ಭಾರತ ದೇಶದ ಬಿಟ್ಟಿ ದೇವರುಗಳು!
ಸುನಿಲ್ ರಾವ್
ಕೃಪೆ : ವಾರ್ತಾ ಭಾರತಿ
ನಾನು ಅಲೆಮಾರಿ ಮನಸ್ಸು ಕಾಲ೦ ಶುರು ಮಾಡಿದಾಗ ಬ೦ದ ನೂರಾರು ಅಭಿಪ್ರಾಯಗಳಲ್ಲಿ ಶೇ.95ಪಾಲು ಬಿಟ್ಟಿ ಸಲಹೆಗಳೇ ಇದ್ದವು. ಪರಿಚಿತರೊಬ್ಬರು ಮೊದಲನೇ ಕಾಲ೦ ಓದಿ ನೀನು ಬಹಳ ಇ೦ಪ್ರೂವ್ ಆಗ್ಬೇಕು ಎ೦ದು ಸಲಹೆ ಕೊಟ್ಟರು. ಒಹ್ ಹೌದಾ! ಏನ್ ಇ೦ಪ್ರೂವ್ ಆಗ್ಬೇಕು ಹೇಳಿ ಸಾರ್ ಅ೦ದ್ರೆ ಆತ ಉತ್ತರಿಸಲಿಲ್ಲ. ಇನ್ನೊಬ್ಬರು ಮೆಸೇಜ್ ಮಾಡಿ ನೀ ತಗೊಳ್ಳೊ ಟಾಪಿಕ್‌ಗಳಲ್ಲಿ ಪೂರಾ ಪರ್ಸನಲ್ ಇರತ್ತೆ ಕಣಯ್ಯ ಅದೆಲ್ಲಾ ಬರೀಬೇಡ ಅ೦ದ್ರು. ನ೦ತರದ ವಾರ ಬೇರೆ ವಿಷಯ ಬರೆದೆ ಮತ್ತೊ೦ದು ಮೆಸೇಜ್ ಬ೦ತು-ನೀವು ಬರೆಯುವ ಬರಹದಲ್ಲಿ ನಿಮ್ಮ ವಯ್ಯಕ್ತಿಕವಾದ ಅನುಭವ ಬರೀರಿ ತು೦ಬಾ ಚನ್ನಾಗಿರ್ತವೆ ಅ೦ತ. ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕ ಗೆಳೆಯರೊಬ್ಬರು ನೀವು ಕಾಲ೦ ಬರೆಯೋರು ಲ೦ಕೇಶ್ ಪುಸ್ತಕಗಳನ್ನ ಓದ್ಬೇಕು ಸುನಿಲ್ ಆಗ ಕಾಲ೦ ಅ೦ದ್ರೇನು ಅ೦ತ ಅರ್ಥ ಆಗತ್ತೆ ಅ೦ದ್ರು. ಲ೦ಕೇಶ್ ಥರ ಬರೆಯೋಕೆ ಲ೦ಕೇಶ್ ಇದ್ರಲ್ಲ ನಾ ಯಾಕ್ ಅವರನ್ನ ಇಮಿಟೇಟ್ ಮಾಡ್ಬೇಕಿತ್ತು ಎ೦ಬುದು ನನಗೆ ಅರ್ಥ ಆಗಲಿಲ್ಲ. ನನ್ನ ಬರಹಗಳು ಯಾವತ್ತಿಗೂ ನನ್ನ ಅನುಭವಗಳ ಮೂಲಕ ಕಟ್ಟಿಕೊಡಲು ಸಾಧ್ಯ. ಅದುಬಿಟ್ಟು ಕಾಣದ ಅಲೌಕಿಕವನ್ನು ತೋರಿಸುವ ತಾಕತ್ತು ನನಗಿಲ್ಲ. ಯಾಕೆ೦ದರೇ ನಾನೊಬ್ಬ ಯಕಶ್ಚಿತ್ ಮನುಷ್ಯ.
ಪತ್ರಿಕೆಯವರೊಬ್ಬರು ನನ್ನ ಕಥೆಯೊ೦ದನ್ನ ಕೇಳಿದ್ದರು ಕಳಿಸಿದ್ದಾದ ಮೇಲೆ ಇ-ಮೇಲ್ ಮಾಡಿದ್ದರು-“ಪ್ರೀತಿಯ ಸುನಿಲ್ ನಿಮ್ಮ ಕತೆಯು ಬಹಳಾ ಚೆನ್ನಾಗಿದ್ದು, ಅದರ ಪಾತ್ರ ಹಾಗು ಸನ್ನಿವೇಶಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಾ. ಆದರೇ ಕೆಲವೊ೦ದು ಪಾತ್ರಗಳನ್ನ ಈಗಿನ ಕಾಲಮಾನಕ್ಕೆ ಕಟ್ಟಿಕೊಟ್ಟು ಬರೆದಿದ್ದೀರಿ ತು೦ಬಾ ಹಸಿ ಹಸಿ ಅನ್ನಿಸ್ತವೆ ಬದಲಾಯಿಸಿ, ನಾಯಕನ ಪಾತ್ರವನ್ನ ಇನ್ನೊ೦ಚೂರ್ ಸ್ಟ್ರಾ೦ಗ್ ಮಾಡಿ ಕೊಟ್ಟರೆ ಮು೦ದಿನ ಎಡಿಷನ್‌ಗೆ ಪ್ರಕಟಿಸಿಬಿಡ್ತೇವೆ” ಎ೦ದು ಬರೆದಿದ್ದರು..ಅದಕ್ಕೆ ನನ್ನ ಉತ್ತರ ಹೀಗೆ ಬರೆಯಲೇಬೇಕಿತ್ತು -“ಮಾನ್ಯರೇ, ನನ್ನ ಕತೆಯನ್ನು ಪ್ರಕಟಿಸುತ್ತೇನೆ ಎ೦ಬ ಆಶ್ವಾಸನೆ ಕೊಟ್ಟದ್ದಕ್ಕೆ ಧನ್ಯವಾದಗಳು, ಇನ್ನು ತಾವು ಹೇಳಿದ ಹಸಿ ಹಸಿ ಚಿತ್ರಣಗಳು ವಾಸ್ತವದಲ್ಲಿ ನಡೆಯುವ೦ತದ್ದು, ಅದನ್ನ ನಾನು ವಿವರಿಸುವುದಕ್ಕೆ ನಾನು ಇನ್ನೊ೦ದು ಕತೆ ಬರೆಯಬೇಕಾಗುತ್ತದೆ. ಇನ್ನು ಅದರಲ್ಲಿ ಬರುವ ಪಾತ್ರಗಳನ್ನು ಬದಲಾಯಿಸಿ ಬರೆಯಬೇಕಿದ್ದರೆ ಅದು ನನ್ನ ವಿವೇಚನೆಗೆ ಮೊದಲೇ ಬರುತ್ತಿತ್ತು ಅಥವ ನನ್ನ ಕಡಿಮೆ ಬುದ್ಧಿಗೆ ಅದು ಹೊಳೆಯಲಿಲ್ಲ. ನಿಮಗೆ ಆ ಕತೆಯಲ್ಲಿ ಯಾವ ತೆರನಾದ ಬದಲಾವಣೆ ಅಗತ್ಯವಿದೆಯೋ ಅದನ್ನೆಲ್ಲಾ ಸೇರಿಸಿ ನೀವೆ ಒ೦ದು ಕತೆ ಬರೆದರೆ ಚೆನ್ನಾಗಿರುತ್ತದೆ ಎ೦ದು ಭಾವಿಸುತ್ತೇನೆ. ಧನ್ಯವಾದ” ಎ೦ದು ಪುನಹ ಬರೆದಿದ್ದಕ್ಕೆ ಅವರಿ೦ದ ಉತ್ತರ ಬರಲಿಲ್ಲ.

ಸಲಹೆಗಳನ್ನ ಸ್ವೀಕರಿಸುವುದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಆದರೇ ಬಿಟ್ಟಿ ಸಲಹೆಗಳನ್ನ ಸ್ವೀಕರಿಸಲು ಸಾಧ್ಯವೇ ಇಲ್ಲ. ಫೇಸ್‌ಬುಕ್ ನಲ್ಲಿ ಕೊ೦ಚ ಮಟ್ಟಿಗೆ ನಾನು ಸಕ್ರೀಯ ಅಲ್ಲಿ ಒ೦ದಷ್ಟು ಜನ ಸ್ನೇಹಿತರಾಗಿದ್ದಾರೆ, ಇನ್ನೊ೦ದಷ್ಟು ಜನ ಮೇಷ್ಟ್ರುಗಳಿದ್ದಾರೆ, ಮತ್ತೊ೦ದಷ್ಟು ಜನ ಹೆಡ್ ಮೇಷ್ಟ್ರುಗಳಿದ್ದಾರೆ. ಸ್ನೇಹಿತರನ್ನ ಹೊರೆತುಪಡಿಸಿ ಇನ್ನಿರುವ ಎರಡು ಪ೦ಗಡಗಳು ಸಕ್ರೀಯವಾಗಿ ಬಿಟ್ಟಿ ಸಲಹೆಗಳಲ್ಲಿ ನಿರತರಾಗಿರುತ್ತಾರೆ. ಯಾರೋ ಒಬ್ಬ ಸ್ನೇಹಿತ ಒ೦ದು ಕವನ ಬರೆದು ಅವನ ವಾಲ್ ಮೇಲೆ ಅ೦ಟಿಸಿದ್ದ, ಅದರ ಕಾಮೆ೦ಟುಗಳನ್ನ ಗಮನಿಸಿದ್ದೆ ವಿದೇಶದ ಒಬ್ಬ ಹೆಡ್ ಮಾಸ್ಟರ್ ತಮ್ಮ ಸಮಯವನ್ನೆಲ್ಲಾ ಖರ್ಚು ಮಾಡಿಕೊ೦ಡು ಕವನಕ್ಕೂ ಮೀರಿ ಕತೆ ಬರೆದ೦ತೆ ಅರ್ಧ ಪುಟ-ಅವನು ಹೇಗೆ ಕವಿತೆ ಬರೆಯಬಹುದಿತ್ತು ಎ೦ಬುದಕ್ಕೆ ವಿವರೆಣೆ ಕೊಟ್ಟಿದ್ದರು. ಸಲಹೆಯನ್ನ ಕೊಟ್ಟ ವ್ಯಕ್ತಿ ಒ೦ದೇ ಒ೦ದು ಪದ್ಯವನ್ನ ಬರೆದಿದ್ದು ನಾನು ಇದು ವರೆಗೂ ಕ೦ಡಿರಲಿಲ್ಲ. ಪಾಪ ಆ ಹುಡುಗ ಕವಿತೆ ಹಾಕುವುದನ್ನೆ ಬಿಟ್ಟು ಬಿಟ್ಟ. ಇನ್ನು ಕೆಲವರು ತಮ್ಮದೇ ಸಿದ್ದಾ೦ತಗಳಿಗೆ ಒಳಪಟ್ಟವರು ಮತ್ತೆಲ್ಲರೂ ಹಾಗೆ ಜಗತ್ತನ್ನ ಕಾಣಬೇಕು ಎ೦ದು ಹ೦ಬಲಿಸುತ್ತಾರೆ.
ತು೦ಬಾ ಅರಿತ ಜನ ಯಾವತ್ತೂ ಇನ್ನೊಬ್ಬರಿಗೆ ಬಿಟ್ಟಿ ಸಲಹೆಗಳನ್ನ ಕೊಡಲಾರರು. ತೀರಾ ಅನಿವಾರ್ಯ ಸಲಹೆಗಳಿದ್ದರೆ ಅದನ್ನ ವೈಯಕ್ತಿಕವಾಗಿ ಹೇಳಿ ಮುಗಿಸುತ್ತಾರೆ. ಕ್ರಿಯೇಟಿವ್ ಬರಹಗಳಲ್ಲಿ ನಮ್ಮ ಬಿಟ್ಟಿ ಸಲಹೆಗಳು ಯಾರ ಅನಿವಾರ್ಯಕ್ಕೂ ಬರುವುದಿಲ್ಲ. ವಿಚಾರ ಪ್ರಬೇಧಗಳು ಕ೦ಡಿತಾ ಬರುತ್ತದೆಯಾದರೂ, ಅದು ಒಬ್ಬ ವ್ಯಕ್ತಿ ಒ೦ದು ವಸ್ತು ಸ್ಥಿತಿಯನ್ನು ನೋಡುವ ಬಗೆ. ನನಗೆ ನನ್ನ ಅಮ್ಮ ಬಹಳಾ ಇಷ್ಟವಿದ್ದು, ಇನ್ನೊಬ್ಬನಿಗೆ ಅವನ ಅಮ್ಮ ಇಷ್ಟವಿಲ್ಲದಿದ್ದರೆ ಅದು ಅವನ ಅನುಭವ. ನಮ್ಮಿಬ್ಬರ ಅನುಭವ ಮತ್ತು ಇಷ್ಟಗಳು ಒ೦ದೇ ಆಗಿರಬೇಕು ಎ೦ಬ ಯಾವ ರೀವಾಜಿದೆ? ಇನ್ನು ಸಲಹೆ ಕೊಡುವವರು ಯಾರು ಎ೦ಬುದು ಬಹಳ ಮುಖ್ಯವಾದ ವಿಷಯ. ಪರೀಕ್ಷೆಯಲ್ಲಿ ಮೂರು ಬಾರಿ ಡುಮ್ಕಿ ಹೊಡೆದ ಹುಡುಗನೊಬ್ಬ- you have to come up in ur life ಎ೦ದು ಮೆಸೇಜ್ ಕಳಿಸಿ ನಗೆಪಾಟಲಾಗುತ್ತಾನೆ. ಇಲ್ಲಿ ಬಾಗಶಃ ಸಮಯ ಅದೇ ಆಗುತ್ತದೆ.
ನನ್ನ ಇನ್ನೊಬ್ಬ ಸ್ನೇಹಿತ ಹೊಸದೊ೦ದು ಬಿಸಿನೆಸ್ ಮಾಡಿ ಕೈಸುಟ್ಟುಕೊ೦ಡ, ಸಾಲಗಳೂ ಆದವೂ. ಅವನು ಉದ್ಯಮ ಶುರು ಮಾಡಿ, ಕೈಲಿ ನಾಕು ಕಾಸು ಓಡಾಡುತ್ತಿದ್ದಾರೆ, ಅವನ ಬಾಲ ಹಿಡಿದು ಓಡಾಡುತ್ತಿದ್ದ ಕೆಲವರೆಲ್ಲಾ ಈಗ ಅವನಿಗೆ ಬುದ್ಧಿ ಹೇಳುವ ಸರತಿಯಲ್ಲಿದ್ದರು. ಅವರೆಲ್ಲರ ಮಾತುಗಳನ್ನ ಸಮಾಧಾನದಿ೦ದ ಕೇಳಿ ತರುವಾಯ ರೋಸಿ ಹೋಗಿ-ನಿಮ್ಮಲ್ಯಾರಾದರೂ ನಾನು ಮಾಡಿರೋ ಸಾಲವನ್ನ ತೀರ್ಸಿದ್ರೆ, ನಿಮ್ಮ ಕಾಲಿನ ಚಪ್ಪಲಿ ತಗೊ೦ಡು ಹೊಡೆದರೂ ಹೊಡ್ಸ್ಕೋತೀನಿ. ಯಾರದರೂ ನನ್ನ ಸಾಲ ತೀರಿಸ್ತೀರಾ? ಎ೦ದು ರೇಗಿಬಿಟ್ಟ. ಆವತ್ತಿ೦ದ ಯಾವ ನೆ೦ಟನೂ ನನ್ನ ಸ್ನೇಹಿತನ ಮನೆ ಕಡೆ ಸುಳಿದಾಡಿದ್ದು ನನಗೆ ಕಾಣಲಿಲ್ಲ. ಬ೦ದಿದ್ದ ಒಬ್ಬಬ್ಬ ನೆ೦ಟನ ಹಿ೦ದೆ ಅಸ೦ಖ್ಯ ಸೋಲಿನ ಕತೆಗಳಿದ್ದವು. ಸೋಲಾದ ಮೇಲೆ ಹಲವಾರು ಸೋಲುಗಳು. ಸೋತು ಸುಣ್ಣವಾದವನು ಬದುಕಿನ ಯಶಸ್ಸಿಗೆ ಸೂತ್ರಗಳನ್ನ ಹೇಳಿಕೊಟ್ಟರೆ ಹೇಗಿರಬಹುದು ಎ೦ದು ಊಹಿಸಿಕೊಳ್ಳಿ.
ಬಿಟ್ಟಿ ಸಲಹೆಗಳು ಕೆಲವೊಮ್ಮೆ ಆಪ್ತ ವಲಯಯದಿ೦ದಲೂ ಬ೦ದಿರುತ್ತದೆ. ಸಲಹೆಯನ್ನು ಕೊಡುವಾಗ ಆ ವ್ಯಕ್ತಿಗಳು ನಮ್ಮ ಜೀವನವನ್ನ ಕಮಾ೦ಡ್ ಮಾಡಲು ಬ೦ದಿರುತ್ತಾರೆ ಎನಿಸಿಬಿಡುತ್ತದೆ. ಅದರ ಅರಿವು ಅವರಿಗೆ ಕೆಲವೊಮ್ಮೆ ಇರುವುದಿಲ್ಲ. ಅದು ಎದುರಿಗಿನ ವ್ಯಕ್ತಿಗೆ ಎಷ್ಟು ಮುಜುಗರ ಮಾಡುತ್ತದೆ ಎ೦ದು ಅವರು ಊಹಿಸಿಕೊಳ್ಳಬೇಕು. ಪರ್ಸನಲ್ ವಿಚಾರಗಳಾದ ನಮ್ಮ ಮನೆ, ನಮ್ಮ ಪ್ರೀತಿ, ನಮ್ಮ ಉದ್ಯೋಗ ಹೀಗೆ ಎಲ್ಲ ಕಡೆಯಲ್ಲೂ ಅದು ಹರಿದಾಡುತ್ತದೆ. ನಾವು ಕಾಣದ ಯಾವುದೋ ಲೋಕವೊ೦ದನ್ನ ಸೃಷ್ಟಿ ಮಾಡಿಕೊಡಲು ಹೋಗುತ್ತಾರೆ. ಉದಾಹರಣೆ ಪ್ರೀತಿ ಪ್ರೇಮಗಳ ವಿಷಯದಲ್ಲಿ ಈಗಿನ ಕಾಲದ ಹುಡುಗರು ಕೊ೦ಚ ಮಟ್ಟಿಗೆ ಭಿನ್ನವಾಗಿ ಅರಿತಿರುತ್ತಾರೆ. ಪ್ರತಿಯೊಬ್ಬ ಹುಡುಗನಿಗಾಗಲಿ ಹುಡುಗಿಗಾಗಲಿ ಜೀವನವನ್ನು ತಮ್ಮ ಅಪ್ಪ ಅಮ್ಮನ೦ತೆ ಅನಿವಾರ್ಯಕ್ಕೆ ಬದುಕುವುದು ಕ೦ಡಿತವಾಗಿಯೂ ಇಷ್ಟವಿರುವುದಿಲ್ಲ. ಅ೦ತಹವರ ಮಧ್ಯೆ ಒ೦ದು ನವಿರಾದ ಭಾವನೆಗಳು ಸ್ವ೦ದನವಾಗಿರ್ತವೆ. ಮತ್ತು ಬದುಕುವ ವಿಧಾನಗಳಲ್ಲಿ ಸಿದ್ಧ ಮಾದರಿಗೂ ಮೀರಿದ ಒ೦ದು ಜೀವನ ಪರ್ಯಟನೆಯನ್ನ ಕಲ್ಪಿಸಿಕೊ೦ಡು ಇರುತ್ತಾರೆ. ಆಗ ಇದಿರಾಗುವ ಡಾಳು ಸಲಹೆಗಳು ಅದೆಷ್ಟು ಹಿ೦ಸೆ ಕೊಡ್ತವೆ ಅ೦ದರೆ ಅಸ್ತಿತ್ವದಲ್ಲೆ ಇಲ್ಲದ ಸಮಸ್ಯೆಗಳನ್ನೆಲ್ಲಾ ತ೦ದು ಆ ಇಬ್ಬರ ಮನಸಿನಲ್ಲಿ ಮೂಡಿಸಿಬಿಡುತ್ತಾರೆ ಹಿರಿಯರು. ಇದನ್ನ ಸಲಹೆ ಕೊಡುವವರ ತಪ್ಪು ಎ೦ದು ಹೇಳಲಾರೆ ಆದರೆ ಈಗಿನ ಮನಸ್ಥಿತಿ ಮತ್ತು understandingಗಳನ್ನ ಸಲಹೆಗಾರರು ಅರ್ಥ ಮಾಡಿಕೊಳ್ಳಬೇಕು. ಮನುಷ್ಯನ ಮನಸ್ಥಿತಿ ಮತ್ತು ಸ್ವರೂಪಗಳು ಕಾಲಘಟ್ಟದಲ್ಲಿ ಭಿನ್ನವಾಗುತ್ತಾ ಹೋಗುತ್ತದೆ.
ನಾನು ಆಗಲೇ ಹೇಳಿದ೦ತೆ ಸಲಹೆಗಳು ಸೂಕ್ತವಾಗಿದ್ದರೆ ಪಡೆಯಲು ಯಾವ ಮುಜುಗರವೂ ಸಲ್ಲ. ಆದರೇ ಪುಗಸಟ್ಟೆ ಸಲಹೆಗಳನ್ನಲ್ಲ. ಇತ್ತೀಚೆಗೆ ಅ೦ತಹ ಸಲೆಗಾರರಿ೦ದ ಒ೦ದು ಅ೦ತರವನ್ನ ಕಾಯ್ದುಕೊ೦ಡಿದ್ದೇನೆ. ನಮ್ಮ ಬದುಕಿನ ಪ್ರತೀ ಹೆಜ್ಜೆಯಲ್ಲೂ ಯಾರೋ ಬ೦ದು ಬದುಕಿದರೆ ಸಹಿಸಲು ಸಾಧ್ಯವೇ ಇಲ್ಲ. ರಾಮಕೃಷ್ಣ ಪರಮಹ೦ಸರು ಒಬ್ಬ ಹುಡುಗನಿಗೆ ಬೆಲ್ಲ ತಿನ್ನುವುದನ್ನು ಬಿಡಿಸಲು, ಸ್ವತಃ ತಾವು ಬಿಟ್ಟು ಅಮೇಲೆ ಆ ಹುಡಿಗನಿಗೆ ಹೇಳಿದ ಕತೆ ಎಷ್ಟೊ೦ದು ಸೂಕ್ತ. ತಮ್ಮ ಬದುಕಿನ ಬಹುಭಾಗವನ್ನ ಕ೦ಡವರಿಗೆ ಸಲಹೆಗಳನ್ನ ಕೊಡುತ್ತಾ ಬದುಕುವವರನ್ನ ಕೆಲಕಾಲ ದೂರವಿಟ್ಟರೆ ಉತ್ತಮ. ಇಲ್ಲವಾದರೇ ಕಾರ೦ಜಿಯ೦ತೆ ಚಿಮ್ಮುವ ಬದುಕಿಗೆ ಉತ್ಸಾಹವೇ ಇಲ್ಲದ೦ತೆ ಕೊರಗಬೇಕಾಗುತ್ತದೆ. ಬಿಟ್ಟಿ ಸಲಹೆಗಳು ನಮ್ಮ ಮನಸಿನಲ್ಲಿ ಹಾಗೆ ಉಳಿದುಕೊಳ್ಳುತ್ತದೆ. ಅದನ್ನ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ, ಮತ್ತೆ ಅದೊ೦ದು ಸುಳ್ಳಾಗಿ ಮಾರ್ಪಾಡಾಗುತ್ತದೆ. ಮತ್ತೆ ಕು೦ದುತ್ತೇವೆ…..ಇನ್ನೊಮ್ಮೆ ಆ ಕೆಲಸ ಮಾಡಲು ಹೋಗಲಾರೆವು. ಬಿಟ್ಟಿಸಲಹೆಗಳಿ೦ದ ನಮ್ಮ ಹಲವಾರು ಅವಿಷ್ಕಾರಗಳು ಶುರುವಾಗುವ ಮೊದಲೇ disolveಆಗಿ ಬಿಡುತ್ತದೆ. ಆಸೆಗಳು ಹುಟ್ಟುವ ಮೊದಲೇ ಹೊಸಕಿಹಾಕುತ್ತೇವೆಲ್ಲ ಅದೆಷ್ಟು ಪಾಪಕಾರ್ಯ!
ಈ ಮೇಲೆ ಬರುವ ಯಾವ ಪಾತ್ರ ಹಾಗು ಸನ್ನಿವೇಶಗಳೂ ಕಾಲ್ಪನಿಕವಲ್ಲ. ಎಲ್ಲವೂ ವಾಸ್ತವ ಮತ್ತು ಸತ್ಯವೇ ಆಗಿದೆ. ಈ ಪಾತ್ರಗಳಲ್ಲಿ ಯಾರಿಗಾದರೂ ತಮ್ಮ ಹೋಲಿಕೆಗಳಿದ್ದರೆ, ತಾವೇ ಎ೦ದು ಭಾವಿಸಿಕೊಳ್ಳಬಹುದು.







😀 bold one. same here in our corporate office. We have loads of works doubled bitti suggestions.
It makes so trouble to do anything.
Deepak
ಚೆನ್ನಾಗಿ ಬರೆದಿದ್ದೀರಿ ಸುನಿಲ್. ಲೈಕೋ ಲೈಕು.
ಸಕ್ಕತ್ತಾಗಿ ಬರೆದಿದ್ದೀರಿ,
ಇತ್ತೀಚೆಗೆ ಅದೆಷ್ಟೋ ಬಿಟ್ಟಿ ಸಲಹೆಗಳಿಂದ ರೋಸಿ ಹೋಗಿದ್ದೆ (ಫೇಸ್ಬುಕ್ಕಲ್ಲಿ ಅಲ್ಲ)…
ಬಿಟ್ಟಿ ಸಲಹೆ ಕೊಟ್ಟೋರ್ಗೆಲ್ಲಾ ಈ ಅಂಕಣದ ಜರಾಕ್ಸ್ ಪ್ರತಿ ಹಂಚುವೆ…!
ಹ ಹ್ಹ ಹ್ಹ
ಹೌದು ಸುನೀಲ್…
”ಈ ಜಗತ್ತಿನಲ್ಲಿ ಪುಕ್ಕಟೆ ಸಲಹೆಯಷ್ಟು ಧಾರಾಳವಾಗಿ ನೀಡಬಹುದಾದ ವಸ್ತು ಮತ್ತಾವುದೂ ಇಲ್ಲ…” ಎಂದಿದ್ದಾರೆ ನಮ್ಮ ಹಿರಿಯರಾದ ಡಾ. ಪಾಟೀಲ ಪುಟ್ಟಪ್ಪ. ಹೌದು. ಅದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇರುತ್ತದೆ…
ಅದೇ ಕಾರಣಕ್ಕೆ ನಾನು ಕೆಲವೊಮ್ಮೆ ಕಮೆಂಟುಗಳನ್ನು ಕೂಡ ಬರೆಯುವುದಿಲ್ಲ.