ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಿನ್ನ ಹಾದಿಯ ವಿಮರ್ಶಕ

kallesh kumbar

 ಕಲ್ಲೇಶ್ ಕುಂಬಾರ್, ಹಾರೂಗೇರಿ

 

ಕೃತಿ: ಕಾಣ್ಕೆ ಕಣ್ಕಟ್ಟು
ಲೇಖಕರು: ಸುರೇಶ ನಾಗಲಮಡಿಕೆ
ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ
ಪ್ರಕಟಣೆ: 2015; ಪುಟ: 174; ಬೆಲೆ: 200/-

kaanke kankattu cover‘ಕಾಣ್ಕೆ ಕಣ್ಕಟ್ಟು’- ಹೊಸ ತಲೆಮಾರಿನ ಬಹುಮುಖ್ಯ ವಿಮರ್ಶಕರೆನಿಸಿಕೊಂಡಿರುವ ಸುರೇಶ ನಾಗಲಮಡಿಕೆಯವರ ಇತ್ತೀಚಿನ ವಿಮರ್ಶಾ ಕೃತಿ.

ಬಹುತೇಕ ವಿಮರ್ಶಕರು ಹೊಸ ತಲೆಮಾರಿನ ಬರಹಗಾರರನ್ನು ಕಡೆಗಣಿಸಿ, ಒಂದು ಕಾಲಘಟ್ಟದ ಹಿರಿಯ ಬರಹಗಾರರಿಗಷ್ಟೇ ಸೀಮಿತಗೊಂಡಿರುವ ಈ ಸಂದರ್ಭದಲ್ಲಿ ಅದೇ ಹೊಸ ತಲೆಮಾರಿನ ಬರಹಗಾರರ ನಡುವೆ ಭಿನ್ನ ಹಾದಿಯನ್ನು ಹುಡುಕಿಕೊಂಡಿರುವ ಇವರು ವಿಮರ್ಶೆಯನ್ನು ಆಸಕ್ತಿಕರ ಕ್ಷೇತ್ರವಾಗಿ ಆರಿಸಿಕೊಂಡು, ಅದನ್ನು ಸೃಜನಶೀಲ ಚಟುವಟಿಕೆಯೆಂಬಂತೆ ಎಲ್ಲ ವಯೋಮಾನದ ಬರಹಗಾರರನ್ನು ಒಳಗೊಳ್ಳುತ್ತ ಮುನ್ನಡೆದಿದ್ದಾರೆ. ಅಂತೆಯೇ, ಸುರೇಶ ನಾಗಲಮಡಿಕೆಯವರ ಈ ವಿಮರ್ಶಾ ಕೃತಿ ಚರ್ಚೆಗೊಳಪಡಬೇಕಾಗಿರುವ ಕೃತಿಯೂ ಆಗಿದೆ.

suresh nagalamadike2ಪ್ರಸ್ತುತ, ಈ ಕೃತಿಯಲ್ಲಿ, ತಾತ್ವಿಕತೆ, ಕಾವ್ಯ ಮತ್ತು ಕೃತಿ ಪರೀಕ್ಷೆ ಎಂಬ ಮೂರು ಭಾಗಗಳಿದ್ದು ವಿಷಯ ವೈವಿಧ್ಯತೆಯನ್ನೊಳಗೊಂಡ ಹಿರಿಯ-ಕಿರಿಯ ಲೇಖಕರ ಕೃತಿಗಳ ಬಗ್ಗೆ, ಆಯಾ ಕಾಲಘಟ್ಟದ ಸಾಂಸ್ಕೃತಿಕ, ಧಾರ್ಮಿಕ, ರಾಜಕಾರಣದ ಬಗ್ಗೆ ಸುರೇಶ್ ಅವರು ಚರ್ಚಿಸಿದ್ದಾರೆ.

ಇಲ್ಲಿ, ‘ಪಂಪನ ನುಡಿಗಣಿ ಮತ್ತು ಸಮಕಾಲೀನ ದಂದುಗಳು’ ವಿಮರ್ಶಾ ಲೇಖನ, ಬರಹಗಾರರ ಕೃತಿಗಳಿಗೆ ಪದಕೋಶಗಳು ಇರಬೇಕಾದ ತುರ್ತು ಕಾರಣಗಳು ಮತ್ತು ಆ ಕಾರಣಗಳಿಗೆ ಉತ್ತರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿದೆ. ಆಯಾ ಕಾಲಗಟ್ಟದ ಬರಹಗಾರರಿಂದ ಬಳಸಲ್ಪಟ್ಟಿರುವ ನುಡಿಗಳು ಆಯಾ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಂದರ್ಭಗಳಲ್ಲಿನ ಘಟನೆಗಳ ಮೇಲೆ ಈ ಲೇಖನ ಬೆಳಕು ಚೆಲ್ಲುವುದರೊಂದಿಗೆ ವರ್ತಮಾನ ಸಂದರ್ಭದಲ್ಲಿನ ಇಂಥವೇ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಂತಿರುತ್ತದೆ ಎಂಬುದನ್ನು ನುಡಿಗಳ ಬಳಕೆಯ ವಿಚಾರವನ್ನು ಉಲ್ಲೇಖಿಸುವುದರ ಮೂಲಕ ಖಚಿತವಾದ ತಾರ್ಕಿಕ ನಿಲುವಿಗೆ ತಂದು ನಿಲ್ಲಿಸುತ್ತದೆ.

ಇನ್ನು, ಸಿದ್ಧರಾಮನ ವಚನಗಳ ಕುರಿತಾದ ಟಿಪ್ಪಣಿ ರೂಪದ ಮಾತುಗಳಿರುವ ‘ಲಿಂಗಧ್ಯಾನಿ ಸಿದ್ಧರಾಮೇಶ್ವರ’ ವಿಮರ್ಶಾ ಲೇಖನವು ಹನ್ನೆರಡನೇ ಶತಮಾನದ ಸಾಮಾಜಿಕ, ರಾಜಕೀಯ, ಧಾರ್ಮಿಕ ಚರಿತ್ರೆಯನ್ನು ಸಿದ್ಧರಾಮನ ವಚನಗಳ ಮೂಲಕವೇ ಅರಿತುಕೊಳ್ಳಲು ಸಾಹಿತ್ಯ ಮತ್ತು ಧಾರ್ಮಿಕ ತತ್ವಗಳನ್ನು ಏಕತ್ರಗೊಳಿಸಿ ಚಿಂತನೆಗಿಳಿಯುತ್ತದೆ. ಸಿದ್ಧರಾಮನು, ವರ್ತಮಾನವನ್ನು ಎದುರುಗೊಳ್ಳುವಾಗ ಎಲ್ಲಕಾಲಕ್ಕೂ ಇರುವ ನೈತಿಕತೆಯ ಪಾತಳಿಯನ್ನು ಮೀರಿದ ಕ್ರಿಯೆಗಳ ಮೂಲವನ್ನು ಹುಡುಕಲು ತನ್ನ ವಚನಗಳಲ್ಲಿ ಗುರುತನದ ಮಹಿಮೆಯ ಮುಖಾಂತರವೇ ತನ್ನ ದೃಷ್ಟಿಕೋನವನ್ನು ರೂಪಿಸಿಕೊಂಡಿರುವ ಬಗೆಯನ್ನು ಸುರೇಶ್ ಅವರು ಖಚಿತವಾಗಿ ಗುರುತಿಸಿದ್ದಾರೆ.

ಹಾಗೆಯೇ, ‘ಕಾಡಿನ ಹುಡುಗ ಸುಬ್ರಹ್ಮಣ್ಯನ ಸುತ್ತ’ ಲೇಖನ, ಸುಬ್ರಹ್ಮಣ್ಯನ ಪೌರಾಣಿಕ ನೆಲೆಗಳನ್ನು ಗುರುತಿಸುತ್ತಲೇ ಆತನ ಚರಿತ್ರೆಗೆ ಮಡಿವಂತಿಕೆಯನ್ನು ಯಾಕಾಗಿ ಸೇರಿಸಿದರು ಎಂಬುದರ ಹಿಂದಿನ ಕಾರಣಗಳಿಗೆ ಉತ್ತರವನ್ನು ಹುಡುಕಲು ಪ್ರಯತ್ನಿಸುತ್ತದೆ ಈ ಮೂಲಕ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಡೆಸ್ನಾನ ಪದ್ಧತಿಯನ್ನು ಪರಂಪರೆಯಾಗಿ ರೂಪಿಸುವ ಮೂಲಕ ಅಸಮ ಜಾತಿಗಳ ನಡುವಿನ ಅಂತರವನ್ನು ಈಗಲೂ ಕಾಪಿಟ್ಟುಕೊಂಡು ಹೋಗುತ್ತಿರುವ ಮೂಲಭೂತವಾದಿಗಳು ನಮ್ಮ ಸಂವಿಧಾನವನ್ನೇ ಅಪಮಾನಿಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸುತ್ತದೆ.
ಮತ್ತು, ‘ನುಗಡೋಣಿ ಕಥೆಗಳಲ್ಲಿ ಗ್ರಾಮಲೋಕ ಮತ್ತು ಜಾತಿಸಂಕರ’ ವಿಮಶರ್ಾಲೇಖನ, ಅಮರೇಶರ ಕಥೆಗಳಲ್ಲಿ ಬರುವ ಗ್ರಾಮಲೋಕದಲ್ಲಿನ ಅಸಮ ವರ್ಣಗಳ ನಡುವಿನ ಸಂಬಂಧ, ಮನುಷ್ಯರ, ಸಮುದಾಯಗಳ ಆಳದ ದುರಂತಗಳನ್ನು ವಿಷಾದದೊಂದಿಗೆ ಪ್ರಕಟಿಸುವ ಕ್ರಮವನ್ನು ಗುರುತಿಸುತ್ತದೆ.

ಮತ್ತೊಂದು, ‘ಹರಿದಾಸ ಪಂಥ: ಒಂದ ನೋಟ’ ವಿಮಶರ್ಾ ಲೇಖನ, ಮಠದ ಅಂಗಳದಲ್ಲಿ ಕಾಣಿಸಿಕೊಂಡ ಹರಿದಾಸ ಪಂಥದ ಕೀರ್ತನೆಗಳು ಮಠದ ಅಂಗಳದಾಚೆ ಬಂದು ಕಾಲದ ಸಿದ್ಧಾಂತಗಳನ್ನು ಒಳಗು ಮಾಡಿಕೊಳ್ಳುತ್ತ ಹೇಗೆ ಜನಮುಖಿಯಾದವು ಎಂಬುದನ್ನು ಶೋಧಿಸುತ್ತದೆ.

ಅಲ್ಲದೇ, ‘ಕನ್ನಡ ಮತ್ತು ತೆಲಂಗಾಣ ಸಮಸ್ಯೆ, ಏಕೀಕರಣ ಇತ್ಯಾದಿ’ ಲೇಖನವು ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರವಷ್ಟೇ ಭಾಷಾ ಸಮಸ್ಯೆಗಳು ಹೆಚ್ಚಾಗಿರುವುದರ ಹಿಂದಿನ ಕಾರಣಗಳ ಬಗ್ಗೆ ಚರ್ಚಿಸುತ್ತಲೇ ನಮ್ಮ ನೆಲದ ಸಮಸ್ಯೆಗಳೊಂದಿಗೆ ಪಕ್ಕದ ತೆಲಂಗಾಣದ ಸಮಸ್ಯೆಗಳೊಂದಿಗೆ ತುಲಣೆ ಮಾಡಿ ನೋಡುತ್ತದೆ. ಕೊನೆಯಲ್ಲಿ, ಒಂದು ಭಾಷೆಯ ಹಿಂದೆ ಸಮುದಾಯಗಳ ಸಂಸ್ಕೃತಿಯೂ ಸಹ ಕೆಲಸ ಮಾಡುವುದರಿಂದ ಏಕೀಕರಣ ಕ್ರಮವೇ ಅವೈಜ್ಞಾನಿಕವಾಗಿದ್ದು, ಒಂದು ಪ್ರದೇಶದಲ್ಲಿ ನೆಲೆಸಿರುವ ವಿವಿಧ ಭಾಷೆಗಳನ್ನಾಡುವ ಜನರನ್ನು ಮಾನಸಿಕವಾಗಿ ಒಗ್ಗೂಡಿಸಬೇಕಾಗಿರುವುದು ಈ ಹೊತ್ತಿನ ತುರ್ತು ಎಂಬ ಅರ್ಥವನ್ನೂ ಸಹ ಧ್ವನಿಸುತ್ತದೆ.

ಈ ವಿಮರ್ಶಾ ಲೇಖನಗಳೊಂದಿಗೆ ಕಾವ್ಯ ವಿಭಾಗದಲ್ಲಿ ಎಚ್. ಎಸ್. ಆರ್ ಅನುವಾದಿಸಿದ ‘ಆಪ್ರಿಕಾದ ನೂರು ಕವಿತೆಗಳು’, ಎ. ಕೆ. ಹಂಪಣ್ಣ, ಎಸ್. ಮಂಜುನಾಥ, ಎಲ್. ಹನುಮಂತಯ್ಯ, ಆರಿಫ್ ರಾಜಾ, ರಮೇಶ್ ಅರೋಲಿ, ಚೀಮನಹಳ್ಳಿ ರಮೇಶಬಾಬು, ವಿಠಲ ದಳವಾಯಿ, ಟಿ. ಯಲ್ಲಪ್ಪ, ಲಕ್ಷ್ಮೀಪತಿ ಕೋಲಾರ- ಮುಂತಾದ ಹಿರಿಯ-ಕಿರಿಯ ಕವಿಗಳ ಕವನ ಸಂಕಲನಗಳ ಕುರಿತಾಗಿ ಬರೆದ ವಿಮರ್ಶಾ ಲೇಖನಗಳು ಮತ್ತು ‘ಕೃತಿ ಪರೀಕ್ಷೆ’ ವಿಭಾಗದಲ್ಲಿ ಇನ್ನಷ್ಟು ಗಹನವಾದ ವಿಮರ್ಶಾ ಲೇಖನಗಳೂ ಸಹ ಇವೆ.

 

‍ಲೇಖಕರು Admin

20 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading