ಬೀಸಣಿಕೆ ಗಾಳಿ ಸುಳಿದಾವ…

ಡಾ ಶ್ರೀಪಾದ ಭಟ್

ದಿಮ್ಸಾಲ್ ಮಕ್ಕಳ ಶಿಬಿರದ ನಾಟಕ ನೋಡಿದ ಅನುಭವದ ಕುರಿತೊಂದು ಟಿಪ್ಪಣಿ

ಭೂಮಿ ಬಾನು ಎರಡೂ ಧುಮುಗುಡುತ್ತಿದ್ದ ಹೊತ್ತು ಅದು. ಕರಾವಳಿಯ ಉಡುಪಿಯ ಸುತ್ತಣ ಬೇಸಿಗೆಯನ್ನು ವರ್ಣಿಸುವದೇ ಬೇಡ. ಬಿಸಿಲೆಂದರೆ ಬಿಸಿಲೇ ಅದು. ಅಂತ ಸಮಯದ ಆ ದಿನ ಬ್ರಹ್ಮಾವರ ಸಮೀಪದ ಹಾರಾಡಿ ಶಾಲಾ ಆವರಣಕ್ಕೆ ಬಂದ ಕೂಡಲೇ ವಾತಾವರಣದ ತುಂಬೆಲ್ಲ ತಣ್ಣನೆಯ ಸುಳಿಗಾಳಿ.! ಬೆವರಿನಿಂದ ತೊಯ್ದ ಕಾಲರಿನಂಚಿನಲ್ಲಿ ತಣ್ಣನೆ ಕಚಕುಳಿಯಿಟ್ಟ ಅನುಭವ.! ಕಣ್ಣ ಮೇಲಿಳಿದ ಬೆವರ ಬಿಂದೂ ಚಂದದ ಹನಿಯಾದ ಅನುಭವ.! ಹೀಗೆ ಧಗೆಯ ಹೊತ್ತನ್ನು ತಂಪಗೆ ರೂಪಾಂತರಿಸಿದವರು ಆ ಆವರಣದಲಿದ್ದ ಮಕ್ಕಳು.

ಬಣ್ಣದ ಕ್ಯಾಂಪಿನ ಸಮಾರೋಪದ ಸಂಭ್ರಮದ ಹೊತ್ತದು. ಬಣ್ಣದಂಗಿಯ ಮಕ್ಕಳು ಅಲ್ಲಿ ಮೈದಾನ, ರಂಗಸ್ಥಳದ ಆಚೀಚೆ ಅವರದೇ ಲೋಕದಲ್ಲಿ ಒಳಹೊರಗೆ ಓಡಾಡುತ್ತಿದ್ದರು. ಬೀಸಣಿಕೆ ಗಾಳಿ ಸುಳಿದಿತ್ತು. . . . ಜನಪದ ಗೀತೆಯೊಂದು ಅನುಭವಕ್ಕೆ ಸಿಕ್ಕ ಹೊತ್ತದು.

ಅಂದು, ಅಂದರೆ ೧ ಮೇ ಭಾನುವಾರ ೨೦೨೨ ರಂದು ಅಲ್ಲಿ ಆ ಮಕ್ಕಳು, ರಂಗ ಶಿಬಿರದಲ್ಲಿ ಕಲಿತ ಹೂವಿನ ನಗರಿ ಎಂಬ ಚಂದದ ನಾಟಕವಾಡಿದರು. ಟ್ಯಾಗೋರರ ಕೆಂಪುಕಣಗಿಲೆ ನಾಟಕದಲ್ಲಿ ಬರುವ ಒಂದು ಮಾತು ಹೀಗಿದೆ.

ಬಿಸಿಲಿನ ತಾಪವನ್ನು ಮೃದುವಾದ ಹೂವುಗಳು ತಾಳಬಲ್ಲವು. . ಮುಂಜಾನೆಯ ತಂಪುಹನಿ ಮತ್ತು ಸಂಧ್ಯೆಯ ತಂಗಾಳಿಯ ಸಾಂತ್ವನದಿAದ – –
ಇಲ್ಲಿ ಹೂವಿನಂತಹ ಆ ಮಕ್ಕಳನ್ನು ಸಂತೈಸಿದವರು ಮುಂಜಾನೆಯ ಹನಿಯಂತಿರುವ, ಸಂಧ್ಯೆಯ ತಂಗಾಳಿಯoತಿರುವ ಇಬ್ಬರು ಮಹಿಳೆಯರು. ಒಬ್ಬರು ದಿಮ್ಸಾಲ್ ಎಂಬ ಮಕ್ಕಳ ರಂಗಸoಘಟನೆಯನ್ನು ಕಟ್ಟಿ ಮಕ್ಕಳ ರಂಗಶಿಬಿರ ನಡೆಸುತ್ತ ಬಂದ ನಾಟಕಕಾರರೂ, ಎಸ್.ಎಮ್.ಎಸ್. ಸಂಸ್ಥೆಯ ಪ್ರಾಂಶುಪಾಲರೂ ಆಗಿರುವ ಅಭಿಲಾಷಾ ಎಸ್. ಮತ್ತು ಇನ್ನೊಬ್ಬರು ಈ ಬಣ್ಣದ ಕ್ಯಾಂಪಿನ ನಿರ್ದೇಶಕರೂ, ಎನ್.ಎಸ್.ಡಿ.ಪದವೀಧರರೂ ಆಗಿರುವ ಅಪೂರ್ವ ಆನಗಳ್ಳಿಯವರು.

ಹೂವಿನ ನಗರಿ ನಾಟಕದ ರಚನೆ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಅಪೂರ್ವ ಅವರದೇ ಆಗಿತ್ತು.

ಅದೊಂದು ಹೂವಿನ ನಗರಿ. ಅಲ್ಲಿಯ ಬದುಕು ಹೂವಿನ ಬೆಳೆಯಮೇಲೇ ನಿಂತಿತ್ತು. ಎಂದು ಅಲ್ಲಿಯ ರಾಜ ರಾಣಿಗೆ ಗ್ರಹಬಂಧನ ವಿಧಿಸಿದನೋ ಅಂದಿನಿoದ ಬೆಳೆ ಮತ್ತು ಬದುಕಿಗೆ ಸಮಾನ ಹಕ್ಕುದಾರಳೂ, ಪಾಲುದಾರಳೂ ಆಗಿದ್ದ ಹೆಣ್ಣಿನ ಸಂತೈಕೆಯಿಲ್ಲದೇ ಬೆಳೆ ಬರಡಾಗಿ ರಾಜ್ಯ ಕ್ಷಾಮಕ್ಕೆ ತಳ್ಳಲ್ಪಟ್ಟಿತು. ಅಲ್ಲೆಲ್ಲೋ ಇರುವ ಶತಯೋಜನದಾಚೆ ಇರುವ ಹೂಗಳ ಮೂಲ ತಳಿಯನ್ನು ತಂದಲ್ಲದೇ ಕ್ಷಾಮ ನೀಗದು. ರಾಜನ ಮಗಳು ಆ ತಳಿಯನ್ನು ತನ್ನ ಅಸಮ ಉತ್ಸಾಹ ಮತ್ತು ಪ್ರೀತಿಯ ಸಾಹಸಗಳಿಂದ ತಂದು ರಾಜ್ಯವನ್ನು ಸಲಹುತ್ತಾಳೆ. ಮಹಿಳೆಯ ಗ್ರಹಬಂಧನ ತೊಲಗಿ ನೆಲ ಹಸನಾಗುತ್ತದೆ. ಇದು ಸ್ಥೂಲವಾಗಿ ನಾಟಕದ ಕತೆ. ಈ ಕತೆಯಲ್ಲಿ ಮತ್ತು ಅದರ ನಿರ್ವಹಣೆಯಲ್ಲಿ ನಾನು ಕಂಡಿರುವ ಒಂದೆರಡು ವಿಶೇಷ ಸಂಗತಿಗಳನ್ನು ಹಂಚಿಕೊಳ್ಳಬೇಕಿದೆ.

ಹೊರನೋಟಕ್ಕೆ ಇದೊಂದು ಕಿನ್ನರ ಕತೆಯ ಮಾದರಿಯಲ್ಲೇ ಇದೆ. ಆದರೆ ಇದು ಅವುಗಳ ಲಕ್ಷಣದೊಳಗಿಂದು ಹೊಸ ಕಾಣ್ಕೆ ಹೊಮ್ಮಿಸಿದೆ. ಸಾಧಾರಣವಾಗಿ ಕಿನ್ನರ ಕತೆಗಳಲ್ಲಿ ಬರುವ ರಾಜಕುಮಾರರು ತಮ್ಮ ಅಘಟಿತ ಘಟನಾ ಪ್ರಭುತ್ವವನ್ನು ಮಾಂತ್ರಿಕವಾಗಿ ಗಳಿಸಿ ಗೆಲುವನ್ನು ಪಡೆಯುತ್ತಾರೆ. ಆದರೆ ಇಲ್ಲಿಯ ರಾಜಕುಮಾರಿ ಗೆಲ್ಲುವದು ಮಾರ್ಗದುದ್ದಕ್ಕೂ ಆಕೆ ತೋರಿದ ಸಹನಶೀಲತೆ, ಪರಿಸರ ಪ್ರೇಮ, ಜೀವನ ಪ್ರೀತಿಯಿಂದಾಗಿ. ಈ ಗುಣಗಳೇ ಆಕೆಯನ್ನು ಅನೇಕ ಗಂಡಾoತರಗಳಿoದ ಪಾರು ಮಾಡುತ್ತವೆ.

ಮನುಷ್ಯ ತನ್ನ ಪ್ರೀತಿಯ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತ ಹೋದಂತೆ ಅವನಿಗೆ ರಾಕ್ಷಸರೇ ಸಿಗದಾಗುತ್ತಾರೆ. ಈ ದೃಷ್ಟಿ ಸಾಹಸ ಕತೆಗಳಿಗೆ ಹೊಸದು. ಅಪೂರ್ವ ಗೆಲ್ಲುವದು ಇಲ್ಲಿಯೇ.

ಸರಳವಾದ ರಂಗ ಸಜ್ಜಿಕೆ ಆದರೆ ಸಮೃದ್ಧವಾದ ನಟರ ಚಲನೆ. ಸಂಗೀತ ಮತ್ತು ರಂಗದ ಮೇಲೆ ಬಳಕೆಯಾದ ಬಣ್ಣಗಳು ಮಕ್ಕಳ ಮೈಮನವನೆಲ್ಲ ಅರಳಿಸಿ ಅವರಲ್ಲಿ ಹೊಸ ಕಾಂತಿ ಮೂಡಿಸಿದ್ದವು. ಅವರ ಕಣ್ಣೊಳಗಿನ ಉತ್ಸಾಹ ನೋಡುವ ನಮ್ಮೆದೆಗಳಲ್ಲಿ ಹರಡಿತ್ತು. ಇಲ್ಲಿ ಮನರಂಜನೆಯೊoದಿಗೆ ಉಪದೇಶವಿದೆ, ಸಂದೇಶವಿದೆ. ಆದರೆ ಅದು ಮಕ್ಕಳಿಗೆ ಭಾರವಾಗಿಲ್ಲ. ಕಾಂತಾ ಸಮ್ಮಿತತೆಯಂತೆ ಕತೆಯೊಂದಿಗೆ ಸಹಜ ನೆಯ್ಗೆ ಪಡೆದಿದೆ.

ಇಂದು ಬಹುತೇಕ ಮಕ್ಕಳ ರಂಗ ಶಿಬಿರಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ನಾವು ನಿಭಾಯಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ, ನಾವು ದೊಡ್ಡವರು ಮಾಡಿದ ಪಾಪಗಳಿಗೆಲ್ಲ ಮಕ್ಕಳಿಂದ ಉತ್ತರಹೊರಡಿಸುತ್ತ ಅವರ ಸಹಜ ಸಂಭ್ರಮವನ್ನೂ ಶಿಬಿರಗಳಿಂದ ಕಿತ್ತುಕೊಳ್ಳಲಾಗುತ್ತಿದೆ. ನಿಜ. ಮಕ್ಕಳು ಅಸಾಧಾರಣ ಅನುಕರಣಾ ಶಕ್ತಿ ಉಳ್ಳವರಾದ್ದರಿಂದ ಅವರು ಏನನ್ನೂ ಅಭಿನಯಿಸಬಲ್ಲರು. ವೇಟಿಂಗ್ ಫಾರ್ ಗಾಡೋ ವನ್ನೂ ಸಹ. ಅವರ ಶಕ್ತಿಗೆ ಎಲ್ಲೆ ಇಲ್ಲ. ಆದರೆ ಅವರ ಭಾವ ಮತ್ತು ಕಲ್ಪನೆಗೆ ಸ್ಥಳವೇ ಕೊಡದ ರೀತಿಯಲ್ಲಿ ನಾವು ದೊಡ್ಡವರು ನಮ್ಮ ರಾಜಕೀಯದ ಅಜೆಂಡಾ ಸಹಿತ ನುಗ್ಗಿಬಿಡುತ್ತೇವೆ. ನಮ್ಮ ಉದ್ದೇಶ ಒಳಿತೇ ಇರಬಹುದು. ಆದರೆ ಪರಿಣಾಮ? ಸಂಭ್ರಮ, ಉತ್ಸಾಹ, ಕಲ್ಪನೆಗೆ ಎಡಯಿಲ್ಲದ ಮಕ್ಕಳು ಬಹು ಬೇಗ ನಮ್ಮಿಂದ ಜಾರಿಹೋಗುತ್ತಾರೆ. ಈ ಮಧ್ಯ ಈ ನಾಟಕದ ಮಾದರಿ ಚೇತೋಹಾರಿ.

ನಾಟಕ ಕಟ್ಟಿದ ಬಗೆಯಲ್ಲಿ ಚಂದದ ಚೋದ್ಯವೊಂದಿತ್ತು. ಇಲ್ಲಿ ಅಭಿನಯಿಸಿದ ಮಕ್ಕಳೆಲ್ಲ ಬಹುತೇಕ ಯಕ್ಷಗಾನ ಪರಿಸರದವರಾಗಿದ್ದರು. ಹಾಗಾಗಿ ಅವರಲ್ಲಿ ಲಯ, ಗತಿ ಸಹಜವಾಗಿಯೇ ಇತ್ತು ಸರಿ. ಆದರೆ ಅಪೂರ್ವ ಇಲ್ಲಿಯ ಮಕ್ಕಳ ಯಕ್ಷಗಾನದ ಅನುಭವವನ್ನು ಅಲಂಕಾರಿಕವಾಗಿ ಎಲ್ಲೆಲ್ಲೂ ಬಳಸಿಲ್ಲ. ಹೆಜ್ಜೆಗಳಲ್ಲಿ, ಚಲನೆಗಳಲ್ಲಿ, ಮೈಮ್ ಗಳಲ್ಲಿ ಊಹೂಂ ಎಲ್ಲಿಯೂ. ಬದಲಾಗಿ ಯಕ್ಷಗಾನದಲ್ಲಿ ಬರುವ ವಿದೂಷಕ ಪಾತ್ರಗಳ ಮಾದರಿಯನ್ನು ನಾಟಕ ರಚನೆಯಲ್ಲಿಯೇ ಒಳಗೊಂಡು ಅದನ್ನು ಅದ್ಭುತವಾಗಿ ರಂಗದಲ್ಲಿ ತಂದಿದ್ದಾರೆ.

ಈ ವಿದೂಷಕರು ಕಾಲ ದೇಶಗಳ ಹಂಗಿಲ್ಲದೇ ಎಲ್ಲಿಯೂ ಪ್ರವೇಶಿಸಬಲ್ಲರು, ಯಾರನ್ನೂ ವಿಮರ್ಶಿಸಬಲ್ಲರು. ವಿದೂಷಕ ಪಾತ್ರಗಳಿಗೆ ಅಂತದೊoದು ಸ್ವಾತಂತ್ರ್ಯವು ಆ ಪ್ರಕಾರದಲ್ಲಿಯೇ ಇದೆ. ಹೀಗಾಗಿ ಅಪೂರ್ವ ಆ ಅವರ ಸಾಧ್ಯತೆಯನ್ನು ತುಂಬ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಆಖ್ಯಾನದೊಳಗೂ ವ್ಯಾಖ್ಯಾನದೊಳಗೂ.

ನೋಡುತ್ತ ನೋಡುತ್ತ ಮಕ್ಕಳ ಬಣ್ಣದೊಂದಿಗೆ ನಾವೆಲ್ಲ ಕರಗಿದ್ದೆವು. ತುಂಬ ಹೊತ್ತು ತಂಗಾಳಿ ಸುಳಿದಾಡುತ್ತಲೇ ಇತ್ತು.

‍ಲೇಖಕರು Admin

June 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: