ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬಯಸಿದ್ದು ದಕ್ಕಲೇ ಬೇಕೆಂಬ ನಿಯಮವೆಲ್ಲಿದೆ?' – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ

ನಾನು ಹೈಸ್ಕೂಲ್ ಹೋಗುವ ಸಮಯ. ಅಣ್ಣ ಕಾಲೇಜಿನಲ್ಲಿದ್ದ. ಒಂದು ದಿನ ನಡುಗುತ್ತ ಬಂದವನೇ ತನ್ನ ಸ್ನೇಹಿತನೊಬ್ಬ ಕಾಲೇಜಿನ ಹುಡುಗಿಗೆ ಚಾಕುವಿನಿಂದ ಇರಿದ ಸುದ್ದಿ ಹೇಳಿದ್ದ. ನನಗೋ ಅಚ್ಚರಿ. ಆತ ಯಾಕೆ ಯಾವುದೋ ಹುಡುಗಿಗೆ ಚೂರಿ ಹಾಕಬೇಕು? ಕೇಳಿದರೆ ಆ ಸ್ನೇಹಿತ ಅವಳನ್ನು ಪ್ರೀತಿಸುತ್ತಿದ್ದನಂತೆ. ಆದರೆ ಆಕೆ ಆ ಪ್ರೀತಿಗೆ ಒಪ್ಪಿರಲಿಲ್ಲ. ಆಕೆ ನಿರಾಕರಿಸಿದಷ್ಟೂ ಆತ ಒತ್ತಾಯಿಸುತ್ತಿದ್ದ. ಆತ ಒತ್ತಾಯಿಸಿದಷ್ಟೂ ಆಕೆ ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳುತ್ತಿದ್ದಳು. ಒಂದು ದಿನ ಆಕೆ ತನ್ನ ಸ್ನೇಹಿತೆಯ ಜೊತೆ ಕಾಲೇಜಿಗೆ ಹೋಗುವಾಗ ಹಿಂದಿನಿಂದ ಹೋಗಿ ಆಕೆಗೆ ಚೂರಿಯಿಂದ ಚುಚ್ಚಿದ್ದ. ಆತನ ಇರಿತ ಸರಿ ಇರಲಿಲ್ಲವೋ, ಅಥವಾ ಇನ್ಯಾವುದೋ ಕಾರಣಕ್ಕೋ ಆಕೆ ಅಪಾಯದಿಂದ ಪಾರಾಗಿದ್ದಳು.
ಮೊನ್ನೆ ಶಿಕ್ಷಕಿಯೋರ್ವಳ ಮೇಲೆ ಆಸಿಡ್ ಹಾಕಿದ ವಿಷಯ ಪೇಪರ್ನ ಯಾವುದೋ ಮೂಲೆಯಲ್ಲಿ ಪ್ರಕಟವಾಗಿತ್ತು. ಆ ಶಿಕ್ಷಕಿಯೊಂದಿಗೆ ಅಲ್ಲೆ ಪಕ್ಕದಲ್ಲಿದ್ದ ಐದು ವರ್ಷದ ಪುಟ್ಟ ಹುಡುಗನ ಮೇಲೂ ಆಸಿಡ್ ಬಿದ್ದು ತೀವ್ರ ತರದ ಗಾಯವಾಗಿತ್ತು. ಅದಕ್ಕೆಲ್ಲ ಒಂದೇ ಕಾರಣ ಪ್ರೇಮದ ನಿರಾಕರಣೆ.
ಪ್ರೀತಿಯನ್ನು ನಿರಾಕರಿಸಿದ್ದೇ ಆಕೆಯ ಮೆಲೆ ಆಸಿಡ್ ಹಾಕಲು ಕಾರಣವಾಗಿತ್ತು.
ಆತನೊಬ್ಬ ಮೆಡಿಕಲ್ ವಿದ್ಯಾರ್ಥಿ. ತನ್ನದೇ ಸಹಪಾಠಿಯೊಬ್ಬಳನ್ನು ಮನದಲ್ಲೇ ಪ್ರೇಮಿಸುತ್ತಿದ್ದ. ಕೊನೆಯ ವರ್ಷದಲ್ಲಿ ಆಕೆಗೆ ಅದನ್ನು ತಿಳಿಸಬೇಕು ಎನ್ನುವಷ್ಟರಲ್ಲಿ ಆಕೆ ಇನ್ನೊಬ್ಬನ ಜೊತೆ ಎಂಗೇಜ್ ಆಗಿದ್ದಳು. ಅದನ್ನು ಕಂಡ ಈತನಿಗೆ ತಡೆಯಲಾಗಲಿಲ್ಲ. ಇಬ್ಬರಿಗೂ ಯಾವುದೋ ಡ್ರಗ್ ಕೊಟ್ಟು ಸಾಯಿಸಿಬಿಟ್ಟ. ತನ್ನ ಮನದೊಳಗೆ ಹುದುಗಿಸಿಟ್ಟ ಪ್ರೇಮದ ಕಾರಣಕ್ಕಾಗಿ ಆತ ಅಕಾರಣವಾಗಿ ಇಬ್ಬರನ್ನು ಬಲಿ ತೆಗೆದುಕೊಂಡ.
ಆಕೆ ಇನ್ನೂ ಹೈಸ್ಕೂಲ್ ಓದುವ ಹುಡುಗಿ. ತನ್ನ ಅಪ್ಪನ ಸ್ನೇಹಿತರ ಮಗನನ್ನು ತುಂಬಾ ಇಷ್ಟ ಪಟ್ಟಿದ್ದಳು. ಆತ ವಯಸ್ಸಿನಲ್ಲಿ ಇವಳಿಗಿಂತ ತುಂಬಾ ಹಿರಿಯ. ಆತನಲ್ಲಿ ಪ್ರೀತಿಯನ್ನು ಪ್ರಸ್ತಾಪಿಸಿದಾಗ ಆತ ಅವಳನ್ನು ಕುಳ್ಳಿರಿಸಿಕೊಂಡು ಪುಟ್ಟ ಮಗುವಿಗೆ ಹೇಳಿದಂತೆ ಬುದ್ಧಿ ಹೇಳಿದ್ದ. ತಮ್ಮಿಬ್ಬರ ವಯಸ್ಸಿನ ಅಂತರದ ಬಗ್ಗೆ, ಅವಳಲ್ಲಿ ಬುಟ್ಟಿರುವ ಭಾವನೆ ಕೇವಲ ಆ ವಯೋ ಸಹಜ ಆಕರ್ಷಣೆ ಎಂಬುದರ ಬಗ್ಗೆ, ತಾವಿಬ್ಬರೂ ದುಡುಕಿದರೆ ತಮ್ಮಿಬ್ಬರ ಕುಟುಂಬಗಳಲ್ಲಿ ಉಂಟಾಗಬಹುದಾದ ತಲ್ಲಣದ ಬಗ್ಗೆ ಹೇಳಿದ್ದ. ಆದರೆ ಆಕೆ ಆತನ ಮಾತನ್ನು ಕೇಳಿ ಅರ್ಥೈಸಿಕೊಳ್ಳಲೇ ಸಿದ್ಧಳಿರಲಿಲ್ಲ. ಅದಾದ ಎರಡೇ ದಿನಕ್ಕೆ ತನ್ನ ಕೋಣೆಯ ಫ್ಯಾನ್ಗೆ ನೇಣು ಹಾಕಿಕೊಂಡು ಜೀವನಯಾತ್ರೆ ಮುಗಿಸಿಕೊಂಡಿದ್ದಳು. ಸಾಯುವ ಮೊದಲು ತನಗೆ ಆತನ ಮೇಲೆ ಪ್ರೀತಿ ಇರೋದನ್ನೂ, ಆತ ತಿರಸ್ಕರಿಸಿದ್ದರಿಂದ ಉಂಟಾದ ಅವಮಾನ ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟು ಬಿಟ್ಟಿದ್ದಳು. ಏನೂ ತಪ್ಪು ಮಾಡದ ಆತ ಗಿಲ್ಟಿ ಫೀಲಿಂಗ್ನಲ್ಲಿ ಒದ್ದಾಡಿ ಹೋಗಿದ್ದ. ಅದಕ್ಕಿಂತ ಹೆಚ್ಚಾಗಿ ಮಾಡದ ತಪ್ಪಿಗಾಗಿ ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿ ಪಡಬಾರದ ಅವಮಾನ ಆನುಭವಿಸಿಬಿಟ್ಟಿದ್ದ.

ಹೌದು ಇಂತಹ ಘಟನೆಗಳನ್ನು ನಾವು ಪದೇ ಪದೇ ಎದುರಿಸುತ್ತಿದ್ದೇವೆ. ಸಿಗದ ಪ್ರೀತಿಗಾಗಿ ಪ್ರೀತಿಸಿದವರನ್ನೇ ಟಾರ್ಗೆಟ್ ಮಾಡಿಕೊಳ್ಳುವ ಮನೋಭಾವ ದಿನೇ ದಿನೆ ಇಂದಿನ ಯುವ ಜನತೆಯಲ್ಲಿ ಹೆಚ್ಚುತ್ತಿದೆ. ತಾನು ಪ್ರೀತಿಸಿದವಳು ಅಥವಾ ತಾನು ಪ್ರೀತಿಸಿದವನು ಎಲ್ಲಿದ್ದರೂ ಸುಖವಾಗಿರಲಿ ಎಂಬುದು ಹಿಂದಿನ ಕಾಲದ ಒಂದು ಆದರ್ಶವಾಗಿತ್ತು. ತನ್ನನ್ನು ಮದುವೆ ಆಗದಿದ್ದರೂ ಪರವಾಗಿಲ್ಲ. ತಾನು ಪ್ರೀತಿಸಿದವರ ಜೀವನ ಸಂತೋಷದಿಂದ ಕೂಡಿರಲಿ ಎಂಬ ಭಾವ ಬಹುತೇಕರಲ್ಲಿತ್ತು. ಪ್ರೀತಿಸಿದವಳಿಗಾಗಿ ತನ್ನೆಲ್ಲ ಸಾಂಸಾರಿಕ ಸುಖವನ್ನು ಕೈಬಿಟ್ಟು, ಗಡ್ಡ ಬಿಟ್ಟುಕೊಂಡು ಮಹಾನ್ ಕುಡುಕನಾಗಿದ್ದ ದೇವದಾಸ್ ಅಂದಿನ ಭಗ್ನಪ್ರೇಮಿಗಳಿಗೆಲ್ಲ ಆದರ್ಶವಾಗಿದ್ದರೆ, ಪ್ರೀತಿಸಿದವನ ನೆನಪಿನಲ್ಲೇ ಜೀವನಪೂರ್ತಿ ಇನ್ನೊಬ್ಬ ಪುರುಷನನ್ನೂ ಕಣ್ಣೆತ್ತಿ ಕೂಡ ನೋಡದೇ ಒಂಟಿಯಾಗಿ ಯೌವನವನ್ನಷ್ಟೇ ಏಕೆ, ಬದುಕನ್ನೇ ಸವೆಸಿ ಬಿಟ್ಟ ಹಲವಾರು ಹೆಂಗಳೆಯರು ಹಿತ್ತಿಲಲ್ಲಿನ ಮಲ್ಲಿಗೆ ಬುಡದಲ್ಲಿ ಯಾರಿಗೂ ಕಾಣದಂತೆ ಸುರಿಸುವ ಕಣ್ಣೀರಿನ ಹುಡುಗಿಯರು ಬಹುತೇಕ ಮನೆಗಳಲ್ಲಿದ್ದು ಹದಿಹರೆಯದ ಶೋಡಷಿಯರಿಗೆ ಆದರ್ಶಪ್ರಾಯವಾಗಿದ್ದರು. ಆದರೆ ದಿನಗಳೆದಂತೆ ಪ್ರೀತಿಯ ಕಲ್ಪನೆ ಬದಲಾಗುತ್ತಿದೆ.
ತಾನು ಪ್ರೀತಿಸದ ಹುಡುಗ ಅಥವಾ ಹುಡುಗಿ ತನಗೆ ದಕ್ಕಲೇ ಬೇಕು ಎಂಬ ಅತಿಯಾದ ಪೊಸೆಸ್ಸಿವ್ನೆಸ್. ತಾನು ಪ್ರೀತಿಸಿದ ಹುಡುಗ ಇನ್ನೊಬ್ಬಳು ಹುಡುಗಿಯೊಂದಿಗೆ ಕೇವಲ ಪರಿಚಯಾತ್ಮಕ ಮಾತನ್ನಾಡಿದರೂ ಸಹಿಸದ ಹುಡುಗಿ, ಪ್ರೀತಿಸಿದವಳು ತನ್ನ ದೊಡ್ಡಪ್ಪ, ಚಿಕ್ಕಪ್ಪನ ಮಗನೊಂದಿಗೂ ನಗಬಾರದು ಎಂದು ಬಯಸುವ ಹುಡುಗ. ಹಾಗೇನಾದರೂ ತಮ್ಮ ಇಚ್ಚೆಗೆ ವಿರುದ್ಧವಾಗಿ ಮಾತನಾಡಿಯೇ ಬಿಟ್ಟರೆ ಅಲ್ಲಿಗೇ ಆ ಸಂಬಂಧ ಮುಗಿದು ಹೋಗುತ್ತದೆ. ತಮ್ಮ ಪ್ರೀತಿ ಯಾವತ್ತೂ ತಾನು ಹೇಳಿದ ಹಾಗೆಯೇ ಕೇಳ ಬೇಕು ಎಂಬ ಹಟಮಾರಿತನ. ಅದರಲ್ಲೂ ತಾನು ಇಷ್ಟ ಪಟ್ಟಿದ್ದು ತನಗೆ ಸಿಕ್ಕುವುದೇ ಇಲ್ಲ ಅನ್ನಿಸಿ ಬಿಟ್ಟರಂತೂ ಅದಕ್ಕಾಗಿ ದೊಡ್ಡ ಯುದ್ಧವೇ ನಡೆದರೂ ಅವರು ಅಂಜುವುದಿಲ್ಲ.
ಬಹುತೇಕರು ಪ್ರೀತಿ ಪ್ರೇಮ ತಮ್ಮ ವೈಯಕ್ತಿಕ ಭಾವನೆಗಳು ಎಂಬ ಯೋಚನೆಯನ್ನೇ ಮಾಡುವುದಿಲ್ಲ. ತಮಗೆ ಒಬ್ಬರ ಮೇಲೆ ಹುಟ್ಟದ ಭಾವನೆಗಳು ಅವರಿಗೂ ತಮ್ಮ ಮೇಲೆ ಹುಟ್ಟಲೇ ಬೇಕೆಂದೇನೂ ಇಲ್ಲ ಎಂಬುದನ್ನು ಒಪ್ಪುವುದಕ್ಕೇ ಅವರು ಸಿದ್ದರಿರುವುದಿಲ್ಲ. ತನಗೆ ಪ್ರೀತಿ ಹುಟ್ಟಿದೆ ಎಂದ ಮೇಲೆ ಅವರಿಗೂ ತನ್ನ ಮೇಲೆ ಆ ಭಾವನೆ ಹುಟ್ಟಲೇ ಬೇಕು ಎಂಬುದನ್ನಷ್ಟೇ ಬಯಸುವವರು ಅವರು. ಹೀಗಾಗಿಯೇ ಬಲವಂತದಿಂದಾರೂ ದಕ್ಕದ ಪ್ರೀತಿಯನ್ನು ಪಡೆಯಲೇ ಬೇಕು ಎನ್ನುವ ಹೀನ ಮನಸ್ಥಿತಿಗೆ ತಲುಪಿದವರಿಂದ ಇಂತಹ ಕೃತ್ಯಗಳು ಪದೇ ಪದೇ ನಡೆಯುತ್ತಲೇ ಇರುತ್ತದೆ. ಅಂಥವರಿಗೆ ಯಾವ ಬುದ್ಧಿ ಮಾತೂ, ಯಾವ ಹಿತವಚನಗಳೂ ನಾಟಲಾರವು. ಎಲ್ಲಿಯವರೆಗೆ ಪ್ರೀತಿ ಪ್ರೇಮಗಳೆಲ್ಲ ತನ್ನೆದೆಯೊಳಗೆ ಹುಟ್ಟಿ ಭಾವನೆಗಳಷ್ಟೇ; ಅದನ್ನು ಇತರರ ಮೇಲೆ ಬಲವಂತವಾಗಿ ಹೇರುವ ಅಧಿಕಾರ ತನಗಿಲ್ಲ ಎಂದು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಜೀವವನ್ನು, ಜೀವನವನ್ನು ಬೆಳಗಿಸ ಬೇಕಾಗಿದ್ದ ಪ್ರೀತಿ ಮಗ್ಗುಲ ಮುಳ್ಳಾಗಿ ಕಾಡುತ್ತಲೇ ಇರುತ್ತದೆ.
ಇದೆಲ್ಲಕ್ಕಿಂತ ಇಂದಿನ ಮಕ್ಕಳು ಬೆಳೆಯುವ ರೀತಿ ಕೂಡ ಅಷ್ಟೇ ಕಂಡೀಷನಲ್. ತಾನು ಬಯಸಿದ್ದನ್ನು ಪಡೆಯಲಾಗಲಿಲ್ಲ, ತನ್ನ ಮಕ್ಕಳು ಹಾಗೆ ತೊಂದರೆ ಪಡುವುದು ಬೇಡ ಎಂದು ಬಹುತೇಕ ಪಾಲಕರು ಮದುವೆಗೂ ಮುನ್ನವೇ ನಿರ್ಧರಿಸಿ ಬಿಟ್ಟಿರುತ್ತಾರೆ. ಹೀಗಾಗಿ ಕೇಳಿದ್ದು, ಕೇಳದ್ದು, ಬೇಕಾಗಿದ್ದು-ಬೇಡದ್ದು ಎಲ್ಲವೂ ಮನೆ ತುಂಬುತ್ತಿರುತ್ತದೆ. ಹೀಗಾಗಿ ಮಗು ಹುಟ್ಟಿದಾಗಿನೀಂದಲೇ ತಾನು ಬಯಸಿದ್ದು ದಕ್ಕಲೇ ಬೇಕು, ಇಷ್ಟ ಪಟ್ಟಿದ್ದು ತನ್ನದಾಗಲೇ ಬೇಕು ಎಂಬ ಮನಸ್ಥಿತಿಯನ್ನು ತಲುಪಿರುತ್ತದೆ. ಆ ಮನಸ್ಥಿತಿಯೇ ಈ ಎಲ್ಲ ಅನಾಹುತಕ್ಕೆ ಕಾರಣ ಎಂದರೂ ತಪ್ಪಾಗಲಾರದು.
ಆದರೆ ಬಹುತೇಕ ಸನ್ನಿವೇಷಗಳಲ್ಲಿ ಇದಕ್ಕೆ ಮುಖ್ಯವಾಗಿ ಬಲಿಯಾಗುವವಳು ಹೆಣ್ಣೇ ಎಂಬುದನ್ನು ಮರೆಯಬಾರದು. ಪ್ರೀತಿಸಲು ನಿರಾಕರಿಸಿದವಳ ಮೇಲೆ ಆಸಿಡ್ ದಾಳಿ, ಚಾಕು ಚೂರಿಯಿಂದ ಹಲ್ಲೆ ಮುಂತಾದ ಘಟನೆಗಳು ನಿಲ್ಲುವುದೇ ಇಲ್ಲ. ಹೆಣ್ಣನ್ನು ತನ್ನ ಸೊತ್ತು, ತನ್ನ ಆಸ್ತಿ ಎಂದುಕೊಳ್ಳುವ ಪುರುಷ ಪ್ರಧಾನ ಸಮಾಜದ ಮನಸ್ಥಿತಿ ಬದಲಾಗದ ಹೊರತೂ ಇಂತಹ ಘಟನೆಗಳು ಪದೇ ಪದೇ ಘಟಿಸುತ್ತಲೇ ಇರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.
 

‍ಲೇಖಕರು G

17 June, 2014

1 Comment

  1. Jayashree B kadri

    Very nice article madam. you have analysed it from so many angles.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading