ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭವಿಷ್ಯತ್ತಿನ ಹುಸಿಬೆಳಕು..

-ಎಂ ವಿ ಶಶಿಭೂಷಣ ರಾಜು
ಅವಿತುಕೊಂಡಿರುವುದು ಸಾಕೆನಿಸಿತು

ಅವಿತುಕೊಂಡಿರುವುದು ಸಾಕೆನಿಸಿತು
ದೇಹ, ಮನಸ್ಸನ್ನು ಮುದುಡಿ
ಕಾಂತಿಯನು ಕಂಗಳಲ್ಲೇ ಅದುಮಿಡಿದು
ನಾಲಿಗೆ ಮಡಿಚಿ
ಕೈ ಕಾಲು ಮುದುರಿ
ಅವಿತುಕೊಂಡಿರುವುದು ಸಾಕೆನಿಸಿತು

ಭೂತದ ಗುಮ್ಮ
ಭವಿಷ್ಯತ್ತಿನ ಹುಸಿಬೆಳಕು
ಅಡ್ಡಗಾಲಾಗುತ್ತಿವೆ
ವರ್ತಮಾನಕೆ
ನನ್ನದೇ ಗೂಡಿನಲಿ, ನನ್ನದೇ ಮರಿಗಳ
ದೇನಿಸಿ
ಆಕಾಶ ಎಂಬುದೊಂದು ಇದೆ ಎನ್ನುವುದ ಮರೆತು
ಸುತ್ತಲಿರುವವರಿಗೊಂದು ವೃತ್ತ
ಬರೆಯುವುದು

ಒಂದು ಊಟ, ಒಂದು ಕೆಲಸ
ಒಂದು ನಿದ್ರೆಯ ನಡುವೆ
ಕಾಲ ನಾಗಾಲೋಟದಿ ಸಾಗಿ
ದಡಕ್ಕನೆ ನಿಂತಾಗ
ಬೋನಿನ ಇಲಿಯ ಸ್ಥಿತಿ ತಲುಪಿ
ಅಲ್ಲಿ ಇಲ್ಲಿ ಎಗರಿ ಎಗರಿ
ಮೌನವಾಗುವುದು

ಪ್ರಶ್ನೆಗಳು ಸತ್ತು ಬಿದ್ದು ಅಣಕಿಸುತ್ತಿರುವಾಗ
ಕೈ ಜಾರಿದ ಸಮಯಕೆ ಅಂಜಿ
ಮುಂದಿನ ಪೀಳಿಗೆಗೆ
ಒಂದು ಸಣ್ಣ ಹೂವನಾದರೂ
ಅರಳಿಸದೆ
ಉತ್ತರದಾಯಿತ್ವದಿಂದ ಜಾರಿಕೊಂಡ ನೋವಿಗೆ
ಜಾರುವುದು

ಇಂದು ಬಿತ್ತಿದ  ಪ್ರಶ್ನೆ
ಎಂದೋ ಒಂದು ದಿನ  
ಮೊಳಕೆ ಹೊಡೆದು
ಮರವಾಗುವುದು ಖಚಿತ
ಅಂದು ಸಿಹಿ ಹಣ್ಣಿನ ರುಚಿ, ಆ ಪೀಳಿಗೆಗೆ
ಶಕ್ತಿಯಾಗುವುದು

ಅವಿತುಕೊಂಡಿರುವುದು ಸಾಕು
ಮನೆ ಗೆದ್ದರೂ ಸಾಕು
ಬೆಳಕಲ್ಲದಿದ್ದರೂ ಒಂದು ಸಣ್ಣ ದೀಪ
ಹಾದಿಗೆ
ಹಾಯುತ್ತಲೇ ಸಾಗುತ್ತದೆ
ಗುರಿ ತೋರುತ
ಆಗ ಒಂದು ಹೆಜ್ಜೆ
ಒಂದು ಹೋರಾಟವಾಗುತ್ತದೆ

‍ಲೇಖಕರು Admin

17 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading