ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಡಿ ಬಿಟ್ಟು ನಡೆದಾಗಲೇ ನುಡಿ-ಕಿಡಿ ಇಮ್ಮಡಿ.

ಸೂತ್ರಧಾರ ರಾಮಯ್ಯ

ಅವಧಿಯಲ್ಲಿನ ನನ್ನ ‘ಪನ್ ‘ ಕಾಲಂಗೆ( ಡಿ. ೧ರ )ಪ್ರತಿಕ್ರಿಯಿಸುತ್ತಾ, ಕನ್ನಡದ ಜೊತೆಗೆ ಇಂಗ್ಲಿಷ್ ಶಬ್ಧಗಳನ್ನು ಬಳಸುವುದನ್ನು ಮಡೆ ಸ್ನಾನಕ್ಕೆ ಹೋಲಿಸಿ, ಇಂಗ್ಲಿಷ್ನ ಎಂಜಲು ಪದಗಳ ಮೇಲೆ ಹೊರಳಾಡುವ ಇಂತಹಾ ರೋಗ ವಾಸಿಯಾಗುವುದು ಯಾವಾಗಲೋ? ಎಂದು ದುಃಖಿಸಿ ಓದುಗರೊಬ್ಬರು ನೀಡಿರುವ ಹೇಳಿಕೆಗೆ ಉತ್ತರವಾಗಿ ನನ್ನೆರಡು ಸಾಲುಗಳ ನಿ ವೇದನೆ!

ಕನ್ನಡದ ಜೊತೆಗೆ ಇಂಗ್ಲಿಷ್ ಶಬ್ಧಗಳನ್ನು ಸ್ವಾಭಾವಿಕವೋ ಎಂಬಂತೆ ಸೇರಿಸಿ ಸಂಭಾಷಿಸುವ, ಬರೆಯುವ ಪ್ರಕ್ರಿಯೆ ನಮ್ಮಲ್ಲಿ ಲಾಗಾಯ್ತಿನಿಂದಲೂ ನಡೆದು ಬಂದಿರುವಂತದೆ. ಇಂತಹಾ ಒಂದು ರಾಗಕ್ಕೆ, ಸರಾಗಕ್ಕೆ ಬಹು ದೊಡ್ದರೀತಿಯಲ್ಲಿ ಮುನ್ನುಡಿ ಬರೆದವರು ಪ್ರಹಸನ ಪಿತಾಮಹ ಕೈಲಾಸಂ. ಬರೆದರು, ಬರೆ-ದರು, ಮೌಡ್ಯಕ್ಕೆಕೊಳ್ಳಿ ಇಟ್ಟರು! ಕನ್ನಡಕೊಬ್ಬನೇ ಅನಿಸಿಕೊಂಡರು.

ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆಯೇ ‘ಟಿ.ಪಿ.ಕಾಲ್’ ಅಂತಾ ಅವರು ಹುಟ್ಟುಹಾಕಿದ ಈ ತೆರನ ಭಾಷಾಸಂಗಮಕ್ಕ್ಕೆಕಂಗ್ಲಿಷ್ ಎಂಬ ಅಭಿಧಾನವನ್ನೇ ನೀಡಿಬಿಟ್ಟರು ಕನ್ನಡದ ಪನ್ ಡಿತರು. ಈಗಂತೂ ಎಲ್ಲೆಲ್ಲೂ ಅವನದೇ home ಊ; ಅವನದೇ rule ಊ. ಅಂತೆಯೇ, ತಮಿಳ್+ಇಂಗ್ಲಿಷ್= ತಂಗ್ಲಿಶ್, ಹಿಂದಿ+ಇಂಗ್ಲಿಷ್ = ಹಿಂಗ್ಲಿಶ್, ಹೀಗೆ ಇಂತಹಾ ಪ್ರಕ್ರಿಯೆಗೆ ಇದೀಗ ರಾಷ್ಟ್ರವೇ, ವಿಶ್ವವೇ ತೆರೆದುಕೊಂಡಿದೆ. ಅಷ್ಟ್ಯಾಕೆ, ಕೇಂದ್ರದ ಲೇ ಟೆಸ್ಟ್ ‘home rule’ ಕಡೆ ಸ್ವಲ್ಪ ನೋಡಿ; ಐ ಮೀನ್ ಗೃಹ ಖಾತೆಯ ರಾಜ್ ಭಾಷಾ ಘಟಕದ ಸುತ್ತೋಲೆ ಪ್ರಕಾರ ಇನ್ನು ಮುಂದೆ ಹಿಂದಿಯ ಸಾಮಾನ್ಯರಿಗೆ ಅರ್ಥವಾಗದ ‘ಮಿಸಿಲ್’ ಗೆ ಬದಲು ಹಿಂಗ್ಲಿಷ್ ನ ಫೈಲ್, ಕುಂಜಿ ಪಟಲ್ ಬದಲು ‘ಕೀ ಬೋರ್ಡ್’, ಪ್ರತ್ಯಾಭೂತಿ ಬದಲಿಗೆ ‘ಗಾರಂಟೀ’ ಮುಂತಾಗಿ ಇನ್ಗ್ಲಿಷ್ ಅಥವಾ ಜನಪ್ರಿಯವಾದ ಪ್ರಾದೇಶಿಕ ಪದವನ್ನು ಬಳಸುವಂತೆ ಸುತ್ತೋಲೆ ನೀಡಿದೆ.

ಇದನ್ನೆಲ್ಲಾ ಮೌಡ್ಯತೆ ಎಂದಾಗಲಿ, ಎಂಜಲಿನ ಬಳಕೆ ಎಂದಾಗಲೀ,ರೋಗ ಎಂದಾಗಲೀ ಕರೆವ ಧೈರ್ಯವಾಗದು ನನಗಂತೂ. ಅಂತೆಯೇ ಈ ಟ್ರೆಂಡ್ ಅನ್ನು ಯಾವ ‘ಅಳಲೇ’ ಕಾಯಿಯೂ ಗುಣಪಡಿಸಲಾರ. ಯಾಕಂದರೆ ಇದು (ಕಂಗ್ಲಿಷ್, ಹಿಂಗ್ಲಿಷ್) ರೋಗವಲ್ಲಾ- ಸರಾಗ. ಜಾಗತೀಕರಣದ ನಂತರವಂತೂ ಎಲ್ಲರೂ ಇರುವ ಊರು ‘ಜರೂರು’. ಚೆಕ್ ಚೆಕ್ ಅಂತಾ ಆಗಿಬಿಡಬೇಕು ಎಲ್ಲಾ. ಹಾಗಿದ್ದರೇ ಒಳ್ಳೆಯ ವರಮಾನ, ಮರ್ಯಾದೆ. ಇಲ್ಲಾ, ಗ್ಲೋಬಲ್ ‘ವಿಲೇಜ್’ನಲ್ಲಿ ಒಳ್ಳೆಯವರ ಮಾನ ಅಷ್ಟೇ!

ಏನಕೇನ ಪರ ಕಾರೇನ (ಎಲ್ಲಕಡೆಯಿಂದಲೂ ಪಡೆದು) ಸುಪ್ರಮೆಸಿ ಸಾಧಿಸಿರುವ ಇಂಗ್ಲಿಷ್ಗೆ ಅನ್ಯಭಾಷೆಗಳು ಜೋತು ಬೀಳಲೇಬೇಕು. ವ್ಯಾಪಾರ ಸಾಪಾರಕ್ಕೆಲ್ಲಾ ಇದೇ ರೂಲು. ಉಳಿದಂತೆ ಪೂರಿ ಟಾನ್ಸ್, ಐ ಮೀನ್ ಮಡಿವಂತರನ್ನು ಸಾಗ್ ಹಾಕಬಹುದಲ್ಲಾ, ಸಾಹಿತ್ಯ ಗೀಯಿತ್ಯಾ ಬರಕೊನ್ಡಿರಿ ಅಂತಾ.

ಇನ್ನು ಕೈಲಾಸಂ ಕಟ್ಟಿಕೊಟ್ಟ ಪನ್ ನೀರ ಕಟ್ಟೆ(ಮಡೆ- ಮಡು) ಸ್ನಾನ ನಮಗೆ ಆಪ್ಯಾಯಮಾನವೇ, ನಾಗರೀಕವೇ. ಅಲ್ಲಿ ಎಂಜಲಿಲ್ಲಾ – ಮೈ ಮನಗಳಿಗೆ ಮುದನೀಡುವ ಏಂಜಲ್ ಒಡನೆ ಜಳಕ ಪುಳಕ! ಸರ್ವರೋಗನಿವಾರಕ. ಕನ್ನಡದ ಜಾಯ್ ಮಾನವೇ ಹಾಗೆ. ಅದರಲ್ಲೂ ಇಂಗ್ಲಿಷ್ ಹಾಲಿಗೆ ಜೇನುಕನ್ನಡ ಬೆರತರೆ ಅದೇನು ಮುದ! ಎರಡರ ಸ್ವರ ಮಾದುರ್ಯದ (ಫೋನೆಟಿಕ್ಸ್) ‘ವರ್ಣ’ ಮಯ ‘ಮಾಲೆ’ಯ ತಾದಾತ್ಮ್ಯವೇ ಅನನ್ಯ.

ಈ ಸಮಾನರೂಪತೆಯಿಂದಾಗಿ ಕನ್ನಡ ಬಲ್ಲವ ತಿಂಗಳೊಪ್ಪತ್ತರಲ್ಲಿ ಇಂಗ್ಲಿಷ್ ಕಲಿಯಲು, ಕನ್ನಡದ ಕಲಿ ಇಂಗ್ಲಿಷ್ ಪ್ರಭ್ರುತಿಯಾಗಲು ಹೆಚ್ಚಿನ ಸಮಯ ಬೇಕಿಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದ ವಿಷಯ. ಹೀಗೆ ತುತ್ತುಕೊಟ್ಟ ಕನ್ನಡ, ಮುತ್ತುಕೊಡಲು ಬಂದು ಕನ್ನಡದ ಹುಡುಗರಿಗೆ ಅಮೇರಿಕ, ಐರೊಪ್ಯ ಚಪ್ಪನ್ನಾರು ದೇಶಗಳಲ್ಲಿ ಮುತ್ತು ತುತ್ತುಗ ಳೆರಡನ್ನೂ ನೀಡುತ್ತಿರುವ, ಸಂಪರ್ಕ ಭಾಷೆಯಾಗಿ ಹಗಲಿರುಳೂ ಹೊರನಾಡ ಕನ್ನಡಿಗರನ್ನು ಕಾಯುತ್ತಿರುವ ಇಂಗ್ಲಿಷ್ ನಮ್ಮ ಪಾಲಿನ ಏಂಜಲ್ ಅಲ್ಲದೆ ಬೇರಲ್ಲಾ, ಎಲ್ಲದಕ್ಕೂ ‘ಸುಲಿದ ಬಾಳೆಯ ಹಣ್ಣಿನಂದದ’ ಕನ್ನಡವೇ ಕಾರಣ. ಕರೇಜ್, ಕನ್ವಿಕ್ಷನ್ ಕನ್ನಡದ್ದೇ, ಎಂದು ಬಲ್ಲ ನಮ್ಮಜನ ಹೋದಲೆಲ್ಲ ಕನ್ನಡ ಕೂಟಗಳನ್ನು ಕಟ್ಟಿಕೊಂಡು ಮಾತೃಭಾಷೆಯನ್ನು ಹೊತ್ತು ಮೆರೆಯುವುದು ಅದಕ್ಕೇ- ಅಹುದಾದರಹುದೆನ್ನಿ. ಕನ್ನಡದ ಜೊತೆ ಇಂಗ್ಲಿಷ್ ಬಳಸಿದಾಕ್ಷಣ ಕನ್ನಡದ ಮೇಲಣ ಅಭಿಮಾನ ಕಡಿಮೆಯಾಗುತ್ತದೆ ಅನ್ನುವುದು ಕೇವಲ ಭ್ರಮೆ. ಅಲ್ಲದೆ ಯಾವುದೇ ಭಾಷೆ ಬಳಸುವವನ ಸೊತ್ತು. ಮಣ್ಣಿನಿಂದ ಹುಟ್ಟಿದ ಭಾಷೆ, ಪಂಡಿತ ಪಾಮರರು ಅಹರ್ನಿಶಿ ತಿಣುಕಿ ಹೆಣೆದ ಭಾಷೆ ಜೀವನದಿಯಂತೆ. ಇಂತ ದಿಕ್ಕಿಗೇ ಹರಿಯೆಂದರೆ ಬಗೆಹರಿದೀತೆ? ಎಲ್ಲವನ್ನು ಹೊತ್ತುಸಾಗುವುದೇ ಅದರ ಪಾತ್ರ. ಮೊನ್ನೆ ಬೆಂಗಳೂರಿಗೆ ಬಂದಿದ್ದ ಫ್ರ್ಯಾನ್ಸಿಸ್ ಕಾಲಿನ್ಸ್ ರ ಹತ್ತು ವರ್ಷದ ಸಂಶೋಧನೆ ಪ್ರಕಾರ ಮಾನವರ ಯಾವುದೇ ವರ್ಗದ/ಜಾತಿಯ DNA ಶೇ ೯೯.೯ ಒಂದೇ ರೀತಿಯಂತೆ. ಅಂದರೆ ಪಂಪನ ‘ಮಾನವ ಜಾತಿ ತಾನೊಂದೆ ವಲಂ’ ಅನ್ನೋದು, ಸುದೈವದಿಂದ ವಸುದೈವ ಕುಟುಂಬಕಂ ಪಟಿಸಿದ್ದು ನಿಜ ಅಂತಾದಮೇಲೆ ಮುಂದೊಂದು ದಿನ ಕನ್ನಡವನ್ನೂ ಒಳಗೊಂಡ ವಿಶ್ವ ಮಾನವ ಭಾಷೆಯೊಂದು ಮೂಡಿ ಬರಲಾರದೇಕೆ? ಎನಿವೇ ಮುಂದೆ ಏನಿವೆಯೋ ಯಾವೊನಿಗ್ಗೊತ್ತು? ಸದ್ಯ ಮುಂದಿರುವ ಏನ್ಜಲಿಕ್ ಇಂಗ್ಲಿಷ್ ಕೀ ಬೋರ್ಡ್ನನ ಎಬಿಸಿಡಿ ಮೂಲಕವೇ ಕನ್ನಡದ ಈ ವಿವರಣೆಯನ್ನು ಒತ್ತಿ ಕಳುಹಿಸಿದ ನನ್ನ ಕೈ ಬೆರಳು ಎಂಜಲು ಅಂತಾ ಯಾರಾದರೂ ಅನ್ನದಿದ್ದರೆ ಸಾಕು.

end ಗುಟುಕು

ಆ ಚಿತ್ರಕಾರ ಮದುವೆಯಾದ ಹೊಸದರಲ್ಲಿ ಹೆಂಡ್ತಿ ಅಂದರೆ ಪ್ರಾಣ ಬಿಡಿಸ್ಕೊತಿದ್ದ. ಚೆಂದುಳ್ಳಿ ಚೆಲುವೆ ಹೆಂಡತೀನ ಕೂರಿಸ್ಕೊಂಡು ಚಿತ್ರಗಳ್ನ ಬಿಡಿಸಿದ್ದೆ ಬಿಡಿಸಿದ್ದು. ಆದರೀಗ ಅದೇನಾಯ್ತೋ, ಆಕೇನೆ ಚಿತ್ರ ‘ಬಿಡಿಸು’ ಅಂತಾ ಎದುರಿಗೆ ಕೂತರೂ, ಕುಂಟುನೆಪ ಹೇಳಿ ಆಕೆಯಿಂದ ‘ಬಿಡಿಸಿ’ಕೊಂಡು ಓಡಿ ಹೋಗ್ತಾನೆ- ಇದೆಂತ ವಿಚಿತ್ರಾ!

 

‍ಲೇಖಕರು G

7 December, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading