ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ರಾಜಗುರು ಸ್ಮರಣೆಯಲ್ಲಿ

ಗುರುವಂದನಾ – ೨೦೧೭

ವಿಖ್ಯಾತ ಹಿಂದುಸ್ಥಾನಿ ಗಾಯಕ ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ `ಗೆಳೆಯರ ಬಳಗ’ವು ಇದೇ ಶನಿವಾರ (ಏ. ೦೮) ಹೆಸರಾಂತ ಗಾಯಕ ಧನಂಜಯ ಹೆಗಡೆ ಅವರ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿದೆ. ಮಲ್ಲೇಶ್ವರದ ಸೇವವಾಸದನದಲ್ಲಿ ಸಂಜೆ ಐದು ಗಂಟೆಗೆ ನಡೆಯುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ; ಕಿರಣ್ ಮಗೇಗಾರ್ ಅವರ ಬಾನ್ಸುರಿ ವಾದನ ಹಾಗೂ ಯುವ ಗಾಯಕ ನರಸಿಂಹ ಜೋಶಿ ಅವರ ಗಾಯನ ನಡೆಯಲಿದೆ. ಈ ಕಲಾವಿದರಿಗೆ ಸಹವಾದನದಲ್ಲಿ ಗುರುಮೂರ್ತಿ ವೈದ್ಯ,ಶ್ರೀವತ್ಸ ಕೌಲಗಿ, ಸಂತೋಷ್ ಸಾಗರ (ತಬಲಾ) ಹಾಗೂ ಮಧುಸೂದನ ಭಟ್ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ. ಪ್ರವೇಶ ಉಚಿತ. ಹೆಚ್ಚಿನ ವಿವರಗಳಿಗೆ ಸಂಪರ್ಕ: ೮೦೯೫೩-೦೪೨೫೩

ಸ್ಥಳ: ಸೇವಾಸದನ, ೧೪ನೇ ಕ್ರಾಸ್, ಮಲ್ಲೇಶ್ವರ.

ಸಮಯ: ಶನಿವಾರ ಸಂಜೆ ೫

ಕಲಾವಿದರ  ಪರಿಚಯ

– ಧನಂಜಯ ಹೆಗಡೆ

ಉತ್ತರ ಕನ್ನಡ ಮೂಲದ ಗುಣವಂತೆಯ ಧನಂಜಯರ ತಂದೆ ಜಿ.ಎಸ್. ಹೆಗಡೆ, ತಾಯಿ ಗೀತಾ ಹೆಗಡೆ.ತಾಯಿಯಿಂದ ಶುರುವಾದ ಸಂಗೀತ ಕಲಿಕೆ ಪಂ. ವಿನಾಯಕ್ ತೊರವಿಯವರ ಮಾರ್ಗದರ್ಶನದಲ್ಲಿ ಮುಂದುವರೆಯಿತು.

ಶಾಲಾದಿನಗಳಲ್ಲಿ ಧನಂಜಯ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದರು. ಪ್ರಸ್ತುತ ದೇಶದ ಅತ್ಯಂತ ಪ್ರತಿಭಾವಂತ ಯುವ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದರಾಗಿ ಹೊರಹೊಮ್ಮಿರುವ ಧನಂಜಯರಿಗೆ ನವದೆಹಲಿಯ ಸಾಮಪ ಯುವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ೨೦೧೩-೧೪ನೇ ಸಾಲಿನ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ, ಪಂ.ಬಸವರಾಜ ರಾಜಗುರು ಯುವ ಪ್ರಶಸ್ತಿ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಪ್ರತಿಭಾ ವೇತನ, ಸಿ.ಸಿ.ಆರ್.ಟಿ ಹಾಗೂ ಮತ್ತಿತರ ಸಂಸ್ಥೆಗಳ ಶಿಷ್ಯವೇತನ, ಕೊಲ್ಕತ್ತದ ಸಂಗೀತ ಸಂಶೋಧನಾ ಕೇಂದ್ರ ನಡೆಸುವ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ ದೇಶಕ್ಕೆ ಎರಡನೇ ಅತ್ಯದ್ಭುತ ಗಾಯಕ ಪ್ರಶಸ್ತಿ,ಔಟ್‌ಲುಕ್ ಪತ್ರಿಕೆಯು ನಡೆಸಿದ ಸಮೀಕ್ಷೆಯಲ್ಲಿ ದೇಶದ ಉತ್ಕೃಷ್ಟ ಗಾಯಕರ ಸಾಲಿನಲ್ಲಿರುವುದು – ಹೀಗೆ ಹಲವು ಗೌರವ, ಪುರಸ್ಕಾರಗಳು ಲಭಿಸಿವೆ.

ಮುಂಬೈನ ಗಂಧರ್ವ ಮಹಾವಿದ್ಯಾಲಯದ ಸಂಗೀತ ವಿಶಾರದ ಪದವಿ ಗಳಿಸಿದ ಇವರ ಅನೇಕ ಸಿ.ಡಿ. ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಎಂ.ಕಾಂ. ಪದವೀಧರರಾಗಿರುವ ಧನಂಜಯ್ ಪ್ರಸ್ತುತ ಮುಂಬೈನ ಕರ್ನಾಟಕ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
– ಕಿರಣ್ ಮಗೇಗಾರ್

ಉತ್ತರ ಕನ್ನಡದ ಸಿದ್ದಾಪುರದ ಕಿರಣ್ ಬಾಲ್ಯದಿಂದಲೂ ಸಂಗೀತಾಸಕ್ತರು. ಸಂಗೀತದ ಪ್ರಾಥಮಿಕ ಪಾಠಗಳನ್ನು ಶಿರಸಿಯ ವಿದ್ವಾನ್ ಪ್ರಭಾಕರ ಭಟ್ ಅವರ ಬಳಿ ಕಲಿತ ಕಿರಣ್, ಆ ಬಳಿಕ ಪಂ. ವೆಂಕಟೇಶ್ ಗೋಡ್ಖಿಂಡಿ ಅವರ ಬಳಿ ಬಾನ್ಸುರಿಯ ಅಭ್ಯಾಸವನ್ನು ಮುಂದುವರಿಸಿದರು. ೨೦೦೫ರಿಂದ ಪದ್ಮವಿಭೂಷಣ ಡಾ. ಎನ್. ರಾಜಂ ಅವರ ತಮ್ಮ ಕಲಿಕೆಯನ್ನು ಮುನ್ನಡೆಸುತ್ತಿದ್ದಾರೆ.

ಪುಣೆಯಲ್ಲಿ ನಡೆದ ೧೨ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಕರ್ನಾಟಕದ ಪರವಾಗಿ ಪಾಲ್ಗೊಂಡು ಬಹುಮಾನ ಪಡೆದಿರುವ ಕಿರಣ್, ರಾಷ್ಟ್ರಮಟ್ಟದ ಹಲವಾರು ವಾದನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ೨೦೦೪ರ ಪಂ. ಡಿ ವಿ ಪಲುಸ್ಕರ್ ಮೆಮೋರಿಯಲ್ ಪ್ರಶಸ್ತಿ, ಸುರಮಣಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಬೆಂಗಳೂರು, ಮುಂಬೈ, ಕೋಲ್ಕಥಾ, ಮಿರಜ್ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ,ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ಬಾನ್ಸುರಿ ಕಛೇರಿ ನೀಡಿರುವ ಇವರು ಮುರಳಿವನ ಎಂಬ ಸಂಸ್ಥೆಯ ಮೂಲಕ ಸಂಗೀತವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಶೀಲರಾಗಿದ್ದಾರೆ.
– ನರಸಿಂಹ ಜೋಶಿ

ಕಲಾತ್ಮಕ, ಧಾರ್ಮಿಕ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ನರಸಿಂಹ ಜೋಶಿ ಬಾಲ್ಯದಿಂದಲೂ ಸಂಗೀತದ ಗುಂಗು ತುಂಬಿಕೊಂಡವರು. ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರ ಬಳಿ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಸಂಗೀತಾಭ್ಯಾಸ ಮಾಡಿರುವ ಜೋಶಿ, ಇನ್ನೊಬ್ಬ ಶ್ರೇಷ್ಠ ಗಾಯಕ ಪಂ. ಎಂ.ಪಿ. ಹೆಗಡೆ ಪಡಿಗೇರಿ ಅವರ ಬಳಿ ಸಂಗೀತದ ಉನ್ನತಾಭ್ಯಾಸ ಕೈಗೊಂಡಿದ್ದಾರೆ. ವೃತ್ತಿಯಲ್ಲಿ ಟೆಕ್ಸ್‌ಟೈಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಂಗೀತದ ನಂಟನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. `ಗೆಳೆಯರ ಬಳಗ’ದ ಮೂಲಕ ಕಳೆದ ಐದು ವರ್ಷಗಳಿಂದ ಸಂಗೀತ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದ್ದಾರೆ.
ಗೆಳೆಯರ ಬಳಗ

`ಗೆಳೆಯರ ಬಳಗ’ವು ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ ಕಳೆದ ಐದು ವರ್ಷಗಳಲ್ಲಿ;ಹೆಸರಾಂತ ಗಾಯಕರಾದ ಪಂ. ಗಣಪತಿ ಭಟ್ ಹಾಸಣಗಿ, ಪಂ. ಎಂ.ಪಿ. ಹೆಗಡೆ ಪಡಿಗೇರಿ, ಪಂ. ಪರಮೇಶ್ವರ ಹೆಗಡೆ, ಪಂ. ಶ್ರೀಪಾದ ಹೆಗಡೆ ಕಂಪ್ಲಿ, ಪೂರ್ಣಿಮಾ ಭಟ್ ಕುಲಕರ್ಣಿ, ನಾಗರಾಜ್ ಶಿರನಾಲಾ, ನಾಗಭೂಷಣ ಬಾಳೆಹದ್ದ, ಸತೀಶ್ ಮಾಳಕೊಪ್ಪ ಅವರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಜೊತೆಗೆ ಉದಯೋನ್ಮುಖ ಗಾಯಕರಾದ ವಿಶಾಲ್ ಕಂಪ್ಲಿ, ರಘುನಂದನ್ ಬ್ರಹ್ಮಾವರ, ಹರೀಶ್ ಹಳವಳ್ಳಿ, ಸುಮಾ ಹಿತ್ಲಳ್ಳಿ ಅವರೂ ಈ ಕಾರ್ಯಕ್ರಮಗಳಲ್ಲಿ ಗಾಯನವನ್ನು ಪ್ರಸ್ತುತಪಡಿಸಿದ್ದರು. ಗುಣಮಟ್ಟದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು, ಪ್ರತಿಭಾವಂತ ಹಿರಿಕಿರಿಯ ಕಲಾವಿದರಿಗೆ ವೇದಿಕೆಯನ್ನು ಒದಗಿಸಿ ಒಳ್ಳೆಯ ಸಂಗೀತ ವಾತಾವರಣವನ್ನು ನಿರ್ಮಾಣ ಮಾಡುವುದು ಈ ಬಳಗದ ಮೂಲ ಉದ್ದೇಶ.

‍ಲೇಖಕರು avadhi

7 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading