ತಮ ಚರ್ಚೆ ನಡೆಯಬಹುದು ಎಂದು.
ಆದರೆ ಅದನ್ನು ನೀವು ವೈಯಕ್ತಿಕ ನೆಲೆಯಲ್ಲಿ ನೋಡಿರುವುದು ನನಗೂ ಬೇಸರ ಮೂಡಿಸಿದೆ.
ಲೇಖನದಲ್ಲಿ ವ್ಯಕ್ತವಾಗಿರುವ ಆಶಯ, ಲೇಖನದಲ್ಲಿ ಅದನ್ನು ಪ್ರಸ್ತುತಪಡಿಸಿರುವ ರೀತಿ ನನಗೂ ಇಷ್ಟವಾಗಿದೆ. ಅದಕ್ಕೆ ಮೊದಲೇ ಅಭಿನಂದನೆಗಳನ್ನು ಸೂಚಿಸಿದ್ದೇನೆ.
ಇನ್ನು ಚಿನ್ಮಯ ಭಟ್ಟ ಅವರೇ ಹೇಳಿರುವಂತೆ “ಮಣಿಕಾಂತರ ಮೇಲಿನ,ಅವರ ಬರಹಗಳ ಮೇಲಿನ ಪ್ರೀತಿಯನ್ನು ನಿವೇದಿಸುತ್ತದೆ” ಎಂಬ ಮಾತು ನನ್ನ ಪ್ರತಿಕ್ರಿಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವುದರ ಸಂಕೇತ. ಅದಕ್ಕಾಗಿ ನಾನು ಆಭಾರಿಯಾಗಿದ್ದೇನೆ.
ಇನ್ನೂ ಒಂದು ಮಾತು: ಯಾರೋ ಸ್ನೇಹಿತರು ಮಣಿಕಾಂತ್ ಅವರಿಗೆ ಮೆಸೇಜ್ ಮಾಡಿ, ಅವಧಿಯಲ್ಲಿ ಸತ್ಯನಾರಾಯಣ ನಿಮ್ಮನ್ನು ಚೆನ್ನಾಗಿ ಬೈಯ್ದಿದ್ದಾನೆ ಎಂದು ತಿಳಿಸಿದ್ದಾರೆ. ಮಣಿಕಾಂತ್ ನನಗೆ ತಿಳಿಸಿದರು. ನಾನು ಅವರಿಗೆ, ಅದೊಂದು ಪ್ರತಿಕ್ರಿಯೆ ಮಾತ್ರ ಎಂದು ತಿಳಿಸಿದ್ದೇನೆ. (ಇಂತಹ ಸ್ನೇಹಿತರ ವೈಯಕ್ತಿಕ ಹಿತಾಸಕ್ತಿಯನ್ನು ನಾನು ವಿರೋಧಿಸುತ್ತೇನೆ)
ನಾನು ಓದಿದ ತಕ್ಷಣ ನನಗನ್ನಿಸಿದ್ದನ್ನು ಮುಕ್ತವಾಗಿ ಪ್ರತಿಕ್ರಿಯಿಸಿದ್ದೇನೆ. ಮಣಿಕಾಂತ್ ಮತ್ತು ಪ್ರಕಾಶ್ ಇಬ್ಬರೂ ನನ್ನ ಆಶಯವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ.
ಡಾ . ಸತ್ಯನಾರಾಯಣ್ ಸಾರ್ ನಿಮ್ಮ ಸ್ಪಷ್ಟೀಕರಣ ಓದಿದೆ , ನಿಮ್ಮ ಮನಸಿನಲ್ಲಿ ಇದ್ದದ್ದನ್ನು ನೇರವಾಗಿ ಹೇಳಿದ್ದೀರ, ಸಂತೋಷ, ಯಾರನ್ನು ನೋಯಿಸುವ ಉದ್ದೇಶ ನಿಮಗಿಲ್ಲ ಎಂಬ ಮಾತು ನಾನು ಒಪ್ಪುತ್ತೇನೆ, ಬೆನ್ನು ಕೆರೆಯುವ ಮಾತನ್ನು ನಾನು ಸ್ವಲ್ಪ ತಮಾಷೆಯಾಗಿಯೇ ಬಳಸಿದ್ದೇನೆ. ನಾವುಗಳು ಬೇಟಿಯಾದಾಗ ಒಬ್ಬರಿಗೊಬ್ಬರು ಕಿಚಾಯಿಸಿಕೊಂಡು ಕಾಲೆಳೆದುಕೊಂಡು ಮಾತನಾಡುತ್ತೀವಲ್ಲ; ಆ ರೀತಿ. ಎಂಬ ವಿಚಾರದಲ್ಲಿ ದಯವಿಟ್ಟು ಯೋಚಿಸಿ, ಬರವಣಿಗೆಯಲ್ಲಿ ಈ ರೀತಿ ಚುಡಾಯಿಸಿದಾಗ ಕೆಲವರಿಗೆ ಬಿಟ್ಟಿ ಮನರಂಜನೆ ಆಗುವ ಅಪಾಯವಿದೆ, ಇನ್ನುಕೆಲವರು ಅದನ್ನು ಬೇರೆ ರೀತಿ ಅರ್ಥೈಸಿ ಕೊಂಡು ನಗೆಪಾತಲಾಗಬೇಕಾಗುತ್ತದೆ. ಅದರಿಂದ ಎದುರಿಗೆ ಸಿಕ್ಕಾಗ ಒಬ್ಬರಿಗೊಬ್ಬರು ತುಂಟಾಟ ಮಾಡಿ ಕಾಲೆಳೆಯುವುದು ಒಳ್ಳೆಯದು ಅಲ್ಲವೇ??.ಇನ್ನು ಲೇಖನ ಬರೆದ ವಿಚಾರದಲ್ಲಿ ಯಾವುದೋ ವ್ಯಕ್ತಿ ಯನ್ನು ಮನದಲ್ಲಿಟ್ಟುಕೊಂಡು ಬರೆಯುವಾಗ ಒಳ್ಳೆಯ ಪರಿಣಾಮ ಬೀರುತ್ತದೆ ಎಂಬ ಉದ್ದೇಶ ಲೇಖಕರಿಗೆ ಇರಬಹುದು. ಇದರ ಜೊತೆಗೆ ಈ ಕಥೆಗೆ ಹೋಲಿಕೆ ಮಾಡಿಕೊಂಡ ಪಾತ್ರದಾರಿ ಪ್ರಕಾಶ್ ಹೆಗ್ಡೆ ಆಕ್ಷೇಪಣೆ ವ್ಯಕ್ತಪಡಿಸಿಲ್ಲ, ಹಾಗಾಗಿ ಈಬಗ್ಗೆ ನಿರ್ಧಾರವನ್ನು ಮಣಿಕಾಂತ್ ಹಾಗು ಪ್ರಕಾಶ್ ಹೆಗಡೆಯವರಿಗೆ ಬಿಡೋಣ , ಒಂದು ವೇಳೆ ಇಬ್ಬರ ಸಹಮತ ವಿದ್ದಲ್ಲಿಸಮಸ್ಯೆಯೇ ಇಲ್ಲವಲ್ಲ ಇದನ್ನು ಕಥೆಯಾಗಿ ಸ್ವೀಕರಿಸಿ ಓದಿ ಮುಂದೆ ಸಾಗೋಣ ಅಲ್ಲವೇ. ನನಗೂ ನಿಮ್ಮಂತೆ ಆರೋಗ್ಯಕರ ಚರ್ಚೆ ಇಷ್ಟ ಆಗುತ್ತೆ , ವಯಕ್ತಿಕವಾಗಿ ವಿಮರ್ಶೆ ಮಾಡಿ ಒಳ್ಳೆಯ ಗೆಳೆಯರ ಕೂಟವನ್ನು ಒಡೆಯುವುದು ನನಗೆ ಇಷ್ಟವಿಲ್ಲ , ಇದರಿಂದ ನಿಮ್ಮಂತ ಒಬ್ಬ ಒಳ್ಳೆಯ ಜ್ನಾನಿಯ ಸ್ನೇಹವನ್ನು ಕಳೆದುಕೊಳ್ಳುವ ಅವಕಾಶ ನನಗೆ ಬೇಡ. ನಿಮ್ಮ ಹಲವಾರು ಲೇಖನಗಳನ್ನು ಓದಿ ನನ್ನ ಜ್ಞಾನ ಹೆಚ್ಚಿಸಿಕೊಂಡಿದ್ದೇನೆ, ಬೇಸರ ಬೇಡ ನಾವೆಲ್ಲಾ ಒಟ್ಟಿಗೆ ಸಾಗೋಣ, ಕನ್ನಡ ಬ್ಲಾಗ್ ಲೋಕದಲ್ಲಿ ನಾವೆಲ್ಲಾ ಒಟ್ಟಿಗೆ ಸಾಗುವುದು ಆರೋಗ್ಯಕರ ಬೆಳವಣಿಗೆ. ನಮ್ಮ ಗೆಳೆತನ ಮುಂದುವರೆಯಲಿ. ಪ್ರೀತಿಗೆ ವಿಶ್ವಾಸಕ್ಕೆ ಜೈ ಎನ್ನೋಣ. ಈ ವಿಚಾರವನ್ನು ಇಲ್ಲಿಗೆ ಮುಗಿಸೋಣ
ಬಾಲು ಸರ್ ನಿಮ್ಮ ಕಾಳಜಿಗೆ ಧನ್ಯವಾದಗಳು.
ಮಣಿಕಾಂತ್ ಒಬ್ಬ ರಂಜನೆಗೆ ಬರೆಯುವ ಸಾಹಿತಿಯಾಗಿದ್ದರೆ ನಾನು ಈ ಪ್ರಶ್ನೆಯನ್ನೇ ಎತ್ತುತ್ತಿರಲಿಲ್ಲ. ಅವರೊಬ್ಬ ಗಂಭೀರ ಬರಹಗಾರ. ಸಾಹಿತ್ಯ ಚರಿತ್ರೆಯಲ್ಲಿ ಅವರ ಪುಸ್ತಕಗಳು ಉಳಿಯಲಿವೆ. ಅವರು ಪ್ರಕಾಶ್ ಹೆಗಡೆಯವರ ಬಗ್ಗೆ ಬೇಕಾದರೆ ಒಂದು ಪುಸ್ತಕವನ್ನೇ ಬರೆಯಲಿ. ಖಂಡಿತಾ ಸಹೃದಯ ಓದುಗರು ಸ್ವೀಕರಿಸಿಸುತ್ತಾರೆ. ಆದರೆ ಪ್ರಕಾಶ್ ಹೆಗಡೆಯವರ ಜೀವನಚರಿತ್ರೆಯಲ್ಲಿ ಅವರದಲ್ಲದ ಒಂದು ಅಧ್ಯಾಯವಿರುವುದು ಯಾವ ನ್ಯಾಯ? ಪ್ರಕಾಶ್ ಹೆಗಡೆಯವರ ಸಮ್ಮತಿ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ಬರಹವನ್ನು ತಮ್ಮ ಫೇಸ್ ಬುಕ್ ಗೋಡೆಯಲ್ಲಿ ಅವರು ಶೇರ್ ಮಾಡಿದ್ದಾರೆ. ಅದು ನನಗೆ ಮುಖ್ಯವೂ ಅಲ್ಲ ಏಕೆಂದರೆ ಇದು ವೈಯಕ್ತಿಕ ಪ್ರಶ್ನೆಯೇ ಅಲ್ಲ. ಇನ್ನು ಮುಂದೆ ಯಾರಾದರೂ ಒಬ್ಬ ಪೋಲಿಯ ಕಥೆಯನ್ನು ಬರೆಯುವಾಗ, ಉದಾಹರಣೆಗೆ, ರೇಪಿಸ್ಟ್ ಉಮೇಶರೆಡ್ಡಿಯ ಬಗ್ಗೆ ಆಗಲಿ, ದೆಹಲಿ ಗ್ಯಾಂಗ್ ರೇಪಿಗೆ ಕಾರಣರಾದವರ ಬಗ್ಗೆ ಆಗಲೀ ಬರೆಯುವಾಗ (ಇನ್ನು ಲೇಖನ ಬರೆದ ವಿಚಾರದಲ್ಲಿ ಯಾವುದೋ ವ್ಯಕ್ತಿ ಯನ್ನು ಮನದಲ್ಲಿಟ್ಟುಕೊಂಡು ಬರೆಯುವಾಗ ಒಳ್ಳೆಯ ಪರಿಣಾಮ ಬೀರುತ್ತದೆ ಎಂಬ ಉದ್ದೇಶ ಲೇಖಕರಿಗೆ ಇರಬಹುದು.) ಮಾದರಿಗೆ ಇರಲಿ ಎಂದು ಬೇರೆಯವರ, ಅಂದರೆ ನಮ್ಮ ನಡುವೆ ಇರುವ ಸ್ನೇಹಿತರ ಹೆಸರನ್ನು ಹಾಕಿ ಬರೆದರೆ ಚೆನ್ನಾಘಿರುತ್ತದೆಯೇ? ಇದು ನಾವೆಲ್ಲರೂ ಯೋಚಿಸಬೇಕಾದ ವಿಚಾರವಲ್ಲವೆ?
ಮುಂದೆ ಬೇರೆ ಯಾರಾದರೂ ಪ್ರಕಾಶ್ ಹೆಗಡೆಯವರ ಬದುಕಿನ ಬಗ್ಗೆ ಬರೆದರೆ, ಜೀವನಚರಿತ್ರೆ ಸಂಪಾದಿಸಿದರೆ, ಅವರ ಬಗ್ಗೆ ಎಲ್ಲಾದರು ಭಾಷಣ ಮಾಡಲು ಮಾಹಿತಿ ಸಂಗ್ರಹಿಸಿದರೆ ಅವರಿಗೆ ತಪ್ಪು ಮಾಹಿತಿ ಸಿಗಲು ಅವಕಾಶವಿರುತ್ತದೆ ಅಲ್ಲವೆ? ಹಾಗೇ ಅದಕ್ಕೆ ಸೃಜನಶೀಲ ಬರಹಗಾರರಾದ ಮಣಿಕಾಂತ್ ಕಾರಣರಾಗುತ್ತಾರೆ ಅಲ್ಲವೆ? ಒಬ್ಬರು ಹಾಕಿರುವ ಬಟ್ಟೆ ನಮಗೆ ಇಷ್ಟವಾದರೆ, ನಾವೂ ಅದೇ ರೀತಿಯ ಬಟ್ಟೆಯನ್ನು ನಮ್ಮ ಅಳತೆಗೆ ತಕ್ಕಂತೆ ಹೊಲಿಸಿಕೊಂಡು ಹಾಕಿಕೊಳ್ಳಬಹುದು.
ಅದರ ಬದಲು, ಅವರು ಹಾಕಿರುವ ಬಟ್ಟೆಯನ್ನೇ ಕಿತ್ತುಕೊಂಡು ಹಾಕಿಕೊಳ್ಳಲಾದೀತೆ? ಮಾತೆ ಮಹಾದೇವಿಯವರು, ಅಕ್ಕಮಹಾದೇವಿಯ ವಚನಗಳ ಅಂಕಿತವನ್ನು ಲಿಂಗದೇವಾ ಎಂದು ಬದಲಿಸಿದಾಗ ಇಡೀ ಸಾಂಸ್ಕೃತಿಕ ಲೋಕವೇ ಅದನ್ನು ವಿರೋಧಿಸಿದ್ದು ಇದೇ ಕಾರಣಕ್ಕೆ ಅಲ್ಲವೆ? ಇಂತಹ ಅರ್ಥಪೂರ್ಣ ಪ್ರಶ್ನೆಗಳೆನ್ನೆತ್ತುವುದೇ ಅಪರಾಧವೇ?
“ಇಷ್ಟಕ್ಕೇ ಒಡೆದು ಹೋಗುವಷ್ಟು ದುರ್ಬಲವೇ ಸ್ನೇಹಕೂಟ!?” ಎಂಬುದನ್ನು ನೀವೇ ಹೇಳಬೇಕು.
ಅಹ್ ,ನಮಸ್ಕಾರ ಎಲ್ಲರಿಗೂ…
ಚರ್ಚೆ ಮಾಡುವಷ್ಟು ದೊಡ್ಡವ ನಾನಲ್ಲ…ನನ್ನ ಅನಿಸಿಕೆ ಇವು ಅಷ್ಟೇ…ನಿರೂಪಣೆಯಲ್ಲಿ ಕೊಂಚ ವ್ಯತ್ಯಾಸವಾದರೆ ದಯವಿಟ್ಟು ಕ್ಷಮಿಸಿ…
ಒಬ್ಬರ ಮನಸ್ಸಿನಲ್ಲಿದ್ದ ವಿಚಾರ ಇನ್ನೊಬ್ಬರ ಮನಸ್ಸಿನಲ್ಲಿ ಬಂದರೆ ಅದನ್ನು ರೂಪಾಂತರ ಎನ್ನುವುದು ಎಷ್ಟು ಸರಿಯೋ ತಪ್ಪೋ ಗೊತ್ತಿಲ್ಲ…ಯಾಕೆಂದರೆ ನಮ್ಮ ಮನಸ್ಸಿನಲ್ಲಿನ ವಿಚಾರ ಇನ್ನೊಬ್ಬರನ್ನು ಕೇಳಿ ಬರುವುದಿಲ್ಲ..ಇಡೀ ಜಗತ್ತಿನಲ್ಲಿರುವ ಸಮಸ್ತ ಸಾಹಿತ್ಯವನ್ನು ಓದಿ, ಆಮೇಲೆ ಒಂದು ಬರಹವನ್ನು ಬರೆದು,ಆಗ ನನ್ನದೊಂದು ಅಲ್ಲೆಲ್ಲೋ ಇಲ್ಲದ ಕಥೆ ಇದೆ ಎನ್ನುವುದು ಎಷ್ಟು ಜನರಿಗೆ ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ..ನನ್ನ ಮಟ್ಟಿಗೆ ಒಬ್ಬ ಲೇಖಕನಲ್ಲಿ ಸೃಜಿಸಿದ್ದು,ಅವನ ಸ್ವಂತದ್ದೇ…ಭಾವ ಒಂದೇ ಆಗಿದ್ದರೂ,ವಿಚಾರವು ಹಳೆತೇ ಆಗಿದ್ದರೂ ಅವನ ನಿರೂಪಣೆಯನ್ನು ನೋಡಿ ಖುಷಿ ಪಡಬೇಕಾದ್ದು ಓದುಗರ ಧರ್ಮ ಎಂದೆನಿಸಿತು…
ಇನ್ನು ಆ ಕಥೆಯನ್ನೇ ಬಳಸಿದ್ದಾರೆ ಎಂದಿಟ್ಟುಕೊಳ್ಳಿ…ತಪ್ಪೇನು?? ಹಾಗೆ ನೋಡುತ್ತಾ ಹೋಗೋದಾದ್ರೆ ನಮ್ಮ ನವೋದಯ ಗೀತೆಗಳಲ್ಲಿನ ಹಲವಾರು ವಿಚಾರಗಳೂ ಸಹ ಪಾಶ್ಚಾತ್ಯ ವಿಚಾರಧಾರೆಯನ್ನೇ ಎರವಲಾಗಿಸಿಕೊಂಡಿಲ್ಲವೇ??? ಆದರೆ ಅವು ನಮ್ಮ ಮೇಲೆ ಮಾಡಿರುವಂತಹವು???..ಜನರಲ್ಲಿ ಒಳ್ಳೆಯ ಭಾವನೆಯನ್ನು ಮೂಡಿಸುವುದಲ್ಲವೇ ಒಬ್ಬ ಲೇಖಕನ ಕರ್ತವ್ಯ…ಅದನ್ನು ಮಣಿಕಾಂತರು ಮಾಡುತ್ತಾ ಬಂದಿದ್ದಾರೆ..ಹಲವಾರು ಜನರಿಗೆ ಸ್ಪೂರ್ತಿಯಾಗಿದ್ದಾರೆ ..ಹಾಗಾಗಿ ಈ ನಿಮ್ಮ ಬರಹದಲ್ಲಿ ವೈಯಕ್ತಿಕವಾಗಿ ನನಗೆ “ಬೆನ್ನು ಕೆರೆಯುವುದು” ಎಂಬ ಪದ ಯಾಕೋ ಇಷ್ಟವಾಗಲಿಲ್ಲ…ಕ್ಷಮಿಸಿ..
ಇನ್ನು ನಿಮ್ಮನ್ನ ಒಂದು ವಿಚಾರಕ್ಕಾಗಿ ಅಭಿನಂದಿಸಲೇ ಬೇಕು…ನಿಮ್ಮ ಈ ಬರಹ ಮಣಿಕಾಂತರ ಮೇಲಿನ,ಅವರ ಬರಹಗಳ ಮೇಲಿನ ಪ್ರೀತಿಯನ್ನು ನಿವೇದಿಸುತ್ತದೆ ಎಂದೆನಿಸಿತು…
ಒಬ್ಬ ನನ್ನ ಮೆಚ್ಚಿನ ಲೇಖಕನ ಬರಹದಲ್ಲಿ ನನಗೆ ತಿಳಿದಂತೆಯೇ ಒಂದು ಚಿಕ್ಕ ತಪ್ಪಾಗಿರಬಹುದೇನೋ ಎಂದೆನಿಸಿದಾಗ,ಅದನ್ನು ಮುಖ್ಯ ವೇದಿಕೆಗೆ ತರುವ ಕೆಲಸವನ್ನು ನೀವು ಬಹಳ ಅರ್ಥಪೂರ್ಣವಾಗಿ ಮಾಡಿದ್ದೀರಿ..ಧನ್ಯವಾದಗಳು ನಿಮಗೆ ಅದಕ್ಕಾಗಿ..
ಇವಷ್ಟು ನನಗನ್ನಿಸಿದ್ದು..ಯಾರಿಗಾದರೂ ಬೇಜಾರಾಗಿದ್ದರೆ ದಯವಿಟ್ಟು ಕ್ಷಮಿಸಿ..ನಾ ಬರೆದುದ್ದರಲ್ಲಿ ತಪ್ಪಿದ್ದರೂ ದಯವಿಟ್ಟು ತಿಳಿಸಿ…
ಅವಕಾಶಕ್ಕಾಗಿ ಧನ್ಯವಾದಗಳು..
ನಮಸ್ತೆ 🙂
ಬಾಲಸುಬ್ರಹ್ಮಣ್ಯ ಹಾಗೂ ಚಿನ್ಮಯ ಭಟ್ ರವರಿಗೆ,
ಯಾವುದೋ ಕಥೆಯನ್ನು ಕೇಳಿ ಅದರಿಂದ ಪ್ರೇರಿತವಾಗಿ ಇಲ್ಲಿನ ನೆಲಕ್ಕೆ ಒಗ್ಗುವ ಹಾಗೆ ಕಥೆ ಬರೆದರೆ ಅದು ಕೃತಿಚೌರ್ಯ ಆಗುವುದಿಲ್ಲ, ಆದರೆ, ಅದೇ ಕಥೆ ನನ್ನ, ನನ್ನ ಸ್ನೇಹಿತನ ಜೀವನದಲ್ಲೇ ನಡೆದಿತ್ತು ಅಂತ ಬರೆದರೆ ತಪ್ಪಾಗುತ್ತದೆ. ಮಣಿಕಾಂತರ ಬರಹ ಓದಿದರೆ, ನಿಮಗೆ ಗೊತ್ತಾಗುತ್ತದೆ ಅವರು ನಮ್ಮ ನಿಮ್ಮ ನಡುವೆ ಇರುವ ಪ್ರಕಾಶ್-ರವರ ಮೇಲೆ ಕತೆ ಹೊಸೆದಿದ್ದಾರೆ. ಇದು ಸರಿ ಅನ್ನುವುದಾದರೆ, ನಾನೂ ನಮ್ಮೂರ ಗುಡ್ಡ ಹತ್ತಿ ಯೂಲಿಸಿಸ್ ಅನ್ನೋ ಒಕ್ಕಣ್ಣ ರಾಕ್ಷಸನನ್ನು ಕೊಂದು ಹಾಕಿದೆ ಅಂತಾ ಬರೆದುಕೋಬಹುದಾ (ಯೂಲಿಸಿಸ್ ಮತ್ತು ಪಾಲಿಫೀಮಸ್ ಅನ್ನೋ ಪಾಶ್ಚಾತ್ಯ ಮಕ್ಕಳ ಕತೆಯನ್ನು ಇಲ್ಲಿನ ನೆಲಕ್ಕೆ ಒಗ್ಗುವ ಹಾಗೆ ಬರೆದರೆ)?
ಪ್ರಿಯರೆ
ನಾನೀಗ ಸ್ಪಷ್ಟನೆ ಕೊಡಲೇ ಬೇಕಾಗಿದೆ . ಏನೆಂದರೆ , ಮೊನ್ನೆ ಯುಗಾದಿಯ ದಿನ ಅವಧಿಯಲ್ಲಿ ಪ್ರಕಟವಾದ ” ಗಲ್ಲಾ ಪೆಟ್ಟಿಗೆಗಿಂತ … ” ಬರಹ ದ ಪಾತ್ರಗಳು ಕಾಲ್ಪನಿಕ. ಈ ಬರಹವನ್ನು ೨೦೦೬ ರಲ್ಲಿ ೪ ಪ್ಯಾರಾಗಳ ಪುಟ್ಟ ಕಥೆಯಾಗಿ ಬರೆದಿದ್ದೆ . ಅದನ್ನೇ ಒಂದು ಕಿರುಚಿತ್ರ ಮಾಡಬೇಕು ಎಂಬ ಆಶೆಯಿತ್ತು . ಈ ಸಂದರ್ಭದಲ್ಲಿ ಕಥಾ ವಿಸ್ತರಣೆ ಆಗಬೇಕು ಅನ್ನಿಸಿದಾಗ ಕಥಾ ನಾಯಕ ಕೆಲಸದ ಒತ್ತಡದಲ್ಲಿ ಇರುವ ವ್ಯಕ್ತಿ ಆಗಬೇಕು ಅನ್ನಿಸಿತು ಈ ಕಥಾ ನಾಯಕ ತನ್ನ ಅಮ್ಮನಿಗೆ ೩ ದಿನ ಮುಂಚೆಯೇ ಉಡುಗೊರೆ ಕಳಿಸುತ್ತಾನೆ . ಸಾಮಾನ್ಯವಾಗಿ ಕೊರಿಯರ್ ಗಳು ಒಂದೇ ದಿನದಲ್ಲಿ ನಾವು ಕಳಿಸುವ ಸ್ಥಳಕ್ಕೆ ಹೋಗಿಬಿಡುತ್ತವೆ . ಹೀಗೆ ಮಾಡಿದರೆ ನನ್ನ ಕಥೆ ಮುಂದಕ್ಕೆ ಹೋಗುತ್ತಿರಲಿಲ್ಲ . ಹಾಗಾಗಿ ನಾವು ಇವತ್ತು ಕಳಿಸಿದ ಕೊರಿಯರ್ ೩ ದಿನಕ್ಕೆ ತಲುಪುವ ಸ್ಥಳ ಯಾವುದು ಎಂದು ವಿಚಾರಣೆ ಮಾಡಿದೆ .ಸಿರಸಿಯಲ್ಲಿ ಮನೆಗಳು ವಿರಳ ಆಗಿ ಇರುವುದರಿಂದ ಅಲ್ಲಿಗೆ ಮಾತ್ರ ಕೊರಿಯರ್ ತಡವಾಗಿ ಹೋಗುತ್ತದೆ ಎಂದು ತಿಳಿದುಬಂತು . ಸಿರಸಿ ಅಂದ ಮೇಲೆ ಅಲ್ಲಿ ಹೆಚ್ಚಾಗಿ ಇರುವ ಜನ ಹೆಗಡೆ ಎಂಬ ಹೆಸರಿನವರು ಅನ್ನಿಸಿತು . ಆಗ ಜೊತೆಯಾದ ಹೆಸರೇ ಪ್ರಕಾಶ್ ಹೆಗಡೆ . ಈ ಪಾತ್ರವನ್ನು ಬೆಳೆಸುವಾಗ ಅವರ ವೃತ್ತಿಯ ಬಗ್ಗೆ ೪ ಮಾತು ಬರೆದಿರುವುದು ನಾನೇ . ಆದರೆ ಅದು ಪ್ರಕಾಶ್ ಹೆಗಡೆ ಅವರ ಬದುಕಿನ ಕಥೆಯಲ್ಲ .
ಪ್ರಕಾಶ್ ಹೆಗಡೆಯವರ ಚಿತ್ರವನ್ನು ಲೇಖನದ ಜೊತೆಯಲ್ಲಿ ಅವಧಿಯಲ್ಲಿ ಹಾಕಿರುವುದರಿಂದ ಹಲವರಿಗೆ ಅನುಮಾನ ಬಂದಿರಬಹುದು . ಹಾಗಾಗಿ ಮತ್ತೊಮ್ಮೆ ಹೇಳುತ್ತಿದ್ದೇನೆ: ಅವಧಿಯಲ್ಲಿ ಬಂದಿರುವ ಕಥೆ ಕಾಲ್ಪನಿಕ . ಇಂಟರ್ನೆಟ್ ನ ಒಂದು ಎಳೆ ಇಟ್ಟುಕೊಂಡು ಅದಕ್ಕೆ ಪ್ರಾದೇಶಿಕ ಚೌಕಟ್ಟು ಹಾಕಿ ಬೆಳೆಸಿದ ಕಥೆ ಅದು. ಅದು ತಿಂಗಳ ಹಿಂದೆಯೇ ಕನ್ನಡ ಪ್ರಭದಲ್ಲಿ ಪ್ರಕಟವಾಗಿದೆ . ಅದನ್ನು ಯುಗಾದಿಯ ದಿನ ಅವಧಿಯಲ್ಲಿ ಹಾಕುತ್ತಾರೆ ಎಂದಾಗಲಿ, ಅದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ಬರುತ್ತವೆ ಎಂದಾಗಲಿ ನನಗೆ ಗೊತ್ತಿರಲಿಲ್ಲ . ಉಗಾದಿಯ ನೆಪದಲ್ಲಿ ೧೦ ನೆ ತಾರೀಖಿಂದ ೧೪ ರವರೆಗೂ ಊರಲ್ಲಿದ್ದ ಕಾರಣ ನನಗೆ ಈ ರಗಳೆಯ ಯಾವ ವಿವರವೂ ಗೊತ್ತಾಗಲಿಲ್ಲ .
ಇನ್ನು ಪ್ರಕಾಶ್ ಹೆಗಡೆ ಅವರ ಬಗ್ಗೆ ಹೇಳುವುದಾದರೆ, ಪ್ರಕಾಶಣ್ಣ ನನ್ನ ಪಾಲಿಗೆ ನಮ್ಮ ಮನೆಯ ಹಿರಿಯರು . ಅವರು ಅಮ್ಮನನ್ನು ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ . ಪ್ರೀತಿಸುತ್ತಾರೆ . ಬಹುಶ ಅಮ್ಮನಿಗಿಂತ ಮಿಗಿಲಾದ ವಸ್ತು ಅವರ ಪಾಲಿಗೆ ಬೇರೆ ಯಾವುದೂ ಇಲ್ಲ .
ಇದೇನೂ ಗೊತ್ತಿಲ್ಲದೇ ಪರಸ್ಪರ ಬೆನ್ನು ಕೆರೆದುಕೊಂಡರು ಎಂಬಂಥ ಮಾತುಗಳನ್ನು ಮೊದಲು ಬರೆದು, ನಂತರ ಸುಮ್ಮನೆ ತಮಾಷೆಗೆ ಹಾಗೆ ಬರೆದೆ ಎಂದಿರುವ ಸತ್ಯನಾರಾಯಣ ಸರ್ ಅವರ ಮಾತುಗಳ ಬಗ್ಗೆ ನನ್ನ ಆಕ್ಷೇಪವಿದೆ. ಬೇಸರವೂ ಇದೆ..
ಈ ವಿನಾಕಾರಣದ ಚರ್ಚೆ ಇಲ್ಲಿಗೇ ನಿಲ್ಲಲಿ. .ಗೆಳೆಯರಿಗೆ ಒಳಿತು ಮಾಡುವ ಕೆಲಸಗಳಿಗೆ ಚಾಲನೆ ದೊರೆಯಲಿ ಎಂಬುದಷ್ಟೇ ಈ ಕ್ಷಣದ ಪ್ರಾರ್ಥನೆ . .
ಗೆಳೆಯರಿಗೆ ಒಳಿತು ಮಾಡುವ ಕೆಲಸಗಳಿಗೆ ಚಾಲನೆ ದೊರೆಯಲಿ ಎಂಬುದಷ್ಟೇ ಈ ಕ್ಷಣದ ಪ್ರಾರ್ಥನೆ . .
tumbaa arthapurnavaada hrudaya muttuvantaha maatu
ಪ್ರಿಯ ಮಣಿಕಾಂತ್
ವಿನಾಕಾರಣ ಚರ್ಚೆ ಇಲ್ಲಿಗೆ ನಿಲ್ಲಲಿ ಎಂಬ ಮಾತಿಗೆ ನನ್ನ ಒಪ್ಪಿಗೆಯಿದೆ. ಆದರೆ ವಿನಾಕಾರಣ ಚರ್ಚೆ ಯಾವುದು? ತತ್‍ತಕ್ಷಣದ ಪ್ರತಿಕ್ರಿಯೆ ನೀಡುವಾಗ ಹಾಕಿದ ಒಂದು ಪದ (ಕೆರೆದುಕೊಂಡರು – ಈ ಪದದಿಂದ ನಿಮಗೆ ವೈಯಕ್ತಿಕವಾಗಿ ನೋವಾಗಿದ್ದರೆ ಕ್ಷೆಮೆಯಿರಲಿ)ಎಂಬ ಒಂದು ಪದದ ಸುತ್ತಲೂ ನಡೆಯುತ್ತಿರುವ ಚರ್ಚೆಯೊ? ಅಥವಾ ಸಾಹಿತ್ಯದ ವಸ್ತು, ವಿಷಯ, ಸ್ವೀಕರಣ, ಋಣಭಾರ, ಇವುಗಳ ಸುತ್ತಲೂ ನಡೆಯುತ್ತಿರುವ ಚರ್ಚೆಯೊ? ನೀವೊಬ್ಬ ಕೇವಲ ರಂಜನೆಗೆ ಬರೆಯುವ ಬ್ಲಾಗ್ ಬರಹಗಾರರಾಗಿದ್ದರೆ ನಾನು ಈ ಪ್ರಶ್ನೆಯನ್ನು ಎತ್ತುತ್ತಲೇ ಇರಲಿಲ್ಲ. ನೀವೊಬ್ಬ ಗಂಭೀರ ಬರಹಗಾರ ಹಾಗೂ ಜವಾಬ್ದಾರಿಯಿರುವ ಪತ್ರಕರ್ತ ಎಂಬ ಕಾರಣದಿಂದ ಹಾಗೂ ನಿಮ್ಮ ಮೇಲಿರುವ ಪ್ರೀತಿಯಿಂದ ಪ್ರಶ್ನೆ ಎತ್ತಿದ್ದೇನೆ. ನನ್ನ ಕಾಳಜಿ ನಿಮಗೆ ಅರ್ಥವಾಗಿರುತ್ತದೆ ಎಂದುಕೊಂಡಿದ್ದೇನೆ.
ಇನ್ನು ಚರ್ಚೆಯನ್ನು ಮಾಡಲೇ ಬೇಕೆಂಬ ಉಮೇದು ನನಗೂ ಖಂಡಿತಾ ಇಲ್ಲ. ನಿಮ್ಮ ಮೇಲಿನ ಪ್ರೀತಿಯಿಂದಲೇ ಈ ಚರ್ಚೆಯನ್ನು ಇಲ್ಲಿಗೇ ನಿಲ್ಲಿಸುತ್ತಿದ್ದೇನೆ.
ವಂದನೆಗಳು.