ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾರತಿಗೆ ಸಿಕ್ಕ ಆಟೋ 'ಸ್ವಾಮಿ'

ಬಿ ವಿ ಭಾರತಿ 

ಮೋಹನಸ್ವಾಮಿ ನಾಟಕ ನೋಡಿದ ನಂತರ ಕಲಾಕ್ಷೇತ್ರದಲ್ಲೇ ಮಾತಾಡುತ್ತ ನಿಂತಿದ್ದೆ. ಎದುರಿಗೊಂದು ಆಟೋ ಕಂಡಾಗ ‘ಬಸವೇಶ್ವರ ನಗರಕ್ಕೆ ಬರ್ತೀರಾ’ ಅಂದೆ. ಹೂ ಅಂತ ತಲೆಯಾಡಿಸಿದರು. ಹೋಗಬೇಕಾದ ರೂಟ್ ಹೇಳಿ ಕೂತೆ. ಒಂದರ್ಧ ಕಿಲೋಮೀಟರ್ ಹೋಗುವುದರಲ್ಲಿ ಆತ ಇದ್ದಕ್ಕಿದ್ದಂತೆ ‘ನಾಟಕ ಎಷ್ಟು ದಿನ practice ಮಾಡ್ತಾರೆ ಮೇಡಂ’ ಅಂದರು.‌ ನಾನು ನನಗಿದ್ದ ಅಲ್ಪಜ್ಞಾನದ ಪ್ರಕಾರ ಎರಡು ತಿಂಗಳು ಬೇಕಾಗಬಹುದು ಅಂದೆ.

auto-swamy‘ಇವತ್ತಿನ ಮಕ್ಕಳು ಎಷ್ಟು ಚೆನಾಗಿ ಮಾಡಿದ್ರಲ್ವಾ’ ಅಂದಾಗ ಕಿವಿ ನಿಮಿರಿತು …

‘ನಾಟಕ ನೋಡಕ್ಕೆ ಬಂದಿದ್ರಾ’ ಅಂದೆ. ‘ಹೂ ಮೇಡಂ. ನಂಗೆ ನಾಟಕ ತುಂಬ ಇಷ್ಟ. ಕಳೆದ 18 ವರ್ಷದಿಂದ ಕಲಾಕ್ಷೇತ್ರದಲ್ಲಿ ಬರೋ ಒಂದು ನಾಟಕಾನೂ ಬಿಡಲ್ಲ! ಬೆಳಿಗ್ಗೆ ಟ್ರಿಪ್ ಹೋಗುವಾಗ್ಲೇ ಯಾವ್ದಿದೆ ಅಂತ ನೋಡಿ ಹೋಗಿರ್ತೀನಿ. ಸಂಜೆಗೆ ಡ್ಯೂಟಿ ಮುಗಿಸಿ ಹಾಜರಾಗ್ತೀನಿ. ಈ ನಡುವೆ ಕಲಾಗ್ರಾಮಕ್ಕೂ ಹೋಗ್ತಿರ್ತೀನಿ …’ ಹೀಗೆ ಮಾತು ಶುರು ಮಾಡಿದವರು ಹೋದ ತಿಂಗಳು ಇದ್ದ ವೃತ್ತಿ ರಂಗಭೂಮಿಯ ನಾಟಕೋತ್ಸವದ ಎಲ್ಲ ನಾಟಕಾನೂ ನೋಡಿದೆ ಅಂದರು.

ನಾನು ಆಶ್ಚರ್ಯದಿಂದ ಕೇಳ್ತಿದ್ದೆ.

ಹಿಂದೆ ಎಲ್ಲ ಅದೇ ಮಹಾಭಾರತ, ರಾಮಾಯಣದ್ದೇ ಬರ್ತಿತ್ತು. ಈಗೀಗ ಏನೆಲ್ಲ ವಿಷಯ ಆರಿಸ್ಕೊಳ್ತಾರೆ ಅಲ್ವಾ? ನೆನ್ನೆ ಕಾರ್ಬನ್ ಕೇಕ್ ಅಂತ ಒಂದಿತ್ತು. ಭಲೇ ಚೆನ್ನಾಗಿತ್ತು ಮೇಡಂ. 2070 ನೇ ವರ್ಷದಲ್ಲಿ ನೀರಿಗಾಗಿ ಮನುಷ್ಯ ಕೊಲೆ ಮಾಡೋ ಮಟ್ಟಕ್ಕೆ ಹೊರಟೋಗೋ ಥರದ ಕತೆ ಅದು. ಬರ್ತದೆ ಮೇಡಂ, ಆ ಕಾಲ ಬರ್ತದೆ ಒಂದಿನ ನೋಡ್ತಿರಿ. ಈಗ 30 ವರ್ಷಗಳ ಕೆಳ್ಗೆ ಆಟೋ ಓಡ್ಸುವಾಗ ಛಳಿಗೆ ಸಾಯಂಗಾಗ್ತಿತ್ತು. ಈಗ ಬಟ್ಟೆ ಬಿಚ್ಕಂಡ್ರೆ ಮರ್ಯಾದೆ ಅಲ್ಲ ಅಂತ ಹಾಕೋಬೇಕಷ್ಟೇ. ಹಿಂದೆ ಒಬ್ಬ ಹೇಳಿದ್ದ ಹಾಲಿನ ಬೆಲೆಗಿಂತ ನೀರಿನ ಬೆಲೆ ಜಾಸ್ತಿ ಆಯ್ತದೆ ನೋಡ್ತಿರು ಅಂತ… ಈಗ ಅಂಗೇ ಆಗಿದ್ಯಲ್ವಾ! ಇನ್ನು ಕಾರ್ಬನ್ ಕೇಕ್ ಥರದ್ದೂ ಆಗತ್ತೆ …’ ಅಂತ ಪೂರಾ ಕತೆ ಹೇಳಿ ಮುಂದಿನ ಶೋ ಮಿಸ್ ಮಾಡ್ಕಬೇಡಿ ಅಂತ ಆಗ್ರಹಿಸಿದರು ಕೂಡಾ!

ಇವತ್ತಿನದ್ದು ಹೇಗಿತ್ತು ಅಂದೆ

theatreಅಯ್ಯೋ ಚೆನ್ನಾಗಿತ್ತು ಮೇಡಂ. ನಮ್ ವೃತ್ತೀಲಿ ಇಂಥ ಎಷ್ಟು ಜನ ಸಿಕ್ಕವ್ರೆ ಗೊತ್ತಾ? ನಮ್ಮ ಫ್ರೆಂಡ್ ಒಬ್ಬ ಮಾರ್ಕೆಟ್ಟಲ್ಲಿ ಮೂಟೆ ಹೊರ್ತಿದ್ದ. ಒಂದಿನ ಇದ್ಕಿದ್ದಂಗೆ ನಾನು ಗಂಡಲ್ಲ ಹೆಣ್ಣು ಅಂತ ಸೀರೆ ಉಟ್ಕೊಂಡು ಬರಕ್ಕೆ ಶುರು ಮಾಡಿದ! ಇನ್ನೊಬ್ಬ ಪರಿಚಯದೋನು ಮದುವೆ, ಮಕ್ಳು ಎಲ್ಲ ಆದ್ಮೇಲೆ ನಂಗೆ ಹೆಣ್ಣಾಗಿರಕ್ಕೆ ಇಷ್ಟ ಅಂತ ಹೇಳ್ಬುಟ್ಟ. ಒಳ್ಳೆದಲ್ವಾ ಹೆಂಗೆ ಬದುಕಬೇಕು ಅನ್ಸತ್ತೋ ಹಂಗೆ ಬದುಕೋದು ಮುಖ್ಯ’ ಅಂತ ಹೇಳ್ತಾ ಹೋದಾಗ ನಾನು ಬೆರಗಾಗಿ ಕೇಳ್ತಿದ್ದೆ…

ಬಸವೇಶ್ವರ ನಗರ ಸಿಕ್ಕಿತು

ರಾಮಕೃಷ್ಣರ ಫೋಟೋ ಬೇಕು ಅಂದೆ
ಇಳಿದು ಹೀಗೆ ಪೋಸ್ ಕೊಟ್ಟರು …

‍ಲೇಖಕರು Admin

22 December, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading