'ಬೂಸ ಚಳುವಳಿ ಕಾಲು ಶತಮಾನ' – ಯು ಆರ್ ಉದ್ಘಾಟನಾ ಭಾಷಣ

‘ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ

***

ಬೂಸ ಚಳುವಳಿ ಕಾಲು ಶತಮಾನ

ನಮಗೆಲ್ಲರಿಗೂ ತುಂಬಾ ಹಿರಿಯರಾದ ಹೆಚ್. ನರಸಿಂಹಯ್ಯ ನವರೇ, ಡಿ.ಜಿ. ಸಾಗರ್ ಅವರೆ, ಕುಲಪತಿಗಳಾದ ಎನ್.ಆರ್. ಶೆಟ್ಟಿಯವರೆ, ಗೆಳೆಯ ದೇವನೂರ ಮಹದೇವ ರವರೇ ಹಾಗೂ ಇಲ್ಲಿ ನೆರೆದಿರುವ ಎಲ್ಲಾ ಸ್ನೇಹಿತರೆ, ಸೆಂಟ್ರಲ್ ಕಾಲೇಜಿನ ಈ ಸೆನೆಟ್ ಹಾಲ್ ಯಾವುದಕ್ಕೂ ಸಾಲದು-ಅಷ್ಟು ಜನಗಳಿದ್ದಾರೆ. ಇದು ನನಗೆ ಬಹಳ ಸಂತೋಷದ ವಿಷಯ. ಚಾರಿತ್ರಿಕ ಕಾರಣಕ್ಕಾಗಿ ಈ ಹಾಲ್ನಲ್ಲೆ ಸಮಾರಂಭ ನಡೆಯುತ್ತಿದೆಯೆಂದು ನನಗೆ ಸಾಗರ್ರವರು ಹೇಳಿದರು. ಮುಂದೆ ನಾನು ಹೇಳಲು ಮರೆತುಬಿಡ ಬಹುದೆಂಬ ಕಾರಣದಿಂದ ಒಂದೆರಡು ವಿಷಯಗಳನ್ನು ದಾರಿಯಲ್ಲಿ ಬರುವಾಗ ಸಿದ್ಧಲಿಂಗಯ್ಯನವರ ಹತ್ತಿರ ಹೇಳಿದೆ. ಪ್ರತಿ ವರ್ಷ ಬಿ. ಬಸವಲಿಂಗಪ್ಪನವರ ಹೆಸರಿನಲ್ಲಿ ಒಂದು ದತ್ತಿ ಉಪನ್ಯಾಸ ಮಾಡಬೇಕು. ಅದನ್ನು ದ.ಸಂ.ಸ.ದವರೇ ಮಾಡಬೇಕು. ಏಕೆಂದರೆ ಅವರಿದ್ದ ಕಾಲದಲ್ಲಿ ಇಡೀ ರಾಷ್ಟ್ರದಲ್ಲೇ ಬಹಳ ದೊಡ್ಡ ದಲಿತ ನಾಯಕರಾಗಿದ್ದದ್ದು ನಮ್ಮ ಕರ್ನಾಟಕದಲ್ಲಿ-ಅದು ಬಸವಲಿಂಗಪ್ಪನವರೇ. ದಲಿತರು ಮಲಹೊರುವುದನ್ನು ಅದೆಷ್ಟು ನಿಶ್ಚಿತವಾದ ಕಾರ್ಯಕ್ರಮ ಮಾಡಿಕೊಂಡು ಅವರು ನಿಲ್ಲಿಸಿದರು. ಆಗ ಬಂದ ವಾಗ್ವಾದಗಳು, ಜನ ಕೋರ್ಟ್ ಗೆ ಹೋಗಿದ್ದು ಮತ್ತು ದೆಹಲಿಯಿಂದ ಇಂದಿರಾಗಾಂಧಿ ಸರ್ಕಾರದಿಂದ ಒಬ್ಬರು ಪ್ರತಿನಿಧಿ `ಸದ್ಯಕ್ಕೆ ಇದಾಗದೆ ಇದ್ದರೆ ಕೊನೆಯ ಪಕ್ಷ ಒಂದು ಗಂಟೆಯಾದರೂ ಮಲ ತೆಗೆದುಕೊಂಡು ಹೋಗುವುದಕ್ಕೆ ಒಪ್ಪಬಹುದಲ್ಲ’ ಎಂದಾಗ ಅದಕ್ಕೂ ಒಪ್ಪದೆ ಬಸವಲಿಂಗಪ್ಪನವರು ಸಾಧಿಸಿದ್ದು ನಮ್ಮ ಕಾಲದ ಒಂದು ದೊಡ್ಡ ಸಾಧನೆ.
ನಾವು ಬಹಳ ಜನ ಬಸವಲಿಂಗಪ್ಪನವರ ರಾಜಕೀಯ ಪಕ್ಷದ ಜೊತೆಗೆ ಯಾವ ಸಂಬಂಧವನ್ನೂ ಇಟ್ಟುಕೊಂಡಿರಲಿಲ್ಲ. ಆದರೂ ಕೂಡ ಬಸವಲಿಂಗಪ್ಪನವರು ನಮಗೆಲ್ಲ ಬಹಳ ಪ್ರಿಯರಾಗಿದ್ದರು. ನಾನು ಮೊದಲು ಅವರನ್ನು ನೋಡಿದ್ದು ಗೋಪಾಲಗೌಡರ ಜೊತೆ. ಬಸವಲಿಂಗಪ್ಪನವರ ಮನೆಗೆ ಹೋಗಿ ಬರುತ್ತಿದ್ದ ಗೋಪಾಲ್ಗೌಡರ ಜೊತೆ ಗಂಟೆಗಟ್ಟಲೆ ನಾವು ನಮಗೆ ಪ್ರಿಯವಾದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆವು. ಬಸವಲಿಂಗಪ್ಪನವರು ಎಷ್ಟು ದಲಿತರ ಸಕ್ರಿಯ ನಾಯಕರೋ ಅಷ್ಟೇ ಧೀಮಂತ ವ್ಯಕ್ತಿಯೂ ಆಗಿದ್ದರು. ಚರಿತ್ರೆಯನ್ನು ಚೆನ್ನಾಗಿ ಓದಿದ್ದು. ರಾಜಕೀಯ ಸಿದ್ಧಾಂತಗಳ ಬಗ್ಗೆ ಯೋಚನೆ ಮಾಡಿದ್ದರು.
ಬಹಳ ಮುಖ್ಯವಾಗಿ ಹೇಳಬೇಕಾಗಿದ್ದು ಅವರು ನಿಜವಾದ ಕ್ರಾಂತಿಕಾರರಾದ್ದರಿಂದ ಜಾತಿವಾದಿಯಾಗಿರಲಿಲ್ಲ. ಅವರಿಗೆ ಯಾರೂ ಬೇಕಾದರೂ ಪ್ರಿಯರಾಗುತ್ತಿದ್ದರು. ನಾನು ಜಾತಿಯಲ್ಲಿ ಬ್ರಾಹ್ಮಣ; ಅವರಿಗೆ ಅದೇನೂ ತೊಡಕಿನ ವಿಷಯವಾಗಿರಲಿಲ್ಲ. ಗೌಡರು, ಲಿಂಗಾಯತರು ಬೇರೆ ಯಾವ ಜಾತಿಯವರೇ ಆಗಲಿ ಸ್ನೇಹಕ್ಕೆ ಪ್ರೀತಿಗೆ ಯಾವುದೇ ಅಡ್ಡಿ ಇಲ್ಲದೆ ಯಾವ ಅನುಮಾನವೂ ಇಲ್ಲದಂತೆ ವ್ಯವಹರಿಸುತ್ತಿದ್ದರು. ಇದನ್ನು ನಾನು ಪ್ರಾಮಾಣಿಕವಾಗಿ ಇಲ್ಲಿ ಹೇಳಬೇಕಾಗುತ್ತದೆ. ಅವರ ರಾಜಕೀಯವನ್ನು ನಾನು ಒಪ್ಪುತ್ತಿರಲಿಲ್ಲ. ಆ ಬಗೆಗೆ ಬೇಕಾದಷ್ಟು ಜಗಳ ಮಾಡಿದ್ದಿದ್ದೆ. ಆದರೆ ಅವರ ನಿಲುವೇನಿತ್ತೆಂದರೆ `ಈ ಕಾಲದಲ್ಲಿ ನಮಗೆ ಎಷ್ಟನ್ನು ಮಾಡಲಿಕ್ಕೆ ಸಾಧ್ಯವೋ ಅಷ್ಟನ್ನು ಮಾಡಲಿಕ್ಕೆ ಸಾಧ್ಯವಿರುವ ಪಕ್ಷದಲ್ಲೇ ನಾವಿರಬೇಕು’ ಎಂಬುದು. ನಾವು ಬೇರೆ ಕಡೆ ಇರಲಿಕ್ಕೆ ಆಗುವುದಿಲ್ಲ ಅದು ಸಾಧ್ಯವೂ ಇಲ್ಲ. ಆದರೆ ಅದರ ಒಳಗಿದ್ದೇ ನಾವು ಅದನ್ನು ವಿಸ್ತರಿಸುತ್ತಾ ಹೋಗಬೇಕಾಗಿತ್ತು ಎಂಬುದು ಅವರ ಧೋರಣೆಯಾಗಿತ್ತು
ವೈಯಕ್ತಿಕವಾಗಿ ಒಂದೆರಡು ಮಾತುಗಳು: 25 ವರ್ಷಗಳ ಹಿಂದೆ-ಅದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ-25 ವರ್ಷ ಚಿಕ್ಕವನಾಗಿದ್ದೆ. ಹೆಚ್ಚು ಉತ್ಸಾಹವಿತ್ತು. ಸ್ವಲ್ಪ ಹೆಚ್ಚು ಕ್ರಿಯಾಶೀಲತೆಯೂ ನನ್ನಲ್ಲಿತ್ತು. ಬಸವಲಿಂಗಪ್ಪನವರು ನನ್ನ ಜೊತೆ ಮಾತಾಡಿದಾಗ ಅವರಾಡಿದ ಮಾತಿಗೆ ವಿರೋಧ ಬಂದುದನ್ನು ನೋಡಿ ಅದನ್ನು ಬೆಂಬಲಿಸಲು ನಾನು ಪತ್ರಿಕೆಗೆ ಒಂದು ಕಾಗದ ಬರೆದೆ. ಆದರೆ ಯಾವ ಪತ್ರಿಕೆಯವರೂ ಅದನ್ನು ಪ್ರಕಟಿಸಲೇ ಇಲ್ಲ. ನಂತರ ಮಡಿಕೇರಿಯಲ್ಲಿ ಲಯನ್ಸ ಕ್ಲಬ್ ಇಂಟರ್ನ್ಯಾಷನಲ್ ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ಕರೆದರು. ಅಲ್ಲಿ ಇದೇ ವಿಚಾರವನ್ನು ಮಾತನಾಡಿದೆ. ಕಾರಣ ಪತ್ರಿಕೆಯವರ ಜೊತೆ ಹೇಗೆ ನಡೆಕೊಂಡರೆ ನಮ್ಮ ಅಭಿಪ್ರಾಯಗಳು ಹೊರಗೆ ಬರುತ್ತವೆ ಎಂಬುದು ಗೊತ್ತಿತ್ತು. ಹೀಗಾಗಿ ಅದು ಬಹಳ ಸುದ್ದಿಯಾಯಿತು. ಅಲ್ಲದೆ, ಈ ಪತ್ರಿಕೆಯ ಕೆಲವು ಸಂಪಾದಕರು ನನಗೆ ತುಂಬಾ ಆತ್ಮೀಯರೂ ಆಗಿದ್ದರು. ಸ್ನೇಹದ ವಲಯದಲ್ಲಿ `ಯಾಕಯ್ಯ ನಿನಗೆ ಬೇಕಾ? ಅವನು ತಲೆಹರಟೆ ಮಾಡುತ್ತಿದ್ದಾನೆಂದು ನೀನೂ ಯಾಕೆ ಹೀಗೆ ಮಾಡುತ್ತಿದ್ದೀಯ’ ಎದಿದ್ದರು. `ಇಲ್ಲ ಇದೊಂದು ಹೊಸ ವಿಚಾರವನ್ನು ಅವರು ಹೇಳುತ್ತಿದ್ದಾರೆ’ ಎಂದೆ. ಆ ಪತ್ರವನ್ನು ಋಜುವಾತು ಪತ್ರಿಕೆಯಲ್ಲಿ ಪ್ರಕಟ ಮಾಡಿದೆ. ಆಮೇಲೆ ಪ್ರಜಾವಾಣಿಯವರೂ ಪ್ರಕಟ ಮಾಡಿದರು.
ಜಾರ್ಜ್ ಫರ್ನಾಂಡೀಸ್ ಒಂದು ಕಾಲದಲ್ಲಿ ಇಂದಿರಾಗಾಂಧಿಯವರ ವಿರುದ್ಧ ಟೀಕೆ ಮಾಡುತ್ತಿದ್ದರು. ಏನು ಹೇಳಿದರೂ ಅವರು ಕ್ರಿಶ್ಚಿಯನ್ ಎಂದು ಯಾರೂ ತಿಳಿಯುತ್ತಿರಲಿಲ್ಲ. `ಒಂದು ದೇಶದ ನಾಯಕನಾಗಿ ಹೇಳುತ್ತಿದ್ದಾನೆ’ ಎಂದೇ ತಿಳಿಯುತ್ತಿದ್ದರು. ಹಾಗೆ ಫರ್ನಾಂಡೀಸ್ನಂತೆ ಮಾತನಾಡುವ ಧೈರ್ಯದ ಒಬ್ಬ ಮುಸ್ಲಿಂನೂ ಇರಲಿಲ್ಲ. ನಮ್ಮ ದೇಶದಲ್ಲಿ ಮುಸ್ಲಿಮರು ಮುಖ್ಯವಾಹಿನಿಯಲ್ಲಿ ಇಲ್ಲವೇ ಇಲ್ಲ. ಇದಕ್ಕೆ ಕಾರಣ ಮುಸ್ಲಿಂರು ಮಾತ್ರ ಅಲ್ಲ; ಅವರು ಹೀಗೆ ಎದೆಗುಂದುವುದಕ್ಕೆ ಕಾರಣ ನಾವು. ಅಂತಹ ಒಂದು ಸ್ಥಿತಿಯನ್ನು ದೇಶದಲ್ಲಿ ತಂದಿದ್ದೇವೆ. ಮೌಲಾನಾ ಆಜಾದ್ರ ನಂತರ ಇಡೀ ದೇಶದ ಸಮುದಾಯವನ್ನು ಕುರಿತು ಮಾತಾಡಬಲ್ಲ ಮುಸ್ಲಿಂ ನಾಯಕರು ಇವತ್ತಿಗೂ ಇಲ್ಲ. ಇದೊಂದು ದೊಡ್ಡ ದುರಂತ. ಇದ್ದವರು ಯಾರಾದರೊಬ್ಬನ ಬಾಲಬಡಕರಾಗಿರ ಬೇಕಾಗುತ್ತದೆ. ಎಲ್ಲ ಜನರಿಗೆ ಒಪ್ಪಿಗೆ ಆಗುವ ಹಾಗೆ ಮಾತಾಡಬೇಕಾಗುತ್ತದೆ. ತಮ್ಮ ನಂಬಿಕೆಗಳನ್ನು ನೇರವಾಗಿ ಹೇಳಲಿಕ್ಕಾಗುವುದಿಲ್ಲ. ಇಂಥ ಸ್ಥಿತಿಯಲ್ಲಿ ಒಬ್ಬ ದಲಿತ ನಾಯಕನಾಗಿ ಬಸವಲಿಂಗಪ್ಪನವರು ಇಡೀ ಸಮಾಜವನ್ನೇ ಅಲ್ಲೋಲ ಕಲ್ಲೋಲ ಮಾಡಬಲ್ಲಂಥ ಮಾತನ್ನು ಆಡಬಲ್ಲ ಎನ್ನುವುದು ನಮ್ಮ ಸುದೈವ. ಏಕೆಂದರೆ ಅವರು `ಹಿಂದೂ ಎಂದು ಹೇಳುವವರನ್ನೆಲ್ಲ ಚರಂಡಿಗೆ ಎಸೆಯಿರಿ’ ಎಂದಾಗಲೂ ಅದು ಹಿಂದೂಗಳ ಮನಸ್ಸಿನ ಒಳಗೆ ಹೋಗಿ ಒಂದು ಉತ್ಪಾತವನ್ನು ಮಾಡುವ ಹಾಗಿರುತ್ತದೆ ಮತ್ತು ಹಿಂದೂ ನಾಗರಿಕತೆಯಲ್ಲೇನಾದರೂ ಬದಲಾವಣೆ ಆಗುವುದಾದರೆ ಅಂತಹ ಆಘಾತಗಳು ಹಿಂದುಗಳ ಆತ್ಮಾವಲೋಕನಕ್ಕೆ ಅತ್ಯಂತ ಅಗತ್ಯವಾಗಿರುತ್ತವೆ.
ಒಂದು ಕಾಲದಲ್ಲಿ ಇಸ್ಲಾಂ ಹಲವು ದೇವರುಗಳನ್ನು ಪೂಜೆ ಮಾಡುವ ಹಿಂದೂ ಧರ್ಮದಲ್ಲಿ ಸಾಕಷ್ಟು ಗಾಢವಾದ ನಂಬಿಕೆಯಿದೆಯೆ? ಎಂಬ ಪ್ರಶ್ನೆಯನ್ನು ಎತ್ತಿತು. (ಯಾಕೆಂದರೆ ಒಂದೇ ದೇವರನ್ನು ನಂಬುವವರು ಅವರು; ಸಮಾನತೆಯನ್ನು ನಂಬುವವರು ಅವರು). ಇಸ್ಲಾಂ ಹಾಗೆ ಮಾಡಿದ್ದರಿಂದ ಹಿಂದೂ ಧರ್ಮದ ಒಳಗೆ ಅನೇಕ ಬದಲಾವಣೆಗಳು ಬಂದವು. ಇಸ್ಲಾಂನ ಕೊಡುಗೆ ಅಪಾರವಾದದ್ದು. ಹಿಂದೂ ಮನಸ್ಸು ತನ್ನನ್ನು ತಾನೇ ಸ್ವವಿಮರ್ಶೆ ಮಾಡಿಕೊಳ್ಳುವ ಹಾಗೆ ಮಾಡಿದೆ. (ಕ್ರೆ ಸ್ತ ಧರ್ಮವೂ ಅದೇ ರೀತಿಯಲ್ಲಿ ಹಿಂದೂ ಧರ್ಮ ಸ್ವವಿಮರ್ಶೆಗೆ ಒಳಗಾಗುವಂತೆ ಮಾಡಿದೆ.)

