ವ್ಯಕ್ತಿ ಚಿತ್ರಗಳ ಮಾದರಿಗೆ ಮತ್ತೊಂದು ಸೇರ್ಪಡೆ- ಮಣಿಮಾಲೆ”
-ಡಿ.ಎಸ್.ರಾಮಸ್ವಾಮಿ
‘ಮಣಿಮಾಲೆ’ ಕನ್ನಡದ ಖ್ಯಾತ ಮನಸ್ಸುಗಳೊಂದಿಗೆ ಕವಿ ಬಿ.ಆರ್.ಲಕ್ಷ್ಮಣರಾವ್ ತಮ್ಮ ಒಡನಾಟಗಳನ್ನು , ಒಳನೋಟಗಳನ್ನೂ ಚಿತ್ರಿಸಿರುವ ಅಪರೂಪದ ಕೃತಿ. ಹೆಸರೇ ಹೇಳುವ ಹಾಗೆ ವಿವಿಧ ಗಾತ್ರದ, ಬಣ್ಣದ, ತೂಕದ ‘ಮಣಿ’ಗಳೊಂದಿಗಿನ ಸ್ನೇಹ, ವಿಶ್ವಾಸ ಮತ್ತು ಅಂತಃಕರಣದ ಮಾತುಗಳನ್ನು ಬಿ.ಆರ್.ಎಲ್ ಸಮಚಿತ್ತದಿಂದ, ಸಮನ್ವಯದಿಂದ, ಸಾಂಸ್ಕೃತಿಕ ಕಣ್ಣುಗಳಿಂದ ಕಂಡ ನೋಟವನ್ನು ಈ ಪುಸ್ತಕ ಒಳಗೊಂಡಿದೆ. ಪ್ರಾಮಾಣಿಕತೆಯೆನ್ನುವ ಶಬ್ದವನ್ನೇ ಅನುಮಾನದಿಂದ ನೋಡಬೇಕಿರುವ ಸರಕು ಸಂಸ್ಕೃತಿಯ ಕಾಲದಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ವ್ಯಕ್ತಿಯೊಬ್ಬರ ಸಹಜ ಚಿತ್ರಣವನ್ನು ನೀಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಬಿ.ಆರ್.ಎಲ್ ಪೋಲಿ ಕವಿಯೆಂದೇ ಖ್ಯಾತರಾದವರು. ಅವರ ಗುಂಡು ಗುಂಡು ಗಾಂಡಲೀನಳನ್ನು, ವೆಂಕಟಲಕ್ಷ್ಮಿಯನ್ನೂ, ಹಾಗೇ ಅವರ ರಾಜಕುಮಾರಿಯ ನಗರ ಸವಾರಿಯನ್ನೂ ಕಂಡಿರುವ ಓದುಗ ಮಹಾಶಯನಿಗೆ ಈ ಕವಿ ತಮ್ಮ ಬದುಕಿನಲ್ಲಿ ಆತ್ಮೀಯರೊಂದಿಗೆ ಕಂಡುಕೊಂಡ ಅನುಭವಗಳನ್ನು ಹೊಗಳಿಕೆಯ ತುರೀಯಕ್ಕೊಯ್ಯದೇ ‘ಇದ್ದುದ್ದನ್ನು ಇದ್ದಹಾಗೆ’ ರೀತಿಯಲ್ಲಿ ಚಿತ್ರಿಸಿದ್ದಾರೆ. ‘ಮಯೂರ’ ಮಾಸಿಕಕ್ಕೆ ಅವರು ಬರೆಯುತ್ತಿದ್ದ ಅಂಕಣಮಾಲೆ ಒಳನೋಟ ಈಗ ಮಣಿಮಾಲೆಯಾಗಿ ಸಂಗ್ರಹವಾಗಿದೆ. ಜೊತೆಗೆ ಒಂಭತ್ತು ಬೋನಸ್ ಲೇಖನಗಳೂ ಸೇರಿವೆ. ಸ್ವಾರಸ್ಯವೆಂದರೆ ಈ ಹೊಸ ಲೇಖನಗಳೂ ಒಳನೋಟದ ವ್ಯಾಪ್ತಿಗೇ ಸೇರಿದ ಲೇಖನಗಳಾಗಿರುವುದು. ಅಂದರೆ ಈ ಲೇಖನ ಮಾಲೆ ಪ್ರಾರಂಭವಾಗುವ ಮೊದಲೇ ಪ್ರಾಯಶಃ ಲೇಖಕರು ಈ ಬಗೆಯ ಬರಹಗಳಿಗೆ ಯತ್ನಿಸಿದ್ದಾರೆ!
ಶ್ರಿಯುತರು ಪನ್ ನೀಡುವ ಪಂಚ್ ಚುಟುಕಗಳಿಗಾಗಿ ಖ್ಯಾತರಾಗಿದ್ದರೂ ಮೂಲತಃ ಅವರ ದೀರ್ಘ ಕವಿತೆಗಳಲ್ಲಿ ವಿಷಾದ ಮಡು ಮಾಡಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಫೋಟೋಗ್ರಾಫರ್ ಎಂಬ ಅವರ ಅತಿ ಚರ್ಚಿತ ಪದ್ಯ ಕೂಡ ಕೊನೆಯಾಗುವುದು ವಿಷಾದದಲ್ಲೇ. ಈ ಮಾತು ಏಕೆ ಹೇಳಬೇಕಾಯಿತೆಂದರೆ ಈ ಪುಸ್ತಕ ಕೂಡ ಮೇಲ್ನೋಟಕ್ಕೆ ವಿವಿಧ ವ್ಯಕ್ತಿಗಳ ಜೊತೆಗಿನ ಒಡನಾಟದ ಹಾಗೆ ಕಂಡರೂ ಒಳಗೇ ಆ ವ್ಯಕ್ತಿಗಳು ಪದೆಯಬಹುದಾಗಿದ್ದ ಇನ್ನೂ ಹೆಚ್ಚಿನ ಪದವಿ ಪುರಸ್ಕಾರಗಳನ್ನು ಪಡೆಯದಿದ್ದ ಬಗ್ಗೆ, ಸಮಾಜ ಅಂಥವರನ್ನು ನಡೆಸಿಕೊಂಡ ಬಗ್ಗೆ ಸೂಕ್ಷ್ಮವಾದ ಉಲ್ಲೇಖಗಳೂ ಇವೆ. ಉದಾಹರಣೆಗೆ ಹೇಳಬೇಕೆಂದರೆ ಇಬ್ರಾಹಿಂ ಸಾಹೇಬರು, ಸ.ರಘುನಾಥ, ಅನಂತಸ್ವಾಮಿಯವರನ್ನು ಕುರಿತ ಬರಹಗಳಲ್ಲಿ ಕಾಣಬಹುದು. ಮನುಷ್ಯಸಂಬಂಧಗಳನ್ನೇ ನಿರಾಕರಿಸುತ್ತಿರುವ ಈ ಹೊತ್ತಿನ ಹೊಸ ಮನಸ್ಸುಗಳಿಗೆ ಈ ಬರಹಗಳು ಸ್ವಲ್ಪವಾದರೂ ಕಣ್ಣಬೆಳಕಾಗಬಲ್ಲವೆಂದು ಧೈರ್ಯದಿಂದ ಹೇಳಬಹುದು.
ಈಗಾಗಲೇ ಹೇಳಿದಂತೆ ಈ ಪುಸ್ತಕ ಸಮಾಜದ ವಿವಿಧ ಮಗ್ಗುಲಗಳಲ್ಲಿ ಈಗಾಗಲೇ ಖ್ಯಾತರಾದವರೊಂದಿಗೆ ಲೇಖಕರು ಕಂಡುಕೊಂಡ ಒಳನೋಟದ ಟಿಪ್ಪಣಿ. ಈ ತೆರನಾದ ಬರಹಗಳಲ್ಲಿ ಬಹುತೇಕ ಏಕತಾನತೆ ತುಂಬುವುದು, ಆತ್ಮಪ್ರತ್ಯಯವೇ ಮಿಗಿಲಾಗಿ ಉಳಿದುದೆಲ್ಲ ಮಿತಿಯಾಗುವುದು ಸರ್ವೇ ಸಾಧಾರಣ. ಆದರೆ ವಿಶೇಷವೆಂದರೆ ಈ ಬರಹಗಳಲ್ಲೆಲ್ಲೂ ಇಂಥ ಅತಿರೇಕಗಳಲ್ಲಿ ಒಳನೋಟ ಕಳೆದು ಹೋಗದೇ ನೇರನೋಟ ಸಿದ್ಧಿಸಿದೆ. ವಿಕ್ಷಿಪ್ತ ವ್ಯಕ್ತಿತ್ವದ ಲಂಕೇಶ್, ಹೊಸತನದ ಹರಿಕಾರ ವೈಯೆನ್ಕೆ, ಸಿನಿಮಾದ ಶ್ರೀನಾಥ್, ನವ್ಯರ ಗುರು ಅಡಿಗ, ಇಬ್ರಾಹಿಂ ಸಾಹೇಬರಂಥ ಸಮಾಜ ಸೇವಕರು ಈ ಎಲ್ಲರೊಂದಿಗಿನ ತಮ್ಮ ಒಡನಾಟಗಳನ್ನು ‘ಇಸಮ್ಮಿನ’ ಕನ್ನಡಕವಿಲ್ಲದೇ ನೋಡುವ ಬಿ ಆರ್ ಎಲ್ ಈ ಎಲ್ಲರಲ್ಲೂ ಇದ್ದ ವಿಶೇಷಗಳನ್ನು ಗುರ್ತಿಸುತ್ತಾರೆಯೇ ವಿನಾ, ಅವರ ಮತ್ತೊಂದು ವೀಕ್ನೆಸ್ಸನ್ನೆಂದೂ ಹರಾಜಿಗಿಡದೇ ಘನತೆ ಮೆರೆದಿದ್ದಾರೆ. ಏಕೆಂದರೆ ಈ ನಡುವೆ ವ್ಯಕ್ತಿಚಿತ್ರಗಳ ಹೆಸರಿನಲ್ಲಿ ವ್ಯಕ್ತಿಗಳ ಚಾರಿತ್ರ್ಯವನ್ನೇ ಪ್ರಶ್ನೆ ಮಾಡುವ, ಅವರು ನಂಬಿರುವ ಸಿದ್ಧಾಂತವನ್ನೇ ಪ್ರಶ್ನಿಸುವ ಕೆಲಸಗಳೂ ನಿರಂತರವಾಗಿ ನಡೆಯುತ್ತಿವೆ.
ಈಗಾಗಲೇ ಸಾಹಿತ್ಯ-ಸಾಂಸ್ಕೃತಿಕ ಜಗತ್ತಿನಲ್ಲಿ ಉಳಿದುಹೋಗಿರುವ ಘಟನೆಗಳನ್ನು ಹೇಳುವಾಗಲೂ ಬಿ ಆರ್ ಎಲ್ ಅದನ್ನು ಹೊಚ್ಚಹೊಸತೆನ್ನುವ ಅನುಭವದ ಹಾಗೆ ಬರೆದಿದ್ದಾರೆ. ಇಂಥ ಪರಿ ಸಿದ್ಧಿಸುವುದು ಬರಹದ ಪ್ರವಾಹದಿಂದ ಮಾತ್ರ ಸಾಧ್ಯವಿರುವಂಥದು. ಅಷ್ಟೇನೂ (ವೇದಿಕೆಯ ಮೇಲಿನ) ಒಳ್ಳೆಯ ಮಾತುಗಾರರಲ್ಲದ ಈ ಕವಿ ಗೆಳೆಯರೊಂದಿಗೆ ಹರಟುವಾಗ ಮಾತ್ರ ಸಹಜವಾಗಿ ಆರಳುತ್ತಾರೆನ್ನುವುದಕ್ಕೆ ಕೂಡ ಈ ಸಂಕಲನ ಸಾಕ್ಷಿಯಾಗಿದೆ.
ಜೀವನದಲ್ಲಿ ಭೆಟ್ಟಿಯಾದವರನ್ನೆಲ್ಲ ಮಾದರಿಗಳನ್ನಾಗಿಸಿಕೊಳ್ಳುವುದು ಅಸಾಧ್ಯದ ಮಾತು. ಅಂಥ ಮಾದರಿಗಳನ್ನು ಅರಸುವುದು ಕೂಡ ಮತ್ತೊಂದು ಮರುಳುತನವೇ! ಹಾಗೆ ಭೆಟ್ಟಿಯಾದವರ ಧನಾತ್ಮಕ ಅಂಶಗಳನ್ನಷ್ಟೇ ಉಳಿಸಿಕೊಂಡು ಋಣಾತ್ಮಕ ನಿಲುವುಗಳನ್ನು ಕೊಂಚವೂ ತೋರದ ಹಾಗೆ ಬರೆಯುವುದೂ ಕಷ್ಟಸಾಧ್ಯದ ಕೆಲಸವೇ. ಅದನ್ನು ಬಿ ಆರ್ ಎಲ್ ಸಾಧಿಸಿದ್ದಾರೆ, ಯಶಸ್ವಿಯೂ ಆಗಿದ್ದಾರೆ. ಆದರೆ ಮಾತಿನ ಭರದಲ್ಲಿ ಕುಡಿತದ ಮಾತು ಬಂದ ಕೂಡಲೇ ಬಿಆರ್ಎಲ್ ಪೆನ್ನಿಗೂ ಮತ್ತೇರುತ್ತದೆ, ಉಕ್ಕೇರಿ ಹರಿಯುತ್ತದೆ. ಬರಹಗಾರರು, ಬುದ್ಧಿಜೀವಿಗಳು ‘ಕುಡುಕ’ರೆಂದು ಈಗಾಗಲೇ ಖ್ಯಾತರಾದವರು. ಬಿಆರೆಲ್ ಕೂಡ ಇದಕ್ಕೆ ಪುರಾವೆ ನುಡಿದಿರುವುದು ಮಾತ್ರ ಏಕೋ ಕಸಿವಿಸಿ ಮಾಡುತ್ತದೆ.
ತುಂಬು ಕೃತಜ್ಞತೆಯನ್ನೇ ಮೇಳವಿಸಿಕೊಂಡಿರುವ ಇಲ್ಲಿನ ಬರಹಗಳು ಸಮಾಜಕ್ಕೆ ಸಾಮಾಜಿಕನೊಬ್ಬ ಋಣಿಯಾಗಿರಬೇಕೆಂಬ ಮಾತನ್ನು ಪುಷ್ಟೀಕರಿಸುವಂತೆ ಕಾಣುತ್ತವೆ. ಅರವತ್ತರ ಅರಳು-ಮರಳು ಅಲ್ಲದ, ಅರಳನ್ನು ಅರಳೆಂದು, ಮರಳನ್ನು ಮರಳೆಂದೂ ನಂಬಿದ ಧ್ಯಾನಿಸಿರುವ ಈ ಬರಹ ಗುಚ್ಛ ವ್ಯಕ್ತಿಚಿತ್ರಗಳ ಮಾದರಿಗೆ ಮತ್ತೊಂದು ಅಯಾಮವನ್ನು ಸೇರಿಸಿರುವುದು ಸ್ಪಷ್ಟ.
ಕೃತಿ-ಮಣಿಮಾಲೆ ಲೇಖಕ-ಬಿ ಆರ್ ಲಕ್ಷ್ಮಣ ರಾವ್ ಪ್ರಕಾಶನ-ಅಂಕಿತ ಬೆಂಗಳೂರು ಪುಟ- 208 ಮೌಲ್ಯ – ರೂ 150/ ವರ್ಷ-2012








ishtavayitu.
‘ಮಯೂರ’ ಮಾಸಿಕಕ್ಕೆ ಅವರು ಬರೆಯುತ್ತಿದ್ದ ಅಂಕಣಮಾಲೆ ಒಳನೋಟ ಎನ್ನುವುದನ್ನು ಮಾನ್ಯ ಓದುಗರು ದಯೆಯಿಟ್ಟು ’ಮಯೂರ’ ಮಾಸಿಕಕ್ಕೆ ಅವರು ಬರೆಯುತ್ತಿದ್ದ ಅಂಕಣಮಾಲೆ ’ಒಡನಾಟ’ – ಎಂದು ಓದಿಕೊಳ್ಳಬೇಕೆಂದು ಮನವಿ.