ಬೆಳಕು ಕಾಣದ ಒಂದು ಅಪೂರ್ವ ಘಟನೆ
ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ಕ್ರಿಯಾಶೀಲತೆ ಮತ್ತು ಸಾಮಾಜಿಕ ಕಾಳಜಿ ಹೆಚ್ಚು ಚರ್ಚೆಗೊಳಗಾಗುತ್ತಿದೆ. ಮಾಧ್ಯಮಗಳು ನ್ಯಾಯಾಲಯಗಳ ಮಹತ್ವದ ತೀರ್ಪುಗಳನ್ನು ದಿನಗಟ್ಟಲೆ ಚರ್ಚಿಸುತ್ತವೆ, ವಿಶ್ಲೇಷಿಸುತ್ತವೆ, ಸಂವಾದಗಳ ಮೂಲಕ ವಿಷಯದ ಆಳಕ್ಕೆ ಹೋಗಿ ಸಮಾಜದ ಎಲ್ಲಾ ಸ್ತರದ ಬುದ್ಧಿಜೀವಿಗಳಿಗೂ ಬೌದ್ಧಿಕ ಕಸರತ್ತು ನೀಡುತ್ತವೆ. ಮುದ್ರಣ ಮಾಧ್ಯಮಗಳಲ್ಲಿ ಅಂಕಣಕಾರರು ನ್ಯಾಯಾಂಗದ ತೀಪರ್ುಗಳ ಬಗ್ಗೆ ತೀವ್ರ ಗಂಭೀರತೆಯಿಂದ ವಿಶ್ಲೇಷಿಸುತ್ತಾರೆ. ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಯಾವುದೋ ಒಂದು ರೀತಿಯ ಸಮಸ್ಯೆ, ಬಿಕ್ಕಟ್ಟು, ಗೊಂದಲಗಳು ತಲೆದೋರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಇದು ಸಹಜ, ಸ್ವಾಭಾವಿಕ. ಮೀಡಿಯಾ ಸೆನ್ಸೇಷನಲಿಸಂ, ಅಂದರೆ ಸುದ್ದಿಗಳನ್ನು ರಂಜನೀಯಗೊಳಿಸುವ ಮಾಧ್ಯಮಗಳ ಪ್ರವೃತ್ತಿ ಟೀಕೆಗೊಳಗಾದಷ್ಟೇ ಪ್ರಶಂಸೆ ಪಡೆದದ್ದೂ ಉಂಟು.
ಆದರೂ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ಮಹತ್ತರ ತೀರ್ಪು ಯಾವುದೇ ಮಾಧ್ಯಮಗಳಲ್ಲಿ ಚರ್ಚೆಯಾಗುವುದಿರಲಿ, ಪ್ರಸ್ತಾಪವೂ ಆಗದಿರುವ ಮಟ್ಟಿಗೆ ನಿರ್ಲಕ್ಷ್ಯಕ್ಕೊಳಗಾಗಿರುವುದು ಅಚ್ಚರಿ ಮೂಡಿಸುತ್ತದೆ. ಒಂದು ಸಣ್ಣ ಗುಂಪಿನ ಮಹಿಳೆಯರಿಗೆ ಸಂಬಂಧಿಸಿದ ಈ ತೀರ್ಪು ಸಾರ್ವಜನಿಕವಾಗಿ ಏಕೆ ಚರ್ಚೆಯಾಗಬೇಕು ಎಂಬ ಪ್ರಶ್ನೆಯೂ ಉದ್ಭವಿಸಬಹುದು. ಆದರೂ ಈ ಮಹತ್ತರ ತೀರ್ಪಿನ ಹಿನ್ನೆಲೆ ಮತ್ತು ಇತಿಹಾಸವನ್ನು ನೋಡಿದಾಗ ನಾವು ಎಡವಿರುವುದೆಲ್ಲಿ ಎಂದು ತಿಳಿಯುತ್ತದೆ. 