
-ಎ ಆರ್ ಮಣಿಕಾಂತ್
ಚಿತ್ರ: ಹೊಸಬೆಳಕು.
ಗೀತೆರಚನೆ: ಚಿ. ಉದಯಶಂಕರ್.
ಸಂಗೀತ: ಎಂ. ರಂಗರಾವ್.
ಗಾಯನ: ಡಾ. ರಾಜ್ ಕುಮಾರ್ .
ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನಾ ಹೂವೆ ಈ ಶೋಕವೇಕೆ ||ಪ||
ವಿಧಿಯಾಟವನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ಬರುವುದು ಬರಲೆಂದು ನಗುನಗುತ ಬಾಳದೆ
ನಿರಾಸೆ ವಿಷಾದ ಇದೇಕೆ ಇದೇಕೆ ||1||
ಬಾಳೆಲ್ಲಾ ನನಗೆ ಇರುಳಾದರೇನು?
ಜತೆಯಾಗಿ ಎಂದೆಂದೂ ನೀನಿಲ್ಲವೇನು
ನಾ ನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಿನ್ನಲ್ಲಿ ನೋವು ಇದೇಕೆ ಇದೇಕೆ ||2||
ಗಜಲ್ ಎಂದಾಕ್ಷಣ ಎಲ್ಲರಿಗೂ ನೆನಪಾಗುವಾತ ಮೆಹದಿ ಹಸನ್. ರಾಜಸ್ಥಾನದ ಪುಟ್ಟ ಹಳ್ಳಿಯಲ್ಲಿ ಜನಿಸಿದ ಹಸನ್ ಅವರ ಕುಟುಂಬ, ನಂತರ ಪಾಕಿಸ್ತಾನಕ್ಕೆ ವಲಸೆ ಹೋಯಿತು. ಗಜಲ್ ಗಾಯನದಲ್ಲಿ ಗೌರಿಶಂಕರದಷ್ಟು ಖ್ಯಾತಿ ಪಡೆದಿರುವ ಮೆಹದಿ ಹಸನ್, ಸರಿಸಾಟಿಯಿಲ್ಲದ ಹಾಡುಗಾರ ಎನಿಸಿಕೊಂಡವರು. ಈ ಕಾರಣಕ್ಕೇ ಅವರಿಗೆ ಗಜಲ್ ಕ್ಷೇತ್ರದ ಷೆಹೆನ್ಶಾ ಎಂಬ ಬಿರುದು ಸಂದಿತು. ಹಸನ್ ಅವರ ಕಟ್ಟಾ ಅಭಿಮಾನಿಗಳ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಇದ್ದಾರೆ. 1978ರಲ್ಲಿ, ವಾಜಪೇಯಿ ಅವರ ನಿವಾಸದಲ್ಲಿ ಹಸನ್ ಅವರ ಗಾಯನ ಕಛೇರಿ ಕೂಡ ನಡೆದಿತ್ತು. ಹಸನ್ ಅವರು `ಮೊಹಬ್ಬತ್ ಕರ್ನೇವಾಲೆ ಕಮ್ ನಾ ಹೋಂಗೆ, ತೇರಿ ಮೆಹಫಿಲ್ ಮೆ ಲೇಕಿನ್ ಹಮ್ ನಾ ಹೋಂಗೆ’ ಎಂದು ಹಾಡಲು ಶುರುಮಾಡಿದರೆ, ಕೂತಲ್ಲೇ ಕಣ್ಣೀರಾಗುತ್ತಿದ್ದವರಿಗೆ ಲೆಕ್ಕವಿಲ್ಲ. `ಜಿಂದಗಿ ಮೆ ತೋ ಸಭೀ ಪ್ಯಾರ್ ಕಿಯಾ ಕರ್ತೆ ಹೈ, ಮೈ ತೋ ಮರ್ ಭಿ ಮೇರಿಜಾನ್ ತುಝೆ ಚಾಹೂಂಗಾ…’ ಎಂಬ ಹಾಡಿಗೆ ಹಸನ್ ಹೊರಳಿಕೊಂಡರಂತೂ ಕೇಳುಗರು ಬಿಕ್ಕಳಿಸಿ ಅಳಲು ಶುರುಮಾಡಿಬಿಡುತ್ತಿದ್ದರು.
ಇದೇನಿದು ವಿಚಿತ್ರ? ಹಾಡು ಹುಟ್ಟಿದ ಸಮಯದ ಬಗ್ಗೆ ಹೇಳಲು ಹೊರಟು ಮೆಹದಿ ಹಸನ್ ಪುರಾಣ ಶುರುಮಾಡಿದ್ದಾದರೂ ಏಕೆ ಎಂಬ ಅನುಮಾನ ಈ ವೇಳೆಗೆ ಹಲವರನ್ನು ಕಾಡಿರಬಹುದು. ಹೋಲ್ಡಾನ್, ಹೋಲ್ಡಾನ್… ಮೆಹದಿ ಹಸನ್ ಅವರ ಗಜಲ್ ಗಳು ವರನಟ ರಾಜ್ ಕುಮಾರ್ ಅವರಿಗೂ ತುಂಬ ಪ್ರಿಯವಾಗಿದ್ದವು. `ಹೊಸಬೆಳಕು’ ಚಿತ್ರದ ಸೂಪರ್ ಹಿಟ್ ಗೀತೆ `ಕಣ್ಣೀರ ಧಾರೆ ಇದೇಕೆ ಇದೇಕೆ…’ಗೆ ಮೆಹದಿ ಹಸನ್ ರ ಗಜಲ್ ಗಳು ಪರೋಕ್ಷವಾಗಿ ಸ್ಫೂರ್ತಿ ನೀಡಿದವು ಎಂದು ಹೇಳಬೇಕಾಗಿ ಬಂದಿದ್ದರಿಂದ, ಅವರ ಬಗ್ಗೆ ಸ್ವಲ್ಪ ವಿವರವಾಗಿ ಬರೆಯಬೇಕಾಯಿತು.
ಅಂದಹಾಗೆ, `ಕಣ್ಣೀರ ಧಾರೆ…’ ಹಾಡಿನ ಹಿಂದೆ ಮೆಹದಿ ಹಸನ್ ಅವರ ಗಾಯನದ ಸ್ಫೂರ್ತಿಯಿದೆ ಎಂಬ ಅಮೂಲ್ಯ ಮಾಹಿತಿ ನೀಡಿದವರು `ಹೊಸ ಬೆಳಕು’ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾದ ಭಗವಾನ್. ಈ ಸಂಬಂಧದ ವಿವರಣೆಯನ್ನು ಭಗವಾನ್ ಅವರ ಮಾತುಗಳಲ್ಲಿಯೇ ಕೇಳಿದರೆ ಚೆಂದ. ಓವರ್ ಟು ಭಗವಾನ್:
`ಮೆಹದಿ ಹಸನ್ ಅವರ ಗಜಲ್ ಎಂದರೆ ಡಾ. ರಾಜ್ ಕುಮಾರ್ ಅವರಿಗೆ ಪಂಚಪ್ರಾಣ. ಹಸನ್ ಹಾಡಿದ ಗಜಲ್ಗಳ 50ಕ್ಕೂ ಹೆಚ್ಚು ಕ್ಯಾಸೆಟ್ ಗಳು ಡಾ. ರಾಜ್ ಅವರ ಬಳಿ ಇದ್ದವು. ಪ್ರಯಾಣದ ಸಂದರ್ಭ ಕಾರಿನಲ್ಲಿ ; ಶೂಟಿಂಗ್ ನಡುವಿನ ವಿರಾಮದ ವೇಳೆಯಲ್ಲಿ ಈ ಗಜಲ್ಗಳನ್ನು ಕೇಳುತ್ತ ರಾಜ್ ಮೈಮರೆಯುತ್ತಿದ್ದರು. ಸ್ವಾರಸ್ಯವೆಂದರೆ, ಡಾ. ರಾಜ್ ಅವರಿಗೆ ಹಿಂದಿಯಾಗಲಿ, ಉರ್ದುವಾಗಲೀ ಸಂಪೂರ್ಣವಾಗಿ ಗೊತ್ತಿರಲಿಲ್ಲ. ಆದರೂ ಮೆಹದಿ ಹಸನ್ ಅವರ ಗಜಲ್ಗಳು ಅವರ ಮನಸ್ಸಿಗೆ, ಹೃದಯದ ಭಾಷೆಗೆ ಅರ್ಥವಾಗುತ್ತಿದ್ದವು. ಗಜಲ್ಗಳನ್ನು ಕೇಳುತ್ತ ಕೇಳುತ್ತ ಭಾವಪರವಶರಾಗುತ್ತಿದ್ದ ರಾಜ್ಕುಮಾರ್- `ಈ ಹಾಡಿನಲ್ಲಿರುವ ಯಾವುದೋ ಆಪ್ತ ಭಾವ ನನ್ನನ್ನು ತುಂಬಾ ಕಾಡ್ತಾ ಇದೆ. ಈ ಹಾಡಿನಲ್ಲಿರೋದು ಹೃದಯದ ಭಾಷೆ. ಹಸನ್ ಸಾಹೇಬರು ಕೇವಲ ನನಗೋಸ್ಕರ ಅಂತಾನೇ ಈ ಹಾಡುಗಳನ್ನು ಹಾಡಿದರೇನೋ ಅನಿಸುತ್ತೆ. ಅವರ ಕೆಲವೊಂದು ಹಾಡುಗಳನ್ನು ಕೇಳ್ತಾ ಇದ್ರೆ ಯಾಕೋ ಖುಷಿಯಾಗುತ್ತೆ. ಯಾಕೋ ಕಣ್ತುಂಬಿ ಬರುತ್ತೆ’ ಅನ್ನುತ್ತಿದ್ದರಂತೆ.
ಮುಂದೆ ‘ಹೊಸಬೆಳಕು’ ಚಿತ್ರದ ಚಿತ್ರಕಥೆ-ಸಂಭಾಷಣೆಯ ಚರ್ಚೆ ಶುರುವಾದಾಗ ಕೂಡ, ಬಿಡುವಿನ ವೇಳೆಯಲ್ಲಿ ಮೆಹದಿ ಹಸನ್ ರ ಗಜಲ್ಗಳನ್ನು ಕೇಳಿದ ರಾಜ್ ಕುಮಾರ್ ಮತ್ತೆ ಭಾವುಕರಾಗಿ ಮಾತಾಡಿದರಂತೆ. ಜತೆಗಿದ್ದ ಚಿ. ಉದಯಶಂಕರ್ ತಕ್ಷಣವೇ- `ನೀವು ತುಂಬಾ ಸೆಂಟಿಮೆಂಟಲ್ ಆಗಿಬಿಟ್ರಿ’ ಎಂದರಂತೆ. ಆಗ ರಾಜ್- `ಹಾಗಲ್ಲ ಉದಯಶಂಕರ್ ಅವರೇ, ಹಸನ್ ಸಾಹೇಬರ ಹಾಡುಗಳ ಮೋಡಿ ಹಾಗಿದೆ. ಅವರು ವಿಷಾದ ಗೀತೆ ಹಾಡುವುದನ್ನು ಕೇಳಿದ್ರೆ, ಹಾಡಿನ ಭಾವಾರ್ಥ ತಿಳಿಯದಿದ್ರೂ ಕಣ್ಣೀರು ಬರುತ್ತೆ. ನಮ್ಮ ಹೊಸ ಸಿನಿಮಾದಲ್ಲೂ ಅಂಥದೇ ಒಂದು ಹಾಡು ಹಾಕೋಣ. ನೀವೇ ಬರೆದು ಕೊಡಿ. ಚಿತ್ರದಲ್ಲಿ ನಾಯಕ ಕುರುಡ ಆಗಿರ್ತಾನಲ್ಲ? ಅವನ ಅವಸ್ಥೆಯನ್ನು ಕಂಡು ನಾಯಕಿ ಮೌನವಾಗಿ ಅಳುವ ಸೀನ್ ಇದೆಯಲ್ಲ? ಆ ಜಾಗಕ್ಕೆ ಈ ಶೋಕಗೀತೆ ಹಾಕುವಾ. ಹಾಡಿಗೆ ಅದು ಒಳ್ಳೇ ಜಾಗ’ ಎಂದರಂತೆ. ಅಲ್ಲಯೇ ಇದ್ದ ವರದಪ್ಪನವರು ಕೂಡ-`ಹೌದು ಸಾರ್, ವಿಷಾದಗೀತೆಗೆ ಆ ಜಾಗ ಚೆನ್ನಾಗಿದೆ. ಅದು ಶೋಕಗೀತೆಯಂತಿರಲಿ; ಜತೆಗೆ ನೊಂದವರಿಗೆ ಸಮಾಧಾನ ಹೇಳುವ ಧಾಟಿಯಲ್ಲೂ ಇದ್ರೆ ಇನ್ನೂ ಚೆನ್ನಾಗಿರುತ್ತೆ’ ಎಂದರಂತೆ.
ಹೀಗೇ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಸರ್ವಜ್ಞನ ವಚನಗಳ ಪ್ರಸ್ತಾಪ ಬಂತು. ಆ ತಕ್ಷಣವೇ ಒಂದೆರಡನ್ನು ನೆನಪಿಸಿಕೊಂಡು ಭಾವಪೂರ್ಣವಾಗಿ ಹಾಡಿ ತೋರಿಸಿದ ರಾಜ್ ಕುಮಾರ್, ನಂತರ `ಹಾಡು ಸರ್ವಜ್ಞನ ಪದಗಳಂತೆ ಸರಳವಾಗಿರಬೇಕು. ಹಾಗಿದ್ರೇನೇ ಅದು ಬೇಗ ಮನಸ್ಸು ತಟ್ಟುತ್ತೆ’ ಅಂದರಂತೆ.
* * *
ಈಗ `ಹೊಸ ಬೆಳಕು’ ಚಿತ್ರದಲ್ಲಿ `ಕಣ್ಣೀರ ಧಾರೆ ಇದೇಕೆ ಇದೇಕೆ…’ ಹಾಡು ಬರುವ ದೃಶ್ಯವನ್ನು ನೆನಪು ಮಾಡಿಕೊಳ್ಳಿ: ಅದೊಂದು ಸಂಸಾರ. ಹಿರಿಯ ಹೆಂಡತಿ, ಮಗಳನ್ನು ಬಿಟ್ಟು ತೀರಿಕೊಂಡಿರುತ್ತಾಳೆ. ಎರಡನೇ ಹೆಂಡತಿ- ಘಟವಾಣಿ. ಆಕೆಗೊಬ್ಬಳು ಮಗಳು, ಒಬ್ಬ ಮಗ. ಕಥಾನಾಯಕ, ಎರಡನೇ ಹೆಂಡತಿಯ ತಮ್ಮ. ತನ್ನ ಮಗಳನ್ನು ತಮ್ಮನಿಗೇ ಕೊಡಬೇಕೆಂದು ಅಕ್ಕನ ಆಸೆಯಾಗಿರುತ್ತದೆ. ಕಥಾನಾಯಕನಾದರೋ- ಅನಾಥೆಯಂತಿದ್ದ; ಮನೆಯಲ್ಲಿ ತುಂಬ ಕಿರಿಕಿರಿಗೆ ಒಳಗಾಗುತ್ತಿದ್ದ ನಾಯಕಿಯನ್ನು ಇಷ್ಟಪಟ್ಟಿರುತ್ತಾನೆ. ಈ ಮಧ್ಯೆ ಅಕ್ಕನ ಮಗಳೊಂದಿಗೇ ಮದುವೆ ಎಂದು ನಿಶ್ಚಯವಾದ ನಂತರ ಆಕಸ್ಮಿಕ ಅಪಘಾತದಲ್ಲಿ ನಾಯಕ ಕಣ್ಣು ಕಳೆದುಕೊಳ್ಳುತ್ತಾನೆ.
ಒಂದು ಸಂದರ್ಭದಲ್ಲಿ, ಕುರುಡನಾದ ನಾಯಕ ಮತ್ತು ಕಥಾನಾಯಕಿ ಇಬ್ಬರೇ ಮನೇಲಿರ್ತಾರೆ. ಆಗ ಈತ-`ಕತ್ತಲೆ ಆಗಿರೋ ಹಾಗಿದೆ ಯಾರಾದ್ರೂ ಲೈಟ್ ಹಾಕಬಾರದೆ?’ ಅನ್ನುತ್ತಾನೆ. ನಾಯಕಿ(ಸರಿತಾ) ಬಂದು ಲೈಟ್ ಹಾಕಿ, ಇವನನ್ನು ಕೈಹಿಡಿದು ಕರೆತಂದು ಚೇರ್ ಮೇಲೆ ಕೂರಿಸುತ್ತಾಳೆ. ಆಗ ನಾಯಕ- `ಅಯ್ಯೋ, ನನ್ನ ಬಾಳೇ ಕತ್ತಲಲ್ಲಿ ಮುಳುಗಿರುವಾಗ ಇನ್ನೆಲ್ಲಿ ಬೆಳಕು ಸಾಧ್ಯ?’ ಅನ್ನುತ್ತಾನೆ. ಈ ಮಾತು ಕೇಳಿದ ಅವನ ಪರಿಸ್ಥಿತಿ ಹಾಗೂ ತನ್ನ ಹೀನಾಯ ಬದುಕು ನೆನೆದು ಕಥಾನಾಯಕಿ ಬಿಕ್ಕಳಿಸಿ ಅಳುತ್ತಾಳೆ.
ಆಗ ಅವಳನ್ನು ಸಮಾಧಾನಪಡಿಸುವುದರ ಜತೆಗೆ, ವಿಧಿ ಏನಿದೆಯೋ ಬಲ್ಲವರು ಯಾರು ಅನ್ನುತ್ತಾ ಹಾಡುತ್ತಾನೆ ನಾಯಕ. ಆ ನೆಪದಲ್ಲಿ ಶುರುವಾಗುತ್ತದೆ ಈ ಅಮರ ಗೀತೆ: `ಕಣ್ಣೀರ ಧಾರೆ, ಇದೇಕೆ ಇದೇಕೆ…’
ಹಾಡಿನಲ್ಲಿ ಸರ್ವಜ್ಞನ ವಚನದ ಸರಳತೆ ಹಾಗೂ ಮೆಹದಿ ಹಸನ್ ಹಾಡಿನ ಭಾವತೀವ್ರತೆ ಇರಬೇಕು ಎಂದು ರಾಜ್ ಕುಮಾರ್ ಹೇಳಿದ್ದರಲ್ಲ? ಅದನ್ನೇ ನೆನಪು ಮಾಡಿಕೊಂಡು ಮದ್ರಾಸಿನ ಸ್ವಾಗತ್ ಹೋಟೆಲಿನಲ್ಲಿ ಗೀತೆರಚನೆಗೆ ಕುಳಿತ ಚಿ. ಉದಯಶಂಕರ್, ಇಡೀ ಪಾತ್ರವನ್ನೇ ಆವಾಹಿಸಿಕೊಂಡವರಂತೆ, ನಂತರದ ಹತ್ತೇ ನಿಮಿಷಗಳಲ್ಲಿ ಹಾಡು ಬರೆದು ಭಗವಾನ್ ಅವರಿಗೆ ತೋರಿಸಿದರಂತೆ. ಅದನ್ನು ನೋಡಿಯೇ ಭಾವುಕರಾದ ಭಗವಾನ್- `ಕಥೆಗೆ, ಸನ್ನಿವೇಶಕ್ಕೆ ಈ ಹಾಡು ಅಚ್ಚುಕಟ್ಟಾಗಿ ಹೊಂದಿಕೊಳ್ಳುತ್ತೆ’ ಎಂದವರೇ, ಬೆಂಗಳೂರಿಗೆ ಬಂದು ಡಾ. ರಾಜ್ ಅವರಿಗೆ ಆ ಹಾಡನ್ನು ತೋರಿಸಿದರಂತೆ.
ಅವತ್ತಿಂದ, ಹಾಡುಗಳ ಧ್ವನಿಮುದ್ರಣ ನಡೆವವರೆಗೂ ರಾಜ್ ಕುಮಾರ್ ಈ ಹಾಡನ್ನು ಅವಾಗಾವಾಗ ಭಾವಪರವಶರಾಗಿ ಹಾಡುತ್ತಾ ತಮ್ಮಷ್ಟಕ್ಕೆ ತಾವೇ ಕಂಬನಿ ಮಿಡಿಯುತ್ತಿದ್ದರು. ಈ ಕಡೆ ಹಾಡು ಕೇಳುವವರ ಕಂಗಳೂ ಒದ್ದೆ ಒದ್ದೆ. ಆಮೇಲೆ, ಕೆನ್ನೆಯಲ್ಲಿ ಕಂಬನಿ ಇನ್ನೂ ಇದ್ದಾಗಲೇ ಹೊಸ ಆಟಿಕೆ ಹಿಡಿದು ನಗುವ ಮಗುವಿನಂತೆ ನಗುತ್ತ, ಎಲ್ಲರನ್ನೂ ಸುಮ್ಮನೆ ನೋಡುತ್ತ- `ಬಡ್ಡೀಮಗಂದು… ಮನಸ್ಸು ನೋಡಿ, ಒಳ್ಳೇ ಭಾವಪೂರ್ಣ ಸನ್ನಿವೇಶಗಳಲ್ಲಿ ನುಗ್ಗಿಯೇ ಬಿಡುತ್ತೆ’ ಅನ್ನುತ್ತಿದ್ದರಂತೆ ರಾಜ್ ಕುಮಾರ್.
ಈ ಹಾಡಿನ ರೆಕಾರ್ಡಿಂಗ್ ಸಂದರ್ಭದ ಕಥೆ ಕೇಳಿ: `ಹೊಸಬೆಳಕು’ ಚಿತ್ರದ ಸಂಗೀತ ನಿರ್ದೇಶಕರು ಎಂ. ರಂಗರಾವ್.ಶೋಕಗೀತೆಗೆ ಹೇಳಿಮಾಡಿಸಿದಂತಿದ್ದ `ಲಲಿತ್ ರಾಗ’ವನ್ನು ಅವರು ಈ ಹಾಡಿಗೆ ಅಳವಡಿಸಿದ್ದರು. ಆ ರಾಗದಲ್ಲಿ ಹಾಡುವುದು ತುಂಬಾ ಕಷ್ಟ. ಅದು ರಾಜ್ ಕುಮಾರ್ ಅವರಿಗೂ ಗೊತ್ತಿತ್ತು. ಆದರೆ, ಹಾಡು, ಕಥೆಯ ಸಂದರ್ಭದೊಳಗೆ `ಇಳಿದುಹೋಗಿದ್ದ’ ರಾಜ್, ಆ ಕ್ಷಣಕ್ಕೆ ಜಗತ್ತನ್ನೇ ಮರೆತು ಪಾತ್ರವೇ ತಾವಾಗಿ ಹಾಡಿಬಿಟ್ಟರು. ಪರಿಣಾಮ, ಒಂದೊಂದು ಪದವೂ ಹೃದಯದಿಂದ ಬಂತು. ಒಂದೊಂದು ಸ್ವರ-ಲಯದ ಏರಿಳಿತವೂ ಗಂಧರ್ವ ಗಾಯನಕ್ಕೆ ಸಾಕ್ಷಿಯಾಯಿತು. ರಾಜ್ ಕುಮಾರ್ ಅವರು ಹಾಡಿ ಮುಗಿಸುವ ವೇಳೆಗೆ ವರದಪ್ಪ ನಿಂತಲ್ಲೇ ಕಂಬನಿ ಮಿಡಿಯುತ್ತಿದ್ದರಂತೆ. ಎಂ. ರಂಗರಾವ್ ಅವರಂತೂ ಧಾವಿಸಿ ಬಂದು, ಡಾ. ರಾಜ್ ಅವರನ್ನು ಅಪ್ಪಿಕೊಂಡು- `ಎಷ್ಟು ಚೆನ್ನಾಗಿ ಹಾಡಿದ್ಯೋ ನನ್ನಪ್ಪಾ’ ಅನ್ನುತ್ತಲೇ ಸಂತೋಷದಿಂದ ಬಿಕ್ಕಳಿಸಿ ಅಳಲು ಶುರುಮಾಡಿಬಿಟ್ಟರಂತೆ.
ಇದನ್ನೆಲ್ಲ ಸಂಭ್ರಮದಿಂದ ನೆನಪು ಮಾಡಿಕೊಳ್ಳುವ ಭಗವಾನ್ ಹೇಳುತ್ತಾರೆ: ಆ ಹಾಡಿನ ವಿಷಯಕ್ಕೆ ಬಂದರೆ ಡಾ. ರಾಜ್ ಕುಮಾರ್, ಚಿ. ಉದಯಶಂಕರ್, ಎಂ. ರಂಗರಾವ್, ಮೆಹದಿ ಹಸನ್… ಹೀಗೆ ಎಲ್ಲರೂ ಜೀನಿಯಸ್ಗಳೇ. ಆ ಹಾಡಿಗೆ ಒಬ್ಬರು ಸ್ಫೂರ್ತಿಯಾದವರು, ಒಬ್ಬರು ಅಕ್ಷರ ರೂಪ ಕೊಟ್ಟರು. ಒಬ್ಬರು ರಾಗದ ಕುಲಾವಿ ತೊಡಿಸಿದರು. ನಮ್ಮ ರಾಜಣ್ಣ, ಆ ಹಾಡನ್ನು ದೇವತೆಗಳೂ ಮೆಚ್ಚುವಂತೆ ಹಾಡಿಬಿಟ್ಟರು. ಅಂಥವರೊಂದಿಗೆ ಕೆಲಸ ಮಾಡಿದೆ ಎಂಬ ಹೆಮ್ಮೆ ನನ್ನದು…
ಅದಕ್ಕೇ ಹೇಳಿದ್ದು: ಕಾಡುವ ಹಾಡುಗಳಿಗೆ ಸುಮ್ಮನೇ ಕನ್ನಡಿ ಹಿಡಿದರೆ ಒಂದು ಚಂದದ ಕಥೆ ಸಿಗುತ್ತೆ; ಈ ಥರದ್ದೇ…
ಮಣಿಕಾಂತ್ ಕೇಳುತ್ತಾರೆ: ಕಣ್ಣೀರ ಧಾರೆ ಇದೇಕೆ ಇದೇಕೆ?
ನಿಮಗೆ ಇವೂ ಇಷ್ಟವಾಗಬಹುದು…





ಭಾವಕ್ಕೆ ಭಾಷೆಯ ಎಲ್ಲೆ ಎಲ್ಲಿದೆ…?
ಮೆಹೆಂದಿಯವರಿಂದ ಸ್ಪೂರ್ತಿ ಪಡೆದು…
“ಕಣ್ಣೀರ ಧಾರೆ…”
ರಚಿತವಾದ ಹಾಡು ರಾಜಕುಮಾರ್ ಹಾಡಿದ ಅತ್ಯುತ್ತಮ ಹಡುಗಳಲ್ಲಿ ಒಂದು….
ಅದನ್ನು ಕೇಳಿದಾಗ ವಿಷಾದದ ಛಾಯೆ ಮನಸ್ಸೆಲ್ಲ ಆವರಿಸಿ ಬಿಡುತ್ತದೆ….
ಕುತೂಹಲಕಾರಿ ಮಾಹಿತಿಗಾಗಿ ಮಣಿಕಾಂತರಿಗೆ ವಂದನೆಗಳು..
ಈ ಹಾಡು ಕೇಳಿ-
ಜೋಗಿಯವರೆ….
ರಾಜುಕಕುಮಾರ ಹಾಡಿದ ಹಾಡು
ಮೆಹಂದಿಯವರಿಂದ….
“ಸ್ಪೂರ್ತಿ”
ಅಂತ ಅನಿಸುವದಿಲ್ಲ…
very nice Write up..
by the time i finished, i had powerful sensations in my body
too touching.
ಕಾಕತಾಳಿಯವೋ ಏನೋ, ನಾನು ಊನ್ ೮ರಂದು ಈ ಹಾಡಿನ ಬಗ್ಗೆ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ. ಈ ಹಾಡಿನ ಮೂಲ ಮೆಹೆಂದಿ ಹಸನ್ ಅಲ್ಲ, ಜಗಜೀತ್ ಸಿಂಗ್. http://kannada-nudi.blogspot.com/2009/06/blog-post_08.html
comment maadida ellarigooo dhanyavaada.
m.ranga rao avaru music kadiyalilla antha naanu kooda nambiddene.ee haadina bagge bareyuva munna maahiti ge anta Hosabelaku CHITRADA NIRDESHAKARALLI OBBARAADA BHAGAVAN AVARANNU SAMPARKISIDAAGA MEHDI HASAN AVARA VISHAYA gottaaytu.
bhagavan avare helida nantara nambadiralu manussu baralilla.irali…ee haadina hinde jagajit singh kooda iddare emba maatannu…Haadu huttida samaya…sankalana aadaaga serisikoltene.
comment maadida ellarigooo matte vande….