ಭುವನೇಶ್ವರಿ ಹೆಗಡೆ ಅಂಕಣ- ಏಕಗವಾಕ್ಷಿ ಕೊಠಡಿಯಲ್ಲಿ ಭೇಟಿ…

4

ಕರ್ನಾಟಕದ ಬೇರಾವ ಕಾಲೇಜಿಗೇ ಹೋಗಿ ಸೇರಿದ್ದರೂ ಈ ಬಗೆಯ ಚೇತೋಹಾರಿ ನೆಲ ನನಗೆ ಸಿಗುತ್ತಿತ್ತೋ ತಿಳಿಯದು. ನಾನಾಗ ತುಷಾರ, ತರಂಗ ಪತ್ರಿಕೆಗಳಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದೆ. ತರಂಗ ಸಂಪಾದಕ ಶ್ರೀ ಸಂತೋಷ ಕುಮಾರ ಗುಲ್ವಾಡಿಯವರನ್ನೊಮ್ಮೆ ಕಾಲೇಜ್ ಡೇ ಗೆ ಕರೆಸಿದ್ದೆವು. ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಅವರು ಕಾಲೇಜಿನ ಪ್ರತಿ ಮೂಲೆಯನ್ನೂ ಹೋಗಿ ಹೋಗಿ ನೋಡ ಬಯಸಿದರು. 

ಗುಲ್ವಾಡಿ ದಂಪತಿಗಳನ್ನು ಕಾಲೇಜು ಸುತ್ತಿಸುವ ಕೆಲಸವನ್ನು ನನ್ನ ಪಾಲಿಗೆ ಕೊಟ್ಟಿದ್ದರು. ಆಗ ಎನ್ನೆಸ್ಸೆಸ್ ರೂಮಾಗಿ ಬಳಸಲ್ಪಡುತ್ತಿದ್ದ ಒಂದು ಕೊಠಡಿಯ ಉಪ ಕೊಠಡಿಗೆ ಹೋಗಿ ನಿಂತು ಈ ರೂಮಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಪಂಜೆ ಮಂಗೇಶರಾಯರು ಕೂತುಕೊಳ್ಳುತ್ತಿದ್ದರಂತೆ ಎಂದರು.

ಆ ರೂಮಿಗೆ ನಮ್ಮ ಹಳ್ಳಿಗಳಲ್ಲಿರುವ ಹಾಗೆ ತಲೆಗೇ ತಾಗುವ ಮಾಡು, ಸರಳುಗಳಿಲ್ಲದ ಒಂದೇ ಕಿಡಕಿ ಇತ್ತು. ಮುಂದೆ ಅದೇ ರೂಮು ಅರ್ಥಶಾಸ್ತ್ರ ವಿಭಾಗಕ್ಕೆ ಕೊಡಲ್ಪಟ್ಟು ವಿಭಾಗದ ಮುಖ್ಯಸ್ಥಳಾಗಿ ನಾನು ಆ ರೂಮಿನಲ್ಲಿಯೇ ನನ್ನ ಸೇವಾವಧಿ ಮುಗಿಯುವ ವರೆಗೂ ಕೂತಿದ್ದು ಭಾವನಾತ್ಮಕ ಕೃತಕೃತ್ಯತೆಯನ್ನು ಅನುಭವಿಸಿದ್ದೆ.

ಕನ್ನಡ ಹಾಸ್ಯ ಸಾಹಿತ್ಯಕ್ಕೆ ಪ್ರಮುಖ ಕೊಡುಗೆ ನೀಡಿದ ಇನ್ನೋರ್ವ ಬರಹಗಾರ ಪಡುಕೋಣೆ ರಮಾನಂದ ರಾಯರು. ಅವರು ಇದೇ ಕಾಲೇಜಿನಲ್ಲಿ ಕೆಮಿಸ್ಟ್ರಿ ಪ್ರಾಧ್ಯಾಪಕರಾಗಿದ್ದು ‘ಹುಚ್ಚು ಬೆಳದಿಂಗಳಿನ ಹೂ ಬಾಣಗಳು’ ಕೃತಿಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿದ್ದಾರೆ.                   

೧೯೯೬ ರಲ್ಲಿರಬೇಕು, ಒಂದು ದಿನ ಕ್ಲಾಸು ಮುಗಿಸಿ ಬರುತ್ತಿರುವಾಗಲೇ ಎಟೆಂಡರ್ ಓಡಿ ಬಂದು ಬೆಂಗಳೂರಿನಿಂದ ಯಾರೋ ಬಂದಿದ್ದಾರೆ. ಡಿಪಾರ್ಟಮೆಂಟಲ್ಲಿ ಕೂಡಿಸಿದ್ದೇನೆ ಎಂದ. ಹೋಗಿ ಪರಿಚಯಿಸಿಕೊಂಡೆ. ತಾನು ಪಡುಕೋಣೆ ರಮಾನಂದ ರಾಯರ ಮಗ ಪ್ರಭಾಶಂಕರನೆಂದೂ ಆ ವರ್ಷದ ‘ಪರಮಾನಂದ ಪ್ರಶಸ್ತಿ’ಗೆ ನನ್ನನ್ನು ಆಯ್ಕೆ ಮಾಡಿರುವುದಾಗಿಯೂ ಬೆಂಗಳೂರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಸ್ವೀಕರಿಸಲು ಆಹ್ವಾನ ನೀಡಲು ಬಂದಿರುವುದಾಗಿಯೂ ತಿಳಿಸಿದರು. ಅವರ ತಂದೆ ಪಡುಕೋಣೆ ರಮಾನಂದರಾಯರ ಹೆಸರಿನಲ್ಲಿ ‘ಪರಮಾನಂದ ಪ್ರಶಸ್ತಿ’ಯನ್ನು ಸ್ಥಾಪಿಸಿ ತಾವೇ ಸ್ವತಃ ಸಮಾರಂಭ ಏರ್ಪಡಿಸಿ ಪ್ರಶಸ್ತಿ ನೀಡುತ್ತಿದ್ದರು. ಅವರ ಕುಟುಂಬವೇ ಸಾಹಿತ್ಯ ಸಂಗೀತಗಳ ಆಡೊಂಬಲ. ಸೀತಾದೇವಿ ಪಡುಕೋಣೆ ಉತ್ತಮ ನಾಟಕಗಳಿಗಾಗಿ ಪ್ರಸಿದ್ಧರಾಗಿದ್ದವರು. 

ಬೆಂಗಳೂರಿನಲ್ಲಿ ಟಿ.ಸುನಂದಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೈ.ಎನ್‌ಕೆ. ಅವರಿಂದ ಪ್ರಶಸ್ತಿ ಸ್ವೀಕರಿಸಿ ಕೃತಾರ್ಥಳಾದೆ. ಪಡುಕೋಣೆ ಪ್ರಭಾಶಂಕರ ದಂಪತಿಗಳ ಆದರ ಆತಿಥ್ಯಗಳನ್ನು ಮರೆಯುವಂತಿಲ್ಲ. ಹೀಗೆಯೇ ಹುರುಳಿ ಭೀಮರಾಯರ ಮಗ, ನಂದಳಿಕೆ ಕುಟುಂಬದವರು….

ಹೀಗೆ ದಕ್ಷಿಣ ಕನ್ನಡದ ಅನೇಕ ಸಾಹಿತಿಗಳು ನನ್ನ ಈ ಏಕಗವಾಕ್ಷಿ ಕೊಠಡಿಯಲ್ಲಿ ಬಂದು ಭೇಟಿಯಾಗಿದ್ದಾರೆ. ಅಬ್ಬಕ್ಕ ಉತ್ಸವ, ಸಾಹಿತ್ಯ ಸಮ್ಮೇಳನ ಅನೇಕ ಸನ್ಮಾನ ಸಮಾರಂಭಗಳಿಗೆ, ಭಾಷಣಗಳಿಗೆ ಆಹ್ವಾನ ನೀಡಲು ಬಂದವರನ್ನೆಲ್ಲ ಅದೇ ಕೊಠಡಿಯಲ್ಲಿ ಭೆಟ್ಟಿಯಾಗಿದ್ದೇನೆ. ‘ದಕ್ಷಿಣ ಕನ್ನಡ ಜಿಲ್ಲೆಯ ಹಾಸ್ಯ ಸಾಹಿತ್ಯ’ ಎಂಬ ಕೃತಿಯನ್ನು ಇಲ್ಲಿ ಕೂತೇ ಬರೆದು ಮುಗಿಸಿದ್ದೆ. ನನ್ನ ಕಿಟಕಿಯ ಪಕ್ಕದಲ್ಲಿ ಕನ್ನಡ ವಿಭಾಗವಿತ್ತು.  ಅಲ್ಲಿ ಪ್ರಾರಂಭದಲ್ಲಿದ್ದ ಡಾ. ಅರವಿಂದ ಮಾಲಗತ್ತಿ, ಡಿ ಎನ್ ನಾರಾಯಣ, ನಾಗರತ್ನ ಮೇಡಂ, ಜಲಜಾಕ್ಷಿ ಮೇಡಂ ಡಾ.ಸತ್ಯನಾರಾಯಣ ಮಲ್ಲಿ ಪಟ್ನ… ಅವರ ಜತೆಯೆಲ್ಲ ಕಿಡಕಿ ಸಂಭಾಷಣೆ ದೀರ್ಘವಾಗಿ ನಡೆಸಿ ನಗು, ಚೇಷ್ಟೆ ಮಾತು ಮುಗಿಸಿ ಮನೆಗೆ ತೆರಳುತ್ತಿದ್ದೆವು. ನಾನು ಅರ್ಥಶಾಸ್ತ್ರ ವಿಭಾಗದಲ್ಲಿ ದ್ದರೂ ನನ್ನನ್ನು ಕನ್ನಡ ಪ್ರಾಧ್ಯಾಪಕಿ ಎಂದೇ ಭಾವಿಸಿ ಹುಡುಕಿಕೊಂಡು ಬರುವವರು ಕನ್ನಡ ವಿಭಾಗಕ್ಕೆ ಹೋಗುತ್ತಿದ್ದರು.

ಮಳೆಗಾಲದಲ್ಲಿ ಕ್ಲಾಸು ಮುಗಿಸಿ ಬಂದು ನಸುಗತ್ತಲಿನ ಈ ರೂಮಿನಲ್ಲಿ ಕುಳಿತು ಕಾಫಿ ಹೀರುತ್ತ ಧಬ ಧಬೆಯಂತೆ ಮೇಲ್ಛಾವಣಿಯಿಂದ ಬೀಳುವ ನೀರಿನ ಸಪ್ಪಳವನ್ನು ಕಣ್ಣು ಕಿವಿಗೆ ತುಂಬಿಕೊಳ್ಳುತ್ತಿದ್ದ ನೆನಪು ಕರಾವಳಿಯ ಮಳೆಯಷ್ಟೇ ಗಾಢವಾದುದು. ಸರಕಾರಿ ಕಾಲೇಜಾದರೂ ಕರಾವಳಿಯ ಬೆವರಿಗೆ ಹೆದರಿ ಅನೇಕರು ಇಲ್ಲಿಗೆ ಟ್ರಾನ್ಸ್ ಫರ್ ಬಯಸುತ್ತಿರಲಿಲ್ಲ ಹಾಗಾಗಿ ‘ವರುಷ ವರುಷವೂ ನಾವಿದ್ದಲ್ಲಿಯೇ.’ ಹೊಸ ನೇಮಕಾತಿಗಳು ಆದಾಗ ಮಾತ್ರ ಹೊಸ ಅಧ್ಯಾಪಕರು ಬಂದು ಸೇರುತ್ತಿದ್ದರು.

ಮಂಗಳೂರು ಸರ್ಕಾರಿ ಕಾಲೇಜು ನಗರದಲ್ಲೇ ಹೆಚ್ಚಿನ ವಿಷಯಗಳನ್ನು ಬೋಧನೆಗೆ ಅಳವಡಿಸಿಕೊಂಡಿತ್ತು. ಭೂಗೋಳಶಾಸ್ತ್ರ, ಭೂವಿಜ್ಞಾನ ಶಾಸ್ತ್ರ, ಸಂಖ್ಯಾ ಶಾಸ್ತ್ರ, ಹೋಂ ಸೈನ್ಸ್, ಮಲೆಯಾಳಂ ಇವುಗಳು ಬೇರೆ ಕಾಲೇಜುಗಳಲ್ಲಿ ದೊರೆಯುತ್ತಿರಲಿಲ್ಲ. ಈ ವಿಷಯಗಳನ್ನೇ ಅಪೇಕ್ಷೆಪಟ್ಟು ನಮ್ಮ ಕಾಲೇಜಿಗೆ ಓದಲು ಬರುವ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿತ್ತು. ಹಾಗಾಗಿ ಯಾವ ತರಗತಿಗೆ ಹೋದರೂ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ದೊಡ್ಡದಾಗಿಯೇ ಇರುತ್ತಿತ್ತು.    

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ವೀರಪ್ಪ ಮೊಯಿಲಿಯವರು ನಮ್ಮೀ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾಗಿದ್ದವರು.  ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಅವರ ಹೆಸರಿನಲ್ಲಿ ಅರ್ಥಶಾಸ್ತ್ರದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗೆ ಮೊಯಿಲಿ ಬಂಗಾರದ ಪದಕ ಸ್ಥಾಪಿಸಿ  ನೀಡಲಾಗುತ್ತಿದೆ. ಆಗ ನಮ್ಮ ಈ ಸರಕಾರಿ ಕಾಲೇಜಿನಲ್ಲಿ ವಿದೇಶಗಳಲ್ಲಿ ಓದಿ ಪದವಿ ಪಡೆದು ಬಂದವರಿಗೆ ಮಾತ್ರ ಪ್ರಾಂಶುಪಾಲರ ಹುದ್ದೆ ಸಿಗುತ್ತಿತ್ತಂತೆ.   

ಚೆಟ್ಟೂರು, ಹಶ್ಮಿ ಎಂಬ ಅನೇಕ ವಿದ್ವಾಂಸರ ಪ್ರಾಂಶುಪಾಲರುಗಳ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿಸಿಡವಂಥದ್ದೆನ್ನುತ್ತಾರೆ. ಆ ಉಚ್ಛ್ರಾಯ ಸ್ಥಿತಿಯಲ್ಲಿ ವೀರಪ್ಪ ಮೊಯಿಲಿ ಸಂತೋಷ್ ಕುಮಾರ್ ಗುಲ್ವಾಡಿ, ಕೇಂದ್ರದ  ಮಾಜಿ ಸಭಾಪತಿ ಸಯೀದ್, ಕರ್ಣಾಟಕ ಬ್ಯಾಂಕಿನ ಫೌಂಡರ್ ಕೃಷ್ಣ ಭಟ್, ಮಾಜಿ ಮಂತ್ರಿ ರಮಾನಾಥ ರೈ ಇಂಥವರೆಲ್ಲ ಹಳೇ ವಿದ್ಯಾರ್ಥಿಗಳಾಗಿದ್ದ ಮಂಗಳೂರು ಸರ್ಕಾರಿ ಕಾಲೇಜು ಒಂದು ಹಂತದಲ್ಲಿ ನಿರ್ವಹಣೆಗೆ ಸರ್ಕಾರದ ಅನಾದರಕ್ಕೆ ತುತ್ತಾದ ಲಕ್ಷಣಗಳು ಕಂಡು ಬರತೊಡಗಿದವು.   

ಆಗ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗಬಹುದು ಎಂಬ ಕಾಳಜಿ ಇವರೆಲ್ಲರಲ್ಲಿ ಮನೆ ಮಾಡಿತ್ತು. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಶಿಕ್ಷಣ ತಜ್ಞರಾದ ಡಾ ಸವದತ್ತಿಯವರು ಕುಲಪತಿಗಳಾಗಿ ಬಂದಿದ್ದರು. ಆಗ ವೀರಪ್ಪ ಮೊಯಿಲಿ ಕೇಂದ್ರ ಸರಕಾರದಲ್ಲಿ ಮಂತ್ರಿಗಳಾಗಿದ್ದರು. ಸರಕಾರಿ ಕಾಲೇಜನ್ನು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸುವ ಐತಿಹಾಸಿಕ ತೀರ್ಮಾನ ಇವರಿಬ್ಬರ ನಡುವೆ ಆಯಿತು. 

ಬ್ರಿಟಿಷರ ಕಾಲದಲ್ಲಿ ಮಂಗಳೂರು ನಗರದ ಹತ್ತು ಸಮಸ್ತರು ಹಣ ಒಟ್ಟು ಸೇರಿಸಿ ಕಟ್ಟಿದ ಕಾಲೇಜು ಸರ್ಕಾರಿ ಕಾಲೇಜು. ಹಾಗೆಯೇ ಮುಂದುವರಿಯಬೇಕೆಂಬ ಅಭಿಪ್ರಾಯ ಊರವರಿಂದ ಬಂದಿತ್ತಾದರೂ ಸರ್ಕಾರ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳೆರಡೂ ಸೇರಿ ತೀರ್ಮಾನ ಮಾಡಿದ್ದರಿಂದ ಮಂಗಳೂರಿನ ಅತ್ಯಂತ ಹಳೆಯ ಸರ್ಕಾರಿ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: