ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.
ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
60
ದೇಶಮಟ್ಟದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ದಾಕಲಾದ ಬಾಶೆ ಇಲ್ಲವೆ ತಾಯ್ಮಾತು ಬಾರತೀಯ ಜನಗಣತಿ ಪಟ್ಟಿಯಲ್ಲಿ ಸೇರುತ್ತದೆ. ಹತ್ತು ಸಾವಿರ ಮಂದಿ ಇಲ್ಲದಿರುವ ಎಲ್ಲ ಬಾಶೆಗಳು ಇಲ್ಲವೆ ತಾಯ್ಮಾತುಗಳು ‘ಇತರ’ ಎಂಬ ಗುಂಪಿನಲ್ಲಿ ಸೇರುತ್ತವೆ. ಜನಗಣತಿ ಪಟ್ಟಿಸಿರುವ ನೂರಾ ಇಪ್ಪತ್ತೊಂದು ಬಾಶೆಗಳ ನಂತರ ಕೊನೆಯಲ್ಲಿ ಇತರ ಎಂಬ ಸಾಲಿನಲ್ಲಿ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಕೊಡಲಾಗುತ್ತದೆ. ಇದರಲ್ಲಿ ದಾಕಲಾದ ಯಾವುದೆ ಬಾಶೆ ಇಲ್ಲವೆ ತಾಯ್ಮಾತನ್ನು ಯಾವುದೆ ರೀತಿಯಲ್ಲಿ ವರ್ಗೀಕರಿಸುವುದಿಲ್ಲ. ಇದರಲ್ಲಿ ಸೇರಿರುವ ಬಾಶೆಗಳಿಗೆ ಇಲ್ಲವೆ ತಾಯ್ಮಾತುಗಳಿಗೆ ಎಶ್ಟು ಮಂದಿ ಮಾತುಗರು ದಾಕಲಾಗಿದ್ದಾರೆ ಎಂಬುದರ ಬಗೆಗೆ ಮಾಹಿತಿ ದೊರೆಯುವುದಿಲ್ಲ. ಪ್ರತಿ ಬಾಶೆಗೆ ಕನಿಶ್ಟ ಒಂದರಿಂದ 9,999ದವರೆಗೆ ಮಾತುಗರು ಇದ್ದಿರಬಹುದು. ಹಾಗಾಗಿ ಇದರಲ್ಲಿ ಎಶ್ಟು ಬಾಶೆಗಳು, ತಾಯ್ಮಾತುಗಳು, ಮಾತುಗರು ಎಂಬ ಯಾವುದೆ ಮಾಹಿತಿ ದೊರೆಯುವುದಿಲ್ಲ.
ಬಾರತ ದೇಶದಲ್ಲಿ ಇತರ ಎಂಬ ಗುಂಪಿನಲ್ಲಿ ಒಟ್ಟು 18,75,542 ಮಂದಿ ದಾಕಲಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ದಾಕಲಾದ ಇತರ ಗುಂಪಿನಲ್ಲಿ ಒಟ್ಟು ಮಾತುಗರ ಸಂಕೆ 3,86,552 ಆಗಿದೆ. ಇದು ಒಟ್ಟು ಬಾರತದ ಇತರ ಗುಂಪಿನ 20.610% ಪ್ರತಿಶತ ಆಗುತ್ತದೆ. ಇದು ಒಟ್ಟು ಕರ್ನಾಟಕದ 0.632% ಪ್ರತಿಶತ ಆಗುತ್ತದೆ.
ಅತ್ಯಂತ ಕುತೂಹಲದಾಯಕವಾದ ವಿಚಾರವೊಂದು ಕರ್ನಾಟಕದಲ್ಲಿ ಕಂಡುಬರುತ್ತದೆ. ಅದೆಂದರೆ, ಕರ್ನಾಟಕದಲ್ಲಿ ದಾಕಲಾದ ಇತರ ಗುಂಪಿನ ಮಾತುಗರಲ್ಲಿ ಬಹುತೇಕರು ಅಂದರೆ 3,35,775 ಮಂದಿ ಮಂಗಳೂರು ಜಿಲ್ಲೆಯೊಂದರಲ್ಲಿಯೆ ದಾಕಲಾಗಿದ್ದಾರೆ. ಅಂದರೆ ಇದು ಒಟ್ಟು ಕರ್ನಾಟಕದ ಇತರ ಗುಂಪಿನ 86.864% ಮಂದಿ ಆಗುತ್ತದೆ. ಇದು ಸಹಜವಾಗಿಯೆ ಬೆರಗಿನ ವಿಚಾರವಾಗಿದೆ. ಇವುಗಳಲ್ಲಿ ಎಶ್ಟು ಬಾಶೆಗಳಿರಬಹುದು ಎಂಬುದರ ಬಗೆಗೆ ಯಾವುದೆ ಅಂದಾಜು ಇಲ್ಲ. ಆದರೆ, ಇವುಗಳಲ್ಲಿ ಸೇರಿರುವ ಯಾವುದೆ ಬಾಶೆಯಲ್ಲಿ ಹತ್ತು ಸಾವಿರ ಮಂದಿ ಇಲ್ಲವೆಂಬುದು ಸ್ಪಶ್ಟ. ಹಾಗಾದರೆ, ಇವುಗಳಲ್ಲಿ ಪ್ರತಿ ಬಾಶೆಗೆ ಅತಿ ಹೆಚ್ಚು ಮಂದಿ ಮಾತುಗರು ಎಂದರೆ 9,999 ಮಂದಿ ಆಗಬಹುದು. ವಾಸ್ತವದಲ್ಲಿ ಹಾಗಿರಲು ಸಾದ್ಯವಿಲ್ಲವೆಂಬುದು ನಿಜವಾದರೂ ಅತಿ ಹೆಚ್ಚು ಸಂಕೆಯನ್ನು ಪರಿಗಣಿಸಲೇಬೇಕು. ಹೀಗೆ ಪರಿಗಣಿಸಿದರೆ ಮೂವತ್ತುನಾಲ್ಕು ಬಾಶೆಗಳು ಇವೆ ಎಂದಾಗುತ್ತದೆ. ಒಂದು ವೇಳೆ ಅಯ್ದು ಸಾವಿರ ಮಂದಿ ಪ್ರತಿ ಬಾಶೆಗೆ ಎಂದು ಲೆಕ್ಕ ಹಾಕಿದರೆ ಅರವತ್ತೆಂಟು ಬಾಶೆಗಳು ಎಂದಾಗುತ್ತದೆ. ಮಂಗಳೂರು ಜಿಲ್ಲೆ ಹೊರತಾಗಿ ಕರ್ನಾಟಕದ ಉಳಿದೆಲ್ಲ ಜಿಲ್ಲೆಗಳಲ್ಲಿ ದಾಕಲಾದ ಮಾತುಗರ ಸಂಕೆ 50,777 ಮಾತ್ರ ಆಗಿದೆ, ಅಂದರೆ 13.135% ಆಗುತ್ತದೆ.
ಮಂಗಳೂರು ನಂತರ ಉಡುಪಿಯಲ್ಲಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಅಂದರೆ 23,712 ಮಂದಿ ಇತರ ಬಾಶೆಗಳನ್ನಾಡುವ ಮಾತುಗರು ಕಾಣಿಸುತ್ತಾರೆ. ಇದು ಕರ್ನಾಟಕದ ಇತರ ಗುಂಪಿನ 16.068% ಆಗುತ್ತದೆ. ಉಡುಪಿಯಲ್ಲಿ ಇತರ ಗುಂಪಿನಲ್ಲಿ ಇರುವ ಬಾಶೆಗಳನ್ನು ಲೆಕ್ಕಿಸಿದರೆ, ಪ್ರತಿ ಬಾಶೆಗೆ 9,999 ಮಂದಿ ಎಂದು ಲೆಕ್ಕಿಸಿದರೆ ಕನಿಶ್ಟ ಮೂರು ಬಾಶೆಗಳು ಮತ್ತು 5,000 ಮಂದಿ ಎಂದು ಲೆಕ್ಕಿಸಿದರೆ ಕನಿಶ್ಟ ಅಯ್ದು ಬಾಶೆಗಳು ಆಗುತ್ತವೆ.
ಆನಂತರ ಚಿಕ್ಕಮಗಳೂರು (7,041), ಬೆಂಗಳೂರು (4,700), ಕೊಡಗು (4,309), ಶಿವಮೊಗ್ಗ (2,204), ಮಯ್ಸೂರು (2,077), ಉತ್ತರ ಕನ್ನಡ (1,220) ಮತ್ತು ದಾವಣಗೆರೆ (1,071) ಈ ಏಳು ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಕಾಣಿಸುತ್ತಾರೆ. ಹತ್ತು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮತ್ತು ಹನ್ನೊಂದು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ.
ಕರ್ನಾಟಕದಲ್ಲಿ ಇತರ ಬಾಶೆಗಳು ಪಸರಿಸಿರುವ ಬಗೆಯನ್ನು ಕೆಳಗೆ ಕೊಟ್ಟಿದೆ
ಪ್ರದೇಶ | ಜಿಲ್ಲೆಯ ಜನಸಂಕೆ | ಇತರ ಮಾತುಗರು | ಆ ಜಿಲ್ಲೆಯ % | ಇತರ ಗುಂಪಿನ % |
ಕರ್ನಾಟಕ | 6,10,95,297 | 3,86,552 | 0.632% | 100% |
ದಕ್ಶಿಣ ಕನ್ನಡ | 20,89,649 | 3,35,775 | 16.068% | 86.864% |
ಉಡುಪಿ | 11,77,361 | 23,712 | 2.0139% | 6.134% |
ಚಿಕ್ಕಮಗಳೂರು | 11,37,961 | 7,041 | 0.618% | 1.821% |
ಬೆಂಗಳೂರು | 96,21,551 | 4,700 | 0.048% | 1.215% |
ಕೊಡಗು | 5,54,519 | 4,309 | 0.777% | 1.114% |
ಶಿವಮೊಗ್ಗ | 17,52,753 | 2,204 | 0.125% | 0.570% |
ಮಯ್ಸೂರು | 30,01,127 | 2,077 | 0.069% | 0.537% |
ಉತ್ತರ ಕನ್ನಡ | 14,37,169 | 1,220 | 0.084% | 0.315% |
ದಾವಣಗೆರೆ | 19,45,497 | 1,071 | 0.055% | 0.277% |
ಕಲಬುರಗಿ | 25,66,326 | 834 | 0.032 | — |
ಹಾಸನ | 17,76,421 | 773 | 0.043% | — |
ಬಳ್ಳಾರಿ | 24,52,595 | 429 | 0.017% | — |
ದಾರವಾಡ | 18,47,023 | 414 | 0.022% | — |
ಗದಗ | 10,20,791 | 401 | 0.039% | — |
ಬಾಗಲಕೋಟೆ | 18,89,752 | 271 | 0.014% | — |
ಚಿಕ್ಕಬಳ್ಳಾಪುರ | 12,55,104 | 238 | 0.018% | — |
ಬೆಳಗಾವಿ | 47,79,661 | 229 | 0.004% | — |
ಬೀದರ | 17,03,300 | 154 | 0.009% | — |
ವಿಜಯಪುರ | 21,77,331 | 106 | 0.004 | — |
ಹಾವೇರಿ | 15,97,668 | 82 | 0.005% | — |
ರಾಯಚೂರು | 19,28,812 | 81 | 0.004% | — |
ಚಾಮರಾಜನಗರ | 10,20,791 | 76 | 0.007% | — |
ಯಾದಗಿರಿ | 11,74,271 | 71 | 0.006% | — |
ತುಮಕೂರು | 26,78,980 | 68 | 0.002% | — |
ಮಂಡ್ಯ | 18,05,769 | 53 | 0.002% | — |
ಕೋಲಾರ | 15,36,401 | 43 | 0.002% | — |
ಬೆಂಗಳೂರುಗ್ರಾಮಾಂತರ | 9,90,923 | 37 | 0.003% | — |
ಚಿತ್ರದುರ್ಗ | 16,59,456 | 31 | 0.001% | — |
ಕೊಪ್ಪಳ | 13,89,921 | 31 | 0.002% | — |
ರಾಮನಗರ | 10,82,636 | 21 | 0.001% | — |
ಕರ್ನಾಟಕದಲ್ಲಿ ಇತರ ಬಾಶೆಗಳ ಪಸರಿಸಿರುವಿಕೆಯನ್ನು ಇಲ್ಲಿ ತೋರಿಸಿದೆ.

0 ಪ್ರತಿಕ್ರಿಯೆಗಳು