ಬೊಮ್ಮಾಯಿ ಎಂಬ 'ಅಷ್ಟಾವಕ್ರ'

ಒಡೆಯುವುದಕ್ಕಿಂತ ಕಟ್ಟುವುದು ಒಳ್ಳೆಯದು
ಚರ್ಮಕ್ಕಿಂತ ಗುಣಕ್ಕೆ ಬೆಲೆ ನೀಡುವುದು ಒಳ್ಳೆಯದು

r t vittal murthy with saa cha

ಆರ್.ಟಿ. ವಿಠ್ಠಲಮೂರ್ತಿ

ಅತ ಗಂಭೀರವಾಗಿ ರಾಜ ಸಭೆಗೆ ಪ್ರವೇಶ ಮಾಡುತ್ತಾನೆ. ನೆರೆದಿದ್ದವರೆಲ್ಲ ಗೊಳ್ಳೆಂದು ನಗುತ್ತಾರೆ. ಅವರು ನಗುವುದನ್ನು ನೋಡಿ ರಾಜನೂ ನಗುತ್ತಾನೆ.
ರಾಜ ಸಭೆಗೆ ಪ್ರವೇಶ ಮಾಡಿದವನು ಗಂಭೀರವಾಗಿ ಎಲ್ಲರನ್ನೂ ಅವಲೋಕಿಸಿ: ಕ್ಷಮಿಸಿ ಮಹಾರಾಜ, ಇದು ರಾಜಸಭೆ ಎಂದು ತಪ್ಪಾಗಿ ಭಾವಿಸಿ ಬಂದೆ. ಆದರೆ ಇದು ಕಟುಕರು, ಚಮ್ಮಾರರೇ ತುಂಬಿರುವ ಸಭೆ ಎಂದು ಭಾವಿಸಿರಲಿಲ್ಲ. ಚರ್ಮದ ಆಧಾರದ ಮೇಲೆ ಅದರ ಬೆಲೆ ಕಟ್ಟುವವರು ಅವರೇ. ಅಂತಲ್ಲಿ ನನಗೇನು ಕೆಲಸ? ಎನ್ನುತ್ತಾ ವಾಪಸ್ಸು ಹೊರಡಲು ತಯಾರಾಗುತ್ತಾನೆ.
s r bommaiಮಹಾರಾಜ ಮಾತ್ರವಲ್ಲ, ಇಡೀ ರಾಜಸಭೆ ಸ್ತಂಭೀಭೂತವಾಗುತ್ತದೆ. ಸಭೆಯಲ್ಲಿದ್ದ ಯಾರಿಗೂ ಮಾತೇ ಹೊರಡುವುದಿಲ್ಲ. ಇರುವ ಶಕ್ತಿಯನ್ನೆಲ್ಲ ಸಂಚಯಿಸಿಕೊಂಡು ರಾಜ ಕೇಳುತ್ತಾನೆ. ಅರೇ, ಇದೇಕೆ ನಿನಗೆ ಹಾಗನ್ನಿಸಿತು ಅಷ್ಟಾವಕ್ರ? ಇಷ್ಟು ನಿರ್ದಾಕ್ಷಿಣ್ಯವಾಗಿ ಮಾತನಾಡಿ ಹೋಗುತ್ತಿದ್ದೀಯ?
ಆಗ ಅಷ್ಟಾವಕ್ರ ಹೇಳುತ್ತಾನೆ.ರಾಜ, ಈ ಸಭೆಯಲ್ಲಿದ್ದವರಿಗೆ ಜ್ಞಾನವೇ ಮುಖ್ಯವಾಗಿದ್ದರೆ ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲು ಅವರು ಉತ್ಸುಕರಾಗಿರುತ್ತಿದ್ದರು. ಆದರೆ ಅಂತಹ ಉತ್ಸುಕತೆ ಯಾರಲ್ಲೂ ಕಾಣುತ್ತಿಲ್ಲ. ಬದಲಿಗೆ ಎಲ್ಲರಿಗೂ ನನ್ನ ದೇಹದ ಮೇಲೆ ಕಣ್ಣಿದೆಯೇ ಹೊರತು, ನನ್ನ ಜ್ಞಾನದ ಮೇಲೆ ಕಣ್ಣಿಲ್ಲ. ಚರ್ಮಕ್ಕೆ ಬೆಲೆ ಕೊಡುವ ಈ ಸಭೆ ಕಟುಕರು, ಚಮ್ಮಾರರ ಸಭೆಯಲ್ಲದೆ ಇನ್ನೇನಾಗಲು ಸಾಧ್ಯ?

ಎಲ್ಲರೂ ಮೌನವಾಗಿ ತಲೆ ತಗ್ಗಿಸುತ್ತಾರೆ. ಈ ಕತೆಯನ್ನು ಹೇಳಿದ ಅವರು ಮೌನವಾದರು. ನಾನು ಹೆಚ್ಚು ಮಾತನಾಡದೆ ಅವರ ಮುಖವನ್ನೇ ದಿಟ್ಟಿಸಿದೆ. ಅವರು ಹೊರಗೆ ನೋಡುತ್ತಿದ್ದರು. ಅವರ ಹೆಸರು-
ಸೋಮಪ್ಪ ರಾಯಪ್ಪ ಬೊಮ್ಮಾಯಿ.

88 ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಕರ್ನಾಟಕದ ಮುಖ್ಯಮಂತ್ರಿಯಾದವರು ಎಸ್.ಆರ್. ಬೊಮ್ಮಾಯಿ. ಅವರು ಮುಖ್ಯಮಂತ್ರಿಯಾದ ಕೆಲವೇ ಕಾಲದಲ್ಲಿ ಕಲ್ಯಾಣರಾವ್ ಮೊಳಕೇರಿ ಸೇರಿದಂತೆ ದೇವೇಗೌಡರ ಹಲ ಆಪ್ತ ಶಾಸಕರು ಹೋಗಿ ರಾಜ್ಯಪಾಲ ವೆಂಕಟಸುಬ್ಬಯ್ಯ ಅವರನ್ನು ಭೇಟಿ ಮಾಡಿದರು. ಈ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ.ಹೀಗಾಗಿ ಇದನ್ನು ವಜಾ ಮಾಡಿ ಎಂದು ಒತ್ತಾಯಿಸಿದರು. ರಾಜ್ಯಪಾಲ ವೆಂಕಟಸುಬ್ಬಯ್ಯ ತಡ ಮಾಡಲಿಲ್ಲ. ತಕ್ಷಣವೇ ಸರ್ಕಾರವನ್ನು ವಜಾ ಮಾಡಿದರು. ಕರ್ನಾಟಕದ ಮೇಲೆ ರಾಷ್ಟ್ರಪತಿ ಆಡಳಿತ ಹೇರಿದರು.

ಇದರ ವಿರುದ್ಧ ಬೊಮ್ಮಾಯಿ ಸುಪ್ರೀಂಕೋರ್ಟಿಗೆ ಹೋದರು. ಸುಪ್ರೀಂಕೋರ್ಟ್ ಸುಧೀರ್ಘ ವಿಚಾರಣೆಯ ನಂತರ ಒಂದು ತೀರ್ಪು ನೀಡಿತು. ಮುಖ್ಯಮಂತ್ರಿಯ ಬಹುಮತ ಸಾಬೀತಾಗಬೇಕಿರುವುದು ವಿಧಾನಸಭೆಯಲ್ಲೇ ಹೊರತು, ರಾಜಭವನದ ಅಂಗಳದಲ್ಲಲ್ಲ ಅಂತ ತಪರಾಕಿ ಬಾರಿಸಿತು. ಆದರೆ ಈ ತೀರ್ಪು ಬರುವ ಕಾಲಕ್ಕಾಗಲೇ ತುಂಬ ತಡವಾಗಿತ್ತು. ಯಾಕೆಂದರೆ ಅಷ್ಟೊತ್ತಿಗಾಗಲೇ 89 ರಲ್ಲಿ ವಿಧಾನಸಭೆ ಚುನಾವಣೆ ನಡೆದು ಕಾಂಗ್ರಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು.

s r Bommai statueಆದರೆ ಗೊತ್ತಿರಲಿ, ಇವತ್ತಿಗೂ ಯಾರೇ ಶಾಸಕರು ರಾಜ್ಯಪಾಲರ ಬಳಿ ಹೋಗಿ, ಈ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ ಎಂದರೆ ರಾಜ್ಯಪಾಲರಾದವರು ಅನಿವಾರ್ಯವಾಗಿ, ನಿಮಗಿರುವ ಬಹುಮತವನ್ನು ಸಾಬೀತುಪಡಿಸಿ ಎಂದು ಮುಖ್ಯಮಂತ್ರಿಗಳಿಗೆ ಸೂಚಿಸಬೇಕು. ಅದಕ್ಕಾಗಿ ಸಮಯ ನಿಗದಿ ಪಡಿಸಬೇಕು.
ಇದು ಬೊಮ್ಮಾಯಿ ಅವರ ಸಾಧನೆ. ಸ್ವತ: ಮುಖ್ಯಮಂತ್ರಿ ಪದವಿ ಕಳೆದುಕೊಂಡರೂ, ಸುಪ್ರೀಂಕೋರ್ಟ್ ಇಂತಹ ತೀರ್ಪು ನೀಡುವಂತೆ ಮಾಡುವ ಮೂಲಕ ಮುಂದೆ ಮುಖ್ಯಮಂತ್ರಿಗಳಾದ ಎಲ್ಲರಿಗೂ ಆಕ್ಸಿಜನ್ ಅಂತ ಕೊಟ್ಟವರು ಬೊಮ್ಮಾಯಿ.

ಅಂತಹ ಬೊಮ್ಮಾಯಿ ನಾನು ಭೇಟಿ ಮಾಡುವ ಕಾಲಕ್ಕಾಗಲೇ ಪ್ರಧಾನಿ ದೇವೇಗೌಡರ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿ. ಇಂಟರ್ ವ್ಯೂಗೆ ಅಂತ ಆರ್.ಟಿ. ನಗರದ ಮನೆಗೆ ಹೋದರೆ ಕಿಕ್ಕಿರಿದ ಜನ. ಈ ಜನಸಂದಣಿಯ ಮಧ್ಯೆ ಮಾತನಾಡಲು ಅವಕಾಶವೇ ಇರಲಿಲ್ಲ. ಹೀಗಾಗಿ ಬೊಮ್ಮಾಯಿ ಹೇಳಿದರು. ವಿಠ್ಠಲಮೂರ್ತಿ. ನಿಮಗೆ ಬೇರೇನೂ ತುರ್ತು ಕೆಲಸವಿಲ್ಲದಿದ್ದರೆ ಏರ್ ಪೋರ್ಟ್ ಗೆ ನನ್ನ ಜತೆಗೇ ಬನ್ನಿ. ಮಾತನಾಡುತ್ತಾ ಹೋಗೋಣ ಎಂದರು. ಆಗ ವಿಮಾನ ನಿಲ್ದಾಣಕ್ಕೆ ಹೋಗಲು ಹೆಚ್ಚು ಎಂದರೆ ಅರ್ಧ ಗಂಟೆಯ ದಾರಿ. ಅಷ್ಟರಲ್ಲಿ ನಾನು ದಾಖಲಿಸಿಕೊಂಡಿದ್ದ ಇಂಟರ್ ವ್ಯೂ ಮುಗಿಸುವುದು ಕಷ್ವದ ಕೆಲಸ.
ಆದರೆ ನಾನು ದುಸುರಾ ಮಾತನಾಡದೆ ಯಸ್ ಸಾರ್ ಎಂದೆ.

ಸರಿ, ಬೊಮ್ಮಾಯಿ ಅವರ ಕಾರಿನಲ್ಲೇ ಕುಳಿತು ಏರ್ ಪೋರ್ಟ್ ಕಡೆ ಹೊರಟೆವು. ನಾನು ನೇರವಾಗಿಯೇ ಹೇಳಿದೆ. ಸಾರ್. ನಾನು ತಯಾರಿಸಿಕೊಂಡು ಬಂದಿರುವ ಪ್ರಶ್ನೆಗಳಿಗೆ ಉತ್ತರ ಕೊಡಲು ನಿಮಗೆ ಕನಿಷ್ಟ ಒಂದು ಗಂಟೆ ಬೇಕು. ಹೀಗಾಗಿ ಸುಮ್ಮನೆ ನನಗನ್ನಿಸಿದ್ದನ್ನು ಕೇಳುತ್ತಾ ಜತೆಗೆ ಬರುತ್ತೇನೆ ಎಂದೆ.

ಬೊಮ್ಮಾಯಿ ಖುಷಿಯಾದರು. ಕಾರು ಹತ್ತುತ್ತಿದ್ದಂತೆಯೇ ಇಬ್ಬರ ನಡುವೆ ಔಪಚಾರಿಕ ಮಾತುಕತೆ ಆರಂಭವಾಯಿತು. ನಾನು ಸಹಜವಾಗಿ ಕೇಳಿದೆ. ಸಾರ್ ನೀವು ಎಂ.ಎನ್.ರಾಯ್ ಅವರ ವಿಚಾರಧಾರೆಯಿಂದ ಪ್ರಭಾವಿತರಾಗಿರುವವರು. ರಾಯ್ ಅವರು ನವೀನ ಮಾನವತಾವಾದದ ಪ್ರತಿಪಾದಕ. ನಿಮಗೇಕೆ ಅದು ಇಷ್ಟವಾಯಿತು?

ಬೊಮ್ಮಾಯಿ ನಕ್ಕರು. ಹಾಗೆ ನಗುತ್ತಲೇ ಹೇಳಿದರು. ಅರೇ,ವಿಠ್ಠಲಮೂರ್ತಿ. ರಾಯ್ ಅವರ ವಿಚಾರಧಾರೆಯಿಂದ ನಾನು ಮಾತ್ರವಲ್ಲ, ನಮ್ಮ ಕಾಲದ ಅನೇಕರು ಪ್ರಭಾವಿತರಾಗಿದ್ದರು. ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಕಂದಾಚಾರಿಗಳ ಬಳಿ ಉತ್ತರವಿಲ್ಲ. ಬದಲಿಗೆ ನೋವುಂಡ ಮನುಷ್ಯ, ಪ್ರಕೃತಿ ಹಾಗೂ ವಿಜ್ಞಾನದ ನಡುವೆ ನೇರ ಸಂವಹನ ಸಾಧಿಸಲು ಸಾಧ್ಯವಾಗಬೇಕು. ಆಗಲೇ ಅವನ ಸಮಸ್ಯೆಗಳಿಗೆ ಮುಕ್ತಿ ಸಿಗಲು ಸಾಧ್ಯ ಎಂಬುದು ರಾಯ್ ಅವರ ವಾದವಾಗಿತ್ತು.
ಆ ಕಾಲದಲ್ಲಿ ಇಟ್ ಈಸ್ ಏ ರಿಯಲಿ ಫೆಂಟಾಸ್ಟಿಕ್ ಥಿಂಕಿಂಗ್. ಹೀಗಾಗಿ ನನ್ನಂತಹ ಅನೇಕರು ರಾಯ್ ಅವರ ಬೆನ್ನು ಬಿದ್ದೆವು.

ಪ್ರಕೃತಿ ಮತ್ತು ವಿಜ್ಞಾನದ ಮಧ್ಯೆ ಒಂದು ಸಂಬಂಧವಿದೆ. ಅದರರ್ಥ ನಾವು ತತ್ವಶಾಸ್ತ್ರದ ಮೇಲೆ ನಂಬಿಕೆ ಇಲ್ಲದವರು ಅಂತಲ್ಲ. ಆದರೆ ಫಿಲಾಸಫಿ ಮತ್ತು ಸೈನ್ಸ್ ಒಗ್ಗೂಡಿದರೆ ಮನುಷ್ಯನ ಸಮಸ್ಯೆಗಳಿಗೆ ಉತ್ತರವಿದೆ ಎಂಬುದು ರಾಯ್ ಅವರ ನಂಬಿಕೆಯಾಗಿತ್ತು. ನೇರವಾಗಿ ಹೇಳಬೇಕೆಂದರೆ ಅವರಿಗೆ ದಲ್ಲಾಳಿಗಳ ವಿಷಯದಲ್ಲಿ ನಂಬಿಕೆ ಇರಲಿಲ್ಲ.

politicsಅವರು ಕಮ್ಯೂನಿಸ್ಟ್ ಆಗಿದ್ದರು, ಸಮಾಜವಾದಿ ಆಗಿದ್ದರು. ಸಮತಾವಾದಿಯಾಗಿದ್ದರು. ಆದರೆ ನಡವಳಿಕೆಯ ವಿಷಯದಲ್ಲಿ ಎಲ್ಲರ ಬಗ್ಗೆ ಭ್ರಮ ನಿರಸನಗೊಂಡರು. ಅವರಿಗೆ ಲೆನಿನ್,ಸ್ಟಾಲಿನ್, ಮಾವೋ, ಟ್ರಾಟ್ ಸ್ಕೀ ಸೇರಿದಂತೆ ಜಗತ್ತಿನ ಅನೇಕ ನಾಯಕರ ಜತೆ ಸಂಪರ್ಕವಿತ್ತು. ಆದರೆ ಯಾರ ಜತೆ ಸಂಪರ್ಕವಿದ್ದರೂ, ತನ್ನದೇ ಲಹರಿಯಲ್ಲಿ ಮುಂದೆ ಹೋಗುವ ಮನುಷ್ಯ ರಾಯ್. ಅದಕ್ಕಾಗಿಯೇ ನನಗವರು, ತುಂಬ ಇಷ್ಟವಾದರು.

ದಲ್ಲಾಳಿಯೇ ಇಲ್ಲದ ಜಗತ್ತಿನ ಕಲ್ಪನೆ ಮಾಡಿಕೊಳ್ಳಿ. ಮನುಷ್ಯ ತನ್ನೆಲ್ಲ ಸಮಸ್ಯೆಗಳಿಗೆ ನೇರವಾಗಿ ವಿಜ್ಞಾನದ ಮೊರೆ ಹೋಗಬೇಕು. ಆ ಮೂಲಕ ಸತ್ಯವನ್ನು ಕಂಡುಕೊಳ್ಳಬೇಕು ಎಂಬ ರಾಯ್ ಮಾತನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ವಿಠ್ಠಲಮೂರ್ತಿ. ನನಗನ್ನಿಸಿದ ಪ್ರಕಾರ, ರಾಯ್ ಅವರಿಗೆ ದೇವರ ವಿಷಯದಲ್ಲಿ ವಿರೋಧವಿರಲಿಲ್ಲ. ಈ ಜಗತ್ತನ್ನು ಆಳಲು ಒಂದು ಶಕ್ತಿ ಇರಲೇಬೇಕು ಎಂಬ ವಿಷಯದಲ್ಲಿ ಅವರಿಗೆ ನಂಬಿಕೆ ಇತ್ತು.

ಅದೇ ರೀತಿ ಮನುಷ್ಯ ತನ್ನ ಬದುಕಿನಲ್ಲಿ ಹುಟ್ಟು ಹಾಕಿದ ಅಪೂರ್ವ ಪರಿಕಲ್ಪನೆ ಎಂದರೆ ದೇವರು ಎಂಬುದು ಅವರ ನಂಬಿಕೆಯಾಗಿತ್ತು. ಆದರೆ ನನಗೆ ಅನ್ನಿಸಿದಂತೆ ಅವರಿಗೆ ಒಂದು ಹೆದರಿಕೆ ಇತ್ತು. ಇಂತಹ ಅಮೂಲ್ಯ ಕಲ್ಪನೆಯನ್ನು ಈ ದಲ್ಲಾಳಿಗಳು ನಾಶ ಮಾಡುತ್ತಾರೆ, ದಿನ ಬೆಳಗಾದರೆ ದೇವರು ಇರುವುದು ಹಾಗೆ, ಹೀಗೆ ಎಂದು ಮಾತನಾಡುತ್ತಾ, ಹೆದರಿಸುತ್ತಾ ಇವರು ಆಡುವ ನಾಟಕದಿಂದ ಜನ ಬೇಸತ್ತುಕೊಳ್ಳುತ್ತಾರೆ. ಒಂದು ದಿನ ದೇವರ ಮೇಲಿರುವ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ.

ಹೀಗಾಗಿ ಒಂದಲ್ಲ, ಒಂದು ದಿನ ಈ ದಲ್ಲಾಳಿಗಳ ವರ್ತನೆಯಿಂದ ರೋಸತ್ತು ಹೋಗುವ ಪೀಳಿಗೆ ದೇವರನ್ನು ನಂಬುವ ಗೋಜಿಗೇ ಹೋಗುವುದಿಲ್ಲ. ಆತನನ್ನು ನಾವು ನೋಡಿಲ್ಲ. ಹೀಗಾಗಿ ಆತನನ್ನು ನಾವು ನಂಬುವುದಿಲ್ಲ ಎಂಬ ಮಟ್ಟಕ್ಕೆ ತಿರಸ್ಕಾರದ ಬಾವನೆ ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಫಿಲಾಸಫಿ ಹಾಗೂ ವಿಜ್ಞಾನದ ಮಧ್ಯೆ ಸಾಮರಸ್ಯ ಮೂಡಿಸಿ, ಆ ಮೂಲಕವೇ ಮನುಷ್ಯ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ರಾಯ್ ಅವರ ಕನಸಾಗಿತ್ತು. ಇವತ್ತಲ್ಲ, ನಾಳೆ ಅಂತಹ ಜನಾಂಗವೂ ಸೃಷ್ಟಿಯಾಗುತ್ತದೆ.ಮತ್ತು ಫಿಲಾಸಫಿ,ವಿಜ್ಞಾನದ ನಡುವೆಯೇ ನಾವು ಉತ್ತರ ಕಂಡು ಹಿಡಿಯಬೇಕು ಎಂಬುದು ಅವರಿಗೆ ಗೊತ್ತಾಗುತ್ತದೆ ಎಂಬುದು ರಾಯ್ ಅವರ ವಿಶ್ವಾಸವಾಗಿತ್ತು ಎಂದರು ಬೊಮ್ಮಾಯಿ.

ನಾನು ನೇರವಾಗಿ ವಿಷಯಕ್ಕೆ ಬಂದೆ. ಸಾರ್. ಬೊಮ್ಮಾಯಿ ಅಂದರೆ ಪೇಸ್ಟರ್ ಅಂತ ಹೇಳುತ್ತಾರೆ.ಎ ಲ್ಲರನ್ನೂ ಒಂದು ಮಾಡಲು ಯತ್ನಿಸುವುದೇ ಅವರ ಹೆಗ್ಗಳಿಕೆ ಅನ್ನುತ್ತಾರೆ ಯಾಕೆ? ಅಂದೆ. ಬೊಮ್ಮಾಯಿ ಅರೆ ಕ್ಷಣ ಗಂಭೀರರಾದರು. ಆನಂತರ ಇದ್ದಕ್ಕಿದ್ದಂತೆ ತಾವು ಹಾಕಿದ್ದ ಕನ್ನಡಕವನ್ನು ಮೂಗಿನ ಮೇಲೇರಿಸುತ್ತಾ ಹೇಳಿದರು. ಇದು ಕೂಡಾ ನನ್ನ ಥಿಂಕಿಂಗ್ ಅಲ್ಲ. ರಾಯ್ ಅವರ ಪ್ರಭಾವ ವಿಠ್ಠಲಮೂರ್ತಿ. ನಿಮ್ಮ ಪ್ರಶ್ನೆಯ ಉದ್ದೇಶ ಏನು ಅಂತ ನನಗೆ ಗೊತ್ತು. ಆದರೆ ಈ ಕೆಲಸವನ್ನು ನಾನು ಮಾಡದೆ ಇನ್ಯಾರೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮನಗಂಡೇ ಈ ಕೆಲಸಕ್ಕೆ ಇಳಿದೆ ಎಂದರು.

ಅಂದ ಹಾಗೆ ದೇವೇಗೌಡ, ಹೆಗಡೆ, ಪಟೇಲ್ ಸೇರಿದಂತೆ ಜನತಾ ಪರಿವಾರದ ಯಾವ್ಯಾವ ಮಹಾನ್ ನಾಯಕರು ಅಂತಿದ್ದರೋ? ಅವರ ಮಧ್ಯೆ ಒಡಕಾದಾಗಲೆಲ್ಲ ಬೊಮ್ಮಾಯಿ ಮಧ್ಯೆ ಪ್ರವೇಶಿಸುತ್ತಿದ್ದರು. ರೀ ಗೌಡ್ರೇ, ರೀ ಹೆಗಡೆ ಅವರೇ, ಪಟೇಲ್ರೇ. ನೀವೆಲ್ಲ ಹೀಗೆ ಚಿಕ್ಕ ಮಕ್ಕಳಂತೆ ಜಗಳ ಮಾಡಿದರೆ ನಾವು ಪಾರ್ಟಿ ಕಟ್ಟಬೇಕಾ? ಅಥವಾ ಮನೆಗೆ ಹೋಗಬೇಕಾ? ಎಂದು ಮುಲಾಜಿಲ್ಲದೆ ಕೇಳುವ ಒಂದು ಅಪೂರ್ವ ಶಕ್ತಿ ಬೊಮ್ಮಾಯಿ ಅವರಿಗಿತ್ತು.
ಮತ್ತು ಈ ರೀತಿ ಪದೇ ಪದೇ ಒಡೆದ ಜನತಾ ಪರಿವಾರಕ್ಕೆ ಮರಳಿ ತೇಪೆ ಹಾಕುವಲ್ಲಿ ಬೊಮ್ಮಾಯಿ ಯಶಸ್ವಿಯಾಗುತ್ತಿದ್ದರು. ಹಾಗಂತಲೇ ನಾನು ಕೇಳಿದೆ. ಸಾರ್. ಈ ರೀತಿ ತೇಪೆ ಹಾಕುವಲ್ಲಿ ನಿಮ್ಮಂತೆ ಯಶಸ್ಸು ಕಂಡವರು ಕಡಿಮೆ. ನಿಮಗೆ ಇದು ಹೇಗೆ ಸಾಧ್ಯವಾಗುತ್ತಿತ್ತು?

ಅಷ್ಟಾವಕ್ರನ ಗುಣ ಇದ್ದುದಕ್ಕಾಗಿ ವಿಠ್ಠಲಮೂರ್ತಿ ಎಂದರು ಬೊಮ್ಮಾಯಿ. ನಾನು ಬೆಕ್ಕಸ ಬೆರಗಾದೆ. ಅದುವರೆಗೂ ಅಷ್ಟಾವಕ್ರನ ಕತೆ ಎಂದರೆ, ನನಗಿದ್ದ ಕಲ್ಪನೆಯೇ ಬೇರೆ. ಆತ ಸದಾ ಕಾಲ ಕೊಟ್ಟಿಗೆಯಲ್ಲಿರುತ್ತಿದ್ದವನು. ರಾಜನಿಂದ ಬೇಸತ್ತ ರಾಣಿಯೊಬ್ಬಳು ಆತ ನುಡಿಸುತ್ತಿದ್ದ ಕೊಳಲ ನಾದಕ್ಕೆ ಮನಸೋತಳು ಎಂಬಂತಹ ಕತೆ.

ಆದರೆ ಬೊಮ್ಮಾಯಿ ಧಿಗ್ಮೂಡವೆನ್ನಿಸುವ ಕತೆ ಹೇಳಿದರು. ವಿಠ್ಠಲಮೂರ್ತಿ. ಆತನ ಹೆಸರನ್ನು ಬಾಲ್ಯದಲ್ಲಿ ಕುರೂಪಕ್ಕೆ ಪ್ರತಿಮೆಯಾಗಿ ಬಳಸುತ್ತಿದ್ದೆವು. ಆದರೆ ಆತ ಅಪ್ರತಿಮ ಬುದ್ಧಿವಂತ. ಆತನಿಗೆ ಕಟ್ಟುವ ಕೆಲಸದಲ್ಲಿ ನಂಬಿಕೆ ಇತ್ತೇ ವಿನ: ಒಡೆಯುವ ಕೆಲಸದಲ್ಲಿ ಅಲ್ಲ. ಭಾರತದ ಸಂಸ್ಕೃತಿ ಒಡೆಯುವುದರ ಮೇಲೆ ನಂಬಿಕೆ ಇರಿಸಿಲ್ಲ. ಕಟ್ಟುವ ಕಲೆಯಲ್ಲಿ ನಂಬಿಕೆ ಇರಿಸಿಕೊಂಡಿದೆ. ಹೀಗಾಗಿ ಆತನ ಕತೆ ನನ್ನ ಮೇಲೆ ಎಷ್ಟು ಪ್ರಭಾವ ಬೀರಿತು ಎಂದರೆ, ನಾನು ನಿರಂತರವಾಗಿ ಕಟ್ಟುವ ಕೆಲಸವನ್ನೇ ಆಯ್ದುಕೊಂಡೆ.

ಹೀಗಾಗಿ ರಾಜಕೀಯವಾಗಿ ನನ್ನನ್ನು ನೋಡುವವರು, ಹೀ ಈಸ್ ಪೇಸ್ಟರ್ ಅನ್ನಬಹುದು. ಆದರೆ ರಾಯ್ ಅವರ ವಾದಕ್ಕೆ ದೊಡ್ಡ ಮಟ್ಟದಲ್ಲಿ ಹೋಲಿಕೆ ಆಗುವ ವ್ಯಕ್ತಿ ಎಂದರೆ ಅಷ್ಟಾವಕ್ರ.ಆತ ಸೌಂದರ್ಯವನ್ನು ಮುಖ್ಯವಾಗಿಸಿಕೊಳ್ಳಲಿಲ್ಲ. ಗುಣವನ್ನು ಮುಖ್ಯವಾಗಿಸಿಕೊಂಡ ಅಂತ ಹೇಳಿದ ಬೊಮ್ಮಾಯಿ, ಉದಾಹರಣೆಗಾಗಿ ಈ ಕತೆ ಹೇಳಿದರು. ಕೇಳಿದ ನಾನು ಮೌನಕ್ಕೆ ಶರಣಾದೆ. ಅಷ್ಟರಲ್ಲಾಗಲೇ ಏರ್ ಪೋರ್ಟು ಬಂದಿತ್ತು. ಬೊಮ್ಮಾಯಿ ತಮ್ಮ ಕಾರ್ ಡ್ರೈವರ್ ಗೆ,ವಿಠ್ಠಲಮೂರ್ತಿ ಅವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಿ ಬಿಡು.ಏನೂ ತೊಂದರೆ ಆಗಬಾರದು ಎಂದರು.

ಇವತ್ತೇಕೋ ಈ ಬೆಳವಣಿಗೆಯನ್ನು ನೆನಪಿಸಿಕೊಂಡು ನನ್ನ ಪತ್ರಕರ್ತ ಮಿತ್ರರಾದ ಶಿವರಾಜ್ ಹಾಗೂ ವಿಜಯಕುಮಾರ್ ಬಳಿ ಮಾತನಾಡಿದೆ.ಅವರೂ ಇದಕ್ಕೆ ಪೂರಕವಾದ ಹಲ ಕತೆಗಳನ್ನು ಹೇಳಿದರು. ಒಡೆಯುವುದಕ್ಕಿಂತ ಕಟ್ಟುವುದು, ಮನುಷ್ಯನ ಚರ್ಮಕ್ಕಿಂತ ಆತನ ಗುಣಕ್ಕೆ ಆದ್ಯತೆ ನೀಡುವುದು ನಿಜವಾದ ಮಾನವೀಯತೆ ಅನ್ನಿಸಿತು.

ಹಾಗಂತಲೇ ಇದನ್ನೆಲ್ಲ ನಿಮ್ಮ ಬಳಿ ಹೇಳಿಕೊಂಡೆ.

 

‍ಲೇಖಕರು admin

November 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: