ಗುರು ಬಾಳಿಗಾ
ಪಾಣೆಮಂಗಳೂರು ಎಂದರೆ ಕೊಂಕಣಿ ಸಾರಸ್ವತರು ೧೭-೧೮ನೇ ಶತಮಾನದಲ್ಲಿ ಕಟ್ಟಿದ ಒಂದಂಗುಲ ರಸ್ತೆಯ ಒಂದು ಪುಟ್ಟ ಪೇಟೆ. ಒಂದು ದೇವಸ್ಥಾನ, ಮೂರು ಮತ್ತೊಂದು ಶಾಲೆ, ಹದಿನೆಂಟು ಅಂಗಡಿಗಳು, ಆ ಪುಟ್ಟಪೇಟೆಗೆ ಹೆಚ್ಚಾಯ್ತು ಎಂಬಂತೆ ನಾಲ್ಕು ಬ್ಯಾಂಕು ಶಾಖೆಗಳು ಹೀಗೆ, ದಕ್ಷಿಣ ಕನ್ನಡದ ಇತರ ಪೇಟೆಗಳಂತೇ ಪಾಣೆಮಂಗಳೂರು. ಪಾಣೆಮಂಗಳೂರು ಎಂಬ ಆ ಕೊಂಕಣಿಗಳ ಪೇಟೆಯ ಸುತ್ತೆಲ್ಲಾ ಕೋಟೆ ಕಟ್ಟಿದಂತೆ ಬ್ಯಾರಿಗಳ ಪೇಟೆಗಳು. ನಾವದನ್ನು ನಾಯ್ತೆಪೇಂಟ್ ಎಂದು ಕೊಂಕಣಿಯಲ್ಲಿ ಕರೆಯುತ್ತಿದ್ದೆವು. ಕೊಂಕಣಿಗಳ ಪೇಟೆಗೆ ತಾಗಿಯೇ ಇದ್ದ ಆಲಡ್ಕ, ತುಸು ದೂರದ ನಂದಾವರ, ಈ ಬದಿಯಲ್ಲಿ ಅಪವಾದವೆಂಬಂತೇ ಬ್ಯಾರಿಗಳ ಮನೆಗಳೇ ಹೆಚ್ಚು ಇದ್ದ ಜೈನರ ಪೇಟೆ. ಮತ್ತು ನೇತ್ರಾವತಿಯ ಮೇಲೆ ಬ್ರಿಟಿಶರು ಕಟ್ಟಿದ್ದ ಉಕ್ಕಿನ ಸೇತುವೆ ದಾಟಿದ ಕೂಡಲೆ ಇರುವ ಗೂಡಿನ ಬಳಿ.
ಇಂತಹ ಭೌಗೊಳಿಕ ಸನ್ನಿವೇಶದ ನಡುವೆ ಹುದುಗಿದ್ದ ಆ ಪಾಣೆಮಂಗಳೂರು ಪೇಟೆಯಲ್ಲಿ ಕೊಂಕಣಿಗಳನ್ನು ಬಿಟ್ಟರೆ ಹೆಚ್ಚಾಗಿ ಕಾಣಸಿಗುವುದು ಬ್ಯಾರಿಗಳೇ. ಹಾಗಾಗಿ ಆ ಪೇಟೆಯ ತುಂಬೆಲ್ಲ ಬ್ಯಾರಿ ಮತ್ತು ಕೊಂಕಣಿ ಭಾಷೆಗಳ ಓಕುಳಿ. ಬ್ಯಾರಿಗಳೂ ಕೊಂಕಣಿಗಳೂ ತಮ್ಮ ತಮ್ಮ ವ್ಯಾಪಾರದ ಬುದ್ಧಿಗಳಿಂದ ಈ ಪೇಟೆಯನ್ನು ಸಾಂಗವಾಗಿ ಪರಿಪಾಲಿಸಿಕೊಂಡು ಬರುತ್ತಿದ್ದರು.
ನಾವು ಕೊಂಕಣಿ ಮಕ್ಕಳು ಶಾಲೆಯಲ್ಲಿ ಅತಿಬುದ್ಧಿವಂತರೆನಿಸಿದರೆ, ಬ್ಯಾರಿಗಳು ಅತೀ ಪೋಕರಿಗಳು. ಈ ನಡುವೆ ನಲುಗುವ ತುಳುವರು ಹಲವರು. ಮನೆಯಲ್ಲಿ ನಮಗೆ ಬ್ಯಾರಿಗಳ ಪೋರರೊಂದಿಗೆ ದೋಸ್ತಿ ಮಾಡಬಾರದು ಎನ್ನುವ ಕಟ್ಟಪ್ಪಣೆ ಇದ್ದರೂ, ನಮಗೆಲ್ಲರಿಗೂ ಬ್ಯಾರಿಗಳ ಪೋರರೊಂದಿಗಿನ ದೋಸ್ತಿಯೇ ಹೆಚ್ಚು ರಂಜಕವಾಗಿತ್ತು. ಅವರೊಂದಿಗಿನ ಒಡನಾಟದ ನೆನಪುಗಳೇ ನೂರ್ಕಾಲ ಬಾಳುವಂತವುಗಳು.

ಇಬ್ರಾಯಿ ಅಂತ ನಾವು ಅವನನ್ನು ಕರೆಯುತ್ತಿದ್ದೆವು. ಅವನು ತನ್ನ ಹೆಸರು ಹೇಳುವಾಗ “ಮುಹ್ಹಮ್ಮದ್ ಇಬ್ರಾಹೀಂ” ಎಂದು ಹೇಳುತ್ತಿದ್ದ. ಹಾಗೆನ್ನುವಾಗ ಅವನಲ್ಲೊಂದು ಹೆಮ್ಮೆ ತುಳುಕುತ್ತಿತ್ತು. ಐದನೇ ತರಗತಿಯಲ್ಲಿ ನನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದ ಇಬ್ರಾಯಿಯ ನೆನಪು ಎಂದರೆ ಅವನ ಹಾಡುಗಳ ನೆನಪು. ಸದಾ ಒಂದಲ್ಲ ಒಂದು ಹಾಡು ಅವನಲ್ಲಿ ಆವರಿಸಿಕೊಂಡಿರುತ್ತಿತ್ತು. ಅವುಗಳಲ್ಲಿ ಬ್ಯಾರಿ ಪಾಟ್ ಗಳೇ ಹೆಚ್ಚು. ಕೆಲವೊಮ್ಮೆ ಆಗಿನ ದಿನಗಳಲ್ಲಿ ಜನಪ್ರಿಯವಾಗಿದ್ದ “ಕುರ್ಬಾನಿ” ಹಿಂದಿ ಚಿತ್ರಗೀತೆಗಳನ್ನು ಗುನುಗುತ್ತಾ ಇರುತ್ತಿದ್ದ. ನನಗೆ ಕೆಲವು ಬ್ಯಾರಿ ಪಾಟ್ ಗಳನ್ನೂ ಅವನು ಹೇಳಿಕೊಟ್ಟಿದ್ದ. ನಾನು ಅದನ್ನು ಬರೆದುಕೊಂಡು ಗಟ್ಟಿಯಾಗಿ ಹಾಡುವಾಗ ಮನೆಯಲ್ಲಿ ನಗುತ್ತಿದ್ದರು. ನೆಂಟರಿಷ್ಟರು ಬಂದಾಗೆಲ್ಲ ಅವರನ್ನು ನಾನು ಬ್ಯಾರಿ ಪಾಟ್ ಹಾಡಿ ರಂಜಿಸಬೇಕಾಗಿತ್ತು. ನನಗದೆಲ್ಲ ಇಷ್ಟವಿರಲಿಲ್ಲ. ಆದರೂ ಅತಿಯಾಗಿ ವತ್ತಾಯ ಮಾಡಿದ ಮೇಲೆ ಹಾಡಿ ಅತ್ತ ಓಡುತ್ತಿದ್ದೆ. ಇಬ್ರಾಯಿ ನನಗೆ ಇಷ್ಟವಾಗುತ್ತಿದ್ದದು ಅವನಲ್ಲಿರುತ್ತಿದ್ದ ವಿಷಯಗಳಿಗೊಸ್ಕರ. ಅವನು ಎಲ್ಲಿಂದಲೋ ಸಂಗ್ರಹಿಸಿಕೊಂಡು ಬರುತ್ತಿದ್ದ ಹಲವು ಮುಸ್ಲಿಂ ನಂಬಿಕೆಗಳ ಬಗ್ಗೆ, ಪರಲೋಕದ ವಿಷಯಗಳ ಬಗ್ಗೆ, ಜಿನ್ನಾತ್ಮರ ಬಗ್ಗೆ ಮತ್ತು ಮಹಾ ಫಕೀರರುಗಳ ಬಗ್ಗೆ ರಂಜಕವಾಗಿ ಹೇಳುವಾಗ ಕೇಳಲು ರೋಮಾಂಚನವಾಗುತ್ತಿತ್ತು.
ಇಬ್ರಾಯಿಯ ಚಿಕ್ಕಪ್ಪ “ಸುಲೈ” ಇಬ್ರಾಯಿಯದೇ ಒಂದು ದೊಡ್ಡ ನಮೂನೆ. ಅದೇನು ಕಾಕತಾಳೀಯವೋ ಏನೋ ನಮ್ಮ ಮನೆಗೆ ಸುಣ್ಣ ಬಳಿಯಲು ನನ್ನ ದೊಡ್ಡಪ್ಪ ಅವನನ್ನು ಕರೆದುಕೊಂಡು ಬಂದಿದ್ದರು. ಸುಲೈಮಾನನೂ ಒಬ್ಬ ಸುದ್ದಿ ಪೋಕ. ಕೆಲವು ಕಾಲ ದುಬೈನಲ್ಲಿ ಕೆಲಸ ಮಾಡಿ ಹಿಂತಿರುಗಿದ್ದ ಅವನು ಫಾರಿನ್ ಟೀ ಶರ್ಟುಗಳನ್ನೇ ಹಾಕುತಿದ್ದ. ಮತ್ತದರ ಬಗ್ಗೆ ಕತೆ ಹೇಳುತ್ತಿದ್ದ. ಅದನ್ನು ಎಲ್ಲಿ ಮತ್ತು ಹೇಗೆ ಕೊಂಡೆ ಅನ್ನುವ ಬಗ್ಗೆ ಅವನಲ್ಲಿ ಆಸಕ್ತಿಕರ ಕತೆಗಳಿರುತ್ತಿದ್ದವು. ದುಬೈ ಎಂಬ ಸ್ವರ್ಗದ ಸೋಜಿಗಗಳನ್ನು ಹೇಳುತ್ತಿದ್ದ ಸುಲೈಮಾನನ ನೆನಪೆಂದರೆ ಡಿಸ್ಟೆಂಪರಿನ ಪರಿಮಳ. ಡಿಸ್ಟೆಂಪರನ್ನು ಡಬ್ಬಿಯಿಂದ ಬಾಲ್ದಿಗೆ ಸುರಿದು ಅದನ್ನು ನೀರಿನೊಂದಿಗೆ ಹಿಚುಕುತ್ತಾ ಕಲಸುವ ಬಗೆ ಮತ್ತು ಅದಾಗ ಸುತ್ತ ಹರಡುವ ಸೌಮ್ಯ ಪರಿಮಳ ಇವೆಲ್ಲ ಇಬ್ರಾಯಿಯ ಜೊತೆಗೆ ತಳಕು ಹಾಕಿಕೊಂಡಿವೆ.
ಅಬೂಬಕರ್ ಎನ್ನುವ ದೊಡ್ಡ ಜೀವದ ದಪ್ಪ ಸ್ವರದ ಪೋರನ ಪೋಕರಗಳೆಲ್ಲ ಏಕನಾಥ ಮಾಸ್ತರ ನಾಗರಬೆತ್ತದಲ್ಲೇ ಪರ್ಯವಸಾನವಾಗುತ್ತಿದ್ದರೂ ಆ ಏಟುಗಳನ್ನು ಒಂದಿನಿತೂ ತನ್ನ ಮೈಗೆ ತಾಗಿಸಿಕೊಳ್ಳದಿರುವ ಚಾಕಚಕ್ಯತೆ ಅವನಿಗಿತ್ತು. ಏಕನಾಥ ಮಾಸ್ತರಿಗೆ ಅಬೂಬಕರನನ್ನು ಹೊಡೆಯಲು ಅಡ್ಡಿಯಾಗುತ್ತಿದ್ದ ಎರಡು ಪ್ರಬಲ ವಿಷಯಗಳೆಂದರೆ ಅಬೂಬಕರನ ದಡ್ಡುಗಟ್ಟಿದ ಚರ್ಮದ ದೊಡ್ಡ ಅಂಗೈಗಳು ಮತ್ತು ಅವನ ಲುಂಗಿ. ಅದೊಂದು ನೃತ್ಯಪ್ರಕಾರದ ಸನ್ನಿವೇಶ. ಅವನ ಮೈಯನ್ನು ಗುರಿಯಾಗಿರಿಸಿ ಬೆತ್ತ ಬೀಸಲು ಕೋನ ಹುಡುಕುವ ಮಾಸ್ತರು ಮತ್ತು ಜಿಗಿಯುತ್ತಾ ಆ ಏಟುಗಳನ್ನೆಲ್ಲ ತನ್ನ ದೊಡ್ಡ ಅಂಗೈ ಒಡ್ಡಿ ತಡೆಗಟ್ಟುವ ಅಬುಬಕರ್. ಕಾಲಿಗೆ ಗುರಿಯಿರಿಸಿದ ಏಟುಗಳೆಲ್ಲ ಲುಂಗಿಗೆ ತಗುಲಿ ಧಪ್ ಧಪ್ ಎನ್ನುವ ತಾಳವಾದ್ಯ. ಅವನು ಬೆತ್ತವನ್ನೇನಾದರೂ ಹಿಡಕೊಂಡಲ್ಲಿ ಬಿಡದಿರುತ್ತಿದ್ದರಿಂದ ಮಾಸ್ತರಿಗೆ ಬೆತ್ತವುಳಿಸುವ ಜವಾಬ್ದಾರಿಯೂ ಇರುತಿತ್ತು. ಅವನ ದಪ್ಪಸ್ವರದಲ್ಲಿ ಪಿಸುಗುಟ್ಟಿದರೂ ಪಕ್ಕದ ತರಗತಿಗೆ ಕೇಳಿಸುವಂತಿದ್ದುದರಿಂದ ಅವನು ಅದನ್ನು ತಗ್ಗಿಸಲು ಪ್ರಯತ್ನಿಸುತ್ತಿರಲಿಲ್ಲ. ಅಬುಬಕರನ ಮಾತಿನಲ್ಲೊಂದು ಹಾಸ್ಯವಿರುತ್ತಿತ್ತು. ತರಗತಿಯ ಲೀಡರು ಹೆಸರು ಬರೆಯುತ್ತೇನೆಂದು ಹೆದರಿಸಿದರೆ – ಹೆಸರು ಬರೆದರೆ ಸರದಾರ ವಲ್ಲಭಾಯಿ ಪಟೇಲ- ಎಂದು ಜೋಕು ಮಾಡುತ್ತಿದ್ದ. ಆಗಾಗ ಚಿಕ್ಕಪುಟ್ಟ ಗಲಾಟೆಗಳ ಸಂದರ್ಭದಲ್ಲಿ ಅಬೂಬಕರ ತನ್ನ ಬೃಹತ್ ದೇಹವನ್ನು ಅಡ್ಡವಾಗಿರಿಸಿ ನನ್ನನ್ನು ರಕ್ಷಿಸುತ್ತಿದ್ದ.
ಬಶೀರನಿಗೆ ಆ ರಜೆಯಲ್ಲಷ್ಟೇ ಸುನ್ನತವಾಗಿತ್ತು. ಅವನ ಇನ್ನೂ ಒಣಗದಿರುವ ನೋವಿನ ಅನುಭವದ ಮೂಲಕ ಸುನ್ನತಿನ ಬಗ್ಗೆ ನಮಗಿರುವ ವಿಚಿತ್ರ ಕಲ್ಪನೆಗಳನ್ನು ಬಶೀರ ಸಂತೈಸುತ್ತಿದ್ದ. ಅವನ ವಿವರಣೆಗಳಲ್ಲಿ ಸುನ್ನತಿನ ಬಳಿಕದ ನೋವನ್ನು ನಾನೇ ಅನುಭವಿಸಿದಂತಾಗುತ್ತಿತ್ತು. ಸುನ್ನತಿನ ಆಸುಪಾಸಿನಲ್ಲಿ ಮನೆಯಲ್ಲಿ ಅವನಿಗೆ ದೊರಕುವ ಆದರಾತಿಥ್ಯಗಳನ್ನೂ ಔತಣಗಳನ್ನೂ ವಿವರಿಸಿ ಆ ನೋವಿನ ಜೊತೆಗಿರುವ ಲಾಭಗಳನ್ನು ಅವನು ನಮಗೆ ಮನದಟ್ಟು ಮಾಡುತ್ತಿದ್ದ.
ಆ ಸುದ್ದಿಪೋಕ ಪೋರರ ನಡುವೆ ನಜೀರ್ ಎನ್ನುವ ಸಜ್ಜನ ಬುದ್ಧಿವಂತನಿದ್ದ. ಅವನಲ್ಲಿ ಸ್ವಾಧ್ಯಾಯವಿತ್ತು. ಇಂಗ್ಲಿಷಿನ ಸ್ಪೆಲ್ಲಿಂಗ್ಗಳನ್ನು ಉರುಹೊಡೆಯುತ್ತಿದ್ದ. ಅವನೂ ನಾನೂ ಜತೆಯಲ್ಲೇ ಊಟಕ್ಕೆ ಡಬ್ಬಿ ಬಿಚ್ಚುತ್ತಿದ್ದೆವು. ಅವನ ಡಬ್ಬಿಯಿಂದ ಬರುವ ಬಿರಿಯಾನಿಯ ಸುವಾಸನೆಗೆ ಬಾಯಿ ನೀರೂರುತ್ತಿತ್ತು. ರಮ್ಜಾನ್ ತಿಂಗಳ ಉಪವಾಸದ ಸಮಯದಲ್ಲಂತೂ ಅವನು ಉಗುಳನ್ನೂ ನುಂಗುತ್ತಿರಲಿಲ್ಲ. ಉಪವಾಸ ನಿರತ ಬ್ಯಾರಿ ಹುಡುಗರಿಗೆ ಆಗಾಗ ತರಗತಿಯಿಂದ ಹೊರಹೋಗಿ ಉಗುಳಲು ಅನುಮತಿಯಿತ್ತು. ಬೆಳಗ್ಗೆ ನಾಲ್ಕುಗಂಟೆಗೆಲ್ಲಾ ಎದ್ದು ಊಟಮಾಡುವ ಪದ್ಧತಿ ಮತ್ತಿತರ ರಮ್ಜಾನ್ ದಿನಚರಿಗಳನ್ನು ದೈವಿಕವಾಗಿ ನಜೀರ ನಮಗೆ ವಿವರಿಸುತ್ತಿದ್ದ. ಧರ್ಮನಿಷ್ಟ ಹುಡುಗನಾಗಿದ್ದ ನಜೀರ ಶಾಲೆಯ ಬಳಿಕ ಸಂಜೆ ಮದರಸಾದಲ್ಲಿ ಖುರ್ಆನ್ ಕಲಿಯಲೂ ಹೋಗುತ್ತಿದ್ದ.
ಬ್ಯಾರಿ ಸಮುದಾಯವನ್ನು ನನ್ನೊಳಗೆ ಕಟ್ಟಿಕೊಟ್ಟವರು ಈ ಇಬ್ರಾಯಿ, ಬಶೀರ, ಅಬೂಬಕರ ಮತ್ತು ನಜೀರನಂತಹ ಹಲವಾರು ಬ್ಯಾರಿ ಪೋರರು. ಆ ಸಮುದಾಯ ಆಕ್ರಾಮಕವೆಂದು ನನಗೆಂದೂ ಅನಿಸಿದ್ದಿಲ್ಲ. ಇಡೀ ವಿಶ್ವದ ಧರ್ಮಗಳ ನಡುವಿನ ಜಗಳವು ನಮ್ಮಂತಹ ಚಿಕ್ಕಪುಟ್ಟ ಸಮುದಾಯಗಳನ್ನು, ಪೇಟೆಗಳನ್ನು ಪ್ರಭಾವಿಸಿರುವ ಸನ್ನಿವೇಶದಲ್ಲಿ ಪುನಃ ಪಾಣೆಮಂಗಳೂರು ಮತ್ತು ನನ್ನ ಬ್ಯಾರಿ ಪೋರ ಮಿತ್ರರ ನೆನಪಾಗುತ್ತಿದೆ. ಸುಮ್ಮನೆ ನೈವ್ ಆದ ಬರಹವೊಂದನ್ನು ಬರೆದು ಬಿಸಾಡಬೇಕು ಅನಿಸುತ್ತಿದೆ.






ಸರ್, ನಿಮ್ಮ ಬರಹ ಸುಮಾರು ೨೦ ವರ್ಷಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ವಿಧ್ಯಾಭ್ಯಾಸ ಪಡೆದ ಎಲ್ಲರ ಬಾಲ್ಯ ಕಾಲವನ್ನು ಖಂಡಿತ ನೆನಪಿಸುವಂತೆ ಮಾಡುತ್ತದೆ. ಆದರೆ ಈಗ ನಮ್ಮ ದಕ್ಷಿಣ ಕನ್ನಡದಲ್ಲಿ ಬದಲಾದ ಪರಿಸ್ಥಿತಿಯಿಂದಾಗಿ ಒಂದು ಕೋಮಿನವರನ್ನು ಇನ್ನೊಂದು ಕೋಮಿನವರು ಸದೇಹದಿಂದ ನೋಡುವಂತೆ ಆಗಿದೆ.
ಸುಂದರ ಬರಹ. ನಾವಿರುವ ಕಾಲಘಟ್ಟದ ಅಗತ್ಯ ಈ ಸಾಮರಸ್ಯ
A WARM & PASSIONATE PORTRAYAL OF BYARI COMMUNITY, ROLLED BACK TO MY SCHOOLING DAYS.