
ಮಂಗಳಾ ಪ್ರಿಯದರ್ಶಿನಿ
ನಾನು ಮಗುವಾಗಿದ್ದಾಗಿನಿಂದ ಎಚ್ ಎನ್ ಅವರನ್ನು ಕಂಡಿದ್ದೇನೆ. ನನಗೆ ಅವರು ನಮ್ಮ ಮನೆಯ ಹಿರಿಯರು. ನನ್ನ ತಂದೆ ಶ್ರೀ ಬಿ ವಿ ದಕ್ಷಿಣಾ ಮೂರ್ತಿಯವರು ನ್ಯಾಷನಲ್ ಹೈ ಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ, ಆನಂತರ ನ್ಯಾಷನಲ್ ಎಜುಕೇಷನ್ ಸೊಸೈಟಿಯಲ್ಲಿ ಇಪ್ಪತ್ತೊಂದು ವರ್ಷಗಳ ಕಾಲ ಗೌರವ ಕಾರ್ಯದರ್ಶಿಗಳಾಗಿ ಸಂಸ್ಥೆಗೆ ಸೇವೆ ಸಲ್ಲಿಸಿದವರು. ಸಂಸ್ಥೆಯ ಅಧ್ಯಕ್ಷರಾದ ಎಚ್ಎನ್ ಅವರಿಗೂ ನಮ್ಮ ತಂದೆಯವರಿಗೂ ಆತ್ಮೀಯ ಸಂಬಂಧ. ಅವರಿಬ್ಬರ ಸ್ನೇಹ ಸುಮಾರು ಐವತ್ತು ವರ್ಷಗಳಿಗೂ ಹೆಚ್ಚಾದುದು. ನಮ್ಮ ಮನೆಗೆ ಬರುತ್ತಿದ್ದರು.
ನಮ್ಮ ತಾಯಿ ಮಾಡುವ ಕಾಲೀ ದೋಸೆಯೆಂದರೆ ತುಂಬ ಇಷ್ಟ. ಮೇಷ್ಟ್ರೆ, ನಿಮ್ಮ ಮನೇಗೆ ಬರುತ್ತೇನೆ, ವಿಶಾಲಾಕ್ಷಮ್ಮನವರಿಗೆ ಹೇಳಿ, ಎಂದು ತಿಳಿಸಿ ಬರುತ್ತಿದ್ದರು. ಅವರ ಚಟ್ನಿಗೆ ಕಾಯಿ ಹಾಕದೆ ಅಮ್ಮ ರುಚಿಯಾಗಿ ಚಟ್ನಿ ಮಾಡುತ್ತಿದ್ದರು. ಎಚ್ ಎನ್ ಕಾಯಿ ಹಾಕಿದ ಅಡುಗೆಗಳನ್ನು ತಿನ್ನುತ್ತಿರಲಿಲ್ಲ. ನನ್ನೊಡನೆ ಅವರಿಗೆ ಸಲುಗೆ, ಏಕ ವಚನದಲ್ಲೇ ನನ್ನನ್ನು ಮಾತನಾಡಿಸುತ್ತಿದ್ದುದು.
ಅವರು ಬೆಂಳೂರು ವಿವಿಗೆ ಉಪ ಕುಲಪತಿಗಳಾಗಿ ಹೊರಟಾಗ ನಾನು ಅಲ್ಲೇ ಪಿಯುಸಿ ಓದುತ್ತಿದ್ದೆ. ಆಗ ಅವರನ್ನು ಕಳಿಸಿಕೊಡಲು ಇಡೀ ಕಾಲೇಜು ಕಣ್ಣೀರಿಟಿತ್ತು. ಅವರು ಹೋದ ನಂತರ ಕಾಲೇಜಿನ ಮುಖ್ಯ ದ್ವಾರದ ಕಂಬ ಮುರಿದು ಬಿದ್ದಾಗ ಸಂಸ್ಥೆಯ ಆಧಾರ ಸ್ತಂಭವೇ ಬಿತ್ತೆಂದು ವ್ಯಾಖ್ಯಾನಿಸಿದ್ದರು.

ನಾನು ಬಿ ಎ ಪದವಿಯಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದಿದ್ದೆ. ನನಗೆ ತಿಳಿಯದೆ ಪದವಿ ದಾನ ಸಮಾರಂಭಕ್ಕೆ ಇನ್ ಅಬ್ಸಸೆನ್ಷಿಯಾ ಎಂದು ಬರೆದು ಪ್ರಮಾದ ಮಾಡಿದ್ದೆ. ಇನ್ ಪರ್ಸನ್ ಎಂದು ನಮೂದಿಸಿದ್ದರೆ ಮಾತ್ರ ಛಾನ್ಸಲರ್ ಇಂದ ಪದಕಗಳನ್ನು ಪಡೆಯುವ ಅವಕಾಶ, ಇಲ್ಲದಿದ್ದರೆ ಇಲ್ಲ. ಅದು ವಿಶ್ವ ವಿದ್ಯಾಲಯದ ನಿಯಮ. ಆಗ ರಿಜಿಸ್ಟ್ರಾರ್ ಆಗಿದ್ದ ಮಹೇಶ್, ಕೆಂಡಗಣ್ಣ ಸ್ವಾಮಿಯವರು ಸಹಾಯ ಮಾಡುವುದಕ್ಕೆ ಬದಲಾಗಿ ಬೈದಿದ್ದರು. ಕಣ್ಣೀರು ಹಾಕುತ್ತಾ ನಿಂತಿದ್ದಾಗ ಎಚ್ ಎನ್ ಬಂದರು. ಯಾಕಮ್ಮ ಕಣ್ಣೀರು ಎನ್ನುತ್ತಾ ವಿಷಯ ಹೇಳಿದ ಮೇಲೆ ಒಬ್ಬೊಬ್ಬ ಅಧಿಕಾರಿಯನ್ನೂ ಕರೆದು ಛೀಮಾರಿ ಹಾಕಿ, ಅವರು ಕಷ್ಟ ಪಟ್ಟು ಪಡೆದಿರುವ ಪದಕಕ್ಕೆ ನಿಮ್ದೇನು ತಕರಾರು ಎಂದು ನನಗೆ ವೇದಿಕೆಯಲ್ಲೇ ಕಾನ್ವಕೇಷನ್ ನಲ್ಲೇ ಪಡೆಯುವ ಅವಕಾಶ ಮಾಡಿ ಕೊಟ್ಟಿದ್ದರು. ಆಗ ಎಚ್ ಎನ್ ಉಪ ಕುಲಪತಿಗಳು.
ಒಂದು ದಿನ ಬೆಳಿಗ್ಗೆ ಎಂಟು ಗಂಟೆಗೆ ಫೋನ್ ಮಾಡಿ ನನಗೆ ಕಾರ್ಯಕ್ರಮದಲ್ಲಿ ಮಾತನಾಡಬೇಕು, ಎಂದರು. ಅದು ಸಾಮಾನ್ಯವಾದ ಕಾರ್ಯಕ್ರಮವಾಗದೆ, ಅವರ ಎಂಭತ್ತರ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ. ಅದನ್ನು ಆಯೋಜಿಸಿದ್ದವರು, ರಾಮಕೃಷ್ಣ ಹೆಗಡೆ ಹಾಗೂ ಜೀವರಾಜ ಆಳ್ವ ಅವರುಗಳು. ಆ ಕಾರ್ಯಕ್ರಮದ ಅಧ್ಯಕ್ಷತೆ ರಾಜಾರಾಮಣ್ಣ ಅವರದು. ಬೆಂಗಳೂರಿನ ಆರ್ಚ್ ಬಿಷಪ್ ಆಲ್ಬರ್ಟ್ ಪಿಂಟೋ, ಕರ್ನಾಟಕದ ಮೂರು ವಿವಿಗಳ ಉಪ ಕುಲಪತಿಗಳು – ಹೀಗೆ ಘನ ಮಹನೀಯರು ಭಾಗವಹಿಸಿದ್ದ ಸಭೆಯಲ್ಲಿ ಎಲ್ಲಾ ರೀತಿಯಿಂದಲೂ ನಾನು ಕಿರಿಯವಳು.
ಸರ್ ನಾನು ಬೇಡ ಎಂದಾಗ ಇಲ್ಲ ನೀನು ಮಾತನಾಡಲೇ ಬೇಕೆಂದು ಮಾತನಾಡಿಸಿದ್ದರು. ಆ ದಿನ ಇಡೀ ಆ ಹಿರಿಯ ವೇದಿಕೆಯಲ್ಲಿದ್ದ ಏಕೈಕ ಮಹಿಳೆ ನಾನೇ. ನನ್ನ ಮಾತು ಆತ್ಮೀಯ ನೆಲೆಯಲ್ಲಿದುದರಿಂದ ಹೆಚ್ಚು ಚಪ್ಪಾಳೆ ಬಿದ್ದಿತ್ತು. ಎಚ್ ಎನ್ ತುಂಬ ಖುಷಿ ಪಟ್ಟಿದ್ದರು. ಆ ಸಮಾರಂಭವನ್ನು ಈಗ ನೆನಸಿಕೊಂಡರೂ ರೋಮಾಂಚನವಾಗುತ್ತದೆ. ಅವರಿಗೆ ನನ್ನ ಮೇಲಿದ್ದ ಪ್ರೀತಿ, ಅಭಿಮಾನಗಳು ಅಂಥದ್ದು.
ಅವರಿಗೆ ನಾನು ಅವರ ಸಂಸ್ಥೆಗೆ ಸೇರಲಿಲ್ಲವೆಂಬ ಅಸಮಾಧಾನವಿತ್ತು. ಅದನ್ನು ಅವರು ಸದಾ ಹೇಳುತ್ತಲೂ ಇದ್ದರು. ನಾನು ಎಂ ಎ ನಲ್ಲಿ ಎಂಟು ಚಿನ್ನದ ಪದಕಗಳೊಂದಿಗೆ ಮೊದಲ ರ್ಯಾಂಕ್ ಪಡೆದಾಗ ಎಚ್ ಎನ್ ನಮ್ಮ ಮನೆಗೆ ಬಂದು ನನ್ನನ್ನು ಅಭಿನಂದಿಸಿದ್ದರು. ಆ ಕ್ಷಣ ನನ್ನ ತಂದೆ, ತಾಯಿಗಳಷ್ಟೇ ಸಂಭ್ರಮ ಪಟ್ಟಿದ್ದರು. ಆ ಸಂದರ್ಭದಲ್ಲೂ ಚಿನ್ನದ ಪದಕಗಳನ್ನು ಪಡೆಯಲು ವೇದಿಕೆ ಹತ್ತಿದಾಗ ಅವರೇ ಉಪ ಕುಲಪತಿಗಳಾಗಿದ್ದರು. ಇದು ನನ್ನ ಅದೃಷ್ಟ ವೂ ಹೌದು.

ನೆನಪಿಸಿಕೊಂಡಷ್ಷು ಉಕ್ಕುವ ಎಷ್ಟೋ ಸುಂದರ ನೆನಪುಗಳು.
ನ್ಯಾಷನಲ್ ಕಾಲೇಜಿನಲ್ಲಿ ಹಂಪಿ ವಿವಿ ಯ ಪಿ ಎಚ್ಡಿ ಮಾರ್ಗದರ್ಶರ ಸಭೆ ಇತ್ತು. ಸಭೆ ಮುಗಿದ ನಂತರ ಎಚ್ ಎನ್ ಅವರನ್ನು ಮಾತಾಡಿಸಿ ಬರೋಣ ಅಂತ ಅವರ ಕೊಠಡಿಯ ಕಡೆಗೆ ಹೆಜ್ಜೆ ಹಾಕಿದೆ. ಬಾಗಿಲಿನಲ್ಲೇ ನಿಂತಿದ್ದ ಸಹಾಯಕರನ್ನು ಕೇಳಿದಾಗ ಹೋಗಿ, ಎಂದರು. ಬಾಗಿಲು ಸರಿಸಿದಾಗ ಅವರು ಮಲಗಿದ್ದರು. ಎಬ್ಬಿಸಲು ಮನಸ್ಸು ಬಾರದೆ ಹೊರ ಬಂದೆ. ಅವರು ಹಾಗೆಲ್ಲ ಮುಸ್ಸಂಜೆಯ ಹೊತ್ತಿನಲ್ಲಿ ಮಲಗುವವರೇ ಅಲ್ಲ. ಆಮೇಲೆ ಆತ ಹೇಳಿದ, ಸರ್ ಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಿದೆ, ಹಾಗಾಗಿ ಸುಮ್ಮನೆ ಮಲಗಿದ್ದಾರೆ, ಹೋಗಿ. ಪರವಾಗಿಲ್ಲ ಎಂದು. ಅದಾಗಲೇ ಮುಸ್ಸಂಜೆ ಜಾರಿ ಕತ್ತಲಿನೆಡೆ ಸಮೀಪಿಸುತ್ತಿತ್ತು .ನಾನು ಒಳಗೆ ಪ್ರವೇಶಿಸಿದೆ.
ಇಡೀ ಲಾಲ್ಬಾಗನ್ನು ಬೆಳ್ಳಂಬೆಳಗೆ ಎದ್ದು ಐದೈದು ಬಾರಿ ಸುತ್ತುತ್ತಾ, ಎಲ್ಲರನ್ನೂ ತಮಾಷೆ ಮಾಡುತ್ತಲೇ ಶಿಕ್ಷಣದ ಬಗ್ಗೆ, ಸಂಸ್ಥೆಯ ಬಗ್ಗೆ, ವಿದ್ಯಾರ್ಥಿ ಸಮುದಾಯದ ಬಗ್ಗೆ, ಅವರ ಅಭ್ಯುದಯದ ಬಗ್ಗೆ ಆಲೋಚಿಸುತ್ತಾ, ನಡು ನಡುವೆ ‘ಅಯ್ಯೋ ಭಗವಂತ’ ಎನ್ನತ್ತಾ, ಅವರು ನಾಸ್ತಿಕ ಎಂದವರಿಗೆ ಉತ್ತರಿಸುವಂತೆ ಕಾಲೇಜಿನಲ್ಲಿ ಯಂ ಬ್ರಹ್ಮಾ ವರುಣೇಂದ್ರ.. ಎಂದು ವಿದ್ಯಾರ್ಥಿಗಳಲ್ಲಿ ಶಿಸ್ತು, ಶ್ರದ್ಧೆ, ವೈಜ್ಞಾನಿಕ ಮನೋಭಾವ, ಸದಭಿರುಚಿ, ಮೌಲ್ಯ ವರ್ಧನೆಗೆ ಶ್ರಮಿಸುತ್ತಾ ಓಡಾಡುವ ಜೀವ ಸೋತು ಹಣ್ಣಾಗಿ ಮಲಗಿತ್ತು. ನೋಡಿದರೆ ಮೈಮೇಲೆ ಹೊದ್ದಿದ್ದ ಸೋಲಾಪುರ ದುಪಟಿ ಅಲ್ಲಲ್ಲಿ ತೂತಾಗಿತ್ತು .
ನಾನು ಕತ್ತಲಲ್ಲೇ ನಿಂತು ಸರ್ ಎಂದು ಮೆಲುವಾಗಿ ಕೂಗಿದೆ. ತಕ್ಷಣ ಹೊದಿಕೆ ಸರಿಸಿ ಯಾರು? ಎಂದರು. ಸರ್, ನಾನು ಬಿ ವಿ ಡಿ ಅವರ ಮಗಳು ಮಂಗಳಾ, ಎಂದೆ. ತಕ್ಷಣ, ‘ದೀಪ ಹಾಕಮ್ಮ’ ಎಂದರು. ನನ್ನ ಕುಟುಂಬ, ಕಾಲೇಜು, ಅವರ ಸಂಸ್ಥೆ, ಸೈನ್ಸ್ ಫೋರಂ, ಹಿರಿಯ ವಿದ್ಯಾರ್ಥಿಗಳ ಸಂಘ, ಆಗ ನನ್ನ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಸಂಪರ್ಕ’ ಪತ್ರಿಕೆ, ನಮ್ಮ ತಂದೆ, ತಾಯಿ – ಹೀಗೆ ಏನೇನೋ ಮಾತನಾಡಿದೆವು. ನೀನು ನಮ್ಮ ಕಾಲೇಜಿನಲ್ಲಿರಬೇಕಿತ್ತು ಎಂದರು. ಎಂ ಎ ತರಗತಿಗಳನ್ನಾದರೂ ತೆಗೆದುಕೋ ಎಂದರು. ನಾನು ಮುಗುಳ್ನಕ್ಕೆ.

ಆ ವೇಳೆಗಾಗಲೇ ರಾತ್ರಿ ಆವರಿಸುತ್ತಿತ್ತು. ಆ ಮೂಲೆ ಟೇಬಲ್ ಮೇಲೆ ಹಣ್ಣಿದೆ, ತೆಗೆದುಕೋ ಎಂದು ತವರು ಮನೆಗೆ ಹೆಣ್ಣು ಮಗಳು ಬಂದಾಗ ತೋರುವ ಅಕ್ಕರಾಸ್ತೆಗಳಿಂದ ಹೇಳಿದರು. ನಾನು ಒಂದು ಬಾಳೇ ಹಣ್ಣನ್ನು ಕೈಲಿ ಹಿಡಿದಾಗ, ತಾಯಿಯ ಹಾಗೆ ಹಠ ಮಾಡಿ ನಾಲ್ಕು ಹಣ್ಣುಗಳನ್ನು ತೆಗೆದುಕೊಳ್ಳುವ ವರೆಗೂ ಬಿಡಲಿಲ್ಲ. ‘ನಾನು ಹೊರಡುತ್ತೇನೆ ಸರ್, ದೀಪ ಆರಿಸಲಾ?’ ಎಂದು ಕೇಳಿದಾಗ ನೀನು ಹೊತ್ತಿಸಿದ್ದೀಯ, ಇರಲಿ ಬಿಡು ಎಂದರು. ನಾನು ಅವರ ಪಾದಗಳಿಗೆ ನಮಸ್ಕರಿಸಿ ಹೊರ ಬಂದಿದ್ದೆ.
ಯಾಕೋ ಮನಸ್ಸು ಭಾರವಾಗಿತ್ತು, ಕಣ್ಣು ಮಂಜಾಗಿತ್ತು. ಅದೇ ನನ್ನ ಕೊನೆಯ ಭೇಟಿಯಾಗಿತ್ತು. ಆದರ್ಶ ವಿದ್ಯಾ ಸಂಸ್ಥೆಗೆ ಬದುಕನ್ನು ಮೀಸಲಿಟ್ಟ ನ್ಯಾಷನಲ್ ವಿದ್ಯಾ ಸಂಸ್ಥೆಯ ‘ಪುರುಷ ಸರಸ್ವತಿ’ ಇನ್ನಿಲ್ಲವಾಗಿತ್ತು. ಇಂದಿಗೂ ಆ ಕಟ್ಟಡಕ್ಕೆ ಕಾಲಿಟ್ಟರೆ ಅನಾಥ ಪ್ರಜ್ಞೆ ನನ್ನನ್ನು ಬಿಡದೆ ಕಾಡುತ್ತದೆ. ಇಂದು ನಮ್ಮೆಲ್ಲರ ಬಾಳ ಬೆಳಕು ಶತಮಾನದ ಸಂಭ್ರಮದಲ್ಲಿದೆ. ಅವರ ಚಿಂತನೆಗಳು, ಶಿಸ್ತು, ಕಾರ್ಯ ಕ್ಷಮತೆಗಳನ್ನು ಪಾಲಿಸಿದರೆ, ಅವರ ಆತ್ಮ ಮೇಲಿಂದಲೇ ನಮ್ಮನ್ನು ಹರಸಿ ಹಾರೈಸೀತು.






0 Comments