ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಳುವಾರು ಬರೆದ ಬಿಳಿಮಲೆ ಆತ್ಮೀಯ ಕಥನ- ೧

‘ವಾರ್ತಾ ಭಾರತಿ’ ದೈನಿಕಕ್ಕೆ ಈಗ ಭರ್ತಿ 10 ವರ್ಷ. ಯು ಆರ್ ಆನಂತಮೂರ್ತಿ ಅವರು ಇತ್ತೀಚೆಗೆ ಮಂಗಳೂರಿನಲ್ಲಿ ದಶಮಾನೋತ್ಸವದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ವಾರ್ತಾ ಭಾರತಿಯ ಈ ವಿಶೇಷಾಂಕ ನಮ್ಮ ಕಾಲಕ್ಕೆ ಹಿಡಿದ ಕನ್ನಡಿ. ಆ ವಿಶೇಷಾಂಕದ ಮುಖ್ಯವಾದ ಲೇಖನಗಳು ಅವಧಿಯಲ್ಲಿ ಪ್ರಕಟವಾಗಲಿವೆ.

ಮೊದಲನೆಯದಾಗಿ ಕನ್ನಡದ ಖ್ಯಾತ ಬರಹಗಾರ ಬೊಳುವಾರು ಅವರು ತಮ್ಮ ಜೀವದ ಗೆಳೆಯ ಪುರುಷೋತ್ತಮ ಬಿಳಿಮಲೆ ಬಗ್ಗೆ ಬರೆದ ಆತ್ಮೀಯ, ಮನ ಕಲಕುವ ಬರಹ ಇಲ್ಲಿದೆ

ರೋಗಿಯ ಆತ್ಮಕತೆ

-ಬೊಳುವಾರು

ಕೃಪೆ : ವಾರ್ತಾ ಭಾರತಿ

ಟೈಪ್-೧ ಅವನಿಗೆ ನಂಬಿಕೆಯೇ ಆಗಿದ್ದಿರಲಿಲ್ಲ! ಅದುವರೆಗೆ ಶೋಭನಾ ಯಾವುದಕ್ಕೂ ಕಾಡಿಸಿದವಳಲ್ಲ. ಪೀಡಿಸಿದವಳಲ್ಲ. ಮದುವೆಯಾಗಿ ಜೊತೆಯಲ್ಲಿ ಕಳೆದ ೨೫ ವರ್ಷಗಳಲ್ಲಿ ಹೊಸದೊಂದು ಸೀರೆ ತಂದು ಕೊಡು ಎಂದು ಬೇಡಿಕೆಯಿಟ್ಟವಳಲ್ಲ. ಬಂಗಾರದ ನೆಕ್ಲೆಸ್ ಬೇಕು ಎಂದು ತಮಾಷೆಗಾದರೂ ಹೇಳಿದವಳಲ್ಲ. ನಾಟಕ, ಯಕ್ಷಗಾನ, ಸೆಮಿನಾರುಗಳೆಂದು ಊರೂರು ಅಲೆಯುತ್ತಾ ನಡು ರಾತ್ರಿಯಲ್ಲಿ ಬಂದು ಬಾಗಿಲು ಬಡಿದಾಗಲೂ ಮುಖ ಸಿಂಡರಿಸಿಕೊಂಳವಳಲ್ಲ. ಅಂಥವಳಿಗೆ ಈಗ ಏನಾಯಿತು? ಯಾರ ಚಿತಾವಣೆಯಿಂದ ಹೀಗೆ ಮಾಡುತ್ತಿದ್ದಾಳೆ!? ಯಾವುದಕ್ಕೂ ಹಟ ಹಿಡಿಯದ ಇವಳು ಈಗೇಕೆ, ಹೀಗೇಕೆ ಹಿಂಸಿಸಿ ಕೊಲ್ಲುತ್ತಿದ್ದಾಳೆ!!? ಅವನು ಹುಚ್ಚನಂತಾಗಿದ್ದ. ಅವನನ್ನು ತಯಾರು ಮಾಡಿದ ದೇವರು ಸ್ರ್ತೀ ಪುರುಷೋತ್ತಮರಿಗೆಲ್ಲ ಜೋಡಿಸುವಂತೆ ಎಲ್ಲ ಅಂಗಾಂಗಗಳನ್ನೂ ಸರಿಯಾಗಿಯೇ ಅಂಟಿಸಿ, ಚೆನ್ನಾಗಿ ಜೀವಿಸು ಎಂದು ಹೇಳಿಯೇ, ಹಿಂದೂಸ್ತಾನದ ಪಶ್ಚಿಮ ಘಟ್ಟದ ತಪ್ಪಲಿನ ಕರಿಮಲೆಯ ಬುಡದಲ್ಲಿನ ಬಿಳಿಮಲೆ ಎಂಬ ಆರೇಳು ಮನೆಗಳ ಊರಿಗೆ ಟಿಕೇಟು ಕೊಟ್ಟು ಕಳಿಸಿದ್ದ. ಆದರೆ ಜೀವನವೆಂದರೆ ಏನೆಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಬದುಕಿನ ಬಹುಭಾಗವನ್ನು ಸಾಹಿತಿಗಳ, ಬುದ್ಧಿ ಜೀವಿಗಳ ನಡುವೆಯೇ ಕಳೆದುಕೊಂಡುಬಿಟ್ಟಿದ್ದ. ಎಂಬತ್ತರ ದಶಕದ ಆರಂಭದ ದಿನಗಳಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದಾಗಲೇ ನಾಲ್ಕೂ ದಿಕ್ಕಿನಲ್ಲಿ ಕಾಣಿಸುತ್ತಿದ್ದ ಹಚ್ಚ ಹಸಿರಿನ ನಡುವೆ ಕೆಂಪು ಕಾಣುವ ಬಯಕೆ ಅವನೊಳಗಿತ್ತು. ಕೆಲವು ಸಮಾನ ಮನಸ್ಕ ಗೆಳೆಯರನ್ನು (ಐ. ಕೆ. ಬೊಳುವಾರು, ಮೋಹನ ಸೋನ, ಸುದೇಶ ಮಹಾನ, ಹಿಮಕರ, ಎಂ.ಜಿ. ಕಜೆ ಮೊದಲಾದವರು) ಜೊತೆಗೇರಿಸಿಕೊಂಡು ಬಗೆ ಬಗೆಯ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸಂಘಟನೆಗಳನ್ನು ಕಟ್ಟಿಕೊಂಡು ಅಲೆಯುತ್ತಿದ್ದ. ಅಭಿನಯ ನಾಟಕ ತಂಡ, ಸ್ವಂತಿಕಾ ಪ್ರಕಾಶನಗಳನ್ನು ಹುಟ್ಟುಹಾಕಿದ್ದ. ಬಂಡಾಯ ಸಾಹಿತ್ಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಆಗಷ್ಟೇ ಜನಪ್ರಿಯವಾಗುತ್ತಿದ್ದ ದಲಿತ ಚಳುವಳಿಯೂ ಅವನಿಗೆ ಆಪ್ತವಾಗಿತ್ತು. ಲಿಂಗ ಬೇಧ, ಜಾತಿಯ ಅಸಮಾನತೆ, ಅಲ್ಪ ಸಂಖ್ಯಾಕರ ಶೋಷಣೆ, ಸಾಮಾಜಿಕ ಅಸಮಾನತೆಗಳ ವಿರುದ್ಧ ಸಂಘಟಿತ ಹೋರಾಟಗಳು ಅಂದಿನ ಅವನ ಅಗತ್ಯಗಳು. ಸಾಮಾಜಿಕ ಬದಲಾವಣೆಗೆ ಅವನೊಬ್ಬ ಕಾರಣಕರ್ತನಾಗದಿದ್ದರೆ ಚರಿತ್ರೆ ಅವನನ್ನು ಕ್ಷಮಿಸಲಾರದು ಎಂದು ಗಟ್ಟಿಯಾಗಿ ನಂಬಿಕೊಂಡಿದ್ದ. ನಾಳೆ ಬೆಳಗ್ಗೆ ಹನ್ನೊಂದುವರೆಯೊಳಗೆ ಕ್ರಾಂತಿಯಾಗುತ್ತದೆ ಎಂದು ಪ್ರಾಮಾಣಿಕವಾಗಿ ನಂಬಿದ್ದ. ಈ ನಂಬಿಕೆಗಳಿಗೆ ಪೂರಕವಾದ ಓದು ಅವನ ಅಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿತ್ತು. ಆಗಷ್ಟೇ ದಲಿತ ಕವಿ ಸಿದ್ಧಲಿಂಗಯ್ಯನವರ ಹೊಲೆಮಾದಿಗರ ಹಾಡು ಅವನಿಗೆ ಮತ್ತು ಅವನಂತಹ ಹಲವರಿಗೆ ಹುಚ್ಚು ಹಿಡಿಸಿತ್ತು. ಸುಳ್ಯದವರೇ ಆದ ಕುಳುಕುಂದ ಶಿವರಾಯ ಅಥವಾ ನಿರಂಜನರ ಕೆಯ್ಯೂರು ಕ್ರಾಂತಿಯ ಚಿರಸ್ಮರಣೆ ಅವನಲ್ಲಿ ಕ್ರಾಂತಿಯ ಕನಸನ್ನು ಬಿತ್ತಿತ್ತು. ಇವುಗಳ ಜೊತೆಗೆ ಪಾಬ್ಲೋ ನೆರುದಾನ ನೋಡಿ ರಕ್ತವಿದೆ ಬೀದಿಯ ಮೇಲೆ, ಬೀದಿಯ ಮೇಲೆ ರಕ್ತವಿದೆ ಸಾಲು, ಅದಾಗಲೇ ಗಾರ್ಕಿಯ ಮದರ್ ಕಾದಂಬರಿಯ ಸಾಲುಗಳಿಂದ ತುಂಬಿದ್ದ ಅವನ ದಿನಚರಿಯ ಪುಟಗಳ ನಡುವೆ ಸೇರಿಕೊಂದಿತ್ತು. ಚಿಲಿಯ ಕ್ರಾಂತಿಕಾರಿ ಹೋರಾಟಗಾರ ಚೆಗವಾರ ಬರೆದ ಪ್ರೇಮ ಪತ್ರದ ಸಾಲುಗಳನ್ನು ಬಾಯಿಪಾಠ ಮಾಡಿಕೊಂಡಿದ್ದ. ಅಮೇರಿಕಾದ ಸೈನಿಕರು ಚೆ ಗವಾರನನ್ನು ಗುಂಡಿಕ್ಕಿ ಸಾಯಿಸಿ, ಆತನ ದೇಹವನ್ನು ತಪಾಸಣೆ ಮಾಡಿದಾಗ ಅವರಿಗೆ ಸಿಕ್ಕಿದ್ದು ನೆರೂದಾನ ಕಾವ್ಯ ಮತ್ತು ಒಂದು ಮದ್ದು ಗುಂಡು ಎಂಬುದನ್ನು ಓದಿಕೊಂಡು ಪುಳಕಿತನಾಗಿದ್ದ. ಟಾಲ್ಸಟಾಯ್ ಕಾದಂಬರಿಗಳು, ಬೋದಿಲೇರನ ಪಾಪದ ಹೂಗಳು, ಶಿವರಾಮ ಕಾರಂತರ ಚೋಮನ ದುಡಿ, ಬೊಳುವಾರರ ಕತೆಗಳು, ಲಂಕೇಶ್ ಪತ್ರಿಕೆ, ಶೂದ್ರ, ಸಂಕ್ರಮಣ, ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಸಂಗಾತಿಗಳೊಂದಿಗೆ ಚರ್ಚೆ ನಡೆಸುತ್ತಿದ್ದ. ಅವನು ಮತ್ತು ಅವನ ಸಂಗಾತಿಗಳು ಬಹಳ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದುದರಿಂದ ಬಹಳ ಜನ ಚಿಂತಕರು, ಬುದ್ಧಿಜೀವಿಗಳು ತಾವಾಗಿಯೇ ಸುಳ್ಯದ ಕಡೆ ಬಂದು ಅವರನ್ನು ಮಾತಾಡಿಸುತ್ತಿದ್ದರು. ಮಂಗಳೂರಿನಿಂದ ರಾಮಚಂದ್ರ ರಾವ್, ಕಾಸರಗೋಡು ಕಡೆಯಿಂದ ಬಿ. ವಿ. ಕಕ್ಕಿಲ್ಲಾಯ ಮತ್ತಿತರರು ಸುಳ್ಯದಲ್ಲಿ ಕಾಣಿಸಿಕೊಂಡರು. ಈ ಸಂಗಾತಿಗಳು ವಾರಾಂತ್ಯಗಳಲ್ಲಿ ಮನೆ ಮನೆಗಳಲ್ಲಿ ನಡೆಸುತ್ತಿದ್ದ ಅಧ್ಯಯನ ವೇದಿಕೆಗಳಲ್ಲಿ ಕಾರ್ಲ ಮಾರ್ಕ್ಸ, ಎಂಗೆಲ್ಸ್, ಲೆನಿನ್, ಸಾಮ್ರಾಜ್ಯಶಾಹಿ, ಬಂಡವಾಳಶಾಹಿ, ದ್ವಂದ್ವ ಮಾನ ಭೌತಿಕವಾದ, ಬಡತನ, ಬಿಡುಗಡೆ, ವಿಮೋಚನೆ, ಹೋರಾಟ, ರಷ್ಯಾ ಕ್ರಾಂತಿ ಮತ್ತಿತರ ವಿಷಯಗಳೆಲ್ಲ ಸದ್ದು ಮಾಡತೊಡಗಿದ್ದವು. ಸಿದ್ಧಲಿಂಗಯ್ಯ, ಕೋವೂರ್, ಶೂದ್ರ ಪತ್ರಿಕೆ, ಸಮುದಾಯ ಜಾಥಾ, ಚಂಪಾ, ಬರಗೂರು, ಅತ್ರಿ ಅಶೋಕವರ್ಧನ ಮೊದಲಾದವರ ಪ್ರೇರಣೆಯಿಂದ ಹೊಸ ಯೋಚನೆಗಳು, ಯೋಜನೆಗಳು ರೂಪುಗೊಳ್ಳುತ್ತಿದ್ದುವು. ದೇವಮಾನವರ ವಿರುದ್ಧ ಹೋರಾಟ, ಜಾತಕಕ್ಕೆ ಬೆಂಕಿ, ಸಾಮಾಜಿಕ ಬದಲಾವಣೆಗಾಗಿ ಬೀದಿ ನಾಟಕ, ಕುವೆಂಪು ಪ್ರೇರಣೆಯಿಂದ ಶೂದ್ರತ್ವದ ಬಗೆಗೆ ಹೊಸ ತಿಳುವಳಿಕೆ, ಜಾತಿವಿನಾಶ ಚಳುವಳಿ- ಹೀಗೆ ಗೆಳೆಯರ ಚಟುವಟಿಕೆಗಳಿಗೆ ಹಲವು ಮುಖಗಳಿದ್ದುವು. ವಿದ್ಯಾರ್ಥಿಗಳ ಒಂದು ಗುಂಪು ಈ ಗುಂಪಿನ ಜೊತೆಗೆ ಕ್ರಾಂತಿ ಗೀತೆ ಹಾಡುತ್ತಿತ್ತು. ಕ್ರಾಂತಿಗೆ ಕಡಿದ ಸೊಳ್ಳೆ: ಕ್ರಾಂತಿಕಾರಿಗಳಿಗೆ ಸೊಳ್ಳೆ ಕಚ್ಚಬಾರದೆಂದೇನೂ ಇಲ್ಲವಲ್ಲ. ೧೯೮೨ರ ಜುಲಾಯಿ ತಿಂಗಳಿನ ಮಳೆಗಾಲದ ಒಂದು ಸಂಜೆ ಈ ಕ್ರಾಂತಿಕಾರಿಯ ಮೊಣಕಾಲ ಕೆಳಗೆ ಸೊಳ್ಳೆಯೊಂದು ಕಚ್ಚಿಬಿಟ್ಟಿತ್ತು. ಎಲ್ಲರ ಹಾಗೆ ಇವನೂ ಸೊಳ್ಳೆ ಕಡಿದ ಜಾಗವನ್ನು ಸಹಜವಾಗಿ ಕೆರೆದುಕೊಂಡ. ಚರ್ಮ ಎದ್ದು ಬಂತು, ಉರಿ ಶಮನವಾಯಿತು. ಮರುದಿನ ಕೆರೆದುಕೊಂಡ ಜಾಗ ಕೆಂಪಾಗಿತ್ತು. ಒಂದೆರಡು ದಿನಗಳಲ್ಲಿ ಅದು ಎಂದಿನಂತೆ ಒಣಗದೆ, ಆ ಜಾಗದಲ್ಲಿ ಪಾವಲಿಯಷ್ಟು ಅಗಲವಾದ ಸ್ಥಳ ಕಲ್ಲಿನಂತೆ ಗಟ್ಟಿಗೊಂಡು, ಅಸಾಧ್ಯ ನೋವು ಕಾಣಿಸಿಕೊಂಡಿತು. ನೋವುನಿವಾರಕ ಮಾತ್ರೆಗಳಿಂದ ಪ್ರಯೋಜನವಾಗಲಿಲ್ಲ. ಯಾವುದೋ ಗೆಳೆಯನ ಸಲಹೆಯಂತೆ ಮಂಗಳೂರಿಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡ. ಸಕ್ಕರೆಯ ಮಟ್ಟ ೨೫೬ಕ್ಕೆ ತಲುಪಿತ್ತು. ಹಂಪನಕಟ್ಟೆಯ ಡಾಕ್ಟರ್ ವರ್ಗೀಸ್ ವರದಿ ಹೇಳಿದ್ದರು, ಆರೋಗ್ಯವಂತ ದೇಹದಲ್ಲಿ ಸಕ್ಕರೆಯ ಮಟ್ಟ ೭೦-೧೨೦ ಇರಬೇಕು. ನಿಮ್ಮದು ಇಮ್ಮಡಿ ಆಗಿದೆ, ದುರ್ದೈವದಿಂದ ನಿಮಗೆ ಸಣ್ಣ ವಯಸ್ಸಿಗೆ ಮಧುಮೇಹ ಬಂದಿದೆ. ತುಂಬಾ ಜಾಗೃತೆಯಾಗಿರಿ. ಹಾಗೆ ಹೇಳಿದವರು ಯೂಗ್ಲೋಕೋನ್ ಎಂಬ ಮಾತ್ರೆ ಸೇವಿಸಲು ಹೇಳಿದರು. ಅವನು ತಣ್ಣನೆ ಯಾವುದೋ ಬಸ್ ಹಿಡಿದು ಮರುದಿನದ ಕ್ರಾಂತಿಕಾರೀ ಚಟುವಟಿಕೆಗಳ ಬಗ್ಗೆ ಯೋಚಿಸುತ್ತಾ ಮಧ್ಯರಾತ್ರಿ ಸುಳ್ಯಕ್ಕೆ ಹಿಂದಿರುಗಿ, ಹಳೆಯ ಚಾಪೆಯಲ್ಲಿ ಒರಗಿಕೊಂಡು ನಿದ್ದೆಯಿಲ್ಲದ ರಾತ್ರಿ ಕಳೆದ. ಈ ನಡುವೆ ಕಾಲಿನ ಹುಣ್ಣು ಗುಣವಾದರೂ, ಗಡ್ಡ ತೆಗೆಯುವಾಗ ಗಲ್ಲದಲ್ಲಾದ ಸಣ್ಣದೊಂದು ಗಾಯವು ತಿಂಗಳಾನುಗಟ್ಟಲೆ ಗುಣವಾಗದೆ ಹಿಂಸೆ ನೀಡಿತ್ತು. ಅಗಿನ್ನೂ ಮದುವೆಯಾಗಿರಲಿಲ್ಲ. ಹುಡುಗಿಯರಿಗೆ ಗಲ್ಲದ ವಿನ್ಯಾಸ ಗೊತ್ತಾಗಬಾರದೆಂದು ಗಡ್ಡಬೆಳೆಸಿದ. ಆತನ ಕುರುಚಲು ಕೂದಲು ಮತ್ತು ಕರ್ರಗಿನ ಗಡ್ಡ ಆ ಕಾಲದ ಅವನ ಕ್ರಾಂತಿಕಾರೀ ಚಟುವಟಿಕೆಗಳಿಗೆ ಪೂರಕವೆ ಆಗಿ ಹೋಯಿತು. ಒಂದು ದಿನ ಸಿಕ್ಕಾಗ ನನ್ನಲ್ಲಿ ಅವಹಾಲು ತೋಡಿಕೊಂಡಿದ್ದ. ನಾನು ಡಯಾಬೆಟಿಕ್ ಅಂತ ಗೊತ್ತಾದಾಗ ನನಗೆ ೨೭ ವರ್ಷ. ಅಂದರೆ ಅದಕ್ಕೂ ನಾಲ್ಕಾರು ವರ್ಷಗಳ ಮೊದಲೇ ನಾನು ಡಯಾಬೆಟಿಕ್ ಆಗಿದ್ದಿರಬೇಕು. ನಿಜ ಯಾರಿಗೆ ಗೊತ್ತು? ನಾನು ಕುಡುಕನಲ್ಲ. ಸಿಗರೇಟು ಸೇದುತ್ತಿರಲಿಲ್ಲ, ಹೇಳುವಂತಹ ಕೆಟ್ಟ ಚಟಗಳು ಯಾವುದೂ ಇರಲಿಲ್ಲ, ಆದರೂ ಈ ಮಹಾಮಾರಿ ನನ್ನನ್ನೇ ಯಾಕೆ ಆರಿಸಿಕೊಂಡಿತು? ಹಾಗೆಂದು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವಿಶೇಷ ಪ್ರಯತ್ನವನ್ನೇನೂ ಅವನು ಮಾಡಲಿಲ್ಲ. ಬದುಕನ್ನು ಅದು ಬಂದ ಹಾಗೆಯೇ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಿದ್ದುರಿಂದ ಅವನು ಕಂಗೆಡಲಿಲ್ಲ. ಅವನ ಎಲ್ಲಾ ಕ್ರಾಂತಿಕಾರೀ ಚಟುವಟಿಗೆಗಳೂ ಹಾಗೆಯೇ ಮುಂದುವರಿದವು. ಗೆಳೆಯರ ಜೊತೆಗೆ ಖಾಯಿಲೆಯನ್ನೂ ಮುಚ್ಚಿಡಲಿಲ್ಲ. ಸಕ್ಕರೆಯ ನೇರ ಸೇವನೆಗೆ ತಿಲಾಂಜಲಿ ಕೊಟ್ಟ. ಆದರೆ, ಡಯಾಬೆಟಿಸ್‌ನ್ನು ನಿಯಂತ್ರಿಸಲು ಬೇಕಾದ ಅಗತ್ಯ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವಲ್ಲಿ ಬಹುತೇಕ ವಿಫಲನಾಗಿದ್ದ.ಅನ್ನ ಬಿಡಲಾಗಲಿಲ್ಲ. ಮಧುಮೇಹದ ದೂರಗಾಮೀ ಪರಿಣಾಮಗಳನ್ನು ಊಹಿಸಲಿಲ್ಲ. ಸುಳ್ಯದಿಂದ ಮಂಗಳೂರುವರೆಗೆ ಹೋಗಿ ನಿಯತವಾಗಿ ಪರೀಕ್ಷೆಮಾಡಿಸಿಕೊಳ್ಳಲು ಬೇಕಾದ ಆರ್ಥಿಕ ಶಕ್ತಿಯೂಅವನಿಗಿರಲಿಲ್ಲ. ಮುಂದೊಮ್ಮೆ ಪುತ್ತೂರು ಬಸ್ ನಿಲ್ದಾಣದಲ್ಲಿ ಸಿಕ್ಕಾಗ ನಗುತ್ತಲೇ ಹೇಳಿದ್ದ, ನನ್ನದೇನು ಮಹಾ? ಅನೇಕ ಕ್ರಾಂತಿಕಾರಿಗಳು ಸಣ್ಣ ದೊಡ್ಡ ಖಾಯಿಲೆಗಳಿಂದ ನರಳುತ್ತಿರಲಿಲ್ಲವಾ? ಈ ಖಾಯಿಲೆ ಸಾಮಾಜಿಕ ಬದಲಾವಣೆಗೆ ನಾನು ನಡೆಸುವ ಕೆಲಸಗಳಿಗೆ ಪೂರಕವಾಗಿದೆ. ಏನು ಹೇಳ್ತಿ? ನಾನೇನೂ ಹೇಳಿದ್ದಿರಲಿಲ್ಲ. ಆದರೆ ನಕ್ಕಿರಲಿಲ್ಲವೆಂದು ನೆನಪು. ಈ ನಡುವೆ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪಿ.ಎಚ್.ಡಿ ಪದವಿಗಾಗಿ ಡಾ. ವಿವೇಕ ರೈ ಅವರ ಮಾರ್ಗ ದರ್ಶನದಲ್ಲಿ ಹೆಸರು ನೋಂದಣೆ ಮಾಡಿಸಿಕೊಂಡ. ಇದಕ್ಕಾಗಿ ಸುಳ್ಯ ತಾಲೂಕಿನ ಎಲ್ಲ ೪೨ ಗ್ರಾಮಗಳನ್ನು ಹಗಲೂ ರಾತ್ರಿ ಸುತ್ತಿದ. ವಿಷಯ ಸಂಗ್ರಹ ಮಾಡಿದ. ಈ ಹಂತದಲ್ಲಿ ಆಹಾರ, ನಿದ್ರೆ, ಇತ್ಯಾದಿಗಳ ಬಗ್ಗೆ ಗಮನವನ್ನೇ ಹರಿಸಲಿಲ್ಲ. ಮುಂದೆ ಪಿ.ಎಚ್.ಡಿ ಪದವಿಯೇನೋ ದೊರೆತಿತು. ಆದರೆ ಅಷ್ಟರಲ್ಲೇ ಮಧುಮೇಹ ಅವನನ್ನುಸದ್ದಿಲ್ಲದೆ ಕೊಲ್ಲಲು ಆರಂಭಿಸಿತ್ತು. ಮುಂದೆ ಅವನು ಮಂಗಳೂರು ವಿಶ್ವವಿದ್ಯಾಲಯ ಸೇರಿದ. ಅಲ್ಲಿ ಪಾಠ ಮಾಡುವುದರ ಜೊತೆಗೆ, ಬಂಡಾಯ ಚಳುವಳಿಯ ಜಿಲ್ಲಾ ಸಂಚಾಲಕನಾಗಿ ಕೆಲಸ ಮಾಡಿದ. ದಲಿತ ಚಳುವಳಿಯಲ್ಲಿ ತೊಡಗಿಸಿಕೊಂಡ. ನಡುವೆ ಯಕ್ಷಗಾನದ ಹುಚ್ಚು ಕೂಡಾ ಅಂಟಿಕೊಂಡಿತು. ಇವೆಲ್ಲದರ ಜೊತೆಗೆ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕವಾಗಿ ಬೆಳೆಯಲೇಬೇಕಾಗಿತ್ತಾದ್ದರಿಂದ, ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳನ್ನೂ ಮುಂದುವರಿಸಿಕೊಂಡು ಬಂದ. ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ. ಮುಂದೆ ಅವನಿಗೆ ಬಹಳ ಖ್ಯಾತಿ ತಂದು ಕೊಟ್ಟ ಕರಾವಳಿ ಜಾನಪದ ಕೃತಿಯೂ ಪ್ರಕಟವಾಯಿತು. ಈ ಎಲ್ಲಾ ಕೆಲಸಗಳು ಅವನಿಗೆ ಸಾಕಷ್ಟು ಪ್ರಸಿದ್ಧಿಯ ಸಿಹಿಯನ್ನೂ, ದೇಹದ ತುಂಬೆಲ್ಲ ಸಕ್ಕರೆಯ ಕಹಿಯನ್ನೂ ತಂದಿದ್ದವು. ಇಂಥ ಸ್ಥಿತಿಯಲ್ಲೇ ಅವನು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕನಾಗಿ ಆಹ್ವಾನದ ಮೇಲೆ ಸೇರಿಕೊಂಡ. ಆಗ ಕಂಬಾರರು ಹಂಪಿಗೆ ಕುಲಪತಿಗಳು. ಎಳೆಯ ವಯಸ್ಸಿನಲ್ಲಿ ಪ್ರಾಧ್ಯಾಪಕ ಹುದ್ದೆ ನೀಡಿದ ಕಂಬಾರರ ಋಣ ತೀರಿಸಲು ಇವನು ಅಗತ್ಯಕ್ಕಿಂತ ಹೆಚ್ಚು ದುಡಿದ. ಒಂದೆಡೆ ಕಟ್ಟಡದ ಕೆಲಸಗಳು, ಇನ್ನೊಂದೆಡೆ ಶೈಕ್ಷಣಿಕ ಕೆಲಸಗಳು, ಹೀಗೆ ದುಡಿಯುವಾಗ ಮಧುಮೇಹದ ಕುರಿತು ಚಿಂತಿಸಲು ಸಮಯವೇ ದೊರಕಲಿಲ್ಲ. ಆದರೆ ವಿಶ್ವವಿದ್ಯಾಲಯ ಮೇಲೆ ಬರುತ್ತಿದ್ದಂತೆ ಕಂಬಾರರೂ ಸೇರಿದಂತೆ ಹಲವರಿಗೆ, ಇವನನ್ನೂ ಒಳಗೊಂಡಂತೆ ಇನ್ನೂ ಕೆಲವರು ಬೇಡವಾದರು. ಕಂಬಾರ ಮತ್ತು ಅವರೊಡನೆ ಇದ್ದ ಕೆಲವರಿಗೆ ಬೇಕಾದದ್ದು ಇವನಲ್ಲಿರಲಿಲ್ಲ. ಇವನಲ್ಲಿದ್ದದ್ದು ಅವರಿಗೆ ಬೇಕಾಗಿರಲಿಲ್ಲ. ಪ್ರಕಾಶ್ ಕಂಬತ್ತಳ್ಳಿಯವರನ್ನು ಹೊರಗೆ ಅಟ್ಟಲಾಯಿತು. ಚಿ. ಶ್ರಿನಿವಾಸ ರಾಜು, ಎಚ್.ಎಸ್. ರಾಘವೇಂದ್ರ ರಾವ್, ಓ.ಏಲ್. ನಾಗಭೂಷಣ ಸ್ವಾಮಿ ಹೀಗೆ ಹಲವರು ಒಬ್ಬೊಬ್ಬರಾಗಿ ತಮ್ಮ ತಮ್ಮ ಮಾತೃ ಸಂಸ್ಥೆಗೆ ಹಿಂದಿರುಗಿದರು. ಆದರೆ ಇವನಿಗೆ ಬೇರೆ ಗತಿ ಇಲ್ಲ. ನಿಧಾನವಾಗಿ ಇರುವಲ್ಲಿಯೇ ಒಂಟಿಯಾಗತೊಡಗಿದ. ೧೯೯೭ರ ನವಂಬರದ ಹೊತ್ತಿಗೆ ಇವನ ಜೊತೆಗಿದ್ದದ್ದು ಹಂಪಿಯ ಸುಮಾರು ೬೦೦ ವರ್ಷಗಳ ಇತಿಹಾಸವಿರುವ ವಿರೂಪಾಕ್ಷ ಮತ್ತು ೪೭೫ರ ಇತಿಹಾಸ ನಿರ್ಮಿಸಿದ್ದಇವನ ಸಕ್ಕರೆಯ ಮಟ್ಟ ಮಾತ್ರ. ಕು.ಶಿ.ಕೊಟ್ಟ ಅಮೇರಿಕಾದ ಇನ್ಸುಲಿನ್ ಆ ಸಂದರ್ಭದಲ್ಲಿ ಒಂದು ದಿನ ಉಡುಪಿಯಿಂದ ಕು.ಶಿ. ಹರಿದಾಸ ಭಟ್ಟರು ಇವನು ಕೆಲಸ ಮಾಡುತ್ತಿದ್ದ ಹಂಪಿಯ ಜಾನಪದ ವಿಭಾಗಕ್ಕೆ ನಗು ನಗುತ್ತಾ ಬಂದಿದ್ದಾಗ ಇವನು ಅಳು ಅಳುತ್ತಲೇ ತನ್ನ ಕತೆ ಹೇಳಿದ. ಒಂದು ವಾರದಲ್ಲಿ ಅವರು ಉಡುಪಿಯಿಂದ ಫೋನ್ ಮಾಡಿ ದೆಹಲಿಯಲ್ಲಿ ಕೆಲಸ ಮಾಡಲು ತಯಾರಿದ್ದೀಯಾ ಅಂತ ಕೇಳಿದರು. ಬಗೆ ಬಗೆಯ ಹಿಂಸೆಗೆ ಒಳಗಾಗಿ ಜರ್ಝರಿತನಾಗಿದ್ದ ಅವನುಹೂಂ ಎಂದ. ೧೯೯೮ರ ದಶಂಬರದಲ್ಲಿ ಇವನು ಹಂಪಿ ಬಿಟ್ಟು ದೆಹಲಿ ಸೇರಿದ. ದೆಹಲಿ ಇವನ ಆಯ್ಕೆಯಾಗಿರಲಿಲ್ಲ, ಆದರೆ ಇವನಿಗೆ ಬೇರೆ ಆಯ್ಕೆಗಳಿರಲಿಲ್ಲ. ಇವನು ದೆಹಲಿಯಲ್ಲಿ ಕೆಲಸಕ್ಕೆ ಸೇರಿದ ಸಂಸ್ಥೆಯ ಹೆಸರು – ಭಾರತೀಯ ಅಧ್ಯಯನಗಳ ಅಮೇರಿಕಾ ಸಂಸ್ಥೆ. ಅಮೇರಿಕಾದ ೬೦ ವಿಶ್ವವಿದ್ಯಾಯಗಳು ಒಟ್ಟು ಸೇರಿ ಸುರು ಮಾಡಿದ ಈ ಸಂಸ್ಥೆಯು ೧೯೪೫ರಿಂದಲೂ ಭಾರತದಲ್ಲಿ ಕೆಲಸ ಮಾಡುತ್ತಿತ್ತು. ವಿದೇಶೀಯರಿಗೆ ಭಾರತೀಯ ಭಾಷೆಗಳನ್ನು ಹೇಳಿಕೊಡುವುದು, ಭಾರತೀಯ ಅಧ್ಯಯನಗಳಿಗೆ ಶಿಷ್ಯ ವೇತನ ನೀಡುವುದು, ಎರಡು ಉನ್ನತ ಸಂಶೋಧನಾ ಕೇಂದ್ರಗಳನ್ನು ನಡೆಸುವುದು ಮತ್ತು ಸಂಶೋಧನಾ ಕೃತಿಗಳ ಪ್ರಕಟಣೆ – ಈ ಸಂಸ್ಥೆಯ ಮುಖ್ಯ ಕೆಲಸಗಳು. ಇಲ್ಲಿ ಆತ ಉಪನಿರ್ದೇಶಕನಾಗಿ ೧೯೯೮ರ ಜನವರಿ ತಿಂಗಳಲ್ಲಿ ಸೇರಿಕೊಂಡಿದ್ದ. ದೆಹಲಿಯಲ್ಲಿ ಸಿಕ್ಕಾಗಲೊಮ್ಮೆ ಬಹಳ ದೊಡ್ಡ ಪಾಪ ಮಾಡಿದವನಂತೆ ನಾಚಿಕೆಯಿಂದಲೇ ಹೇಳಿದ್ದ, ಅಲ್ಲಿ ಜೋಯ್ನಿಂಗ್ ರಿಪೋರ್ಟ್ ಬರೆಯುತ್ತಿದ್ದಾಗ ನನಗೆ ನೆನಪಾಗಿದ್ದದ್ದು ಅಮೆರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಅಲ್ಲ, ಮಂಡ್ಯದ ಸಕ್ಕರೆ ಕಾರ್ಖಾನೆಗಳೂ ಅಲ್ಲ; ಅದೇ ಅಮೇರಿಕಾದ ಯಾವುದೋ ವಿಶ್ವವಿದ್ಯಾಲದಲ್ಲಿದ್ದ ಕಾಮ್ರೇಡ್ ಎಂ.ಕೆ. ಭಟ್ಟರು, ಹಿಂದೂಸ್ತಾನದಲ್ಲಿ ಕ್ರಾಂತಿ ಮಾಡಲೆಂದು ಸುಳ್ಯಕ್ಕೆ ಬಂದಿದ್ದ ದಿನಗಳಲ್ಲಿ ಅವರ ಜೊತೆಗೆ ಅನುಭವಿಸಿದ್ದ ರೋಮಾಂಚನದ ಕ್ಷಣಗಳು. ಇನ್ನೂ ಇದೆ..

‍ಲೇಖಕರು G

8 October, 2012

3 Comments

  1. armanikanth

    ಬರಹ ಮನಸ್ಸಿಗೆ ತಾಕಿತು.ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ.ಸಕ್ಕರೆ ಖಾಯಿಲೆಗೆ ಶಾಶ್ವತ ಪರಿಹಾರ ಕೊಡುವಂಥ ಒಂದು ಮಾತ್ರೆ…ಇಂಜಕ್ಷನ್ ಬಂದುಬಿಟ್ಟರೆ ಎಷ್ಟೋ ಜನ ನೆಮ್ಮದಿಯಾಗಿ ಬದುಕಲು ಸಾಧ್ಯ..ಆದರೆ ಅಂಥ ದಿನ ಬರುವುದು ಯಾವಾಗ?

  2. ಪಂಡಿತಾರಾಧ್ಯ ಮೈಸೂರು

    ತನ್ನ(ಆತ್ಮ) ಕಥೆಯನ್ನು ತಾನೇ ಬರೆಯಬೇಕಲ್ಲದೆ ಬೇರೆಯವರು ಬರೆಯಲು ಹೇಗೆ ಸಾಧ್ಯ? ಆತ್ಮ ಕಥೆ, ಆತ್ಮೀಯ ಕಥನ ಎರಡರ ವ್ಯತ್ಯಾಸ ಗಮನಾರ್ಹ.

  3. pb prasanna

    Gurugalee aarogya noodikolli

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading