ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುಡುಬುಡಿಕೆ ಕಸುಬು ಮುಗಿತಾ…?

ಗೋಮಾರದಹಳ್ಳಿ ಮಂಜುನಾಥ್ ಸಿರಾ

ಕಳೆದ ಮಂಗಳವಾರ ಶಿರಾ ಸಂತೆಯಲ್ಲಿ ಶಕುನ ಹೇಳಿ ‘ಬಂದಷ್ಟೇ ಶಿವ’ ಅಂದ್ಕೊಂಡು ಮಧ್ಯಾಹ್ನಕ್ಕೆ ಜೋಳಿಗೆ ಮುಚ್ಚಿಟ್ಟು ಕುಂತಿದ್ದರು ಬುಡುಬುಡಿಕೆ ಗಂಗರಾಜು. ಐದು ಕೆಜಿ ಅಕ್ಕಿ, ಐದು ಕೆಜಿ ರಾಗಿ ಹಿಟ್ಟಿನಷ್ಟು ಗಂಟು ಜೋಳಿಗೆಯಲ್ಲಿತ್ತು. ಐವತ್ತು ರೂಪಾಯಿ ಕಾಸು ಆಗಿದೆ ಅಂದರು.
‘ನಮ್ಮವರು ಯಾರೂ ಈಗ ಬುಡುಬುಡಿಕೆ ವೃತ್ತಿ ಮಾಡ್ತಿಲ್ಲ. ಇದರಲ್ಲಿ ಏನೂ ಸಿಗ್ತಿಲ್ಲ. ಅದರಿಂದ ಬೇರೆ ಬೇರೆ ವೃತ್ತಿಗೆ ಹೋಗ್ತಿದ್ದಾರೆ. ಆದರೆ ನಮ್ಮಪ್ಪನ ಕಾಲದಲ್ಲಿ ಈ ರೀತಿ ಇರಲಿಲ್ಲ. ನಮ್ಮಪ್ಪ ಬುಡುಬುಡಿಕೆ ಆಡಿಸುತ್ತಾ ಹೊರಟರೆ ಅವರ ಹಿಂದೆ ನಾಲ್ಕು ಜನ ಗಂಡಾಳು ಹೋಗಬೇಕಿತ್ತು; ಜನರು ಅವರಿಗೆ ಕೊಡ್ತಿದ್ದನ್ನ ಹೊರಲಿಕ್ಕೆ…!’ ಎಂದು ತಮ್ಮ ಬುಡುಬುಡಿಕೆ ಕಸುಬಿನ ಗತ ವೈಭವದ ದಿನಗಳಿಗೆ ಜಾರಿದರು ಗಂಗರಾಜು.
‘ನಿಮ್ಮ ಅಪ್ಪನ ಹೆಸರೇನು?’
‘ಬುಡುಬುಡಿಕೆ ರಾಮಜ್ಜ… ಯಾವುದೇ ಊರೊಳಗೆ ಹೋಗಿ ರಾಮಜ್ಜ ಬುಡುಬುಡಿಕೆ ಅಲ್ಲಾಡಿಸಿದಾನೇ ಅಂದರೆ ಆ ಊರಲ್ಲಿ ಹೊರಲಾರದಷ್ಟು ಕಾಳು, ಕಂಚು-ಹಿತ್ತಾಳೆ ಚೆಂಬು, ಕಂಚಿನ ಗಂಗಾಳ, ಹಳೆ ರೇಷ್ಮೆ ಸೀರೆ, ಕೋಳಿ, ಕುರಿಮರಿ…ಎಲ್ಲಾನೂ ಕೊಡುತಿದ್ದರು. ಅವನ್ನು ಹೊತ್ಕೊಂಡು ಬರಲಿಕ್ಕೆ ನನ್ನಂಥವರು ನಾಲ್ಕು ಜನ ಅವರ ಜೊತೆಗೆ ಹೋಗ್ತಿದ್ವಿ…!’
‘ನೀವು ಆಗಲೇ ಬುಡುಬುಡಿಕೆ ಶಕುನ ಹೇಳೋದು ಕಲಿತರಾ…?’
‘ನಾನು ಆಗಿನ ಕಾಲಕ್ಕೆ ಮಧುಗಿರಿಯಲ್ಲಿ ಪಿಯುಸಿವರೆಗೆ ಓದಿದೆ. ಸರ್ಕಾರಿ ಕೆಲಸವೂ ಬಂದಿತ್ತು. ಆದರೆ ಎರಡು ಸಾವಿರ ರೂಪಾಯಿ ಲಂಚ ಕೇಳಿದರು. ನಮಗೆ ಅಷ್ಟೊಂದು ಹಣ ಕೊಡಲಿಕ್ಕೆ ಆಗಲಿಲ್ಲ. ಆಗ ಸಾಕಷ್ಟು ಮೇಕೆಮರಿ, ಕುರಿಮರಿ ಇದ್ದವು. ಒಂದು ಮಾರಿದರೆ ಬರೀ ಐವತ್ತು ರೂಪಾಯಿ ಬರುತಿತ್ತು. ಎಷ್ಟು ಅಂತ ಮಾರಿ ಎರಡು ಸಾವಿರ ಹೊಂದಿಸೋದು ಅಂತ ಕೆಲಸಕ್ಕೆ ಹೋಗಲಿಲ್ಲ…ಅಪ್ಪನ ಬುಡುಬುಡಿಕೆ ಕೈ ಹಿಡಿದೆ… ಅಪ್ಪನಂತೆ ಕಲ್ಲು ನೀರು ಕರಗೋ ಸರುವೊತ್ತಿನಲ್ಲಿ ಊರುಗಳಿಗೆ ಹೋಗಿ ‘ಅರಕೆ’ ಹಾಕುವ ಆಚರಣೆ ನಾನು ಮಾಡ್ತಿಲ್ಲ. ಯಾವಾಗಲಾದರೂ ಹೀಗೆ ಬುಡುಬುಡಿಕೆ ಹಿಡಿದು ಊರುಗಳ ಮೇಲೆ ಹೋಗ್ತೇನೆ. ಉಪಕಸಬಾಗಿ ಯಂತ್ರ-ಮಂತ್ರ, ಶಾಸ್ತ್ರ-ಮಾಟ ಮಾಡ್ತೇನೆ. ಮನೆಯಲ್ಲಿ ಚಿಂತಾಮಣಿ ಪುಸ್ತಕ ಇದೆ…ಭವಿಷ್ಯ ಹೇಳ್ತೇನೆ’
‘ಮಾಟ ಅಂದರೆ ನಮಗೆ ಆಗದ ವ್ಯಕ್ತಿಗೆ ಏನಾದರೂ ಕೇಡು ಆಗುವ ಹಾಗೇ ಮಾಡ್ತೀರಾ..?’
‘ಮಾಡ್ತೇನೆ…ಆದರೆ ಆ ವ್ಯಕ್ತಿನ ನನ್ನ ಬಳಿಗೆ ಕರೆದುಕೊಂಡು ಬರಬೇಕು…’
‘ಕರೆದುಕೊಂಡು ಬರಲಿಕ್ಕೆ ಆಗಲಿಲ್ಲವಾದರೆ…?’
‘ನಾನು ಹೇಳಿದ್ದು ತರಬೇಕು’

‘ಏನೇನು ತರಬೇಕು?’
‘ಆ ವ್ಯಕ್ತಿ ಧರಿಸಿದ ಬಟ್ಟೆ, ಆತನ ಕೂದಲು, ಆತನ ಪಾದದಡಿಯ ದೂಳು ಮಣ್ಣು….ಹಾಂ.! ಇದನ್ನೆಲ್ಲಾ ಬರೆದುಕೊಬೇಡಿ…ನಾಳೆ ಪೇಪರ್ ನಲ್ಲಿ ಬಂದರೆ ನನಗೆ ತೊಂದರೆ ಆಗ್ತದೆ…’
ಬರೆಯುವುದನ್ನು ಮುಚ್ಚಿಟ್ಟು ‘ನಿಮಗೆ ಮಕ್ಕಳೆಷ್ಟು..?’
‘ಇಬ್ಬರು. ಒಂದು ಗಂಡು, ಇನ್ನೊಂದು ಹೆಣ್ಣು. ಇಬ್ಬರಿಗೂ ಮದುವೆ ಮಾಡಿದ್ದೇನೆ. ಬೆಂಗಳೂರಿನಲ್ಲಿದ್ದಾರೆ. ಏನೋ ಫ್ಯಾಕ್ಟರಿ ಕೆಲಸಕ್ಕೆ ಹೋಗ್ತಾರೆ. ಅವರು ಯಾರೂ ಈ ವೃತ್ತಿ ಮಾಡಲ್ಲ ಬಿಡಿ…’
‘ನಿಮ್ಮ ಜನಾಂಗದ ಮೂಲ ಏನು?’
‘ಅದೇ ನನಗೂ ಗೊತ್ತಿಲ್ಲ. ಪೇಪರ್ ನಲ್ಲಿ ಎಲ್ಲಾ ಜನಾಂಗದ ಮೂಲಗಳ ಬಗ್ಗೆಯೂ ಕೊಡುತ್ತಾರೆ. ನಮ್ಮದು ಯಾರೂ ಈವರೆಗೆ ಕೊಟ್ಟಿಲ್ಲ. ಆದರೆ ನಮ್ಮ ಬುಡುಬುಡಿಕೆಯವರು ಸಾಮಾನ್ಯವಾಗಿ ಮರಾಠಿ ಮನೆಮಾತು ಮಾಡಿಕೊಂಡಿರುತ್ತಾರೆ. ಬುಡುಬುಡಿಕೆ-ಮರಾಠಿ; ಈ ಎರಡೇ ನಮ್ಮ ಗುರುತು. ಶಿರಾ ತಾಲ್ಲೂಕಿನ ಕೊಟ್ಟ ಹಾಗೂ ದೊಡ್ಡ ಆಲದಮರ ಗ್ರಾಮದಲ್ಲೂ ನಾಲ್ಕೈದು ಮನೆಯವರು ನಮ್ಮವರು ಇದಾರೆ…’
‘ನಿಮ್ಮ ಸಂಘ-ಮುಖಂಡರು ಅಂತ ಯಾರೂ ಇಲ್ವಾ…?’
‘ನಮ್ಮವರು ಸರ್ಕಾರಿ ಕೆಲಸದಲ್ಲಿ ಇದ್ದರಲ್ಲ ಅವರೇ ನಮ್ಮ ಮುಖಂಡರು. ಅವರೆಲ್ಲಾ ಈಗ ರಿಟೈರ್ಡ್ ಆಗ್ಬಿಟ್ಟಿದ್ದಾರೆ. ಹಿಂದೆ ಒಂದು ಸಲ ಅದಾವುದೋ ಸಿನಿಮಾದಲ್ಲಿ ಒಬ್ಬನಿಂದ ಬುಡುಬುಡಿಕೆಯವನ ಪಾತ್ರ ಮಾಡಿಸಿದ್ದರು. ಅದು ನಮ್ಮ ಜನಾಂಗಕ್ಕೆ ಅವಮಾನ ಆಗುವಂತೆ ಇತ್ತು. ಆಗ ನಾನು ಫಿಲಂಚೇಂಬರ್ ಗೆ ಹೋಗಿ ಬುಡುಬುಡಿಕೆ ಪಾತ್ರ ಮಾಡಿಸೋದು ಇದ್ದರೆ ನಮ್ಮಿಂದಲೇ ಮಾಡಿಸಿ..ಇಲ್ಲದಿದ್ದರೆ ಹೀಗೆ ಅವಮಾನ ಮಾಡಬೇಡಿ ಅಂತ ದೂರು ಕೊಟ್ಟಿದ್ದೆ…ವಿಷಯ ಅಲ್ಲೇ ಬಗೆಹರಿಸಿದರು. ನಿಜವಾಗಿ ನಾನು ಕೋರ್ಟಿಗೆ ಹೋಗಬೇಕಿತ್ತು…’
‘ಈ ಬುಡುಬುಡಿಕೆ ಯಾವ ಮರದ ತುಂಡಲ್ಲಿ ಮಾಡ್ತೀರಾ..? ಯಾವುದರ ಚರ್ಮ ಹಾಕ್ತೀರಾ..?’
‘ತೇಗದ ಮರದ ತುಂಡಿನಲ್ಲಿ ಮಾಡ್ತೇವೆ. ಹಿರೇಹಕ್ಕಿ ಚರ್ಮ ಹಾಕ್ತೇವೆ..’
‘ಅಳಿಲು ಚರ್ಮ ಹಾಕ್ತಾರೆ ಅಂತರಾಲ್ಲ…?’
‘ಸುಳ್ಳು. ಅಳಿಲು ಚರ್ಮ ಸುಲಿಯಲಿಕ್ಕೇ ಬರಲ್ಲ…’
‘ನೀವು ಬೇಟೆ ಆಡ್ತೀರಾ…?’
‘ಆಡ್ತೇನೆ..ಅಳಿಲು, ಹಿರೇಮರದ ಹಕ್ಕಿ ಭೇಟೆ ಆಡ್ತೇನೆ…ಆದರೆ ಈಗ ಭೇಟೆ ಆಡುವಂತೆಯೇ ಇಲ್ಲ ಅಂತೇಳಿ ಕಾನೂನು ಮಾಡಿದ್ದಾರಲ್ಲ..?
ಬುಡುಬುಡಿಕೆ ಗಂಗರಾಜು ಜೊತೆ ಮತ್ತಷ್ಟು ಮಾತಾಡಲು ಮನಸಿದ್ದರೂ ಬಸ್ ಗೆ ಟೈಮ್ ಆಯಿತು. ಬರ್ತೇನೆ ಎಂದು ಹೇಳಿ ಹೊರಟೇ ಬಿಟ್ಟರು!
 

‍ಲೇಖಕರು G

1 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading