ಚೈತ್ರಿಕಾ. ಶ್ರೀಧರ್. ಹೆಗಡೆ
ಈಗಷ್ಟೆ ಎದ್ದ ಕೆಂಪು ಮುಸ್ಸಂಜೆ
ಕಡಲ ಬಿಕ್ಕಲ್ಲಿ
ಮುಖತೊಳೆದುಕೊಳ್ಳುತ್ತಿದೆ,
ನಿನ್ನ ಪೂರ್ತಿ ಮರೆತ ಅಲೆ
ಮತ್ತೆ ಮತ್ತೆ ನನ್ನ ನೋಡಿ
ನಗುತ್ತಿದೆ,
ಅದೇ ಅಲ್ಲ್ಯಾವುದೋ ದೋಣಿ
ಬೆಂಕಿಯನ್ನೊಯ್ಯುತ್ತಿದೆ
ಯಾರ ಎದೆ ಸುಡವ
ನೆನಪುಗಳಿಗೆ ಅಗ್ನಿಸ್ಪರ್ಷ
ಇಡಲೋ?
*
ನಿನ್ನೆಗಳ ದಬ್ಬೆ ಸಂಕ ದಾಟಿ
ದೂರ ನಡೆದಿದೆ ಮರೆವಿನೊರಲೆ..
ಕೆನ್ನೆ ಮೇಲುದುರಿದ ರೆಪ್ಪೆಗೂದಲ
ಹಿಡಿದು ಆಸೆಗಳ ಹೇಳಿ
ಊದಿದ ದಿನಗಳು,
ಗುಲಾಬಿ ಎಸಳ ಚಿತ್ರದ
ನಿನ್ನ ಕರ್ಚೀಪು,
ಅರ್ಧ ಹಾಕಿಕೊಳ್ಳುತ್ತಿದ್ದ ಆ
ಚರ್ ಪರ್ ಚಪ್ಪಲಿ
ಇವೆಲ್ಲ ಇನ್ನೂ ಯಾಕೆ
ಹಂಬಲಿವೆ ನನಗೆ?
ಇನ್ನು
ನೆನಪಿಟ್ಟುಕೊಳ್ಳಲಾಗುವುದಿಲ್ಲ
ನಿನ್ನನ್ನು , ಅಗ್ದಿ ಕಾಡುವ
ಅಪ್ಪನ ಸಾವನ್ನು,
ಉಪ್ಪಲ್ಲಿ ಅದ್ದಿ ತೆಗೆದಂತಾಗುವ
ಅಮ್ಮನ ಕಣ್ಣುಗಳನ್ನು..
ಹಾಗಂತ
ಮರೆಯಲೂ ಆಗುವುದಿಲ್ಲ
*
ಮರುಕಾಷ್ಠ, ಅಸ್ತಿ
ಸಂಚಯನೆ ಯಾವುದರ
ತಲೆಬಿಸಿಯೂ ಇಲ್ಲದಂತೆ
ನಿನ್ನೆಗಳ ಸುಡುವುದಾದರೆ
ನನ್ನಲ್ಲೂ ತೇಲಲಿ
ಆ ದೋಣಿ,
ಕಣ್ಣೆದುರೇ ಬೂದಿಯಾಗಲಿ
ಬಿಕ್ಕುವ ಕಡಲು,
ಕೆಂಪುಸಂಜೆಯ ಕಳೇಬರದ
ಮೇಲೆ ಚಂದ್ರನ ಹೂವಿಡುವ
ಇರುಳಲಿ ಅಳದೆ ಬೆಚ್ಚ
ಮಲಗಿಬಿಡಲಿ ಅಮ್ಮ..
ನಿನ್ನ ಕೆನ್ನೆ ಮೇಲುದುರಿದ
ಕೂದಲ ಊದಿ ಬೇಡಲೇ
ಆ ಬೆಂಕಿ ಒಯ್ಯುವ
ದೋಣಿಗಾಗಿ…





ಒಳ ಹೊಕ್ಕು ಕಾಡುವ ಕವನ. ಸಾವಿನ ಸ್ಥವನ.