ಒಂದು ಭ್ರಮೆಯನ್ನಾದರೂ ಆಧುನಿಕತೆ ಹುಟ್ಟಿಸುತ್ತೆ. ನಾವು ಜಾತಿ ಸಂಕೋಲೆಗಳಿಂದ ಪಾರಾದೆವು ಎಂಬ ಟೈಕಟ್ಟದ ಕತ್ತಿನ ಭ್ರಮೆಯದು. ಯಾಕೆಂದರೆ ಆಧುನಿಕತೆಯ ಮುಖಾಂತರ ಇಂಗ್ಲಿಷ್ ವಿದ್ಯಾಭ್ಯಾಸದ ಮುಖಾಂತರ, ಸಾಕಷ್ಟು ಹೊಸ ವಿಚಾರಗಳು- ಲಾಭದಾಯಕವಾದ ವಿಚಾರಗಳು, ನಮಗೆ ಬಂದಿರುತ್ತವೆ. ಕುವೆಂಪುರವರು ಇಂಗ್ಲಿಷ್ ವಿದ್ಯಾಭ್ಯಾಸ ನಮಗೆ ಅಗತ್ಯ ಎಂದು ಹೇಳಿದ್ದಾರೆ. ಇವರೆಲ್ಲ ಕನ್ನಡದ ಲೇಖಕರಾಗಿದ್ದೂ ಹೀಗೆ ಹೇಳಿದ್ದರು. ಆದರೆ ಬಸವಲಿಂಗಪ್ಪನವರು ಕನ್ನಡದಲ್ಲಿರುವುದು ಹೆಚ್ಚಾಗಿ ಮತ ಧರ್ಮದ ಸಾಹಿತ್ಯ, `ಬೂಸಾ ಇದ್ದಂತೆ ದಲಿತರ ಪಾಲಿಗೆ’ ಎಂದಾಗ ಅವರು ಹೊರಗಿನವರಾಗಿಬಿಟ್ಟರು…
ತುಂಬಾ ಒಳ್ಳೆಯ ಲೇಖಕರು ಕೂಡ ಉನ್ಮಾದಕ್ಕೊಳಗಾದರು. ನಮ್ಮ ಆಲನಹಳ್ಳಿ ಕೃಷ್ಣರೂ ಉತ್ಸಾಹದಲ್ಲಿ ಒಂದು ಲೇಖನ ಬರೆದು ಬಸವಲಿಂಗಪ್ಪನವರ ಹೇಳಿಕೆಯನ್ನು ಖಂಡಿಸಿದ್ದರು. ಕನ್ನಡದ ಬಗ್ಗೆ ಒಂದು ಸೆಂಟಿಮೆಂಟ್ ಇದೆಯಲ್ಲ ಅದನ್ನು ಬಳಸಿಕೊಂಡು ದಲಿತರ ವಿರುದ್ಧ ದೊಡ್ಡ ಚಳುವಳಿ ಮಾಡುವುದಕ್ಕೆ ಆಗ ಸಾಧ್ಯವಾಯಿತು. ಆದರೆ ಹಿಂದೆ ಏನೇನು ವಿಚಾರ ಇತ್ತೋ ಏನನ್ನೂ ನೋಡದೆ ಅದನ್ನು ಮಾಡಿದ್ದು ತಪ್ಪು.
ಇನ್ನೊಂದು ಮಾತು:
ದೇವನೂರ ಮಹದೇವ ಮತ್ತು ಸಿದ್ಧಲಿಂಗಯ್ಯನವರಾದಿಯಾಗಿ ನಾನು ಮೊದಲಿ- ನಿಂದಲೂ ಈ ದ.ಸಂ.ಸ.ವನ್ನು ವಿಶ್ವಾಸದಿಂದ ಕಾಣುತ್ತಾ ಬಂದವನು. ನನ್ನ ಅನೇಕ ಸ್ನೇಹಿತರನ್ನು ಅದರಿಂದ ಪಡೆದವನು. ಇವತ್ತು ಭಾರತದ ಸ್ಥಿತಿ ಹೇಗಿದೆಯೆಂದರೆ ಬಸವಲಿಂಗಪ್ಪನವರು ಮಾತಾಡಿದ ದಿನಗಳ ಸ್ಥಿತಿಗಿಂತ ಕೆಟ್ಟಿದೆ.
ನೋವನ್ನುಂಡ ಮನುಷ್ಯನಿಗೆ ಮತೀಯ ಭಾವನೆಗಳು ತುಂಬಿರುವ ಒಂದು ಸಾಹಿತ್ಯ ಹಾಗೆ ಬೂಸಾ ಎನ್ನಿಸುವುದು ಸಹಜವಾದರೂ ‘ಕನ್ನಡ ಭಾಷೆಯ ಮುಖಾಂತರವೇ ದಲಿತರ ಪ್ರಜ್ಞಾವಿಕಾಸ, ಪ್ರಜ್ಞಾ ಸ್ಫೋಟ ಎರಡೂ ಆಗಬೇಕು’ ಎನ್ನುವುದರಿಂದ ಅದನ್ನು ಒಪ್ಪಲಿಕ್ಕೆ ನನಗಾಗುತ್ತಿರಲಿಲ್ಲ.
ಆದರೆ ಬಸವಲಿಂಗಪ್ಪನವರು ಆಧುನಿಕ ಯುಗದ ಒಬ್ಬ ಮನುಷ್ಯ. ಆದ್ದರಿಂದ ಇಂಗ್ಲಿಷಿನ ಮುಖಾಂತರ ಹೊಸ ವಿಚಾರಗಳು ನಮಗೆ ಸಿಕ್ಕಿ ನಾವು ಬಿಡುಗಡೆ ಆಗುತ್ತೇವೆ ಎಂದು ತಿಳಿದವರು. ಇದರಲ್ಲೂ ನಿಜವಿದೆ. ನಮ್ಮನ್ನು ಬಿಡುಗಡೆ ಮಾಡುತ್ತಿರುವುದು ಆಳವಾದ ಕ್ರಾಂತಿಕಾರಕ ವಿಚಾರಗಳು, ಈ ಆಧುನೀಕರಣ ನಗರೀಕರಣ ರಾಯಭಾರಿಗಳು ಯಾವಾಗಲೂ ಹೇಳುತ್ತಿದ್ದುದು `ಹೆಚ್ಚು ಹೆಚ್ಚು ನಗರೀಕರಣವಾದಂತೆ ದಲಿತರು ಬಿಡುಗಡೆಯಾಗಬಹುದಷ್ಟೆ’ ಎಂಬುದು. ಆದರೆ ಅದನ್ನು ನಾನು ಒಪ್ಪುವುದಿಲ್ಲ.
ಕ್ರೆ ಸ್ತ ಧರ್ಮದ ಸವಾಲನ್ನು ಹಿಂದೂ ಧರ್ಮ ಸ್ವೀಕರಿಸುವ ಸಂದರ್ಭ ಬರದಿದ್ದರೆ ಆರ್ಯ ಸಮಾಜ ಹುಟ್ಟುತ್ತಿರಲಿಲ್ಲ. ಆ ಸವಾಲು ಅಗತ್ಯವಾಗಿತ್ತು. ಹೇಗೆ ಬಸವಲಿಂಗಪ್ಪನವರ ಸವಾಲು ಅಗತ್ಯವಾಗಿತ್ತೋ, ಇಸ್ಲಾಂ ಮತ ಅಗತ್ಯವಾಗಿತ್ತೋ, ಹಾಗೆ ಕ್ರೆ ಸ್ತ ಮತದ ಸವಾಲೂ ಖಂಡಿತಾ ಅಗತ್ಯವಾಗಿತ್ತು. ಯಾಕೆಂದರೆ ಕ್ರಿಶ್ಚಿಯನ್ನರಿಗೆ ಹಿಂದೂ ಆಗಬೇಕೆಂದರೆ ಇಲ್ಲಿ ಸಾಧ್ಯವೇ ಇಲ್ಲ. ಯಾಕೆಂದರೆ ಇಲ್ಲಿ ಅವನು ಯಾವ ಜಾತಿಗೆ ಸೇರಬೇಕು? ನಾವು ರಾಷ್ಟ್ರದ ಮಾತೆತ್ತಿ ಏನು ಹೇಳುತ್ತೇವೆಂದರೆ `ಇವರನ್ನು ನೋಡಿ. ಇವರ ಪುಣ್ಯ ಸ್ಥಳವಿರುವುದು ಮೆಕ್ಕ, ಬೆತ್ಲೆಹೇಮ್ಗಳಲ್ಲಿ, ಆದ್ದರಿಂದ ಅವರು ರಾಷ್ಟ್ರೀಯವಾದಿಗಳಾಗಲು ಸಾಧ್ಯವಿಲ್ಲ’ ಎಂದು. ಆದರೆ ಒಂದು ಸತ್ಯ ನೋಡಿ, ನಮ್ಮಲ್ಲಿ ಉತ್ತಮ ವರ್ಗದವರು- ಓದಿದವವರು-ನಮ್ಮ ಪುಣ್ಯ ಸ್ಥಳ ಯಾವುದು? ಎಂದು ಕೇಳಿದರೆ ಈ ಆಧುನೀಕರಣದ ಈ ಕ್ರಿಯೆಯಲ್ಲಿ ಇವತ್ತು ಕಲಿತು ವಿದ್ಯಾವಂತನಾದ ಮೇಲ್ವವರ್ಗದಲ್ಲಿರುವ ಎಲ್ಲರ ಆಸೆ ನಮ್ಮ ಮಕ್ಕಳೊ, ಮೊಮ್ಮಕ್ಕಳೊ, ಅಳಿಯನೊ, ಯಾರೋ ಒಬ್ಬರು ಹೋಗಿ ನ್ಯೂಯಾರ್ಕಿನಲ್ಲಿರಬೇಕೆಂಬುದು. ಅತ್ಯಂತ ದೊಡ್ಡ ಹಿಂದೂವಾದಿಗಳಾಗಿ ನಮ್ಮ ಸನಾತನ ಧರ್ಮ ದೊಡ್ಡದು ಎನ್ನುವವರ ನೆಂಟರಿರುವುದು ಅಲ್ಲೇ. ಒಂದೊಂದು ಸಾರಿ ನಮ್ಮ ಮೈಸೂರಿಗೆ ಹೋದರೆ ಅಲ್ಲಿನ ಒಂದು ಮನೆಯ ಅರ್ಧಭಾಗ ಅಮೆರಿಕದಲ್ಲೂ ಇನ್ನರ್ಧ ಭಾಗ ಒಂಟಿಕೊಪ್ಪಲಿನಲ್ಲಿ ಇರುತ್ತದೆ. ಪಾಪ ದೈವಿಕ ಕಾರಣಕ್ಕಾಗಿ ಮೆಕ್ಕ ನನಗೆ ಪುಣ್ಯಸ್ಥಳ, ಜೆರುಸೆಲಂ ನನಗೆ ಪುಣ್ಯಸ್ಥಳ ಎಂದು, ಎಲ್ಲೋ ವರ್ಷಕ್ಕೊಂದು ಸಾರಿ ಅನ್ಯ ಧರ್ಮೀಯರು ಹೋಗುತ್ತಾರೆ, ಇಲ್ಲದಿದ್ದರೆ ಇಲ್ಲ. ಆದರೆ ಇವರು? ಅಲ್ಲೇ ಹೋಗಿ ಸದಾ ನೆಲೆಸಬೇಕೆಂದು ಬಯಸುವವರು. ಈ ಮೆಕ್ಕಾ, ಜೆರುಸೆಲಂ ಪುಣ್ಯಸ್ಥಳವೆಂದು ಭಾವಿಸುವವರ ವಿರುದ್ಧ ಮಾತಾಡುವುದಕ್ಕೆ ಇವರಿಗೆ ಯಾವ ಅಧಿಕಾರವಿದೆ ಹೇಳಿ?
ಬಸವಲಿಂಗಪ್ಪನವರು ದೊಡ್ಡ ತತ್ವಗಳನ್ನು ಎತ್ತಿ ಚರ್ಚೆ ಮಾಡಿ ಆಯ್ಕೆಯಾಗಿ ಬರುತ್ತಿದ್ದರು. ಒಬ್ಬ ದಲಿತ ಆಯ್ಕೆಯಾಗಬೇಕಾದರೆ ಕೇವಲ ದಲಿತರು ಕೆಲಸ ಮಾಡಿದರೆ ಸಾಲದು; ಉಳಿದವರು ಕೆಲಸ ಮಾಡಬೇಕು. ಆಗ ಮಾತ್ರ ಅವನು ಆಯ್ಕೆಯಾಗಲು ಸಾಧ್ಯ. ಆದರೆ ಇವತ್ತು ಚುನಾವಣೆಯಲ್ಲಿ ಏನಾಗಿದೆಯೆಂದರೆ-ನೀನು ನನ್ನ ಬೀದಿಯಲ್ಲಿ ನಾಯಕನಾಗಬೇಕಾದರೆ ಕುರುಡನಾಗಿರಬೇಕು. ದೆಹಲಿಯಲ್ಲಿ ನಾಯಕನಾಗಬೇಕಾದರೆ ಉದಾರವಾದಿಯಾಗಬೇಕು. ಇಲ್ಲಿಂದ ಆಯ್ಕೆಯಾಗಿ ಹೋಗಬೇಕಾದರೆ ಎಲ್ಲ ಪುಂಡತನ ಮಾಡಬೇಕು. ಅನೇಕ ಸಾರಿ ನಮ್ಮ ಚುನಾವಣೆಗಳಲ್ಲಿ ಸತ್ತ ಮುಸ್ಲಿಂ ಹೆಣಕ್ಕಿಂತ. ಸತ್ತ ಹಿಂದೂ ಹೆಣ ಹೆಚ್ಚು ಮತಗಳನ್ನು ತರುತ್ತದೆ ಎನ್ನುವ ಮಾತೊಂದಿದೆ. ಆಗ ಜನರ ಭಾವವಲಯವನ್ನು ಉದ್ರೇಕಿಸಿ ವಿಸ್ತಾರ ಮಾಡಬಹುದು. ಇದು ಅತ್ಯಂತ ಹೇಯವಾದ ಸ್ಥಿತಿ. ಆದ್ದರಿಂದಲೇ ಜನರು tension ಸೃಷ್ಟಿ ಮಾಡುತ್ತಾರೆ. ಇಲ್ಲದಿದ್ರೆ you cannot make the vote bank of trials. ಬಸವಲಿಂಗಪ್ಪನವರು ಇಂತ ಮಾತುಗಳನ್ನೆತ್ತಿದಾಗ, ಯಾಕೆ ದಲಿತರು ಹೀಗಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಿಕೊಂಡಾಗ ಎರಡು ರೀತಿಯ ಪ್ರತಿಕ್ರಿಯೆಗಳು ಬರುತ್ತವೆ.
1. ದಲಿತರಲ್ಲಿ ಅರಿವಿನ ಸ್ಫೋಟವಾಗುತ್ತದೆ.
2. ನಮ್ಮಂಥವರಲ್ಲಿ-ಮೇಲ್ಜಾತಿಗಳಲ್ಲಿ-ನಮ್ಮ ಬಗ್ಗೆ ಒಂದು ರೀತಿಯ ಅನುಮಾನ ಹುಟ್ಟುತ್ತದೆ.
ಯಾವ ಅನುಮಾನವೂ ಇಲ್ಲದೆ ಹೇಳುವ ಮಾತುಗಳನ್ನು ಕೇಳುವಾಗ ಸ್ವಲ್ಪ ಅನುಮಾನ ಬರುತ್ತದೆ. ಆದ್ದರಿಂದ ಸಮಾಜ ಮುಂದಕ್ಕೆ ಚಲಿಸುತ್ತದೆ. ಬಸವಲಿಂಗಪ್ಪನವರು ಮಾಡಿದ ಕ್ರಿಯೆ ಅಂತಹದ್ದು. ಅಂತಹ ಒಂದು ಚಲನೆಗೆ ಅಗತ್ಯವಾದ, ಮೇಲ್ವರ್ಗದಲ್ಲಿ ಅನುಮಾನವನ್ನು ಕೆಳವರ್ಗದಲ್ಲಿ ಅರಿವಿನ ಸ್ಫೋಟವನ್ನು ಉಂಟುಮಾಡಿದ ಚಳವಳಿ ಬೂಸಾ ಚಳುವಳಿ. ಕುವೆಂಪುನವರು ಮಾತಾಡಿದ ನಂತರವಂತೂ ಮೇಲ್ವರ್ಗದವರಲ್ಲಿ ಅನುಮಾನ ಇನ್ನೂ ಬಲವಾಯಿತು. ದಲಿತರಲ್ಲಿ ಒಂದು ಅರಿವಿನ ಸ್ಫೋಟವಾಯಿತು. ಇವೆರಡೂ ಕೂಡಿದ್ದರಿಂದ ಬಹಳ ದೊಡ್ಡ ಕೆಲಸವಾಯಿತು. ಕನ್ನಡ ಸಾಹಿತ್ಯದ ಚಳವಳಿಗೆ ಅತ್ಯಂತ ಮುಖ್ಯವಾದ ವಿಷಯವಾಯಿತು.
ಈಗ ನಾವು ನಮ್ಮ ಸದ್ಯದ ಸ್ಥಿತಿಯಲ್ಲಿ ಮತಾಂತರ ನಿಷೇಧಿಸುವ ಯಾವ ಕಾನೂನು ಬರದಂತೆ ನೋಡಿಕೊಳ್ಳಬೇಕು. ಯಾಕೆಂದರೆ ಮತಾಂತರ ಕುರಿತು ಯಾರಿಗಾದರೂ ಹೇಳಬೇನ್ನಿಸಿದರೆ ಅದು ಅವರ ಆಜನ್ಮಸಿದ್ಧ ಹಕ್ಕು. ನಾನು ಒಬ್ಬ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿದ್ದೇನೆ. ಇವತ್ತಿನವರೆಗೆ ಯಾವ ಪಾದ್ರಿಯೂ `ನೀನು ಮತಾಂತರ ಆಗಬೇಕು’ ಎಂದು ಒತ್ತಾಯವನ್ನು ನನ್ನ ಮೇಲೆ ತಂದಿಲ್ಲ. ನನ್ನ ಹೆಂಡತಿಯ ಸಂಬಂಧಿಕರಾರೂ ಆ ಒತ್ತಾಯವನ್ನು ನನ್ನ ಮೇಲೆ ಹೇರಿಲ್ಲ. ಆದರೆ ಒಬ್ಬ ಪಾದ್ರಿ ಹೋಗಿ ತುಂಬ ಕಷ್ಟದಲ್ಲಿರುವ ಒಬ್ಬ ಬಡವನಿಗೆ ಸಹಾಯ ಮಾಡಿ ಅವನ ಗ್ರಾಟಿಟ್ಯೂಡ್ನಲ್ಲಿ, ಕೃತಜ್ಞತೆಯಲ್ಲಿ ಅವನನ್ನು ಮತಾಂತರಗೊಳಿಸುವುದು ಅವನಿಗೆ ಸಂಬಂಧಿಸಿದ್ದು. ಅದು ಸರಿಯಲ್ಲ ಎಂಬುದು, ಅವನು ನಿಜವಾದ ಕ್ರೆ ಸ್ತನಾಗಿದ್ದರೆ ಗೊತ್ತಿರುತ್ತದೆ. ಮತಾಂತರವು ಹೃದಯದ ಒಳಗಿನಿಂದ ಬರಬೇಕಾದ ಪರಿವರ್ತನೆ ಎಂದು ಗೊತ್ತಿರುತ್ತದೆ. ಇದನ್ನು ತಿಳಿಯದವನು ಒಳ್ಳೆಯ ಪಾದ್ರಿಯಲ್ಲ. ಅವನು ಕ್ರಿಶ್ಚಿಯನ್ ಧರ್ಮಕ್ಕೆ ಅರ್ಹನಾದವನಲ್ಲ. ಹಾಗೇನೆ ಇಸ್ಲಾಂ ಧರ್ಮಕ್ಕೂ ಅರ್ಹನಾದವನಲ್ಲ. ಬಲತ್ಕಾರವಾಗಿ ಮತಾಂತರ ಆಗುವುದಾದರೆ ಇವರು ಯಾಕೆ ಮತಾಂತರ ಆಗುತ್ತಿದ್ದಾರೆನ್ನುವುದು ನಮ್ಮ ಮಠದ ಸ್ವಾಮಿಗಳಿಗೆ, ಹಿರಿಯರೆಲ್ಲರಿಗೂ ಒಂದು ರೀತಿಯ ಸಮಸ್ಯೆಯಾಗಿದೆ. ಅಂದರೆ ಹಿಂದೂ ಸಾಮಾಜಿಕ ಚೌಕಟ್ಟಿನ ಬಗ್ಗೆ ಪುನರ್ ವಿಮರ್ಶೆ ಮಾಡಬೇಕಾಗಿದೆ.
ನಮ್ಮ ಕಾಲದ ಅತ್ಯಂತ ದೊಡ್ಡವರು ಯಾರು? 20ನೆಯ ಶತಮಾನದಲ್ಲಿ ವಿಜ್ಞಾನಿಗಳು. ಹೌದು, ಅವರು ಬಹಳ ದೊಡ್ಡ ಕೆಲಸವನ್ನು ಮಾಡಿದ್ದಾರೆ. ಅವರಿಗಿಂತ ದೊಡ್ಡವರು ಯಾರು? ಯಾರ್ಯಾರಲ್ಲಿ ಎರಡು ಕನಸುಗಳಿದ್ದವೋ ಅವರು-
1. ಸಮಾನತೆಯ ಹಸಿವು
2. ದೇವರ ಹಸಿವು
ಇವೆರಡೂ ಹಸಿವುಗಳು ಯಾರಲ್ಲಿದ್ದವೋ ಅವರು ಈ ಕಾಲದಲ್ಲಿ ದೊಡ್ಡವರು. ಅದನ್ನು ದೇವರ ಹಸಿವೆಂದಾದರೂ ಕರೆಯಿರಿ, ಇಲ್ಲ ಆಧ್ಯಾತ್ಮದ ಹಸಿವೆಂದಾದರೂ ಕರೆಯಿರಿ. ಕೇವಲ ಸಮಾನತೆಯ ಹಸಿವಿದ್ದಾಗ ಅದು ಮಾವೋತ್ಸೆ ತುಂಗ್ ಅಥವಾ ಲೆನಿನ್ ರೀತಿಯ ಅವಸರದ ಬದಲಾವಣೆಗಳಿಗೆ ದಾರಿ ಮಾಡುತ್ತದೆ. ಆಧ್ಯಾತ್ಮಿಕ ಜೀವನವನ್ನು ಅದು ಉಪೇಕ್ಷಿಸಿ, ನಿರ್ಲಕ್ಷಿಸಿದ್ದರಿಂದ ಅನೇಕ ತಪ್ಪುಗಳು ಸ್ಟಾಲಿನ್ನಂತವರಲ್ಲಾಗಿ ರುವುದನ್ನು ನಾವು ನೋಡುತ್ತೇವೆ. ಆಧ್ಯಾತ್ಮಿಕವಾದ ಹಸಿವು ಮತ್ತು ಸಮಾನತೆಯ ಹಸಿವು ಒಂದು ಬಿಟ್ಟು ಇನ್ನೊಂದಿಲ್ಲ. ಕೇವಲ ಆಧ್ಯಾತ್ಮಕ ಹಸಿವಿದ್ದರೆ ಅದೊಂದು ಸನ್ಯಾಸಿಯ ಮಾರ್ಗವಾಗಿಬಿಡುತ್ತದೆ. ಅದು ಸಮಾಜದಿಂದ ದೂರವಾದ ಮಾರ್ಗ. ಎರಡೂ ಒಟ್ಟಿಗೆ ಇದ್ದಾಗ ಮಾಟರ್ಿನ್ ಲೂಥರ್ ಕಿಂಗ್ನಂತಹವನು ಬರುತ್ತಾನೆ. ಮಹಾತ್ಮಾ ಗಾಂಧಿಯಂಥವರು ಮತ್ತು ಅಂಬೇಡ್ಕರ್ರಂಥವರು ಬರುತ್ತಾರೆ.
ಅಂಬೇಡ್ಕರ್ರವರಲ್ಲಿ ಎರಡು ಚಿತ್ರಣಗಳಿವೆ. ನಾನು ಎಲ್ಲರಿಗೂ ಸಮಾನವಾದವನು, ನಿಮ್ಮ ಹಾಗೇನೆ ಇಂಗ್ಲಿಷ್ ಶಿಕ್ಷಣ ಪಡೆದವನು. ಯಾವುದಕ್ಕೂ ನಾನು ಕಡಿಮೆ ಇಲ್ಲ ಎನ್ನುವ ಸೂಟುಧಾರಿ ಅಂಬೇಡ್ಕರ್ ಒಬ್ಬ. ಇನ್ನೊಬ್ಬ ತಲೆ ಬೋಳಿಸಿಕೊಂಡು ಕೈಯಲ್ಲಿ ದಂಡವನ್ನು ಹಿಡಿದುಕೊಂಡು ಬೌದ್ಧ ವೇಷದಲ್ಲಿರುವ ಅಂಬೇಡ್ಕರ್. ಈ ಎರಡೂ ಅಂಬೇಡ್ಕರ್ ಒಬ್ಬನೇ ಎಂದು ಗೊತ್ತಾದಾಗ, ನಮ್ಮ ಕಾಲದ ಅತ್ಯಂತ ಮಹತ್ವದ ಆಂದೋಲನದ ಹಿಂದಿರುವ ಒಂದು ಒತ್ತಾಸೆ ನಮಗೆ ತಿಳಿಯುತ್ತದೆ.
ಆದ್ದರಿಂದ ಗಾಂಧಿ ಮತ್ತು ಅಂಬೇಡ್ಕರ್ ಒಬ್ಬರಿಗೊಬ್ಬರು ಪೂರಕವಾಗಿ ಬರುತ್ತಾರೆ. ಯಾಕೆಂದರೆ ಅವರಿಬ್ಬರಲ್ಲೂ ಈ ಹಸಿವಿತ್ತು. ಆದರೆ ಒಬ್ಬರಿಗೊಬ್ಬರು ಅರ್ಥವಾಗುತ್ತಿರಲಿಲ್ಲ. ಒಂದು ಕಡೆ ಅಂಬೇಡ್ಕರ್ ಜೊತೆ ಬಹಳ ಗುದ್ದಾಡಿದ್ದಾರೆ ಗಾಂಧೀಜಿ. ಆದರೆ, ಒಂದು ಸಾರಿ ಗಾಂಧೀಜಿ ಹತ್ತಿರ ಯಾರೊ ಒಬ್ಬ ದಲಿತ ಹುಡುಗ ಬಂದಾಗ ನೀನು ಅಂಬೇಡ್ಕರ್ ಹಾಗೆ ಆಗಬೇಕೆಂದರಂತೆ ಗಾಂಧಿ…
ಅಂದರೆ ಗಾಂಧಿ, ಗಾಂಧಿಯೇ ಆಗಲು ಅಂಬೇಡ್ಕರ್ ಪ್ರೇರಣೆ ಅತ್ಯಂತ ಅಗತ್ಯವಾಗಿತ್ತು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
ದಲಿತರಿಗೆ ಒಂದು ಸಮಸ್ಯೆಯಿದೆ. ಸಾಮಾಜಿಕ ವಲಯದಲ್ಲಿ ನಮ್ಮ ಕಣ್ಣಿಗೆ ಬೀಳುವಂತಹ ಹೆಚ್ಚು ಜನ ದಲಿತರು ಮಧ್ಯಮ ವರ್ಗದವರೇ ಆಗಿರುತ್ತಾರೆ. ದಲಿತ ಚಳುವಳಿಯಿರುವುದು ನಮಗೆ ಹೆಚ್ಚು ಸವಲತ್ತುಗಳನ್ನು ಕೊಡಿ. ಹೆಚ್ಚು ವಿದ್ಯಾಭ್ಯಾಸವನ್ನು ಕೊಡಿ ಎಂದು ಕೇಳುವುದಕ್ಕೆ. ಅದನ್ನು ಪಡೆಯುವುದರಿಂದಲೇ ಅವರು ಮಧ್ಯಮ ವರ್ಗಕ್ಕೆ ಬರುತ್ತಾರೆ. ಮಧ್ಯಮ ವರ್ಗಕ್ಕೆ ಬಂದ ಕೂಡಲೇ ಮಧ್ಯಮ ವರ್ಗದ ಎಲ್ಲ ರೋಗಗಳು ಅವರಿಗೂ ಅಂಟುತ್ತವೆ. ಅವರಿಗೆ ಅಂಟಬಾರದೆಂದರೆ ಅವರೇನು ದೇವತೆಗಳೇ!? ನಮ್ಮ ಹಾಗೆ ಮನುಷ್ಯರಲ್ಲವೆ ಅವರು? ನಮಗೆ ಅಂಟಿರುವ ಎಲ್ಲ ರೋಗಗಳು ದಲಿತರಿಗೂ ಅಂಟುತ್ತವೆ. ಅವರಿಗೂ ಚೇರ್ಮನ್ಷಿಪ್ಗಳು ಬೇಕು. ಕೆಲಸಗಳು ಬೇಕು. ಒಳ್ಳೆಯ ಉದ್ಯೋಗಗಳು ಬೇಕು. ಹೇಗಾದರೂ ಇದು ಆಗಬೇಕು. ಅಂದರೆ ಇಂದಿನ ಹೊಲಸು ರಾಜಕಾರಣದ ಒಂದಂಶವಾಗಬೇಕು.
ನನ್ನ ದಲಿತ ಸ್ನೇಹಿತರಿಗೂ ಇದರ ಅರಿವಿದೆ. ದಲಿತರಲ್ಲಿ ಆಗುವ ಬದಲಾವಣೆ ಇಡೀ ಸಮಾಜದ ಬದಲಾವಣೆಯಾಗಬೇಕಾದ ವೈಚಾರಿಕ ಕ್ರಾಂತಿ ಮೊದಲು ಸಾಹಿತ್ಯದಲ್ಲಿ ಆಗಬಹುದು. ಕ್ರಮೇಣ ನಿತ್ಯ ಜೀವನದ ಹೊಸ ಬೆಳಕಾಗಿ ಎಲ್ಲ ಜಾತಿಗಳಲ್ಲೂ ಕಾಣಬಹುದು.

ದಿನಾಂಕ 26-1-1999ರಂದು ಬೆಂಗಳೂರಿನಲ್ಲಿ ನಡೆದ ಬೂಸಾ ಚಳುವಳಿ 25 ವರ್ಷ ಕಾರ್ಯಕ್ರಮದ ಉದ್ಘಾಟನಾ ಭಾಷಣ. ಕೃಪೆ: ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳುವಳಿ ಕಾಲು ಶತಮಾನ. ಸಂ. ಲಕ್ಷ್ಮಿ ನಾರಾಯಣ ನಾಗವಾರ, ಪ್ರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಬೆಂಗಳೂರು, 2000.

 

‍ಲೇಖಕರು G

August 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. DIVYA ANJANAPPA

    ಸಾಹಿತ್ಯವು`ಬೂಸಾ ಇದ್ದಂತೆ ದಲಿತರ ಪಾಲಿಗೆ’ ಎಂಬ ಬಸವಲಿಂಗಪ್ಪನವರ ಮಾತಿನ ಹಿಂದಿನ ವಿಚಾರಗಳು ಏನಿದ್ದವೋ ಅವುಗಳನ್ನು ತಿಳಿಯಬೇಕಿತ್ತು ಎಂಬ ತಮ್ಮ ಅಭಿಪ್ರಾಯವು ನಮ್ಮಲ್ಲಿ ಕುತೂಹಲವನ್ನು ಮೂಡಿಸಿದ್ದು,ಸಮಸ್ತ ಕನ್ನಡಿಗರನ್ನು ಕೇರಳಿಸುವಂತಹ ಅವರ ಹೇಳಿಕೆಯ ಹಿಂದಿನ ಮನೋವಿಚಾರವನ್ನು ಪ್ರಸ್ತುತಪಡಿಸಿದ್ದಿದ್ದರೆ ವಿಚಾರಚಿತ್ರಣ ಪೂರ್ಣವಾಗುತ್ತಿತ್ತು ಎಂದೆನಿಸುತ್ತದೆ ಸರ್. ನಿಮ್ಮ ಚಿಂತನೆಗಳು ಒಪ್ಪುವಂತಹವು. ಧನ್ಯವಾದಗಳು ಸರ್.

    ಪ್ರತಿಕ್ರಿಯೆ
  2. arun joladkudligi

    ನಾನು ಈಚೆಗೆ ರಹಮತ್ ತರೀಕೆರೆ ಅವರ “ಕನ್ನಡ ಸಾಹಿತ್ಯದ ವಾಗ್ವಾದಗಳು” ಕೃತಿಯನ್ನು ಓದುತ್ತಿದ್ದೆ. ಇದರಲ್ಲಿ ಬೂಸಾ ಸಾಹಿತ್ಯ ವಾಗ್ವಾದವನ್ನು ಓದುವಾಗ, ಅನಂತಮೂರ್ತಿಯವರು ಈ ಸಂದರ್ಭದಲ್ಲಿ ಒಬ್ಬ ಸಾಹಿತಿಯಾಗಿ ನಡೆದುಕೊಂಡ ಬಗೆ ನನಗೆ ತುಂಬಾ ಇಷ್ಟವಾಯಿತು. ಅನಂತಮೂರ್ತಿಗಳ ಬಗ್ಗೆ ನನ್ನ ಗೌರವ ಇಮ್ಮಡಿಯಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: