ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆನ್ನಿಗಂಟಿರುವ ಅವಳ ಮಗುವಿಗೆ ಹಸಿವಾಗಿದೆ..

ಝುಂಗೇರಾ ಮಹಿಳೆಯರ ಜಾಡು ಹಿಡಿದು..

ಪ್ರಸಾದ್ ನಾಯ್ಕ್ 

ಅಂಗೋಲಾದಿಂದ

“ಈ ಮಹಿಳೆಯರಿಗಿರುವ ಒಂದು ಪ್ರತಿಶತ ಬದ್ಧತೆಯಾದರೂ ಇಲ್ಲಿಯ ಪುರುಷರಿಗಿದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು!”, ಎನ್ನುತ್ತಿದ್ದರು ಡಾ. ಗೌರ್.

ಡಾ. ಗೌರ್ ಕೇಂದ್ರ ಸರ್ಕಾರದ ಮಂತ್ರಾಲಯವೊಂದರ ಉನ್ನತ ಹುದ್ದೆಯಿಂದ ನಿವೃತ್ತರಾದವರು. ಸಮಾಜಶಾಸ್ತ್ರದ ಬಗ್ಗೆ ಪುಸ್ತಕಗಳನ್ನು ಬರೆದು ಪ್ರಕಟಿಸಿದವರು. ಕೆಲ ವರ್ಷಗಳ ಕಾಲ ಉಪನ್ಯಾಸಕರಾಗಿಯೂ ಕೂಡ ಸೇವೆ ಸಲ್ಲಿಸಿದವರು. ಹಲವು ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವವರು. ವಯಸ್ಸು ಎಪ್ಪತ್ತು ದಾಟಿದರೂ ಇಂದಿಗೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಉದ್ಯೋಗನಿಮಿತ್ತವಾಗಿ ಹಲವು ದೇಶಗಳನ್ನು ಸುತ್ತುವವರು.

ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದೇ ಅದರಲ್ಲಿರುವ ಪುಟಗಳನ್ನು ತುಂಬಿಸಲು ಎನ್ನುವಷ್ಟು ಜಗತ್ತಿನ ಉದ್ದಗಲಗಳನ್ನು ಸುತ್ತಿ ಬಂದಿದ್ದಾರೆ ಡಾ. ಗೌರ್. ತಮ್ಮ ಕರ್ತವ್ಯದಲ್ಲೇ ಸಾರ್ಥಕತೆಯನ್ನು ಕಾಣುವಂತಿರುವ ಇವರ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ದಿನಕ್ಕೆ ನಾಲ್ಕೇ ನಾಲ್ಕು ಗಂಟೆಗಳನ್ನು ಪಡೆದುಕೊಂಡಿದ್ದು ನಿದ್ದೆಯ ಪುಣ್ಯವೆಂದೇ ಹೇಳಬೇಕು.

ಇಂತಿಪ್ಪ ಡಾ. ಗೌರ್ ಈ ಬಾರಿ ನನ್ನೊಂದಿಗೆ ಸುತ್ತುತ್ತಿದ್ದಿದ್ದು ಅಂಗೋಲಾದ ಬೀದಿಗಳನ್ನು. ವಿಶ್ವಬ್ಯಾಂಕ್ ಪ್ರಾಯೋಜಿತ ಈ ಯೋಜನೆಗೆ ಸೋಷಿಯಲ್ ಸೇಫ್-ಗಾರ್ಡ್ ತಜ್ಞರಾಗಿ ಬಂದಿದ್ದ ಡಾ. ಗೌರ್ ರವರೊಂದಿಗೆ ಸಹೋದ್ಯೋಗಿಯಾಗಿ ನಾನು ಹೆಜ್ಜೆಹಾಕುತ್ತಿದ್ದೆ. ನಾವಿರುವ ವೀಜ್ ಎಂಬ ಪುಟ್ಟ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುತ್ತುತ್ತಾ ಈ ನೀರಾವರಿ ಯೋಜನೆಯ ಬಗ್ಗೆ ಗ್ರಾಮಸ್ಥರ ಅಭಿಪ್ರಾಯವನ್ನು ಪಡೆದು ತತ್ಸಂಬಂಧಿ ಅಭಿವೃದ್ಧಿಗಾಗಿ ಏನೇನು ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ವಿಸ್ತೃತವಾದ ವರದಿಯೊಂದನ್ನು ಸಿದ್ಧಪಡಿಸಬೇಕಿತ್ತು. ಮಾರ್ಗಮಧ್ಯದಲ್ಲಿ ಆಫ್ರಿಕಾದ ಇತರ ದೇಶಗಳ ಜೀವನದ, ಬವಣೆಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ಡಾ. ಗೌರ್ ವಿವರಿಸುತ್ತಾ ಹೋಗುತ್ತಿದ್ದರೆ ಅಂಗೋಲಾದ ಬಗ್ಗೆ ಹೇಳುತ್ತಾ ಅವರನ್ನು ನಾನು ಮಾನಸಿಕವಾಗಿ ಸಿದ್ಧಪಡಿಸುತ್ತಿದ್ದೆ. ಏಕೆಂದರೆ ಎರಡನೇ ಸುತ್ತಿನ ಅಧ್ಯಯನಕ್ಕೆಂದು ಅಂಗೋಲಾಗೆ ಈ ಬಾರಿ ಬಂದಿದ್ದ ಡಾ. ಗೌರ್ ನನ್ನೊಂದಿಗೆ ಮಾಡಬೇಕಾಗಿದ್ದ ಕೆಲಸಗಳು ಸಾಕಷ್ಟಿದ್ದವು.

ಅಂಗೋಲಾಕ್ಕೆ ಕಾಲಿಟ್ಟು ನೆಟ್ಟಗೆ ಎರಡು ಗಂಟೆಯೂ ಆಗಿರಲಿಕ್ಕಿಲ್ಲ. ಮಾತುಮಾತಲ್ಲೇ ಅಂಗೋಲನ್ ಮಹಿಳೆಯರ ಬಗ್ಗೆ ಪ್ರಶಂಸೆಯ ಮಾತೊಂದು ಅವರ ಬಾಯಿಯಿಂದ ಹೊರಬಿದ್ದಿತ್ತು. ಬಹುತೇಕ ಎಲ್ಲಾ ಆಫ್ರಿಕನ್ ಮಹಿಳೆಯರದ್ದೂ ಇದೇ ಕಥೆ ಎಂದಿದ್ದರು ಅವರು. ಈ ಬಗ್ಗೆ ಓದಿಯಷ್ಟೇ ತಿಳಿದುಕೊಂಡಿದ್ದ ನಾನು ಹೌದೆಂದು ತಲೆಯಲ್ಲಾಡಿಸಿದ್ದೆ.

ಮೊಟ್ಟಮೊದಲ ಬಾರಿಗೆ ಭಾರತದಿಂದ ಹೊರಬಿದ್ದಿದ್ದ ನಾನು ಅಂಗೋಲಾಕ್ಕೆ ಬಂದಿಳಿದಾಗ ನನ್ನನ್ನು ಅಚ್ಚರಿಗೊಳಿಸಿದ್ದೂ ಈ ಮಹಿಳೆಯರೇ. ವಾಹನಗಳಿಂದ ಗಿಜಿಗುಡುವ ಹೆದ್ದಾರಿಯ ಎರಡೂ ಬದಿಗಳಲ್ಲಿ ತಲೆಯ ಮೇಲೆ ಭಾರದ ಸಾಮಾನುಗಳನ್ನು ಹೊತ್ತು ವ್ಯಾಪಾರ ಮಾಡುವ ಹೆಂಗಸರು ಅದೇ ವೇಗದಲ್ಲಿ ಆ ಜನನಿಬಿಡ ರಸ್ತೆಗಳನ್ನು ದಾಟುವುದನ್ನೂ ಕಂಡಾಗ ಯಾರಿಗೂ ಅಚ್ಚರಿಯಾಗಲೇಬೇಕು. ನನ್ನಂತಹ ಸಾಮಾನ್ಯರಿಗೆ ಅದೊಂದು ಸಿನಿಮೀಯ ಸ್ಟಂಟ್ ಇದ್ದಂತೆ.

‘ಇವರನ್ನು ಝುಂಗೇರಸ್ ಎನ್ನುತ್ತಾರೆ’ ಎಂದಿದ್ದ ನನ್ನೊಂದಿಗಿದ್ದ ದುಭಾಷಿ ಮಹಾಶಯ ಮಿಗೆಲ್ ಎಂಬೋಸೋ. ಅಂದಿನಿಂದಲೇ ಝುಂಗೇರಸ್ ಎಂದು ಕರೆಯಲ್ಪಡುವ ಈ ಶ್ರಮಜೀವಿ ಮಹಿಳೆಯರು ನನ್ನನ್ನು ಕಾಡತೊಡಗಿದ್ದರು. ನೀವು ಅಂಗೋಲಾಕ್ಕೆ, ಅದರಲ್ಲೂ ರಾಜಧಾನಿಯಾದ ಲುವಾಂಡಾಗೆ ಬಂದಿರೆಂದರೆ ನಿಮಗೆ ಕಣ್ಣುಹಾಯಿಸಿದಲ್ಲೆಲ್ಲಾ ಕಾಣಸಿಗುವುದು ಎರಡೇ ಎರಡು ದೃಶ್ಯಗಳು. ಒಂದು ಕಂದೊಂಗೈರು ಎಂಬ ಹೆಸರಿನ ಸಾರ್ವಜನಿಕರ ಸಂಚಾರ ವ್ಯವಸ್ಥೆಗೆಂದು ಇರಿಸಲಾಗಿರುವ ಬಿಳಿ-ನೀಲಿ ಬಣ್ಣದ ವ್ಯಾನುಗಳು ಮತ್ತು ಝುಂಗೇರಸ್ ಎಂದು ಕರೆಯಲ್ಪಡುವ ಮಹಿಳೆಯರು.

ತಲೆಯ ಮೇಲೆ ಸಾಮಾನು ತುಂಬಿರುವ ಒಂದು ಮೂಟೆ ಅಥವಾ ಬಕೆಟ್. ಎರಡೂ ಕೈಗಳಲ್ಲಿ ನೇತಾಡುತ್ತಿರುವ ಪಾರದರ್ಶಕ ಪ್ಲಾಸ್ಟಿಕ್ ಚೀಲದಲ್ಲೂ ಕೆಲ ಸಾಮಾನುಗಳು. ಎದೆಯ ಸುತ್ತ ಬಿಗಿಯಾಗಿ ಕಟ್ಟಿಕೊಂಡ ಬಟ್ಟೆಯು ಆಕೆಯ ಬೆನ್ನಿಗೆ ಪಿಳಿಪಿಳಿ ಕಣ್ಣುಬಿಟ್ಟು ಜಗತ್ತನ್ನು ಅಚ್ಚರಿಯಿಂದ ನೋಡುತ್ತಿರುವ ತನ್ನ ಮಗುವನ್ನೂ ಅಂಟಿಸಿಕೊಂಡಿದೆ. ಝುಂಗೇರಾಗಳು ನಮಗೆ ಕಾಣಸಿಗುವುದು ಹೀಗೆ. ಸೂರ್ಯ ಏಳುವುದಕ್ಕೂ ಮುನ್ನ ಎದ್ದು ದಿನವಿಡೀ ಈ ಸಾಮಾನು ಸರಂಜಾಮುಗಳೊಂದಿಗೆ ಅಲೆಯುತ್ತಾ ಹೊಟ್ಟೆಪಾಡಿಗಾಗಿ ಅವುಗಳನ್ನು ಮಾರಾಟ ಮಾಡುವುದು ಅವರ ನಿತ್ಯದ ಕರ್ಮ. ದಿನವಿಡೀ ಬಿಸಿಲು ಮಳೆಯೆನ್ನದೆ ರಸ್ತೆಯ ಇಕ್ಕೆಲಗಳಲ್ಲೂ ಅಡ್ಡಾಡುತ್ತಾ, ತಲೆಯ ಮೇಲಿರುವ ಭಾರವನ್ನು ಬ್ಯಾಲೆನ್ಸ್ ಮಾಡುತ್ತಾ, ವಾಹನಗಳ ನಡುವಿನ ಇಕ್ಕಟ್ಟುಗಳನ್ನು ಸೀಳುತ್ತಾ ಇವರುಗಳು ಲಗುಬಗೆಯಿಂದ ರಸ್ತೆ ದಾಟುವುದನ್ನು ನೋಡುವುದೇ ಒಂದು ವಿಚಿತ್ರ.

ಇನ್ನು ಅವಳ ತಲೆಯ ಮೇಲಿರುವ ಮೂಟೆಯಲ್ಲಿ ಏನುಂಟು ಏನಿಲ್ಲ ಎನ್ನುವಷ್ಟು ವೈವಿಧ್ಯತೆ. ಹೆದ್ದಾರಿಗಳ ಇಕ್ಕೆಲಗಳಲ್ಲಿ ಪೆನ್ನು, ಪೆನ್ಸಿಲು, ಪುಸ್ತಕ, ಹಣ್ಣು, ಬಿಸ್ಕತ್ತು, ಕೀಚೈನು, ಟೋಪಿ, ಸಾಬೂನು, ಕ್ರೀಮು, ಬಾಚಣಿಗೆ, ಟಾರ್ಚ್, ಪಾಷಾಣ, ಮೊಬೈಲ್ ಚಾರ್ಜರ್, ಹೆಡ್ ಸೆಟ್, ಕನ್ನಡಕ, ಬೀಗ, ಡೈರಿ, ನೆಲಕಡಲೆ, ಬನ್ನು, ಮೀನು ಇತ್ಯಾದಿಗಳಾದರೆ ಸಮುದ್ರತೀರದಲ್ಲಾದರೆ ಈಜುಡುಗೆಗಳು, ಒಳಉಡುಪುಗಳು, ತಿಂಡಿತಿನಿಸುಗಳು… ಹೀಗೆ ನಗರದ ಇಡೀ ಮಾರುಕಟ್ಟೆಯನ್ನೇ ಸಂಚಾರಿ ಮಾರುಕಟ್ಟೆಯನ್ನಾಗಿ ಮಾರ್ಪಡಿಸಿದ ಖ್ಯಾತಿ ಇವರಿಗೆ ಸಲ್ಲಬೇಕು.

ಅಂಗೋಲಾದ ರಣಬಿಸಿಲಿನಲ್ಲಿ ಸೂರ್ಯನ ಕಿರಣಗಳಿಗೆ ಸಡ್ಡುಹೊಡುವಂತೆ ಝುಂಗೇರಸ್ ಗಳು ಚಟುವಟಿಕೆಯಿಂದ ಓಡಾಡಿಕೊಂಡಿರುವುದಕ್ಕೆ ಬಿಸಿಲಿನಿಂದ ಮತ್ತಷ್ಟು ಕಪ್ಪಾದಂತಿರುವ ಇವರ ಚರ್ಮವೂ, ಧಾರಾಕಾರವಾಗಿ ಇಳಿಯುತ್ತಿರುವ ಬೆವರ ಹನಿಗಳೂ ಸಾಕ್ಷಿ. ದಾರಿಮಧ್ಯೆ ಸಿಕ್ಕ ನೆರಳಿನ ಮೂಲೆಯೊಂದರಲ್ಲಿ ಬೆನ್ನಿಗೆ ಕಟ್ಟಿದ ಮಗುವನ್ನು ನಾಜೂಕಾಗಿ ಇಳಿಸಿ ಅದಕ್ಕೆ ಹಾಲುಣಿಸಲು ಮೊಲೆಯನ್ನು ಕೊಟ್ಟರೆ, ಜೊತೆಗೇ ಒಂದೆರಡು ಬಾಳೆಹಣ್ಣನ್ನು ತಿಂದು ಹಸಿವೆಯನ್ನು ನೀಗಿಸಿಕೊಳ್ಳುವುದನ್ನು ಬಿಟ್ಟರೆ ಮತ್ಯಾವ ವಿರಾಮದ ಅವಧಿಯೂ ಈ ಶ್ರಮಜೀವಿಗಳಿಗಿಲ್ಲ.

ಬಡತನದಂತೆ ನಿರುದ್ಯೋಗವೂ ಅಂಗೋಲಾಕ್ಕೆ ಬಡಿದ ಶಾಪವೇ. ಹಾಗಂತ ಗಂಡಸಿನಷ್ಟು ಸುಲಭವಾಗಿ ದಿಢೀರ್ ಹಣ ಮಾಡುವ ಧಂಧೆಗಿಳಿಯುವುದಿಲ್ಲ ಅಂಗೋಲನ್ ಗ್ರಾಮೀಣ ಮಹಿಳೆ. ಆ ಮಟ್ಟಿಗೆ ಅವಳ ಸ್ವಾಭಿಮಾನವು ಮೆಚ್ಚತಕ್ಕದ್ದು. ಗಂಡಸಿನಂತೆ ದಿನವಿಡೀ ಇಸ್ಪೀಟು ಆಡುತ್ತಾ ಕಾಲಹರಣ ಮಾಡುವುದು, ಕಂಡವರ ಕಾಸಿನಲ್ಲಿ ಸಾರಾಯಿ ಕುಡಿದು ಮೋಜು ಮಾಡುವುದು, ವೇಶ್ಯಾವಾಟಿಕೆಗಳಿಗೆ ಹೋಗುವುದು, ಪುಡಿಗಾಸಿಗಾಗಿ ಕಳ್ಳತನ-ಕೊಲೆಗಳನ್ನು ಮಾಡಿ ಜೈಲು ಸೇರುವುದು ಇತ್ಯಾದಿಗಳು ಆಕೆಯ ಆಯ್ಕೆಯಲ್ಲ.

ಮನೆಯ ಗಂಡಸು ಬೆಂಕಿಪೊಟ್ಟಣದಂತಿರುವ ಪುಟ್ಟ ಇಟ್ಟಿಗೆಯ ಮನೆಯು ತುಂಬಿಹೋಗುವಷ್ಟು ಮಕ್ಕಳನ್ನು ಕರುಣಿಸಿ ಆಲಸ್ಯವೆಂದೋ, ಮೈಗಳ್ಳತನವೆಂದೋ ಅಥವಾ ನಿಜಕ್ಕೂ ಉದ್ಯೋಗವಿಲ್ಲವೆಂದು ಕೈ ಚೆಲ್ಲಿ ಕುಳಿತಾಗ ಥಟ್ಟನೆ ಎದ್ದು ನಿಂತು ಸಂಸಾರದ ನೊಗ ಹೊರುವವಳು ಅವಳು. ತನ್ನ ಮತ್ತು ತನ್ನ ಕುಟುಂಬದ ಭವಿಷ್ಯಕ್ಕಾಗಿ ತಾನು ಬೀಡುಬಿಟ್ಟ ಹಳ್ಳಿಯಿಂದ ನೂರಾರು ಕಿಲೋಮೀಟರುಗಳ ದೂರದಲ್ಲಿರುವ ರಾಜಧಾನಿಯವರೆಗೆ ಬಂದು ಮಳೆ ಬಿಸಿಲುಗಳ ಪರಿವೆಯಿಲ್ಲದೆ ಮೈಮುರಿದು ದುಡಿಯುವವಳು ಅವಳು. ಗರ್ಭಿಣಿ ಹೊಟ್ಟೆಯನ್ನು ಹಿಡಿದುಕೊಂಡು ಆ ರಣಬಿಸಿಲಿನಲ್ಲಿ ಮೈಲುಗಟ್ಟಲೆ ನಡೆಯುವ ಅವಳ ಮುಗಿಯದ ಅಲೆದಾಟವನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟವೇ.

ಇವಿಷ್ಟೇ ಆದರೆ ಬಹುಶಃ ಆಕೆ ಇತರ ಗ್ರಾಮೀಣ ಭಾಗದ ಮಹಿಳೆಯರಂತೆಯೇ ಉಳಿದುಹೋಗುತ್ತಿದ್ದಳು. ಆದರೆ ಅವಳು ಅವಕಾಶ ಸಿಕ್ಕಾಗಲೆಲ್ಲಾ ಮಾರುಕಟ್ಟೆಯಲ್ಲೂ ಒಂದು ಚಾದರವನ್ನು ಹಾಸಿ ಇದ್ದ ವಸ್ತುಗಳನ್ನು ಬಿಡಿಸಿಟ್ಟು ಮಾರಲು ಕೂರುತ್ತಾಳೆ. ಇಲ್ಲಿಯ ಮಾರುಕಟ್ಟೆಗಳ ರಸ್ತೆಬದಿಗಳಲ್ಲಿ ಈ ತರಹದ ವ್ಯಾಪಾರಗಳನ್ನು ನಿಷೇಧಿಸಲಾಗಿದೆಯಾದ್ದರಿಂದ ಹಟಾತ್ತನೆ ಕೆಲ ಪೋಲೀಸ್ ವಾಹನಗಳು ಬಂದು ಈ ಗುಂಪುಗಳನ್ನು ಚದುರಿಸಿಬಿಡುತ್ತವೆ. ಪೋಲೀಸ್ ವಾಹನವೊಂದು ಈ ಇಕ್ಕಟ್ಟಾದ ಮಾರುಕಟ್ಟೆಗಳಲ್ಲಿ ಧೂಳೆಬ್ಬಿಸುತ್ತಾ ರಾಜಾರೋಷವಾಗಿ ಬರುವಾಗ ತಮ್ಮ ಇದ್ದ ವಸ್ತುಗಳನ್ನು ಎದೆಗವಚಿಕೊಂಡು ಇವರುಗಳು ದಿಕ್ಕಾಪಾಲಾಗಿ ಓಡುವುದನ್ನೊಮ್ಮೆ ನೋಡಿದರೆ ಯಾರಿಗಾದರೂ ಕರುಳು ಕಿತ್ತುಬರುತ್ತದೆ.

ಹೊಸದಾಗಿ ಲುವಾಂಡಾದ ಮಾರುಕಟ್ಟೆಯೊಂದಕ್ಕೆ ಕಾಲಿಟ್ಟಿದ್ದ ನಾನು ಒಮ್ಮೆಯಂತೂ ಈ ನೋಟವನ್ನು ನೋಡಿ ತೀವ್ರ ಗೊಂದಲಕ್ಕೊಳಗಾಗಿ ಕಾಲ್ಕಿತ್ತಿದ್ದೆ. ಹಿಂದೊಮ್ಮೆ ಹರಿಯಾಣಾದ ಗುರುಗ್ರಾಮದಲ್ಲಿ ಭೂಕಂಪವಾದಾಗ ಇದೇ ರೀತಿ ಜೀವಭಯದಲ್ಲಿ ಪಲಾಯನಗೈದಿದ್ದನ್ನು ಬಿಟ್ಟರೆ ಜೀವ ಹಿಡಿದುಕೊಂಡು ಓಡಬೇಕಾದ ಪರಿಸ್ಥಿತಿಯು ನನಗೆಂದೂ ಬಂದಿರಲಿಲ್ಲ. ಏದುಸಿರು ಬಿಡುತ್ತಾ ನನ್ನ ದುಭಾಷಿಯಲ್ಲಿ ನಾನು ಕೇಳಿದ್ದೊಂದೇ, “ನೆಲಬಾಂಬ್ ಏನಾದರೂ ಸ್ಫೋಟವಾಯಿತೇ ಹೇಗೆ?”. ಅಂಗೋಲಾದ ಕೆಲಭಾಗಗಳಲ್ಲಿ ಆಂತರಿಕ ಯುದ್ಧದ ಕಾಲದ ನೆಲಬಾಂಬುಗಳು ಇಂದಿಗೂ ಜೀವಂತವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ಹೀಗೆ ಈ ಓಡುವ ಅವಸರದಲ್ಲಿ ಬಹಳಷ್ಟು ವ್ಯಾಪಾರಿಗಳ ವಸ್ತುಗಳು ಅಲ್ಲೇ ಉಳಿದುಹೋಗುತ್ತವೆ. ಅಲ್ಲದೆ ಓಡುವ, ಒಬ್ಬರಿಗೊಬ್ಬರು ಢಿಕ್ಕಿಯಾಗುವ ರಭಸಕ್ಕೆ ಕೆಲ ವಸ್ತುಗಳು ಬಿದ್ದುಹೋಗುವುದೂ ಉಂಟು. ಪೋಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುವುದಕ್ಕಿಂತ ಇಂಥಾ ನಷ್ಟಗಳೇ ಮೇಲು ಎನ್ನುವುದು ಇಲ್ಲಿ ಎಲ್ಲರಿಗೂ ಗೊತ್ತಿರುವ ಸತ್ಯ. ಗ್ರಹಚಾರವೆಂಬಂತೆ ಪೋಲೀಸಪ್ಪನೊಬ್ಬನ ಕೈಗೆ ಸಿಕ್ಕಿ ಬಿದ್ದಿದ್ದೇ ಆದರೆ ಆತ ನಲವತ್ತರಿಂದ ಐವತ್ತು ಸಾವಿರ ಕ್ವಾಂಝಾದಷ್ಟು (ಅಂಗೋಲಾದ ಕರೆನ್ಸಿ) ದಂಡ ಕೇಳುತ್ತಾನೆ.

ಐವತ್ತು ಸಾವಿರ ಅಂಗೋಲನ್ ಕ್ವಾಂಝಾ ಎಂದರೆ ನಮ್ಮ ಬರೋಬ್ಬರಿ ಇಪ್ಪತ್ತೈದು ಸಾವಿರ ರೂಪಾಯಿಗಳಿಗಿಂತ ಕೊಂಚ ಕಮ್ಮಿ. ಇನ್ನು ಆತ ಲಂಚ ಕೀಳುವ ಮೂಡಿನಲ್ಲಿದ್ದರಂತೂ ಮುಗಿದೇಹೋಯಿತು. ಗಂಡುಹೆಣ್ಣೆಂಬ ಭೇದವಿಲ್ಲದೆ ಆತ ಆ ಬಡಪಾಯಿ ವ್ಯಾಪಾರಿಯ ನೀರಿಳಿಸಬಲ್ಲ. ಪೋಲೀಸರಿಗೆ ಇದೊಂದು ಚೆಲ್ಲಾಟವಾದರೆ ಇವರುಗಳಿಗೆ ಪ್ರಾಣಸಂಕಟ. ಹೀಗೆ ಪೋಲೀಸ್ ದಾಳಿಯಾದ ದಿನಗಳಲ್ಲಿ ನಿತ್ಯದ ಸಂಪಾದನೆಯ ಅರ್ಧದಷ್ಟು ಮೊತ್ತವೂ ಇವರುಗಳಿಗೆ ದಕ್ಕುವುದಿಲ್ಲ ಎಂಬುದನ್ನೂ ಹೇಳಲೇಬೇಕಾಗುತ್ತದೆ.

ಹೀಗೆ ಇವೆಲ್ಲವೂ ಗೊತ್ತಿದ್ದೂ ತನ್ನ ಹೊಟ್ಟೆಪಾಡಿಗಾಗಿ ವ್ಯಾಪಾರದ ಅಖಾಡಕ್ಕಿಳಿಯುವ ಅಂಗೋಲನ್ ಮಹಿಳೆ ನಾಲ್ಕು ಕಾಸು ಸಂಪಾದಿಸಬೇಕಿದ್ದರೆ ವ್ಯವಹಾರ ಜ್ಞಾನ, ತಾಳ್ಮೆ, ಬದ್ಧತೆಗಳ ಜೊತೆಗೇ ಚಿರತೆಯಂತೆ ಓಡುವ ಕಲೆಯನ್ನೂ ಸಿದ್ಧಿಸಿಕೊಂಡಿರಬೇಕು. ಆಗಷ್ಟೇ ಆಕೆಗೆ ಮತ್ತು ಆಕೆಯನ್ನು ನಂಬಿದ ಹೊಟ್ಟೆಗಳಿಗೆ ಎರಡು ಹೊತ್ತಿನ ರೊಟ್ಟಿಯು ನಸೀಬಾಗಬಲ್ಲದು. ಕೆಲವೊಮ್ಮೆ ಪೋಲೀಸರ ದೌರ್ಜನ್ಯಗಳು ಮಿತಿಮೀರಿದಾಗ ಝುಂಗೇರಗಳು ತಾಳ್ಮೆ ಕಳೆದುಕೊಂಡು ಪೋಲೀಸರೊಂದಿಗೆ ಘರ್ಷಣೆಗಿಳಿಯುವುದೂ ಉಂಟು. ವಿಯಾನಾದಲ್ಲಿ ಇತ್ತೀಚೆಗಷ್ಟೇ ನಡೆದ ಇಂಥದ್ದೊಂದು ಪ್ರಕರಣದಲ್ಲಿ ಕೆಲ ಝುಂಗೇರಗಳು ಸೇರಿಕೊಂಡು ಪೋಲೀಸ್ ಅಧಿಕಾರಿಯೊಬ್ಬನನ್ನು ಅಕ್ಷರಶಃ ಚಚ್ಚಿಹಾಕಿದರು. ವಿನಾಕಾರಣ ಎಂದೂ ಮೇಲೇಳದ ಬಲಿಷ್ಠ ಕಾರ್ಮಿಕ ಕೈಗಳ ಆರ್ಭಟದೆದುರು ಆ ದಿನ ಲಾಠಿಯೂ ಬಾಲ ಮುದುರಿಕೊಂಡು ಕುಂಯ್ ಎನ್ನಬೇಕಾಗಿ ಬಂದಿತ್ತು.

ಅಂಗೋಲನ್ ಕವಿ ಡೆಸಿಯೋ ಬೆಟೆನ್ಕೋರ್ಟ್ ಮತೆಊಸ್ ಈ ಝುಂಗೇರಸ್ ಮಹಿಳೆಯರ ಬಗ್ಗೆ ಅದೆಷ್ಟು ಮನೋಜ್ಞವಾಗಿ ಬರೆಯುತ್ತಾರೆ ನೋಡಿ.

ಬೆನ್ನಿಗಂಟಿರುವ ಅವಳ ಮಗುವಿಗೆ ಹಸಿವಾಗಿದೆ…
ಸೂರ್ಯ ಇನ್ನಿಲ್ಲದಂತೆ ಸುಡುತ್ತಿದ್ದಾನೆ,
ಸೂರ್ಯ ಇನ್ನಿಲ್ಲದಂತೆ ಅವಳನ್ನು ಬೇಯಿಸುತ್ತಿದ್ದಾನೆ…
ಬೆನ್ನಿಗಂಟಿರುವ ಅವಳ ಮಗುವಿಗೆ ಹಸಿವಾಗಿದೆ…
ಹಸುಳೆಯ ಮೈಸವರುತ್ತಿವೆ ನೊಣಗಳು,
ವಿಚಲಿತಗೊಳಿಸುತ್ತಿವೆ ಕಸದ ಕೊಚ್ಚೆಗಳು…
ಝುಂಗೇರಳ ತಲೆಯ ಮೇಲೆ ಕಟ್ಟಿಟ್ಟಿರುವುದು,
ವ್ಯಾಪಾರ, ಅನ್ನ ಮತ್ತು ಅವಳ ಜೀವನ…
ಮಣ್ಣುಮೆತ್ತಿರುವ ಕಾಲಿನಲ್ಲಿರುವುದು,
ಕಿಲೋಮೀಟರುಗಳಷ್ಟು ದೂರ ನಡೆದುಬಂದ ಆಯಾಸ,
ಜೊತೆಗೇ ಅವಳನ್ನು ಹೈರಾಣಾಗಿಸಿರುವ ಸುಸ್ತು…
ಬೆನ್ನಿಗಂಟಿರುವ ಅವಳ ಮಗುವಿಗೆ ಹಸಿವಾಗಿದೆ…

ಅಂಗೋಲಾದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ವಿಶೇಷವಾದ ಮಾನ್ಯತೆಯಿದೆ. ಮಾರ್ಚ್ ಎಂಟು ಇಲ್ಲಿ ಸರಕಾರಿ ರಜಾದಿನವೂ ಹೌದು. ಆಫ್ರಿಕಾದ ಇತರ ಭಾಗಗಳಲ್ಲಿ ಕಾಣಸಿಗುವ ಧರ್ಮ, ಸಂಪ್ರದಾಯ ಇತ್ಯಾದಿಗಳ ಹೆಸರಿನಲ್ಲಿ ಮಹಿಳೆಯರ ವಿರುದ್ಧ ನಡೆಸಲಾಗುವ ಅಮಾನವೀಯ ದೌರ್ಜನ್ಯಗಳು ಅಂಗೋಲಾದಲ್ಲಿ ಕಾಣಸಿಗುವುದು ತೀರಾ ಕಡಿಮೆ.

ಇನ್ನು ತೈಲ, ವಜ್ರ, ಕಾಫಿ, ಮಾಧ್ಯಮ, ದೂರಸಂಪರ್ಕ ಇತ್ಯಾದಿ ಲಾಭದಾಯಕ ಉದ್ಯಮಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಹಾಯಾಗಿರುವ ಮಹಾಕುಳಗಳ ನಿರಂತರ ದೌರ್ಜನ್ಯದ ಹೊರತಾಗಿಯೂ ಅಂಗೋಲಾದ ಹಳ್ಳಿಗಳು ಇಂದು ತಲೆಯೆತ್ತಿ ಸ್ವಾಭಿಮಾನದಿಂದ ಬದುಕುತ್ತಿವೆಯೆಂದರೆ ಅದರ ಹಿಂದೆ ಝುಂಗೇರಾಗಳಂತಹ ಗ್ರಾಮೀಣ ಮಹಿಳೆಯರ ಬಹುದೊಡ್ಡ ಕೊಡುಗೆಯಿದೆ.

ನೆಲಕ್ಕೆ ಬಿದ್ದ ಇವರ ಬೆವರ ಹನಿಗಳು ಈ ದೇಶದ ಮಣ್ಣನ್ನು ಮತ್ತಷ್ಟು ಫಲವತ್ತಾಗಿಸಿದೆಯೋ ಎಂಬಂತೆ ಪರಿಶ್ರಮವನ್ನೂ, ಜೀವನಪ್ರೀತಿಯನ್ನೂ ಉಸಿರಾಡುತ್ತಲೇ ಭರವಸೆಯೆಂಬ ಬೆಳಕನ್ನು ಚೆಲ್ಲುತ್ತಾ ಬಂದಿದ್ದಾರೆ ಈ ಮಹಿಳೆಯರು. ಅಂತಾರಾಷ್ಟ್ರೀಯ ಮಹಿಳಾ ದಿನದಂದು ಝುಂಗೇರಗಳಿಗೊಂದು ನನ್ನ ಪ್ರೀತಿಯ ಸಲಾಂ!

ಕೊನೆಯ ಮಾತು:

ಬಂಟು ಗೇಮ್ಸ್ ಎಂಬ ಹೆಸರಿನ ಉತ್ಸಾಹಿ ತರುಣರ ತಂಡವೊಂದು “ಝುಂಗೇರಾ ರನ್” ಎಂಬ ಹೆಸರಿನ ಹೊಸ ಮೊಬೈಲ್ ಗೇಮ್ ಅಪ್ಲಿಕೇಷನ್ ಒಂದನ್ನು ಸೃಷ್ಟಿಸಿದೆ. ನೋಡಲು “ಟೆಂಪಲ್ ರನ್” ಮತ್ತು “ಸಬ್ ವೇ ಸರ್ಫರ್ಸ್” ಆಟದ ಮಾದರಿಯಲ್ಲಿರುವ ಈ ಆಟದಲ್ಲಿ ಸಮವಸ್ತ್ರ ಧರಿಸಿರುವ ಪೋಲೀಸ್ ಅಧಿಕಾರಿಯೊಬ್ಬ ತನ್ನ ತಲೆಯ ಮೇಲೆ ಸಾಮಾನುಗಳನ್ನಿಟ್ಟುಕೊಂಡು ಮಾರುತ್ತಿರುವ ಮಹಿಳೆಯೊಬ್ಬಳ ಬೆನ್ನಟ್ಟುತ್ತಿದ್ದಾನೆ. ಈ ಝುಂಗೇರ ಮಹಿಳೆಯು ಓಡುತ್ತಲೇ ನಾಣ್ಯಗಳನ್ನು ಬಾಚುತ್ತಾ ತನ್ನ ಪಾಯಿಂಟ್ ಗಳನ್ನು ಗಳಿಸಿಕೊಳ್ಳಬೇಕು. ಅಕಸ್ಮಾತ್ ಈ ಪೋಲೀಸ್ ಅಧಿಕಾರಿಯು ಅವಳನ್ನು ಹಿಡಿದುಬಿಟ್ಟರೆ ಆಟವು ಅಲ್ಲಿಗೇ ಮುಗಿದುಹೋಗುತ್ತದೆ. ಜೊತೆಗೇ ಅವಳು ಹೊತ್ತುಕೊಂಡಿದ್ದ ಎಲ್ಲಾ ಸಾಮಾನುಗಳನ್ನೂ ಕಸಿದುಕೊಂಡು ಮಾಯವಾಗುತ್ತಾನೆ ಆತ. ಈ ಮೊಬೈಲ್ ಗೇಮ್ ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದಲೂ ಡೌನ್ಲೋಡ್ ಮಾಡಿಕೊಳ್ಳಬಹುದು.

ಅಂಗೋಲಾದ ವಾಸ್ತವಿಕತೆಗೆ ಹತ್ತಿರವಿರುವ, ಝುಂಗೇರ ಮಹಿಳೆಯರನ್ನೇ ಸ್ಫೂರ್ತಿಯನ್ನಾಗಿಟ್ಟುಕೊಂಡು ಸೃಷ್ಟಿಸಿದ ಈ ಮೊಬೈಲ್ ಗೇಮ್ ಎಲ್ಲರಿಗೂ ಇಷ್ಟವಾಗಿದ್ದಂತೂ ಹೌದು. ಲುವಾಂಡಾದ ಬೀದಿಗಳಲ್ಲಿ ಕಾಣಸಿಗುವ ಸಾರ್ವಜನಿಕರ ಸಂಚಾರ ವ್ಯವಸ್ಥೆಯ ಬೆನ್ನೆಲುಬಾದ ಬಿಳಿ-ನೀಲಿ ವ್ಯಾನುಗಳು, ಇಲ್ಲಿಯ ಟೆಲಿಕಾಂ ಸಂಸ್ಥೆಯಾದ ಯೂನಿಟೆಲ್ ಕಚೇರಿ ಇತ್ಯಾದಿಗಳನ್ನು ಈ ಆಟದ ಗ್ರಾಫಿಕ್ಸ್ ನಲ್ಲೂ ಕಂಡು ಕಣ್ತುಂಬಿಕೊಳ್ಳಬಹುದು. ಬಿಡುಗಡೆಯಾದ ಮೂರೇ ದಿನದಲ್ಲಿ ಆರು ಸಾವಿರಕ್ಕೂ ಹೆಚ್ಚು ಜನರು ಈ ಗೇಮ್ ಅನ್ನು ತಮ್ಮ ಮೊಬೈಲುಗಳಿಗೆ ಇಳಿಸಿಕೊಂಡರಂತೆ.

ಇದು ಅಂಗೋಲಾದ ಝುಂಗೇರಾ ಮಹಿಳೆಯರ ಕಮಾಲ್.

 

‍ಲೇಖಕರು admin

8 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading