ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಲಕರು ದುಡಿಯುವುದು ತಪ್ಪಲ್ಲ..

ಡಾ ಎಸ್ ಬಿ ಜೋಗೂರ

ಇವರು ಬೆಳೆಯುವ, ಬಲಿಯುವ ಮುನ್ನವೇ ಮೈ ಬಗ್ಗಿಸಿ ದುಡಿಯುವ ಪುಟ್ಟ ಜೀವಗಳು. ಜೀವನದ ಮರ್ಮ ತಿಳಿಯುವ ಮುನ್ನವೇ ರೇಜಿಗೆ ಹುಟ್ಟಿಸುವ ಬದುಕಿಗೆ ಬೆಂಡಾದವರು. ಆಡಿ, ಓದಿ ನಲಿಯಬೇಕಾದ ವಯಸಿನಲ್ಲಿ ಎಲ್ಲವೂ ಮುಗಿದು ಹೋದಂತೆ ಬದುಕುವ ಎಳೆಯರು. ಉಪವಾಸ ವನವಾಸಗಳ ಸಹವಾಸದಲ್ಲಿಯೇ ಬೆಳೆಯಬೇಕಾದ ಅನಿವಾರ್ಯದ ನಡುವೆ, ಪಾಪಿ ಹೊಟ್ಟೆಗೆ ಉತ್ತರವಾಗಿ ತನ್ನನ್ನೇ ತಾನು ಮಾರಿಕೊಂಡು ದಣಿಯುವ ಜೀವ. ನಗುವದನ್ನೇ ಮರೆತ ದುಡಿವದಷ್ಟನ್ನೇ ಅರಿತ ಪುಟ್ಟ ಪೋರ ಕುಟುಂಬದ ಬಡತನದ ಬವಣೆಯಲ್ಲಿ ಪಾಲುದಾರ ಇಂಥಾ ಬಾಲ್ಯ ಯಾರಿಗೂ ಬೇಡ ಎನ್ನುವಂತಿರುವ ಹೀನಾಯ ಸ್ಥಿತಿ. ಚಿನಕುರಳಿಯಂತೆ ಆಡಿ ನಲಿಯಬೇಕಿರುವ ಮಗು ಯಾವುದೋ ದಾಬಾದಲ್ಲಿ ತಟ್ಟೆ ಎತ್ತುವ, ಜಮಖಾನೆ ನೇಯುವ, ಊದಬತ್ತಿ ಹೊಸೆಯುವ, ಕಡ್ದಿ ಪೆಟ್ಟಿಗೆ ತಯಾರಿಸುವ, ಪಟಾಕಿ ಮಾಡುವ, ಗಾಜಿನ ಬಳೆ ತಯಾರಿಸುವ, ಬೀಡಿ ಕಟ್ಟುವ ತನ್ನ ವಯಸ್ಸನ್ನು ಮೀರಿಯೂ ದುಡಿಯುವ ಈ ಬಾಲರನ್ನೇ ಬಾಲಕಾರ್ಮಿಕರೆಂದು ಕರೆಯಲಾಗುವದು.