2005ರಲ್ಲಿ ಏರ್ ಇಂಡಿಯಾ ಸಂಸ್ಥೆ ತನ್ನ ಮಹತ್ತರವಾದ ಒಂದು ನಿರ್ಣಯದ ಮೂಲಕ, ವಿಮಾನ ಚಾಲನಾ ಮೇಲ್ವಿಚಾರಣೆಗೆ ಪುರುಷರು ಮಾತ್ರ ಅರ್ಹರೆಂಬ ನಿಯಮವನ್ನು ಬದಲಾಯಿಸಿ ಮಹಿಳೆಯರೂ ಈ ಹುದ್ದೆಯನ್ನು ನಿರ್ವಹಿಸಬಹುದು ಎಂದು ತೀರ್ಮಾನಿಸಿತ್ತು. ಲಿಂಗ ಸಮಾನತೆಯನ್ನು ಕಾಪಾಡುವಲ್ಲಿ ಎಂದೂ ಆಸ್ಥೆ ವಹಿಸದ ಈ ಸಂಸ್ಥೆ ಮಹಿಳಾ ಪೈಲಟ್ಗಳಿಗೆ ಇಂತಹ ಒಂದು ಅವಕಾಶವನ್ನು ಒದಗಿಸಿದ್ದು ಐತಿಹಾಸಿಕ ಹೆಜ್ಜೆಯಾಗಿತ್ತು. ಏರ್ ಇಂಡಿಯಾದ ಈ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾ. ಅಲ್ತಮಸ್ ಕಬೀರ್ ಮತ್ತು ಸಿರಿಯಾಕ್ ಜೋಸೆಫ್ ಪೀಠ ಎತ್ತಿಹಿಡಿದು ನವಂಬರ್ 17ರಂದು ತೀರ್ಪು ಹೊರಡಿಸಿತ್ತು. ಇದು ಸುದ್ದಿಯಾಗಲೇ ಇಲ್ಲ !
ಪ್ರತಿರೋಧದ ದನಿಗಳು
ಈ ಪ್ರಕರಣದ ಕುತೂಹಲಕಾರಿ ಅಂಶವೆಂದರೆ ಸಂಸ್ಥೆಯ ಈ ನಿರ್ಣಯವನ್ನು ಪುರುಷ ಪೈಲಟ್ಗಳು ವಿರೋಧಿಸಿ ನ್ಯಾಯಾಯಲದ ಮೆಟ್ಟಿಲೇರಿದ್ದು. 2007ರಲ್ಲಿ ದೆಹಲಿ ಉಚ್ಚ ನ್ಯಾಯಾಲಯವು ಏರ್ ಇಂಡಿಯಾದ ಈ ನಿರ್ಧಾರವನ್ನುವನ್ನು ಸಿಂಧು ಎಂದು ಘೋಷಿಸಿತ್ತು. ಏರ್ ಇಂಡಿಯಾ ಇತಿಹಾಸದಲ್ಲಿ ಮಹಿಳಾ ಪೈಲಟ್ಗಳು ತಮ್ಮ ಸಮಾನ ಹಕ್ಕುಗಳನ್ನು ಪಡೆದುಕೊಳ್ಳಲು ಪಟ್ಟಿರುವ ಶ್ರಮ ಮತ್ತು ಕ್ರಮಿಸಿರುವ ಕಠಿಣ ಹಾದಿಯನ್ನು ಅರಿಯಲು ಈ ತೀರ್ಪನ್ನು ಒಮ್ಮೆ ಓದುವುದು ಅಗತ್ಯ ಎನಿಸುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ವಿಭಿನ್ನ ನಿವೃತ್ತಿ ವಯಸ್ಸು, ವಿವಾಹವಾದ ನಾಲ್ಕು ವರ್ಷಗಳೊಳಗೆ ಗರ್ಭವತಿಯಾದರೆ ನೌಕರಿಗೆ ರಾಜೀನಾಮೆ ನೀಡುವುದು, ಒಂದು ನಿರ್ದಿಷ್ಟ ತೂಕವನ್ನು ಮೀರಿದರೆ ಮಹಿಳೆಯರನ್ನು ವಜಾ ಮಾಡುವುದು ಇವೇ ಮುಂತಾದ ಸೇವಾನಿಯಮಗಳು ಏರ್ ಇಂಡಿಯಾ ಇತಿಹಾಸದಲ್ಲಿ ಕಾಣುತ್ತವೆ.
ಈ ಎಲ್ಲಾ ಸೇವಾ ನಿಯಮಗಳ ವಿರುದ್ಧ ಮಹಿಳಾ ಪೈಲಟ್ಗಳು ಪುರುಷರಿಗೆ ಸಮಾನವಾದ ಹಕ್ಕು ಮತ್ತು ಸವಲತ್ತುಗಳಿಗಾಗಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಅನ್ಯ ನಿಯಮಗಳಿಗಿಂತಲೂ ಚಾಲನಾ ಮೇಲ್ವಿಚಾರಣೆಯ ಹುದ್ದೆ ಪುರುಷರಿಗಷ್ಟೇ ಮೀಸಲಾಗಿದ್ದುದು ಕುತೂಹಲಕಾರಿ ನಿಯಮವಾಗಿತ್ತು. ಈ ನಿಯಮದ ಪರಿಣಾಮವಾಗಿ ಅನೇಕ ಹಿರಿಯ ಮಹಿಳಾ ಸಿಬ್ಬಂದಿಗಳು ಪುರುಷರಿಗೆ ತರಬೇತಿ ನೀಡುವಷ್ಟು ಸಾಮಥ್ರ್ಯ ಹೊಂದಿದ್ದರೂ ಅವರ ಕೈಕೆಳಗೇ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಏಕೆಂದರೆ ಸೇವಾ ಹಿರಿತನ ಅವರಿಗೆ ಮೇಲ್ವಿಚಾರಕ ಹುದ್ದೆಗೆ ಅರ್ಹರನ್ನಾಗಿ ಮಾಡುತ್ತಿರಲಿಲ್ಲ. ಖಾಸಗಿ ಏರ್ಲೈನ್ ಕಂಪನಿಗಳು ಬಂದ ಮೇಲೆ ಅಲ್ಲಿ ಯಾವುದೇ ತಾರತಮ್ಯ ಇಲ್ಲದಿದ್ದರೂ ಏರ್ ಇಂಡಿಯಾ ತನ್ನ ನಿಯಮಗಳನ್ನು ಬದಲಿಸಿರಲಿಲ್ಲ. ಆದರೆ ಒತ್ತಡಗಳಿಗೆ ಮಣಿದು ಏರ್ ಇಂಡಿಯಾ ಆಡಳಿತ ಮಂಡಲಿ ತನ್ನ ಸೇವಾ ನಿಯಮವನ್ನು ಬದಲಿಸಿದಾಗ ಪುರುಷ ಪೈಲಟ್ಗಳು ಈ ತಾರತಮ್ಯ ನೀತಿಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.
2007ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಉಚ್ಚ ನ್ಯಾಯಾಲಯ ತನ್ನ ತೀಪರ್ಿನಲ್ಲಿ ಚಾಲನಾ ಮೇಲ್ವಿಚಾರಕ ಹುದ್ದೆ ವಿಮಾನ ಸಿಬ್ಬಂದಿಯ ಪೈಕಿ ಯಾರಾದರೂ ನಿರ್ವಹಿಸಬಹುದಾದ ಕೆಲಸವಾಗಿದೆ. ಯಾವುದೇ ಒಪ್ಪಂದಗಳಲ್ಲೂ ಸಹ ಏರ್ ಇಂಡಿಯಾ ಸಂಸ್ಥೆ ಮಹಿಳೆಯರು ಈ ಕೆಲಸವನ್ನು ನಿರ್ವಹಿಸಕೂಡದು ಎಂಬ ಷರತ್ತನ್ನು ಅನುಮೋದಿಸಿರುವುದಿಲ್ಲ. ಅಥವಾ ಸುಪ್ರೀಂ ಕೋಟರ್್ ಈ ರೀತಿ ಎಲ್ಲಿಯೂ ಹೇಳಿರುವುದಿಲ್ಲ. 2005ರ ತನ್ನ ನಿರ್ಣಯದ ಮೂಲಕ ಏರ್ ಇಂಡಿಯಾ ಸಂಸ್ಥೆ ಪುರುಷ ಪೈಲಟ್ಗಳಿಗೆ ಯಾವುದೇ ರೀತಿಯ ಅನ್ಯಾಯ ಎಸಗಿಲ್ಲ, ಬದಲಾಗಿ ಮಹಿಳಾ ಪೈಲಟ್ಗಳ ವಿರುದ್ಧ ಇದ್ದ ತಾರತಮ್ಯವನ್ನು ಹೋಗಲಾಡಿಸಿದೆ. ಏರ್ ಇಂಡಿಯಾದ ಈ ನಿರ್ಣಯವನ್ನು ಅಸಿಂಧುಗೊಳಿಸಬೇಕೆಂಬ ಪುರುಷ ನೌಕರರ ಆಗ್ರಹವನ್ನು ಮಾನ್ಯ ಮಾಡಲಾಗುವುದಿಲ್ಲ. ಎಂದು ಹೇಳಿರುವುದು ಐತಿಹಾಸಿಕ ಎಂದೇ ಹೇಳಬಹುದು.
ತಮಗಿಂತಲೂ ಹಿರಿಯರಾದರೂ ಮಹಿಳೆಯರ ಅಧೀನ ತಾವು ಕೆಲಸ ಮಾಡುವುದಿಲ್ಲ ಎಂದು ವಾದಿಸಿದ್ದ ಪುರುಷ ಪೈಲಟ್ಗಳು, ವಿಮಾನ ಚಾಲನೆಯಲ್ಲಿ ಪುರುಷ ಮತ್ತು ಮಹಿಳೆಯರ ಕಾರ್ಯ ನಿರ್ವಹಣೆ ವಿಭಿನ್ನವಾಗಿರುವುದರಿಂದ ಮಹಿಳೆಯರು ಇಲ್ಲಿ ಸಮಾನತೆಗಾಗಿ ಹೋರಾಡುವುದು ಸಾಧುವಲ್ಲ ಎಂದು ವಾದಿಸಿದ್ದರು. ಆದರೆ ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಪುರುಷರಾಗಲಿ, ಮಹಿಳೆಯರಾಗಲಿ ಮಾಡುವ ಕೆಲಸ ಒಂದೇ ತೆರನಾದದ್ದು ಎಂಬ ಸಂಗತಿ ಅರಿವಾಗಿರುತ್ತದೆ. ಸ್ವಾಗತ ಕೋರುವುದು, ತಿಂಡಿ ತಿನಿಸು ಒದಗಿಸುವುದು, ಶುಚಿ ಮಾಡುವುದು, ರಕ್ಷಣಾ ನಿಯಮಗಳ ಬಗ್ಗೆ ತಿಳಿಸುವುದು ಈ ಎಲ್ಲಾ ಕೆಲಸಗಳನ್ನು ಮಹಿಳೆಯರೂ ಅಷ್ಟೇ ದಕ್ಷತೆಯಿಂದ ಮಾಡುವುದು ಕಣ್ಣಿಗೆ ಕಾಣುವ ಸತ್ಯ.
ಆದರೆ ಈ ಅಂಶಗಳು ಪುರುಷ ನೌಕರರ ಗಮನಕ್ಕೆ ಬರಲೇ ಇಲ್ಲ. ಹಾಗಾಗಿ ತಾರತಮ್ಯದ ನೆಪದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದು ಏರ್ಇಂಡಿಯಾ ಸಂಸ್ಥೆಯನ್ನು 21ನೆಯ ಶತಮಾನಕ್ಕೆ ಪ್ರವೇಶಿಸುವಂತೆ ಮಾಡಿದೆ. ಮಹಿಳಾ ಪೈಲಟ್ಗಳ ಈ ಹೋರಾಟ ಹಲವು ಕಾರಣಗಳಿಗಾಗಿ ಮಹತ್ವ ಗಳಿಸುತ್ತವೆ. ಬಹುಪಾಲು ಮಹಿಳೆಯರು ಈ ನ್ಯಾಯಾಲಯದ ಗೋಜಿಗೇ ಹೋಗದೆ ಸಂಸ್ಥೆಯ ನಿಯಮಗಳಿಗೇ ಬದ್ಧರಾಗಿ ಕಾಲಕಳೆಯುವ ಮನೋಭಾವ ಹೊಂದಿರಬಹುದು. ಏಕೆಂದರೆ ಇಲ್ಲಿ ನೌಕರಿಯ ಭದ್ರತೆ ಇದೆ. ಆದರೆ ಕೆಲವು ದಿಟ್ಟ ಮಹಿಳಾ ನೌಕರರ ಛಲ ಮತ್ತು ಹೋರಾಟದ ಮನೋಭಾವ ಇಂತಹ ತಾರತಮ್ಯ ನೀತಿಗಳ ವಿರುದ್ಧ ದನಿ ಎತ್ತುವಂತೆ ಮಾಡಿದೆ. ಈ ಕೆಲವೇ ಮಹಿಳೆಯರ ಹೋರಾಟದ ಫಲವಾಗಿ ಮುಂದಿನ ದಿನಗಳಲ್ಲಿ ಏರ್ ಇಂಡಿಯಾದಲ್ಲಿ ನೌಕರಿ ಪಡೆಯುವ ಮಹಿಳೆಯರು ಸಮಾನ ಹಕ್ಕುಗಳನ್ನು ಪಡೆಯುತ್ತಾರೆ.
ನಮ್ಮ ಸಮಾಜದಲ್ಲಿ ಯಾವುದೇ ರೀತಿಯ ತಾರತಮ್ಯ ನೀತಿಗಳು ತಂತಾನೇ ಕೊನೆಗೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಪ್ರಕರಣ ಮತ್ತೊಮ್ಮೆ ಸಾರಿ ಹೇಳಿದೆ. ಯಾವುದೇ ಕ್ಷೇತ್ರದಲ್ಲಿನ ಆಡಳಿತ ಮಂಡಲಿ ಪುರುಷ ಪ್ರಧಾನ ಮನೋಭಾವದಿಂದಲೇ ಕೂಡಿದ್ದು ಮಹಿಳೆಯರ ಹೋರಾಟದ ಮೂಲಕವೇ ಸಮಾನತೆಯನ್ನು ಗಳಿಸಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನೂ ನೀಡಿದೆ. ನ್ಯಾಯಾಲಯದ ತೀರ್ಮಾನ, ಏರ್ಲೈನ್ಸ್ ಮಹಿಳಾ ನೌಕರರ ಗೆಲುವು ಒತ್ತಟ್ಟಿಗಿರಲಿ, ಈ ಐತಿಹಾಸಿಕ ತೀಪರ್ು ಮಾಧ್ಯಮಗಳ ಗಮನ ಸೆಳೆಯದೆ ಹೋದದ್ದು ಮಾತ್ರ ಅಚ್ಚರಿ ಮೂಡಿಸುತ್ತದೆ.
ನಾ ದಿವಾಕರ]]>
ಬೆಳಕು ಕಾಣದ ಒಂದು ಅಪೂರ್ವ ಘಟನೆ – ನಾ ದಿವಾಕರ್
ನಿಮಗೆ ಇವೂ ಇಷ್ಟವಾಗಬಹುದು…





0 Comments