ಸೂರ್ಯ ಕೀರ್ತಿ
೧.
ಅವಳ ತುಟಿಗೆ ನನ್ನ ತುಟಿಯ ಝೇಂಕರಿಸಿದೆ
ಸುರಿವ ಮಧುವಿಗೆ ನಾವಿಬ್ಬರೂ ಕಡಲಾಗಿದ್ದವು!
ಅವಳ ಎದೆಗೆ ನನ್ನ ಎದೆಯ ಸೇರಿಸಿ ಸೇದಿದೆ
ಮೈಮೂಳೆಗಳು ಮಲ್ಲಿಗೆ ಹೂಗಳಾದವು!
ಒಮ್ಮೆ ಕುಡಿಸಿ ಒಮ್ಮೆ ಅವಳ ಸ್ಪರ್ಶಿಸಿ
ತೇಲಾಡಿದೆವು ಆಕಾಶದ ತುಂಬಾ;
ಅಲ್ಲಿ ದೇವಗಂಧರ್ವರೂ ಬಂದು
ಇನ್ನು ಕುಡಿದು ಕುಡಿದು ತೇಲಿರಿ
ಆಕಾಶದ ಅಗಲ ದೊಡ್ಡದೆಂದರು!
ಅವಳ ಕೈಗಳ ಮೇಲೆ ನೈದಿಲೆಗಳ ಚಿತ್ರ ಬಿಡಿಸಿದೆ;
ಬಿಡಿಸಿದ ಚಿತ್ರಗಳೆಲ್ಲ ಸುವಾಸನೆ ಬೀರಿದವು!
ಚಂದ್ರಗನ್ನಡಿಲ್ಲಿ ನಗ್ನವಾಗಿ ನಿಂತೆವು;
ಪ್ರಪಂಚವೂ ನಮ್ಮಷ್ಟೇ ನಗ್ನವಾಗಿರುವುದನ್ನೂ ಕೂಡಾ ಕಂಡೆವು!
ಅವಳಿಗೆ ಗುಲಾಬಿ, ಸಂಪಿಗೆ, ಸೀತೆ ಹೂವಿನ
ಷರಾಬು ತಯಾರಿಸಿ ಕುಡಿಸಿದಂತೆ;
ಪ್ರೀತಿಯ ನೊರೆ ಉಕ್ಕತೊಡಗಿತು
ಆತುಕೊಳ್ಳಲು ಬಂಗಾರದ ಹೂಜಿಯ
ಹಿಡಿಯುವ ಮುಂಚೆ ಎಚ್ಚರಾದಳು!
೨.
ಪರಮಾತ್ಮನಿಗೂ ಸಾರಾಯಿ ಕುಡಿಸಿದೆ:
ಅವನು ಕುಡಿಯುತ್ತಾ ಹೇಳಿದ:
‘ಈ ಜಗತ್ತು ಏನನ್ನು ಕುಡಿದಿದೆ?’
ಎಂದ.
ಮತ್ತೆ ಕುಡಿಸಿದೆ;
‘ಕುಡಿಯುವುದು ಪರಮಾರ್ಥ ಮೋಕ್ಷ’ ಎಂದ!
ಇನ್ನು ಕುಡಿ ಎಂದೆ.
‘ಸಾಕು ಬೆಳದಿಂಗಳು ಹರಿದು
ಬೆಳಕು ಮೂಡುವುದೆಂದ!”
೩.
ಕವಿ ಕುಡಿದನೆಂದರೆ;
ಏನು ಕುಡಿದ? ಏಕೆ ಕುಡಿದ?
ಎಂದು ಇಲ್ಲಿ ಯಾರು ಕೇಳುವವರಿಲ್ಲ?
ಎಂದು ವಿಮರ್ಶಕನೊಬ್ಬ ಅತ್ತ.
ಕವಿ ಕುಡಿದಿದ್ದು ಮದ್ಯವೋ? ಕಾವ್ಯವೋ?
ಕಾಮವೋ? ಅರ್ಥವೋ? ತತ್ವವೋ?
ಯಾರಿಗೆ ಗೊತ್ತು?
ಬರೆದಿದ್ದೆಲ್ಲ ಕಾವ್ಯವಾಗಬೇಕಾದರೆ
ಕವಿ ಕಾಡಬೇಕು, ಕವಿ ಕಾಡುವಂತಾಗಬೇಕಾದರೆ
ಕಾಡಲ್ಲಿ ಅಲೆಯಬೇಕು!
ಕಪಿಗಳ ಜೊತೆ ಜೂಜಾಟವಾಡಬೇಕು
ಬಿಲ್ಲು,ಬಳಪವ ಹಿಡಿದು ಅಭ್ಯಾಸಿಸಬೇಕು.
ಕವಿ ಕುಡಿಯದಿದ್ದರೆ ಕಾವ್ಯದ ದ್ರವ್ಯ ಹೇಗೆ ಸಿಗಬೇಕು?
ಕಾವ್ಯ ಕುಡಿಯಬೇಕು,
ಕುಡಿದು ಮೀನಿನಂತೆ ಈಜಾಬೇಕು!
ಕವಿ ಏನನ್ನು ಕುರಿತು ಹಾಡಬೇಕು
ಸಮಾಜದ ಬಗೆಯೋ? ರಾಜಕಾರಣಿಗಳ ಬಗೆಯೋ? ಪ್ರಕೃತಿಯ ಬಗೆಯೋ?
ಇಲ್ಲ ವರ್ತಮಾನದ ಬಗೆಯೋ?
ಕುಡಿಯದೆ ಏನು ಬರೆದಾನು ಕವಿ?
ಸುಳ್ಳನ್ನೆ ಸುಳ್ಳು ಎಂದು ಹೇಳಿದರೆ
ಯಾರು ನಂಬಿಯಾರು?
ಹೀಗಿದ್ದ ಮೇಲೆ! ಕವಿ ಯಾರನ್ನು ಕುರಿತು
ಬರೆಯಬಲ್ಲ;
ಕೊಳೆತ ದ್ರಾಕ್ಷರಸದ ಮತ್ತನ್ನು
ಕುರಿತು ಮಾತ್ರ ಬರೆಯಬಲ್ಲನಷ್ಟೇ!
೪.
ನನ್ನ ಚಿತ್ರ ಬರೆಯುವವಳಿಗೆ
ಸೇಬಿನ ವೈನ್ ಕುಡಿಸಿದೆ;
ಕುಡಿದ ರುಚಿಗೆ ಇನ್ನು ಇದ್ದರೆ ಕೊಡಿ
ಎಂದಳು!
ಮತ್ತಷ್ಟು ಹೂಜಿಯಿಂದ ಬಸಿದುಕೊಂಡು
ತಗೋ ಕುಡಿಯೆಂದೆ!
ಇನ್ನೂ ಇರುವುದೆ ಎಂದಳು, ಒಂಟಿ ಕಣ್ಣನ್ನು ಒರಳಿಸಿ!
ಒಳಗೆ ಇರಬಹುದು ಬೇಕಾದರೆ ಕೊಡುವೆ ಎಂದೆ
ಅವಳ ಬಣ್ಣದ ಕೈಗಳಲ್ಲಿ
ಸೇಬಿನ ಷರಾಬು ಹರಿಯುತ್ತಿತ್ತು
ಮತ್ತೆ,
ಕೇಳಿದಳು;ಇನ್ನು ಇದ್ದರೆ ಕುಡಿಸಿ ಎಂದು
ಹೂಜಿಯಲ್ಲಿ ಇದ್ದಬದ್ದ ವೈನ್ ನೆಲ್ಲ ಸುರಿದು
ಕೊಟ್ಟೆ;
ಕಲೆಯಿಲ್ಲದ ಸುಂದರ ಮೊಗದ ಸೇಬಿನ ಬಣ್ಣದಂತಿರುವ ನನ್ನ ಮೊಗವ ಬರೆದು ಕೊಟ್ಟಳು!
೫.
ತತ್ವಜ್ಞಾನಿ ಹೇಳಿದ;
‘ಈ ಜಗತ್ತನ್ನೆ ಕುಡಿದು ಬಿಡಬೇಕೆಂದು’
ಇದಕ್ಕೆ ಸಾಮಾನ್ಯನೆಂದ
‘ಮೊದಲು ಜೀವನವ ಕುಡಿಯಿರಿ ಸ್ವಾಮಿ,
ಜೀವನವ ಕುಡಿಯಿರಿ’ ಎಂದ!
ವಿಶೇಷವಾಗಿದೆ ಕವನ… ಅಭಿನಂದನೆಗಳು ಸರ್