ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕೇ, ನಿನ್ನ ಪ್ರೀತಿಸಲು ಅದೆಷ್ಟು ಕಾರಣಗಳಿವೆ!

ಎಚ್ ಎನ್ ಆರತಿ 

ಯುಗಾದಿಯಲ್ಲಿ ತೋರಣ ಕಟ್ಟುವಾಗಲೆಲ್ಲಾ ನನಗೆ ಅಮ್ಮನ ಮನೆಯ ಸಡಗರ ನೆನಪಾಗುತ್ತದೆ!

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ನಾನು, ನಮ್ಮ ರಾಜಾಜಿನಗರದ ಮನೆಯ ಬಗ್ಗೆ ಹೇಳಲೇಬೇಕು.

ನಾಲ್ಕು ತೆಂಗಿನಮರಗಳು, 2 ಅಡಿಕೆ, ಹಲಸು, ಸೀಬೇಕಾಯಿ, ದಾಳಿಂಬೆ, ಹೊಂಗೆ, ಬಾಳೆ ಮತ್ತು ಇನ್ನೂ ಹತ್ತು ಹಲವು ಬಗೆಯ ಹೂ, ಹಣ್ಣುಗಳಿರುವ ಸಸ್ಯಕಾಶಿ ಅದು.

ಹಿಂದಿನ ಮನೆಯ ಎರಡೂ ಮಾವಿನಮರಗಳು, ಅದರ ಸೊಪ್ಪು, ಕಾಯಿ ಯಾವಾಗಲೂ ನಮ್ಮದೇ! ಇವತ್ತಿಗೂ!!! ಅದು ನಮ್ಮ ಹಕ್ಕು!!! ಆ ಮನೆಯ ಜನರೂ ಮಾವಿನಕಾಯಿ ಕಿತ್ತು ಕೊಡಲು ನಮ್ಮನ್ನೇ ಕೇಳುತ್ತಿದ್ದರು, ಬಿಸಿಲು ಚೆನ್ನಾಗಿ ಬೀಳುವ ಕಾರಣ, ಎರಡೂ ಮರಗಳೂ ನಮ್ಮನೆಯೆಡೆಗೇ ಬಾಗಿ, ನಮ್ಮ ಕಾರ್ ಶೆಡ್ ಗೆ ಹೊದಿಕೆಯಾಗಿದ್ದವು!

ಮೂರು ದಶಕಗಳ ಹಿಂದಕ್ಕೆ ನೆನಪಿನ ಸುರುಳಿ ಉರುಳಿದರೆ, ನಾನು ಹೈಸ್ಕೂಲಿನ ಮೆಟ್ಟಿಲು ಹತ್ತಿದ್ದೆ ಅನಿಸುತ್ತೆ!
ರಸ್ತೆಯ ಯಾವ ಮನೆಯ, ಯಾವ ರೆಂಬೆಯ, ಯಾವ ಕಾಯಿ, ಎಷ್ಟು ಹಣ್ಣಾಗಿದೆ ಎಂಬುದು ನನಗೆ ಕರತಲಾಮಲಕವಾಗಿದ್ದ ಕಾಲ!

ಯಾವ ಮರವನ್ನು ಬೇಕಾದರೂ ಸಲೀಸಾಗಿ ಹತ್ತಬಲ್ಲ, ಪೂರ್ವಜನ್ಮದ ಪಳಿಯುಳಿಕೆಗಳು ನನ್ನಲ್ಲಿ ಭರಪೂರ ತುಂಬಿದೆ!
ಹಬ್ಬ ಬಂದಿತೆಂದರೆ, ಅಮ್ಮ ಮುಂದಿನ ರಸ್ತೆಯಲ್ಲಿದ್ದ ಗುರುತಿನ ಮನೆಯಲ್ಲಿ ಬೇವಿನಸೊಪ್ಪು ತರಲು ನನಗೇ ಹೇಳುತ್ತಿದ್ದರು!
ಸರಿ, ಅವರ ಮನೆಗೆ ಹೋದರೆ, ರಾಜೋಪಚಾರ! ತೇಂಗೊಳಲು, ಕೋಡುಬಳೆ ಕೊಟ್ಟು, ಮಗನಿಗೆ ಟೆರೇಸಿಗೆ ಕರೆದುಕೊಂಡು ಹೋಗಿ, ಬೇವಿನ ಸೊಪ್ಪು ಕಿತ್ತುಕೊಡಲು ಹೇಳುತ್ತಿದ್ದರು, ಇಡೀ ಕುಟುಂಬದವರು! ಕಾಪೊಂಡಿನಿಂದ ಮರ ಸ್ವಲ್ಪ ದೂರ ಇದೆ, ಹುಡಿಗಿ ಬಾಗಿ ಕೀಳಲು ಹೋದಾಳು, ಜೋಪಾನ ಎಂಬ ಎಚ್ಚರಿಕೆಯ ಮಾತು ಬೇರೆ!

ಸರಿ, ಈಗ ಕಥೆಯ ಆಸಕ್ತಿಯುತ ಭಾಗ ಶುರು.

ಅವರ ಮನೆಯ ಸುಪುತ್ರ, ಹೆಸರು ರಾಮ್ ಅನಿಸುತ್ತೆ, ಅವನು ಮುಂದೆ, ನಾನು ಹಿಂದೆ…ಚೆನ್ನಾಗಿ ತಿಂದುಂಡು ಸ್ವಲ್ಪ ದಪ್ಪವೇ ಇದ್ದವನು! ಕಾರಣವಿಲ್ಲದೇ ನಗುವ ನನಗೆ, ಅವನ ಹಿಂದೆ ಮೆಟ್ಟಿಲು ಹತ್ತುವಾಗ ನಗುವೋ ನಗು! ಈಗ ನೆನೆಸಿಕೊಂಡರೆ, ನನ್ನ ಬಗ್ಗೆ ನನಗೇ ಸಿಟ್ಟು ಬರುತ್ತದೆ!

ಅಂತೂ ಬೇವಿನ ಹೂ, ಸೊಪ್ಪು ಕಿತ್ತು ಕೊಡುತ್ತಿದ್ದ.

ನನ್ನ ಕೈಗೆ ಕೊಡುವಾಗ ಯಾಕೋ ಏನೋ ಅವನ ಕೈ ನಡುಗುತ್ತಿರುತ್ತಿತ್ತು… ನಾನು, ಪಾಪ ಮೆಟ್ಟಿಲು ಹತ್ತಿದ ಈ ಡುಮ್ಮನಿಗೆ ಆಯಾಸವಾಗಿರಬಹುದೇನೋ ಎಂದೇ ತಿಳಿದಿದ್ದೆ…!

ನಾನು ಶಾಲೆಯಿಂದ ಬರುವಾಗ ಕಿಟಕಿಯಲ್ಲಿ ಕಂಡು ಸರಕ್ಕನೆ ಮರೆಯಾಗುವ ಮುಖ, ಕೆಲವೊಮ್ಮೆ ಕಾಕಾ ಅಂಗಡಿಯಲ್ಲಿ ಜನರ ಮಧ್ಯೆ ಹಣಕಿನೋಡುವ ಮುಗ್ಧ ಮುಖ, ಸಂಜೆ ಲಗೋರಿ ಆಡುವಾಗ ದೂರದಲ್ಲಿ ಸೈಕಲ್ ತುಳಿಯುತ್ತಾ ತಿರಿತಿರುಗಿ ನೋಡಿ ಮರೆಯಾಗುವ ಮುಖ…!

ಆ ದಿನಗಳೇ ದಿನಗಳು!!!

ಬೇವು, ಬೆಲ್ಲ…🌿

ಬದುಕೇ, ನಿನ್ನ ಪ್ರೀತಿಸಲು ಅದೆಷ್ಟು ಕಾರಣಗಳಿವೆ!!!

‍ಲೇಖಕರು avadhi

30 March, 2017

1 Comment

  1. Manjunatha BT

    ಲೇಖನ ಕೂತುಹಲದೊಂದಿಗೆ ಓದಿಸಿಕೊಂಡಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading