-ಎಸ್.ಜಿ.ಶಿವಶಂಕರ್
ಆಟೋದಲ್ಲಿ ಆಕೆಯನ್ನು ಬಸ್ನಿಲ್ದಾಣಕ್ಕೆ ಕರೆದುಕೊಂಡು ಹೋಗಿ, ಬಸ್ಸು ಹತ್ತಿಸಿ ವಾಪಸ್ಸು ಮನೆಗೆ ಬರಲು ಸಿಟಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ! ಯಾರು ಆಕೆ ಎಂಬ ಕೆಟ್ಟ ಕುತೂಹಲ ನಿಮ್ಮನ್ನಾಗಲೇ ಕೊರೆಯಲು ಪ್ರಾರಂಭಿಸಿದೆ ಎಂದು ಬಲ್ಲೆ! ಆಕೆ ಬೇರೆ ಯಾರೂ ಅಲ್ಲ ನನ್ನ ಮಡದಿ ಎಂದು ಹೇಳಿ ನಿಮ್ಮ ಕುತೂಹಲಕ್ಕೆ ತಣ್ಣೀರೆರಚಿ ಮುಂದುವರಿಸುವೆ. ಆಟೋದಲ್ಲಿ ಕರೆದುಕೊಂಡು ಹೋಗಿ ಬರಿವಾಗ ಸಿಟಿ ಬಸ್ಸೇಕೆ? ಇದೂ ಅನುಮಾನವಾಗಿ ಕಾಡಬಹುದು. ಅದಕ್ಕೆ ನನ್ನ ಸಮಜಾಯಿಸಿ ಹೀಗಿದೆ: ನಮ್ಮ ದೇಶದ ಬಹುತೇಕ ಗಂಡಸರು ತಮ್ಮ ಮಡದಿಯರೊಂದಿಗೆ ಪ್ರಯಾಣಿಸುವಾಗ ಆಟೋದಲ್ಲಿಯೂ, ತಾವೊಬ್ಬರೇ ಇರುವಾಗ ಬಸ್ಸಿನಲ್ಲಿ ಪ್ರಯಾಣ ಮಾಡುವುದು ಸಹಜ. ಇದಕ್ಕೆ ಎರಡು ಅಥವಾ ಮೂರು ಕಾರಣಗಳನ್ನು ನೀಡಬಲ್ಲೆ. ಮೊದಲನೆಯದು, ‘ಕಂಜೂಸ್’ ಎಂಬ ಮಡದಿಯ ಅಪವಾದದಿಂದ ಬಚಾವಾಗಲು, ಎರಡನೆಯದು ಮಡದಿಯನ್ನು ಸಿಟಿ ಬಸ್ಸಿನ ಕಿರಿಕಿರಿಯಿಂದ ತಪ್ಪಿಸಲು, ಇನ್ನು ಮೂರನೆಯದು ‘ನಾನು ನಿನ್ನನ್ನು ಪ್ರೀತಿಸುವ’ ಎಂಬ ಮೌನ ಸಂದೇಶ ನೀಡಲು.
ಈ ಮೂರು ಸಮಜಾಯಿಸಿಗಳಲ್ಲಿ ಯಾವುದನ್ನು ನೀವು ಒಪ್ಪುತ್ತೀರೋ ಗೊತ್ತಿಲ್ಲ.ಸಮಯ ಬೆಳಗಿನ ಹತ್ತುವರೆ. ಸಿಟಿ ಬಸ್ಟಾಪಿನಲ್ಲಿ ಆಗಲೇ ಸುಮಾರು ಜನ ಕಾಯುತ್ತಿದ್ದರು. ಅವರಲ್ಲಿ ನಾನೂ ಹೋಗಿ ಸಾರಿ ಗುಂಪಿನ ಗಾತ್ರ ಹೆಚ್ಚಿಸಿದೆ. ಬಸ್ಸಿಗಾಗಿ ಕಾಯುತ್ತಾ ನಿಲ್ಲುವಾಗ ಸುಮ್ಮನಿರಲಾದೀತೆ..? ಸುತ್ತ ಮುತ್ತ ನೋಡುತ್ತಾ ಬಸ್ಸಿನ ನಿರೀಕ್ಷೆಯಲ್ಲಿದ್ದೆ.ಹದಿನೈದು ನಿಮಿಷ ಕಳೆಯುವಷ್ಟರಲ್ಲಿ ಬಸ್ಸೇನೋ ಬಂತು ಆದರೆ ಪುಣ್ಯಾತ್ಮ ಬಸ್ ಡ್ರೈವರ್ ಸ್ಟಾಪಿನಿಂದ ಸುಮಾರು ನೂರು ಆಡಿ ದೂರದಲ್ಲಿ ನಿಲ್ಲಿಸಿದ! ನಿಯಮ ಉಲ್ಲಂಘಿಸುವುದರಲ್ಲಿ ಬಸ್ ಚಾಲಕರಿಗೆ ಆದೇನು ಆನಂದವೋ…ಗೊತ್ತಿಲ್ಲ? ಸಮಯಕ್ಕೆ ಸರಿಯಾಗಿ ಬಾರದಿರುವುದು! ನಿಗದಿತ ಸ್ಥಳದಲ್ಲಿ ನಿಲ್ಲಿಸದಿರುವುದು, ಜನ ಇನ್ನೂ ಹತ್ತುತ್ತಿರುವಾಗಲೇ ಬಸ್ ಚಾಲನೆ ಮಾಡುವುದು ಮುಂತಾದುವುಗಳಲ್ಲಿ ಆವರಿಗೇನು ಆನಂದವೋ ಗೊತ್ತಿಲ್ಲ! ಇಲ್ಲಾ ಅವರು ತಮ್ಮ ಕೆಲಸವನ್ನು ಹಗುರು ಮಾಡಿಕೊಳ್ಳಲು ಈ ಕ್ರಮ ಅನುಸರಿಸುತ್ತಿರಬಹುದು! ಇದರಲ್ಲಿ ಕಂಡಕ್ಟರನ ಪಾಲು ಎಷ್ಟಿದೆಯೋ ಗೊತ್ತಿಲ್ಲ! ಬಸ್ಸು ನಿಂತಿದ್ದೆಡೆಗೆ ನಡೆದು ಹೋದರೆ ಆದೀತೆ..? ನಾವು ಬಸ್ಸು ತಲುಪುವವರೆಗೆ ಬಸ್ಸಿನ ಸಿಬ್ಬಂದಿ ಕಾಯುತ್ತಾರೆಯೇ..? ನಿಂತಿದ್ದವರೆಲ್ಲಾ ತಮ್ಮ ಶಕ್ತಾನುಸಾರ ಬಸ್ಸಿನೆಡೆಗೆ ಓಡಿದರು! ವೇಗದಲ್ಲಿ ಯುವಕರು ಮೊದಲಾದರೆ, ಮುದುಕರು ಕೊನೆಗೆ, ನಡುವೆ ಪ್ರೌಢರು ಹೀಗೆ ಎಲ್ಲಾ ಓಡಿ ಬಸ್ಸು ಹತ್ತಿದರು! ಬಸ್ಸು ಏರಿದವರಲ್ಲಿ ಮುದುಕರು ಏದುಸಿರು ಬಿಡುತ್ತಾ ಬದುಕಿದೆಯಾ ಬಡಜೀವವೇ ಎಂದು ತಮ್ಮ ದೈವವನ್ನು ನೆನಪಿಸಿಕೊಂಡರು! ನಾನೂ ಬಸ್ಸು ಹತ್ತಿದ್ದೆ. ಕಳೆದ ವರ್ಷವಷ್ಟೆ ನಿವೃತ್ತಿ ಪಡೆದಿರುವುದರಿಂದ ನನ್ನನ್ನು ನಾನು ಮುದುಕರ ವರ್ಗಕ್ಕೆ ಸೇರುವುದಿಲ್ಲ ಎಂಬ ವಾದ ಮುಂದಿಟ್ಟು ನನ್ನನ್ನು ಪ್ರೌಢರ ವರ್ಗಕ್ಕೆ ಸೇರಿಸಿಕೊಳ್ಳುತ್ತಿದ್ದೇನೆ.ಪುಣ್ಯಕ್ಕೆ ಖಾಲಿ ಸೀಟು ಕಂಡು ಅದರೆಡೆಗೆ ಧಾವಿಸಿದೆ. ಅದೇ ಸಮಯಕ್ಕೆ ದಢೂತಿ ಮನುಷ್ಯನೊಬ್ಬನೂ ಅದೇ ಸೀಟಿನ ಕಡೆಗೆ ಧಾವಿಸಿ ಬಂದ! ನಾನು ಹಿರಿಯ ನನಗೆ ಇದರ ಬಗೆಗೆ ಹಕ್ಕಿದೆ ಎಂಬಂತೆ ಅವನ ಪ್ರಯತ್ನವನ್ನು ಹತ್ತಿಕ್ಕಿ ನಾನು ಸೀಟಿನಲ್ಲಿ ಕೂತೆ! ಆತ ಕೆಕ್ಕರಿಸಿ ನನ್ನತ್ತ ನೋಡಿದರೂ ನೋಡದವನಂತೆ ನಟಿಸಿದೆೆ! ಇವೆಲ್ಲಾ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಅತಿ ಸಾಮಾನ್ಯವಾದ ವಿಷಯಗಳಾದ್ದರಿ0ದ ಇದನ್ನು ಉತ್ಪ್ರೇಕ್ಷಿಸುವ ಅಗತ್ಯವಿಲ್ಲ. ನಿಜಕ್ಕೂ ಈ ಮೇಲಿನ ವಿಷಯಗಳು ನಾನು ಬರೆಯಲಿರುವ ವಿಷಯಕ್ಕೆ ಸಂಬಂಧಿಸಿದವೇ ಅಲ್ಲ!
ನಿಜವಾದ ವಿಷಯ ಪ್ರಾರಂಭವಾಗುವುದೇ ಇಲ್ಲಿಂದ! ನನ್ನ ಮುಂದಿನ ಸೀಟಿನಲ್ಲಿ ಇಬ್ಬರು ನಡುವಯಸ್ಸಿನ ಮಹಿಳೆಯರು ಸಂಭಾಷಣೆಯಲ್ಲಿ ತೊಡಗಿದ್ದರು. ಅವರ ಮಾತುಗಳುನ್ನು ಕೇಳುತ್ತಲೇ ನನ್ನ ಕಿವಿಗಳೆರಡು ನಿಮಿರಿದವು. ಮೈಯಲ್ಲಿ ರಕ್ತಪರಿಚಲನೆ ಇದ್ದಕ್ಕಿದ್ದಂತೆ ಹೆಚ್ಚಾದಂತಾಯಿತು! ಹಣೆಯಲ್ಲಿ ಬೆವರಹನಿಗಳು ಮೂಡಿದವು! ಕಾರಣ ಅವರ ಮಾತುಗಳು ಗಂಡು ಕುಲಕ್ಕೆ ಅಪಾಯವಾಗುವಂತಿದ್ದವು! ನನ್ನ ಗಮನವನ್ನೆಲ್ಲಾ ಅವರ ಸಂಭಾಷಣೆಯ ಕಡೆಗೆ ಹರಿಸಿದೆ. ಈ ಗಂಡಸರೇ ಹೀಗೆ…? ನಮ್ಮವರೂ ಅಷ್ಟೇನೆ..ಏನು ಮಾಡಿದರೂ ಬದಲಾಗೋದಿಲ್ಲ! ನನಗಂತೂ ರೋಸಿ ಹೋಗಿದೆ! ಅವರು ಮತ್ತೆ ಮರೀದ ಹಾಗೆ ಏನಾದರೂ ಮಾಡಿಬಿಡೋಣಾಂತಿದ್ದೀನಿ!ನೀಲಿ ಸೀರಿಯುಟ್ಟಾಕೆ ನುಡಿದಳು. ಅದೇನು ಮಾಡ್ತೀರೋ..ನನಗೂ ಹೇಳಿ! ನಿಮ್ಮ ಯಜಮಾನರ ಸ್ಥಿತಿ ನೋಡ್ಕೊಂಡು ನಾನೂ ಹಾಗೇ ಮಾಡ್ತೀನಿ..! ಅಲ್ಲಾ ಎಷ್ಟು ಕೊಬ್ಬು ಇವರಿಗೆ..? ಏನಾದರೂ ಗತಿ ಕಾಣಿಸಲೇಬೇಕು..ತಿಳಿ ಗುಲಾಬಿ ಬಣ್ಣದ ಚೂಡಿಧಾರಿಣಿ ಪ್ರತಿಕ್ರಿಯಿಸಿದ್ದಳು.ಈ ವಿಷಯಾನ ನಮ್ಮ ಮಹಿಳಾ ಸಮಾಜದಲ್ಲಿ ಚಚರ್ೆ ಮಾಡಿ ಅದನ್ನ ಇಡೀ ಕನರ್ಾಟಕದಾದ್ಯಂತ ಕಾರ್ಯರೂಪಕ್ಕೆ ತರುವ ಪ್ರತಿಜ್ಞೆಯನ್ನ ಎಲ್ಲ ಸದಸ್ಯರೂ ಮಾಡುವಂತೆ ಮಾಡಾಬೇಕು! ಹೆಂಗಸರೆಂದರೆ ಈ ಗಂಡು ಜಾತಿ ಏನಂತ ತಿಳಿದಿದೆ..? ಅವಳ ಧ್ವನಿಯಲ್ಲಿದ್ದ ಕಠಿಣತೆಗೆ ಹಣೆಯಲ್ಲಿ ಬೆವರು ಹೆಚ್ಚಿತ್ತು!ಯಜಮಾನ್ರೆ..? ನೀವೇನು ಟಿಕೇಟು ತಗೊತೀರಾ..? ಇಲ್ಲ ಮುಂದೆ ಟಿ.ಸಿ. ಬಂದಾಗ ಫೈನು ಕಟ್ತೀರಾ..?ನಿಧರ್ಾಕ್ಷಿಣ್ಯನಾಗಿ ನುಡಿದ ಕಂಡಕ್ಟರನ ಗಡುಸು ಮಾತಿಗೆ ಬೆಚ್ಚಿದೆ.ಒಂದು ಸೀನಿಯರ್… ಎಂದು ಜೇಬಿಗೆ ಕೈಹಾಕಿದೆ!ಜೂನಿಯರ್ರೋ..ಇಲ್ಲಾ ಸೀನಿಯರ್ರೋ..ಟಿಕೇಟು ತಗೊಳ್ಳೋದು ಕಲ್ತುಕೊಳ್ಳಿ! ಎಲ್ಲೆಲ್ಲೋ ನೋಡ್ತಾ ಕೂತುಬಿಟ್ರೆ ನಾವು ಎಚ್ಚರಿಸಿ, ತಿವಿದು ಟಿಕೇಟು ಕೊಡೋಕಾಗೊಲ್ಲ ಎಂದು ಗುರಾಯಿಸಿದ ಕಂಡಕ್ಟರನ ಮಾತಿಗೆ ನನ್ನ ರಕ್ತಚಲನೆ ಇನ್ನಷ್ಟು ಹೆಚ್ಚಿತು! ಅವನ ತಪ್ಪೇನೂ ಇರಲಿಲ್ಲ! ನಾನು ಆ ಇಬ್ಬರು ಮಹಿಳಾಮಣಿಗಳ ಮಾತು ಕೇಳಿಸಿಕೊಳ್ಳುತ್ತ ಕಂಡಕ್ಟರನನ್ನು ಗಮನಿಸಿಯೇ ಇರಲಿಲ್ಲ!ದರಿದ್ರದ ಗಂಡಸರು! ಮದ್ವೆಯಾಗಿ ಇಪ್ಪತ್ತು ವರ್ಷವಾದರೂ ಕನಿಷ್ಟ ಒಂದು ಲಕ್ಷದ ಒಡವೆ ಸೆಟ್ ಕೊಡಿಸೋಕೆ ಮನಸ್ಸು ಮಾಡೊಲ್ಲ! ಒಂದು ಕಪ್ ಕಾಫಿ ಕಾಯಿಸಿಕೊಳ್ಳುವ ಯೋಗ್ಯತೆಯಿಲ್ಲ! ಇವರು ನಮ್ಮ ಮೇಲೆ ಎಷ್ಟು ದಬ್ಬಾಳಿಕೆ ಮಾಡ್ತಾರೆ ನೋಡಿ..ಆ ಚೂಡಿಧಾರಿಣಿಯ ಮಾತಿಗೆ ರೌಡಿಯೊಬ್ಬ ತನ್ನ ಹರಿತವಾದ ‘ರಾಮ್ಪುರಿ’ ಚಾಕುವಿನಿಂದ ನನ್ನ ಮೈಗೆ ಇಪ್ಪತ್ತು ಕಡೆ ಚುಚ್ಚಿದಂತಾಯಿತು! ನಾನೂ ಗಂಡಸಲ್ಲವೇ..? ಈ ರೀತಿ ಪ್ರತಿಕ್ರಿಯೆ ಸಹಜ ಎನ್ನಿಸಿತು!
ಆಲ್ಲಾರೀ..ಕಣ್ಣಿಗೆ ಎಣ್ಣೆ ಬಿಟ್ಕೊಂಡು ಟಿವಿ ನೋಡ್ತೀವಿ..ಹಗಲೂರಾತ್ರಿ ಬರುವ ಎಷ್ಟೋ ಮೆಗಾಸೀರಿಯಲ್ಲುಗಳ ನಡುವೆ ಗಮನವಿಟ್ಟು ಕೇಳಿಸ್ಕೊಂಡು, ನೋಟ್ಸ್ ಮಾಡ್ಕೊಂಡು, ಕಷ್ಟಪಟ್ಟು, ಮೈಕೈ ನೋಯಿಸ್ಕೊಂಡು ಹೊಸಹೊಸದಾಗಿ ಮಾಡಿ ಕೊಟ್ರೆ್ರೆ ಅವರಿಗೆ ಎಷ್ಟು ಕೊಬ್ಬುಸೀರಾಮಣಿಯ ಮಾತು ಗರಗಸದಂತೆ ಇತ್ತು!ನನಗೆ ಅವರ ಮಾತಿನ ಮುಖ್ಯವಾದ ವಿಷಯ ಏನೆಂದು ತಿಳಿದಿರಲಿಲ್ಲ! ಯಾಕೆ ಹೀಗೆ ಸುತ್ತುಬಳಸಿ ಮಾತಾಡುತ್ತಿದ್ದಾರೆ..? ವಿಷಯ ಏನು ನೇರವಾಗಿ ಹೇಳಬಾರದೆ..? ನಾನು ಚಡಪಡಿಸುತ್ತಿದ್ದೆ!ಇವನ್ನ ಹೀಗೇ ಮೆರಿಯೋಕೆ ಬಿಡಬಾರದು..? ಏನಂತೀರಾ ತುಳಜಾಬಾಯಿ ಚೂಡಿಧಾರಿಣಿ ನುಡಿದಾಗ ನೀಲಿ ಸೀರಾಮಣಿಯ ಹೆಸರು ತುಳಜಾಬಾಯಿ ಎಂದರಿವಾಯಿತು! ಅದರೂ ಅವರು ಯಾವ ವಿಷಯದ ಬಗ್ಗೆ ಮಾತಾಡ್ತಿದ್ದಾರೆ..? ಗಂಡುಕುಲಕ್ಕೆ ಅದೇನು ಅಪಾಯ ತಂದೊಡ್ಡಲಿದ್ದಾರೆ ಎಂಬುದು ತಿಳಿಯದಾಯಿತು!ಅನ್ಯಾಯವಾಗಿ ಕಷ್ಟಪಟ್ಟು ಗಂಟೆಗಟ್ಟಲೆ ನಿಂತು, ಬೆವರು ಹರಿಸಿ, ಎರಡು ಸೀರಿಯಲ್ ಮಿಸ್ ಮಾಡ್ಕೊಂಡು ಮಾಡಿದ್ದನ್ನ ಕೊನೆಗೆ ರಾತ್ರಿ ಹನ್ನೊಂದು ಗಂಟೆ ಮೇಲೆ, ರಸ್ತೇಲಿ ಯಾರೂ ಇಲ್ಲದ್ದನ್ನ ಗ್ಯಾರಂಟಿ ಮಾಡ್ಕೊಂಡು ಹೋಗಿ ಚರಂಡಿಗೆ ಸುರಿದು ಬಂದೇರಿ..ನನ್ನ ಹೊಟ್ಟೆ ಇನ್ನೂ ಉರೀತಾ ಇದೆ..ಬೆಳಿಗ್ಗೆಯಿಂದ ನಾಲ್ಕು ಜೆಲುಸಿಲ್ ತಿಂದಿದ್ದೀನಿ..ನಮ್ಮನ್ನ ಯಾವ ಸ್ಥಿತೀಗೆ ತಂದಿದ್ದಾರೆ ನೋಡಿ ಬೃಂದಾ..?ಈಗ ಚೂಡಿಧಾರಿಣಿಯ ಹೆಸರು ಬೃಂದಾ ಎನ್ನುವುದೂ ತಿಳಿದುಹೋಯಿತು! ಆದರೆ ಮಾತಿನ ವಿಷಯವೇ ಗೊತ್ತಾಗಲಿಲ್ಲ! ನನ್ನ ಪಕ್ಕದಲ್ಲಿನ ಸೀಟು ಖಾಲಿಯಾಗಿ ಅಲ್ಲಿಗೆ ತರುಣನೊಬ್ಬ ಕುಳಿತ. ನಾನು ಬೆಂಗ್ಳೂರಿಗೆ ಹೊಸಬ..ಮಾರುತಿ ದೇವಸ್ಥಾನ ಬಂದಾಗ ಹೇಳ್ತೀರಾ..? ಎಂದು ತಮಿಳನಲ್ಲಿ ಉಲಿದ ತಂಬಿ ರಸಭಂಗ ಮಾಡಿದ!ತಮಿಳು ವರದಿಲ್ಲೆ.. ಎಂದು ತಮಿಳಿನಲ್ಲಿ ಸೊಲ್ಲಿದೆ. ಮರುಕ್ಷಣವೇ ತಪ್ಪಿನ ಅರಿವಾಗಿ ಕನ್ನಡಿಗರ ಹಣೆಬರಹ ನೆನೆದು ಮರುಕಪಟ್ಟೆ! ಎಲ್ಲಾ ಭಾಷೆಗಳಲ್ಲೂ ನಾವೇ ಮಾತಾಡುವುದರಿಂದ ಅನ್ಯ ಭಾಷಿಗರಿಗೆ ಕನರ್ಾಟಕ ಒಂದು ಸ್ವರ್ಗ ಎನಿಸಿರುವುದರಲ್ಲಿ ಆಶ್ಚರ್ಯವೇ ಇಲ್ಲ! ಇದಕ್ಕೂ ಹೆಚ್ಚಿನದೇನೂ ಮಾಡಲಾರದೆ ನನ್ನ ಗಮನವನ್ನು ಮತ್ತೆ ಮುಂದಿನ ಸೀಟಿನ ಮಹಿಳೆಯರ ಪುರುಷ ವರ್ಗಕ್ಕೆ ಗತಿ ಕಾಣಿಸುವ ಸಂಭಾಷಣೆಯತ್ತ ತಿರುಗಿಸಿದೆ.ನೀವೇನಾದ್ರೂ ಹೇಳಿ ಬೃಂದಾ ತಪ್ಪು ನಮ್ಮದೇ..ಮದುವೆಯಾದ ಹೊಸದರಲ್ಲಿ ತಗ್ಗಿಬಗ್ಗಿ ನಡೀತೀವಲ್ಲ ಆವಾಗ್ಲೇ ಇವರೆಲ್ಲಾ ಕೊಬ್ಬಿಬಿಡೋದು! ಹದರಿಬೆದರಿ ಉಪ್ಪು ಹೆಚ್ಚಾಯಿತೋ, ಕಾರ ಕಡಿಮೆಯಾಯಿತೋ..ಎಂಬೆಲ್ಲಾ ಮಾನಸಿಕ ಒತ್ತಡದಲ್ಲಿನ ನಮ್ಮ ನಡವಳಿಕೇನೆ ಅವರು ಕೊಬ್ಬಿ, ಉಬ್ಬಿ, ಈ ಮನೇಗೆ ನಾನೇ ಯಜಮಾನ ಅನ್ನೋ ಅಹಂ ಬರೋಕೆ ನಾವೇ ಕಾರಣ..ನಿಮ್ಮ ಮಾತು ಸರಿ! ಮೊದಲನೇ ದಿನದಿಂದಲೇ ಧಮಕಿ ಹಾಕಿದ್ದರೆ..ಇವತ್ತು ಅವರು ಈ ಸ್ಥಿತಿಗೆ ಬತರ್ಿರಲಿಲ್ಲ ನೋಡಿಸರಿಯಾಗಿ ಹೇಳಿದ್ರೆ! ಮೊನ್ನೆ ಏನಾಯ್ತು ಗೊತ್ತೆ..?ಏನಾಯ್ತು? ಎಂಬ ಪ್ರಶ್ನೆ ನನ್ನ ತುಟಿಯಿಂದ ಹೊರಬೀಳುವುದರಲ್ಲಿತ್ತು…ಕಷ್ಟಪಟ್ಟು ತಡೆದೆ. ಆದರೆ ನನ್ನ ಮಾತನ್ನು ಬೃಂದಾ ಎನ್ನುವ ಗುಲಾಬಿ ಬಣ್ಣದ ಚೂಡಿದಾರಿಣಿ ಕೇಳಿಬಿಟ್ಟಳು.
ಸೋನಿ ಚಾಲನ್ನಿನಲ್ಲಿ ನನ್ನ ಫೇವರಿಟ್ ಸೀರಿಯಲ್ ಬಿಟ್ಟು ಆ ಸೆಲೆಬರಿಟಿ ಆಡಿಗೆ ಭಟ್ಟ ಮಂಜೀವ್ ಕಪೂರ್ ಹೇಳಿದ ರೆಸಿಪಿ ಇಟ್ಯಾಲಿಯನ್ ಸ್ಪೆಷಲ್ ಮಾಡಿದ್ದೆ. ಮೂರು ಗಂಟೆ ಟೈಮು ವೇಸ್ಟ್ ಮಾಡ್ಕೊಂಡು!ಅಷ್ಟೆಲ್ಲಾ..ಕಷ್ಟ ಗಂಡ ಮಕ್ಕಳಿಗೋಸ್ಕರಾ..? ಯೂ ಆರ್ ಗ್ರೇಟ್ ತುಳಜಾಬಾಯಿ..ಅಯ್ಯೋ ಅದಕ್ಕಲ್ಲಾ ಬೃಂದಾ..? ನಮ್ಮ ಅಸೋಸಿಯೇಷನ್ ಪ್ರೆಸಿಡೆಂಟ್ ಪದ್ಮಾ ತಾನೇ ಮಹಾಸಾಧ್ವಿ ಗಂಡ ಮತ್ತು ಮಕ್ಕಳಿಗಾಗಿ ಏನೆಲ್ಲಾ ಮಾಡ್ತೀನಿ..ಲೊಟ್ಟೆ ಲೊಸಕು ಅಂತಾ ಅವತ್ತು ಭಾಷಣ ಬಿಗಿದಳಲ್ಲಾ..? ಅವಳ ಕೊಬ್ಬು ಇಳಿಸಬೇಕೂಂತ ಈ ಕೆಲಸಕ್ಕೆ ಕೈಹಾಕಿದೆ..! ಹೋಗಲಿ..ಅಷ್ಟು ಕಷ್ಟಪಟ್ಟು ಮಾಡಿದ್ದೀನಿ ಅಂತಾ ಒಬ್ಬರಾದರೂ ತಿನ್ನಬೇಡವೆ..?ಯಾಕಂತೆ..?ನಮ್ಮ ಯಜಮಾನ್ರು ಹೇಳಿದ್ರು ಆಫೀಸಲ್ಲಿ ಒಬ್ಬರಿಗೆ ಫೇವರ್ೆಲ್ ಇತ್ತು, ಅಲ್ಲಿ ಗಡದ್ದಾಗಿ ತಿಂದಿದ್ದೀನಿ…ಇನ್ನೇನೂ ತಿನ್ನೋ ಸ್ಥಿತಿಯಲ್ಲಿ ಇಲ್ಲ ಅಂತ ಮೆಲ್ಲಗೆ ಜಾರಿಕೊಂಡ್ರುನಿಮ್ಮ ಮಕ್ಕಳು..?ದೊಡ್ಡವನು ನಂಗೆ ಅಜರ್ೆಂಟು ಕೆಲಸ ಇದೆ ಅಂತ ಹೊರಟು ಹೋದಚಿಕ್ಕವನು..?ಅಮ್ಮಾ, ನನಗೆ ನಾಳೆ ಎéಕ್ಸಾಮ್ ಇದೆ ಇದನ್ನ ತಿಂದು ಏನಾದ್ರೂ ಹೆಚ್ಚು ಕಡಿಮೆಯಾದ್ರೆ..? ಅಂತ ಅವಾಯ್ಡ್ ಮಾಡಿಬಿಟ್ಟಅಯ್ಯೋ…ದೇವರೆ..ತುಳಜಾ ಏನ್ರೀ ಇದು..? ಈ ಗಂಡಸರನ್ನ ನಂಬೋಕೇ ಆಗೊಲ್ಲ…ಒಂದು ಚೂರಾದ್ರೂ ಕರುಣೆ ಬೇಡವೆ..? ಮತ್ತೇ..ನೀವು ತಿಂದು ಅದರ ಟೇಸ್ಟ್ ನೋಡಿದ್ರ..?ಅಯ್ಯೋ..ಇಲ್ಲಾ ಬೃಂದಾ..ನಾನು ಯಾವತ್ತೂ ಮಾಡಿದ ತಕ್ಷಣ ತಿನ್ನೋದೇ..ಇಲ್ಲ..ಯಾರಾದರೊಬ್ಬರು ತಿಂದ ಮೇಲೇನೇ ನಾನು ತಿನ್ನೋದು..ಯಾರ್ರೀ..ಅರಳೀಮರ…ಕಂಡಕ್ಟರನ ಮಾತು ಬರಸಿಡಿಲಿನಂತಿತ್ತು! ಅದೇ ನನ್ನ ಸ್ಟಾಪು! ನಾನು ಇಳಿಯಬೇಕಾದದ್ದು ಅನಿವಾರ್ಯವಾಗಿತ್ತು! ಆದರೆ ಆ ಇಬ್ಬರು ಹೆಂಗಳೆಯರ ಮಾತು ತುಂಬಾ ಇಂಟರೆಸ್ಟಿಂಗ್ ಆಗಿತ್ತು! ಕ್ಲೈಮ್ಯಾಕ್ಸಿನತ್ತ ಸಾಗಿತ್ತು! ಮುಂದೆ ಅವರು ಗಂಡಸರ ಬಗೆಗೆ ಯಾವ ನಿಲುವು ತಳೆಯುತ್ತಾರೆ ಎನ್ನುವುದು ಅತಿ ಮುಖ್ಯವಾದ ವಿಷಯವಾಗಿತ್ತು! ಅದರ ಆಧಾರದ ಮೇಲೆ ನಾಗರೀಕ ಸಮಾಜದ ಒಬ್ಬ ಗಣ್ಯವ್ಯಕ್ತಿಯಾದ ನಾನು ಗಂಡಸರನ್ನು ಹೇಗೆ ಎಚ್ಚರಿಸಬೇಕು ಎನ್ನುವುದು ನನ್ನ ಕಾಳಜಿಯಾಗಿತ್ತು! ಅವರ ಪೂರಾ ಮಾತುಗಳನ್ನು ಕೇಳದಿದ್ದರೆ ಅದು ನಾನು ಗಂಡು ಸಮಾಜಕ್ಕೆ ಬಗೆಯುವ ದ್ರೋಹ ಎನ್ನಿಸಿತು. ನಾನು ಮುಂದಿನ ಸ್ಟಾಪಿನಲ್ಲಿ ಇಳಿಯಬಹುದಲ್ಲ ಎಂದು ಲೆಕ್ಕ ಹಾಕಿ ಅವರ ಮಾತಿನತ್ತ ಗಮನ ಹರಿಸಿದೆ.ಮತ್ತೆ ಆ ಹೊಸರುಚಿ ಏನಾಯ್ತು..?ಯಾಕೆ ಹೇಳ್ತೀರಾ..ನನ್ನ ಹಣೇಬರಹ..? ಮಗಳಿಗೆ ರುಚಿ ನೋಡೋಕೆ ಹೇಳಿದ್ರೆ..ಅವಳು ಇವತ್ತು ಸಂಕಷ್ಟಿ ಅಲ್ಲವೇನಮ್ಮ ನಾನು ಉಪವಾಸ ಎಂದಳು..ನನಗೆ ಗಂಡ, ಮಕ್ಕಳು ಎಲ್ಲರ ಮೇಲೂ ಅಸಹ್ಯ ಬಂದುಬಿಡ್ತು! ಅಲ್ಲ ನನ್ನ ಬಗ್ಗೆ ಒಂದು ಚೂರೂ ಪ್ರೀತಿಯಿಲ್ಲವಲ್ಲ ಎಂದು ಅಳೂನೇ ಬಂದುಬಿಡ್ತು..ಆಮೇಲೇನು ಬೃಂದಾ ನಮ್ಮ ಕೆಲಸದವಳಿಗೆ ಕೊಡೋಕೆ ನೋಡಿದೆ..ಅದೇನು ತಿಂಡೀನಮ್ಮಾ…ಎಂದು ಕೇಳಿದಳು..ಫಾರಿನ್ ತಿಂಡೀಕಣೇ ಎಂದೆ..ಅದಕ್ಕೆ ಅದು ನಮಗೆ ಒಗ್ಗೊಲ್ಲಮ್ಮಾ…ಅವರಿಗೇ ಕಳಿಸಿ ಅಂತ ರಾಚಿಬಿಟ್ಟಳು! ನನಗೂ ರೇಗಿ ಹೋಯ್ತು..ರುಚಿರುಚಿಯಾಗಿ ಮಾಡಿಕೊಟ್ಟರೆ ನಿಮಗೆ ಕೊಬ್ಬು! ಇನ್ನು ಮೇಲೆ ನಿನಗೆ ತಿಂಡೀನೇ ಕೊಡೋದಿಲ್ಲ ಅಂದುಬಿಟ್ಟೆ..ಆಮೇಲೇನೋ ಗೊಣಗ್ತಾ ಇದ್ದಳು..ಒಳ್ಳೇದೇ ಅಯ್ತು..ಒಳ್ಳೇದೇ ಅಯ್ತು ಅಂತ ಕೆಟ್ಟ ಟ್ಯೂನಿನಲ್ಲಿ ಮೆಲ್ಲಗೆ ಹಾಡ್ತಾ ಹೋದಳು..ಎಂತಾ ಪರಿಸ್ಥಿತಿ ತುಳಜಾ..? ಇವನರ್ೆಲ್ಲಾ..ಸಾಲಾಗಿ ನಿಲ್ಲಿಸಿ ಎಕೆ 47 ತಗೊಂಡು ಷೂಟ್ ಮಾಡ್ಬಿಡಬೇಕು! ಹೆಂಗಸರು ಅಂದರೆ ಏನಂತ ತಿಳ್ಕೊಂಡಿದ್ದಾರೆ..?ಅದಕ್ಕೇ..ನಾನು ಡಿಸೈಡ್ ಮಾಡಿದ್ದೀನಿ..ನಮ್ಮ ಕ್ಲಬ್ಬಿನಲ್ಲಿ ಒಂದು ನಿರ್ಣಯ ತಗೊಂಡು ಸಕರ್ಾರಕ್ಕೆ ಒಪ್ಪಿಸಿ ಹೊಸರುಚಿ ಮಾಡೋದು ನಮ್ಮ ಜನ್ಮಸಿದ್ಧ ಹಕ್ಕು! ಅದನ್ನು ತಿನ್ನಬೇಕಾದದ್ದು ಗಂಡಂದಿರ ಮತ್ತು ಮಕ್ಕಳ ಕರ್ತವ್ಯ…ಅದನ್ನು ತಿನ್ನುವುದಕ್ಕೆ ಅವರು ಒಪ್ಪದಿದ್ದರೆ ಅದನ್ನು ಅಪರಾಧ ಅಂತ ಪರಿಗಣಿಸೋ ಕಾನೂನನ್ನು ಜಾರಿಗೆ ತರಬೇಕು ಅಂತ..ಏನಂತೀರಾ ಬೃಂದಾ..?ಸರಿಯಾಗಿ ಹೇಳಿದಿರಿ..ಇದಕ್ಕೆ ನನ್ನ ಪೂರ್ಣ ಒಪ್ಪಿಗೆ! ನಮ್ಮ ಲೇಡೀಸ್ ಕ್ಲಬ್ಬಿನಲ್ಲಿ ಸಹ ಇದಕ್ಕೆ ಸಂಪೂರ್ಣ ಬೆಂಬಲ ಸಿಗುತ್ತೆ! ಇದು ನಿಮ್ಮೊಬ್ಬರ ಅನುಭವ ಅಲ್ಲ..ಇಡೀ ಸ್ತ್ರೀ ಸಮಾಜ ಅನುಭವಿಸಿರೋ ಅವಮಾನ! ಅವಹೇಳನ..! ಬೃಂದಾ ಬುಸುಗುಟ್ಟಿತು!ಹೊಸರುಚಿ ತಯಾರಿಸುವುದು ನಮ್ಮ ಜನ್ಮಸಿದ್ದ ಹಕ್ಕು! ಅದನ್ನ ತಿನ್ನೋದು ಗಂಡಸರ ಕರ್ತವ್ಯ! ಇದಕ್ಕೆ ಕಾನೂನಿನಡಿಯಲ್ಲಿ ರಕ್ಷಣೆ ಬೇಕು..ಹೊಸರುಚಿಯನ್ನು ತಿನ್ನಲು ತಿರಸ್ಕರಿಸುವ ಗಂಡಸರನ್ನು ನಿಧರ್ಾಕ್ಷಿಣ್ಯವಾಗಿ ಬಂಧಿಸಬೇಕು..ಜೈಲಿನಲ್ಲಿ ನಾಲ್ಕು ದಿನ ರಾಗಿಮುದ್ದೆ ತಿಂದರೆ ಆಗ ಗೊತ್ತಾಗುತ್ತೆ ಹೊಸರುಚಿಯ ಪವರ್..! ತುಳಜಾ ತೋಳೇರಿಸಲಿಲ್ಲ ಆಷ್ಟೆ!ನಾನು ಬೆಚ್ಚಿದೆ, ಬೆವರಿದ, ಬಸವಳಿದೆೆ! ಇಡೀ ಗಂಡು ಸಮುದಾಯ ಎಂತಾ ಅಪಾಯದ ಸ್ಥಿಯಲ್ಲಿದೆ ಎಂಬುದರ ಅರಿವು ಅವರಿಗಿನ್ನೂ ಆಗಿಲ್ಲ!
ಎಚ್ಚರಿಕೆಯ ಗಂಟೆಯನ್ನು ಬಾರಿಸುವ ಕರ್ತವ್ಯ ನನ್ನದು ಎನಿಸಿತು! ನಾನು ಈ ಕೆಲಸ ಮಾಡದಿದ್ದರೆ ಮುಂದೆ ಇಡೀ ಪುರುಷ ಸಮಾಜ ಗಂಡ, ಅಳಿಯ, ಮಾವ, ಮಕ್ಕಳು ಇತ್ಯಾದಿ ಸಂಬಂಧಗಳಿಂದ ಹೆಣ್ಣಿನ ಜೊತೆ ಜೋಡಣೆಯಾಗಿರುವವರು ಕಾರಾಗೃಹದಲ್ಲಿ ಬಂಧಿಗಳಾಗುತ್ತಾರೆ! ಲಾಸ್ಟ್ ಸ್ಟಾಪ್…ಲಾಸ್ಟ್ ಸ್ಟಾಪ್…!ಕಂಡಕ್ಟರನ ಮಾತಿಗೆ ಆ ಇಬ್ಬರು ಭಯೋತ್ಪಾದಕ ಮಹಿಳೆಯರು ಎದ್ದು ಬಸ್ಸಿನಿಂದಿಳಿಯಲು ಅನುವಾದರು.ನಾಳೆ ಲೇಡೀಸ್ ಕ್ಲಬ್ಬಿಗೆ ಬತರ್ೀರಲ್ವಾ ಬೃಂದಾ..? ತುಳಜಾ ಕೇಳಿದರು.ಬರದಿದ್ದರೆ ಹೇಗೆ..? ಹಿಡಿದ ಕೆಲಸವನ್ನು ಬಿಡಬಾರದು..! ನಮ್ಮ ಗುರಿ ಈಗ ಫಿಕ್ಸ್ ಆಯಿತಲ್ಲ…ಇನ್ನು ಹೋರಾಟ ಬಾಕಿ..ಅದಕ್ಕಾಗಿ ಯಾವುದೇ ಕಷ್ಟ ಅನುಭವಿಸಲು ನಾನು ಸಿದ್ಧ ಎಂದು ಘೋಷಿಸಿದ ಬೃಂದಾ ಬಸ್ಸಿನಿಂದ ಇಳಿಯಿತು.ಯಜಮಾನರೆ ಅರಳೀ ಮರ ಅಂದವರು…ಕೊನೇ ಸ್ಟಾಪ್ ಬಂದರೂ ಇನ್ನೂ ಕೂತೇ ಇದ್ದೀರ..ಗಮನ ಎಲ್ಲೋ ಇತ್ತೂಂತ ಕಾಣ್ಸುತ್ತೆ..?ಕಂಡಕ್ಟರ್ ಮಾತಿನಲ್ಲಿದ್ದ ವ್ಯಂಗ್ಯವನ್ನು ಗುರುತಿಸಿದರೂ ಪ್ರತಿಕ್ರಿಯಿಸದೆ ಬಸ್ಸಿನಿಂದ ಕೆಳಗಿಳಿದೆ! ಒಂದು ಗುರುತರವಾದ ಕೆಲಸದಲ್ಲಿ ತೊಡಗಿಸಿಕೊಂಡಾಗ ಈ ಅವಮಾನ, ವ್ಯಂಗ್ಯ,, ಕಷ್ಟ ಇವೆಲ್ಲಾ ಸಾಮಾನ್ಯವೇ..! ಇವು ಯಾವ ಮಹಾತ್ಮರನ್ನೂ ಬಿಟ್ಟಿಲ್ಲ! ಎಂದುಕೊಳ್ಳುತ್ತಾ ಬಸ್ಸಿನಿಂದ ಕೆಳಗಿಳಿದೆ!
ಲೇಖಕ : ಎಸ್.ಜಿ.ಶಿವಶಂಕರ್, 5177,’ಶಿವಲತ’, ಹೆಚ್.ಟಿ.ಜೋಡಿ ರಸ್ತೆ, ವಿಜಯನಗರ 2ನೆ ಹಂತ, ಮೈಸೂರು-570017ಫೋನು: 9900093842






ತಮ್ಮ ಮಡದಿಯರೊಂದಿಗೆ ಪ್ರಯಾಣಿಸುವಾಗ ಆಟೋದಲ್ಲಿಯೂ, ತಾವೊಬ್ಬರೇ ಇರುವಾಗ ಬಸ್ಸಿನಲ್ಲಿ ಪ್ರಯಾಣ ಮಾಡುವುದು ಸಹಜ. ಚೆನ್ನಾಗಿದೆ ಸರ್, ನಿರೂಪಣೆ ತುಂಬಾ ಇಷ್ಟವಾಯ್ತು. ನಾವೂ ಸ್ವಲ್ಪ ಎಚ್ಚರದಿಂದಿರೋಣ, ಅದೇನು ಕೊಡ್ತಾರೋ ತಿಂದೆ ಬಿಡೋಣ. ಆಮೇಲೆ ಜೈಲಿಗೆ ಹೋದರೆ ಅಲ್ಲಿರೋ ಮುಖಗಳನ್ನು ನೇರ ನೋಡೋಕೆ ಆಗೋಲ್ಲ. ಅದಕ್ಕಿಂತ ತಿನ್ನೋದೇ ಒಳ್ಳೆದು!