ಜಗತ್ತಿನ ಶ್ರೀಮಂತರಲ್ಲಿ ನಮ್ಮದೂ ಪಾಲಿದೆ. ಹಾಗೆಯೇ ವಿಶ್ವದಲ್ಲಿ ಮಾಹಿತಿ ತಂತ್ರಜ್ಞಾನದ ವಲಯದಲ್ಲಿ ನಮಗೂ ಒಂದು ಹೆಸರಿದೆ. ನಮ್ಮಲ್ಲೂ ಹಗಲು ಹೊತ್ತಿನಲ್ಲೂ ಲೈಟ್ ಉರಿಯುವ ಸಾಕಷ್ಟು ಪಂಚತಾರಾ ಹೊಟೆಲುಗಳಿವೆ, ನಮ್ಮಲ್ಲೂ ತಿಂಗಳಿಗೆ ಲಕ್ಷ., ಕೋಟಿ ದುಡಿಯುವವರು ಬೇಕಾದಷ್ಟಿದ್ದಾರೆ. ಗಗನ ಚುಂಬಿ ಕಟ್ಟಡಗಳು ನಿತ್ಯವೂ ಏಳುತ್ತವೆ. ಇಂಥಾ ಎಲ್ಲ ವೈಭೋಗಗಳ ನಡುವೆಯೇ ಸುಮಾರು 20 ಮಿಲಿಯನ್ 15 ವರ್ಷ ವಯೋಮಿತಿಯೊಳಗಿನ ಮಕ್ಕಳು, ತನ್ನ ಹಾಗೂ ಕುಟುಂಬದ ಹೊಟ್ಟೆಪಾಡಿಗಾಗಿ ಪುಟ್ಟ ದೇಹವನ್ನು ಪಣಕ್ಕಿಟ್ಟು ದುಡಿಯುತ್ತಾರೆ. ಎಷ್ಟೋ ಮಕ್ಕಳು ತಮ್ಮ ವಯಸ್ಸನ್ನು ಇದ್ದಕ್ಕಿದ್ದಂತೆ ಹೇಳಿದರೆ ಕೆಲಸಕ್ಕಿಟ್ಟುಕೊಳ್ಳುವದಿಲ್ಲ ಎಂದು ಸುಳ್ಳು ಹೇಳಿ ಕೆಲಸ ಮಾಡುವ ಉದಾಹರಣೆಗಳೂ ಸಾಕಷ್ಟಿವೆ. ಕೇಂದ್ರ ಸಚಿವ ಸಂಪುಟ ಈಚೆಗಷ್ಟೇ ಬಾಲಕಾರ್ಮಿಕ ನಿಯಂತ್ರಣ ಕಾಯ್ದೆ  2012 ಕ್ಕೆ ತಿದ್ದುಪಡಿ ತರುವದಕ್ಕೆ ಸಂಬಂಧಿಸಿದಂತೆ ಅನುಮೋದನೆ ನೀಡಿದೆ ಅದರಲ್ಲಿ 14 ವರ್ಷದ ಒಳಗಿನ ಮಕ್ಕಳು ಕಠಿಣವಾದ ಕೆಲಸಗಳಲ್ಲಿ ಶಾಲಾ ರಜಾ ದಿನಗಳಲ್ಲಿ ದುಡಿಯುವದು ತಪ್ಪಲ್ಲ ಎನ್ನುವದನ್ನು ಪ್ರತಿಪಾದಿಸಿದೆ. ಅ ಮೂಲಕ ಬಾಲಕರ ದುಡಿಮೆ0ುನ್ನು ನಿಯಂತ್ರಿಸುವ ಬದಲಾಗಿ ಅವರ ಶೋಷಣೆಗೆ ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಗಿದೆ.

ಬಾಲ ಕಾರ್ಮಿಕರು ಎಂದರೆ ಯಾರು..?
ಸಾಮಾನ್ಯವಾದ ಪರಿಭಾಷೆಯಲ್ಲಿ 5-14 ವರ್ಷ ವಯೋಮಿತಿಯೊಳಗಿನ ಯಾವುದಾದರೂ ಮಗು ವೇತನಕ್ಕಾಗಿ ಇಲ್ಲವೇ ವೇತನರಹಿತವಾಗಿ ದುಡಿಯುವದನ್ನು ಬಾಲಕಾರ್ಮಿಕರು ಎನ್ನಲಾಗುತ್ತದೆ. ಕಾರ್ಮಿಕ ಸಚಿವಾಲಯದ ಇಲಾಖೆಯ ಪ್ರಕಾರ ‘ ಯಾವುದೇ ಮಗು 5-15 ವರ್ಷ ವಯೋಮಿತಿಯ ಒಳಗಿನವನಾಗಿದ್ದು, ಮನೆಯ ಒಳಗೆ ಇಲ್ಲವೇ ಹೊರಗೆ ಕೂಲಿಗಾಗಿ ಇಲ್ಲವೇ ಹಾಗೆ ಸುಮ್ಮನೇ ದುಡಿಯುವದು ಕೂಡಾ ಬಾಲ ಕಾರ್ಮಿಕ’ ಎಂದು ಕರೆದಿರುವದಿದೆ. ಭಾರತ ಸರ್ಕಾರವು ‘ಯಾವುದೇ ಬಾಲಕ ಆರ್ಥಿಕ ಉತ್ಪಾದನಾ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿರುವದೇ ಬಾಲಕಾರ್ಮಿಕ’ ಎಂದಿದೆ. ಈ ಬಾಲಕರ ದುಡಿಮೆಯ ಬಗೆಗೆ ಸರ್ವಸಮ್ಮತವಾದ ವ್ಯಾಖ್ಯೆಗಳಿಲ್ಲ. ಒಂದಂತೂ ಸತ್ಯ ಯಾವ ಬಾಲಕ ದುಡಿಮೆಯಲ್ಲಿ ತೊಡಗಿರುವನೋ ಅವನೇ ಬಾಲ ಕಾರ್ಮಿಕ. ಬಾಲಕಾರ್ಮಿಕರಿಗೆ ಅತಿ ಹೆಚ್ಚೆಂದರೆ 500-1000 ರೂಪಾಯಿ ಸಂಬಳ. ದುಡಿಮೆಯ ಅವಧಿ ಮಾತ್ರ ದೊಡ್ದವರಷ್ಟೇ. ಕೆಲ ಬಾರಿ ಅವರಿಗಿಂತಲೂ ಹೆಚ್ಚು. ತೀರಾ ಕಡಿಮೆ ಸಂಬಳಕ್ಕಾಗಿ ಹೀಗೆ ತಮ್ಮನ್ನೇ ತಾವು ಆಟಪಾಠಗಳನ್ನು ಬಲಿಕೊಟ್ಟು ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಳ್ಳುವ ಅವಶ್ಯಕತೆಯಾದರೂ ಏನು..?
ಬಾಲಕರ ದುಡಿಮೆಗೆ ಕಾರಣವೇನು..?
ಈ ಎಳೆಯ ಬಾಲಕರು ಯಾಕೆ ದುಡಿಯಬೇಕು ಎನ್ನುವ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ಆ ಅಧ್ಯಯನಗಳು ಬಹುತೇಕವಾಗಿ ಬಡತನವನ್ನು ಈ ಬಾಲಕಾಮರ್ಿಕರ ಸಮಸ್ಯೆಯ ಪ್ರಧಾನ ಕಾರಣವನ್ನಾಗಿ ಗುರುತಿಸಿದರೂ ಅದರ ಜೊತೆಗೆ ಇತರೆ ಕಾರಣಗಳನ್ನು ಹೀಗೆ ಹೇಳಬಹುದಾಗಿದೆ.
ಅನಕ್ಷರತೆ
ಹೆಚ್ಚು ಸಂತಾನ
ನಿರುದ್ಯೋಗ
ಉತ್ಪಾದನಾ ಸಾಧನಗಳ ಕೊರತೆ
ಮೂಲ ಸೌಲಭ್ಯಗಳ ಕೊರತೆ
ಉದ್ದಿಮೆದಾರನ ಶೋಷಣೆ
ಜಾತಿ ಮತ್ತು ಸಾಂಸ್ಕೃತಿಕ ಪರಂಪರೆ
ನಗರೀಕರಣ
ವಲಸೆ ಮತ್ತು ಜೀವನ ಸುಭದ್ರತೆಯ ಕೊರತೆ
ಕುಲಕಸುಬುಗಳು
ಪಾಲಕರ ಹೊಣಗೇಡಿತನ
ಕೊಳಚೆ ಪ್ರದೇಶ
ಶಾಲೆ ತಪ್ಪಿಸುವದು
ಇಂಥಾ ಹತ್ತಾರು ಕಾರಣಗಳನ್ನು ಹೇಳಬಹುದಾದರೂ ಬಡತನ ಮತ್ತು ಹೆಚ್ಚಿನ ಸಂತಾನ ಹಾಗೂ ಯಾವುದೇ ಮೂಲಗಳಿಂದ ಸರಿಯಾದ ಆದಾಯವಿಲ್ಲದಿದ್ದಾಗ ಕುಟುಂಬದ ನಿರ್ಗತಿಕ ಸ್ಥಿತಿಯಿಂದಾಗಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುವ ಪರಿಸ್ಥಿತಿ ಬಂದೊದಗುತ್ತದೆ.
ಬಾಲಕಾರ್ಮಿಕರ ಪ್ರಮಾಣ
ಭಾರತ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಸುಮಾರು 20 ಮಿಲಿಯನ ಮಕ್ಕಳು ನಮ್ಮಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎನ್ನುವದಾದರೆ ಕೆಲ ಎನ್.ಜಿ.ಒ ಗಳ ಪ್ರಕಾರ ಆ ಸಂಖ್ಯ್ಯೆ ಸುಮಾರು 60 ಮಿಲಿಯನ್ ದಷ್ಟಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳುವಂತೆ ಇಡೀ ವಿಶ್ವದಲ್ಲಿ ಸುಮಾರು 218 ಮಿಲಿಯನ್ ಬಾಲಕಾರ್ಮಿಕರಿದ್ದಾರೆ. ಭಾರತದಲ್ಲಿ 5-14 ವರ್ಷ ವಯೋಮಿತಿಯೊಳಗಿನ ಬಾಲಕಾರ್ಮಿಕರ ಪ್ರಮಾಣ 14 ಪ್ರತಿಶತದಷ್ಟಿದೆ.
ಅಪಾಯಕಾರಿ ಪರಿಸರದ ನಡುವೆ ಬಾಲಕಾರ್ಮಿಕರು
ಅನೇಕ ಮಕ್ಕಳಿಗೆ ವೇತನವನ್ನು ಕೊಡದೇ ಬರೀ ಊಟ ಕೊಟ್ಟು ದುಡಿಸಿಕೊಳ್ಳುವ ಉದ್ಯಮಗಳು ಬೇಕಾದಷ್ಟಿವೆ. ಉತ್ತರ ಪ್ರದೇಶದ ಮಿರ್ಜಾಪುರದ ಜಮಖಾನೆ ತಯಾರಿಕಾ ಉದ್ಯಮದಲ್ಲಿ ಅತ್ಯಂತ ಅಹಿತಕರವಾದ ಪರಿಸರದ ನಡುವೆ ಮಕ್ಕಳು ದುಡಿಯುತ್ತವೆ. ಸೂರತ್ ನ ವಜ್ರ ಸಂಸ್ಕರಣ ಘಟಕಗಳಲ್ಲಿ 12-15 ಘಂಟೆ ದುಡಿಯುತ್ತವೆ. ಶಿವಕಾಶಿಯ ಪಟಾಕಿ ಹಾಗೂ ಕಡ್ದಿಪೆಟ್ಟಿಗೆ ತಯಾರಿಸುವ ಉದ್ಯಮವಂತೂ ಸುಮಾರು 50 ಸಾವಿರದಷ್ಟು ಬಾಲಕಾರ್ಮಿಕರನ್ನು ತೊಡಗಿಸಿಕೊಂಡು ಅವರನ್ನು ರೋಗಗ್ರಸ್ಥ ಸ್ಥಿತಿಗೆ ನೂಕುತ್ತಿವೆ. ಫಿರೋಜಾಬಾದ್ ನ ಗಾಜು ತಯಾರಿಕೆಯ ಘಟಕಗಳಲ್ಲಿಯೂ ಬಾಲಕಾರ್ಮಿಕರನ್ನು ತೊಡಗಿಸಲಾಗಿದೆ. ಹಾಗೆಯೇ ದೇಶದ ಇನ್ನೂ ಅನೆಕ ಭಾಗಗಳಲ್ಲಿ ಬಾಲಕರನ್ನು ದುಡಿಸಿಕೊಳ್ಳಲಾಗುತ್ತದೆ. ಒಂದು ಸಮೀಕ್ಷೆಯಂತೆ
ಮೂವರು ಬಾಲಕಾರ್ಮಿಕರಲ್ಲಿ ಇಬ್ಬರ ಮೇಲೆ ದೌರ್ಜನ್ಯಗಳು ಜರುಗುತ್ತವೆ
50 ಪ್ರತಿಶತದಷ್ಟು ಬಾಲಕಾರ್ಮಿಕರು ದೈಹಿಕ ಹಿಂಸೆಯನ್ನು ಅನುಭವಿಸಿರುತ್ತಾರೆ
50.2 ಪ್ರತಿಶತದಷ್ಟು ಮಕ್ಕಳು ವಾರದ ಏಳೂ ದಿನ ದುಡಿಯುತ್ತಾರೆ.
53 ಪ್ರತಿಶತದಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವದಿದೆ.
ಪ್ರತಿ ಇಬ್ಬರಲ್ಲಿ ಒಬ್ಬ ಬಾಲಕ ಮಾನಸಿಕ ಕಿರಕಿರಿ ಅನುಭವಿಸುವದಿದೆ.
ಪರಿಹಾರವಿಲ್ಲವೇ..?
ಖಂಡಿತ ಇದೆ. ಮೊದಲು ಅವರನ್ನು ದುಡಿಸಿಕೊಳ್ಳುವವರು ಮಾನಸಿಕವಾಗಿ ಬದಲಾಗಬೇಕು. ಯಾವುದೇ ಕಾರಣದಿಂದಲೂ ಸಣ್ಣ ಮಕ್ಕಳನ್ನು ದುಡಿಸಿಕೊಳ್ಳುವದು ಮಹಾ ಪಾಪ ಎನ್ನುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಮನ:ಪರಿವರ್ತನೆಯಾದರೆ ಎಲ್ಲವೂ ಸಾಧ್ಯ. ಅವನನ್ನು ಶಾಲೆಗೆ ಸೇರಿಸುವಂತೆ ಒತ್ತಡ ತರಬೇಕು, ಸಾಧ್ಯವಿದ್ದರೆ ನೆರವಾಗಬೇಕು. 1986 ರಲ್ಲಿಯೇ ಭಾರತ ಸರಕಾರ ಬಾಲಕಾರ್ಮಿಕರ ಕಾಯ್ದೆಯನ್ನು ಜಾರಿಗೆ ತಂದು ಬಾಲಕರ ದುಡಿಮೆಯನ್ನು ನಿಷೇಧಿಸಿದೆ. ಆದಾಗ್ಯೂ ಬಾಲಕರ ದುಡಿಮೆ ನಿಂತಿಲ್ಲ. ಹೀಗಿರುವಾಗ ಅವರ ದುಡಿಮೆ0ುೂ ಅನಿವಾರ್ಯ ಎನ್ನುವ ಶಾಸನಕ್ಕೆ ತಿದ್ದುಪಡಿಯನ್ನು ತಂದರೆ ಪರಿಸ್ಥಿತಿ ಹೇಗಿರಬೇಡ..? ಸಮಾಜದ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ ಬಾಲಕಾರ್ಮಿಕರ ದುಡಿಮೆಯನ್ನು ತಪ್ಪಿಸುವದಾಗಬೇಕು. ಇದರ ನಿವಾರಣೆಯಲ್ಲಿ ಎಲ್ಲರೂ ಕೈ ಜೊಡಿಸಬೇಕು. ಭವಿಷ್ಯದ ನಾಗರಿಕರನ್ನು ಬಾಲ್ಯದಲ್ಲಿಯೇ ದುಡಿಮೆಗೆ ಅಣಿಗೊಳಿಸದೇ ಅವರಿಗೆ ಶಿಕ್ಷಣ ಕೊಟ್ಟು ಅವರ ಭವಿಷ್ಯವನ್ನು ರೂಪಿಸುವಲ್ಲಿ ನಾವೆಲ್ಲರೂ ಸಾಧ್ಯವಾದಷ್ಟು ನೆರವಾಗೋಣ.

‍ಲೇಖಕರು G

9 June, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading