
ಚೆನ್ನವೀರ ಕಣವಿ
‘ಬೆಳಗಾಗಿ ನಾನೆದ್ದು..ʼ ಪುಸ್ತಕವನ್ನು ನಾನು ನೋಡಿಲ್ಲವೆಂದು ದೂರವಾಣಿಯಲ್ಲಿ ಮಾತನಾಡುವಾಗ ನಾನು ಅಂದಿದ್ದೆ. ಈಗ ಅದೂ ಸಿಕ್ಕಿತು.
ನಾನು ಬೆಳಗಾವಿಗೆ ಹೋಗಿ ಒಂದೂವರೆ ತಿಂಗಳು ಮಗಳ (ರಂಜಣ) ಮನೆಯಲ್ಲಿದ್ದು ಕೆ.ಎಲ್.ಇ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕ್ ಅಪ್ ಮಾಡಿಸಿಕೊಂಡೆ. ಈ ನಡುವೆ ಆರೋಗ್ಯ ಚೆನ್ನಾಗಿರಲಿಲ್ಲ. ಈಗ ಸುಧಾರಿಸಿಕೊಳ್ಳುತ್ತಿದ್ದೇನೆ. (ಬಹುಶಃ ಆಗ ಈ ಪುಸ್ತಕವನ್ನು ಮನೆಯಲ್ಲಿ ಕೊಟ್ಟಿರಬೇಕು). ನಿಮ್ಮ ಪುಸ್ತಕವನ್ನು ಮೊನ್ನೆ ಪೂರ್ತಿ ಓದಿದೆ. ಓದಿದ ಮೇಲೆ ಬರೆಯಲೇಬೇಕೆಂದು ಅನಿಸಿತು.
ನೀವು ಪ್ರತಿಯೊಂದು ಸನ್ನಿವೇಶವನ್ನು ಸೂಕ್ಷ್ಮವಾಗಿ ವಿಕ್ಷಿಸಿ, ಇಲ್ಲಿಯ ಸಾಹಿತ್ಯಿಕ ವ್ಯಕ್ತಿಯ ವೈಶಿಷ್ಟ್ಯಗಳನ್ನು ಹಾಗೆಯೇ ವೈಲಕ್ಷಣ್ಯಗಳನ್ನು ಜೀವಂತವಾಗಿ ಹಿಡಿದಿದ್ದೀರಿ. ಆ ಸಾಹಿತಿಯ ಕೃತಿಗಳನ್ನು ಈ ಮೊದಲೇ ಓದಿ ಅರಗಿಸಿಕೊಂಡದ್ದನ್ನು ಪ್ರಸಂಗಾನುಸಾರ ನೆನೆದುಕೊಳ್ಳುತ್ತೀರಿ. ಅದಕ್ಕೆ ಈ ಪುಸ್ತಕವೇ ಸಾಕ್ಷಿ.

‘ಎಚ್ಚೆಸ್ವಿ ಎಂಬ ಕೆಲೆಡಿಯೋಸ್ಕೋಪ್ ಮೂಲಕ ಹಾದು ಬಂದು ಈ ಬರಹಗಳು ಕನ್ನಡದ ಬಗ್ಗೆ ಹೆಮ್ಮೆ ಮೂಡಿಸುತ್ತದೆ’ ಎಂದು ಜಿ.ಎನ್. ಮೋಹನ್ ಆಗಲೇ ಹೇಳಿಬಿಟ್ಟಿದ್ದಾರೆ. ಎ.ಎನ್.ಮುಕುಂದ ಅವರು ತೆಗೆದ ಚಿತ್ರಗಳಂತೂ ಇಲ್ಲಿ ಅಪರೂಪವಾಗಿ ಹೊಂದಿಕೊಳ್ಳುತ್ತವೆ. ಪ್ರತಿಯೊಂದು ಬರಹದಲ್ಲಿಯೂ ವ್ಯಕ್ತಿ-ವ್ಯಕ್ತಿತ್ವವನ್ನು ಕುರಿತು ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ನಿಮ್ಮ ಬರವಣಿಗೆ ‘ನನಗೂ ಹಾಗೆ ಎನಿಸಿತ್ತುʼ ಎಂಬ ತರಹ ಆತ್ಮೀಯವಾಗುತ್ತದೆ.
ಒಂದೆರಡು ಉದಾಹರಣೆಗಳನ್ನು ಮಾತ್ರ ಇಲ್ಲಿ ಕೊಡಬಯಸುತ್ತೇನೆ: ‘ಕಣ್ಣು ಕಾಣುವ ನಮಗೆ ಗೋಡೆ ಕಾಣುತ್ತದೆ. ಕಣ್ಣಿಲ್ಲದ ಪುತಿನ ಅವರಿಗೆ ಗೋಡೆಯ ಆಚೆಗಿನ ಸೂರ್ಯ ಭಗವಾನ್ ಕಾಣಿಸುತ್ತಾನೆ.. ಕಾಣಲಿಕ್ಕೆ ದೃಷ್ಟಿ ಅಷ್ಟೇ ಸಾಲದು, ಅದೃಷ್ಟವೂ ಬೇಕು’ (ಹಿರಿಯರ ನಡೆ-ನುಡಿ)
‘ಮುಂಬಾಗಿಲು ದಾಟಿ ಗೇಟಿನ ಬಳಿ ಬಂದಾಗಲೂ ಅವರಿಗೆ ಹೇಳಲೇಬೇಕಾದ ಸಂಗತಿಗಳು ಇದ್ದೇ ಇವೆ. ಗೇಟಿನ ಹೊರಗೆ ನಾವು! ಗೇಟಿನ ಒಳಗೆ ಅವರು. ಮಾತಿಗೆ ಗೇಟು ತಡೆಯಾಗದು’ (ಆಮೂರರ ಅಸೀಮ ವ್ಯಕ್ತಿತ್ವ)
‘ಅದು ಸರಿಬಿಡಿ ಎನ್ನುವುದು ಅವರಿಗೆ ಪ್ರಿಯವಾದ ವಾಕ್ಯಗುಚ್ಛ… ನನಗೆ ತಪಸ್ಸಿನ ಅಡ್ರೆಸ್ ಗೊತ್ತಿಲ್ಲ. ಅದನ್ನು ಈ ಗೆಳೆಯರು (ನವ್ಯ ಕವಿಯೊಬ್ಬರು) ತಿಳಿಸಿದರೆ ಹೋಗಿ ನೋಡಿಕೊಂಡು ಬರುತ್ತೇನೆ’ (ಪ್ರೀತಿಯೊಂದು ಮಾಟಗಾರಿಕೆ)
‘ಅವರ ಕವಿತೆಗಳಲ್ಲಿ ದೇವತೆಗಳು ಮನುಷ್ಯರಾಗುತ್ತಿದ್ದರು; ಮನುಷ್ಯರು ದೇವತೆಗಳಾಗುತ್ತಿದ್ದರು… ಮಧ್ವ ಮತ್ತು ಮಾರ್ಕ್ಸ್ ಇಬ್ಬರೂ ಮನುಷ್ಯನ ಹಕ್ಕಿನ ಪರವಾಗಿ ಹೋರಾಡಿದವರಲ್ಲವಾ?ʼ (‘ಮಗು ನಗೆಯ ಪ್ರೌಢ ಕವಿʼ)
‘ಒಂದು ಬನಿಯನ್ನು ಬಿಳಿಯ ಲುಂಗಿ ಅವರ ಸಾಮಾನ್ಯ ಉಡುಪು… ಕೇಡಿನ ಕಲ್ಪನೆ ಮತ್ತು ಸಾವಿನ ನಿಗೂಢತೆ ಎಲ್ಎ ಎಸ್ಲ್ ಎಸ್ ಅವರನ್ನು ಸದಾ ಕಾಡುವ ಸಂಗತಿಗಳಾಗಿದ್ದವು.ʼ (‘ಎರಡೂ ಇರುಳಿನ ನಡುವೆʼ)

‘ಪರ ಸ್ಥಳಕ್ಕೆ ಹೋದಾಗ ಜಿಎಸ್ಸೆಸ್ ಕೆಲವು ನಿಯಮಗಳನ್ನು ಪಾಲಿಸುತ್ತಿದ್ದರು. ಮೊದಲನೆಯದು ತಮಗೆ ಗೊತ್ತಾಗಿರುವ ಕೋಣೆಯಲ್ಲಿ ಕಮೋಡ್ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳುವರು. ಎರಡನೆಯದು ಕೋಣೆಗೆ ಹೋದಕೂಡಲೆ ತಾವು ಊರಿಂದ ತಮ್ಮೊಂದಿಗೆ ತಂದಿದ್ದ ಬಿಳಿಯ ಬೆಡ್ ಶೀಟ್ ಒಂದನ್ನು ತಮ್ಮ ಹಾಸಿಗೆಯ ಮೇಲೆ ಹಾಕುವರು. ಮೂರನೇದು ಬಾತ್ ರೂಮಿನಲ್ಲಿ ಖಾಲಿ ಬಕೆಟ್ಟಿನಲ್ಲಿ ಭರ್ತಿ ನೀರು ತುಂಬಿ ಇಡುವುದು. ಈ ಮೂರು ವಿಷಯಗಳನ್ನು ಅವರು ಯಾವತ್ತೂ ಮರೆಯುತ್ತಿರಲಿಲ್ಲ… ಹಣ ಯಾರದ್ದೇ ಇರಲಿ. ದುಂದು ವೆಚ್ಚ ಸಲ್ಲದು ಎನ್ನುವದು ಅವರ ತತ್ವ’ (‘ವ್ರತಗೆಡದ ಬಿಲ್ಲೋಜʼ)
‘ಅವರ ಅಸ್ಖಲಿತ ವಾಗ್ಝರಿಗೆ ನಾನು ನಿಬ್ಬೆರಗಾಗಿ ಹೋದೆ. ಪುಂಖಾನು ಪುಂಖವಾಗಿ ಅವರು ನೆನಪಿನಿಂದಲೇ ಕುಮಾರವ್ಯಾಸನ ಷಟ್ಪದಿಗಳನ್ನು ಉದ್ಧರಿಸುತ್ತಿದ್ದರು… ನಾಡಿಗರು ನನ್ನನ್ನೂ ಕೀರ್ತಿಯವರ ಮುನ್ನುಡಿಯನ್ನೂ ಘಾತಿಸಿ ಕಟುವಾರ ವ್ಯಂಗ್ಯ ಲೇಖನ ಬರೆದರು’ (‘ಕುರ್ತಕೋಟಿ ಎನ್ನುವ ವಿದಗ್ಧ ರಸಿಕ’)
‘ಅವರಿಗೆ ಮಾತು ಕೂಡ ಒಂದು ಸೃಷ್ಟಿಶೀಲ ಕ್ರಿಯೆ. ಅವರದ್ದು ಮೊದಲೇ ಸಿದ್ಧಪಡಿಸಿ ಸಭೆಗೆ ಒಪ್ಪಿಸುವ ಕ್ರಮವಲ್ಲ. ಆಡಾಡುತ್ತಲೇ ತನ್ನ ಬಂಧವನ್ನು ಕಟ್ಟಿಕೊಳ್ಳುವ ಉದ್ದಕ್ಕೂ ಅನೇಕ ಚಿಂತನೆಗಳಿಂದ ಹುರಿಗೊಳ್ಳುವ ಮಿಂಚಿನ ಮಿಣಿ’ (‘ಕಾವ್ಯ ಪ್ರೀತಿಯ ಲೋಕ ವಿಮರ್ಶಕʼ)
ಹೀಗೆ ಎಷ್ಟೋ ಉಲ್ಲೇಖಗಳನ್ನು ಹೇಳುತ್ತಲೇ ಹೋಗಬಹುದು. ಇವು ಕೇವಲ ಸ್ಯಾಂಪಲ್ಲುಗಳು.
ಇಂತು ಪ್ರೀತಿ ವಿಶ್ವಾಸದಿಂದ
-ಚನ್ನವೀರ ಕಣವಿ






ಅದೆಷ್ಟು ಆತ್ಮೀಯತೆ, ಪ್ರೀತಿ ತುಂಬಿದೆ ಈ ಪುಟ್ಟ ಬರಹದಲ್ಲಿ. ಸುಂದರ ಪರಿಚಯ.