ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ನ ಕಥೆ – ಸೇಡಿನ ಸರಪಳಿ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

13

ಲೋರಿಸ್-ಮೆಲಿಕೋವ್‍ ದಿವಾನಖಾನೆಗೆ ಬಂದಾಗ ಹಾಜಿ ಮುರಾದ್‍ ಸಂತೋಷ ತುಂಬಿದ ಮುಖದಿಂದ ಅವನನ್ನು ಸ್ವಾಗತಿಸಿದ.

‘ಮುಂದಕ್ಕೆ ಹೇಳಲಾ?’ ದಿವಾನ್ ಮೇಲೆ ಆರಾಮವಾಗಿ ಕೂರುತ್ತ ಕೇಳಿದ.

‘ಖಂಡಿತ. ನಿನ್ನ ಹಿಂಬಾಲಕರ ಜೊತೆ ಮಾತಾಡತಿದ್ದೆ. ಅವರಲ್ಲಿ ಒಬ್ಬನು ಭಾರೀ ಖುಷೀ ಮನುಷ್ಯ!’ ಅಂದ ಲೋರಿಸ್-ಮೆಲಿಕೋವ್‍. 

‘ಹೌದು, ಖಾನ್ ಮಹೋಮ ಚಲ್ಲಾಟದವನು,’ ಅಂದ ಹಾಜಿಮುರಾದ್. 

‘ನೋಡೋದಕ್ಕೆ ತುಂಬ ಚೆನ್ನಾಗಿದನಾಲ್ಲಾ ಅವನು ನನಗೆ ಇಷ್ಟವಾದ.’

‘ಹ್ಞಾ, ಅವನು ಎಲ್ದಾರ್. ಚಿಕ್ಕವನು, ಮನಸೂ ಗಟ್ಟಿ, ಮೈಯೂ ಕಬ್ಬಿಣದ ಮೈ!’

ಸ್ವಲ್ಪ ಹೊತ್ತು ಸುಮ್ಮನಿದ್ದರು. 

‘ಮುಂದುವರೆಸಲಾ?’

‘ಹ್ಞೂಂ, ಹ್ಞೂಂ!’

‘ಖಾನ್‍ಗಳಗಳ ಕೊಲೆ ಆಯಿತು ಅಂತ ಹೇಳಿದೆ…ಸರಿ, ಅವರನ್ನು ಕೊಂದ ಹಮ್ಜಾದ್‍ ಕುದುರೆ ಏರಿ ಖುನ್‍ಝಾಕ್‍ಗೆ ಬಂದು ಖಾನ್‍ಗಳ ಅರಮನೆಯಲ್ಲಿ ಉಳಿದ. ಖಾನ್ ಕುಟುಂಬದವಳು ಅಂತ ಜೀವಂತ ಉಳಿದದ್ದು ಖಾನ್‍ಶಾ ಒಬ್ಬಳೇ. ಹಮ್ಜಾದ್‍ ಅವಳಿಗೆ ಹೇಳಿಕಳಿಸಿದ. ಅವಳು ಅವನನ್ನು ಬೈಯುತ್ತಿದ್ದಳು. ಅವನು ತನ್ನ ಮುರೀದ್ ಎಲ್ದಾರನಿಗೆ ಕಣ್ಸನ್ನೆ ಮಾಡಿದ. ಎಲ್ದಾರ್ ಹಿಂದಿನಿಂದ ಅವಳನ್ನು ಹೊಡೆದು ಕೊಂದ. 

‘ಅವಳನ್ನ ಕೊಂದದ್ದು ಯಾಕೆ?’ ಲೋರಿಸ್-ಮೆಲಿಕೋವ್‍ಕೇಳಿದ.

‘ಮತ್ತೇನು ಮಾಡುತ್ತಾನೆ?… ಮುಂದಿನ ಕಾಲು ಎಲ್ಲಿಗೆ ಹೋದವೋ ಹಿಂದಿನ ಕಾಲೂ ಅಲ್ಲಿಗೇ ಹೋಗಬೇಕು! ಅವನು ಇಡೀ ಕುಟುಂಬವನ್ನ ಕೊಂದ. ಕಿರಿಯ ಮಗನನ್ನು ಬೆಟ್ಟದ ಮೇಲಿಂದ ಎಸೆದು ಶಮೀಲ್‍ ಕೊಂದ—ಆಮೇಲೆ ಇಡೀ ಅವರಿಯಾ ಹಮ್ಜಾದ್‍ನಿಗೆ ಶರಣಾಯಿತು ನನ್ನ ತಮ್ಮ ಮತ್ತೆ ನಾನು ಶರಣಾಗಲಿಲ್ಲ. ಖಾನ್‍ಗಳಗಳ ರಕ್ತಕ್ಕೆ ಪ್ರತಿಯಾಗಿ ಅವರನ್ನು ಕೊಂದವರ ರಕ್ತ ಹರಿಸಬೇಕಾಗಿತ್ತು. ಸೋಲೊಪ್ಪಿದ ಹಾಗೆ ನಟನೆ ಮಾಡಿದೆವು. ನಮ್ಮ ಯೋಚನೆ ಮಾತ್ರ ಒಂದೇ—ಅವರ ರಕ್ತ ಹೀರುವುದು ಹೇಗೆ? ನಮ್ಮ ತಾತನನ್ನು ಕೇಳಿದೆವು. ಹಮ್ಜಾದ್ ಅರಮನೆಯಿಂದ ಹೊರಕ್ಕೆ ಬರುವ ಸಮಯಕ್ಕೆ ಕಾದಿದ್ದು ಅವನನ್ನು ಮುಗಿಸಬೇಕು ಅಂದುಕೊಂಡೆವು. ಯಾರೋ ನಮ್ಮ ಮಾತು ಕೇಳಿಸಿಕೊಂಡು  ಹಮ್ಜಾದ್‍ಗೆ ಹೇಳಿದರು. ಅವನು ನಮ್ಮ ತಾತನ್ನು ಕರೆಸಿ, ‘ಹುಷಾರು. ನಿನ್ನ ಮೊಮ್ಮಕ್ಕಳು ನನಗೆ ಕೆಟ್ಟದ್ದು ಮಾಡಲು ನೋಡಿದರೆ ನಿನ್ನನ್ನೂ ಅವರನ್ನೂ ಒಂದೇ ಕಂಬಕ್ಕೆ ಗಲ್ಲಿಗೇರಿಸುತ್ತೇನೆ. ನಾನು ದೇವರ ಕೆಲಸ ಮಾಡುವವನು. ನನಗೆ ಯಾವ ಅಡ್ಡಿಯೂ ಇರುವುದಿಲ್ಲ. ನಾನು ಹೇಳಿದ್ದು ನೆನಪಿರಲಿ, ಹೋಗು!’ ಅಂದ. ನಮ್ಮ ತಾತ ಮನೆಗೆ ಬಂದು ಅದನ್ನು ಹೇಳಿದ. ಕಾಯುವುದು ಬೇಡ, ಹಬ್ಬದ ಮೊದಲ ದಿನವೇ ಮಸೀದಿಯಲ್ಲಿ ಕೆಲಸ ಮುಗಿಸೋಣ ಅಂತ ತೀರ್ಮಾನ ಮಾಡಿದೆವು. ನಮ್ಮ ಗೆಳೆಯರು ಒಪ್ಪಲಿಲ್ಲ. ಅಣ್ಣ ಮತ್ತೆ ನಾನು ಗಟ್ಟಿ ಮನಸ್ಸು ಮಾಡಿದ್ದೆವು. 

‘ಇಬ್ಬರೂ ಒಂದೊಂದು ಪಿಸ್ತೂಲು ತೆಗೆದುಕೊಂಡವು, ನಮ್ಮ ಬುರ್ಖಾ ತೊಟ್ಟೆವು, ಮಸೀದಿಗೆ ಹೋದೆವು.  ಹಮ್ಜಾದ್‍ ಮೂವತ್ತು ಜನ ಮುರೀದ್‍ರ ಜೊತೆಯಲ್ಲಿ ಮಸೀದಿಗೆ ಬಂದ. ಎಲ್ಲರೂ ಕತ್ತಿ ಹಿರಿದಿದ್ದರು. ಅವನ ಪ್ರಿಯ ಮುರೀದ್ ಎಲ್ದಾರ್, (ಅದೇ, ಖಾನ್‍ಶಾಳ ತಲೆ ತೆಗೆದಿದ್ದವನು) ನಮ್ಮನ್ನು ನೋಡಿದ, ‘ನಿಮ್ಮ ಬುರ್ಖಾ ತೆಗೆಯಿರಿ,’ ಎಂದು ಚೀರಿದ. ನನ್ನತ್ತ ಬಂದ. ನನ್ನ ಕೈಯಲ್ಲಿ ಕಠಾರಿ ಇತ್ತು. ಅವನನ್ನು ಕೊಂದೆ, ಹಮ್ಜಾದ್‍ನತ್ತ ಓಡಿದೆ. ನಮ್ಮಣ್ಣ ಉಸ್ಮಾನ್‍ ಆಗಲೇ ಅವನ ಮೇಲೆ ಗುಂಡು ಹಾರಿಸಿದ್ದ. ಅವನಿಗಿನ್ನೂ ಜೀವ ಇತ್ತು. ಕಠಾರಿ ಹಿಡಿದು ನಮ್ಮಣ್ಣನ ಮೇಲೆ ಏರಿ ಹೋದ. ನಾನು ಅವನ ತಲೆಗೆ ಹೊಡೆದು ಕಥೆ ಮುಗಿಸಿದೆ. ಮೂವತ್ತು ಜನ ಮುರೀದ್‍ಗಳಿದ್ದರು. ನಾವು ಇಬ್ಬರೆ. ಅವರು ನಮ್ಮಣ್ಣ ಉಸ್ಮಾನ್‍ನನ್ನು ಕೊಂದರು. ನಾನು ಹೋರಾಡುತ್ತ ಕಿಟಕಿಯಿಂದ ಹಾರಿ ತಪ್ಪಿಸಿಕೊಂಡೆ.  ಹಮ್ಜಾದ್‍ನ ಕೊಲೆಯಾಯಿತು ಎಂದು ತಿಳಿದ ಜನ ದಂಗೆ ಎದ್ದರು. ಮುರೀದ್‍ಗಳು ಓಡಿ ಹೋದರು. ಓಡಿ ಹೋಗುವುದಕ್ಕೆ ಆಗದಿದ್ದವರು ಪ್ರಾಣ ಕೊಟ್ಟರು.’

ಹಾಜಿ ಮುರಾದ್ ಮಾತು ನಿಲ್ಲಿಸಿದ, ಉಸಿರು ಭಾರವಾಗಿತ್ತು. 

‘ಅದೆಲ್ಲ ಸರಿ, ಆಮೇಲೆ ಮಾತ್ರ ಎಲ್ಲ ಹಾಳಾಯಿತು,’ ಅಂದ. ‘ಹಮ್ಜಾದ್‍ ನ ಜಾಗಕ್ಕೆ ಶಮೀಲ್‍ ಬಂದ. ನನ್ನ ಹತ್ತಿರಕ್ಕೆ ದೂತರನ್ನು ಕಳಿಸಿ ನಾನು ಅವನ ಜೊತೆ ಸೇರಬೇಕು, ರಶಿಯದವರ ಮೇಲೆ ದಾಳಿ ಮಾಡಬೇಕು, ಇಲ್ಲದಿದ್ದರೆ ಖುನ್‍ಝಾಕ್‍ ಊರನ್ನು ನಾಶಮಾಡಿ ನನ್ನ ಕೊಲ್ಲುತ್ತೇನೆ ಅಂತ ತಿಳಿಸಿದ. ನಾನು ಅವನ ಜೊತೆ ಸೇರುವುದೂ ಇಲ್ಲ, ಅವನು ನನ್ನ ಹತ್ತಿರ ಬರುವುದಕ್ಕೆ ಬಿಡುವುದೂ ಇಲ್ಲ ಅಂತ ಹೇಳಿದೆ.’ 

‘ನೀನು ಯಾಕೆ ಅವನ ಜೊತೆಗೆ ಸೇರಲಿಲ್ಲ?’  ಲೋರಿಸ್-ಮೆಲಿಕೋವ್‍ಕೇಳಿದ.

ಹಾಜಿ ಮುರಾದ್ ಹುಬ್ಬು ಗಂಟಿಕ್ಕಿದ. ತಕ್ಷಣ ಉತ್ತರ ಹೇಳಲಿಲ್ಲ. 

‘ಸಾಧ್ಯವಿರಲಿಲ್ಲ. ನನ್ನ ಅಣ್ಣಂದಿರಾದ ಉಸ್ಮಾನ್‍ನ ರಕ್ತ, ಅಬು ನುತ್ಸಲ್ ಖಾನ್‍ನ ರಕ್ತ ಅವನ ಕೈಗೆ ಮೆತ್ತಿತ್ತು. ಜನರಲ್  ರೋಸೆನ್‍ ನನ್ನ ಹತ್ತಿರಕ್ಕೆ ದೂತನನ್ನು ಕಳಿಸಿ ನನಗೆ ಆಫೀಸರ್ ಹುದ್ದೆ ಕೊಡುವುದಾಗಿ ಹೇಳಿದ. ಅವರಿಯಾದ ಆಳ್ವಿಕೆ ನನ್ನದು ಅಂದ. ಇದೆಲ್ಲ ಚೆನ್ನಾಗಿರುತ್ತಿತ್ತು. ಆದರೆ ರೋಸೆನ್ ಮೊದಲು ಮಹಮದ್ ಮುರ್ಜಾನನ್ನು ಕಾಝಿಕುಕುಖ್‍ನ ಖಾನ್‍ ಆಗಿ ನೇಮಕ ಮಾಡಿದ, ಆಮೇಲೆ ನನ್ನನ್ನ ದ್ವೇಷ ಮಾಡುತ್ತಿದ್ದ ಅಹ್ಮದ್ ಖಾನ್‍ನ ನೇಮಕ ಮಾಡಿದ. ಅವನು ಖಾನ್‍ಶಾಗಳ ಮಗಳು ಸುಲ್ತಾನಾಳನ್ನು ತನ್ನ ಮಗನಿಗೆ ತಂದುಕೊಳ್ಳಬೇಕು ಅಂತಿದ್ದ. ಅವಳು ಒಪ್ಪಲಿಲ್ಲ. ಅವಳು ಒಪ್ಪದಿರುವುದಕ್ಕೆ ನಾನು ಕಾರಣ ಎಂದು ಅಹ್ಮದ್ ಖಾನ್ ನಂಬಿದ್ದ… 

‘ಹ್ಞೂಂ, ಅಹ್ಮದ್ ಖಾನ್‍ಗೆ ನನ್ನ ಮೇಲೆ ದ್ವೇಷ, ನನ್ನನ್ನ ಕೊಲ್ಲುವುದಕ್ಕೆ ಜನ ಕಳಿಸಿದ್ದ. ನಾನು ತಪ್ಪಿಸಿಕೊಂಡೆ. ನನ್ನ ಮೇಲೆ ಏನೇನೋ ದೂರು, ಆಪಾದನೆಗಳನ್ನು ಜನರಲ್ ಕ್ಲುಗೆನುಗೆ ಮುಟ್ಟಿಸಿದ. ರಶಿಯದವರಿಗೆ ಸೌದೆ ಕೊಡಬಾರದು ಅಂತ ನಾನು ಅವರ್‍ ಜನಕ್ಕೆ ಹೇಳಿದ್ದೇನೆ,  ನಾನು ರುಮಾಲು ಹಾಕಿಕೊಳ್ಳುತ್ತೇನೆ—ಇದೇ’ ಅನ್ನುತ್ತ ಹಾಜಿ ಮುರಾದ್ ರುಮಾಲು ಮುಟ್ಟಿಕೊಂಡ, ‘ಅಂದರೆ ನಾನು ಶಮೀಲ್‍ ಪಕ್ಷಕ್ಕೆ ಸೇರಿದ್ದೇನೆ ಅಂತೆಲ್ಲ ಹೇಳಿದ. ಜನರಲ್ ಅವನ ಮಾತು ನಂಬಲಿಲ್ಲ, ನನ್ನ ತಂಟೆಗೆ ಹೋಗಬಾರದು ಅಂತ ಆಜ್ಞೆ ಮಾಡಿದ. ಆದರೆ ಜನರಲ್ ಟಿಫ್ಲಿಸ್‍ಗೆ ಹೋದಾಗ  ಅಹ್ಮದ್‍ ಖಾನ್ ಅವನಿಗೆ ಸಂತೋಷವಾಗುವ ಹಾಗೆ ಸೇವೆ ಮಾಡಿದ. ನನ್ನ ಹಿಡಿಯುವುದಕ್ಕೆ ಒಂದು ತುಕಡಿ ಸೈನ್ಯವನ್ನು ಕಳಿಸಿದ. ನನಗೆ ಸರಪಳಿ ಬಿಗಿದು, ತೋಪಿನ ಬಾಯಿಗೆ ಕಟ್ಟಿದರು. 

‘ಹಾಗೇ ಆರು ದಿನ ಇದ್ದೆ. ಏಳನೆಯ ದಿನ ನನ್ನಕಟ್ಟು ಬಿಚ್ಚಿ ತೆಮಿರ್-ಖಾನ್-ಶುರಾ ಊರಿಗೆ ಕರಕೊಂಡು ಹೋದರು. ನಲವತ್ತು ಸೈನಿಕರು, ತೋಟಾ ತುಂಬಿದ ಬಂದೂಕು ಹಿಡಿದು ನನ್ನ ಕಾವಲಿಗಿದ್ದರು. ನನ್ನ ಕೈ ಕಟ್ಟಿ ಹಾಕಿದ್ದರು. ನಾನು ತಪ್ಪಿಸಿಕೊಳ್ಳಲು ನೋಡಿದರೆ ಸಾಯಿಸಿಬಿಡಿ ಎಂದು ಆಜ್ಞೆ ಆಗಿತ್ತು. ನಾವು ಮನ್ಸೂಹಾ ಹತ್ತಿರ ಹೋದಾಗ ರಸ್ತೆ ಕಿರಿದಾಯಿತು. ನಮ್ಮ ಬಲಗಡೆಗೆ ಸುಮಾರು ಮುನ್ನೂರೈವತು ಅಡಿ ಆಳದ ಕಮರಿ ಇತ್ತು. ನಾನು ರಸ್ತೆಯ ಬಲ ತುದಿಗೆ ಹೋದೆ. ಸೈನಿಕನೊಬ್ಬ ನನ್ನ ತಡೆಯಲು ಬಂದ. ನಾನು ಅವನನ್ನೂ ತಬ್ಬಿ ಹಿಡಿದು ಹಾರಿಬಿಟ್ಟೆ. ಅವನು ಸತ್ತ. ನೀನೇ ನೋಡುವ ಹಾಗೆ ನಾನು ಬದುಕಿದ್ದೇನೆ.

‘ಪಕ್ಕೆಲುಬು, ತಲೆ, ತೋಳು, ಕಾಲು ಎಲ್ಲ ಮುರಿದಿದ್ದವು! ತೆವಳುವುದಕ್ಕೆ ನೋಡಿದೆ. ತಲೆ ತಿರುಗಿ, ಎಚ್ಚರ ತಪ್ಪಿ ಬಿದ್ದೆ. ಎಚ್ಚರವಾದಾಗ ಮೈಯೆಲ್ಲ ರಕ್ತದಲ್ಲಿ ನೆನೆದಿತ್ತು. ಯಾರೋ ಕುರಿ ಕಾಯುವವನು ನನ್ನ ನೋಡಿ ಜನರನ್ನು ಕರೆದು, ಅವರು ನನ್ನನ್ನು ಹತ್ತಿರದ ಔಲ್‍ಗೆ ಕರಕೊಂಡು ಹೋದರು. ಪಕ್ಕೆಗೆ, ತಲೆಗೆ ಆದ ಗಾಯ ವಾಸಿಯಾದವು. ಕಾಲೂ ಸರಿ ಹೋದರೂ ಒಂದು ಕಾಲು ಗಿಡ್ಡವಾಗಿತ್ತು,’ ಅನ್ನುತ್ತ ಹಾಜಿ ಮುರಾದ್ ಸೊಟ್ಟ ತಿರುವಿದ್ದ ಕಾಲನ್ನು ಚಾಚಿದ. ಪರವಾಗಿಲ್ಲ ನಡೆದಾಡುತ್ತೇನೆ. ಅಷ್ಟು ಸಾಕು,’ ಅಂದ. ಜನಕ್ಕೆ ಸುದ್ದಿ ಗೊತ್ತಾಗಿ ನನ್ನ ನೋಡುವುದಕ್ಕೆ ಬಂದರು. ನಾನು ಸುದಾರಿಸಿಕೊಂಡು ತ್ಸೆಲೆಮೆಸ್‍ಗೆ ಹೋದೆ. ಅವರ್ ಜನಗಳು ಮತ್ತೆ ನನ್ನನ್ನು ಅವರ ದಣಿಯಾಗಿ ಆಳುವಂತೆ ಕರೆದರು,’ ಹಾಜಿ ಮುರಾದ್ ಪ್ರಶಾಂತವಾದ, ವಿಶ್ವಾಸ ತುಂಬಿದ ಹೆಮ್ಮೆಯ ದನಿಯಲ್ಲಿ, ‘ನಾನು ಒಪ್ಪಿದೆ!’ ಎಂದ.  

ತಟ್ಟನೆ ಎದ್ದು, ಚೀಲದಿಂದ ಲಕೋಟೆಯೊಂದನ್ನು ತೆಗೆದು, ಅದರಿಂದ ಬಣ್ಣ ಮಾಸಿದ ಎರಡು ಪತ್ರಗಳನ್ನು ತೆಗೆದು, ಅವುಗಳಲ್ಲಿ ಒಂದನ್ನು ಲೋರಿಸ್-ಮೆಲಿಕೋವ್‍ನ ಕೈಗಿಟ್ಟ. ಅವು ಜನರಲ್ ಕ್ಲೂಗೆನು ಬರೆದಿದ್ದ ಪತ್ರಗಳು ಮೊದಲನೆಯದನ್ನು ಲೋರಿಸ್-ಮೆಲಿಕೋವ್‍ಓದಿದ. ಅದರಲ್ಲಿ ಹೀಗೆ ಬರೆದಿತ್ತು—

‘ಲೆಫ್ಟಿನೆಂಟ್ ಹಾಜಿ ಮುರಾದ್, ನೀವು ನನ್ನ ಕೈಕೆಳಗೆ ಸೇವೆ ಸಲ್ಲಿಸಿದ್ದೀರಿ, ನಿಮ್ಮ ಸೇವೆಯಿಂದ ನಾನು ತೃಪ್ತನಾಗಿದ್ದೇನೆ, ನಿಮ್ಮನ್ನು ಒಳ್ಳೆಯ ಮನುಷ್ಯನೆಂದು ತಿಳಿದಿದ್ದೇನೆ. 

‘ಇತ್ತೀಚೆಗೆ ನೀವು ದೇಶದ್ರೋಹದ ಕೆಲಸ ಮಾಡುತ್ತಿದ್ದೀರೆಂದು ಅಹ್ಮದ್ ಖಾನ್ ನನಗೆ ತಿಳಿಸಿದ್ದಾರೆ. ನೀವು ತಲೆಗೆ ರುಮಾಲು ಧರಿಸಿದ್ದೀರಿ, ಶಮೀಲ್‍ನೊಂದಿಗೆ ಸಂಪರ್ಕದಲ್ಲಿದ್ದೀರಿ, ಜನರು ರಶಿಯನ್ ಸರ್ಕಾರಕ್ಕೆ ಅವಿಧೇಯರಾಗುವಂತೆ ಪ್ರಚೋದಿಸುತ್ತಿದ್ದೀರಿ ಎಂದು ತಿಳಿಸಿದ್ದಾರೆ. ನಿಮ್ಮನ್ನು ಸೆರೆ ಹಿಡಿದು ತರಬೇಕೆಂದು ಆಜ್ಞೆ ಮಾಡಿದ್ದೆ. ಆದರೆ, ನೀವು ತಪ್ಪಿಸಿಕೊಂಡು ಓಡಿ ಹೋದಿರಿ. ಇದು ನಿಮ್ಮ ಒಳ್ಳೆಯದಕ್ಕೋ ಕೆಟ್ಟದಕ್ಕೋ ನಾನು ಅರಿಯೆ. ನೀವು ತಪ್ಪಿತಸ್ಥರೋ ಅಲ್ಲವೋ ಅದೂ ನನಗೆ ತಿಳಿಯದು. 

‘ಈಗ ನನ್ನ ಮಾತು ಕೇಳಿ. ನಿಮ್ಮ ಅಂತಃಸಾಕ್ಷಿ ಶುದ್ಧವಾಗಿದ್ದರೆ, ನೀವು ಚಕ್ರವರ್ತಿಯವರ ವಿರುದ್ಧ ಯಾವುದೇ ಅಪರಾಧ ಎಸಗಿರದಿದ್ದರೆ, ನನ್ನ ಬಳಿಗೆ ಬನ್ನಿ, ನಿಮಗೆ ಯಾವ ಭಯವೂ ಬೇಡ. ನಾನು ನಿಮ್ಮನ್ನು ರಕ್ಷಿಸುತ್ತೇನೆ. ಅಹ್ಮದ್ ಖಾನ್ ನಿಮಗೇನೂ ಮಾಡಲಾರ. ಸ್ವತಃ ಅವನೇ ಈಗ ನನ್ನ ಆಜ್ಞೆ ಪಾಲಿಸುತ್ತಿದ್ದಾನೆ. ನಿಮಗೆ ಯಾವ ಭಯವೂ ಬೇಡ.’

 ಎಂದು ಬರೆದಿದ್ದ. ಜೊತೆಗೆ—

‘ನಾನು ಯಾವಾಗಲೂ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ, ನಾನು ನ್ಯಾಯದ ಪರವಾಗಿರುವವನು, ಹಾಜಿ ಮುರಾದ್ ನನ್ನೆದುರಿಗೆ ಬರಬೇಕು.’

ಎಂದೂ ಸೇರಿಸಿದ್ದ.  

ಲೋರಿಸ್-ಮೆಲಿಕೋವ್‍ಕಾಗದವನ್ನು ಓದಿ ಮುಗಿಸಿದ ಮೇಲೆ, ಇನ್ನೊಂದು ಕಾಗದವನ್ನು ಅವನಿಗೆ ಕೊಡುವ ಮೊದಲು ಹಾಜಿ ಮುರಾದ್ ಈ ಮೊದಲ ಪತ್ರಕ್ಕೆ ಏನು ಉತ್ತರ ಬರೆದಿದ್ದೆ ಅನ್ನುವುದನ್ನು ಹೇಳಿದ.

‘ನಾನು ಬರೆದೆ—ನಾನು ರುಮಾಲು ತೊಡುವುದು ಶಮೀಲ್‍ನ ಸಲುವಾಗಿಯಲ್ಲ, ನನ್ನ ಆತ್ಮದ ಉದ್ಧಾರಕ್ಕಾಗಿ. ಅವನ ಪಕ್ಷಕ್ಕೆ ಸೇರಬೇಕೆಂಬ ಅಪೇಕ್ಷೆಯೂ ನನಗಿಲ್ಲ. ಯಾಕೆಂದರೆ ನನ್ನ ತಂದೆ, ಸಹೋದರ ಮತ್ತು ಸಂಬಂಧಿಕರ ಸಾವಿಗೆ ಕಾರಣನಾಗಿದ್ದಾನೆ ಶಮೀಲ್‍.  ಹಾಗೆಯೇ ನಾನು ರಶಿಯನ್ನರ ಪಕ್ಷಕ್ಕೂ ಸೇರಲಾರೆ. ಅವರಿಂದ ನನಗೆ ಅವಮಾನವಾಗಿದೆ. (ಖುನ್‍ಝಾಕ್‍ನಲ್ಲಿ ನನ್ನನ್ನು ಬಂಧಿಸಿಟ್ಟಿದ್ದಾಗ ರಶಿಯನ್ ಒಬ್ಬನು ನನ್ನ ಮೇಲೆ ಉಗುಳಿದ. ಅವನನ್ನು ನೀವು ಕೊಲ್ಲುವವರೆಗೆ ನಾನು ನಿಮ್ಮ ಜೊತೆಗೆ ಸೇರಲಾರೆ.) ಎಲ್ಲಕ್ಕಿಂತ ಮಿಗಿಲಾಗಿ ಆ ಸುಳ್ಳುಗಾರ ಅಹ್ಮದ್ ಖಾನ್‍ ಬಗ್ಗೆ ನನಗೆ ಭಯ.

‘ಆಮೇಲೆ ಜನರಲ್ ನನಗೆ ಈ ಪತ್ರ ಕಳಿಸಿದರು, ಅನ್ನುತ್ತ ಹಾಜಿ ಮುರಾದ್ ಲೋರಿಸ್-ಮೆಲಿಕೋವ್‍ನ ಕೈಗೆ ಇನ್ನೊಂದು ಬಣ್ಣಗೆಟ್ಟ ಹಾಳೆಯನ್ನು ಕೊಟ್ಟ.

‘ನನ್ನ ಮೊದಲ ಪತ್ರಕ್ಕೆ ಉತ್ತರಿಸಿದ್ದೀರಿ, ಧನ್ಯವಾದಗಳು. ವಾಪಸ್ಸು ಬರುವುದಕ್ಕೆ ನಿಮಗೆ ಭಯವಿಲ್ಲ ಆದರೆ ಯಾರೋ ಗುಲಾಮ ಮಾಡಿದ ಅವಮಾನದ ಕಾರಣದಿಂದ ನೀವು ಬರದೆ ಉಳಿದಿದ್ದೀರಿ ಅನ್ನುವುದು ತಿಳಿಯಿತು. ರಶಿಯನ್ ಕಾನೂನು ನ್ಯಾಯವಾದದ್ದು, ಮತ್ತು ನಿಮ್ಮನ್ನು ಅವನಮಾನ ಮಾಡುವ ಉದ್ಧಟತನ ತೋರಿದ ವ್ಯಕ್ತಿಗೆ ಖಂಡಿತ ನಿಮ್ಮ ಕಣ್ಣೆದುರಿಗೇ ಶಿಕ್ಷೆಯಾಗುತ್ತದೆ. ಈ ವಿಷಯವನ್ನು ತನಿಖೆ ಮಾಡಬೇಕೆಂದು ಆಗಲೇ ಆಜ್ಞೆ ಹೊರಡಿಸಿದ್ದೇನೆ. 

‘ನೀವು ನನ್ನನ್ನು ನಂಬಲಿಲ್ಲವೆಂಬ ಕಾರಣಕ್ಕೆ ನಿಮ್ಮ ಬಗ್ಗೆ ಮುನಿಸಿಕೊಳ್ಳುವ ಅಧಿಕಾರ ನನಗಿದೆ. ಆದರೆ, ಬೆಟ್ಟಗಾಡಿನ ಜನ ಸಾಮಾನ್ಯವಾಗಿ ಸಂಶಯಸ್ವಭಾವದವರು ಎಂಬ ಕಾರಣಕ್ಕೆ ನಿಮ್ಮನ್ನು ಕ್ಷಮಿಸಿದ್ದೇನೆ. ನಿಮ್ಮ ಅಂತಃಸ್ಸಾಕ್ಷಿ ಶುದ್ಧವಾಗಿದ್ದರೆ, ನಿಮ್ಮ ಆತ್ಮೋದ್ಧಾರಕ್ಕಾಗಿ ಮಾತ್ರ ನೀವು ರುಮಾಲನ್ನು ತೊಟ್ಟಿದ್ದರೆ ನೀವು ಮಾಡಿದ್ದು ಸರಿ. ನೀವು ನನ್ನ, ಅಥವ ರಶಿಯನ್ ಸರ್ಕಾರದ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಅಂಜುವ ಅವಶ್ಯಕತೆ ಇಲ್ಲ. ನಿಮಗೆ ಅಗೌರವ ತೋರಿದವರಿಗೆ ಶಿಕ್ಷೆಯಾಗುವುದೆಂದು ಭರವಸೆ ನೀಡುತ್ತೇನೆ. ನಿಮ್ಮ ಸಂಪತ್ತನ್ನು ನಿಮಗೆ ಮರಳಿಸಲಾಗುವುದು. ರಶಿಯನ್ ಕಾನೂನು ಎಂಥದು ಅನ್ನುವುದನ್ನು ನೀವೇ ನೋಡುತ್ತೀರಿ. ಅಲ್ಲದೆ ನಾವು ರಶಿಯನ್ನರು ಲೋಕವನ್ನು ಸ್ವಲ್ಪ ಬೇರೆ ರೀತಿಯಲ್ಲಿ ನೋಡುತ್ತೇವೆ. ಯಾರೋ ದುಷ್ಟ ನಿಮ್ಮನ್ನು ಅವಮಾನಿಸಿದನೆಂದು ನಮ್ಮ ಕಣ್ಣಿನಲ್ಲಿ ನಿಮ್ಮ ಗೌರವ ತಗ್ಗಿಲ್ಲ. 

‘ದಾಗೆಸ್ತಾನದ ಗಿಮ್ರಿ ಜನ ರುಮಾಲು ತೊಡಲು ನಾನೇ ಅನುಮತಿ ನೀಡಿರುತ್ತೇನೆ. ಅವರು ರುಮಾಲು ಧರಿಸುವುದು ಸರಿಯೆಂದೇ ತೋರುತ್ತದೆ. ಹಾಗಾಗಿ ನೀವು ಭಯಪಡಬೇಕಾದುದೇನೂ ಇಲ್ಲವೆಂದು ಮತ್ತೊಮ್ಮೆ ಹೇಳುತ್ತೇನೆ. ಈ ಪತ್ರವನ್ನು ಕಳಿಸುತ್ತಿರುವ ವ್ಯಕ್ತಿಯೊಡನೆ ನೀವು ದಯವಿಟ್ಟು ನನ್ನಲ್ಲಿಗೆ ಬನ್ನಿ. ಅವನು ನನಗೆ ನಿಷ್ಠನಾಗಿರುವ ವ್ಯಕ್ತಿ, ನಿಮ್ಮ ಶತ್ರುಗಳ ಸೇವಕನಲ್ಲ, ಸರ್ಕಾರದ ವಿಶೇಷ ಮನ್ನಣೆಗೆ ಪಾತ್ರನಾಗಿರುವವನಿಗೆ ಬೇಕಾದವನಾಗಿದ್ದಾನೆ.’ 

ತನ್ನ ಪಕ್ಷಕ್ಕೆ ಸೇರುವಂತೆ ಹಾಜಿ ಮುರಾದ್‍ನ ಮನವೊಲಿಸುವುದಕ್ಕೆ ಕ್ಲುಗೆನೂ ಮತ್ತೂ ಪ್ರಯತ್ನಪಟ್ಟಿದ್ದ. 

ಓದುವುದನ್ನು ಮುಗಿಸಿದ ಮೇಲೆ ಹಾಜಿ ಮುರಾದ್, ‘ನಾನು ಅವನನ್ನು ನಂಬಲಿಲ್ಲ, ಅವನ ಬಳಿಗೆ ಹೋಗಲಿಲ್ಲ, ಯಾಕೆಂದರೆ ಅಹ್ಮದ್ ಖಾನ್‍ನ ಮೇಲೆ ಸೇಡು ತೀರಿಸಿಕೊಳ್ಳುವುದು ನನಗೆ ಮುಖ್ಯವಾಗಿತ್ತು. ಅದನ್ನು ರಶಿಯನ್ನರ ಮುಖಾಂತರ ಮಾಡಿಸಲು ಸಾಧ್ಯವಿರಲಿಲ್ಲ. ಅಹ್ಮದ್ ಖಾನ್ ಆಮೇಲೆ ತ್ಸೆಲ್ಮೆಸ್ಗೆ ಮುತ್ತಿಗೆ ಹಾಕಿ ನನ್ನನ್ನು ಸೆರೆಹಿಡಿಯಬೇಕು, ಇಲ್ಲಾ ಕೊಲ್ಲಬೇಕು ಎಂದು ಬಯಸಿದ್ದ. ನನ್ನ ಹತ್ತಿರ ಇದ್ದ ಜನ ಕಡಮೆ. ಅವನನ್ನು ಓಡಿಸಲು ಆಗಲಿಲ್ಲ. ಆ ಹೊತ್ತಿನಲ್ಲಿ ಶಮೀಲ್‍ನ ದೂತನೊಬ್ಬ ಪತ್ರವನ್ನು ತಂದ. ಅಹ್ಮದ್ ಖಾನ್ನನ್ನು ಸೋಲಿಸುವುದಕ್ಕೆ, ಕೊಲ್ಲುವುದಕ್ಕೆ ಸಹಾಯ ಮಾಡುತ್ತೇನೆ, ಇಡೀ ಅವರಿಯಾದ ಆಳ್ವಿಕೆಯನ್ನು ನನಗೆ ಒಪ್ಪಿಸುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದ. ಆ ವಿಚಾರ ಸುದೀರ್ಘವಾಗಿ ಯೋಚನೆ ಮಾಡಿದೆ. ಆಮೇಲೆ ಶಮೀಲ್‍ನ ಪಕ್ಷಕ್ಕೆ ಸೇರಿದೆ. ಆಗಿನಿಂದ ನಾವು ರಶಿಯನ್ನರ ವಿರುದ್ಧ ಹೋರಾಡುತ್ತ ಬಂದಿದ್ದೇವೆ,’ ಎಂದು ಹಾಜಿ ಮುರಾದ್ ಹೇಳಿದ. 

ಆಮೇಲೆ ಹಾಜಿ ಮುರಾದ್ ತನ್ನ ಅನೇಕ ಸೈನಿಕ ಸಾಹಸಗಳನ್ನು ಹೇಳಿದ. ಅವುಗಳಲ್ಲಿ ಎಷ್ಟೋ ಸಂಗತಿಗಳನ್ನು ಲೋರಿಸ್-ಮೆಲಿಕೋವ್‍ ಆಗಲೇ ಬಲ್ಲವನಾಗಿದ್ದ. ಹಾಜಿ ಮುರಾದ್ ಮಾಡಿದ ದಾಳಿ, ನಡೆಸಿದ ಕಾಳಗಗಳೆಲ್ಲ ಅತಿ ಶೀಘ್ರಗತಿಯಲ್ಲಿ ನಡೆದಂಥವು, ಅಪಾರ ಧೈರ್ಯವನ್ನು ಬಯಸುತ್ತಿದ್ದಂಥವು, ಯಾವಾಗಲೂ ಅವನಿಗೆ ಗೆಲುವು ತಂದುಕೊಟ್ಟಿದ್ದವು. 

‘ನನಗೂ ಶಮೀಲ್‍ನಿಗೂ ಎಂದೂ ಸ್ನೇಹವಿರಲಿಲ್ಲ, ಅವನಿಗೆ ನನ್ನ ಬಗ್ಗೆ ಭಯವಿತ್ತು ಹಾಗೇ ಅವನಿಗೆ ನನ್ನ ಅಗತ್ಯವಿತ್ತು. ಏನಾಯಿತೆಂದರೆ ಶಮೀಲ್‍ನ ನಂತರ ಇಮಾಮ್‍ ಯಾರಾಗಬೇಕು ಎಂದು ನನ್ನನ್ನು ಕೇಳಲಾಯಿತು. ಯಾರ ಕತ್ತಿ ಹೆಚ್ಚು ಮೊನಚೋ ಅವನೇ ಇಮಾಮ್ ಆಗುತ್ತಾನೆ ಎಂದೆ ನಾನು. ಇದನ್ನು ಶಮೀಲ್‍ಗೆ ತಿಳಿಸಿದರು. ಅದನ್ನು ಕೇಳಿ ನನ್ನನ್ನು ನಿವಾರಿಸಿಕೊಳ್ಳಬೇಕು ಎಂದು ಶಮೀಲ್ ಬಯಸಿದ. ನನ್ನನ್ನು ತಸ್ಬಸರನ್‍ಗೆ ಕಳಿಸಿದ. ನಾನು ಹೋದೆ, ಸಾವಿರ ಕುರಿ, ಮುನ್ನೂರು ಕುದುರೆಗಳನ್ನು ವಶಮಾಡಿಕೊಂಡೆ. ಆದರೂ ನಾನು ಸರಿಯಾಗಿ ನಡೆದುಕೊಳ್ಳಲಿಲ್ಲ ಅಂದ. ನನ್ನನ್ನು Naib ಪದವಿಯಿಂದ ವಜಾಮಾಡಿದ, ಎಲ್ಲ ಹಣವನ್ನೂ ಅವನಿಗೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದ. ಅವನಿಗೆ ಸಾವಿರ ಚಿನ್ನದ ನಾಣ್ಯ ಕಳಿಸಿದೆ. ಅವನು ಮುರೀದ್‍ರನ್ನು ಕಳಿಸಿದ. ಅವರು ನನ್ನ ಎಲ್ಲ ಆಸ್ತಿ ಕಿತ್ತುಕೊಂಡರು. ನಾನು ಅವನ ಪಕ್ಷಕ್ಕೆ ಸೇರಬೇಕೆಂದು ಒತ್ತಾಯ ಮಾಡಿದ. ನನ್ನನ್ನು ಕೊಲ್ಲುವುದು ಅವನ ಉದ್ದೇಶವೆಂದು ಗೊತ್ತಿತ್ತು. ನಾನು ಹೋಗಲಿಲ್ಲ. ನನ್ನನ್ನು ಸೆರೆ ಹಿಡಿಯುವುದಕ್ಕೆ ಕಳಿಸಿದ. ಹೋರಾಡಿದೆ. ಕೊನೆಗೆ ವರಾನ್ತಸೋವ್‍ನ ಬಳಿಗೆ ಹೋದೆ. ನನ್ನ ಕುಟುಂಬವನ್ನು ಕರಕೊಂಡು ಬರಲಿಲ್ಲ. ತಾಯಿ, ಹೆಂಡಿರು, ಗಂಡು ಮಕ್ಕಳು ಎಲ್ಲ ಅವನ ವಶದಲ್ಲಿದದಾರೆ. ನನ್ನ ಕುಟುಂಬ ಅವನ ವಶದಲ್ಲಿರುವವರೆಗೆ ನಾನೇನೂ ಮಾಡಲಾರೆ ಎಂದು ಸರ್ದಾರ್‍ ಗೆ ಹೇಳು,’ ಎಂದ ಹಾಜಿ ಮುರಾದ್.

‘ಹೇಳುತ್ತೇನೆ,’ ಅಂದ ಲೋರಿಸ್-ಮೆಲಿಕೋವ್‍.

‘ಪ್ರಯತ್ನಪಟ್ಟು ಒಪ್ಪಿಸು!…ನನ್ನದೇನಿದೆಯೋ ಅದೆಲ್ಲಾ ನಿನ್ನದೇ. ಪ್ರಿನ್ಸ್ ಒಪ್ಪುವ ಹಾಗೆ ಮಾಡು! ನನ್ನ ಬಿಗಿದು ಕಟ್ಟಿದ್ದಾರೆ, ಹಗ್ಗದ ತುದಿ ಶಮೀಲ್‍ನ ಕೈಯಲ್ಲಿದೆ,’ ಎಂದು ಹೇಳುತ್ತ ಹಾಜಿ ಮುರಾದ್ ಕಥೆಯನ್ನು ಮುಗಿಸಿದ. 

| ಮುಂದುವರೆಯುವುದು |

ಲೋರಿಸ್ ಮೆಲಿಕೋವ್: ಹನ್ನೊಂದನೆಯ ಅಧ್ಯಾಯದಿಂದ ಈ ಅಧ್ಯಾಯದವರೆಗೆ ಪ್ರಸ್ತಾಪವಾಗಿರುವ ಈ ಪಾತ್ರ 1824-1888ರವರೆಗೆ ಬದುಕಿದ್ದ, ಪ್ರಾಚೀನ ಉನ್ನತ ವಂಶಕ್ಕೆ ಸೇರಿದ ಕೌಂಟ್. ಕಾಕಸಸ್ ಪರ್ವತಗಳ ಸೀಮೆಯಲ್ಲಿ ಸುಮಾರು ಇಪ್ಪತ್ತು ವರ್ಷ ಸೇವೆ ಸಲ್ಲಿಸಿದ. ಚಕ್ರವರ್ತಿ ಎರಡನೆಯ ಅಲೆಕ್ಸಾಂಡರನ ಆಪ್ತನೂ ರಶಿಯದ ಒಳಾಡಳಿತ ಸಚಿವನೂ ಆಗಿದ್ದ. ಹಲವಾರು ಸುದಾರಣೆಗಳಿಗೆ ಕಾರಣನಾದ. ಹಾಜಿ ಮುರಾದ್‍ನೊಡನೆ ಅವನು ಮಾತನಾಡಿ ರಚಿಸಿದ ಟಿಪ್ಪಣಿಗಳನ್ನು ಟಾಲ್ಸ್ಟಾಯ್ ಈ ಕಾದಂಬರಿಯ ರಚನೆಯ ಒಂದು ಆಕರವಾಗಿ ಬಳಸಿಕೊಂಡಿದ್ದಾನೆ. 

‍ಲೇಖಕರು Admin

January 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: