ವಿಜಯನಗರ ಬಿಂಬದ ’ನಾಟಕ ಹಬ್ಬ’
– ಎನ್ ಸಂಧ್ಯಾರಾಣಿ
ಬೇಸಿಗೆ ಬಂತೆಂದರೆ ಸಾಕು ಮಕ್ಕಳಿಗೆ ಸಧ್ಯ ಸ್ಕೂಲಿನ ಸಹವಾಸವೇ ಮೇಲು ಅನ್ನುವಷ್ಟು ಸಮ್ಮರ್ ಕ್ಯಾಂಪುಗಳು ಬೆಂಗಳೂರಿನಲ್ಲಿ ತಲೆ ಎತ್ತುತ್ತವೆ. ಬೇಸಿಗೆ ರಜೆ ಮುಗಿಯುವುದರಲ್ಲಿ ನಿಮ್ಮ ಮಗು ಐನ್ ಸ್ಟಿನ್ ಆಗಬೇಕೆ, ಶಕುಂತಲಾ ದೇವಿ ಆಗಬೇಕೆ, ಸಿದ್ದಾರ್ಥ ಬಸು ಆಗಬೇಕೆ, ಏನಾಗ ಬೇಕು ಹೇಳಿ, ನಾವು ತಯಾರು ಮಾಡಿ ಕೊಡುತ್ತೇವೆ ಎನ್ನುವಂತಹ, ’ಬ್ಯುಲ್ಟ್ ಟು ಸ್ಪೆಸಿಫಿಕೇಶನ್’ ಕಾರ್ಖಾನೆಗಳು, ಬಣ್ಣ ಬಣ್ಣದ ಕರಪತ್ರಗಳನ್ನು ಮುದ್ರಿಸಿ, ಪೋಷಕರಿಗೆ ಅಂಗೈಯಲ್ಲೇ ಅರಮನೆ ತೋರಿಸುತ್ತಿರುತ್ತವೆ.
ಆದರೆ ಇವೆಲ್ಲದರ ನಡುವೆ ಕೆಲವು ಸಂಸ್ಥೆಗಳು ಮಕ್ಕಳಿಗೆ ಆಟದ ಜೊತೆ, ಸಾಹಿತ್ಯ, ಕಾವ್ಯ, ರಂಗಭೂಮಿ ಇನ್ನಿತರ ಜೀವನಪ್ರೀತಿ ಕಲಿಸುವ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿರುತ್ತವೆ. ಅಂತದರಲ್ಲಿ ಮುಖ್ಯವಾದದ್ದು ವಿಜಯನಗರ ಬಿಂಬ. ಶ್ರೀಮತಿ ಶೋಭಾ ವೆಂಕಟೇಶ್, ಡಾ ಕಶ್ಯಪ್, ಸುಷ್ಮಾ, ಬೃಂದಾ ಮುಂತಾದವರ ಒಗ್ಗೂಡಿದ ಉತ್ಸಾಹದೊಂದಿಗೆ ಮೇಲೆದ್ದ ಈ ಸಂಸ್ಥೆ ಇಂದು ಮೈಸೂರು ವಿಶ್ವ ವಿದ್ಯಾಲಯಕ್ಕೆ ಅಫಿಲಿಯೇಟ್ ಆಗಿ ರಂಗ ಡಿಪ್ಲೋಮ ತರಗತಿಗಳನ್ನೂ ನಡೆಸುತ್ತಿದೆ ಎಂದರೆ, ಇದನ್ನು ನಡೆಸುತ್ತಿರುವವರ ಬದ್ಧತೆ ಅರಿವಾಗುತ್ತದೆ.
ಈ ಸಲದ ಮಕ್ಕಳ ಶಿಬಿರದಲ್ಲಿ ಮಕ್ಕಳು ಕಲಿತದ್ದೇನು ಅನ್ನುವ ಪ್ರಶ್ನೆಗೆ ಇದಕ್ಕಿಂತ ಸುಂದರವಾದ ಉತ್ತರ ಕೊಡಲು ಸಾಧ್ಯವಿಲ್ಲವೇನೋ ಎನ್ನುವಂತೆ ಮೊನ್ನೆ ೨ಡನೆಯ ತಾರೀಖು ಎ ಡಿ ಎ ರಂಗ ಮಂದಿರದಲ್ಲಿ ಈ ಮಕ್ಕಳ ತಂಡ ಮೂರು ನಾಟಕಗಳನ್ನು ಪ್ರದರ್ಶಿಸಿತು. ಕಶ್ಯಪ್ ಅವರ ನಿರ್ದೇಶನದಲ್ಲಿ ’ಅಲ್ಲಿ ನೋಡು’, ಡಾ ಎನ್ ಎಸ್ ವೆಂಕಟ್ ರಾಂ ಅವರು ಬರೆದ ’ಕತ್ತೆಬಾಲ, ಕುದುರೆ ಜುಟ್ಟು’ ಮತ್ತು ಸುಷ್ಮಾ ಅವರ ನಿರ್ದೇಶನದ ’ಹೀಗೂ ಆಗಬಹುದು’ ಎನ್ನುವ ನೃತ್ಯ ನಾಟಕ ಪ್ರದರ್ಶಿತಗೊಂಡವು. ಎಲ್ಲರನ್ನೂ ಸೆಳೆದದ್ದು ’ಅಲ್ಲಿ ನೋಡು’ ನಾಟಕ. ಇಂದಿನ ಈ ಕಾಲದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ನಾಟಕ ಚುಟುಕಾದರೂ ಪರಿಣಾಮಕಾರಿಯಾಗಿ ತೋರಿಸಿತು. ’ಕತ್ತೆ ಬಾಲ…’ ತನ್ನ ಹಾಸ್ಯದಿಂದ ಮನಸ್ಸನ್ನು ಸೆಳೆಯಿತು. ನೃತ್ಯ ನಾಟಕದಲ್ಲಿ ಸುಂದರವಾದ ರಂಗಸಜ್ಜಿಕೆ, ಬೆಳಕು ಎಲ್ಲಾವೂ ಇತ್ತು. ಆದರೆ ಅದು ನೃತ್ಯ ನಾಟಕವಾದ್ದರಿಂದ ಅದನ್ನು ವಿವರವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ ಅನ್ನಿಸುತ್ತಿತ್ತು. ನಾಟಕದ ಮೊದಲು ಅದರ ಸಿನಾಪ್ಸಿಸ್ ಕೊಟ್ಟಿದ್ದಿದ್ದರೆ ನಾಟಕದ ಸವಿ ಇನ್ನೂ ಹೆಚ್ಚುತ್ತಿತ್ತು.
ಬೇಸಿಗೆ ಶಿಬಿರದಲ್ಲಿ ಜಿ ಎನ್ ಮೋಹನ್ ರವರ ಸಾರಥ್ಯದಲ್ಲಿ ನಡೆದ ಮೀಡಿಯಾ ಹಬ್ಬಕ್ಕೆ ಸಾಕ್ಷಿಯಾಗಿ ಮಕ್ಕಳು ತಯಾರಿಸಿದ ದಿನಪತ್ರಿಕೆ ನಿಜಕ್ಕೂ ತುಂಬಾ ಚನ್ನಾಗಿತ್ತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿ ಎನ್ ಮೋಹನ್ ರವರು ಬದಲಾಗುತ್ತಿರುವ ಈ ’ಮೀಡಿಯಾ ಕಾಲದಲ್ಲಿ’ ನಾಳಿನ ಪ್ರಜೆಗಳಾದ ಮಕ್ಕಳು ಮಾಧ್ಯಮವನ್ನು ಅರ್ಥ ಮಾಡಿಕೊಂಡರಷ್ಟೇ ಸಾಲದು, ಮಾಧ್ಯಮವನ್ನು ಪ್ರಶ್ನಿಸುವ ಸಾಮರ್ಥ್ಯ ಬೆಳಸಿಕೊಳ್ಳಬೇಕು. ಅದಕ್ಕಾಗಿ ಪ್ರತಿ ಶಾಲೆಗಳಿಗೂ ಮಾಧ್ಯಮದ ವ್ಯಾಕರಣ ತಲುಪಿಸಬೇಕು ಎನ್ನುವ ತಮ್ಮ ಕನಸನ್ನು ಹಂಚಿಕೊಂಡರು.
ಹಾಗೆ ಮಕ್ಕಳ ಕವನಸಂಕಲನದ ಕೆಲವು ಕವಿತೆಗಳು ನಿಜಕ್ಕೂ ತುಂಬಾ ಚೆನ್ನಾಗಿದ್ದವು ಅಂತ ಕವಿಗೋಷ್ಟಿಗೆ ಹಾಜರಿದ್ದ ನನ್ನ ಗೆಳತಿ ಹೇಳುತ್ತಿದ್ದಳು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳು ಶ್ರೀ . ಕೆ . ಆರ್.ರಾಮಕೃಷ್ಣ , ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾ . ದಾಮೋದರ ಶೆಟ್ಟಿ, ಸಾಹಿತಿಗಳು, ನರಸಿಂಹಮೂರ್ತಿ, ರಿಜಿಸ್ಟ್ರಾರ್, ಸಂಗೀತ ನೃತ್ಯ ಅಕಾಡೆಮಿ ಮತ್ತು ಜಿ. ಎನ್.ಮೋಹನ್ , ಮಾಧ್ಯಮ ತಜ್ಞರು.
ಮಕ್ಕಳ ಅದ್ಭುತ ಪ್ರತಿಕ್ರಿಯೆ ಎಲ್ಲರ ಮೆಚ್ಚಿಗೆಯನ್ನೂ ಗಳಿಸಿತ್ತು.
ವೈಯಕ್ತಿಕವಾಗಿ ನನಗೆ ಅತ್ಯಂತ ಖುಷಿ ಕೊಟ್ಟಿದ್ದು ಅಂದರೆ ಮಕ್ಕಳಲ್ಲಿದ್ದ ಆ ನಿರಾಳತನ, ಕಟ್ಟು ಬಿಚ್ಚಿದ, ಜೀನು ಸಡಿಲಿಸಿದ ಕುದುರೆಯ ಸ್ವತಂತ್ರ ನಗು … ಹೌದು ಮಕ್ಕಳಲ್ಲಿ ಕಣ್ಮರೆಯಾಗುತ್ತಿರುವ ಆ ’ಮಗುತನ’ ಬಿಂಬದ ಚಿಣ್ಣರಲ್ಲಿ ಕಂಡಿದ್ದು ನನಗೆ ಅವರ ಎಲ್ಲಾ ಪ್ರತಿಭೆಗಿಂತಾ ಮಿಗಿಲು ಅನ್ನಿಸಿತು…
ಬಿಂಬ ಗೆದ್ದಿದ್ದು ಅಲ್ಲಿ, ಮಕ್ಕಳಿಗೆ ಅವರ ಬಾಲ್ಯವನ್ನು ಕೊಡುವುದರಲ್ಲಿ..
ಸಮಾರಂಭದ ಕೆಲವು ದೃಶ್ಯಗಳು ನಿಮಗಾಗಿ :
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:





Nice Review on a Nice Show .
Vijayanagara Bimbada Shibiradalli paalugollada makkalu nijavaagiyuu bahalashtu kaledukolluthidaare …….
ಸುಮ್ಮನೆ ಮನೆಯಲ್ಲಿ ಕುಳಿತು ಚಲನಚಿತ್ರಗಳ ನೋಡಿ ಕ್ಷಣಕಾಲ ಮಜಾ ಮಾಡಿ ಮತ್ತೆ “ಅಮ್ಮಬೋರು” ಎನ್ನುವುದಕ್ಕಿಂತಾ ಚಿಣ್ಣರ ಚಾವಡಿಗೆ ಬಂದು ರಂಗಭೂಮಿಯ ಬಗ್ಗೆ , ವಿವಿಧ ಕಲೆಗಳ ಬಗ್ಗೆ, ಮೀಡಿಯಾ ದ ಹೊರಒಳಗುಗಳ ಬಗ್ಗೆ ಮತ್ತು ಇನ್ನಷ್ಟು ಮತ್ತಷ್ಟು ಸಾಕಷ್ಟು ಕಲಿತು ಅರಿತು ಆಟದ ಜೊತೆ ಪಾಠ ಕಲಿತೆವು…… ಶಾಲೆಗಳಲ್ಲೂ ಈ ರೀತಿಯ ಶಿಕ್ಷಣ ಸಿಕ್ಕರೆ ಆಹಾ…. ಶಾಲೆಗಳಲ್ಲಿ full ಮಕ್ಕಳಿರುತ್ತಾರೆ…….
” ವೈಯಕ್ತಿಕವಾಗಿ ನನಗೆ ಅತ್ಯಂತ ಖುಷಿ ಕೊಟ್ಟಿದ್ದು ಅಂದರೆ ಮಕ್ಕಳಲ್ಲಿದ್ದ ಆ ನಿರಾಳತನ, ಕಟ್ಟು ಬಿಚ್ಚಿದ, ಜೀನು ಸಡಿಲಿಸಿದ ಕುದುರೆಯ ಸ್ವತಂತ್ರ ನಗು … ಹೌದು ಮಕ್ಕಳಲ್ಲಿ ಕಣ್ಮರೆಯಾಗುತ್ತಿರುವ ಆ ’ಮಗುತನ’ ಬಿಂಬದ ಚಿಣ್ಣರಲ್ಲಿ ಕಂಡಿದ್ದು ನನಗೆ ಅವರ ಎಲ್ಲಾ ಪ್ರತಿಭೆಗಿಂತಾ ಮಿಗಿಲು ಅನ್ನಿಸಿತು…
ಬಿಂಬ ಗೆದ್ದಿದ್ದು ಅಲ್ಲಿ, ಮಕ್ಕಳಿಗೆ ಅವರ ಬಾಲ್ಯವನ್ನು ಕೊಡುವುದರಲ್ಲಿ..”
ಮಕ್ಕಳ ಜೊತೆ ಮಕ್ಕಳಾಗಿ ಇರುವ ಸುಖ ಅವರ ಮನಃಸ್ಥಿತಿಯಲ್ಲಿ ನಾವೂ ಪಾಲ್ಗೊಳ್ಳಬಹುದು ಎಂಬುದರಲ್ಲೆ ಇದೆ ಅದೇ ನಮ್ಮ ಚಾಲಕ ಶಕ್ತಿ .. ಅದೇ ನಮ್ಮ ಪೆಟ್ರೋಲ್. .