ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮಠದೊಳಗೆ ಒಂದು ಸುತ್ತು…' – ಶಾಂತಾ ನಾಗರಾಜ್ ಬರೀತಾರೆ

ಮಠದೊಳಗೆ ಒಂದು ಸುತ್ತು

( ಬೆಳಗಿನಿಂದ ಅಪರಾಹ್ನದವರೆಗೆ ವೀಕ್ಷಕ ವಿವರಣೆ )

ಶಾಂತಾನಾಗರಾಜ್

ಸಮಸ್ತ ಭೂಮಂಡಲದೊಳಗೆ ನಕ್ಷತ್ರದಂತೆಸಗುತಿರ್ಪ ಕರ್ನಾಟಕವೆಂಬೋ ದೇಶದೊಳಗೆ ಸೂರ್ಯಚಂದ್ರರ ಸಾಕ್ಷಿಯಾಗಿ ಕಂಗೊಳಿಸುತಿರುವ ಹೊಳೆಯೂರಿನ ಹಳೇಮಠದಲ್ಲಿ ನಡೆದ ಒಂದು ಅರ್ಧದಿನದ ವಿದ್ಯಮಾನವನ್ನು ಭಕ್ತಾದಿಗಳು ಓದಿ ಪಾವನರಾಗತಕ್ಕದ್ದು. ಸರ್ವೇ ಜನಾ ಸುಖಿನೋಭವಂತು. ಅದಾಗಿ ಉಭಯಕುಶಲೋಪರಿ ಸಾಂಪ್ರತ!!
ಬೆಳಗಿನ ಎಂಟೂವರೆಗಂಟೆ. ಮಠದಮುಂದೆ ದೊಡ್ಡ ಹಡಗಿನಂಥಾ ಅತ್ಯಾಧುನಿಕ ಕಪ್ಪುಕಾರೊಂದು ಬಂದು ನಿಂತಿತು. ಅದರೊಳಗಿನಿಂದ ಸುಮಾರು ಐವತ್ತುವರ್ಷದ ದಢೂತಿ ಪುರುಷರೊಬ್ಬರು, ಅವರ ಹಿಂದೇ ಅಷ್ಟೇ ದಢೂತಿ ಮಹಿಳೆಯೂ ಬಹಳ ಕಷ್ಟದಿಂದ ಇಳಿದರು. ದಢೂತಿ ಮಹಿಳೆಯ ಮೈಮೇಲೆ ಆಕೆಯ ದೇಹದ ತೂಕದಷ್ಟೆ ಭಾರದ ಬಂಗಾರದ ಒಡವೆಗಳು ಶೋಭಿಸುತ್ತಿದ್ದು, ತಮ್ಮ ಮತ್ತು ತಮ್ಮ ಒಡವೆಗಳ ಭಾರದಿಂದ ಆಕೆ ಏದುಸಿರು ಬಿಡುತ್ತಿದ್ದರು. ಒಡನೆಯೇ ಮುಂದೆ ಕುಳಿತ ಕಾರಿನ ಡ್ರೈವರ್ ಮತ್ತು ಅವನ ಜೊತೆ ಬಂದಿದ್ದ ಮತ್ತೊಬ್ಬ ಆಳು ಇಳಿದು, ಡಿಕ್ಕಿಯಿಂದ ದೊಡ್ಡ ಹರಿವಾಣಗಳನ್ನು ತೆಗೆದು ಅದರ ತುಂಬಾ ತಾಜಾ ಹಣ್ಣುಗಳನ್ನೂ, ಮತ್ತೊಂದರಲ್ಲಿ ಬಾದಾಮಿ, ಕಲ್ಲುಸಕ್ಕರೆ, ಗೋಡಂಬಿ, ಉತ್ತತ್ತಿ ಮುಂತಾದ ಡ್ರೈಫ಼್ರೂಟ್ಸ್‍ಅನ್ನೂ ಧಾರಾಳವಾಗಿ ತುಂಬಿಸಿ ಶ್ರೀಶ್ರೀಶ್ರೀಮಹಾಸ್ವಾಮಿಯವರಿಗೆ ಅರ್ಪಿಸಲು ದಢೂತಿದಂಪತಿಗಳ ಹಿಂದೆ ನಡೆದರು.
ಇದನ್ನು ಮಠದ ಒಳಗಿನಿಂದಲೇ ನೋಡಿದ, ಇವರಿಗಾಗಿ ಕಾಯುತ್ತಿದ್ದ, ಮಠಕ್ಕೂ ಇವರಿಗೂ ಮಧ್ಯವರ್ತಿಯಾಗಿದ್ದ ಮಠದ ಶಿಷ್ಯರೊಬ್ಬರು ದಢದಢನೇ ಓಡಿಬಂದು ಕೈಮುಗಿದು ಇವರನ್ನು ಸ್ವಾಗತಿಸಿದರು. ” ಬನ್ನಿ ಬೆಳಗಿನಿಂದಲೇ ಹೋಮ ನಡೆಯುತ್ತಿದೆ. ಮಹಾಸ್ವಾಮಿಗಳು ನಿಮ್ಮ ಬಗ್ಗೆ ಎರಡು ಬಾರಿ ಕೇಳಿದರು. ಮೊದಲು ಪಾದಪೂಜೆ, ನಂತರ ಇವತ್ತಿನ ಭಿಕ್ಷೆ ತಮ್ಮದೇ ಎಂದು ಮಹಾಸ್ವಾಮಿಗಳಿಗೆ ಹೇಳಿಬಿಟ್ಟಿದ್ದೇನೆ..ಹಿ..ಹಿ..” ’ಭಿಕ್ಷೆ’ ಎನ್ನುವ ಪದ ಕೇಳಿ ಗಂಡನ ಮುಖ ಸ್ವಲ್ಪ ಬಿಗುವಾಯಿತು. ಏಕೆಂದರೆ ಆತನ ತಂದೆಯಕಾಲಕ್ಕೆ ಈ ಸ್ವಾಮಿಗಳ ಹಿಂದಿನ ಸ್ವಾಮಿಗಳು ಇವರ ಊರಿಗೆ ಆಗಮಿಸಿ, ಊರಿನ ದೊಡ್ಡಜನಗಳ ಪಟ್ಟಿಮಾಡಿ ಅವರಿಗೆಲ್ಲಾ ’ನಿಮ್ಮನಿಮ್ಮ ಮನೆಗಳಲ್ಲಿ ಇಂಥಿಂಥಾ ದಿನ ಭಿಕ್ಷೆ’ ಎಂದು ಹೇಳಿಕಳಿಸಿದರೆ ದುಸರಾ ಮಾತಾಡದೇ ಭಿಕ್ಷೆ ಮಾಡಿಸಬೇಕಾಗಿತ್ತೆಂದೂ, ಆಗ ನೂರಾರು ಜನ ಈ ಸ್ವಾಮಿಗಳ ಹಿಂಬಾಲಕರನ್ನು ಕರೆದು ಊಟಹಾಕುವುದೇ ಅಲ್ಲದೇ ಮಠಕ್ಕೆ ಒಂದುತಿಂಗಳ ಆದಾಯವನ್ನೂ ಮನೆ ಯಜಮಾನ ಸಲ್ಲಿಸಬೇಕಾಗಿತ್ತೆಂದೂ ಅಪ್ಪ ಹೇಳುತ್ತಿದ್ದುದು ನೆನಪಿನಲ್ಲಿತ್ತು. ಈತನೂ ಅನೇಕ ಬಾರಿ ಪಾದಪೂಜೆ ಇತ್ಯಾದಿ ಸೇವೆ ಸಲ್ಲಿಸಿದ್ದರೂ ಭಿಕ್ಷೆ ಮುಂತಾದ ರಸಕಸೆಗೆ ಕೈಹಾಕಿರಲಿಲ್ಲ.
ತನ್ನ ಮದುವೆಯಾದ ದಿನದಿಂದಲೂ ಗಂಡ ಹೀಗೆ ಪೂಜೆ ಪುನಸ್ಕಾರ ಮಠಮಾನ್ಯ ಅಂತ ಓಡಾಡುತ್ತಿದ್ದರೂ ಹೆಂಡತಿಗೆ ಸಂಪ್ರದಾಯದ ರೀತಿರಿವಾಜುಗಳು ದಪ್ಪ ತಲೆಗೆ ಹೋಗೇ ಇರಲಿಲ್ಲ. ಮಠದ ಟೆಕ್ನಿಕಲ್ ಟರ್ಮ್ ಆದ ಈ ’ಭಿಕ್ಷೆ’ ಎನ್ನುವುದನ್ನು, ಮನೆಮುಂದೆ ’ಅಮ್ಮಾ ತಾಯಿ ಭಿಕ್ಷೆ ಹಾಕ್ರಮ್ಮ’ ಎಂದು ಕೇಳುವ ಹಿಡಿ ಅಕ್ಕಿಯ ಭಿಕ್ಷೆ ಎಂದೇ ಭಾವಿಸಿ ” ಅಯ್ಯೋ ಒಂದು ಕೆ.ಜಿ ಅಕ್ಕಿ ತರಬೇಕಾಗಿತ್ತು” ಎಂದು ದಪ್ಪ ಗಂಟಲಿನಲ್ಲಿ ಉಸುರಿದರು. ಹೆಂಡತಿಯ ಪೆದ್ದುತನಕ್ಕೆ ತಲೆಚಚ್ಚಿಕೊಳ್ಳುವಂತೆ ಗಂಡನಿಗೂ, ಬಿದ್ದುಬಿದ್ದು ನಗುವಂತೆ ಮಠದ ಶಿಷ್ಯನಿಗೂ ಏಕಕಾಲಕ್ಕಾಗಿ, ಇಬ್ಬರೂ ಕಷ್ಟಪಟ್ಟು ತಮ್ಮತಮ್ಮ ಭಾವಗಳನ್ನು ಹತ್ತಿಕ್ಕಿಕೊಂಡರು. ಗಂಡನ ಬಿಗಿದ ಮುಖ ಇನ್ನೂ ಸಡಲಿರಲಿಲ್ಲ. ಇದನ್ನು ಗಮನಿಸಿದ ಮಠದ ಶಿಷ್ಯ ಸಮಾಧಾನ ಮಾಡುವವರಂತೆ ” ಭಿಕ್ಷೆ ಎಂದರೆ ಇಂತಿಷ್ಟೇ ಕೊಡಬೇಕು ಅಂತೇನಿಲ್ಲ. ನಿಮ್ಮನಿಮ್ಮ ಇಚ್ಛೆ ಅಷ್ಟೆ. ಮಹಾಸ್ವಾಮಿಗಳು ಭಕ್ತರಿಗೆ ಪ್ರವಚನದಲ್ಲಿ ಹೇಳುತ್ತಲೇ ಇರುತ್ತಾರೆ. ’ನೀವು ನೂರು ರೂ ಕೊಟ್ಟರೂ ಸರಿ, ಲಕ್ಷರೂ ಕೊಟ್ಟರೂ ಸರಿ, ಒಟ್ಟಿನಲ್ಲಿ ಭಕ್ತಿ ಮುಖ್ಯ’ ಅಂತ. ನಿಮಗೆ ಆ ಕ್ಷಣಕ್ಕೆ ಭಗವಂತ ಎಷ್ಟು ಅಂತ ಪ್ರೇರಣೆ ಕೊಡುತ್ತಾನೋ ಅಷ್ಟು ಕೊಡಿ” ಎಂದು ಸಮಾಧಾನದ ಧ್ವನಿಯಲ್ಲಿ ಉಸುರಿದ.
ಆ ವೇಳೆಗೆ ಮುಂದೆ ಶಿಷ್ಯ, ಅವನ ಹಿಂದೆ ದಂಪತಿಗಳು, ಅವರ ಹಿಂದೆ ಆಳುಗಳು ಮಠದ ಆವರಣದ ಒಳಗೆ ಬಂದಾಗಿತ್ತು. ಬಲಪಕ್ಕದಲ್ಲಿದ್ದ ಪುರಾತನ ಸಂಪಿಗೆಮರದ ಕೆಳಗೆ ಕಟ್ಟಿದ್ದ ಕಲ್ಲಿನ ಕಟ್ಟೆಯ ಮೇಲೆ ಪೂಜಾ ಸಾಮಗ್ರಿಗಳನ್ನು ಇಟ್ಟು ಸೇವಕರು ಹೊರಟು ಹೋದರು. ಮಠದ ಒಳಗೆ ಹೋಮ ನಡೆಯುತ್ತಿತ್ತು. ದಂಪತಿಗಳು ಒಳಗೆ ಹೋಗಿ ದೂರದಿಂದಲೇ ಮಹಾಸ್ವಾಮಿಗಳಿಗೆ ಸಾಷ್ಟಾಂಗವಾಗಿ ನಮಸ್ಕರಿಸಿ ಮತ್ತೆ ಕಟ್ಟೆಯ ಬಳಿಬಂದು ಕುಳಿತರು.
ಆ ಹೊತ್ತಿಗೆ ಮತ್ತೊಂದು ತಂಡ ಬಂತು. ನಲವತ್ತರ ಆಚೆಯೀಚೆಯಿದ್ದ ಗಂಡ ಹೆಂಡತಿ, ಗಂಡನ ಅಕ್ಕ, ಅವಳ ಇಬ್ಬರು ಸುಂದರ ಹೆಣ್ಣುಮಕ್ಕಳು, ದಂಪತಿಯ ಎರಡು ಗಂಡು ಮಕ್ಕಳು, ಮತ್ತೊಬ್ಬ ಆ ಗಂಡನ ಗೆಳೆಯ. ಆ ಗೆಳೆಯನೇ ಇವರನ್ನು ಪುಸಲಾಯಿಸಿ ತನ್ನ ಟಾಟಾಸುಮೋದಲ್ಲಿ ಈ ಕುಟುಂಬವನ್ನು ಇಲ್ಲಿಗೆ ಕರೆತಂದಿದ್ದ. ಈ ಮಹಾಸ್ವಾಮಿಗಳ ಸಾಮರ್ಥ್ಯದ ಬಗ್ಗೆ ಆತನಿಗೆ ಎಲ್ಲಿಲ್ಲದ ವಿಶ್ವಾಸ. ನಿಜವಾಗಿ ನೋಡಿದರೆ ಅವನು ಇವರಿಗೆ ಸಹಾಯ ಮಾಡಲು ಕರೆತಂದಿದ್ದು. ಆ ಗಂಡನೆನಿಸಿಕೊಳ್ಳುವ ಪ್ರಾಣಿ ಎಂಟೆಕ್ ಓದಿಯೂ ಒಂದುಕಡೆ ನೆಲೆನಿಲ್ಲಲಾರದೇ ಪದೇಪದೇ ಕೆಲಸ ಬದಾಲಾಯಿಸಿ ಸುಸ್ತಾಗಿದ್ದ. ಹೆಂಡತಿ ವಕೀಲೆ. ಮೊದಲು ಪ್ರೈವೇಟ್ ಪ್ರಾಕ್ಟೀಸ್ ಮಾಡುತ್ತಿದ್ದಾಕೆ ಈಗ ಎಂಟು ವರ್ಷಗಳಿಂದ ಹೆಸರಾಂತ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕಾನೂನುಸಲಹಾಗಾರಳಾಗಿ ಒಳ್ಳೆಯ ಸಂಪಾದನೆ ಮಾಡುತ್ತಿದ್ದಾಳೆ. ಗಂಡನೇ ಕೀಳರಿಮೆಯಲ್ಲಿ ಕುಗ್ಗುತ್ತಿದ್ದಾನೆ. ಜೊತೆಗೆ ಈಗವನು ಕೆಲಸ ಮಾಡುತ್ತಿರುವ ಕಂಪನಿಯವರು ಕಾನೂನು ಬಾಹಿರವಾಗಿ ಇವನನ್ನು ಕೆಲಸದಿಂದ ತೆಗೆಯಲು ನೋಡುತ್ತಿದ್ದಾರೆ. ಆ ಕಂಪನಿಯ ಯಜಮಾನ ಈ ಮಹಾಸ್ವಾಮಿಗಳ ಪರಮ ಭಕ್ತ. ಇವರೊಂದು ಮಾತು ಹೇಳಿದರೆ ಅವನ ಕೆಲಸ ಉಳಿಯುವುದು ಗ್ಯಾರಂಟಿ.
ಜೊತೆಯಲ್ಲಿ ಈ ತಂಡಕ್ಕೆ ಮತ್ತೆರಡು ಬೇಡಿಕೆಗಳಿವೆ. ಆ ತರುಣಿಯರಲ್ಲಿ ದೊಡ್ಡವಳು ಎಂಜಿನಿಯರಿಂಗ್ ಮುಗಿಸಿ ಮುಂದಿನ ವಾರವೇ ಅಮೆರಿಕಕ್ಕೆ ಹಾರಲಿದ್ದಾಳೆ ಮುಂದಿನ ಓದಿಗಾಗಿ. ಅವಳಿಗೆ ಮಹಾಸ್ವಾಮಿಗಳ ಆಶೀರ್ವಾದ ಬೇಕು. ಮತ್ತೊಬ್ಬಳು ಸಿ.ಇ.ಟಿ ಬರೆದಿದ್ದಾಳೆ. ಅವಳಿಗೆ ಮೆಡಿಕಲ್ ಸೀಟು ಬೇಕು. ಇಂಥದನೆಲ್ಲಾ ಮಹಾಸ್ವಾಮಿಗಳಲ್ಲದೇ ಮತ್ಯಾರು ಮಾಡಬೇಕು? ಅದಕ್ಕೇ ಈ ತಂಡ ಇವತ್ತು ಈ ಹೊಳೆಯೂರಿನಲ್ಲಿ ಲ್ಯಾಂಡ್ ಆಗಿದೆ. ಗಂಡನ ಗೆಳೆಯನ ಪರಿಚಿತನಾದ ಮಠದ ಶಿಷ್ಯ ಇವರನ್ನು ಕಾಣುತ್ತಲೇ ಓಡೋಡಿ ಬಂದ. ಪಕ್ಕದಲ್ಲಿ ನಿಂತು ಗುಸುಪಿಸು ಮಾತಾಯಿತು.
ಮಠದ ಒಳಗಿನಿಂದ ಮಹಾಸ್ವಾಮಿಗಳು ದುಡುದುಡು ನಡೆಯುತ್ತಾ ಹೊರಗೆ ಬಂದೇ ಬಿಟ್ಟರು. ಸಣ್ಣಗಿನ ಆಕಾರ, ಇಪ್ಪತ್ತೆಂಟು ಮೂವತ್ತರ ಒಳಗಿನ ಪ್ರಾಯ. ಕುರುಚಲು ಗಡ್ಡ, ಬೋಳುತಲೆ, ಬೆಳ್ಳಗಿನ ದೇಹ, ಕಾವಿಯುಟ್ಟು, ಕಾವಿ ಹೊದ್ದ ಪೋಷಾಕು, ಕೈಲೊಂದು ಅವರಿಗಿಂತಾ ಎತ್ತರದ ಕೋಲು. ಅವರ ಹಿಂದೆ ಇದ್ದ ಇಪ್ಪತ್ತು ಮೂವತ್ತು ಜನ ಮಠದ ಶಿಷ್ಯರು ’ಹಾದಿ ಹಾದಿ’ ಎಂದು ಒಟ್ಟಿಗೇ ಅರಚಿದ್ದರಿಂದ ಇಲ್ಲಿದ್ದ ಎಲ್ಲರೂ ಭಯಭೀತರಾಗಿ ಚಲ್ಲಾಪಿಲ್ಲಿಯಾದರು. ಮಹಾಸ್ವಾಮಿಗಳು ಬಂದು ಸಂಪಿಗೆ ಮರದ ಬುಡದ ಕಟ್ಟೆಯ ಮೇಲೆ ವಿರಾಜಮಾನರಾದರು. ಶಿಷ್ಯಕೋಟಿ ಮಂತ್ರದ ಹೊಳೇಯನ್ನೇ ಹರಿಸಲು ಪ್ರಾರಂಭಿಸಿತು. ಒಬ್ಬರು ಎತ್ತರ ಧ್ವನಿಯಲ್ಲಿ ” ಪಾದಪೂಜೆ ಮಾಡುವವರು ಮುಂದೆ ಬನ್ನಿ” ಎಂದಪ್ಪಣೆಯಿತ್ತರು. ಧಡೂತಿದಂಪತಿಗೆ ಮೊದಲ ಅವಕಾಶ ಕಲ್ಪಿಸಲಾಯಿತು.
ಅಗಲವಾದ ಎರಡು ಹರಿವಾಣಗಳನ್ನು ಇಡಲಾಯಿತು. ಒಂದರಲ್ಲಿ ಮಹಾಸ್ವಾಮಿಗಳು ತಮ್ಮ ಎರಡು ಪಾದಗಳನ್ನು ಊರಿ ಇಟ್ಟರು. ಪಕ್ಕದಲ್ಲೇ ಮತ್ತೊಂದು ಹರಿವಾಣವನ್ನು ಇಟ್ಟಿದ್ದು, ಭಕ್ತರು ಅದರಲ್ಲಿ ಮೊದಲು ಕಾಣಿಕೆ ಹಾಕಿ ನಂತರ ಪಾದಪೂಜೆ ಆರಂಭಿಸಬೇಕು. ಧಡೂತಿಗಂಡ ಐದುಸಾವಿರರೂಪಾಯಿಗಳನ್ನು ಹಾಕಿದಮೇಲೆ ಆತನ ಹೆಂಡತಿಯ ಕೈಗೆ ಹಿತ್ತಾಳೆ ತಂಬಿಗೆಯೊಂದನ್ನು ಕೊಡಲಾಯಿತು. ಅದರಲ್ಲಿ ಹದವಾಗಿ ಬಿಸಿಯಾಗಿದ್ದ ನೀರಿತ್ತು. ಶಿಷ್ಯನೊಬ್ಬನು ಸೂಚಿಸಿದಂತೆ ಆಕೆ ಅದನ್ನು ಗಂಡನ ಕೈಗೆ ನಿಧಾನವಾಗಿ ಹಾಕಿದಳು ಆತ ಅದರಿಂದ ಮಹಾಸ್ವಾಮಿಗಳ ಪಾದತೊಳೆದಾಯಿತು. ’ನಮಸ್ಕರಿಸಿ ಪಕ್ಕಕ್ಕೆ ಸರಿಯಿರಿ’ ಎಂದು ಮಠದ ಧಾಂಡಿಗರೊಬ್ಬರು ಆರ್ಡರ್ ಮಾಡಿದರು. ನಂತರದ ಅವಕಾಶ ಇಂಜಿನಿಯರ್ ಗಂಡ ಮತ್ತವರ ವಕೀಲೆ ಹೆಂಡತಿಯದು. ಇಂಜಿನಿಯರ್ ನಡುಗುತ್ತಾ ಐನೂರರ ನೋಟೊಂದನ್ನು ತಟ್ಟೆಗೆ ಹಾಕಿದ. ವಕೀಲೆ ತಾನೂ ಐನೂರು ಹಾಕಿದಳು. ಇವರ ಪಾದಪೂಜೆ ಮತ್ತೂ ಶೀಘ್ರವಾಗಿ ಮುಗಿಸಲಾಯಿತು. ಸ್ಥಳಿಯರಾದ ಕೆಲವು ದಂಪತಿಗಳೂ ಯಥಾಶಕ್ತಿ ಹಣಹಾಕಿ ಪಾದಪೂಜೆ ನೆರವೇರಿಸಿದರು. ಕ್ಷಣಾರ್ಧದಲ್ಲಿ ಎಲ್ಲವು ಮುಗಿದು ಬಂದಷ್ಟೇ ರಭಸವಾಗಿ ಮಹಾಸ್ವಾಮಿಗಳು ಒಳಗೆ ಮಾಯವಾಗಿ ಬಿಟ್ಟರು.
ಆಗಿನ್ನೂ ಬೆಳಗಿನ ಒಂಬತ್ತುವರೆ! ಇನ್ನು ಮಹಾಸ್ವಾಮಿಗಳು ಸ್ನಾನ ಅಹನ್ನೀಕ ಇತ್ಯಾದಿಗಳನ್ನು ಮುಗಿಸಿ ದೊಡ್ಡ ದೇವರ ಪೂಜೆ ಪ್ರಾರಂಬಿಸುವುದು ಹತ್ತೂವರೆಗೆ. ಇನ್ನು ಒಂದುಗಂಟೆಯ ಕಾಲ ಏನು ಮಾಡಬೇಕೆಂದು ತೋಚದೇ ಈ ಭಕ್ತಗಣ ಸಂಪಿಗೆಮರದ ಕೆಳಗಿನ ಕಟ್ಟೆಯಲ್ಲಿ ಕುಳಿತು ಯೋಚನಾಕ್ರಾಂತವಾಗಿತ್ತು. ಮಠದ ಮೂವತ್ತು ಶಿಷ್ಯ ಧಾಂಡಿಗರೂ ಎದುರಿಗೇ ಇದ್ದ ಹಜಾರದಲ್ಲಿ ಊಟದೆಲೆ ಹಾಸಿ ಕುಳಿತದ್ದು ಇವರಿಗೆಲ್ಲಾ ಕಾಣಿಸುತ್ತಿದ್ದು, ಎಲೆಯಲ್ಲಿ ಬಿಸಿಬಿಸಿ ಪೂರಿಗಳನ್ನೂ ಸಾಗು ಮತ್ತು ಸಿಹಿ ಸಜ್ಜಿಗೆಯನ್ನೂ ಬಡಿಸಲಾಯಿತು. ಹೊರಗೆ ಕುಳಿತ ಈ ಶಿಷ್ಯಗಣವನ್ನು ಯಾರೂ ’ಫಲಹಾರಕ್ಕೆ ಬನ್ನಿ’ ಎಂದು ಆಮಂತ್ರಿಸಲಿಲ್ಲವಾಗಿ ಇವರೂ ನಾಚಿಕೆಯಿಂದ ಹೊರಗೇ ಉಳಿದರು. ಆದರೆ ವಕೀಲೆಯ ಇಬ್ಬರೂ ಸಣ್ಣ ಮಕ್ಕಳು “ಅಮ್ಮ ನಮಗೂ ಹಸಿವೂ” ಎಂದು ರಾಗ ತೆಗೆದರು. ಇಂಜಿನಿಯರ್ ತರುಣಿ ಅವರನ್ನು ಮಠದ ಹೊರಗೆ ಕರೆದುಕೊಂಡು ಹೋಗಿ ಬಿಸ್ಕತ್ ಮುಂತಾದವನ್ನು ಕೊಡಿಸಿದಳು. ಪುಷ್ಕಳವಾಗಿ ಫಲಹಾರವನ್ನು ಮುಗಿಸಿದ ಮಠದ ಶಿಷ್ಯವರ್ಗ ಢರ ಬುರ ಎಂದು ತೇಗುತ್ತಾ ಅಂಗಳಕ್ಕೆ ಆಗಮಿಸಿತು.
ಆ ಹೊತ್ತಿಗೆ ರೈತನೊಬ್ಬ ದಪ್ಪ ಹಲಸಿನಹಣ್ಣನ್ನು ತಂದು ಸಂಪಿಗೆಮರದ ಕೆಳಗಿನ ಕಟ್ಟೆಯಲ್ಲಿಟ್ಟು ಹೋದ. ಶಿಷ್ಯಗಣಕ್ಕೆ ಅದನ್ನು ಕಂಡಕೂಡಲೇ ಆಗತಾನೇ ತಿಂದ ಪೂರಿಸಾಗು, ಸಜ್ಜಿಗೆಯೆಲ್ಲಾ ಒಳಗೇ ಕರಗಿದಂತಾಗಿ, ಇಬ್ಬರು ಅದನ್ನೆತ್ತಿ ಸ್ವಲ್ಪ ದೂರದಲ್ಲಿದ್ದ ಕಲ್ಲಿನ ಮೇಲೆ ಇಟ್ಟರು. ಒಬ್ಬ ಒಳಹೋಗಿ ಚಾಕು ತಂದ. ಹಣ್ಣಿನ ಸುತ್ತಲೂ ಮಂಗಗಳಂತೆ ಶಿಷ್ಯರು ಘೇರಾಯಿಸಿದರು. ಕೆಲವೇ ಕ್ಷಣಗಳಲ್ಲಿ ಒಬ್ಬೊಬ್ಬರ ಕೈಲೂ ಎಂಟುಹತ್ತು ತೊಳೆಗಳಿರುವ ಒಂದೊಂದು ತುಂಡು ಹಲಸಿನ ಹಣ್ಣಿತ್ತು. ಹತ್ತು ನಿಮಿಷವಷ್ಟೇ ತೊಳೆಗಳನ್ನು ಕಳೆದುಕೊಂಡ ಸಿಪ್ಪೆ ಮತ್ತು ಸ್ಯಾಡಿಗಳು ಕಲ್ಲಿನ ಮೇಲೆ ಉಳಿದವು. ಹೊರಗೆ ತನ್ನಷ್ಟಕ್ಕೆ ಹೋಗುತ್ತಿದ್ದ ದನವೊಂದು ಹಲಸಿನ ವಾಸನೆ ಹಿಡಿದು ಮಠದ ಆವರಣದೊಳಗೆ ಬಂದು ಶಿಷ್ಯರು ಉಳಿಸಿದ ಹಲಸಿನ ಶೇಷಭಾಗವನ್ನು ತನ್ನ ಬೆಳಗಿನ ನಾಷ್ಟಾವನ್ನಾಗಿ ಮಾಡಿಕೊಂಡಿತು. ಇವೆಲ್ಲವನ್ನೂ ಇಂಜಿನಿಯರ್ ತರುಣಿಯೂ, ಅವಳ ತಂಗಿಯೂ, ವಕೀಲೆಯ ಇಬ್ಬರು ಮಕ್ಕಳೂ ಬಿಟ್ಟಕಣ್ಣುಗಳಿಂದ ಬಾಯಲ್ಲಿ ನೀರು ಸುರಿಸಿಕೊಂಡು ನೋಡುತ್ತಿದ್ದರು. ತಂಗಿ ಅಕ್ಕನ ಬಳಿ ” ಇವರ ಹೊಟ್ಟೆ ಕಡಿಯ, ಇವರಿಗೆ ಹೊಟ್ಟೆ ನೋವು ಬರ, ಮಕ್ಕಳಿಗಾದರೂ ಒಂದು ತೊಳೆ ಆಫ಼ರ್ ಮಾಡಲಿಲ್ಲ ನೋಡು” ಎಂದು ಪಿಸುಗುಟ್ಟಿ ಶಾಪ ಹಾಕಿದಳು.
ಮಹಾಸ್ವಾಮಿಗಳು ಸ್ನಾನಮಾಡಿ ದೊಡ್ಡದೇವರ ಪೂಜೆಗೆ ಕುಳಿತದ್ದನ್ನು ಮಠದ ಒಳಗಿನ ಗಂಟೆಯ ಶಬ್ದ ತಿಳಿಸಿತು. ನಗರದಿಂದ ಬಂದಿದ್ದ ಈ ಭಕ್ತಗಣ ಒಳಗೆ ಪ್ರವೇಶಿಷಿತು. ಅದ್ಯಾವುದೋ ಮಾಯದಲ್ಲಿ ಹಲಸಿನಹಣ್ಣು ಖಾಲಿಮಾಡಿದ ಮಠದ ಧಾಂಡಿಗರು ದೇವರಪೂಜೆಯಾಗುತ್ತಿದ್ದ ಕೋಣೆಯ ಹೊರಗಿನ ಹಜಾರದಲ್ಲಿ ಮೂರುಸಾಲಿನಲ್ಲಿ ಕುಳಿತೇ ಬಿಟ್ಟಿದ್ದರು. ಈ ಭಕ್ತಗಣ ಅವರ ಹಿಂದೆ ಕೂರಬೇಕಾಯಿತು. ಒಬ್ಬ ಶಿಷ್ಯೋತ್ತಮ ’ಮಹಾಸ್ವಾಮಿಗಳು ಈಗ ವೈಯುಕ್ತಿಕ ಪೂಜೆಯನ್ನು ಮಾಡುವುದರಿಂದ ಹೆಂಗಸರು ಮಠದ ಒಳಗೆ ಬರಬಾರದೆಂದೂ ಹೊರಗೆ ಸಂಪಿಗೆಕಟ್ಟೆಯ ಹತ್ತಿರ ಕೂರಬೇಕೆಂದೂ, ಅರ್ಧಗಂಟೆಯ ನಂತರ ತಾನು ತಿಳಿಸಿದ ಮೇಲೆ ಒಳಗೆ ಬರಬಹುದೆಂದೂ’ ಅಪ್ಪಣೆ ಕೊಡಿಸಿದ. ಇಂಜಿನಿಯರ್ ತರುಣಿ ಮತ್ತು ತಂಗಿ ಆ ಕೊಳಕು ನೆಲದ ಮೇಲೆ ಕುಳಿತರೆ ತಮ್ಮ ಹೊಸ ಚೂಡಿದಾರ್ ಹಾಳಾಗುವುದೆಂದು ಚಿಂತಿಸುತ್ತಿದ್ದವರು ನಿರಾಳವಾಗಿ ಉಸಿರು ಬಿಟ್ಟು ಹೊರಬಂದರು. ಶಿಷ್ಯರು ಕುಳಿತ ಮುಂಭಾಗದಲ್ಲಿ ಮಧ್ಯವಯಸ್ಕರೊಬ್ಬರು ವ್ಯಾಸಪೀಠದ ಮುಂದೆ ಕುಳಿತು ಸ್ವಲ್ಪಗಟ್ಟಿಯಾಗಿ ಪ್ರವಚನ ಮಾಡುತ್ತಿದ್ದರು. ಇದನ್ನು ಮಹಾಸ್ವಾಮಿಗಳೇ ಏರ್ಪಡಿಸಿದ್ದರು.
ಅದು ವಿಷ್ಣುಪಂಥದ ಮಠವಾದರೂ ಶಿವನೂ ನಮಗೆ ಹತ್ತಿರದವನೇ ಎಂದು ಸಾರಲು ಇಂದು ಬೆಳಿಗ್ಗೆ ರುದ್ರಹೋಮವನ್ನು ನಡೆಸಲಾಗಿತ್ತು. ಅದರ ಪ್ರಯುಕ್ತ ಮಹಾರುದ್ರನ ಬಗ್ಗೆ ಈಗ ಪ್ರವಚನ ನಡೆಯುತ್ತಿತ್ತು. ಮುಂದೆ ಕುಳಿತ ಶಿಷ್ಯವೃಂದ ಅದನ್ನು ಕೇಳುತ್ತಿರುವಂತೆ ನಟಿಸುತ್ತಿದ್ದರೂ ಅವರಲ್ಲಿ ಕೆಲವರ ಕೈಲಿ ಬೆಳೆಬಾಳುವ ಮೊಬೈಲ್‍ಗಳು ಇದ್ದು, ಅದರಿಂದ ಕೆಲವರು ಆಟವಾಡುತ್ತಲೂ, ಕೆಲವರು ಯಾರಯಾರದ್ದೋ ಫ಼ೋಟೋ ತೆಗೆಯುತ್ತಲೂ, ಕೆಲವರು ತಮ್ಮವರನ್ನೇ ಛೇಡಿಸುತ್ತಲೂ ಇದ್ದರು. ಆದರೆ ಎಲ್ಲರೂ ಒಟ್ಟಾಗಿ ಮಂತ್ರಹೇಳಬೇಕಾದ ಸಂದರ್ಭ ಬಂದಾಗ ಮಾತ್ರ ಕೀಕೊಟ್ಟ ಬೊಂಬೆಗಳಂತೆ ಒಟ್ಟಾಗಿ ಮಂತ್ರವಾಹಿನಿಯನ್ನೂ ಹರಿಸುತ್ತಿದ್ದರು. ಮಹಾಸ್ವಾಮಿಗಳ ವೈಯುಕ್ತಿಕ ಪೂಜೆ ಮುಗಿದನಂತರ ಮಹಿಳೆಯರನ್ನೂ ಒಳಗೆ ಕರೆಯಲಾಯಿತು. ಭಕ್ತಗಣ ಪರಮ ಭಕ್ತಿಯಿಂದ ಮಹಾಸ್ವಾಮಿಗಳು ನಡೆಸುವ ದೊಡ್ಡ ದೇವರ ಪೂಜೆಯನ್ನು ನೋಡುತ್ತ ಕಣ್ತುಂಬಿಕೊಂಡು,ಪ್ರವಚನವನ್ನೂ ಆಸಕ್ತಿಯಿಂದ ಕೇಳಲುಪಕ್ರಮಿಸಿದರು.
ಪ್ರವಚನಕಾರರು ಶಿಷ್ಯಗಣ ಮಂತ್ರೋಚ್ಛಾರಣೆ ಮಾಡುವಾಗ ತಮ್ಮ ಧ್ವನಿಯನ್ನು ತಗ್ಗಿಸುತ್ತಲೂ, ಇಲ್ಲದಾಗ ಜೋರು ಧ್ವನಿಯಲ್ಲೂ ಪ್ರವಚನ ಸಾಗಿಸಿದ್ದರು.” ರುದ್ರನೂ ನಮ್ಮವನೇನ್ರೀ, ನಮ್ಮ ಹರಿ ಹೇಳ್ತಾನ್ರೀ ಅಯ್ಯಾ ರುದ್ರ ಜಗತ್ತಿಗೇ ನೀ ದೊಡ್ಡವನಿದ್ದೀಯಪ್ಪಾ ಆದ್ರ ನನಗ ನೀ ನನ್ನ ಕೆಳಗಿನವನೇ ನೋಡಪಾ, ಹ್ಯಾಂಗ ಅಂದ್ರೆ ಹೇಂಡ್ತಿ ಎಷ್ಟೇ ಧೋಡ್ ಕೆಲಸದಲ್ಲಿ ಇರವಳ್ಯಾಕೆ ಆಕಿ ಗಂಡಗಿಂತಾ ಹೆಚ್ಚೇನಲಪ್ಪ” ಎಂದು ಹೇಳುತ್ತಾ ಒಂದೆರಡು ಸಂಸ್ಕೃತ ಶ್ಲೋಕಗಳನ್ನು ಉರುಳಿಸಿದರು. ವಕೀಲೆಯ ಗಂಡನ ಮುಖದಲ್ಲಿ ಮಂದಹಾಸ ಮಿನುಗಿದ್ದನ್ನು ವಕೀಲೆ ಗಮನಿಸಿದಳು. ನಂತರ ತಮ್ಮ ಮಾತಿನ ಭಾವವನ್ನು ಚೆನ್ನಾಗಿ ಅರ್ಥಮಾಡಿಸಲು ಮೋಹಿನಿ ಭಸ್ಮಾಸುರನ ಕಥೆ ಹೇಳಿದರು. ಭಸ್ಮಾಸುರನಿಗೆ ವರಕೊಟ್ಟ ಶಿವ ಅವನು ಅದನ್ನು ಅನರ್ಥ ಕಾರ್ಯಕ್ಕೆ ಬಳಸಲಾಗಿ ಅದನ್ನು ತಪ್ಪಿಸಲಾಗದೇ ವಿಷ್ಣುವಿನ ಬಳಿ ಬಂದು “ಗೊತ್ತಿಲ್ಲದೇ ವರ ಕೊಟ್ಟುಬಿಟ್ಟೆ. ಈಗ ಅವನು ಅದನ್ನು ಜೀವನಾಶಕ್ಕಾಗಿ ಬಳಸುತ್ತಿದ್ದಾನೆ ನೀನೇ ಕಾಪಾಡಬೇಕು” ಎಂದು ಬೇಡಿದಾಗ ಹರಿ ಮೋಹಿನಿ ಅವತಾರವೆತ್ತಿ ಭಸ್ಮಾಸುರ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟುಕೊಳ್ಳುವಂತೆ ಮಾಡಿ ಅವನನ್ನು ಸಂಹರಿಸಿದ’ ಎಂದರು. ಇದನ್ನು ಕೇಳಿ ಮಠದ ಶಿಷ್ಯಗಣ ದೊಡ್ಡಜೋಕ್ ಕೇಳಿದಂತೆ ಕಿಸಿಕಿಸಿ ನಕ್ಕರು. ಕೆಲವರಂತೂ ಬಿದ್ದೂಬಿದ್ದೂ ಸದ್ದಿಲ್ಲದೇ ನಕ್ಕರು!! ವಕೀಲೆಗೂ ನಗು ಬಂತು.
ಆದರೆ ಮಠದ ಶಿಷ್ಯರು ನಕ್ಕ ಕಾರಣಕ್ಕಲ್ಲ. ಅವಳೂ ವಿಮರ್ಶಾಸಾಹಿತ್ಯ, ಕಥೆ ಕಾದಂಬರಿ ಪ್ರಾಚೀನಗ್ರಂಥಗಳ ಕನ್ನಡ ಅನುವಾದ ಮುಂತಾದವುಗಳನ್ನು ಓದುವ ಹವ್ಯಾಸವಿಟ್ಟುಕೊಂಡವಳು. ಆಗೀಗ ಪತ್ರಿಕೆಗಳಿಗೆ ಲೇಖನ, ಸಣ್ಣಕಥೆಗಳನ್ನೂ ಬರೆಯುತ್ತಿದ್ದವಳು. ಮೋಹಿನಿ ಭಸ್ಮಾಸುರನ ಕಥೆಯ ಮುಂದುವರೆದ ಭಾಗವಾಗಿ, ’ಭಸ್ಮಾಸುರ ಸತ್ತಮೇಲೆ ಶಿವನಿಗೆ ಮೋಹಿನಿಯಮೇಲೇ ಮೋಹವುಂಟಾಯಿತೆಂದೂ, ಹರಿಯು ತನ್ನ ನಿಜರೂಪವನ್ನು ತಳೆಯುವುದಕ್ಕೆ ಮೊದಲೇ ಅವನ ಮೇಲೆ ಮುಗಿಬಿದ್ದನೆಂದೂ ಇವರಿಬ್ಬರ ಸಂಗಮದಿಂದ ಅಯ್ಯಪ್ಪಸ್ವಾಮಿ ಹುಟ್ಟಿದನೆಂದೂ’ ಶಿವಭಕ್ತರು ಹೇಳುವ ಕಥೆ ಬಹುಶಃ ಈ ಪ್ರವಚನಕಾರರಿಗೆ ತಿಳಿದಿಲ್ಲವೆನಿಸಿ ಅವಳಿಗೆ ನಗುಬಂತು. ಮಠದ ಶಿಷ್ಯರ ಮಂತ್ರವಾಹಿನಿ ಮತ್ತು ಕೀಟಲೆ ಯಥಾವತ್ತಾಗಿ ಮುಂದುವರೆದಿದ್ದವು.
ಮಹಾಸ್ವಾಮಿಗಳು ಇವರಿಗೆಲ್ಲಾ ಬೆನ್ನುಹಾಕಿ, ಎದುರಿಗೆ ಗೋಡೆಗೆ ಆನಿಸಿದಂತೆ ಇಟ್ಟ ಮೆಟ್ಟಿಲು ಮೆಟ್ಟಿಲಾದ ಸ್ಟಾಂಡಿನಲ್ಲಿದ್ದ ದೇವರ ವಿಗ್ರಹಗಳ ಕಡೆ ಮುಖಮಾಡಿ ಕುಳಿತಿದ್ದರಿಂದ ಈ ಶಿಷ್ಯರ ಮಂಗಾಟಗಳು ಅವರಿಗೆ ಗೊತ್ತಾಗುತ್ತಿರಲಿಲ್ಲ. ಆದರೆ ಅವರೆಲ್ಲರೂ ಏಕಕಾಲಕ್ಕೆ ದ್ವಿಪಾತ್ರಾಭಿನಯವನ್ನು ಮಾಡುತ್ತಿದ್ದರು. ಮಹಾಸ್ವಾಮಿಗಳು ಒಂದೊಂದು ವಿಗ್ರಹವನ್ನೂ ತಮ್ಮ ತಲೆಯ ಮೇಲೆ ಭಕ್ತರಿಗೆ ಕಾಣಿಸುವಂತೆ ಹಿಡಿದಾಗ, ಈ ಧಾಂಡಿಗರಲ್ಲೊಬ್ಬ ” ಜಗದ್ಗುರುಗಳೂ,ವಿಶ್ವವಿಖ್ಯಾತರೂ, ಏನೇನೋ ಆದ ಅಂಥವರೂ ಪೂಜೆಮಾಡಿದಂಥಾ ಇಂಥಾ ದೇವರೂ” ಎಂದು ಯಾವ ಧ್ವನಿವರ್ಧಕವೂ ಇಲ್ಲದೇ, ೧೦೦ಡೆಸಿಬಲ್ ಸ್ವರಕಂಪನಾಂಕದಲ್ಲಿ ಅರಚುತ್ತಿದ್ದನು. ಮುಂದೆ ಕುಳಿತಿದ್ದ ಭಾಕ್ತಾದಿಗಳು ಭಕ್ತಿಭಾವ ಪರವಶರಾಗಿ ತನ್ನ ತುಂಬಾ ಆಭರಣಗಳನ್ನೇ ತುಂಬಿಕೊಂಡು ಮುಖಮೂತಿ ಕಾಣದಿದ್ದಂಥಾ ಅದು ಹನುಮನೋ ರಾಮನೋ ಎಂದೂ ಅರ್ಥವಾಗದಂಥಾ ಸುಮಾರು ಆರಿಂಚು ಎತ್ತರದ ಮೂರ್ತಿಯನ್ನು ತಮ್ಮ ಕಣ್ತುಂಬಾ, ತುಂಬಿಕೊಳ್ಳುತ್ತಿದ್ದರು!!
ಹೀಗೇ ಅಂತೂ ಮೂರ್ತಿಗಳ ಪ್ರರ್ದಶನ ಮುಗಿಯಿತು. ಮುಂದಿನ ಕಾರ್ಯಕ್ರಮವೇ ತೀರ್ಥಪ್ರಸಾದದ ವಿತರಣೆ. ಮೊದಲು ತೀರ್ಥಕ್ಕಾಗಿ ಹೊರಗೆ ಸಂಪಿಗೆ ಮರದ ಕೆಳಗೆ ಸಾಲುಹಚ್ಚಿನಿಲ್ಲಲು ತಿಳಿಸಲಾಯಿತು. ಆ ವೇಳೆಗೆ ಸ್ಥಳೀಯರೂ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಸಾಲು ಉದ್ದಕ್ಕೆ ಬೆಳೆಯಿತು. ಮಠದ ದಾಂಡಿಗನೊಬ್ಬ ಆಗಮಿಸಿ ಸಾಲಿನಲ್ಲಿ ನಿಂತಿದ್ದ ತರುಣಿ ಇಂಜಿನಿಯರ್ ಮತ್ತು ಅವಳ ತಂಗಿಯನ್ನೂ, ಅವರದೇ ವಯಸ್ಸಿನ ಮತ್ತಿಬ್ಬರು ಯುವತಿಯರನ್ನೂ, ಸಾಲಿನಿಂದ ಹೊರಕರೆದು, ’ಲಗ್ನವಾಗದ ಯುವತಿಯರಿಗೆ ಮಹಾಸ್ವಾಮಿಗಳು ತೀರ್ಥವನ್ನು ಕೊಡುವುದಿಲ್ಲವೆಂದೂ, ಇವರೆಲ್ಲರದೂ ಮುಗಿದ ಮೇಲೆ ಶಿಷ್ಯರು ತೀರ್ಥಕೊಡುತ್ತಾರೆ’ಂದೂ ತಿಳಿಸಿದ. ಇಂಜಿನಿಯರ್ ತರುಣಿಗೆ ನಖಶಿಖಾಂತ ಉರಿಯಿತು! “ಕೊಡದಿದ್ದರೆ ಕತ್ತೆಬಾಲ! ಇವರ ತೀರ್ಥವೇ ಬೇಡ” ಎಂದು ತಂಗಿಯ ಕಿವಿಯಲ್ಲಿ ಪಿಸುಗುಟ್ಟಿದಳು. ತಂಗಿ ಕಿಸ್ಸಕ್ಕನೆ ನಕ್ಕಿದ್ದನ್ನು ಇವರಿಗೆ ಸುದ್ದಿ ಹೇಳಿ ಹೋಗುತ್ತಿದ್ದ ಶಿಷ್ಯ ಗುರುಗುಟ್ಟಿ ನೋಡಿದ! ಇವರು ಅದನ್ನು ಕೇರೇ ಮಾಡದಂತೆ ಸಮ್ಮ ಪಾಡಿಗೆ ತಾವು ನಗುತ್ತಲೇ ಇದ್ದರು.
ತೀರ್ಥಸ್ವೀಕಾರಕ್ಕೂ ಎರಡು ಹರಿವಾಣಗಳನ್ನು ಇಡಲಾಯಿತು. ಆ ಹರಿವಾಣಗಳ ಹಿಂದೆ ಆರಡಿ ಮರದ ಹಲಗೆಯನ್ನು ಅಡ್ಡಡ್ಡವಾಗಿ ಮೋಟು ಗೋಡೆಯಂತೆ ಇಡಲಾಯಿತು. ಈ ವ್ಯವಸ್ಥೆ ಯಾಕೆಂದರೆ, ಭಾಕ್ತಾದಿಗಳ ಕೈಗೆ ತೀರ್ಥ ಬೀಳುವಾಗ ಅದರ ಒಂದೆರಡು ಹನಿಗಳು ಮರಳಿ ಮಹಾಸ್ವಾಮಿಯ ಕಾವಿಪಂಚೆಯ ಮೇಲೆ ಬಿದ್ದುಬಿಟ್ಟರೆ ಅವರಿಗೆ ಮೈಲಿಗೆ ತಗುಲುವುದಲ್ಲ? ಅದಕ್ಕೆ! ಅದರ ಹಿಂದೆ ಮಹಾಸ್ವಾಮಿ ತೀರ್ಥ ಕೊಡಲು ನಿಂತರು. ಭಕ್ತಾದಿಗಳು ಒಂದು ಹರಿವಾಣಕ್ಕೆ ಯಥಾರ್ಥವಾಗಿ ದಕ್ಷಿಣೆಯನ್ನು ಹಾಕಿ, ಮತ್ತೊಂದು ಹರಿವಾಣದ ಹತ್ತಿರ ತಮ್ಮ ಬಲ ಅಂಗೈಯನ್ನು ಬಟ್ಟಲಾಗಿ ಹಿಡಿದು, ಅದರ ಕೆಳಗೆ ಎಡ ಅಂಗೈಯನ್ನು ಆಸರೆಗೆ ಹಿಡಿದು, ಆದಷ್ಟೂ ಮೈಯನ್ನೂ ಕೈಯನ್ನೂ ನೆಲದ ವರೆಗೂ ಬಗ್ಗಿಸಿ ತೀರ್ಥವನ್ನು ತೆಗೆದುಕೊಳ್ಳುವುದು ಸಂಪ್ರದಾಯ! ಧಡೂತಿದಂಪತಿಯನ್ನು ಮೊದಲು ನಿಲ್ಲಿಸಲಾಗಿತ್ತು. ಏಕೆಂದರೆ ಇವತ್ತಿನ ಭಿಕ್ಷೆ ಅವರದ್ದೇ ತಾನೆ? ಅವರನ್ನು ಕರೆತಂದ ಮಠದ ಶಿಷ್ಯನೂ ಅಲ್ಲೇ ನಿಂತು ತನ್ನ ಗಿರಾಕಿ ಎಷ್ಟಕ್ಕೆಬಾಳುತ್ತದೆ ಎಂದು ನಿರುಕಿಸುತ್ತಲಿದ್ದ. ಧಡೂತಿ ಗಂಡ ಐದುಸಾವಿರ ರೂಗಳನ್ನು ಹಾಕಿದ! ಒಂದೇ ಬಾರಿಗೆ ಶಿಷ್ಯನ ಮತ್ತು ಮಹಾಸ್ವಾಮಿಯ ಮುಖ ಫ಼್ಯೂಸ್ ಹೋದ ಬಲ್ಪಿನಂತಾಯಿತು!!
ಏಕೆಂದರೆ ಮಹಾಸ್ವಾಮಿಗಳು ಆತನಿಂದ ಐವತ್ತು ಸಾವಿರವನ್ನೂ, ಶಿಷ್ಯ ಕಡೆಯ ಪಕ್ಷ ಮೂವತ್ತು ಸಾವಿರವನ್ನೂ ನಿರೀಕ್ಷಿಸುತ್ತಿದ್ದರು! ಇದನ್ನು ಕಣ್ಣಿನ ಕೊನೆಯಿಂದಲೇ ಗಮನಿಸಿದ ಗಂಡ ಏನೂ ಆಗೇ ಇಲ್ಲವೇನೋ ಎಂಬಂತೆ ತೀರ್ಥಸ್ವೀಕರಿಸಿ ಹೊರೆಟುಹೋದ. ಏಕೆಂದರೆ ಬೆಳಿಗ್ಗೆ ಪಾದಪೂಜೆ ಮಾಡುವಾಗ ಆತ ಐದುಸಾವಿರ ಕೊಟ್ಟಿದ್ದ. ತನ್ನಿಂದ ಈ ದಿನ ಮಠಕ್ಕೆ ಹತ್ತುಸಾವಿರ ಸಂದಾಯವಾಗಿದೆ ಸಾಕು ಎನ್ನುವುದು ಅವನ ಎಣಿಕೆಯಾಗಿತ್ತು. ಆದ್ದರಿಂದಲೇ ಈ ಫ಼್ಯೂಸ್ ಹೋದ ಮುಖಗಳನ್ನು ಅವನು ಕ್ಯಾರೇ ಎನ್ನಲಿಲ್ಲ!! ನಂತರದ ಸರದಿ ವಕೀಲೆ ಮತ್ತು ಅವಳ ಗಂಡನದು. ಅವರಿಬ್ಬರೂ ಸಾವಿರಸಾವಿರ ರೂಗಳ ನೋಟನ್ನು ಹಾಕಿ ತೀರ್ಥ ಪಡೆದರು. ನಂತರ ಸರದಿಯಲ್ಲಿದ್ದವರ ಕೈಯಲ್ಲಿ ನೂರು, ಐವತ್ತು, ಹತ್ತರ ನೋಟುಗಳೇ ಇರಲಾಗಿ ಮಹಾಸ್ವಾಮಿಗಳು ತೀರ್ಥಕೊಡುವ ಕ್ರಿಯೆಯನ್ನು ಫ಼ಾಸ್ಟ್‍ಫ಼ಾರ್ವರ್ಡ್ ಮಾಡಿ ವೇಗಗೊಳಿಸಿದರು.
ಮುಂದಿನ ಕಾರ್ಯಕ್ರಮವೇ ಪ್ರಸಾದ ಸ್ವೀಕರಣೆ! ಅಂದೇ ಬೆಳಿಗ್ಗೆ ಇದೇ ಭಕ್ತರೇ ತಂದಿದ್ದ ಹಣ್ಣು ಮತ್ತು ಒಡೆದ ತೆಂಗಿನಕಾಯಿಗಳನ್ನು ಮಂತ್ರಾಕ್ಷತೆ ಸಹಿತ ಕೊಡುವ ಕಾರ್ಯಕ್ರಮ. ಅದ್ಯಾರು ಈ ಮಹಾನ್ ಭರತಭೂಮಿಯಲ್ಲಿ ಸಮಾನತೆಯ ಮಂತ್ರ ಉಸುರಿದ್ದರೋ ಗೊತ್ತಿಲ್ಲ. ಅದಂತೂ ಈ ಮಹಾಸ್ವಾಮಿಯ ಕಿವಿಗಳಿಗೆ ಹಿಂದೆಯೂ, ಇಂದೂ, ಮುಂದೆಯೂ ಬೀಳುವುದು ಸಾಧ್ಯವೇ ಇರಲಿಲ್ಲ. ’ಕಾಸಿಗೆ ತಕ್ಕ ಕಜ್ಜಾಯ’ ಎನ್ನುವುದು ಈ ಮಠದಲ್ಲಿ ತಲತಲಾಂತರದಿಂದ ಪಠಿಸುತ್ತಿರುವ ಮಹಾಮಂತ್ರ! ಹತ್ತುಸಾವಿರ ಕೊಟ್ಟ ಧಡೂತಿದಂಪತಿಗಳಿಗೆ ದಪ್ಪ ತೆಂಗಿನಕಾಯಿಯ ಅರ್ಧಹೋಳು, ಅದರಲ್ಲಿ ಹೂವು ಮತ್ತು ಮಂತ್ರಾಕ್ಷತೆ, ಮತ್ತು ಒಂದೊಂದು ಸೇಬಿನ ಹಣ್ಣು! ಮತ್ತವರ ಹಿಂದೆ ಬಂದ ವಕೀಲೆ ಮತ್ತವಳ ಗಂಡನಿಗೆ ಒಂದೊಂದು ಮಾವಿನಹಣ್ಣು ಮಾತ್ರ! ಹಾಂ!! ಇಲ್ಲೊಂದು ಸ್ವಾರಸ್ಯಕರ ಘಟನೆಯೂ ನಡೆಯಿತು! ಈ ಎಂಟೆಕ್ ಪೆದ್ದನನ್ನು ಇಲ್ಲಿಗೆ ಕರೆತಂದದ್ದು ಅವನ ಗೆಳೆಯ ಮತ್ತು ಮಹಾಸ್ವಾಮಿಗಳ ಪರಿಚಿತನಾದ ಆಸಾಮಿ ಇದೇ ಸುಸಂಧಿಗಾಗಿ ಕಾಯುತ್ತಲಿದ್ದ. ಅವನು ಮೆಲ್ಲಗೆ ಮಹಾಸ್ವಾಮಿಗಳ ಹತ್ತಿರ ಬಂದು ತನ್ನ ಮೂಗಿನ ಕೆಳಗೆ ಅಂಗೈಯನ್ನು ಅಡ್ಡಹಿಡಿದು ( ಮಹಾಸ್ವಾಮಿಗಳಿಗೆ ತನ್ನಎಂಜಲು ಹಾರದಂತೆ) “ತಮ್ಮಲ್ಲಿ ಈತ ಒಂದು ಅರಿಕೆ ಮಾಡಿಕೊಳ್ಳುವುದಿದೆ” ಎಂದ. “ಏನು” ಎಂದರು. ಈ ಎಂಟೆಕ್ ಪೆದ್ದ ತನ್ನ ಕಂಪನಿಯ ಹೆಸರನ್ನು ಹೇಳಿ, ಅದರ ಯಜಮಾನ ತಮ್ಮ ಶಿಷ್ಯ ಎನ್ನುವುದನ್ನೂ ಹೇಳಿ ಆತನಿಂದ ತನಗೆ ಕಾನೂನು ಬಾಹಿರವಾದ ಕಿರುಕುಳವಾಗುತ್ತಿದೆ, ಆ ಕಾನೂನು ಏನೆಂದು ತನಗೆ ನಿಖರವಾಗಿ ತಿಳಿಯದು ತನ್ನ ಹೆಂಡತಿ ವಕೀಲೆಯಾದ್ದರಿಂದ ಅದರ ಬಗ್ಗೆ ಖಚಿತ ಮಾಹಿತಿ ನೀಡುತ್ತಾಳೆ ಎಂದ.
ಆ ವಕೀಲೆ ತನ್ನೆಲ್ಲ ಬುದ್ಧಿಶಕ್ತಿಯನ್ನೂ ಬಳಸಿ ಸಂಕ್ಷಿಪ್ತವಾಗಿ ಸಮಸ್ಯೆಯನ್ನು ವಿವರಿಸಲು ಪ್ರಾರಂಭ ಮಾಡಿದೊಡನೆಯೇ ಪಕ್ಕದಲ್ಲಿದ್ದ ಮಠದ ಶಿಷ್ಯ ” ಮಹಾಸ್ವಾಮಿಗಳು ಹೆಂಗಸರ ಮಾತನ್ನು ಕೇಳುವುದಿಲ್ಲ” ಎಂದಾಗ ವಕೀಲೆ ಅವಾಕ್ಕಾಗಿ ಹಿಂದೆ ಸರಿದಳು. ಅವಳು ಆಪಾದಮಸ್ತಕ ಅವಮಾನದಿಂದ ನಡುಗುತ್ತಿದ್ದಳು. ಆ ಕ್ಷಣಕ್ಕೆ ಹುಟ್ಟಿದ ಕೋಪದಿಂದ ತಹಬಂದಿಗೆ ತಂದುಕೊಳ್ಳುತ್ತಾ, ಗಂಡನೂ, ಗೆಳೆಯನೂ ಏನೇನೋ ಮಹಾಸ್ವಾಮಿಗಳ ಹತ್ತಿರ ಪಿಸುಪಿಸು ಆಡಿದ್ದಕ್ಕೆ ಸಾಕ್ಷಿಯಾದಳು ಅಷ್ಟೆ.
ತರುಣಿ ಇಂಜಿನಿಯರ್ ಮತ್ತವಳ ತಂಗಿ ತಮ್ಮ ಅತ್ತೆಯಾದ ವಕೀಲೆಯ ಮುಖದ ಮೇಲಿದ್ದ ಕೋಪ ಹತಾಶೆಗಳನ್ನು ಗಮನಿಸಿದರು. ವಕೀಲೆ ತನಗಾದ ಅವಮಾನವನ್ನು ಪಿಸುಮಾತಿನಲ್ಲಿ ವಿವರಿಸಿದಳು. ಈ ಯುವತಿಯರಿಗೂ ಬೆಳಗಿನಿಂದ ಹೆಣ್ಣಿನ ಬಗೆಗಿನ, ಭಕ್ತರ ಬಗೆಗಿನ ಬೇಧಭಾವವನ್ನು ಕಂಡು ಮನಸ್ಸು ಕುದಿಯುತ್ತಿತ್ತು. ” ನಾವು ಮೂರೂ ಜನರೂ ಈ ಮಠದ ಬಾಗಿಲಲ್ಲಿ ಕುಳಿತು ’ಈ ಸ್ವಾಮಿಗೆ ಧಿಕ್ಕಾರ’ಅಂತ ಕೂಗೋಣವಾ”? ಎಂದಳು ಚಿಕ್ಕವಳು. ಒಂದೆರಡು ಮಹಿಳಾ ಸಂಘಟನೆಗಳ ’ಧಿಕ್ಕಾರ’ ಕಾರ್ಯಕ್ರಮಕ್ಕೆ ಈ ವಕೀಲೆ ಅತ್ತೆಯೇ ಅವಳನ್ನು ಕರೆದುಕೊಂಡು ಹೋಗಿದ್ದಳು! ಮಹಿಳೆಯರ ಮೇಲೆ ಆಗುವ ಅನ್ಯಾಯಗಳನ್ನು ಸದಾ ಖಂಡಿಸುವ, ಅವರ ಸಹಾಯಾರ್ಥವಾಗಿ ಉಚಿತವಾಗಿ ಕಾನೂನಿನ ಕೆಲಸಗಳನ್ನು ಮಾಡಿಕೊಡುವ ಈ ಅತ್ತೆಯನ್ನೇ ಹೀಗೆ ಅವಮಾನಿಸಿದರೆಂದರೆ? ” ಇದು ಬೆಂಗಳೂರಲ್ಲ ಮಗು. ಸುಮ್ಮನಿರು ಬೆಂಗಳೂರಿಗೆ ಹೋಗಿ ಎಲ್ಲ ಪತ್ರಿಕೆಗಳ ವಾಚಕರವಾಣಿಗೆ ಈ ಮಠದ ಅನ್ಯಾಯದ ಬಗ್ಗೆ ಬರೆಯುತ್ತೇನೆ” ಎಂದು ಅತ್ತೆಯೇ ಅವಳನ್ನು ಸಮಾಧಾನವನ್ನು ಮಾಡಬೇಕಾಯಿತು.
ಮುಂದಿನದು ಊಟದ ಕಾರ್ಯಕ್ರಮ! ಮಠದ ಶಿಷ್ಯಧಾಂಡಿಗರಿಗೆ ಪ್ರಶಸ್ತವಾದ ಸ್ಥಳವೂ ವಿಶಾಲವಾದ ಕುಡಿಬಾಳೆ ಎಲೆಗಳೂ, ಈ ಭಕ್ತರಿಗೆ ಮುಳ್ಳುಗಳಂತೆ ಕಡ್ಡಿಚುಚ್ಚಿದ ಮುತ್ತುಗದ ಎಲೆಗಳು ಮತ್ತು ಊಟದಮನೆಯ ಒಂದು ಮೂಲೆಯ ಜಾಗವೂ ದೊರೆತು, ಬೇಧಭಾವವೆನ್ನುವುದು ಆ ಮಠದ ಮುಖ್ಯ ಆಚರಣೆಯಂತೆ ಮೆರೆಯಿತು. ಧಡೂತಿದಂಪತಿಗೆ ತುಂಬಾ ಅಸಮಾಧಾನವಾದುದಲ್ಲದೇ, ನೆಲದಮೇಲೆ ಕುಳಿತು ಎಲೆಯಲ್ಲಿ ಹರಿದೇ ಹೋಗುತ್ತಿದ್ದ ಸಾರು ಹುಳಿ ಮುಂತಾದ ವ್ಯಂಜನಗಳನ್ನು ಕಲೆಸಿ ತಿನ್ನಲು ಅವರ ದಪ್ಪ ಹೊಟ್ಟೆ ಅಡ್ಡಬಂದು ಚಡಪಡಿಸಿದರು. ಚೂಡೀದಾರಿಣಿಯರಾದ ಈ ಯುವತಿಯರು ಮೊಗಚುಗಾಲಲ್ಲಿ ಕುಳಿತು ತಿನ್ನಲಾರದೇ ತಿಂದ ಶಾಸ್ತ್ರ ಮಾಡಿ ಎದ್ದರು. ಮಠದ ಧಾಂಡಿಗರಿಗೋ ಸ್ವರ್ಗಸಮಾನ ಸುಖ ಭೋಜನವದು!! ಅವರಿಗೆಂದೇ ವಿಶೇಷವಾಗಿ ಬಡಿಸಲ್ಪಟ್ಟ ಭಕ್ಷ್ಯ ಭೋಜ್ಯಗಳೇನು? ತಿನ್ನುತ್ತಲೇ ಅವರು ಮಾಡಿದ ಗದ್ದಲಗಳೇನು? ತಮ್ಮಲ್ಲಿಯೇ ಇದ್ದ ಕಿರಿಯನೊಬ್ಬನನ್ನು ಯಾಗ್ ಮಾಡಿ ಅಳಿಸಿ, ಅರ್ಧ ಊಟಕ್ಕೇ ಅವನು ಎಲೆ ಬಿಟ್ಟೋಡುವಂತೆ ಮಾಡಿ ಅಟ್ಟಹಾಸ ಗೈದದ್ದೇನು? ಹೇಗೂ ಒಳ ಕೋಣೆಯಲ್ಲಿ ಮಹಾಸ್ವಾಮಿಗಳು ತಮ್ಮ ಖಾಸಗೀ ಭೋಜನಕ್ಕೂ, ವಿರಾಮಕ್ಕೂ ತೆರಳಿದ್ದರಷ್ಟೆ. ಅಂತೂ ಊಟಮುಗಿಸಿ ಏಳುವಷ್ಟರಲ್ಲಿ ಒಬ್ಬೊಬ್ಬರ ತಲೆಯಲ್ಲೂ ಒಂದೊಂದು ಭೂತ ಕುಣಿಯುತ್ತಿತ್ತು. ಭಕ್ತಾದಿಗಳಲ್ಲಿ ಅರೆಹೊಟ್ಟೆಯ ಭೂತವಾದರೆ ಮಠದ ಶಿಷ್ಯರಲ್ಲಿ ಹೊಟ್ಟೆತುಂಬಿ ಕಟ್ಟರೆಯಾದ ಭೂತ!!
ಮುಂದಿನ ಭಾಗವೇ ಅತ್ಯಂತ ಮುಖ್ಯವಾದ ಭಾಗ!! ಬೆಂಗಳೂರಿನಿಂದ ಬಂದಿದ್ದ ಈ ಭಕ್ತಗಣ ತಮ್ಮತಮ್ಮ ಸಮಾನುಗಳನ್ನು ಸಂಪಿಗೆ ಕಟ್ಟೆಯ ಮೇಲೆ ಜೋಡಿಸಿಕೊಂಡು ತಮ್ಮತಮ್ಮ ಕಾರುಗಳಿಗೆ ತೆರಳಬೇಕೆನ್ನುವಷ್ಟರಲ್ಲೇ ಮಹಾಸ್ವಾಮಿಯ ಶಿಷ್ಯನೊಬ್ಬ ದೊಡ್ಡಹರಿವಾಣದ ತುಂಬಾ ಚಿಕ್ಕಚಿಕ್ಕ ಹಿತ್ತಾಳೆ ಮುಸುರೆ ಮಾತ್ರೆಗಳನ್ನು ಪೇರಿಸಿತಂದು ಭಾವಿಕಟ್ಟೆಯ ಮೇಲಿಟ್ಟು, ಈ ಭಕ್ತಗಣದ ಹತ್ತಿರ ಬಂದು “ಮುತ್ತೈದೆಯರು ಮಹಾಸ್ವಾಮಿಗಳ ಖಾಸಗೀ ಭೋಜನದ ಮುಸುರೆ ಪಾತ್ರೆಗಳನ್ನು ತೊಳೆದುಕೊಡಿ” ಎಂದು ಆಜ್~ಝಾಪಿಸಿದ!! ನವತರುಣಿಯರು ಮುಖಮುಖ ನೋಡುತ್ತಾ ಕಿಸಿಕಿಸಿ ನಕ್ಕರು! ವಕೀಲೆ ಮೂತಿ ತಿರುಗಿಸಿದಳು!! ಧಡೂತಿ ಹೆಂಡತಿ ಮತ್ತು ವಕೀಲೆಯ ಗಂಡನ ಅಕ್ಕ ಮಠದ ಸಂಪ್ರದಾಯಗಳಲ್ಲಿ ಇನ್ನೂ ಅಷ್ಟೋ ಇಷ್ಟೋ ನಂಬಿಕೆಯಿದ್ದವರು ಭಾವಿಕಟ್ಟೆಯ ಕಡೆ ನಡೆದರು! ಊಟಕ್ಕೆ ಬಂದ ಸ್ಥಳೀಯ ನಿವಾಸಿಗಳು ಊಟವಾದ ತಕ್ಷಣ ಮಾಯವೇ ಆಗಿದ್ದರು! ಈ ಇಬ್ಬರು ಲಲನಾ ಮಣಿಯರಿಗೂ ಹಿತ್ತಾಳೆ ಪಾತ್ರೆ, ಹುಣಸೇಹಣ್ಣು, ತೆಂಗಿನ ನಾರು, ಮಣ್ಣಿನ ಹುಡಿ ಇವುಗಳ ಪರಿಚಯವೇ ಇರಲಿಲ್ಲ. ಬೆಂಗಳೂರಿನ ಸುಸಜ್ಜಿತ ಆಧುನಿಕ ಮನೆಗಳಲ್ಲಿ ಸಿಂಕ್ ಎನ್ನುವ ಕಟ್ಟೆಯ ಮೇಲೆ ಲಿಕ್ವಿಡ್ ಸೋಪುಗಳನ್ನು ಸ್ಪಂಜ್ ಎನ್ನುವ ಸಾಧನಗಳಿಂದ, ಮನೆಗೆಲಸದವಳು ಚಕ್ಕರ್ ಹಾಕಿದಾಗ ಒಂದೆರಡು ಸ್ಟೀಲ್ ಲೋಟಗಳನ್ನು ತೊಳೆದವರಿಗೆ ಈಗ ’ರಾಮರಾಮ ಇದು ಏನಪ್ಪಾ ಗಂಡಾಂತರ’ ಎನ್ನುವಂತಾಯಿತು!! ಧಡೂತಿಹೆಂಡತಿ ಅಷ್ಟರಲ್ಲೇ ಚಾಣಾಕ್ಷತನವನ್ನು ಮೆರೆದು ಬಿಟ್ಟರು!
ಭಾವಿಕಟ್ಟೆ ಒಂದೆರಡು ಅಡಿಗಳ ಎತ್ತರದಲ್ಲಿತ್ತು. ” ನಾನು ಕಟ್ಟೆಯ ಕೆಳಗೆ ನಿಂತೇ ಪಾತ್ರೆಗಳಿಗೆ ಹುಣಸೇಹಣ್ಣು ಹಚ್ಚಿಕೊಡುತ್ತೇನೆ ನೀವು ಉಜ್ಜಿ ತೊಳೆದುಬಿಡಿ” ಎಂದು ಸರಸರ ಹುಣಸೆಯನ್ನು ಹಚ್ಚಲು ಪ್ರಾರಂಭಿಸಿದರು. ನೋಡಲು ಚಿಕ್ಕದಾಗಿದ್ದ ಒಂದೊಂದು ಪಾತ್ರೆಯೂ ಕೆಜಿಗಟ್ಟಲೇ ಭಾರವಿತ್ತು. ಅವುಗಳಲ್ಲಿ ಒಂದೆರಡು ಬೆಳ್ಳಿ ಬಟ್ಟಲುಗಳೂ ಒಂದೆರಡು ಸೌಟುಗಳು ಬೆಳ್ಳಿಯದಾಗಿದ್ದು, ಕೆಜಿಗಟ್ಟಲೇ ತೂಗುವ ಅವು ತೊಳೆದೂ ತೊಳೆದೂ ಅಲ್ಯೂಮಿನಿಯಮ್ ಪಾತ್ರೆಯ ಬಣ್ಣಕ್ಕೆ ತಿರುಗಿದ್ದವು. ಧಡೂತಿಹೆಂಡತಿ ” ಇವೆಲ್ಲಾ ಹಿಂಡಾಲಿಯಮ್ ಅಂತ ಕಾಣತ್ತೆ” ಎಂದರು ಪೆದ್ದುಪೆದ್ದಾಗಿ! ಮಠದ ನೀತಿನಿಯಮಗಳನ್ನೂ ತಲತಲಾಂತರದಿಂದ ಬಂದ ಸಿರಿವಂತಿಕೆಯನ್ನೂ ಬಲ್ಲ ವಕೀಲೆಯ ಅತ್ತಿಗೆ ” ಹಿಂಡಾಲಿಯಮ್ ಬಳಸುವಂಥಾ ಬಡತನ ಮಠಕ್ಕೆಲ್ಲಿದೆ? ಅಲ್ಲದೇ ಹಿಂಡಾಲಿಯಮ್ ಮಡಿಗೆ ಬರಲ್ಲ. ಇವು ಯಾವುದೋ ಕಾಲದ ಬೆಳ್ಳಿಪಾತ್ರೆಗಳು. ತೊಳೆದೂ ತೊಳೆದೂ ಹೀಗಾಗಿವೆ” ಎಂದು ಸಮಜಾಯಿಸಿ ಕೊಟ್ಟರು. ಈಗ ಕುಕ್ಕರುಗಾಲಿನಲ್ಲಿ ಕೂತು ಪಾತ್ರೆ ಉಜ್ಜುವ ಶ್ರಮ ವಕೀಲೆಯ ಅತ್ತಿಗೆಯ ಪಾಲಾಯಿತು. “ಅತ್ತಿಗೆ ನಾನು ನೀರು ಸೇದಿ ನಲ್ಲಿಯಹಾಗೆ ಸುರಿಯುತ್ತೇನೆ ನೀವು ತೊಳೆಯಿರಿ” ಅತ್ತಿಗೆಯ ಕಷ್ಟ ನೋಡಲಾರದೇ ವಕೀಲೆಯೇ ಭಾವಿಯ ಕಡೆ ಧಾವಿಸಿದಳು. ಅರ್ಧಗಂಟೆಯಲ್ಲಿ ಮೂರೂಜನಕ್ಕೂ ಸೊಂಟ ಕುತ್ತಿಗೆ ಬೆನ್ನುಗಳು ’ಕುಯ್ಯೋಮರ್ರೋ’ ಎಂದವು. ಪಾತ್ರೆ ತೊಳೆದ ಋಣ ತೀರಿಸಿ ತಮ್ಮತಮ್ಮ ವಾಹನಗಳನ್ನೇರಿ ತಮ್ಮೂರಿನ ಮುಖಾವಲಂಬಿಗಳಾದರು!!
ಮಠದ ಹೊರಗಿನ ಸುದ್ದಿ!!!
ಎರಡೂ ವಾಹನಗಳು ಬೆಂಗಳೂರಿನ ಮಾರ್ಗದ ಹೆದ್ದಾರಿಯ ಸುಸಜ್ಜಿತ ಹೊಟೆಲ್ ಮುಂದೆ ವಿರಾಜಮಾನವಾಗಿದ್ದವು. ಯಾರಿಗೂ ಮಠದ ಊಟ ಹೊಟ್ಟೆ ತುಂಬಿಸಿರಲಿಲ್ಲವಾಗಿ ಹೊಟೆಲಿನ ರುಚಿರುಚಿಯಾದ ತಿನಿಸುಗಳು ಇವರ ಹೊಟ್ಟೆಯಲ್ಲಿ ದಾರಿಕಂಡುಕೊಳ್ಳುತ್ತಲಿದ್ದವು. ಹೊರಗೆ ಧಡೂತಿದಂಪತಿಯ ಡ್ರೈವರ್ ಯಾರೊಂದಿಗೋ ಫ಼ೋನಿನಲ್ಲಿ ಮಾತಾಡಿ ತನ್ನ ಜೊತೆಗೆ ಬಂದಿದ್ದ ಆಳನ್ನು ಕೇಳಿದ ” ಗೊತ್ತಾಯ್ತಾ ನಿಂಗೆ ಸುದ್ದಿ?” ಎಂದು ಅದೇ ತಾನೇ ತಾನು ಫ಼ೋನಿನಲ್ಲಿ ಕೇಳಿದ ತಾಜಾ ಸುದ್ದಿಯನ್ನು ಹೇಳಲು ತೊಡಗಿದ ” ಈಮಠದ ಸ್ವಾಮಿ ಅವ್ನಲ್ಲಾ ಈ ವಯ್ಯ ಬೆಂಗಳೂರಲ್ಲಿ ಅದೇನೋ ಬಿಕ್ಸೆ, ಪಾದಪೂಜೆ, ಪ್ರವಚನ ಅಂತ ಭಕ್ತರಿಂದ ಕಾಣಿಕೆ ತಕ್ಕೊಂಡು, ಕೋಟಿಕೋಟಿ ಸಂಪಾದ್ನೆ ಮಾಡಿ ಅದನ್ನ ಮಠದ ಹೆಸರಿನ ಬ್ಯಾಂಕ್ ಅಕೌಂಟ್‍ಗೆ ಕಟ್ಟದೇ ಅದ್ಯಾರೋ ಹುಡ್ಗಿ ಹೆಸರಿಗೆ ರವಾನಿಸಿ, ಈ ಮಠ ವಯಸ್ಸಾದ ಅಯ್ಯಗಳಿಗೆಲ್ಲಾ ಕಂಡಾಪಟ್ಟೆ ಸಿಟ್ಟ್ ಹತ್ತಿ ಅವರೆಲ್ಲಾ ಎಕ್ಕಾಮುಕ್ಕಾ ಈ ವಯ್ಯಂಗೆ ಥಳಿಸೀ ಈ ವಯ್ಯಂದು ಮುಂದಿನ ಎರಡು ಹಲ್ಲು ಮುರಿದೋಗೈತೆ ನೋಡ್ನಿಲ್ಲ್ವಾ ನೀನು? ಅದ್ಕೇ ಈಗ ಮಠದಲ್ಲಿ ಇಪ್ಪತ್ತೈದು ಹುಡುಗ್ರನ್ನ ಬಾಡಿಗಾರ್ಡಾಗಿ ಮಡೀಕೊಂಡವರಂತೆ” ಎನ್ನುವಲ್ಲಿಗೆ ಮಠದ ಪುರಾಣವು ಸಮಾಪ್ತಿಯಾದುದು.
ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ!!!
ಸತ್ಯಂ ಶಿವಂ ಸುಂದರಂ
 

‍ಲೇಖಕರು avadhi

6 August, 2013

9 Comments

  1. ವಿಶ್ವಾರಾಧ್ಯ ಸತ್ಯಂಪೇಟೆ

    ಶ್ರೀಮತಿ ಶಾಂತಾ ನಾಗರಾಜ ಅವರಿಗೆ
    ಹೃತ್ಪೂರ್ವಕ ನಮಸ್ಕಾರಗಳು,
    ‘ಮಠದೊಳಗೆ ಒಂದು ಸುತ್ತು’ ಆಸಕ್ತಿಯಿಂದ ಓದಿದೆ. ಬಹಳಷ್ಟು ಮಠಗಳನ್ನು ಹಾಗೂ ಆ ಮಠದೊಳಗಣ ಬಾವುಗಳನ್ನು ಹತ್ತಿರದಿಂದ ಕಂಡಿದ್ದರಿಂದ ನಿಮ್ಮ ಬರವಣಿಗೆಯಲ್ಲಿ ಎಲ್ಲೂ ಅತಿಶಯೋಕ್ತಿ ಎಂದು ನನಗೆ ಅನ್ನಿಸಲಿಲ್ಲ. ಇದೆಲ್ಲ ಸರಿ, ಇಂಥ ಅವಿವೇಕಿ, ಅವಿಚಾರಿ ಹಾಗೂ ದುರ್ಮಾಗಿಗಳಾಗಿರುವ ಮಠಾಧೀಶರೇ ಸಮಾಜಕ್ಕೆ ಬೆಳಕು ಕೊಡುವವರು ಎಂದು ಜನ ಸಾಮಾನ್ಯರು ನಂಬಿದ್ದಾರಲ್ಲ ! ಎಂದು ವ್ಯಥೆಯಾಗುತ್ತದೆ. ಇಂಥ ವಸ್ತು ನಿಷ್ಠವಾದ ಬರವಣಿಗೆ ಇಂದು ಬೇಕಾಗಿದೆ. ನಿಮಗೆ ಹಾಗೂ ಪ್ರಕಟಿಸಿದ ಅವಧಿಯ ಬಳಗಕ್ಕೆ ಧನ್ಯವಾದಗಳು.
    9480161315

  2. yashaswigulur

    ಮಠಗಳ ಒಳಗನ್ನು ಬಿಚ್ಚಿಡುವ ಧೈರ್ಯ ತೋರಿದ ಶಾಂತಾರವರಿಗೆ ಧನ್ಯವಾದಗಳು. ರಾಜ್ಯದ ಅನೇಕ ಪ್ರಖ್ಯಾತ ಮಠಗಳಲ್ಲಿ ನಡೆದ ಅಧಿಕಾರದ ಕಿತ್ತಾಟಗಳು ಅಸಹ್ಯಕರವಾಗಿವೆ.ಹಿಂದಿನ ರಾಜ್ಯ ಸರ್ಕಾರ ಮಠಗಳನ್ನು ಓಲೈಸಿ ಅಧಿಕಾರದ ಮೆಟ್ಟಲಾಗಿ ಬಳಸಿಕೊಂಡ ಮೇಲಂತೂ ಈ ಮಠಗಳ ಶಕ್ತಿಯ ಮೂಲವಾದ ಭಕ್ತ ಸಂದೋಹವನ್ನು ಎಚ್ಚರಗೊಳಿಸಬೇಕಾದ ತುರ್ತು ಒದಗಿದೆ.ರಾಜ್ಯದ ವಿವಿಧ ಧಾರ್ಮಿಕ ಪಂಥಗಳ ಮಠಗಳ ಬಗ್ಗೆ ಅವರವರ ಭಕ್ತಾದಿಗಳು ವಿವರವಾಗಿ ಬರೆದು ಬಯಲುಗೊಳಿಸುವ ಮೂಲಕ ಮಾತ್ರ ಈ ಡಂಭಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ.ಬಸವರಾಜ ಕಟ್ಟೀಮನಿಯವರು ನಡೆಸಿದ ಈ ಕೈಂಕರ್ಯ ಇತ್ತೀಚಿನ ದಶಕಗಳಲ್ಲಿ ನಿಂತೇ ಹೋದಂತಾಗಿದೆ.”ಸತ್ತವರ ನೆರಳಿ” ನಲ್ಲಿ ಬದುಕುವ ಇವರೆಲ್ಲರ ಹೂರಣವನ್ನು ಹೊರಗೆಳೆಯುವ ಈ ಕೈಂಕರ್ಯಕ್ಕೆ ಬಂಡಾಯ ಸಾಹಿತ್ಯದ ಉತ್ತುಂಗದ ದಿನಗಳಲ್ಲಿಯೂ ಚಾಲನೆ ದೊರೆಯಲಿಲ್ಲ. ಈಗಲಾದರೂ ಮರುಚಾಲನೆ ದೊರೆಯಬೇಕಾಗಿದೆ. ಆ ಮೂಲಕ ಮಠಗಳು ‘ಮಾಹಿತಿ ಹಕ್ಕಿ’ನ ಸಾಮಾಜಿಕ ( ಕಾನೂನಿನ ಅಲ್ಲ )ಅಧಿನಿಯಮಕ್ಕೆ ಒಳಗಾಗಬೇಕಿದೆ.

  3. jayateerth joshi

    Mrs Shantha Nagaraj has really unfolded the reality show going on in religious mutts. The suspense climax and anti climax going on in these mutts is no more a secret. People know the real facts but helpless because these mutts exercise heavy influences, secret politics and amass undocumented wealth. It is a sad story of the common people

  4. ಹನುಮಂತ ಹಾಲಿಗೇರಿ

    ಮಸ್ತ ಬರೆದಿರಲ್ರಿ ಮೇಡಂ. ಮಠದ ದರ್ಶನ ಮಾಡಿದಂಗಾತು. ಇಷ್ಟೊಂದು ಗಂಭೀರ ಬರಹವನ್ನು ಇಷ್ಟು ಲಘುವಾಗಿ ಬರಿತೀರಂಥ ಗೊತ್ತೆ ಇರಲಿಲ್ಲ.

  5. ರುದ್ರೇಶ ಕಿತ್ತೂರ ಮುದ್ದೇಬಿಹಾಳ

    ಲೇಖನ ತುಂಬಾ ಚೆನ್ನಾಗಿದೆ,ಅಭಿನಂದನೆಗಳು.
    ಇಂಥಹ ಮಠಗಳು ಪ್ರಾಚೀನ ಕಾಲದಿಂದಲೂ ಜನಸಾಮಾನ್ಯರ ಶೋಷಣೆಮಾಡುತ್ತ ಬಂದಿವೆ ,ಆದರೂ ನಮ್ಮ ಜನ ಎಚ್ಚೆತ್ತು ಕೊಳ್ಳುತ್ತಿಲ್ಲ ಅಂತೆಯೇ ಅಂಬಿಗರ ಚೌಡಯ್ಯನವರು ತಮ್ಮ ವಚನದಲ್ಲಿ ಇಂತಹ ಶಿಷ್ಯರಿಗೆ ಚಾಟಿ ಎಟು ನೀಡಿದಾಗ್ಯೂ ಜನಸಾಮಾನ್ಯರು ಎಚ್ಚೆತ್ತುಕೊಳ್ಳದಿರುವುದು ದುರಂತ,
    ಕಟ್ಟಿದ ಲಿಂಗವ ಕಿರಿದು ಮಾಡಿ
    ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡಾ !
    ಇಣತಪ್ಪ ಲೊಟ್ಟೆ ಮೂಳರ ಕಂಡರೆ
    ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
    ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ
    ಇಂತಹ ಶಿಷ್ಯರಿರುವ ವರೆಗೂ ಇಂತಹ ಮಠಗಳು ರಾಜಾರೋಷದಿಂದ ತಲೆಎತ್ತಿಮೆರೆಯುತ್ತವೆ,ಜನರಲ್ಲಿ ಡೊಂಗಿಮಠಗಳ ಬಗ್ಗೆ ಜಾಗ್ರುತಿ ಮೂಡಿಸಿದಕ್ಕೆ ದನ್ಯವಾದಗಳು.

  6. ವಿಶ್ವಾರಾಧ್ಯ ಸತ್ಯಂಪೇಟೆ

    ಮಠಗಳು ರಾಷ್ಟ್ರೀಕರಣಗೊಳ್ಳಬೇಕು. ಅಲ್ಲಿರುವ ಸಂಪತ್ತು ಜನ ಸಾಮಾನ್ಯರದು. ಜನ ಸಾಮಾನ್ಯರಿಗೆ ಅದು ಬಳಕೆಯಾಗಬೇಕು.ಮಠಗಳಲ್ಲಿರುವ ಪೀಠಾಧ್ಯಕ್ಷರುಗಳು ಜನ ಸಾಮಾನ್ಯನ ನೋವಿಗೆ ನಲಿವಿಗೆ ಸ್ಪಂದಿಸಬೇಕು . ಆದರೆ ಅಲ್ಲಿರುವವರೆಲ್ಲ ಬಾತುಕೊಂಡು ಕೊಬ್ಬಿಹೋಗಿದ್ದಾರೆ. ಕವಿ ಸಾಧಕರೆಲ್ಲ ಕಳವಳಿಸಿ ಕೆಟ್ಟರು. ವಿದ್ಯೆ ಸಾಧಕರೆಲ್ಲ ಬುದ್ಧಿ ಹೀನರಾದರು ಎಂಬಂತೆ ಇವರೆಲ್ಲ ವೇದವನ್ನು ಶಾಸ್ತ್ರವನ್ನು ಅಧ್ಯಯನ ಮಾಡಿದ್ದೇವೆ (?) ಎಂದೆಲ್ಲ ಹೇಳಿಕೊಂಡು ಗುಂಡಗಾಗಿದ್ದಾರೆ. ಲಜ್ಜೆಗೆಟ್ಟ ರಾಜಕಾರಣಿಗಳಂತೂ ಓಟಿಗಾಗಿ ಏನೆಲ್ಲವನ್ನೂ ಮಾಡುವವರಿರುವಾಗ ಅವರೆಲ್ಲ ಇಂಥ ಎಡಬಿಡಂಗಿ ಸ್ವಾಮಿಗಳ ಬೆನ್ನು ಬಿದ್ದಿದ್ದಾರೆ. ಜನ ಸಾಮಾನ್ಯ ಮಾತ್ರ ತನ್ನ ತಪ್ಪು ತಿಳುವಳಿಕೆಯಿಂದ ಈ ದೇಶದ ರಾಜಕಾರಣಿ ಹಾಗೂ ಮಠಾಧೀಶರು ದೇಶವನ್ನು ಕಾಯುವವರು ಎಂದು ತಪ್ಪು ತಿಳಿದುಕೊಂಡಿದ್ದರಿಂದ ಇರ್ವರ ನಡಾವಳಿಗಳು ಅವರಿಗೆ ಇಷ್ಟವಾಗುತ್ತಿವೆ. ಅಂತರಂಗ ಬಹಿರಂಗ ಶುದ್ಧಿಯಿಲ್ಲದ ಈ ಅವಿವೇಕಿಗಳ ಹಿಂದೆ ಬಿದ್ದ ಜನ ಸಾಮಾನ್ಯರನ್ನು ಪ್ರಜ್ಞಾವಂತ – ನಾಗರಿಕ ಸಮೂದಾಯವೇ ಕಾಪಾಡಬೇಕು. ಆದರೆ ಈ ಶಕ್ತಿ ನಮ್ಮ ಇಂದಿನ ನಾಗರಿಕರಲ್ಲಿ ಇದೆಯೆ ? ಎಂಬುದು ಪ್ರಶ್ನೆ. ಶ್ರೀಮತಿ ಶಾಂತಾ ನಾಗರಾಜರ ಬರಹ ಹೀಗೆಲ್ಲ ಯೋಚಿಸಲು ಕಾರಣವಾಯಿತು.

    • ಸುಹಾಸ ಭಜಂತ್ರಿ

      ತಮ್ಮ ಕಣ್ಣು ಮಠಗಳ ಸಂಪತ್ತಿನ ಮೇಲೆ! ದಯವಿಟ್ಟು ಜನರಿಗೆ ಮಠಗಳ ಹತ್ತಿರ ಸುಳಿಯದಿರುವಂತೆ ಮನವರಿಕೆ ಮಾಡಿ. ಜನ ಹೋಗುವುದು ನಿಂತರೆ ಮಠಗಳು ತಣ್ಣಗಾಗುತ್ತವೆ, ರಾಜಕಾರಣಿಗಳು ಮಠಗಳ ಓಲೈಕೆ ನಿಲ್ಲಿಸುತ್ತಾರೆ.

      • ವಿಶ್ವಾರಾಧ್ಯ ಸತ್ಯಂಪೇಟೆ

        ಕುಡಿತದಅಡ್ಡೆಗಳನ್ನು ಬ್ಯಾನ್ ಮಾಡಿರಿ ಎಂದರೆ ತಾವು ಕುಡಿಯುವವರನ್ನೇ ತಿದ್ದಿಕೊಳ್ಳುವಂತ ಹೇಳಿ ಎಂಬಂತಿದೆ ತಮ್ಮ ಮಾತು ! ಮತ- ಮಠ- ಮೌಢ್ಯ ನಮ್ಮಜನಗಳಿಗೆ ದೊಡ್ಡ ಅಮಲು ಬರಿಸುವ ಕೇಂದ್ರಗಳು ಮಾರಾಯ್ರೆ !!

  7. Ananda Prasad

    ಈ ಬರಹ ಉತ್ತಮವಾಗಿ ಮೂಡಿಬಂದಿದೆ. ಮಠಗಳ ಪ್ರಭಾವದಿಂದ ಜನಸಾಮಾನ್ಯರು ಹೊರಬರದ ಹೊರತು ಪ್ರಜಾಪ್ರಭುತ್ವ ಯಶಸ್ವಿಯಾಗಿ ನಡೆಯಲಾರದು. ಮಠಗಳ ಮಹಾಸ್ವಾಮಿಗಳು ಸಿಂಹಾಸನದಲ್ಲಿ ಕುಳಿತಿದ್ದರೆ ಅವರ ಮುಂದೆ ಮುಂದೆ ಜನರಿಂದ ಆಯ್ಕೆಯಾದ ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಇನ್ನಿತರ ರಾಜಕಾರಣಿಗಳು ನೆಲದಲ್ಲಿ ಕುಳಿತುಕೊಳ್ಳುವ ದೃಶ್ಯಗಳನ್ನು ನಮ್ಮ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡುತ್ತಾ ಅಥವಾ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾ ಊಳಿಗಮಾನ್ಯ ವ್ಯವಸ್ಥೆಯನ್ನು ಜೀವಂತವಾಗಿಡಲು ಶ್ರಮಿಸುತ್ತಿವೆ. ಇಂಥ ಊಳಿಗಮಾನ್ಯ ಸಂಸ್ಕೃತಿಯಿಂದ ಜನ ಹೊರಬರದ ಹೊರತು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭವಿಷ್ಯ ಇಲ್ಲ. ರಾಜ ಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದರೂ ನಮ್ಮ ಜನರ ಮಠಗಳ ಊಳಿಗ ನಡೆಸುವ ಪದ್ಧತಿ ತೊಲಗಲಿಲ್ಲ. ಇದು ತೊಲಗದೆ ನಮ್ಮ ದೇಶಕ್ಕೆ ಭವಿಷ್ಯ ಇಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading