ಮಯೂರ ರವಿಶಂಕರ್
ಅಡಿಗಡಿಗೂ ಗಡಿಯಾರದ ನಡೆಯು
ಎಡೆಮಾಡಿದೆ ತಡೆಯಲಾರದೆಡೆಗೆ
ಕಡೆಗೂ ಬೀಸಿದೆ ಸಮಯದ ಬಡಿಗೆ
ಹಾಡಿದೆ ಎದೆಯ ಬಡಿತದ ಸದ್ದಿಗೆ
ಕಡೆಗಣಿಸಿದವರ ನಡೆಯ ನುಡಿಗೆ
ಬಡಿದುಕೊಂಡಿರುವ ಗಂಟೆಯ ಗಂಟಲಿಗೆ
ತಡಕಾಡಿದೆ ಕಾಡುವ ಬೇಡುವ ಸದ್ದಿಗೆ
ಸುದ್ದಿಯ ಕೊಡುವ ಅದೇ ಜಿದ್ದಿಗೆ
ಬಿದ್ದಿ ಬಿದ್ದಿ ಓಡುತಿದೆ ಅದೇ ವೇಗದಲಿ
ಹಿಡಿದು ತಡೆಯಬಲ್ಲೆಯಾ
ಗಡಿಯಾರದ ಬಂಡಿಯಾ …??

ನಾವು ನಡೆದ ದಾರಿ ಆವುದಯ್ಯ ?
ಮಲ್ಲಪ್ಪ ಪಾರೇಗಾಂವ, ಅಥಣಿ
ನಾವು ನಡೆದ ದಾರಿ ಆವುದಯ್ಯ ?
ಕಾಲನ ಕೈಲಿ ಮುಂದೆ ಸಾಗುತ
ಹಿಂದೆ ನೋಡುವುದೇ ಜೀವನ.
ಮಾಡಿದ ತಪ್ಪುಗಳ ಮರುಕಳಿಸದಂತೆ
ಪಯಣದ ತಿರುವು ಮುರುವುಗಳ ದಾರಿಯಲ್ಲಿ
ಮರೆತು ಹೋದ ಮುಖಗಳ
ಸೂತಕದ ಛಾಯೆಯಲ್ಲಿ ಸಂಬಂಧಗಳ ಹುಡುಕುತ
ಸಮಯದೊಂದಿಗೆ ಹೆಜ್ಜೆ ಹಾಕುತ
ಹಿಂದಿನದನ್ನು ಮರೆಯದೆ
ಮುಂದಿನದನ್ನು ನೆನಪಿಸಿಕೊಳ್ಳದೆ ಸಾಗುವುದೇ ಜೀವನ.
ಇಂದಿನ, ಹಿಂದಿನ, ಮುಂದಿನ
ಇಪ್ಪತ್ನಾಲ್ಕೂ ತಾಸುಗಳಲ್ಲಿ ತಾನೇನು
ಮಾಡಿದೆನು ? ಮಾಡಿದ್ದೆ ? ಮಾಡಬೇಕು ?
ಈ ಎಲ್ಲವನ್ನು ನಿರ್ಧರಿಸಿದ ನಂತರವೇ
ಜೀವನದ ರೈಲು ಬಂಡಿಯೂ
ಹಳಿ ಮೇಲಿದೇಯೋ ಅಥವಾ ತಪ್ಪಿದೇಯೋ
ಎಂಬುದಕ್ಕೆ ಕಾಲವೇ ಉತ್ತರಿಸಬೇಕು.
ಸದಾ ಕಾಲನ ಹೆಗಲ ಮೇಲೆ ಹೊತ್ತುಕೊಂಡು
ಅದರ ಪರಿವೇ ಇಲ್ಲದೆ
ಸಂತೆಯೊಂದರಲ್ಲಿ ಹುಳುಕು ಬದನೆಕಾಯಿ ಕೊಂಡು
ಹುಳುಕನ್ನು ತೆಗೆಯದೇ ಅಡುಗೆ ಮಾಡಿಕೊಂಡು
ಉಪ್ಪು ಕಾರ ಹುಳಿ ಇಲ್ಲದ ಅಡುಗೆಯನ್ನು
ತಿಂದುಂಡು ಸಂಭ್ರಮಿಸುವುದೇ ಜೀವನ
ಅನ್ನಬಹುದಾ ? ಗೊತ್ತಿಲ್ಲ
ಅದನ್ನು ಕಾಲವೆ ನಿರ್ಧರಿಸಬೇಕು.





0 Comments