ರೋಹಿತ್
ಧರಣಿ ಮಂಡಲ ಮಧ್ಯದೊಳಗೆ
ಸುಮಾರು ಒಂದು ತಿಂಗಳಿನಿಂದ ಕಾಯ್ದಿಟ್ಟುಕೊಂಡಿದ್ದ ಕುತೂಹಲ ಮೊನ್ನೆ, ಶನಿವಾರ, ತಣಿಯಿತು; ಅದರ ಹಿಂದೆಯೇ ಮತ್ತೊಂದು ಕಾತುರವು ಹುಟ್ಟಿಕೊಂಡಿದೆ. ಅದೇನೆಂದರೆ, ಈ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಮತ್ತೊಂದು ಬಾರಿ ನೋಡಿಬಿಡಬೇಕು ಎಂದು!! ಹೌದು, ಈ ಮದುಮಗಳ ವೈಶಿಷ್ಟ್ಯವೇ ಅಂಥದ್ದು. ಮೊದಲು ಇದ್ದ ಕುತೂಹಲಕ್ಕೂ, ಈಗ ಹುಟ್ಟಿಕೊಂಡಿರುವ ಕಾತುರಕ್ಕೂ ಸಾಕಷ್ಟು ಕಾರಣಗಳಿವೆ.
ಕನ್ನಡ ಸಾಹಿತ್ಯಲೋಕದ, ಕವಿ ಕುವೆಂಪುರವರ ಮಹಾನ್ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಈ ನಾಟಕದ ಕಥಾವಸ್ತು ಎಂಬುದು ಮೊದಲ ಅಚ್ಚರಿಗೆ ಕಾರಣವಾದರೂ, ಕುತುಹೂಲ ಹುಟ್ಟಿಸಿದ್ದು ಈ ನಾಟಕವನ್ನು ಪ್ರಸ್ತುತ ಪಡಿಸುತ್ತಿರುವ ರೀತಿಗೆ. ಇತರೆ ನಾಟಕಗಳಂತೆ ಇಲ್ಲಿ ವೇದಿಕೆಯ / ರಂಗದ ಮೇಲೆ ಮಲೆನಾಡಿನ ಸೆಟ್ ಹಾಕಿಲ್ಲ. ಬದಲಿಗೆ, ಕಲ್ಲು, ಮಣ್ಣು, ಗಿಡ, ಮರವಿರುವ ಬಯಲಿನಲ್ಲಿ ಅಗತ್ಯಕ್ಕೆ ತಕ್ಕಂತೆ ಜಾಗವನ್ನು ಒಪ್ಪ ಓರಣ ಮಾಡಿ, ಮಲೆನಾಡಿನ ಸಣ್ಣ ಹಳ್ಳಿಯ, ತೋಟದ ಒಂದು ಭಾಗದ ತದ್ರೂಪವನ್ನೇ ಸೃಷ್ಟಿಸಿ ಅದನ್ನೇ ರಂಗಸ್ಥಳವನ್ನಾಗಿಸಿರುವುದು ಇದರ ವೈಶಿಷ್ಟ್ಯ.

ಇದೇ ರೀತಿ ಸಿದ್ದಗೊಂಡ ನಾಲ್ಕು ವಿವಿಧ ರಂಗಸ್ಥಳಗಳಲ್ಲಿ ನಾಟಕ ಸರದಿಯಲ್ಲಿ ಸಾಗುವುದನ್ನು ನೋಡುವಾಗ ನಮಗೆ ಸಿಗುವ ‘ಫೀಲ್’ ನಿಜಕ್ಕೂ ವಿಭಿನ್ನವಾದದ್ದು. ಮಲೆನಾಡಿನಲ್ಲಿ ತೋಟದ ಕಡೆ, ಕೇರಿಯ ಕಡೆ ಸುತ್ತಾಡಲು ಹೋದಾಗ, ಯಾರೋ ಕಿತ್ತಾಡುತ್ತಿರುವುದನ್ನು, ಮಾತನಾಡುತ್ತಿರುವುದನ್ನು, ಬೇಡಿಕೊಳ್ಳುತ್ತಿರುವುದನ್ನು ಮರೆಯಲ್ಲಿ ನಿಂತು ನೋಡಿದಂತೆ 🙂
ಇನ್ನು, ೭೫೦-೮೦೦ ಪುಟಗಳಷ್ಟು ಮಹಾ ಕಾದಂಬರಿಯನ್ನು , ಇಡೀ ರಾತ್ರಿ ೯ ಗಂಟೆಗಳ ಕಾಲ ನಾಟಕ ಮಾಡುತ್ತಾರೆ ಎಂದಾಗ,ಅಚ್ಚರಿಯ ಜೊತೆ, ಅನುಮಾನವೂ ನುಸುಳಿ ಬಂತು. ರಾತ್ರಿ ನಿದ್ದೆಗೆಟ್ಟು ಅಭ್ಯಾಸವಿಲ್ಲದ, ಹೆಚ್ಚೆಂದರೆ ರಾತ್ರಿ ೧ ರ ತನಕ ನಿದ್ದೆಯನ್ನು ಮುಂದೂಡ ಬಹುದಾದ ನಾನು ಬೆಳಿಗ್ಗೆ ೫.೩೦ರ ತನಕ ನಿದ್ದೆ ಬಿಟ್ಟು, ಎದ್ದು ಕೂತು ನಾಟಕ ನೋಡಬಲ್ಲೆನೆ, ನಾಟಕ ಬೋರ್ ಎನಿಸಿಬಿಟ್ಟರೆ ಅಥವಾ ಕಥಾವಸ್ತು ತುಂಬಾ ‘ಹೆವಿ’ ಎನಿಸಿ, ಆಸಕ್ತಿ ಜಾರಿ ಹೋದರೆ ಎಂದೆಲ್ಲ ಅನಿಸಿತ್ತು. (ನಾನು ಕಾದಂಬರಿಯನ್ನು ಓದಿಲ್ಲ) ನಾಟಕದ ಪ್ರದರ್ಶನ ಮುಗಿಯುವ ವೇಳೆಗೆ ಈ ಎಲ್ಲಾ ಅನುಮಾನಗಳು ಕೊಚ್ಚಿಕೊಂಡು ಹೋಗಿದ್ದವು.
ಇಲ್ಲಿ ಮಲೆನಾಡ ಪರಿಸರದ ಚಿತ್ರಣವಿದೆ, ಮುಗ್ದ, ಪ್ರಬುದ್ದ, ಬದ್ದ ಪ್ರೇಮಿಗಳ ಕಥೆಯಿದೆ, ವ್ಯವಸ್ಥೆಯ ವಿರುದ್ದದ ವ್ಯಂಗ್ಯವಿದೆ, ಆಚರಣೆಯಲ್ಲಿದ್ದ,ಈಗಲೂ ಇರುವ ಮೂಢಾಚಾರದ ಅಣಕವಿದೆ, ಹಾಸ್ಯವಿದೆ, ಕಳೆದು ಹೋದ ಮಗನ ಬರುವಿಕೆಗೆ ಕಾಯುವ ತಂದೆಯ ನೋವಿದೆ, ಮನುಷ್ಯ ಸಹಜವಾದ ಆಸೆ, ದುರಾಸೆ, ರಾಜಕೀಯದ ದರ್ಶನವಿದೆ, ಹೀಗೆ ಸಾಕಷ್ಟು ಆಸಕ್ತಿಕರ ವಿಷಯಗಳು ನಮ್ಮನ್ನು ಹಿಡಿದಿಡಬಲ್ಲವು. ಎಷ್ಟರ ಮಟ್ಟಿಗೆ ಎಂದರೆ, ಒಂದು ರಂಗಸ್ಥಳದಲ್ಲಿ ಪ್ರದರ್ಶನ ಮುಗಿದು, ಮತ್ತೊಂದು ಕಡೆ ನಾಟಕ ಮುಂದುವರಿಯುವುದು ಎಂದಾಗ, ಅಲ್ಲಿ ಸರಿಯಾದ ಜಾಗ ಹಿಡಿಯಲು ಓಡುತ್ತಿದ್ದೆ. ನನ್ನ ನಿದ್ದೆಯು ಓಡಿಹೋಗಿ, ಅದೆಲ್ಲೋ ಕಳೆದು ಹೋಗಿತ್ತು.

ವಿಶಿಷ್ಟವಾದ ರಂಗಭೂಮಿ, ವಿಸ್ತೃತವಾದ ಕಥೆ, ಇವುಗಳನ್ನು ಸಮರ್ಪಕವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಕಲಾವಿದರ ಶ್ರಮ ನಿಜಕ್ಕೂ ಅಭಿನಂದನಾರ್ಹ. ಉತ್ತರದ ಗುಲ್ಬರ್ಗಾದಿಂದ, ದಕ್ಷಿಣದ ಚಾಮರಾಜನಗರದಂದ ಆಯ್ದ ಸುಮಾರು ೭೫ ಜನ ಕಲಾವಿದರು ಇದಕ್ಕಾಗಿ ಒಂದೂವರೆ ತಿಂಗಳು ಶ್ರಮಿಸಿ, ಪ್ರತಿಯೊಬ್ಬರೂ ಕನಿಷ್ಟ ೩ ಪಾತ್ರಗಳನ್ನು ನಿಭಾಯಿಸಿರುವುದು ಆಶ್ಚರ್ಯಕರ. ನಾಟಕ ಪ್ರಾರಂಭವಾಗಿ, ನಾಟಕದ ಕೊನೆಯ ಸಂಭಾಷಣೆ ಮುಗಿಸಿ, ಪ್ರೇಕ್ಷಕರಿಗೆ ವಂದನೆ ಸಲ್ಲಿಸುವವರೆಗೂ ಕಲಾವಿದರ ಹುಮ್ಮಸ್ಸು (ಎನರ್ಜಿ) ಒಂದೇ ಮಟ್ಟದಲ್ಲಿತ್ತು; ಎಲ್ಲಿಯೂ ಕಡಿಮೆಯಾದ ನೆನಪೇ ಇಲ್ಲ!! ಈ ಹುಮ್ಮಸ್ಸಿನ ಅಭಿನಯವೂ ಎಲ್ಲಿಯೂ ಕೃತಕವೆನಿಸದೆ, ಸಾಕಷ್ಟು ಸಹಜವಾಗಿರುವುದರಿಂದಲೇ, ನಾಯಿಗತ್ತಿ, ತಿಮ್ಮಿ, ಐತ, ಪೀಂಚಲು, ಮುಕುಂದ, ಚಿನ್ನು, ಸುಬ್ಬಣ್ಣ ಹೆಗಡೆ, ಕಾವೇರಿ, ಅಂತಕ್ಕ, ಸೇರೆಗಾರ ಇವರೆಲ್ಲಾ ನಾಟಕದ ಸಮಯದಲ್ಲೂ ಹಾಗೂ ನಾಟಕದ ನಂತರವೂ ನಿಮ್ಮನ್ನು ಹಿಡಿದಿಟ್ಟಿರುತ್ತಾರೆ. ಏನೂ ಸಂಭಾಷಣೆಯೇ ಇಲ್ಲದ, ಕೇವಲ ಅಭಿನಯದಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ ‘ಗುತ್ತಿ ನಾಯಿ’ ಯನ್ನು ನಾವು ನೋಡಿಯೇ ಎಂಜಾಯ್ ಮಾಡಬೇಕು.
ಇಷ್ಟು ದಿನ, ಸಿನಿಮಾ ಲೋಕದಲ್ಲಿ ಕಾಣೆಯಾಗಿದ್ದ ಹಂಸಲೇಖ, ಮದುಮಗಳಿಗಾಗಿ ಅದ್ಬುತವೆನಿಸುವಂತಹ ಸಂಗೀತ ಸಂಯೋಜಿಸಿ ತಮ್ಮ ದೇಸಿತನವನ್ನು ಪರಿಚಯಿಸಿದ್ದಾರೆ. ೪೨ ಹಾಡುಗಳಲ್ಲಿ ಯಾವೊಂದು ಹಾಡೂ ಬೋರ್ ಹೊಡೆಸಲಿಲ್ಲ. ನಾಟಕದ ಓಟಕ್ಕೆ ಪೂರಕವಾಗಿ ಬಂದು ಹೋಗುವ ಹಾಡುಗಳು ಎಷ್ಟರ ಮಟ್ಟಿಗೆ ಸೆಳೆಯುತ್ತವೆ ಎಂದರೆ, ನಾಟಕದ ನಂತರವೂ ಹಾಡುಗಳನ್ನು ಗುನುಗುನಿಸದೇ ಇರಲಾಗುತ್ತಿಲ್ಲ.

ಒಟ್ಟಿನಲ್ಲಿ, ಈ ಅಪರೂಪದ, ಅಪೂರ್ವ ಅನುಭವವನ್ನು ನಮ್ಮದಾಗಿಸಿಕೊಳ್ಳಲು ನಾವು ಮಾಡಬೇಕಿರುವುದು ಎರಡೇ ಕೆಲಸ.
-ಒಂದು, ಮುಂಗಡವಾಗಿ ಟಿಕೇಟ್ ಕಾಯ್ದಿರಿಸುವುದು.
-ಎರಡು, ನಿಗದಿತ ದಿನ ಪ್ರದರ್ಶನದ ವೇಳೆಗೆ ಸರಿಯಾಗಿ ಹೋಗಿ ಕುಳಿತುಕೊಳ್ಳುವುದು.
ಆನಂತರ ನಮ್ಮ ನಿದ್ದೆಯನ್ನು ಮಾಯವಾಗಿಸುವ, ಆಸಕ್ತಿಯನ್ನು ಕೆರಳಿಸುವ ಒಂದು ಮಾಯಾ ಮೋಡಿಗೆ ನಮಗೆ ಗೊತ್ತಿಲ್ಲದೇ ಒಳಗಾಗುತ್ತೇವೆ. ನಾಟಕ ಮುಗಿಯುವ ವೇಳೆಗೆ ನಮಗೇ ಅಚ್ಚರಿಯಾಗುತ್ತದೆ; ವಿಶಿಷ್ಟ ಅನುಭವವೊಂದು ನಮ್ಮ ಕೈ ಹಿಡಿದಿರುತ್ತದೆ. ತಂಡದ ಶ್ರಮ ಹಾಗೂ ಶ್ರದ್ದೆ ನಮ್ಮನ್ನು ಮೂಕರನ್ನಾಗಿಸುತ್ತದೆ.
ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತಾರ ಮಾಡಿತೋರಿಸಿದ ನಾಟಕಕ್ಕೆ ಜೈ!!
‘ಬರಲಾಗಲಿಲ್ಲ, ‘ ಎಂದು ಹೇಳದೆ,
ಹತ್ತಾರು ಕಾರಣಗಳ ಹುಡುಕದೆ,
ಸಮಯ ಬಿಡುವು ಮಾಡಿಕೊಂಡು ಹೋಗಿಬನ್ನಿ;
ಮಲೆನಾಡ’ಮದುಮಗಳು’ ನಿಮ್ಮೂರಿಗೇ ಬಂದಿರುವಾಗ
ಹೋಗದೆ ತಪ್ಪಿಸಿಕೊಳ್ಳುವುದು ಸರಿಯಲ್ಲ…
ಪೋಷಕರಾಗಿ ಹೋಗಿ ಹರಸಿ, ಹರ್ಷಿಸಿ ಬನ್ನಿ;
ಪುಟ್ಟಪ್ಪನ ಕನಸಿನ ಪುಟ್ಟ ಮಗಳ ಸೋದರ ಮಾವ
ಬಸು ಮತ್ತವರ ತಂಡಕ್ಕೆ ಖುಷಿ ತನ್ನಿ



Ondu Adbhuta prayoga sundara drushya kavya Adare Peechalu mattu chinnakka r naduvina sambhashane tumba ati anisitu mattu ashleelavagide mujugara tarisutte. sambhashane swalpa badalayisidere olitu anisutte.
Munduvaridante koneya ankadalli prekshakari asana vyvavasthe sariyilla. Kulithukollalu nela ilijaragide. Asanada vyvasthe madire olitu.
ಒಂದು ಅತೀ ಅಪೂರ್ವವಾದ ನಾಟಕ ನನ್ನ ಇರುವಿಕೆಯ ದೂರದಿಂದ ನೋಡಲಾಗದ ಖೇದವನ್ನು ಇ ಲೇಖನಗಳು ತಣಿಸುತ್ತಿವೆ. ಬೆಂಗಳೂರಿನಲ್ಲಿ ಇದ್ದವರು ಧನ್ಯರು, ನೋಡಿ ನಲಿದವರು ಇನ್ನೂ ಧನ್ಯರು. kudos for the great show ! ಮಹಾನ ಚೇತನಕ್ಕೆ ತಕ್ಕಬಹುದಾದ ಗೌರವವಿದು.
-ಅನಿಲ ತಾಳಿಕೋಟಿ