
ಸಾಸ್ವೇಹಳ್ಳಿ ಸತೀಶ್
ಕನ್ನಡದಲ್ಲಿ ಸಣ್ಣಕತೆಗಳ ಘಟ್ಟ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ, ವ್ಯಾಪಕವಾಗಿ ತನ್ನ ಎಲ್ಲೆಯನ್ನು ಹಿಗ್ಗಿಸಿಕೊಳ್ಳುತ್ತಿದೆ. ಹೊಸತಲೆಮಾರಿನ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಅನುಭವದ ಹಿನ್ನಲೆಯಲ್ಲಿ ಕತೆಗಳನ್ನು ಕಟ್ಟುತ್ತಿರುವುದರಿಂದ ಹೊಸ ಕತಾಪ್ರಪಂಚವೇ ನಮ್ಮೆದೆರು ಅನಾವರಣಗೊಳ್ಳುತ್ತಿದೆ. ಈ ಸಂಕಲನದ ಕತೆಗಾರ ‘ಶಿವಕುಮಾರ ಮಾವಲಿ’ ಯವರು ಗ್ರಾಮೀಣ ಹಿನ್ನಲೆಯವರಾದರೂ ಕೆಲಕಾಲ ಬೆಂಗಳೂರಿನ ಪ್ರತಿಷ್ಠಿತ ಐ.ಟಿ. ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸಿದವರು. ಈ ಎರಡೂ ಅನುಭವಗಳನ್ನು ಅತ್ಯುತ್ತಮವಾಗಿ ಬೆಸೆದು ಹೊಸ ಅನುಭವ ಕೊಡುವಂತಹ ಕತೆಗಳನ್ನು ಹೇಳಿದ್ದಾರೆ.
ಸಾಹಿತ್ಯ ಕೃತಿಗಳು ವಾಸ್ತವದ ನೆಲಗಟ್ಟಿನಲ್ಲಿದ್ದರೆ ತುಂಬಾ ಉತ್ತಮ, ಬರೆಯುವವನಿಗೆ ಇರಬೇಕಾದ ಕಾಳಜಿಗಳೇನು? ಮುಂತಾಗಿ ಚರ್ಚಿಸುತ್ತಿರುವ ಈ ಸಂದರ್ಭದಲ್ಲಿಯೇ ‘ಭಾಷೆಯೊಂದಕ್ಕೆ ವಾಸ್ತವ ಸತ್ಯದ ಸಮಗ್ರದರ್ಶನ ಕೊಡಲು ಸಾಧ್ಯವೇ ಇಲ್ಲ’ ಎಂದು ಹೇಳುತ್ತಿರುವ ವಿಮರ್ಶಕರೂ ಇದ್ದಾರೆ. ಆದರೆ ಶಬ್ದದ ಒಳಗಿರುವ ಅರ್ಥ, ಅದರಲ್ಲೇ ಇರಬಹುದಾದ ನಿಶ್ಯಬ್ದಕ್ಕೆ ಇರುವ ಹೃದಯ ತಟ್ಟಿಸುವ ಶಕ್ತಿಯನ್ನು ಗ್ರಹಿಸಿ ಅಂತಹ ಭಾಷೆಯೊಳಗೆ ಕತೆಯ (ಕೃತಿಯ) ಕುಸುರಿ ಕೆಲಸವಾದರೆ ಕತೆಗಾರ ಗೆದ್ದಂತೆ.

ಇಂತಹ ಸತ್ವಯುತ (ಸರಳವೆನಿಸಿದರೂ) ಭಾಷೆಯಲ್ಲಿ ಇಲ್ಲಿನ ಕತೆಗಳು ಗಮನ ಸೆಳೆಯುತ್ತವೆ. ಸಂಕಲನದಲ್ಲಿರುವ ಕತೆಗಳೆಲ್ಲಾ ಸಮಕಾಲೀನ ಘಟನೆಗಳಿಗೆ ಮುಖಾಮುಖಿಯಾಗುತ್ತಲೇ ಹೊಸದನ್ನು ಹೇಳಿ ನಾನೂ ಹೀಗೆ ಅಂದುಕೊಂಡಿದ್ದೆನಲ್ಲಾ ಎಂಬ ಉದ್ಗಾರವನ್ನು ಹೊರಡಿಸುವಂತೆ ಮಾಡುತ್ತವೆ. ಇಲ್ಲಿ ಬರುವಂತಹ ಪಾತ್ರಗಳು ತಮ್ಮ ಸುತ್ತಮುತ್ತಲಿನ ಜಗತ್ತಿನೊಳಗೆ ಏನಿದೆ? ಏನಾಗಬೇಕಿದೆ? ಹೀಗೇ ಏಕಾಗಬೇಕು? ಎಂದು ಪ್ರಶ್ನಿಸಿಕೊಳ್ಳುತ್ತಲೇ ಅಂತರಂಗವನ್ನು ಶೋಧಿಸಿಕೊಳ್ಳುತ್ತಾ ಓದುಗನ ಅಂತರಾಳಕ್ಕೆ ಇಳಿದು ಹೊಸ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತವೆ..
ಶಿವಕುಮಾರ ಮಾವಲಿಯವರ ಈ ಮೊದಲ ಸಂಕಲನದಲ್ಲಿ ಬರುವ ‘ಸತ್ತವರ ಸಂಭಾಷಣೆ’ ಕತೆ, ಈಗಾಗಲೇ ಸತ್ತು ಹೋಗಿರಬೇಕಾಗಿದ್ದ ವಿಷಯವೊಂದನ್ನು ಭಿನ್ನವಾಗಿ ಹೇಳುವ ಪ್ರಯತ್ನವನ್ನು ಮಾಡುತ್ತದೆ. ಹೆಣವಾಗಿ ಭೂಮಿ ಸೇರಿದ್ದ ರಾಜನೊಬ್ಬ ತನ್ನ ಪಕ್ಕದಲ್ಲಿ ಮಲಗಿದ್ದ ಹೆಣಕ್ಕೆ ‘ನಾನು ರಾಜನೆಂದು ತಿಳಿದೂ ನನ್ನ ಪಕ್ಕದಲ್ಲಿ ಮಲಗುವ ಧೈರ್ಯವೇ?’ ಎಂದು ಕೇಳುತ್ತಲೇ ಶ್ರೇಣಿಕೃತ ಸಮಾಜದಲ್ಲಿರುವ ಹುಳುಕುಗಳನ್ನು ಕಣ್ಣಮುಂದೆ ತಂದಿಡುತ್ತದೆ. ರಾಜನ ಶವದ ಪಕ್ಕ ಮಲಗಿರುವುದು ಸೇವನಕ ಶವ ಎಂದು ತಿಳಿದಾಗ ಮಂತ್ರಿ, ಪ್ರೀತಿಯ ಪಟ್ಟದ ರಾಣಿ, ಯುವರಾಜ ಬರದೇ ನೀನು ಬಂದಿದ್ದೀಯಲ್ಲ- ನೀನು ಸಾಯುವುದಕ್ಕೆ ಪ್ರತಿಭಟಿಸಲಿಲ್ಲವೇ? ಎಂದು ರಾಜ ಕೇಳುತ್ತಾನೆ.
ಪ್ರತಿಭಟಿಸಿದ್ದರೆ ನನ್ನ ತಲೆ ಹಾರುತ್ತಿತ್ತು. ರಾಜದ್ರೋಹದ ಹಣೆಪಟ್ಟಿ ಹೊದ್ದು ಮಲಗುವುದಕ್ಕಿಂತ ಅವರ ಮಾತು ಕೇಳುವುದೇ ಸರಿಯಲ್ಲವೇ? ಎಂದು ಸೈನಿಕ ಕೇಳುತ್ತಾನೆ. ವ್ಯವಸ್ಥೆಯೊಂದರ ಅಂಚಿನಲ್ಲಿರುವ ವ್ಯಕ್ತಿ ಕೆಳಗೆ ಬೀಳುತ್ತೇನೆೆ ಎಂದು ಗೊತ್ತಿದ್ದರೂ ಕೆಟ್ಟವನಾಗಿ ಬೀಳುವುದು ಬೇಡ ಎಂದುಕೊಳ್ಳುವ ಅವನು ಆತ್ಮ ಸಮ್ಮಾನ ಕಾಯ್ದುಕೊಳ್ಳುವ ಬಗೆ ವಿಶೇಷವೆನಿಸುತ್ತದೆ. ಲಕ್ಷಾಂತರ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ತನ್ನದೇ ಪಕ್ಷದ ನಾಯಕನೆದುರು ತಮ್ಮತನವನ್ನೇ ಬಿಟ್ಟು ಹಲ್ಲುಗಿಂಜುವುದನ್ನು ನೋಡಿದಾಗ ಇಲ್ಲಿನ ಗುಲಾಮನ ಒಂದೊಂದು ಮಾತು ಅರ್ಥಪೂರ್ಣ ಎನಿಸುತ್ತದೆ. ‘ಪ್ರತಿಯೊಬ್ಬನಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ ಎಂಬುದನ್ನು ಕಲಿಸದಿದ್ದದ್ದು ನನ್ನದೇ ತಪ್ಪು ಎಂದು ರಾಜ ಅಂದುಕೊಂಡರೆ ಗುಲಾಮಗಿರಿಯಲ್ಲೇ ಸಾರ್ಥಕತೆ ಕಂಡುಕೊಂಡದ್ದು ನಮ್ಮ ತಪ್ಪು ಹೌದು ಎಂದು ಸೇವಕ ಹೇಳುತ್ತಾನೆ. ‘ನಾವು ಬದುಕುವ ಕ್ರಮ’ ಚಟವಾಗಬಾರದು’ ಎಂಬ ಅರ್ಥಪೂರ್ಣ ಮಾತು ಈ ಕತೆಯ ಜೀವವನ್ನು ಮತ್ತಷ್ಟು ಸಶಕ್ತಗೊಳಿಸಿದೆ.
‘ದೇವರು ಅರೆಸ್ಟ್ ಆದ’ ಕತೆಯು ಬರಹಕ್ಕೂ ಬದುಕಿಗೂ ಸಂಬಂಧವಿಲ್ಲದೆ ನಾಡಿಗೆ ಬುದ್ಧಿ ಹೇಳುವ ಆಷಾಡಭೂತಿಗಳ ಬಣ್ಣ ಬಯಲು ಮಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಕತೆ ಎನಿಸಿಕೊಂಡರೂ ಆಳದಲ್ಲಿ ವಿಶೇಷ ಅನುಭವಗಳನ್ನು ಕಟ್ಟಿಕೊಡುತ್ತದೆ. ದೇವರ ಇರುವಿಕೆಯ ಚರ್ಚೆ ಮಾಡುವ ಸಂದರ್ಭದಲ್ಲಿ ನಾಸ್ತಿಕನೊಬ್ಬ ವಾದ ಮಾಡಿದರೆ ಹೇಗಿರಬಹುದು ಎಂಬುದನ್ನು ಕತೆ ಪ್ರತ್ಯಕ್ಷಗೊಳಿಸುತ್ತದೆ. ಶಿವಕುಮಾರ ಮೂಲತಃ ರಂಗಭೂಮಿಯವರಾದ್ದರಿಂದ ಅವರು ಬಳಸಿರುವ ವ್ಯಂಗ್ಯ ಮಿಶ್ರಿತ ಮಾತುಗಳು, ಕೊಟ್ಟು ತೆಗೆದುಕೊಳ್ಳುವ ಸಂಭಾಷಣೆಯ ಮಾದರಿ ಕತೆಗೆ ಮತ್ತಷ್ಟು ಗಟ್ಟಿತನ ತಂದುಕೊಟ್ಟಿದೆ.
… ಮೂರ್ತಿಯವರ ಮುದ್ದಾದ ಭಾವಚಿತ್ರದೊಂದಿಗೆ ಕತೆ ಪ್ರಕಟವಾಗಿತ್ತು ಎನ್ನುವ ಸಾಲು ಕತೆಯಲ್ಲಿರುವ ವ್ಯಂಗ್ಯದ ತೀವ್ರತೆಯನ್ನು ಆರಂಭದಲ್ಲೇ ಪರಿಚಯಿಸಿಬಿಡುತ್ತದೆ. ನನಗೆ ಕತೆಯಲ್ಲಿ ಇರುವ ಆಸಕ್ತಿ-ಕತೆಗಾರನ ರಾಜಕೀಯ ಹೇಳಿಕೆಗಳಲ್ಲಾಗಲೀ, ವಿಮರ್ಶಕರ ಪ್ರತಿ ಹೇಳಿಕೆಗಳಲ್ಲಾಗಲೀ ಪ್ರಗತಿಪರರ ಆಷಾಡಭೂತಿತನದಲ್ಲಾಗಲೀ ಇಲ್ಲ ಎನ್ನುವ ಮಾತುಗಳು ಬಹಳಷ್ಟು ಸಹೃದಯ ಓದುಗರ ಮಾತುಗಳಾಗಿಯೂ ಪ್ರತಿಧ್ವನಿಸುತ್ತವೆ. ಕತೆಗಳನ್ನು ಎಚ್ಚರದಿಂದ ಓದಿ, ನಂಬಿ, ಆದರೆ ಕತೆಗಾರನ ವೈಯಕ್ತಿಕ ಬದುಕನ್ನು ದೂರವಿಡಿ ಎಂಬ ಎಚ್ಚರಿಕೆ ಇಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಭುತ್ವದೊಂದಿಗೆ ರಾಜಿಮಾಡಿಕೊಳ್ಳುವ ಬರಹಗಾರರು ಅಸಹ್ಯ ಹುಟ್ಟಿಸಿ ದೂರವಿಡುವಂತೆ ಮಾಡುವುದರ ಜೊತೆಯಲ್ಲಿ ತಮ್ಮ ಕೃತಿಗಳನ್ನು ಅನುಮಾನದಿಂದ ನೋಡುವಂತೆ ಮಾಡಿಕೊಂಡು ಬಿಡುತ್ತಿದ್ದಾರೆ.
ಈ ಕತೆಯಲ್ಲಿ ದೇವರೊಂದಿಗೆ ನಡೆಯುವ ಪ್ರಶ್ನಾವಳಿಯನ್ನಾಧರಿಸಿದ ಮಾತುಗಳು ಪ್ರಮುಖವಾದವು ಇಲ್ಲಿ ಕತೆಗಾರ ತಾನು ನಂಬಿಕೊಂಡ ಸಿದ್ಧಾಂತವನ್ನು ಹೇಳಿದ್ದಾರೆಂದು ಅನಿಸುತ್ತದೆ.
ಟಿ.ವಿ. ಚಾನಲ್ ಚರ್ಚೆಯೊಂದರಿಂದ ಆರಂಭವಾಗುವ ಈ ಕತೆ ಅಲ್ಲಿನ ಸೋಗಲಾಡಿತನವನ್ನು ಹೇಳುತ್ತಾ ಕಡೆಯಲ್ಲಿ ಕತೆಯ ಕೇಂದ್ರ ಪಾತ್ರ ಮೂರ್ತಿಯವರ ಹೆಂಡತಿ ಪೂಜಾ ಕೋಣೆಯಿಂದ ಹಿಡಿದುಕೊಂಡು ಬಂದ ಆರತಿ ತಟ್ಟೆಯ ಮೇಲೆ ಟಿ.ವಿ. ಚಾನಲ್ಗಳವರು ಫೋಕಸ್ ಮಾಡುತ್ತಿರುವುದನ್ನು ಹೇಳುತ್ತಾ ಮುಕ್ತಾಯಗೊಳ್ಳುತ್ತದೆ. ಈ ಕತೆ ಏಕಕಾಲಕ್ಕೆ ಹಸಿದ ನಾಯಿಯಂತೆ ಬ್ರೇಕಿಂಗ್ ನ್ಯೂಸ್ಗಳ ಮೇಲೆ ಬಿದ್ದು ಅನಾಹುತ ಮಾಡುತ್ತಿರುವ ಮಾಧ್ಯಮ, ವಿರೋಧಕ್ಕಾಗಿ ವಿರೋಧ ಎನ್ನುವ ಸಾಹಿತಿಗಳ ವಲಯ, ಬರೆದಂತೆ ಬದುಕಲಾಗದ ಸಾಹಿತಿಗಳು ಎಲ್ಲರೂ ಆತ್ಮಶೋಧನೆ ಮಾಡಿಕೊಳ್ಳಲು ಪ್ರೇರೇಪಿಸುವಂತಿದೆ.
‘ನನ್ನಂಥ ಸಾಮಾನ್ಯನೊಳಗೆ ಇರಬಹುದಾದ ದೇವರನ್ನು ಹುಡುಕಲಾರಂಭಿಸಿದೆ.. ಈಗ ನನ್ನಲ್ಲಿ ನಿತ್ಯ ದೇವರು ಸಂಚರಿಸುತ್ತಾನೆ’ ಎನ್ನುವ ಕತೆಯ ಕೊನೆಯ ಸಾಲು ವಚನಕಾರರ ಅನುಭಾವವನ್ನು ನೆನಪಿಸುವಲ್ಲಿ ಸಶಕ್ತವಾಗಿದೆ.
ಈ ಸಂಕಲನದ ವಿಶೇಷವಾದ ಕತೆ ‘ಮಧ್ಯ ವಯಸ್ಕನ ಮನೋಲಾಗ್’. ಈ ಕತೆ ನವ್ಯದ ಆರಂಭದಲ್ಲಿ ಬಹಳಷ್ಟು ಬರೆಸಿಕೊಂಡ ಅಸ್ತಿತ್ವವಾದದ ಸಿದ್ಧಾಂತವನ್ನು ಹೇಳುತ್ತಿದ್ದೆಯೇನೋ ಅನಿಸಿಬಿಡುತ್ತದೆ. ಮರುಕ್ಷಣಕ್ಕೆ ಅಲ್ಲಾ ಎನಿಸುತ್ತದೆ. ಮನುಷ್ಯನ ಬದುಕಿನಲ್ಲಿ ವಯೋ ಸಹಜವಾಗಿ ನಡೆಯಬೇಕಾದ ಕ್ರಿಯೆಗಳು ಸಫಲವಾಗದೇ ಇದ್ದ ಸಂದರ್ಭದಲ್ಲಿ ಅದು ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಮೇಲ್ನೋಟಕ್ಕೆ ಇದು ರಾಜಶೇಖರನ ಕತೆಯಂತೆ ಕಂಡರೂ ಎಲ್ಲರ ಕತೆಯೂ ಹೌದು, ಹಾಗೆಯೇ ಎಲ್ಲರ ಕತೆಯೂ ಅಲ್ಲ.
ಕತೆಯ ಆರಂಭವೇ ಕುತೂಹಲ ಹುಟ್ಟಿಸುವುದಲ್ಲದೇ ಕೊನೆಯ ಪದದವರೆಗೆ ಓದಲು ಪ್ರೇರೇಪಿಸುತ್ತದೆ. ಕತೆಗಾರ ಶಿವಕುಮಾರ್ ಗೆದ್ದಿರುವುದೇ ಇಲ್ಲಿ. ಕತೆಯೊಂದು ಕೊನೆಯವರೆಗೂ ಸುಮ್ಮನೆ ಓದಿಸಿಕೊಂಡು ಹೋದಾಗಲೇ ಯಶಸ್ವಿ ಕತೆ ಎನಿಸುವುದು. ಈ ಓದಿಸಿಕೊಳ್ಳುವ ಗುಣದ ಹಿಂದೆ ಕತೆಗಾರನ ಕತೆ ಕಟ್ಟುವ ತಂತ್ರ ಕೆಲಸ ಮಾಡಿದೆ. ಪುರಾಣದ ಕಾಲದಿಂದ ಈ ಕಾಲದವರೆಗೂ ಕುತೂಹಲ ಹುಟ್ಟಿಸಿಕೊಂಡೇ ಬಂದಿರುವ ಗಂಡು-ಹೆಣ್ಣುಗಳ ಕಾತರ, ಅನಾಯಸವಾಗಿ ದೊರಕಿಬಿಡಬಹುದಾದ ಗಂಡು/ ಹೆಣ್ಣಿನ ಸಾಂಗತ್ಯ, ಕಾಯುವಿಕೆಯಲ್ಲಿನ ವಿರಹ/ ಖುಷಿ ಇತ್ಯಾದಿ ವಿಚಾರಗಳು ದಂಡಿಯಾಗಿ ಕತೆಯಲ್ಲಿವೆ. ಮಧ್ಯಭಾಗದಲ್ಲಿ ಎಲ್ಲೋ ರಾಜಶೇಖರ್ ಎಂತಹ ಅವಕಾಶ ಗಿಟ್ಟಿಸಿಕೊಂಡುಬಿಟ್ಟ ಎಂಬ ಹೊಟ್ಟೆಕಿಚ್ಚು ಓದುಗನದ್ದು. ಆದರೆ ಅದು ಕತೆಯ ಯಶಸ್ಸೇ ಅನ್ನಿಸಿಬಿಡುತ್ತದೆ.
ಅತಿ ಉತ್ತಮ ಮನುಷ್ಯ ಎನ್ನಬಹುದಾದ ರಾಜಶೇಖರ್ ಅಪರಿಚಿತ ಪತ್ರ ಬಂದಂದಿನಿಂದ ಬದಲಾಗುತ್ತಾನೆ. ಮನುಷ್ಯ ಸಮಾಜಕ್ಕೆ ಹೆದರಿ ಮುಚ್ಚಿಟ್ಟುಕೊಂಡಿರುವ ‘ಅವ್ಯಕ್ತ ಆಸೆ’ ಎಂಬ ಹಕ್ಕಿಯನ್ನು ಅವಕಾಶ ಸಿಕ್ಕಾಗ ಹೇಗೆ ಆಕಾಶಕ್ಕೆ ಹಾರಿಸುವ ಪ್ರಯತ್ನ ಮಾಡುತ್ತಾನೆ. ಎಂಬುದು ರಾಜಶೇಖರನ ವ್ಯಕ್ತಿತ್ವದ ಬದಲಾವಣೆಯಿಂದ ಸ್ಪಷ್ಟವಾಗಿ ತಿಳಿಯುತ್ತದೆ. ರಾಜಶೇಖರ ಮಾಳವಿಕರ ಭೇಟಿ ಮಾಡಿಸಲು ಬಳಸಿರುವ ತಂತ್ರಗಳು ಹಳೆಯವೇ ಆಗಿದ್ದರೂ ನಿರೂಪಣಾ ತಂತ್ರದಿಂದ ಕುತೂಹಲ ಕೆರಳಿಸುತ್ತವೆ. ಇಂತಹ ಅನೇಕ ಸಂದರ್ಭದಲ್ಲಿ ಕತೆಗಾರ ತನ್ನ ಬರಹದ ವಿಶೇಷತೆಯನ್ನು ಮೆರೆದಿದ್ದಾರೆ.
ಒಂದು ಸಮಯದಲ್ಲಿ ಚಳುವಳಿಗಳನ್ನು ಹತ್ತಿರದಿಂದ ಕಂಡು ಅದರ ಸಾಧ್ಯಸಾಧ್ಯತೆಗಳ ಬಗ್ಗೆ ತೀಕ್ಷಣವಾಗಿ ಪ್ರತಿಕ್ರಿಯಿಸುತ್ತಿದ್ದವರು ಶಿವಕುಮಾರ್. ಪ್ರಸ್ತುತ ಕತೆಯಲ್ಲಿ ಹೋರಾಟಗಾರರ ಇನ್ನೊಂದು ಮುಖವನ್ನು ಪರಿಚಯಿಸಿದ್ದಾರೆ. ಮಾಳವಿಕ ತನ್ನ ಕತೆ ಹೇಳುತ್ತಾ ಬಡ ಮಧ್ಯಮ ವರ್ಗದ ನನಗೆ ಈ ಜಾಲದಲ್ಲಿ ಬಲಿಪಶುವಾಗುತ್ತಿದ್ದೇನೆಯೇ ಎಂದು ಯಾವತ್ತೂ ಅನಿಸಿರಲಿಲ್ಲ ಎನ್ನುತ್ತಾಳೆ. ನಿಜವಾದ ಅರ್ಥದಲ್ಲಿ ಬಲಿಪಶುಗಳಾಗುತ್ತಿರುವುದು ಸತ್ಯ. ಶಿವಕುಮಾರ್ ಬಲು ಸೂಕ್ಷ್ಮವಾಗಿ ಹೇಳಬೇಕಾದ್ದನ್ನು ಹೇಳಿದ್ದಾರೆ.
ಕತೆಯ ಕೊನೆಯ ಭಾಗದಲ್ಲಿ ಬರುವ ಬೇರೆ ಬೇರೆ ಮಾಳವಿಕಾಗಳು ಅತೃಪ್ತ ಮನುಷ್ಯನ ವಾರಸುದಾರರಂತೆಯೇ ಕಾಣುತ್ತಾರೆ. ಫೋನ್ ನಂಬರು ಕೊಟ್ಟ ಮಾಳವಿಕ, ಪತ್ರ ಬರೆದ ಮಾಳವಿಕ, ಸೈನ್ಯಾಧಿಕಾರಿಯ ಹೆಂಡತಿ ಮಾಳವಿಕ ಇವರೆಲ್ಲರ ಬಗೆಗಿನ ಕುತೂಹಲದೊಳಗೆ ಓದುಗ ಸಂತೃಪ್ತನಾಗಿಬಿಡುತ್ತಾನೆ.
ಎಲ್ಲವೂ ಇದ್ದ ರಾಜಶೇಖರ ಹೆಣ್ಣನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ಸಮಯದಲ್ಲಿ ಸುಮ್ಮನಿದ್ದು ಸಿಗದೇ ಇರುವುದರಲ್ಲಿ ಆಯ್ಕೆ ಮಾಡಿಕೊಳ್ಳಲು ಮುಂದಾಗುವುದೇ ವಿಚಿತ್ರ. ದೈಹಿಕ ವಾಂಚೆಗಳು ನಮ್ಮತನವನ್ನು ಕಾಪಾಡಿಕೊಳ್ಳಲು ಬಿಡದೆ ಗುಂಗೆ ಹುಳುವಿನಂತೆ ಗುಯ್ಗುಡತ್ತಲೇ ಇರುತ್ತವೆ. ನಿರೂಪಣಾ ಶೈಲಿಯಿಂದಲೇ ಈ ಕತೆ ಗಮನ ಸೆಳೆಯುತ್ತದೆ. ಸಂಶಯವಿಲ್ಲ.
ಕಥಾ ಸಂಕಲನದಲ್ಲಿರುವ ‘ವೃದ್ಧಾಶ್ರಮ’ ‘ಒಂದು ಮೌನದ ದಿನ’ ಇತ್ಯಾದಿ ಕತೆಗಳೂ ಕೂಡ ವಿಶೇಷವಾಗಿವೆ. ಬರಹಗಾರನ ಸಾಮಾಜಿಕ ಹೊಣೆ ಏನು ಎಂಬುದು ಈ ಕತೆಗಳಲ್ಲಿ ತಿಳಿಯುತ್ತದೆ.
ಬಾಲ್ಯದಿಂದಲೂ ರಂಗಭೂಮಿಯ ನಂಟು ಬೆಳೆಸಿಕೊಂಡು, ಸಾಹಿತ್ಯ, ಚರ್ಚೆ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವಿಕೆ, ಸಾಹಿತಿಗಳ ಒಡನಾಟದಲ್ಲಿದ್ದರೂ ಯಾರೊಬ್ಬರ ಪ್ರಭಾವಕ್ಕೂ ಒಳಗಾಗದೇ ಸ್ವಂತಿಕೆಯನ್ನು ಕಾಪಾಡಿಕೊಂಡಿರುವುದು ವಿಶೇಷ. ಕಥೆ ಕಟ್ಟುವ ಕ್ರಮ ಮುಂತಾದ ಶೈಕ್ಷಣಿಕ ಶಿಸ್ತನ್ನು ಆಂಗ್ಲಭಾಷಾ ವಿದ್ಯಾರ್ಥಿಯಾದ ಶಿವಕುಮಾರ್ ಆವಾಗಲೇ ಮೈಗೂಡಿಸಿಕೊಂಡಿದ್ದಾರೆ.
ಪ್ರಸ್ತುತ ಬೆಂಗಳೂರಿನ ಕಾಲೇಜಿನಲ್ಲಿ ಆಂಗ್ಲ ಉಪನ್ಯಾಸಕರಾಗಿರುವ ಇವರು ಉತ್ತಮ ಗದ್ಯಬರಹಗಾರ. ಮೊದಲನೇ ಕಥಾ ಸಂಕಲನದಲ್ಲಿ ನವೀನ ನಿರೂಪಣೆ, ತಂತ್ರದಿಂದ ಗಮನ ಸೆಳೆಯುತ್ತಾರೆ. ಎಲ್ಲಾ ಕತೆಗಳು ನಗರ ಕೇಂದ್ರೀಕೃತವಾಗಿರುವುದು ಚಿಕ್ಕ ವಯಸ್ಸಿನಲ್ಲಿ ಬೆಂಗಳೂರು ಸೇರಿದ ಪ್ರಭಾವವಿರಬಹುದು. ಆದರೂ ಅಲ್ಲಿನ ಅನುಭವಗಳನ್ನು ಶಿಸ್ತು ಬದ್ಧವಾಗಿ ದಕ್ಕಿಸಿಕೊಂಡಿರುವುದು ಸಾಧನೆಯೇ. ಅಪ್ಪಟ ಹಳ್ಳಿ ಹುಡುಗನಾದ ಈತ ಕತೆಗೆ ಬೇಕಂತಲೇ ಗ್ರಾಮದ ಸಂಸ್ಕೃತಿ ತಂದಿಲ್ಲ. ಏಕೆಂದರೆ ಯಾವ ಕತೆಗಳೂ ಅದನ್ನು ಬಯಸುವುದಿಲ್ಲ. ಒಟ್ಟಿನಲ್ಲಿ ಬಾಲ್ಯದಿಂದಲೂ ನನ್ನ ಮೆಚ್ಚಿನ ಶಿಷ್ಯನಾದ ಶಿವಕುಮಾರ್ ಕತೆಗಾರನಾಗುವ ಕನಸನ್ನು ಎಂದೋ ಕಂಡಿದ್ದೆ. ಮುನ್ನುಡಿ ಬರೆಯುವ ಮೂಲಕ ನನಸಾಗಿಸಿಕೊಂಡಿದ್ದೇನೆ. ಅದಕ್ಕೆ ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದ ಹೇಳಿ ವಿರಮಿಸುತ್ತೇನೆ.




0 Comments