ಆತ ಮುದ್ದಣ್ಣ. ಎಲ್ಲರಿಗೂ ಈಗಲೂ ಆತ ಮುದ್ದ ಎಂಬ ಹೆಸರಿನಿಂದಲೇ ಹತ್ತಿರ. ಇನ್ನೂ ಕನಸು ಚಿಗುರುವಾಗಲೇ ಬೆನ್ನ ಮೇಲೆ ಸಂಸಾರದ ನೊಗ. ಹಾಗಾಗಿ ಆತ ಹುಡುಕಿದ್ದು ಒಬ್ಬ ಗುರುವನ್ನ. ವಿಜಾಪುರದಲ್ಲಿ ಶ್ರೀನಿವಾಸ ತಾವರಗೇರಿ ಎಂದರೆ ತಾಯಿ ಕರುಳಿನ ರಂಗಕರ್ಮಿ. ಮುದ್ದಣ್ಣನನ್ನು ತಮ್ಮ ತಂಡದೊಳಗೆ ಸೇರಿಸಿಕೊಂಡರು. ಬೆಳಕು- ಕತ್ತಲೆ ಎರಡರ ನಡುವಿನ ವ್ಯತ್ಯಾಸ ತಿಳಿಸಿಕೊಟ್ಟರು.
ಮುದ್ದಣ್ಣನಿಗೆ ಕತ್ತಲೆಯ ಲೋಕ ಬೇಕಾದಷ್ಟು ಗೊತ್ತಿತ್ತು. ಗೊತ್ತಾಗಬೇಕಿದ್ದು ಬೆಳಕಿನ ಲೋಕ ಮಾತ್ರ. ಆಗ ಶ್ರೀನಿವಾಸ ತಾವರಗೇರಿ ಬೆಂಗಳೂರಿನತ್ತು ಬೆರಳು ತೋರಿಸಿದರು.
ಹೀಗೆ ಬೆಂಗಳೂರು ಸೇರಿಕೊಂಡ ಮುದ್ದಣ್ಣ. ಸಮುದಾಯ ತಂಡ ಈತನಿಗೆ ಮನೆಯಾಯಿತು, ಕಲಿಕೆಯ ತಾಣವಾಯಿತು. ಒಂದಿಷ್ಟು ಭದ್ರತೆಯ ಗೂಡಾಯಿತು. ನಂತರ ಮುದ್ದಣ್ಣ ಹಿಂದಿರುಗಿ ನೋಡಲಿಲ್ಲ. ಕನ್ನಡ ರಂಗಭೂಮಿಯ ದಿಗ್ಗಜರ ಜೊತೆ ಸೇರಿ ಬೆಳಕಿನ ವಿನ್ಯಾಸವನ್ನು ಕರಗತ ಮಾಡಿಕೊಳ್ಳುತ್ತಾ ಹೋದ. ಈಗ ಮುದ್ದಣ್ಣ ರಂಗಶಂಕರದ ಮುಖ್ಯರಲ್ಲಿ ಒಬ್ಬ. ನಾಟಕ ಅಕಾಡೆಮಿಯ ಸದಸ್ಯನೆಂಬ ಹೆಗ್ಗಳಿಕೆ ಕೂಡಾ.. ಸದಾ ನಗುನಗುತ್ತಲೇ ಇರುವ ಮುದ್ದ ರಟ್ಟಿಹಳ್ಳಿಯಿಂದ ಬೆಂಗಳೂರಿನವರೆಗೆ ನಡೆಸಿದ ಪಯಣದಲ್ಲಿ ಅವನಿಗೆ ಕತ್ತಲೆಯೋ ಸಿಕ್ಕಿದೆ, ಬೆಳಕೂ ಸಿಕ್ಕಿದೆ.
ದೀಪಾವಳಿ ಅವನಲ್ಲಿ, ಅವನಂತಹ ಹಲವರ ಬದುಕಲ್ಲಿ ರಂಗಿನ ಬೆಳಕು ಚೆಲ್ಲಲಿ ಎಂದು ಹಾರೈಸುತ್ತಾ ಅವಧಿ ಈ ಫೋಟೋ ಅಲ್ಬಮ್ ನೀಡುತ್ತಿದೆ
















0 Comments