ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾನು ಮುಷ್ತಾಕ್: ಮೌನದ ರಾಜಕಾರಣ ಅಪಾಯಕಾರಿ..

ಹಾಸನದ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ನಲ್ಲಿ ನಡೆದ “ಯುವಸಮುದಾಯದಲ್ಲಿ ಸಾಹಿತ್ಯಿಕ ಅಭಿರುಚಿ”ಎಂಬ ಗೋಷ್ಠಿಯಲ್ಲಿ

ಹಿರಿಯ ಲೇಖಕಿ ಬಾನುಮುಷ್ತಾಕ್ ರವರು ಮಾಡಿದ ಮಾತುಕತೆಯ ಸಂಗ್ರಹರೂಪ.

ಗುಲಾಬಿ ವರ್ಣನೆ ಹಾಗು ದೆಲ್ಲಿ ರೇಪ್

ಮೌನದ ರಾಜಕಾರಣ ಅಪಾಯಕಾರಿ. ಯಾವ ಕಡೆಯೂ ನಿಲ್ಲದೇ ಇರುವುದು ಕೂಡ ಒಂದು ಕಡೆ ನಿಲ್ಲುವುದೇ ಆಗಿರುತ್ತದೆ. ಸಾಹಿತಿಯಾದವನು ಮೌನದ ಚಿಪ್ಪಿನಿಂದ ಹೊರಬರಬೇಕು..ಆತನ ಮೌನ ಹಲವು ಅಪಾಯಗಳಿಗೆ ಎಡೆ ಮಾಡಿಕೊಡುತ್ತದೆ. ಮೌನವೆಂಬುದು ನಿಜಕ್ಕೂ ಅಪಾಯಕಾರಿ.
ಒಂದು ಕಾಡಿನಲ್ಲಿ ಸುಂದರವಾದ ಜಿಂಕೆಯಿದೆ.ಅದನ್ನು ಬೇಟೆಯಾಡಲು ರಾಜ ರಥದಲ್ಲಿದ್ದಾನೆ, ರಥದ ಹಿಂದೆ ಭಟರು ಓಡಿಬರುತ್ತಿದ್ದಾರೆ. ಈ ರೂಪಕದಲ್ಲಿ ಬರಹಗಾರನಾದವನು ಎಲ್ಲಿ ಗುರುತಿಸಿಕೊಳ್ಳುತ್ತಾನೆ ಎಂಬುದು ಮುಖ್ಯ. ಜಿಂಕೆಯ ಜತೆ ಗುರುತಿಸಿಕೊಳ್ಳಬಹುದು. ರಥದ ಹಿಂದೆ ಓಡಿಬರುತ್ತಿರುವ ಹಿಂಬಾಲಕರ ಜತೆ ಗುರುತಿಸಿಕೊಳ್ಲಬಹುದು.. ಬೇಟೆಯಲ್ಲಿ ನಿರತನಾಗಿರುವ ರಾಜನ ಜತೆ ಗುರುತಿಸಿಕೊಂಡು ಬಾಣದ ಜತೆ ಮಾತನಾಡಬಹುದು. ಇಲ್ಲಿ ವಿದ್ವಂಸಕತೆಯಿದೆ, ಸೌಂದರ್ಯದ ಪ್ರತೀಕವಾಗಿ ಜಿಂಕೆಯಿದೆ, ಹೊಗಳುಭಟ್ಟರಾಗಿ ಹಿಂಬಾಲಕರಿದ್ದಾರೆ, ನಮ್ಮ ಬರವಣಿಗೆಯ ಮೂಲವನ್ನು ಇದರಲ್ಲಿ ಗುರುತಿಸಬಹುದು.

ಸಾಹಿತಿಯಾದವನು ಮಾತನಾಡುವುದಷ್ಟೇ ಅಲ್ಲ, ಏನು ಮಾತನಾಡುತ್ತಾನೆ ಎಂಬುದು ಮುಖ್ಯವಾದ ವಿಚಾರ. ದೆಹಲಿಯಲ್ಲಿ ಗ್ಯಾಂಗ್ ರೇಪ್ ನಡೆಯುತ್ತಿರುವಾಗ ಗುಲಾಬಿಯನ್ನು ವರ್ಣಿಸುತ್ತಾ ಕೂರುವುದು ಸರಿಯಾದ ಲಕ್ಷಣವಲ್ಲ. ಈ ನಿಟ್ಟಿನಲ್ಲಿ ಸಾಹಿತಿಗೆ ಸಾಮಾಜಿಕ ಜವಾಬ್ದಾರಿಯಿದೆ.

ಬರೆಯಲು ಹೊರಟವರು ಹತ್ತು ಸಾವಿರ ಗಂಟೆ ಓದಿರಬೇಕು.ಇದು ಬರಹವನ್ನು ಗಟ್ಟಿಗೊಳಿಸುತ್ತದೆ. ಗ್ರಹಿಕೆ ಅನ್ನುವುದು ಲೇಖಕನ ಮೂಲ ದ್ರವ್ಯ. ಪ್ರತಿಯೋಂದು ವಿಚಾರವನ್ನು ಸೂಕ್ಷ್ಮವಾಗಿ ಗ್ರಹಿಸುವುದು ಅವಶ್ಯಕ. ಸೂಕ್ಷ್ಮ ಗ್ರಹಿಕೆಯಿಲ್ಲದೇ ಬರವಣಿಗೆ ಅಸಾದ್ಯ.
ನಾನು ವಕೀಲಿ ವೃತ್ತಿಯಿಂದ ಸಾಕಷ್ಟು ಅನುಕೂಲವನ್ನು ಪಡೆದಿದ್ದೇನೆ. ಕಕ್ಷಿದಾರರು ಏನ್ನೂ ಮುಚ್ಚಿಡದೇ ಎಲ್ಲವನ್ನು ಹೇಳುವುದರಿಂದ ನನಗೆ ಸಾಕಷ್ಟು ಸಾಮಗ್ರಿ ಸಿಗುತ್ತದೆ. ಒಮ್ಮೆ ಗಂಡ ಹೆಂಡತಿ ವಿಚ್ಚೇದನಕ್ಕೆ ಸಂಬಂದಿಸಿದಂತೆ ಬಂದಿದ್ದರು. ತನ್ನ ವಿದವೆ ತಾಯಿ ಹಾಗು ಹೆಂಡತಿಯ ನಡುವೆ ಹೊಂದಾಣಿಕೆ ಇಲ್ಲದ್ದರಿಂದ ಗಲಾಟೆ ವಿಪರೀತವಾಗಿತ್ತು. ಅವರು ನನ್ನೆದುರಿಗೆ ಅವರು ನನ್ನೆದುರಿಗೆ ಅವರ ಖಾಸಗಿ ಕೋಣೆಯಲ್ಲಿ ಗಲಾಟೆ ಮಾಡುವಂತೆ ಮಾಡುತ್ತಿದ್ದರು. ತನ್ನ ತಾಯಿಯನ್ನು ಕುರಿತು ಮಾತನಾಡುತ್ತಾ…ನನ್ನ ಅಮ್ಮನಿಗೆ ಪಂಜಾಬಿ ಡ್ರೆಸ್ ಹಾಕಿಸುತ್ತೇನೆ, ಮತ್ತೆ ಮದುವೆ ಬೇಕಾದರೂ ಮಾಡುತ್ತೇನೆ ಎಂದು ಗಂಟಾಘೋಷವಾಗಿ ಹೇಳಿದನು. ಒಬ್ಬ ಮಗ ತನ್ನ ತಾಯಿಯ ಮರುಮದುವೆ ಬಗ್ಗೆ ಮಾತನಾಡುವುದು ಅಷ್ಟು ಸುಲಬದ ಮಾತಲ್ಲ. ಅದೇ ನನಗೆ ಒಂದು ಕತೆಯ ವಸ್ತುವಾಯಿತು.
ನಾವು ಬರೆಯುವಾಗ ನಮ್ಮ ಕ್ಷೇತ್ರ ಯಾವುದು ಎಂಬುದು ಬಹಳ ಮುಖ್ಯ. ನನಗೆ ಕವನ ಅಷ್ಟಾಗಿ ಒದಗಿ ಬರಲಿಲ್ಲ. ನನಗೆ ಅನಿಸಿದ್ದನ್ನು ಗದ್ಯದಲ್ಲಿ ಹೇಳುವಂತೆ ಪದ್ಯದಲ್ಲಿ ಹೇಳಲಾರೆ ಎಂಬುದು ಗೊತ್ತಿದೆ. ಎಲ್ಲಾ ಪ್ರಕಾರಗಳಲ್ಲೂ ಶಕ್ತವಾಗಿ ಬರೆಯುವವರಿದ್ದಾರೆ. ಅದು ಅವರ ಶಕ್ತಿ.

ಈಗ ಆತ್ಮಕತೆಗಳು ತುಂಬಾ ಬರುತ್ತಿವೆ. ಆತ್ಮಚರಿತ್ರೆ ಎಂಬುದು ದಿನಚರಿತೆಯ ಚರಿತ್ರೆಯಾಗಬಾರದು. ಇದುವರಗೆ ವಾಸ್ತವತೆಯನ್ನು ಮರೆಮಾಚುವ ಕೆಲಸ ನಡೆಯುತ್ತಿತ್ತು. ಈಗ ಸಾಮಾಜಿಕವಾಗಿ ಪ್ರಮುಖವಲ್ಲದ ಖಾಸಗಿ ವಿಷಯಗಳು ಬ್ರೇಕಿಂಗ್ ನ್ಯೂಸಿನಂತೆ ಬಿಕರಿಯಾಗುತ್ತಿವೆ. ಇದಕ್ಕಾಗಿ ಓದುವವರು ತುಂಬಾ ಚೂಸಿಯಾಗಿರಬೇಕು.
ನನಗೀಗ ನಿವೃತ್ತಿ ಬೇಕು ಅಂತಾ ಮನೆಯವರಿಗೆ ಹೇಳಿರುವೆನಾದರೂ ಸಾಹಿತ್ಯಿಕ ವಸ್ತುಗಳಿಗಾಗಿ, ಸಾಮಾಜಿಕ ಕಾರ್ಯಗಳಿಗಾಗಿ ವಕೀಲಿ ವೃತ್ತಿಯನ್ನು ಮುಂದುವರೆಸುತ್ತೇನೆ. ಯಾರಾದರೂ ಅಷ್ಡೇ ಬರವಣಿಗೆಯ ಅಭ್ಯಾಸದಲ್ಲಿ ದುಡಿಮೆಯನ್ನು ನಿರ್ಲ್ಯಕ್ಷಿಸಬಾರದು. ಸಾಹಿತ್ಯಬರವಣಿಗೆ ನಮ್ಮ ಪ್ರಮುಖ ಆದಾಯ ಮೂಲವಾಗಿ ರೂಪುಗೊಂಡಿಲ್ಲ. ತಮ್ಮ ಬದುಕಿನ ಅವಶ್ಯಕತೆಗಾಗಿ ಬರವಣಿಗೆಯ ಜೊತೆಗೆ ಪ್ರಮುಖ ವೃತ್ತಿಯೂ ಅಗತ್ಯವಾಗಿರಬೇಕು.
ವರದಿ: ಹಾಡ್ಲಹಳ್ಳಿ ಪ್ರಕಾಶನ

‍ಲೇಖಕರು G

1 February, 2013

3 Comments

  1. ಉಷಾಕಟ್ಟೆಮನೆ

    ನಿಮ್ಮ ನಿಲುವು ನನಗೆ ಇಷ್ಟವಾಯಿತು. ಬರವಣಿಗೆಯೆನ್ನುವುದೇ ಒಂದು ರೀತಿಯ ಪ್ರತಿಭಟನೆ. ಆದರೆ ಇತ್ತೀಚೆಗೆ ನಮ್ಮ ದೇಶದಲ್ಲಿ ಹೆಚ್ಚಾಗುತ್ತಿರುವ ಸಾಂಸ್ಕೃತಿಕ ಮತ್ತು ಭಾವ ಬಯೋತ್ಪಾದನೆಗೆ ಸಂಬಂಧಪಟ್ಟಂತೆ, ”ವಿಶ್ವರೂಪಂ’ಸಿನೇಮಾಕ್ಕೆ ವ್ಯಕ್ತವಾದ ಪ್ರತಿಭಟನೆಯೂ ಸೇರಿದಂತೆ ನಮ್ಮ ಕನ್ನಡದ ಅಲ್ಪಸಂಖ್ಯಾತ ಬರಹಗಾರರ ನಿಲುವು ಏನು ಎಂಬುದು ಗೊತ್ತಾಗುತ್ತಿಲ್ಲ.

  2. ದ್ಯಾವನೂರು ಮಂಜುನಾಥ್

    ಯುವ ಸಾಹಿತ್ಯದಲ್ಲಿ ಒಂದು ಹೊಸ ಬದಲವಣೆ ಯಾಗೂತ್ತಿರುವುದು ಯುವ ಸಾಹಿತ್ಯಕ್ಕೆ ಸ್ವಾಗತರ್ಹ ವಿಷಯವಾಗಿದೆ.

  3. ರವಿ ಮೂರ್ನಾಡು,ಕ್ಯಾಮರೂನ್

    ಈ ವರದಿಯಲ್ಲಿ ಕಂಡುಬಂದ ಮಾತುಗಳನ್ನು ಅಪ್ಪಟ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ. ಇಂದಿನ ಅವಸರದ ಬದುಕಿನ ಸಂಸ್ಕೃತಿಯಲ್ಲಿ ಇಲ್ಲಿನ ಕೆಲವು ಮಾತುಗಳು ಯಾವುದೇ ಅಸಾಧ್ಯ ಸಾಹಿತ್ಯವನ್ನೂ ಮೀರಿ ನಿಲ್ಲುತ್ತವೆ. ಕಾರುಣ್ಯಮೂರ್ತಿ ಸಮಾಜ ಅಗತ್ಯವಾಗಿ ಒಪ್ಪಿಕೊಳ್ಳಬೇಕು.ಒಪ್ಪಿಕೊಳ್ಳದಿದ್ದರೆ ಯಾವುದೋ ಸೂಕ್ಷ್ಮ ಅಸತ್ಯಗಳು ಮನಸ್ಸಿನಲ್ಲಿ ನಡೆದಾಡುತ್ತಿದೆ ಎಂದು ತಮಗೆ ತಾವೇ ಒಪ್ಪಿಕೊಳ್ಳಬೇಕು. ಅದು ಪರಿಸ್ಥಿತಿ ಇರಬಹುದು ಅಥವ ತಾವೇ ರೂಪಿಸಿಕೊಂಡ ಬದುಕಿನ ಭರಾಟೆ ಇರಬಹುದು. ಸತ್ಯವನ್ನ ಅಷ್ಟು ಸುಲಭದಲ್ಲಿ ಯಾರೂ ಒಪ್ಪಿಕೊಳ್ಳುವುದಿಲ್ಲ. ಅದೂ ಸಮಾಜ ಪ್ರಜ್ಞೆಯ ಗೌರವ ಪಡೆದ ಸಾಹಿತ್ಯ ಕೂಡ, ಎಲ್ಲೋ ಒಂದು ಕಡೆ ಮೌನ ಮಡುಗಟ್ಟುತ್ತಿದೆ.ಜಾತಿ-ರಾಜಕೀಯ-ಸಮಾಜದ ಮುಖವಾಣಿಯ ವರ್ತುಲದಲ್ಲಿ ಸಿಲುಕಿಕೊಂಡಿದ್ದೇವೆ. ಇದಿಲ್ಲದೆ ಮನುಷ್ಯ ಬದುಕು ಸಾಗುವುದೇ ಕಷ್ಟ ಅನ್ನುವಾಗ ಸತ್ಯಗಳು ಹೊರಬಾರದಷ್ಟು ಕತ್ತಲೆಯಲ್ಲಿ ನರಳುತ್ತಿವೆ ಅನ್ನಿಸಿತು. ನಮ್ಮನ್ನು ನಾವೇ ತೆರೆದುಕೊಂಡು ಹೋದಷ್ಟು ಸಣ್ಣವರಾಗುವುದೇ ಹೆಚ್ಚು. ಈ ವರದಿಯಲ್ಲಿ “ಮೌನ”ದ ಬಗ್ಗೆ ಮಾತು ಬಂದಿದೆ. ಮೌನ ಎಂಬುದು ಅಪಾಯಕಾರಿಯಲ್ಲ. ಅದು ಅರಿವಿನ ಆಳಕ್ಕೆ ಇಳಿವ ಸೂಚನೆ. ಅದರ ಲಾಭ ಬರುವುದು ಬಹುಕಾಲದ ನಂತರ. ಗಂಭೀರ ಸಾಹಿತ್ಯದಲ್ಲಿ ಇದರ ಬಹುಕಾಲದ ಉದಾಹರಣೆಗಳು ಲಭ್ಯವಾಗುವುದು. ಗಂಭೀರ ಸಾಹಿತ್ಯ ಗೊಂದಲಗಳಲ್ಲಿ ಹುಟ್ಟುವುದೇ ಇಲ್ಲ. ಅದು ಮೌನ ಸಂವಾದಕ್ಕೆ ಅಕ್ಷರಗಳೊಂದಿಗೆ ಮಾತಿಗಿಳಿವುದು. ಈ ವರದಿ ನಿಜಕ್ಕೂ ಖುಷಿ ಆಯಿತು. ವಂದನೆಗಳು ಗೌರವಾನ್ವಿತ ಭಾನು ಮುಸ್ತಾಕ್ ಅವರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading