ನೆನಪ ಜ್ವರ
ಮಂಜುಳಾ ಹುಲಿಕುಂಟೆ
ಬಾನು ಬಣ್ಣ ಕಳೆದುಕೊಂಡಾಗ. ಈ ಸಂಜೆಯ ಏಕಾಂತಗಳು ಮತ್ತಷ್ಟು ಕಾತರಗಳ ಹೆಚ್ಚಿಸಿ ಬೆಚ್ಚುವಂತೆ ಕಾಡುತ್ತವೆ. ಈ ಹಳೆಯ ಹಾದಿಗಳಿಗೆ ಹೊಸಬಳೆನ್ನುವಂತೆ ಭಯ ಮುಚ್ಚಿಟ್ಟು ಒಂದಷ್ಟು ಬಿಂಕ ಸೇರಿಸಿ ನಡೆವಾಗ ಎದೆಯ ಆಳದಲ್ಲೊಂದು ನೋವು ಹುಳಿ ಇಟ್ಟಂತೆ ಮೀಟಿ ಮುಳ್ಳಾಗಿ ಚುಚ್ಚುತ್ತದೆ . ಅವನು ಕಾದು ನಿಲ್ಲುತ್ತಿದ್ದ ಆ ಘಳಿಗೆಯ ಸಂಭ್ರಮ ಕಣ್ಣ ಮುಂದೆ ಸುಳಿದಾಡಿದಾಗ ನನ್ನೋಳಿಗಿನ ಸಾವೊಂದು ಮತ್ತೆ ಜೀವಪಡೆಯುತ್ತದೆ.
ಆ ದಿನಗಳ ಖುಷಿಗಳನ್ನೆಲ್ಲಾ ಕಾಯ್ದುಕೊಳ್ಳಲು ಹಂಬಲಿಸುವ ಮನಸು, ಮಾಡದ ತಪ್ಪಿಗೂ ಪರಿತಪಿಸುವಾಗ, ನಾನೆಂದೂ ಒಪ್ಪದ ಅವನ ತಪ್ಪುಗಳು ಮತ್ತೆ – ಮತ್ತೆ ಮರಕಳಿಸಿ ನಾವು ತಪ್ಪುಗಳೆಂದು ಸಾಭೀತು ಪಡಿಸುತ್ತಾ ನನ್ನ ಸೋಲಿಸಿ ಗೆಲುವಿನ ಹುಂಬತನದಲ್ಲಿ ಭೀಗುತ್ತವೆ, ಬಿಚ್ಚಿಟ್ಟ ಗೆಜ್ಜೆ ಬ್ಯಾಗಿನ ಯಾವುದೋ ಮೂಲೆಯಿಂದ ಘಲ್ ಎನ್ನುವಾಗ, ಎದೆಯೋಳಗೆ ಸಣ್ಣಗೆ ಕಂಪನ

ನಡುರೋಡಿನಲ್ಲಿ ತಿರುಗಿ ನೋಡದೇ ನಡೆಯುವ ಹಠತೋಟ್ಟಾಗಲೆಲ್ಲಾ ಅವನ ಹಾದಿಗೆ ನನಗೂ ವಂಚಿಸಿ ತಿರುಗಿ ನಿಲ್ಲುವ ಹೆಜ್ಜೆಗಳಿಗೆ,ಅವನ ಉಸಿರ ತುಂಬಿಕೊಂಡು ನನ್ನ ಉಸಿರಿಗಿಳಿಯುವ ಈ ಗಾಳಿ ಅವನ ಗಂಧವನ್ನ ಮೂಗಿನ ತುದಿಗೆ ತಂದು ಉಸಿರುಗಟ್ಟಿಸುತ್ತದೆ.. ಮುಂಗುರುಳು ಹಾರಾಡುವ ನೆಪದಲ್ಲಿ ಅವನ ಹುಡುಕಲು ಆ ಹಾದಿಗೆ ತಿರುಗಿ ಅಂಗಲಾಚುತ್ತವದೆ. ಕಪ್ಪಿಟ್ಟ ಕಣ್ಣು ಒದ್ದೆಯಾಗುತ್ತಲೇ ನಿಟ್ಟುಸಿರ ಎದೆಗೂ ಕನಿಕರಿಸದೇ ಅವನ ಹುಡುಕಲು ಮುಂದಾಗುತ್ತವೆ. ಪ್ರತೀ ಕ್ಷಣ ಅವನ ಮರೆಯಲೆಂದೇ ನೆನೆಯುವ ನನ್ನೋಳಗೆ ಅವನು ಇನ್ನಷ್ಟು ಆಳಕ್ಕೆ ಇಳಿದು ನನ್ನ ಇಲ್ಲವಾಗಿಸುತ್ತಾನೆ . ಎಚ್ಚರವೇ ಇರದೇ ನಾನು ರಸ್ತೆಯ ಮದ್ಯೆ ನಡೆಯುವಾಗ, ಸಾವು ಇನ್ನೇನು ಬಂದು ಬದುಕ ದೋಚಿ ಹೋಯಿತು ಎನ್ನುವಾಗ, ಅವನ ಮಾತು ಎಚ್ಚರಿಸಿ ಮತ್ತೆ ಬದುಕಿಗೆ ನೂಕಿಬಿಡುತ್ತವೆ. ಅದೇ ಮಾತು, ಆ ತಿರುವುಗಳಲ್ಲಿ ರಸ್ತೆ ದಾಟಿಸುವಾಗ ಅವನು ಹೇಳುತ್ತಿದ್ದ ಅದೇ ಮಾತು ನೆನಪಾಗಿ ಹುಚ್ಚಿಯಂತೆ ಒಬ್ಬಳೇ ನಗುವಾಗ ಅಕ್ಕ-ಪಕ್ಕದವರು ಕಕ್ಕಾಬಿಕ್ಕಿಯಾಗಿ ನನ್ನ ನೋಡಿ ಬೆಚ್ಚಿಬಿಡುತ್ತಾರೆ. ಮತ್ತೆ ವಾಸ್ತವಕ್ಕಿಳಿಯುತ್ತೇನೆ. ಸಾವೊಂದು ಮೈ-ಸವರಿದ ಹಾಗೇ ಅವನು ತೋರೆದು ಹೋದ ನೆನಪು ಮತ್ತೆ ಮೊದಲಾಗುತ್ತದೆ.
ಅವನ ನೆನಪಿನಾಳದಲ್ಲಿ ನಾನಿನ್ನು ಬದುಕಿರುವುದಾದರೇ, ಮತ್ತೆ ನನ್ನ ನೆನಪಾದರೇ ಎಂದೆಲ್ಲಾ ಕನಸುವಾಗ ವಾಸ್ತವದ ಕತ್ತಿ ಕುತ್ತಿಗೆಯ ಕತ್ತರಿಸುವಂತೆ ಎಚ್ಚರಿಸುತ್ತದೆ , ನೆನಪಾಗುವಷ್ಟು ಮರೆತವಳಾದರೇ ಅವನ ನೆನಪುಗಳಿಗೆ ನನ್ನದೇ ಶಾಪವಿರಲಿ ನನ್ನ ತನವನ್ನು ಹಲ್ಲಗಳೆದವನ ಎದೆಯೋಳಗೆ ನನ್ನ ನೆನಪು ಸುಳಿಯದಿರಲಿ ಎಂದು ಬೆಂಕಿಕಾರಿಕೊಳ್ಳುತ್ತಾ ಮತ್ತೆ ಸುಟ್ಟಿಕೊಳ್ಳುತ್ತೇನೆ.
ಆಗ ಉರಿವ ಅವನ ಕಣ್ಣಿನಾಳದ ಕಾರುಣ್ಯತುಂಬಿದ ಒಲವು ನೆನಪಾಗುತ್ತದೆ , ಯಾರಿಗೂ ಕಾದುನಿಲ್ಲದ ಅವನು ಕಾದುನಿಲ್ಲುತ್ತಿದ್ದ ಆ ಹಾದಿಗಳಿಗೆ ಈಗಲೂ ಉಸಿರಿರುವುದ ಕಂಡು ಬೆಚ್ಚಿ ಬೆವರುತ್ತೇನೆ. ಹಳೆ ಹಾದಿಗೆ ಇಳಿದಾಗಲೆಲ್ಲಾ ಮೊದಲ ಮಳೆ ಶುರುವಾಗುತ್ತದೆ, ಅವನ ನೆನಪುಗಳಲ್ಲಿ ನೆನೆದು ಸಾಗುವ ನನಗೇ ಅವನದೇ ಜ್ವರ ಮುಚ್ಚಿಕೊಳ್ಳುವುದು ಖಾತ್ರಿ . ಜ್ವರ ಎಂದಾಗಲೆಲ್ಲಾ ಮುದ್ದು ಮಾಡಿ ಮುಖ ತೋರುತ್ತಿದ್ದವನ ನೆನಪೇ ಜ್ವರವಾದರೇ… ಈ ಜ್ವರವೂ ತೊರೆದು ಹೋಗದಿರಲೆಂದು ಮತ್ತೆ ಮತ್ತೆ ಬೇಡಿಕೊಳ್ಳುತ್ತೇನೆ.






ಮಂಜುಳಾ ಹುಲಿಕುಂಟೆ ಜಿ, ಎಂಥಾ ನವಿರಾದ ಭಾವಗಳ ಮಳೆಗರೆದಿರಿ.ಸುಮ್ಮನೆ ಅದರಲ್ಲಿ ಮೊದಲ ಮಳೆಯಲ್ಲಿ ನೆಂದುಕೊಳ್ಳುತ್ತ ಸಾಗಿದೆ ನಿಮ್ಮ ಎಡಬಲಗಳಲ್ಲೆ. ಎದೆ ಯಾರದು ಹೊಡೆದುಕೊಳ್ಳುತ್ತಿತ್ತೊ ಅರಿಯೆ. ಈ ದಾರಿಗಳು ಎಂದೂ ಮರೆಯದಂತಹವು…..ಉಸಿರಿನಂತಹವು…ವಂದನೆಗಳು.
ಧನ್ಯವಾದಗಳು ಸರ್…………
ಅಧ್ಭುತ ಭಾವ ಲಹರಿ, ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ… ಹಳೆ ಹಾದಿಗೆ ಇಳಿದಾಗಲೆಲ್ಲಾ ಮೊದಲ ಮಳೆ ಶುರುವಾಗಲಿ, ಜೊತೆ ನಡೆಯಲು ಕೊಡೆಯಡಿಯಲ್ಲಿ ಅವನೂ ಇರಲಿ 🙂
ಧನ್ಯವಾದಗಳು
ಸುಂದರವಾದ ಬರಹ. ಎಲ್ಲಾ ಪ್ಯಾರಾಗಳನ್ನು ಓದಿದಾಗ, ವಿಷಯ ಮಂಡನೆಯಲ್ಲಿ ಯಾವ ಸಾಲು ಹಿಂದೆ ಮುಂದೆ ಅನ್ನಿಸುವುದಿಲ್ಲ. ಬರಹದಲ್ಲಿಯ ಎರಡು ಮುಖ್ಯ ಅಂಶಗಳೆಂದರೆ ೧.ಕಳೆದು ಹೋದ ಸನ್ನಿವೇಶಗಳು ನಡೆದ ಸ್ಥಳದಲ್ಲಿ ನಿಂತು, ವಾಸ್ತವದಲ್ಲಿ ಪ್ರತಿಕ್ರಿಯಸಲು ಉಪಯೋಗಿಸಿದ ಶಬ್ಧಗಳು – ಬಿಚ್ಚಿಟ್ಟ ಗೆಜ್ಜೆ, ಮೂಗು, ಮುಂಗುರುಳು, ಕಪ್ಪಿಟ್ಟ ಕಣ್ಣುಗಳ ಪ್ರತಿಕ್ರಿಯೆ ಅಪ್ಯಾಯಮಾನವಾಗಿವೆ. ೨. ಘಟಿಸಬಹುದಾದ ಸನ್ನಿವೇಶಗಳಿಗೆ ಉಪಯೋಗಿಸಿದ ಶಬ್ಧಗಳು – ಬದುಕಿರುವುದಾದರೇ, ನೆನಪಾದರೇ, ಮರೆತವಳಾದರೇ, ನೆನಪೇ ಜ್ವರವಾದರೇ, ಎಂಬುದಕ್ಕೆ ಉತ್ತರಿಸಿದ ವಾಖ್ಯಗಳು ಮನವನ್ನು ತಲ್ಲಣಿಸುತ್ತವೆ. ಇನ್ನು ಹೆಚ್ಚು ಬರಹಗಳು ನಿಮ್ಮಿಂದ ಬರಲಿ.
ಹೀಗೆ ಉತ್ತಮವಾಗಿ ಬೆರೆಯುವುದೇ ಆದರೆ – ಅವು ನಮ್ಮಂತವರಿಂದ ಓದಲ್ಪಡುತ್ತವೆ… ವಂದನೆಗಳು
ಧನ್ಯವಾದಗಳು ಸರ್…..