ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂತ್ರ ಚಿಕಿತ್ಸೆ…

ಡಾ ಎಸ್‌ ಬಿ ರವಿಕುಮಾರ್

ನಾನು ಚಳ್ಳಕೆರೆಯ ದೊಡ್ಡ ಪ್ರಮಾಣದ ಕುರಿ ಸಾಕಾಣಿಕಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ಐವಿಆರ್‍ಐನಲ್ಲಿ (ಭಾರತೀಯ ಪಶುವೈದ್ಯಕೀಯ ಅನುಸಂಧಾನ ಸಂಸ್ಥೆ) ಡಾ. ಗಜೇಂದ್ರಗಡ್ ಕುರಿಗಳಲ್ಲಿನ ಸ್ಕ್ರೇಪಿ ಎನ್ನುವ ಕಾಯಿಲೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಸಂಶೋಧನೆಗಾಗಿ “ನಿಮ್ಮಲ್ಲಿ ಸತ್ತ ಕುರಿಗಳನ್ನು ಹೇಗೂ ಪೋಸ್ಟ್‌ ಮಾರ್ಟೆಂ ಮಾಡುತ್ತೀರಲ್ಲ, ಅವುಗಳ ಮೆದುಳನ್ನು ಸಂರಕ್ಷಿಸಿಟ್ಟು ಕೊಡಲು ಸಾಧ್ಯವೇ?” ಎಂದು ಕೇಳಿದ್ದರು. ನಾವು ಕಾಲೇಜಿನಲ್ಲಿ ಓದುತ್ತಿದ್ದಾಗ ಇವರು ಪೆಥಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದುದರಿಂದ ಮೊದಲೇ ಮುಖ ಪರಿಚಯವಿತ್ತು. ನಾನು ಸಂತೋಷದಿಂದಲೇ ನನ್ನದೇನೂ ಅಭ್ಯಂತರವಿಲ್ಲವೆಂದೂ, ಉಪನಿರ್ದೇಶಕರನ್ನು ಕಂಡು ನನಗೆ ಒಮ್ಮೆ ಸೂಚನೆ ಕೊಡಿಸಿಬಿಟ್ಟರೆ ಸಾಕು ನಾನು ಪೋಸ್ಟ್ ಮಾರ್ಟೆಂ ಮಾಡುವ ಪ್ರತಿ ಕುರಿಯ ಮೆದುಳನ್ನು ಸಂಗ್ರಹಿಸಿಟ್ಟು ನಿಮಗೆ ಸರಬರಾಜು ಮಾಡುತ್ತೇನೆಂದೂ ಹೇಳಿದ್ದೆ. ಡಾ. ಗಜೇಂದ್ರಗಡ್ ತಿಂಗಳಿಗೊಮ್ಮೆ ಬಂದು ಸಂಗ್ರಹವಾಗಿರುವ ಮೆದುಳುಗಳನ್ನು ತಮ್ಮ ಸಂಶೋಧನೆಗೆ ತೆಗೆದುಕೊಂಡು ಹೋಗುತ್ತಿದ್ದರು

ಅವರು ತಮ್ಮ ಪಿಎಚ್ಡಿಗಾಗಿ ಅಧ್ಯಯನ ಮಾಡುತ್ತಿದ್ದ ಸ್ಕ್ರೇಪೀ ಎನ್ನುವ ಕಾಯಿಲೆ  ಕುರಿಗಳ ನರಮಂಡಲವನ್ನು ಬಾಧಿಸುತ್ತಿತ್ತು. ಅನೇಕ ಕುರಿಗಳಲ್ಲಿ ಕಾಯಿಲೆಯಿದ್ದರೂ ಹೆಚ್ಚಿನ ವೇಳೆ ಯಾವುದೇ ಚಿನ್ಹೆಗಳನ್ನು ತೋರಿಸುತ್ತಿರಲಿಲ್ಲ., ಆದರೆ ಮೆದುಳುಗಳನ್ನು ಪರಿಶೀಲಿಸಿದಾಗ ಕಾಯಿಲೆ ಕಂಡುಬರುತ್ತಿತ್ತು. ಅನೇಕ ಮೆದುಳುಗಳನ್ನು ಪರಿಶೀಲಿಸಿದರೆ ಎಲ್ಲೋ ಒಂದರಲ್ಲಿ ಮಾತ್ರ ಕಂಡು ಬರುತ್ತಿದ್ದುದರಿಂದ, ಅವರಿಗೆ ಹೆಚ್ಚು ಹೆಚ್ಚು ಮೆದುಳುಗಳು ಬೇಕಾಗುತ್ತಿತ್ತು. ಒಮ್ಮೆ ಅವರು ಅವುಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಬೆಳಗಿನ ಒಂಬತ್ತು ಗಂಟೆಯ ಸುಮಾರಿಗೆ ಫಾರಮ್ಮಿನ ನನ್ನ ಕೊಠಡಿಯಲ್ಲಿ  ಮಾತನಾಡುತ್ತಾ ಕುಳಿತಿದ್ದೆವು. ನಾನಂತೂ ಈ ಕಾಯಿಲೆಯ ಕುರಿಯನ್ನು ನೋಡಿರಲಿಲ್ಲ. ನಮ್ಮ ಫಾರಮ್ಮಿನಲ್ಲಿಯೂ ಈ ರೋಗಹೊಂದಿರುವ ಕುರಿಗಳಿರಬಹುದೇ ಎಂಬ ಬಗ್ಗೆ ಚರ್ಚಿಸುತ್ತಿದ್ದಾಗ  ಒಮ್ಮೆಲೆ ಹೊರಗೆ  ಟ್ರಾಕ್ಟರ್  ಜೋರಾಗಿ ಹಾರ್ನ್ ಮಾಡಿಕೊಂಡು ಬರುವ ಶಬ್ದ ಕೇಳಿಸಿತು. ಹೊರಗೆ ಬಂದು ನೋಡಿದರೆ ಟ್ರಾಕ್ಟರ್ ಶರವೇಗದಲ್ಲಿ  ಧೂಳೆಬ್ಬಿಸಿಕೊಂಡು ಬರುತ್ತಿದೆ ! ಏನಿದು ಇಷ್ಟು ಸ್ಪೇಡಾಗಿ ಹಾರ್ನ್ ಮಾಡಿಕೊಂಡು ಯಾಕೆ ಬರುತ್ತಿದೆ ಎಂದು ಯೋಚಿಸುವಷ್ಟರಲ್ಲೇ ಬ್ರೇಕ್ ಹಾಕಿದ ರಭಸಕ್ಕೆ ಟೈರು ನೆಲ ಉಜ್ಜುವ ಶಬ್ದದೊಂದಿಗೆ ನಮ್ಮ ಕೊಠಡಿಯ ಎದುರೇ ಟ್ರ್ಯಾಕ್ಟರ್ ಇಂಜಿನ್ ನಿಂತಿತು. ನಾವು  ಕುತೂಹಲದಿಂದ ಎದ್ದು ಹೊರಗೆ ಬಂದೆವು. 

ಡ್ರೈವರ್ ಗುಂಡ ಕೆಳಕ್ಕೆ ಹಾರಿದವನೇ “ಸಾ ಗಡಾ ಬರ್ರಿ ಒಂದು ಗುಂಪಿನ ಕುರಿಗಳು ಯಾತರದೋ ಗಿಡಾ ತಿಂದು ವಿಷವೇರಿ ಒದ್ದಾಡ್ತದವೆ, ಆಗಲೇ ಮೂರು ಕುರಿ ಹೋಗೇಬಿಟ್ಟಾವೆ” ಎಂದು ಗಾಬರಿಯಿಂದ ಹೇಳಿದ. ಅನಿರೀಕ್ಷಿತವಾದ ಈ ಸುದ್ದಿ ಕೇಳಿ ಗಾಬರಿಯಾಯಿತು. ಒಂದು ಗುಂಪಿನಲ್ಲಿ ಸುಮಾರು ನೂರರಿಂದ ನೂರಿಪ್ಪತ್ತು ಕುರಿಗಳಿರುತ್ತಿದ್ದವು.  ಗುಂಪಿನಲ್ಲಿಯ ಎಷ್ಟು  ಕುರಿಗಳು ತಿಂದುಬಿಟ್ಟಿರಬಹುದು  ಎಷ್ಟು ಔಷದಿ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸುತ್ತ “ಎಷ್ಟು  ಒದ್ದಾಡುತ್ತಿವೆ?” ಆತಂಕದಿಂದ ಕೇಳಿದೆ. “ಇಪ್ಪತ್ತು ಇಪ್ಪತ್ತೈದು ಒದ್ದಾಡ್ತದಾವೆ ಸಾ. ಇನ್ನೂ ಎಷ್ಟು ತಿಂದವೋ ಏನು ಕತೆಯೋ ?” ಹತಾಶನಾಗಿ ಹೇಳಿದ.  ಒಳಗೆ ಬಂದವನೇ ಕೆಲವು ಗ್ಲೂಕೋಸು ಬಾಟಲಿಗಳನ್ನು ಡ್ರಿಪ್ ಸೆಟ್, ಇತ್ಯಾದಿ ತೆಗೆದುಕೊಳ್ಳುತ್ತಾ ಯಾವ ಗಿಡ ಅಥವಾ ಕಾಯಿ ತಿಂದು ಪಾಯಿಸನಿಂಗ್ ಆಗಿರಬಹುದು? ತಕ್ಷಣ ಸತ್ತಿವೆ ಎಂದರೆ ಕೆಲವು ಗಿಡಗಳಿಂದಾಗುವ  ಸಯನೈಡ್‌  ಪಾಯಿಸನಿಂಗ್ ಇರಬಹುದೇ?. ಹೊಲದಲ್ಲಿ ಬಾಡಿದ ಜೋಳದ ಗಿಡ ತಿಂದ ಜಾನುವಾರುಗಳು ನಾವು ಅಲ್ಲಿಗೆ ತಲುಪುವ ವೇಳೆಗೇ ಸತ್ತು ಬೀಳುವ ಅನೇಕ ಕೇಸುಗಳನ್ನು ನಾನು ನೋಡಿದ್ದು ನೆನಪಾಯಿತು ಆದರೆ ಫಾರಮ್ಮಿನಲ್ಲಿ ಸುಮಾರು ಎಂಟು ತಿಂಗಳಿನಿಂದ ಕೆಲಸ ಮಾಡುತ್ತಿದ್ದರೂ ಎಂದೂ ಈ ರೀತಿ ಆಗಿಲ್ಲ. ಹಾಗಾಗಿ ಇಲ್ಲಿ ನಿರ್ದಿಷ್ಟವಾಗಿ ಇಂಥ ಗಿಡ, ಕಾಯಿಗಳನ್ನು ತಿಂದರೆ ಈ ರೀತಿ ಸಯನೈಡ್‌  ಪಾಯಿಸನಿಂಗ್ ಆಗಬಹುದೆಂದು ನನಗೆ ಗೊತ್ತಿಲ್ಲ. ಅಷ್ಟು ಬೇಗನೇ ವಿಷವೇರಿ ಸಾಯುವುದು ಒಂದೋ ಹಾವುಕಡಿದು ಇಲ್ಲದಿದ್ದರೆ  ಪಾಯಸನಿಂಗೇ ಇರಬೇಕು. 20-30 ಮರಿಗಳಿಗೆ ಹಾವು ಕಡಿಯುವುದು ಸಾಧ್ಯವಿಲ್ಲದ ಮಾತು. ಅಷ್ಟು ಬೇಗ ಸತ್ತಿವೆ ಎಂದರೆ ಸಯನೈಡ್ ಪಾಯಸನಿಂಗೇ ಇರಬೇಕು. ತಿಂದ ತಕ್ಷಣ ಸಯನೈಡ್ ವಿಷವನ್ನು ಬಿಡುಗಡೆ ಮಾಡುವ ಸಯನೋಜೆನೆಟಿಕ್ ಗ್ಲೈಕೋಸೈಡ್ ಇಲ್ಲಿರುವ ಅಸಂಖ್ಯಾತ ಗಿಡಗಳಲ್ಲಿ, ಅವುಗಳ ಕಾಯಿಗಳಲ್ಲಿ ಇರಬಹುದು ಎಂಬ ಯೋಚನೆ ಬಂತು.     

ಈ ವಿಷಕ್ಕೆ ಪ್ರತಿ ಔಷಧ ಒಂದು ಪುಡಿಯ ರೂಪದಲ್ಲಿ ಬರುತ್ತಿತ್ತು. ಅದನ್ನು ಗ್ಲೂಕೋಸ್ ಅಥವಾ ನಾರ್ಮಲ್ ಸಲೈನಿಗೆ ಸೇರಿಸಿ ನೇರವಾಗಿ ರಕ್ತನಾಳಕ್ಕೆ ಕೊಡಬೇಕು. ಒಂದು ಗ್ಲೂಕೋಸು ಬಾಟಲಿ ಓಪನ್ ಮಾಡಿ ಅದರಲ್ಲೀ ಔಷಧಿ ಪುಡಿ ಹಾಕಿ ಡಾ. ಗಜೇಂದ್ರಗಡ ಅವರಿಗೆ “ಸಾರ್ ಮಿಕ್ಸ್ ಮಾಡುತ್ತಿರಿ” ಎಂದು ಕೊಟ್ಟು ಇನ್ಜೆಕ್ಷನ್ ಕೊಡಲು ಬೇಕಾದ ಉಳಿದ ಎಲ್ಲ ಪರಿಕರಗಳನ್ನೂ  ಬ್ಯಾಗಿಗೆ ಹಾಕಿಕೊಂಡು ಟ್ರಾಕ್ಟರ್ ಹತ್ತುವ ಮೊದಲು ಗ್ಲೂಕೋಸ್ ಬಾಟಲಿಗಾಗಿ ಕೈಚಾಚಿದೆ. ಆದರೆ  ಡಾ. ಗಜೇಂದ್ರಗಡ್  ಬಾಟಲಿಯನ್ನು ಕೊಡದೆ ತಾವೂ ಬರುವುದಾಗಿ  ಹೇಳಿ ಟ್ರಾಕ್ಟರ್ ಇಂಜಿನ್ ಮೇಲೆ ಹತ್ತಿ ಗ್ಲೂಕೋಸು ಬಾಟಲಿ ಅಲ್ಲಾಡಿಸುತ್ತ ಕುಳಿತರು. 

ಜೋಳದ ಗಿಡ ನಿಮಗೆಲ್ಲಾ ಗೊತ್ತು. ರುಚಿರುಚಿಯಾದ ರೊಟ್ಟಿಗೆ ಬೇಕಾದ ಜೋಳ ಕೊಡುವ ಈ ಗಿಡ ಸುಮಾರು ಎರಡೂವರೆ ಮೂರು ಅಡಿಯಷ್ಟು ಬೆಳೆದಿದ್ದಾಗ ನೀರಿನ ಅಭಾವದಿಂದ ಸ್ವಲ್ಪ ಬಾಡಿದ್ದರೆ, ಅಂಥ ಗಿಡವನ್ನು ತಿಂದಾಗ ಅದರಲ್ಲಿರುವ ಸಯನೋಜೆನೆಟಿಕ್‌ ಗ್ಲೈಕೋಸೈಡ್ ಹಸು ಎತ್ತುಗಳ ಹೊಟ್ಟೆಯಲ್ಲಿ ತಕ್ಷಣವೇ ಸಯನೈಡ್ ವಿಷ  ಬಿಡುಗಡೆಮಾಡುತ್ತದೆ. ಇನ್ನೂ ಗಿಡಗಳನ್ನು ತಿನ್ನುತ್ತಿರುವಾಗಲೇ ದನಗಳಿಗೆ  ಉಸಿರುಗಟ್ಟಿದಂತಾಗುತ್ತದೆ. ಹೆಚ್ಚಿನ ವೇಳೆ ಪಶುವೈದ್ಯರು ಸ್ಥಳಕ್ಕೆ ತಲುಪುವ ಹೊತ್ತಿಗೆ ಜಾನುವಾರುಗಳು ಸತ್ತೇ ಹೋಗಿರುತ್ತವೆ. ಬಾಯಲ್ಲಿ ಅರ್ಧ ತಿಂದಿರುವ ಜೋಳದ ದಂಟು ಹಾಗೇ ಇರುತ್ತದೆ. ಹಾಗೆ ನೋಡಿದರೆ ಅನೇಕ ಗಿಡಗಳಲ್ಲಿ ಈ ಸಯನೇಡ್ ವಿಷ ಬಿಡುಗಡೆ ಮಾಡುವ ಗ್ಲೈಕೋಸೈಡ್ ಇರುತ್ತದಾದರೂ ಅದು ಸಾಮಾನ್ಯವಾಗಿ ಪ್ರಾಣಾಂತಕವಾಗಿರುವುದಿಲ್ಲ. ಎಳೆಯ ಬಾಡಿದ ಜೋಳದ ಗಿಡ ತಿಂದು ಜಾನುವಾರುಗಳು ಸಾಯುವುದು ಸಾಮಾನ್ಯ. ಇದನ್ನು ಆಡುಭಾಷೆಯಲ್ಲಿ ರೈತರು “ಸೊಕ್ಕುವುದು” ಎಂದು ಕರೆಯುತ್ತಾರೆ. ಜೋಳ ಬೆಳೆದಂತೆಲ್ಲಾ ಇದರಲ್ಲಿನ  ಸಯನೈಡ್ ಬಿಡುಗಡೆ ಮಾಡುವ ಗ್ಲೈಕೋಸೈಡ್ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಪೋಲಿಸರು ಹಿಡಿದ ತಕ್ಷಣ ತಮ್ಮ ಕುತ್ತಿಗೆಯಲ್ಲಿ ತಾಯತದಂತೆ  ಕಟ್ಟಿಕೊಂಡಿದ್ದ ಕ್ಯಾಪ್ಸೂಲನ್ನು ಜಗಿದು, ಪೋಲಿಸರು ಬೇಡಿ ತೊಡಿಸುವಷ್ಟರಲ್ಲೇ ಹೆಣವಾಗಿಬಿಡಲು ಇದೇ ಸಯನೈಡ್ ವಿಷವನ್ನು ಎಲ್‍ಟಿಟಿಇ ಸದಸ್ಯರು ಉಪಯೋಗಿಸುತ್ತಾರೆ ಎಂದು ಓದಿದ್ದ ವಿಚಾರ ಮನದಲ್ಲಿ ಮೂಡಿಬಂತು. ಗುಂಡನನ್ನು  ಘಟನೆಯ ವಿವರ ಕೇಳಿದೆ.  

ಎಂದಿನಂತೆ  ರೊಪ್ಪಗಳಿಗೆ ಹಸಿರು ಹುಲ್ಲು ಹಾಕಿಕೊಂಡು ಹೋಗಿ ಟ್ರಾಕ್ಟರ್ ನಿಲ್ಲಿಸಿದ ಗುಂಡ ಮರದ ನೆರಳಿನಲ್ಲಿ ಬೀಡಿ ಸೇದುತ್ತ ಕುಳಿತಿದ್ದನಂತೆ. ಆ ರೊಪ್ಪಕ್ಕೆ ಬೇಕಾದಷ್ಟು ಹುಲ್ಲನ್ನು ಕೂಲಿಕಾರನೊಬ್ಬ ಇಳಿಸುತ್ತಿದ್ದನಂತೆ. ದೂರದಲ್ಲಿ ಮರದ ಕೆಳಗೆ ಕುರಿಗಳು ಮೇಯುತ್ತಿದ್ದವು. ಒಮ್ಮೆಲೇ ಕುರಿ ಮೇಯಿಸುತ್ತಿದ್ದ ರಂಗಣ್ಣ ಕೈ ಮಾಡಿ ಗಾಬರಿಯಿಂದ ಕೂಗಿ ಕರೆದನಂತೆ. ಹೋಗಿ ನೋಡಿದಾಗ ಅನೇಕ ಕುರಿಗಳು ಒದ್ದಾಡುತ್ತಿವೆ. ಒಂದು ಕುರಿ ಸತ್ತಿದೆ. ನೋಡ ನೋಡುತ್ತಿದ್ದಂತೆಯೇ ಮತ್ತೆರಡು ಕುರಿಗಳು ಪ್ರಾಣಬಿಟ್ಟಿವೆ. ಗಾಬರಿಗೊಂಡ ಗುಂಡ ಓಡಿಬಂದು  ಹಸಿ ಹುಲ್ಲು ತುಂಬಿದ್ದ ಟ್ರಾಲಿಯನ್ನು ಕಳಚಿದವನೇ ಇಂಜಿನನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಿಸಿಕೊಂಡು ಬಂದಿದ್ದ. ಎಲ್ಲ ವಿವರಿಸಿ “ಎಂತದೋ ಭಾಳ ವಿಷ ಇದ್ದಂಗೆ ಐತೆ ಸ್ವಾಮಿ. ಮೂರು ಸತ್ತೇ ಹೋಗಿದಾವೆ. ಇನ್ನೂ ಎಷ್ಟು ಮರಿಗಳು ತಿಂದುಬಿಟ್ಟಾವೋ ಈಗೆಷ್ಟು ಹೋಗಿದಾವೋ ಏನೋ “ ದುಃಖ, ಆತಂಕದಿಂದ  ನಿಟ್ಟುಸಿರಿಟ್ಟ. 

ಜಾಗವನ್ನು ತಲುಪಿದಾಗ ಸುಮಾರು ಇಪ್ಪತ್ತ-ಇಪ್ಪತ್ತೆಂಟು ಕುರಿಗಳು ಒದ್ದಾಡುತ್ತಿವೆ. ಆಗಲೇ ನಾಲ್ಕು ಕುರಿಗಳು ಸತ್ತಿವೆ. ಔಷಧಿ ಕರಗಿಸಿದ್ದ ಗ್ಲೂಕೋಸು ಬಾಟಲಿಗೆ ಗಾಳಿ ಹೋಗಲು ಒಂದು ಸೂಜಿ ಹಾಕಿ,  ಸಿರಿಂಜಿನಲ್ಲಿ ಔಷಧಿ ಡ್ರಾ ಮಾಡಿ  ಡಾ. ಗಜೇಂದ್ರಗಡ್ ಕೈಗೆ ಕೊಟ್ಟೆ. ನಾನೊಂದು ಸಿರಿಂಜಿನಲ್ಲಿ ಡ್ರಾ ಮಾಡಿಕೊಂಡು ಸೂಜಿ ಹಾಕಿದ ಬಾಟಲಿಯನ್ನು ಹಾಗೂ ಉಳಿದ ನಾಲ್ಕೈದು ಸಿರಿಂಜ್‍ಗಳನ್ನು ಗುಂಡನ ಕೈಗೆ ಕೊಡುತ್ತಾ “ ಬೇಗ ಬೇಗ ಡ್ರಾ ಮಾಡಿಕೊಡು” ಎಂದು ಹೇಳಿ ಹುಲ್ಲು ಇಳಿಸುತ್ತಿದ್ದ ಕೂಲಿಯವನಿಗೆ  ಹಾಗೂ ರಂಗನಿಗೆ  ಕುರಿಗಳನ್ನು ಅಲ್ಲಾಡದಂತೆ ಹಿಡಿದುಕೊಳ್ಳಲು ಸೂಚಿಸಿ ನಾನೂ ಮತ್ತು ಡಾ. ಗಜೇಂದ್ರಗಡ್  ರಕ್ತನಾಳಕ್ಕೆ ಔಷಧಿ ಕೊಡಲಾರಂಭಿಸಿದೆವು. ಸಿರಿಂಜ್ ಖಾಲಿಯಾಗುತ್ತಿದ್ದಂತೆಯೇ ತುಂಬಿದ ಮತ್ತೊಂದನ್ನು ಗುಂಡ ಕೊಡುತ್ತಿದ್ದ. ನಮ್ಮಲ್ಲಿ ಕೆಲಸ ಮಾಡುವವರೆಲ್ಲ ಕುರಿಗಳನ್ನು ಹಿಡಿದು ನಿಯಂತ್ರಿಸುವುದರಲ್ಲಿ ಚಾಣಾಕ್ಷರು. ಕ್ಷಣ ಮಾತ್ರದಲ್ಲಿ ಕುರಿಯನ್ನು ಕೆಳಗೆ ಮಲಗಿಸಿ ಮಿಸುಗದಂತೆ ಒತ್ತಿ ಹಿಡಿಯುತ್ತಿದ್ದರು. ಹಾಗಾಗಿ ಒಂದು ಕುರಿಗೆ ಇನ್ಜೆಕ್ಷನ್‌ ಕೊಟ್ಟು ಗುಂಡನಿಗೆ ಖಾಲಿ ಸಿರಿಂಜ್‌ ಕೊಟ್ಟು ತುಂಬಿದ ಸಿರಿಂಜ್‌ ಕೈಗೆ ತೆಗೆದುಕೊಳ್ಳುವದರಲ್ಲಿ ಇನ್ನೊಂದು ಕುರಿ ಸಿದ್ಧವಾಗಿರುತ್ತಿತ್ತು.   ಒಂದೆರಡು ನಿಮಿಷಗಳಲ್ಲೇ   ಒದ್ದಾಡುತ್ತಿದ್ದ ಎಲ್ಲ ಕುರಿಗಳಿಗೂ ಚುಚ್ಚುಮದ್ದು ಕೊಟ್ಟೆವು. ಕೇವಲ ಸಂಶೋಧನೆಯಲ್ಲಿ ತೊಡಗಿರುವ, ಫೀಲ್ಡಿನಲ್ಲಿ ಕೆಲಸ ಮಾಡಿರದಿದ್ದ ಡಾ. ಗಜೇಂದ್ರಗಡ್ ಪ್ರಯತ್ನಪಟ್ಟು ರಕ್ತನಾಳಕ್ಕೆ ಔಷದಿ ಕೊಡುತ್ತಿದ್ದರು.  ಬಾಧೆಗೊಳಗಾಗಿರುವ  ಕುರಿಗಳು ಇನ್ನು ಯಾವುದೂ ಉಳಿದಿಲ್ಲ ಎಂದು ಖಾತ್ರಿಪಡಿಸಿಕೊಂಡು ನಿಟ್ಟುಸಿರುಬಿಡುತ್ತ ಇನ್‍ಜೆಕ್ಷನ್ ಕೊಟ್ಟಿರುವ ಕುರಿಗಳ ಕಡೆ ಗಮನ ಹರಿಸಿದೆ.

ಅವುಗಳಲ್ಲಿ ಒಂದು ಸತ್ತು ಹೋಗಿದೆ. ಇನ್ಜೆಕ್ಷನ್‌ಕೊಟ್ಟಿರುವ  ಕೆಲವು ಕುರಿಗಳು  ಆಗಲೇ ಎದ್ದು ಕುಳಿತುಕೊಳ್ಳಲು ಪ್ರಯತ್ನಿಸುತ್ತಿವೆ !  ಸಯನೋಜೆನೆಟಿಕ್ ಗ್ಲೈಕೋಸೈಡ್ ಇರುವ ಕಾಯಿಯನ್ನೋ ಎಲೆಗಳನ್ನೋ ತಿಂದಿರಬಹುದೆಂಬ ನಮ್ಮ ಊಹೆ ನಿಜವಾಗಿತ್ತು. ಸಯನೈಡ್ ಪಾಯಸನಿಂಗ್‍ನಲ್ಲಿ ಮಾತ್ರವೇ ಈ ಪರಿ ನಾಟಕೀಯ ಫಲಿತಾಂಶ ಕಾಣಲು ಸಾಧ್ಯ.  ಮತ್ತೆ ಕೆಲವೇ ಕ್ಷಣಗಳಲ್ಲಿ  ಮಂತ್ರ ಮಾಡಿದಂತೆ ಎಲ್ಲ ಕುರಿಗಳೂ ಎದ್ದು ನಿಂತು  ಆಚೆ ಈಚೆ ನೋಡುತ್ತ ಮೇವು ಹುಡುಕಲಾರಂಭಿಸಿದವು !  ಡಾ. ಗಜೇಂದ್ರಗಡ್ ವಿಷವೇರಿ ಒದ್ದಾಡುತ್ತಿದ್ದ ಕುರಿಗಳು ತಾವೇ ಕೈಯಾರೆ ನೀಡಿದ ಚಿಕಿತ್ಸೆಯ ಪರಿಣಾಮದಿಂದ ಕೆಲವೇ ಕ್ಷಣಗಳಲ್ಲಿ  ಎದ್ದು ನಡೆಯುವಂತಾಗಿದ್ದನ್ನು ಕಂಡು ಪುಳಕಗೊಂಡಿದ್ದರು.  ಯಶಸ್ವಿಯಾಗಿ ಕುರಿಗಳಿಗೆ ಚಿಕಿತ್ಸೆ ಕೊಟ್ಟ ಸಂಭ್ರಮ ಅವರಲ್ಲಿ ಮನೆ ಮಾಡಿತ್ತು.  ನನಗೂ ಚಿಕಿತ್ಸೆ ಫಲಕಾರಿಯಾಗಿದ್ದು ಸಮಾಧಾನ   ತಂದಿತು. 

ಕುರಿಗಳು ಮೇಯುತ್ತಿದ್ದ ಜಾಗದಲ್ಲಿದ್ದ ಮರದ ಕೆಲವು ಕಾಯಿಗಳನ್ನು ತೆಗೆದುಕೊಂಡು  ಸಾಧ್ಯವಾದರೆ ಬೆಂಗಳೂರಿನಲ್ಲಿ  ವಿಷದ ಅಂಶದ ಬಗ್ಗೆ ಪರಿಶೀಲಿಸಲು ಕೋರಿಕೊಂಡೆ.    ಗುಂಡ ಅನೇಕ ವರ್ಷಗಳಿಂದ  ಈ ಫಾರಮ್ಮಿನಲ್ಲಿ ಕೆಲಸ ಮಾಡುತ್ತಿದ್ದ. ಆದರೆ   ಅವನು ಎಂದೂ ತೀರಾ ಇಂಥಹ ‘ಇನ್ಜೆಕ್ಷನ್ ಕೊಟ್ಟತಕ್ಷಣ ಎದ್ದುನಿಂತುಬಿಡುವ’ ಪವಾಡಸದೃಶ ಚಿಕಿತ್ಸೆ ನೋಡಿರಲಿಲ್ಲ.  ‘ಕೇವಲ ಸಯನೈಡ್‌  ವಿಷದ ಕೇಸುಗಳಲ್ಲಿ ಮಾತ್ರ ಈ ತರಹದ ನಾಟಕೀಯ ಫಲಿತಾಂಶ ಬರುತ್ತದೆ’ ಎನ್ನುವ ವಿವರಣೆಯನ್ನು  ನಾನು ಎಷ್ಟೇ ಹೇಳಿದರೂ  ಅವನು ಲಕ್ಷ್ಯಕ್ಕೆ ತೆಗೆದುಕೊಂಡಂತೆ ಕಾಣಲಿಲ್ಲ.   “ಕುರಿಗಳು ಉಳಿಯಲು ನೀನು ಶರವೇಗದಲ್ಲಿ ಟ್ರ್ಯಾಕ್ಟರ್ ಓಡಿಸಿಕೊಂಡು ಬಂದದ್ದೇ ಕಾರಣ. ಇನ್ನು ಸ್ವಲ್ಪ ಹೊತ್ತಾಗಿದ್ದರೆ ನಮ್ಮ ಚಿಕಿತ್ಸೆ ಪರಿಣಾಮಕಾರಿಯಾಗುತ್ತಿರಲಿಲ್ಲ” ಎಂದುದನ್ನು ಕೇಳಿದ ಗುಂಡ ಆನಂದದಿಂದ ಉಬ್ಬಿಹೋದ.  

ಆ ದಿನ ಪ್ರವಾಸದಲ್ಲಿದ್ದ ಉಪನಿರ್ದೇಕರು ಮರುದಿನ  ವಿಚಾರ ತಿಳಿದು ಸುದ್ದಿ ಬಂದ ತಕ್ಷಣ ಸೂಕ್ತ  ಚಿಕಿತ್ಸೆ ನೀಡಿ ಅನೇಕ ಕುರಿಗಳನ್ನು ಉಳಿಸಿದ ನಮ್ಮನ್ನು ಅಭಿನಂದಿಸಿದ್ದು  ನನ್ನ ಫಾರಂ ಜೀವನದ ಅನೇಕ ಮಧುರ ಕ್ಷಣಗಳಲ್ಲೊಂದು. ಗುಂಡನಂತೂ ಅಂದಿನಿಂದ  ನನ್ನ ಫ್ಯಾನ್ ಆಗಿಬಿಟ್ಟ. ‘ಡಾಕ್ಟರು ಅಂದ್ರೆ ರವಿಕುಮಾರ್ ʼ ಎಂದು ಎಲ್ಲರ ಬಳಿ ಹೇಳಿಕೊಂಡು ತಿರುಗಾಡುತ್ತಿದ್ದನಂತೆ !  

‍ಲೇಖಕರು Admin

6 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading