ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ recommends: ಭಾಗ್ ಮಿಲ್ಕಾ ಭಾಗ್!

ಕುಮುದವಲ್ಲಿ ಅರುಣ್ ಮೂರ್ತಿ


….ಅವನು ಓಡೋಕೆ ಶುರು ಮಾಡಿದ್ದು ಶಾಲೆಗೆ ತಡವಾಗಬಾರದೆಂದು…ಶಾಲೆಯಿಂದ ಹಿಂತಿರುಗಿ ಬರುವಾಗ ಬಿಸಿಲೇರಿ ಮರಳು ಕಾದು ಸುಡುತ್ತಿದ್ದರೂ, ಲೆಕ್ಕಿಸದೇ ಮರಳ ಚಿಮ್ಮಿಸಿ ಓಡುತ್ತಾನೆ…ಅಮ್ಮ ಕೊಡುವ ಹಾಲಿನ ನೆನಪಾಗಿ.
ಮತ್ತೆ ಓಡಿದ್ದು…ಜೀವ ಉಳಿಸಿಕೊಳ್ಳುವ ಸಲುವಾಗಿ. ಭಾರತ-ಪಾಕಿಸ್ತಾನದ ವಿಭಜನೆಯ ಸಮಯದಲ್ಲಿ ಸಿಖ್ಖರ ಮೇಲೆ ನಡೆದ ಹಲ್ಲೆಯಲ್ಲಿ ಇಡೀ ಕುಟುಂಬ ಹತ್ಯೆಗೀಡಾದಾಗ…ಅಪ್ಪ ಕಿರುಚಿದ “ಭಾಗ್ ಮಿಲ್ಕಾ ಭಾಗ್” ….ಆಗ ಓಡಿದ ಹುಡುಗ, ಒಬ್ಬಂಟಿಯಾಗುತ್ತಾನೆ. ತುತ್ತು ಅನ್ನಕ್ಕೆ ಪರದಾಡುತ್ತಾನೆ. ಹಾಗೂ ಹೀಗೂ ತಪ್ಪಿಸಿಕೊಂಡ ಅಕ್ಕ-ಭಾವ ಸಿಕ್ಕಾಗ ಸಂತೋಷಪಟ್ಟರೂ…ಅಕ್ಕನ ಮೇಲೆ ಭಾವ ಮಾಡುವ ಹಲ್ಲೆಗೆ ಸಿಡಿದೆದ್ದು…ಭಾವನಿಗೇ ಹೊಡೆದು, ಮತ್ತೆ ಓಡುತ್ತಾನೆ. ಕಳ್ಳಗುಂಪಿನ ಹುಡುಗರ ಜೊತೆಯಾಗಿ, ಕಲ್ಲಿದ್ದಲ್ಲನ್ನ ಓಡುವ ರೈಲಿನಿಂದ ಕಳುವು ಮಾಡುತ್ತಾ…ಚಲಿಸುವ ರೈಲಿನ ಮೇಲೆ ಎಗರಿ ಎಗರಿ …ತಪ್ಪಿಸಿಕೊಳ್ಳಲು ಮತ್ತೆ ಓಡುತ್ತಾನೆ. ಪ್ರೀತಿಸಿದ ಹುಡುಗಿ ಕೈತಪ್ಪಿ ಹೋಗುತ್ತಾಳೆ ಎಂಬ ಏಕೈಕ ಕಾರಣ, ಅವನನ್ನು ಕಳ್ಳತನದಿಂದ ಬಿಡಿಸಿ…ಸೈನ್ಯಕ್ಕೆ ಸೇರುವಂತೆ ಮಾಡುತ್ತದೆ. ಅಲ್ಲಿ ಒಂದು ಲೋಟ ಹಾಲು ಎರಡು ಮೊಟ್ಟೆ ಸಿಗುತ್ತದೆ ಎಂಬ ಆಸೆಯಿಂದ ಮತ್ತೆ ಓಡಲು ಪ್ರಾರಂಭಿಸಿದಾಗ…ಅವನ ಅದೃಷ್ಟ ಖುಲಾಯಿಸುತ್ತದೆ. ಸೈನ್ಯದ ಅತ್ಯುತ್ತಮ ಅಥ್ಲೀಟ್ ಎನ್ನಿಸಿಕೊಳ್ಳುತ್ತಾನೆ. ವೈರಿಗಳು ಕಾಲು ಕಿತ್ತುಹೋಗುವಂತೆ ಚಚ್ಚಿಹಾಕಿದರೂ…ರಕ್ತಸಿಕ್ತ ಕಾಲುಗಳನ್ನು ಎಗರಿಸಿ, ಎಗರಿಸಿ…ಕಟ್ಟಿದ್ದ ಬ್ಯಾಂಡೇಜೂ ಕಿತ್ತು ಹೋಗುವಂತೆ ಓಡುತ್ತಾನೆ. ಅವನ ಓಟದ ಮಹಿಮೆಯನ್ನು ಅರಿತ ಸೈನ್ಯಾಧಿಕಾರಿಗಳು ಅವನಿಗೆ ಇನ್ನಷ್ಟು ಉತ್ತಮವಾಗಿ ತರಬೇತು ನೀಡಿ…ಅತ್ಯುತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಹಾಯ ಮಾಡುತ್ತಾರೆ.
ರೋಮ್ ಒಲಂಪಿಕ್ಸ್ ನಲ್ಲಿ ಓಡುತ್ತಾ…ಚಿನ್ನ ಗೆಲ್ಲುವ ಹಂತದಲ್ಲಿ ಒಂದು ಕ್ಷಣ ತಿರುಗಿ ನೋಡುವಾಗ…ಕಂಚಿನ ಪದಕ ದಕ್ಕುತ್ತದೆ. ಎಂದೂ ತಿರುಗಿ ನೋಡದ ಮಿಲ್ಕಾ ಹೀಗೇ ತಿರುಗಿ ನೋಡಿದ್ದು ಯಾಕೆ? ಪ್ರಶ್ನೆಗೆ ಉತ್ತರ ಬೇಕಾದ್ರೆ “ಸಿನಿಮಾ” ನೋಡಲೇ ಬೇಕು. ಆ ಸೋಲನ್ನು ಮತ್ತೆ ಗೆಲುವಾಗಿಸಿಕೊಳ್ಳಲು ಮಿಲ್ಕಾ ೪೦೦ ಮೀಟರ್ ನ ರೆಕಾರ್ಡ್ ಮುರಿಯಲು ..ಮತ್ತೆ ತನ್ನ ಓಟದ ತಾಲೀಮನ್ನು ವಿಚಿತ್ರ-ವಿಶೇಷ-ವಿಶಿಷ್ಟ ರೀತಿಯಲ್ಲಿ ನಡೆಸಿ ತನ್ನನ್ನೇ ಪಣವಾಗಿಸಿಕೊಂಡು…ಹಗಲು ರಾತ್ರಿಯೆನ್ನದೇ, ಬಿಸಿಲು ಮಳೆಯೆನ್ನದೇ…ಬೆವರು ಸುರಿಸೀ ಸುರಿಸೀ…ಅದನ್ನು ಬಕೆಟ್ಟುಗಟ್ಟಲೇ ಪೇರಿಸಿ, ರಕ್ತ ಬಸಿದು..ಮತ್ತೆ ಮತ್ತೆ ಓಡುತ್ತಾನೆ. ಇದ್ದ ಬದ್ದ ರೆಕಾರ್ಡುಗಳನ್ನೇಲ್ಲಾ ಮುರಿದು, ವಿಶ್ವದ ಪ್ರತಿಷ್ಠಿತ ಕ್ರೀಡಾಪಂದ್ಯಗಳಲೆಲ್ಲಾ ವಿಜಯದುಂದುಭಿ ಮೊಳಗಿಸಿ ಚಿನ್ನದ ಪದಕಗಳ ಸುರಿಮಳೆಯನ್ನೇ ಸುರಿಸುವ …ಮಿಲ್ಕಾ ಮತ್ತೆ ಓಡುವುದು ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ನಡೆದ ಸ್ನೇಹ ಸೌಹಾರ್ದ ಪಂದ್ಯಕ್ಕಾಗಿ. ತನ್ನವರ ರಕ್ತ ಹರಿಸಿದ ನೆಲದಲ್ಲಿ ಓಡುವಾಗ ಮಿಲ್ಕಾ ನಿಗೆ ಅಪ್ಪನ ಚೀತ್ಕಾರ ಬಿಟ್ಟು ಬೇರೇನೂ ಕೇಳೋದೇ ಇಲ್ಲ. ಪಂದ್ಯದಲ್ಲಿ ಗೆದ್ದ ಮಿಲ್ಕಾನ ಬೆನ್ನು ತಟ್ಟುವ ಪಾಕಿಸ್ತಾನಿ ಮಿಲಟರಿ ಅಧ್ಯಕ್ಷ “ಫ್ಲೈಯಿಂಗ್ ಸಿಖ್” ಅನ್ನೋ ಬಿರುದು ನೀಡುತ್ತಾನೆ. ಇದೇ ಕ್ಲೈಮಾಕ್ಸ್.
ಐ ವಾಸ್ ಬಾರ್ನ್ ಟು ರನ್….

ಇದು ಇಂದು ೮೨ರ ಗಡಿ ದಾಟಿರುವ ಮಿಲ್ಕಾ ಸಿಂಗ್ ನ ಉವಾಚ! ಹೆಚ್ಚು ಕಡಿಮೆ ಇಂದು ಭಾರತವೇ ಮರೆತು ಹೋಗಿದ್ದ ಒಬ್ಬ ಅಥ್ಲೀಟ್ ಹೀರೋನನ್ನು ಹುಡುಕಿ, ಅವನ ಅಂತರಂಗವನ್ನು ಬಹಿರಂಗವಾಗಿ ಬಿಚ್ಚಿಟ್ಟು ಸ್ವತಂತ್ರ ಭಾರತದ ಇತಿಹಾಸವನ್ನು ಕಣ್ಮುಂದೆ ಕಟ್ಟುವಂತೆ ಸಿನಿಮಾ ಮಾಡಿರುವ ರಾಕೇಶ್ ಓಂಪ್ರಕಾಶ್ ಮೆಹರಾ ಗೆ – ಎದ್ದು ನಿಂತು ಒಂದು ಸೆಲ್ಯೂಟ್!! ಭಗತ್ ಸಿಂಗ್, ಆಜಾದ್, ರಾಜ್ ಗುರು, ಬಿಸ್ಮಿಲ್ಲಾ ರನ್ನು ತೆರೆಗೆ ತಂದು ಯುವಜನಾಂಗದ ಹೃದಯದಲ್ಲಿ ಆಂದೋಲನ ಮೂಡಿಸಿದಷ್ಟೇ ಶ್ರದ್ಧೆಯಲ್ಲಿ…ಭಾರತದ ವಿಭಜನೆಯ ಹಂತದಲ್ಲಾದ ದುರಂತಗಳ ಹಿನ್ನಲೆಯಲ್ಲೇ ಹೆಮ್ಮೆಯ ಕ್ರೀಡಾಪಟು ಮಿಲ್ಕಾನನ್ನೂ ತೆರೆಗೆ ತಂದಿದ್ದಾರೆ.
ಇಡೀ ಚಿತ್ರವನ್ನು ತಮ್ಮ ತೋಳ್ತೆಕ್ಕೆಗೆ ತೆಗೆದುಕೊಂಡಿದ್ದಾರೆ ಫರಾನ್ ಅಖ್ತರ್…ಹಾಗೆನ್ನುವುದಕ್ಕಿಂತಾ ಇಡೀ ಚಿತ್ರವನ್ನು ನಮ್ಮ ಕಾಲ್ನೆಗೆತಕ್ಕೆ ತೆಗೆದುಕೊಂಡಿದ್ದಾರೆ ಎನ್ನುವುದು ಸೂಕ್ತ! ಪಾತ್ರಕ್ಕಾಗಿ ಅವರು ತಮ್ಮ ದೇಹವನ್ನು ದಂಡಿಸಿ ಹುರಿಗೊಂಡಿರುವ ರೀತಿ, ಅವರ ಬಾಡಿ ಲ್ಯಾಂಗ್ವೇಜ್, ಪಾತ್ರದಾಳಕ್ಕೆ ಇಳಿದಿರುವ ಅಭಿನಯ…ಡೆಡಿಕೇಷನ್ ಎಂಬ ಪದಕ್ಕೆ ಮತ್ತೊಂದು ಅರ್ಥವೆನಿಸುತ್ತದೆ. ಸತತ ಮೂರು ಗಂಟೆಗಳ ಕಾಲ ಓಡುತ್ತಲೇ ಸಾಗುವ ಸಿನಿಮಾ ರಾಕೇಶ್ ರ ಫ್ಲಾಶ್ ಬ್ಯಾಕ್ ರ ಕೈಚಳಕದಲ್ಲಿ ಚರಿತ್ರೆಯಾಗಿ..ವರ್ತಮಾನದ ವಿಷಯವಾಗಿ…ಭವಿಷ್ಯದಲ್ಲೂ ಪುಟವಾಗಿ ಉಳಿಯುವುದರಲ್ಲಿ ಸಂಶಯವಿಲ್ಲ!
ಕಾಲಘಟ್ಟಕ್ಕೆ ಅನುಗುಣವಾದ Shankar-Ehsaan-Loy ಅವರ ಸಮಯೋಚಿತ ಸಂಗೀತ,Ganesh Acharya, Shiamak Davar, Vaibhavi Merchant ಅವರ ಅದ್ಭುತ ಕೊರಿಯೋಗ್ರಫಿ…ಓಟದ ಪ್ರತಿ ಹಂತ, ವಿಭಜನೆಯ ಪ್ರತಿ ಫ್ರೇಮಿನಲ್ಲೂ ಅತ್ಯದ್ಭುತ ಕ್ಯಾಮೆರಾ ಕೈಚಳಕದಲ್ಲಿ Binod Pradhanಅವರು ಚಿತ್ರದ ಮತ್ತೊಬ್ಬ ಹೀರೋ. ಇಷ್ಟು ಓಟದ ಮಧ್ಯದಲ್ಲಿ ಸ್ವಲ್ಪ ಬ್ರೇಕ್ ಹಾಕಿ ರಿಲಾಕ್ಸ್ ಆಗಿಸೋಕೆ ಸ್ನಿಗ್ಧ ಸುಂದರಿ ಮುಗ್ಧ ನಗುವಿನ ಸೋನಂ ಕಪೂರ್ ತಂಗಾಳಿಯಂತೆ ಬಂದು ನಿಧಾನವಾಗಿ ಸರಿದುಹೋಗುತ್ತಾರೆ. ರೋಮ್ ಸುಂದರಿ Rebecca Breeds ಮಿಲ್ಕಾ ಜೊತೆಗೆ ನೋಡುಗರ ಹೃದಯಕ್ಕೂ ಕಿಚ್ಚು ಹತ್ತಿಸುತ್ತಾರೆ. ಅಕ್ಕನಾಗಿ ದಿವ್ಯಾದತ್ತ ಮನಸ್ಸಿನಾಳಕ್ಕೆ ಇಳಿಯುತ್ತಾರೆ. ಹೇ…ಮತ್ತೊಂದು ವಿಷಯ, ಸೈನ್ಯದಲ್ಲಿ ಮಿಲ್ಕಾನ ಟ್ರೈನರ್ ಆಗಿ ನಮ್ಮ Prakash Rai ಇದಾರೆ. ಎಂದಿನಂತೆ ಅವರದು ಪಾತ್ರದಲ್ಲಿ ಮಾಗಿದ ಅಭಿನಯ.
ಒಟ್ಟಿನಲ್ಲಿ ಸಿನಿಮಾ ಮುಗಿಯೋಷ್ಟ್ರಲ್ಲಿ….ಓಡಿ ಓಡಿ ಫರಾನ್ ಗೆ ಸುಸ್ತಾಗದಿದ್ದರೂ…ಕೂತಲ್ಲೇ ಅವನ ಓಟ ನೋಡಿದವರಿಗೆ ಕಾಲುನೋವು ಬರೋದಂತೂ ಗ್ಯಾರಂಟಿ.
“ಭಾಗ್ ಮಿಲ್ಕಾ ಭಾಗ್” ಸಿನಿಮಾ ನೋಡಿಲ್ವಾ…ಹಾಗಾದ್ರೆ ಈಗ್ಲೇ ಥಿಯೇಟರ್ ಗೆ “ಭಾಗ್ ಫ್ರೆಂಡ್ಸ್ ಭಾಗ್” …ತಪ್ಪಿಸ್ಕೋಬೇಡಿ, ಖಂಡಿತಾ ನೋಡಿ.

ಮರತೇಬಿಟ್ಟೆ:
ಹೇ…ಮೇಲಿನ ಬರಹದಲ್ಲಿ…ಈ ಮುದ್ದು ಬಗ್ಗೆ ಹೇಳದೇ ತಪ್ಪು ಮಾಡಿಬಿಟ್ಟೆ ಪುಟಾಣಿ ಮಿಲ್ಕಾ ಆಗಿ…ಅದೆಂಥಾ ಭಾವಪೂರ್ಣ ಅಭಿನಯ. ತನ್ನವರ ರಕ್ತಸಿಕ್ತ ಹೆಣದ ರಾಶಿಯ ಮೇಲೆ ಹೊರಳಾಡುವಾಗ…ಎಂಥವರ ಕರಳು ಕಿತ್ತುಬರುವಂಥಾ ನಟನೆ. ಪುಟ್ಟ ಮಿಲ್ಕಾಗೆ ಹ್ಯಾಟ್ಸಾಫ್
 

‍ಲೇಖಕರು avadhi

17 July, 2013

6 Comments

  1. ಪ್ರಮೋದ್

    ನಾನು ಸಿನೆಮಾ ನೋಡಿಲ್ಲ. ಆದರೆ ನೋಡಿದವರು ಒಳ್ಳೆಯ ಬಯಾಗ್ರಫಿ ಯನ್ನು ಕಮರ್ಶಿಯಲ್( ಹಾಡು, ಕಥೆಗೆ ಅಷ್ಟೇನೂ ಅಗತ್ಯವಿಲ್ಲದ ಹೀರೋಯಿನ್) ಮಾಡಿ ಮೂರು ಗ೦ಟೆ ಎಳೆದಿದ್ದಾರೆ ಎ೦ದಿದ್ರು. ಅದು ಹಾಗಿರಲಿ.
    ಅಮೇಜಿ೦ಗ್ ಪರ್ಸನ್. ಮಿಲ್ಕಾನ ಒಳ್ಳೆಯ ಕೆಲಸಗಳು ಹರಡಲಿ ಎ೦ದು ಆಶಿಸಿ ಈ ವಿಷಯಗಳನ್ನು ಹಾಕುತ್ತಿದ್ದೇನೆ.
    ತನ್ನ ಜೀವನ ಚರಿತ್ರೆಯ ಪುಸ್ತಕದ ಹಕ್ಕನ್ನು ಸಿನೆಮಾ ಮಾಡಲು “ಒ೦ದು ರೂ.” ಗೆ ಮಾರಿದ.
    ಸಿನೆಮಾ ಗಳಿಸಿದ ಲಾಭ ಚಾರಿಟಿ ಟ್ರಸ್ಟ್ ಗೆ ಕೊಡಿಸಲು ಷರತ್ತು ಹಾಕಿದ್ದಾನೆ.
    ಅರ್ಜುನ ಪ್ರಶಸ್ತಿ ಯುವಕರಿಗೆ ಸಿಗಬೇಕೆ೦ದು ತನಗೆ ಬ೦ದ ಪ್ರಶಸ್ತಿಯನ್ನು ತಿರಸ್ಕರಿಸಿದವ.
    99ರ ಕಾರ್ಗಿಲ್ ಕದನದಲ್ಲಿ ಮಡಿದ ಯೋಧನ 7 ವರ್ಷದ ಮಗುವನ್ನು ದತ್ತು ತೆಗೆದುಕೊ೦ಡು ಸಾಕುತ್ತಿದ್ದಾನೆ!
    ಜೀವ್ ಮಿಲ್ಕಾ ಸಿ೦ಗ್, ಭಾರತದ ಅತ್ಯ್ತುತ್ತಮ ಗಾಲ್ಫರ್ ಮಿಲ್ಕಾನ ಮಗ

  2. narayan raichur

    naanu chitra veekshisiruve ; illiina bahupalu anisikegalu sooktavaagive ; chitrada avadhi 3 gante; swalpa yelatavide; haageye niroopaneayalloo hidita saaladu ; chitrada bottom-line yenembudu spastavaagadu ; farhaan; baala milka hagaeye koch Pavan-malhotra ; haadugalu manaseleyuttave – ondu olleya prayatna !!- narayan raichur (ranga-vimarshaka)

  3. ವಿಜಯ್

    [ಒಟ್ಟಿನಲ್ಲಿ ಸಿನಿಮಾ ಮುಗಿಯೋಷ್ಟ್ರಲ್ಲಿ….ಓಡಿ ಓಡಿ ಫರಾನ್ ಗೆ ಸುಸ್ತಾಗದಿದ್ದರೂ…ಕೂತಲ್ಲೇ ಅವನ ಓಟ ನೋಡಿದವರಿಗೆ ಕಾಲುನೋವು ಬರೋದಂತೂ ಗ್ಯಾರಂಟಿ.]
    ಹೌದು..ಫರ್ಹಾನ್ ಮಿಲ್ಕಾಸಿಂಗರನ್ನು ಅವಾಹಿಸಿಕೊಂಡಿದ್ದಾನೆ. ಇದ್ದಾಗಲೇ ದಂತಕತೆಯಾಗಿದ್ದ ಮಿಲ್ಕಾಸಿಂಗರನ್ನು ಈ ಚಿತ್ರ ಮತ್ತೆ ಜೀವಂತಗೊಳಿಸಿದೆ. ಚಿತ್ರದ ಕಮರ್ಷಿಯಲ್ ದೃಷ್ಟಿಕೋಣ ಸಿನೇಮಾವನ್ನು ಎಳೆದ ಹಾಗೆ ಕಂಡರೂ..ಅದಿಲ್ಲದಿದ್ದರೆ., ರಾಮಗೋಪಾಲ್ ವರ್ಮನ ಮುಂಬೈ ಧಾಳಿಯ The Attacks of 26/11 ನಂತೆ ತೀರ ಡಾಕ್ಯುಮೆಂಟರಿ ಅನಿಸುತ್ತಿತ್ತೇನೊ.
    ಮಿಲ್ಕಾಸಿಂಗರ ಬಗ್ಗೆ ಪ್ರಮೋದವರು ಬರೆದ ಕಮೆಂಟ ಕೂಡ ಸ್ಪೂರ್ತಿದಾಯಕ.

  4. ಜಿ.ಎನ್ ನಾಗರಾಜ್

    ಅಪೂರ್ವ ವಿಷಯದ ಬಗ್ಗೆ ಒಂದು ಒಳ್ಳೆಯ ಸಿನೆಮಾ. ಸಹೃದಯ ಪ್ರಶಂಸೆ. ಓದಿದವರೆಲ್ಲರೂ ನೋಡೋಣ, ನೋಡಿಸೋಣ

  5. parashuram

    ellaru omme nodle bekada senema

  6. Harish K Kampa

    nanantu ee sinimana node ella but ee barahagalannu oduvaga maimelina romagalella eddu nilta ede kanditavagi miss madade noditini

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading