ಬುದ್ಧಹಲಸು-ಅನುಭವ ಕಥನ
ಸಾಯಿಲಕ್ಷ್ಮಿ ಎಸ್
ಹಲಸಿನ ಹಣ್ಣೆಂದರೆ ನಮಗೆಲ್ಲ ಮಹಾ ಪ್ರೀತಿ. ಬಾಲ್ಯಕಾಲದಲ್ಲಿ ಅಪ್ಪ ಆಡಿಟ್ ಮುಗಿಸಿ ಚೆನ್ನರಾಯಪಟ್ಟಣದಿಂದ ಬಸ್ ನಲ್ಲಿ ಬರುವಾಗ ಚಂದ್ರ ಹಲಸಿನ ಗಿಡವನ್ನು ತೊಡೆಯ ಮೇಲಿಟ್ಟುಕೊಂಡು ಮಗುವಂತೆ ಜೋಪಾನ ಮಾಡುತ್ತಾ ತಂದು ನಮ್ಮ ಮನೆಯಂಗಳದಲ್ಲಿ ಸ್ಥಳ ಕಲ್ಪಿಸಿ ಮರವಾಗಿಸಿದ್ದರು.
ಮನೆಯ ಪಾಯಕ್ಕೆ ಅಪಾಯ ಎಂಬ ಅಮ್ಮನ ಬುದ್ಧಿಮಾತನ್ನು ಲೆಕ್ಕಿಸಲಿಲ್ಲ. ಆ ಮರ ಕ್ರಮೇಣ ಕೊಟ್ಟ ಹಣ್ಣು ಎಣಿಸಲಾರದಷ್ಟು. ಹೆಸರುಹೆಸರಾಗಿ ಆ ದಿವ್ಯ ರುಚಿ, ಮೋಹಕ ಬಣ್ಣದ ಹಣ್ಣನ್ನು ಆಪ್ತೇಷ್ಟರಿಗೆ ಹಂಚಿ ಕೃತಕೃತ್ಯರಾದ ಖುಷಿ ನಿನ್ನೆ ಮೊನ್ನೆ ಸಂಭವಿಸಿದಷ್ಟು ಹೊಸದು.
ಅಪ್ಪ ಕಾಲವಾಗಿ ಅನೇಕ ವರುಷಗಳ ನಂತರ ಗಿಡ ಮರ ಬಳ್ಳಿ ತುಂಬಿ ಒಂದು ಕಾಲಕ್ಕೆ ಪರ್ಣಕುಟೀರದಂತೆ ಶಾಂತಿ, ಸೌಖ್ಯ, ಸೌಹಾರ್ದದ ಗೂಡಾಗಿದ್ದ ಆ ಮನೆ ಮಾರಾಟವಾಯಿತು. ಕೊಂಡುಕೊಂಡಾತ ಹಿಂದಿನ ಮನೆಯ ವಾಸಿ. ಸಹಿ ಹಾಕಲು ಹೋದಾಗ ಆ ಹಲಸಿನ ಮರ ಮಧುರ ನೆನಪಲ್ಲಿ ಕಂಗಳ ತೋಯಿಸಿತು. ಕಣ್ಣು ಹನಿಸುವುದರಲ್ಲಿ ಮಾವು, ತೆಂಗು, ಮಾದಲ ಮೊದಲಾದವು ಜೊತೆಗೂಡಿದವು.
ಆತ ‘ಏನಾದರೂ ಹೇಳುವುದಿದೆಯೇ” ಎಂಬಂತೆ ನನ್ನತ್ತ ನೋಡಿದಾಗ ನಾನೊಂದು ಪ್ರಾರ್ಥನೆ ಆತನ ಮುಂದಿಟ್ಟೆ.
“ಈ ಹಲಸು ಬಹಳ ವಿಶೇಷ ಹಾಗೆ ಅಪರೂಪ ಕೂಡ. ಇದು ಹಣ್ಣು ಬಿಟ್ಟಾಗ ದಯಮಾಡಿ ನೀವು ತಿನ್ನಿ ನಿಮಗೆ ಬೇಕಾದ ಎಲ್ಲರಿಗೂ ಕೊಡಿ”, ನನ್ನ ಮಾತು ಆತನ ಹೃದಯದಾಳಕ್ಕೆ ಅದೆಷ್ಟು ಇಳಿಯಿತೋ ಕಾಣೆ. ಆತ ಮರವೆಲ್ಲ ಕಡಿಸಿ ಮಹಲು ವಿಸ್ತರಿಸುವ ಕನಸಲ್ಲಿದ್ದಿರಬೇಕು. ಒಡೆತನ ಬಿಟ್ಟು ಕೊಟ್ಟ ಮೇಲೆ ವ್ಯಾಮೋಹ ತರವಲ್ಲ ಎನಿಸಿ ಯಾವಾಗದರೊಮ್ಮೆ ಹಿಂದಿದ್ದ ಆ ರಸ್ತೆಯಲ್ಲಿನ ಓಡಾಟವನ್ನು ತ್ಯಜಿಸಿದೆ.
ನನ್ನ ಕರ್ಮಭೂಮಿ ‘ಅಕಾಶವಾಣಿ’ಯ ಕ್ಯಾಂಟಿನ್ ಬಳಿ ಭವ್ಯವಾಗಿ ತಲೆಯೆತ್ತಿರುವ ಎರಡು ಹಲಸಿನಮರ ನನಗೆ ಬಲು ಪ್ರಿಯ. ವೃತ್ತಿ ಬಾಂಧವರು, ಸಾಹಿತಿಗಳು, ಕಲಾವಿದರೊಡನೆ ಅಲ್ಲಿ ಕೂತು ಟೀ, ಕಾಫಿ ಹೀರುತ್ತ ಮಾತನಾಡುವುದು ಸಂಭ್ರಮದ ಗಳಿಗೆ. ಆಗ ಆ ವೃಕ್ಷಗಳ ಕುಶಲ ನೋಟದಲ್ಲೇ ವಿಚಾರಿಸುವ ಪರಿಪಾಠ.
ಕೆಲವೊಮ್ಮೆ ಆ ಗಿಡದ ಬುಡಕ್ಕೆ ಸಿಕ್ಕುವ ಕಾಯಿ ಹಲಸು ಗೆಳತಿಯರೊಂದಿಗೆ ನಮ್ಮ ಕೈಚಳಕದಲ್ಲಿ ಪಾಕವೈವಿಧ್ಯಗಳಾಗಿ ಊಟದ ಸಮಯಕ್ಕೆ ಭುಜಿಸುತ್ತಿದ್ದೆವು. ಹಣ್ಣಾದರಂತೂ ನಮ್ಮ ಸ್ಟುಡಿಯೋ ಅಟೆಂಡೆಂಟ್ ರಾಮಯ್ಯ, ಇಡೀ ಮರದ ಗುತ್ತಿಗೆ ಟೆಂಡರ್ ಪ್ರಕ್ರಿಯೆ ಜಯಿಸಿ ಒಂದಷ್ಟು ಹಣ್ಣಿನ ಮಾರಾಟ ಕಡಿಮೆ ದರಕ್ಕೆ ನಮಗೆಲ್ಲ ಮಾಡುತ್ತಿದ್ದ. ರಾಮನವಮಿ ನಮ್ಮ ಕೇಂದ್ರದಲ್ಲಿ ಬಲು ಜೋರು. ಅಲ್ಲಿ ರಾಮಯ್ಯನ ಪ್ರಾಯೋಜಕತ್ವದಲ್ಲಿ ಹಲಸಿನಹಣ್ಣು ರಸಾಯನ ರೂಪ ತಳೆದು ಪ್ರಸಾದವಾಗಿ ನಮ್ಮ ಉದರ ಪೋಷಣೆಯಾಗುತ್ತಿತ್ತು.
ಈಗ ನಮ್ಮದು ವಿಶ್ರಾಂತ ಜೀವನ ಹಲಸಿನಮರದ್ದು ಮಾತ್ರ ಅವಿಶ್ರಾಂತ ದುಡಿಮೆ. ಫಲಾಪೇಕ್ಷೆಯಿಲ್ಲದ ಸೇವೆ.

ನಾ ಸವಿದಿರುವ ಈ ಎಲ್ಲ ಹಲಸುಗಳ ರುಚಿ ಮೀರಿಸಿದ ಹಲಸೊಂದು ಪಕ್ಕದ ರಸ್ತೆಯ ಗೆಳತಿಯ ಕೃಪೆಯಿಂದ ನಮ್ಮಮನೆಗೆ ಒಂದು ಸಣ್ಣ ತುಂಡಾಗಿ ಪ್ರವೇಶಿಸಿತು. ಒಬ್ಬೊಬ್ಬರಿಗೆ ಒಂದೂವರೆ ತೊಳೆ. ಅಬ್ಬಾ ಅದೆಲ್ಲೋ ಇಂದ್ರನ ಅಮರಾವತಿಯಿಂದ ದಾರಿ ತಪ್ಪಿ ಬಂದಿರಬೇಕೆನಿಸಿತು. ಜೇನುತುಪ್ಪದಲ್ಲಿ ಅದ್ದಿ ತೆಗೆದ ಸವಿ. ಆ ಕ್ಷಣಕ್ಕೆ ಈ ಮರವನ್ನು ನೋಡಿ, ಅದನ್ನು ನೇವರಿಸಬೇಕೆನಿಸಿತು.
ಆ ರಸರುಚಿಯ ಮರದ ಜನಕರು ಲಲಿತಮ್ಮ ಮತ್ತು ರಾಮಮೂರ್ತಿ ದಂಪತಿ. ಅವರ ಸ್ಥಳ ನಂದಿಬೆಟ್ಟದ ಬುಡದ ತೋಟದಮನೆ.. ಅವರ ಪುತ್ರರ ಕುಟುಂಬ ನಮ್ಮ ಪಕ್ಕದ ರಸ್ತೆಯಲ್ಲೇ ಇರುವುದು. ಹಬ್ಬಹರಿದಿನದ ಅರಿಶಿನಕುಂಕುಮ ಭೇಟಿಯ ಸಂದರ್ಭದಲ್ಲಿ ಆ ವಿಶ್ವಾಸಿ ಹಿರಿಯ ದಂಪತಿ ಹತ್ತಿರವಾಗಿದ್ದರು. ಅವರ ಹಲಸಿನಮರ ಕಾಣುವ ಅಸೆ ವ್ಯಕ್ತಪಡಿಸಿದಾಗ ಒತ್ತಾಯಪೂರ್ವಕ ಆಹ್ವಾನವು ಬಂತು.
ಲಲಿತಮ್ಮ ಸಾಹಿತ್ಯಪ್ರಿಯೆ. ಬರವಣಿಗೆಯ ಹವ್ಯಾಸವೂ ಜೊತೆಗೆ. ನಂದಿಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಒಳ್ಳೆಯ ನೀತಿ ಕತೆಗಳನ್ನು ಹೇಳುತ್ತ ಅವರ ಅಭಿರುಚಿಯ ಮಟ್ಟವನ್ನು ಎತ್ತರಿಸಿದ್ದರು ಆ ಹಿರೀಹೆಂಗಸು. ಪ್ರಕೃತಿಯ ಸನ್ನಿಧಿಯಲ್ಲಿ ಅವರ ಬಾಳಸಂಜೆಯ ಸುಂದರ ಕ್ಪಣಗಳು ವಿನಿಯೋಗವಾಗುತ್ತಿದ್ದು ಅವರನ್ನು ರೇಡಿಯೋ ಪ್ರಸಾರ ಮಾಡುವ ಹಿರಿಯರ ಕಾರ್ಯಕ್ರಮ “ಬಾಳ ಬೆಳಕು” ಇದಕ್ಕಾಗಿ ಸಂದರ್ಶನ ಮಾಡಬೇಕೆನಿಸಿತು. ನನ್ನ ಸಹೋದ್ಯೋಗಿ ಮಿತ್ರ ಗೋಪಾಲ ನಾಯಕ್ ಹಾಗು ನಮ್ಮ ಅಂದಿನ ನಿರ್ದೇಶಕರಾದ ಡಾ ಚೇತನ ನಾಯಕ್ ನಂದಿಗ್ರಾಮದ ಧ್ವನಿಮುದ್ರಣ ಪಯಣದಲ್ಲಿ ಜೊತೆಗೂಡಿದರು. ಅದೊಂದು ಸ್ಮರಣೀಯ ಪ್ರಕೃತಿ ಯಾತ್ರೆ.
ಲಲಿತಮ್ಮನವರ ಫಾರಂ ನಮ್ಮ ತಂಡದೊಡನೆ ಪ್ರವೇಶಿಸುತ್ತಿದ್ದಂತೆ ನಗುಮೊಗದ ಸ್ವಾಗತದೊಂದಿಗೆ ಎದುರುಗೊಂಡರು ಆ ಸತಿಪತಿ.
ಹಳೆಯಕಾಲದ ವಿಶಾಲವಾದ ಅಚ್ಚುಕಟ್ಟಾಗಿಟ್ಟ ಕೆಂಪು ನೆಲದ ಮನೆ. ನಮ್ಮ ಯುನಿಟ್ ಗೆ ಕಾಫಿಯ ಉಪಚಾರವಾಗಿ ನಾವು ಸಂದರ್ಶನಕ್ಕೆ ಪೂರ್ವಭಾವಿಯಾಗಿ ಒಂದಷ್ಟು ವಿಚಾರ ವಿನಿಮಯ ಮುಗಿಸಿ ರೆಕಾರ್ಡಿಂಗ್ ಮಾಡಿದೆವು. ಗೋಪಾಲ ರಾಮಮೂರ್ತಿಗಳನ್ನು ಮಾತನಾಡಿಸಿದರೆ ನಾನು ಲಲಿತಮ್ಮನವರೊಡನೆ ಸಂವಾದ ನಡೆಸಿದೆ. ಇನ್ನು ಚೇತನ ನಾಯಕ್ ಅವರಿಗೆ ನಂದಿಬೆಟ್ಟದ ಬುಡದ ತಪ್ಪಲಿನ ಆ ಹಸಿರು ವಾತಾವರಣ ಪಾನ ಧ್ಯಾನವಾಗಿ ಅವರು ತಮ್ಮೊಳಗೆ ತಾವೇ ತನ್ಮಯರಾಗಿದ್ದರು. ಅವರ ಮನೆಯ ಕಿಟಕಿಗೆ ಆತುಕೊಂಡಂತೆ ನಂದಿಬೆಟ್ಟದ ನೋಟ.
ರೆಕಾರ್ಡಿಂಗ್ ಮುಗಿಯುತ್ತಿದ್ದಂತೆ ತೋಟ ಒಂದು ಸುತ್ತು ನೋಡಿ ಬರಲು ಅವರೊಡನೆ ಹೊರಟೆವು. ಲಲಿತಮ್ಮ ಬಹಳ ಕ್ರಿಯಾಶೀಲ ಹಾಗು ಉತ್ಸಾಹಿ ಮಹಿಳೆ. ಹಲವು ತೆಂಗಿನಮರಗಳು ತಲೆ ಎತ್ತಿದ್ದ ಹೂಗಿಡಗಳು, ನಿಂಬೆ, ಬಾಳೆ, ಮಾವು ಮುಂತಾದವು ನಂದನವನವಾಗಿಸಿದ್ದವು ಆ ಪ್ರದೇಶವನ್ನು. ಅದು ಬಿಸಿಲು ನಾಡಾದ್ದರಿಂದ ನೀರಿಗೆ ಅಲ್ಲಿ ಕಷ್ಟವೇ. ಈ ಪಾಟಿ ಗಿಡಮರಗಳನ್ನು ಸಾಕುವುದು ಸುಲಭದ ಮಾತಲ್ಲ. ಕೆಲಸಕ್ಕೆ ಆಳುಜನ ಸಿಗುವುದು ದುರ್ಲಭ. ಆದರೆ ಅವರ ಮೊಗದಲ್ಲಿ ಒಂದಿನಿತೂ ಬೇಸರದ ಛಾಯೆಯಿಲ್ಲ. ಇಬ್ಬರೂ ಸಾಹಸಿಗಳೇ. ಕೈಲಾಗುವವರೆಗು ಸ್ವತಂತ್ರವಾಗಿರಬೇಕೆಂಬ ಧ್ಯೇಯ ಮನೋಭಾವ.
ಒಂದೊಂದೇ ಮರ ಕಾಣುತ್ತಿದ್ದಂತೆ ನನ್ನ ಕಣ್ಣು ಈ ಸೃಷ್ಟಿಯ ಅತ್ಯಾದ್ಭುತ ಹಲಸಿನ ಮರವನ್ನು ಹುಡುಕತೊಡಗಿತು. ಲಲಿತಮ್ಮನವರು ಗಿಡ್ಡವಾಗಿ, ಅಗಲವಾಗಿ ಹರಡಿಕೊಂಡಿದ್ದ ಒಂದು ವೃಕ್ಷದೆದುರು ನಮ್ಮನ್ನು ಕರೆದುಕೊಂಡು ಹೋದರು. ಅದೇ ಆ ಹಲಸಿನಮರ. ಅದರ ಒಂದು ಕೊಂಬೆಗೆ ಬ್ಯಾಡೇಂಜಿನ ಚಿಕಿತ್ಸೆ ನಡೆದಿದ್ದಿರಬೇಕು. ಅದನ್ನು ಸಮೀಪಿಸಿ ಲಲಿತಮ್ಮ ತೋರು ಬೆರಳಿನಲ್ಲಿ ಆ ಬ್ಯಾಂಡೇಜ್ ಹಿನ್ನೆಲೆ ಹೇಳತೊಡಗಿದರು.
“ಈ ಹಲಸು ಈ ಸಲ ಹೆಚ್ಚು ಹಣ್ಣು ಬಿಡಲಿಲ್ಲ. ಬೇಕಾದವರಿಗೆಲ್ಲ ಸಣ್ಣ ಸಣ್ಣ ತುಂಡು ಕಳಿಸಿದೆ. ತಿಂದವರದೆಲ್ಲ ಒಂದೇ ಮಾತು ಇಂತಹ ಹಣ್ಣು ತಿಂದಿಲ್ಲಾಂತ. ಅದೇನಾಯಿತೋ ಗೊತ್ತಿಲ್ಲ. ಮರದ ಈ ಭಾಗ ಕೊಳೆಯೋಕ್ಜೆ ಶುರುವಾಯಿತು. ಅದಕ್ಕೆ ಔಷದಿ ತರಿಸಿ ಒಳಗೆಲ್ಲ ಹಚ್ಚಿ ಬ್ಯಾಂಡೇಜ್ ಸುತ್ತಿದ ಮೇಲೆ ಚೇತರಿಸಿಕೋತಾ ಇದೆ”.
ಅಜ್ಜಿ ಹೇಳುತ್ತಿದ್ದ ಮಾತು “ಮನುಷ್ಯರ ಕಣ್ಣಿಗೆ ಮರ ಮುರೀತು” ನೆನಪಾಗಿ ಅನುಭವದ ನುಡಿಗೆ ಎಷ್ಟು ಮಹತ್ವವಿದೆ ಎನಿಸಿತು. ಆ ಮರದ ಚಿಗುರು, ಎಲೆ, ಹಣ್ಣು, ಕಾಯಿ, ಗಾಯಕ್ಕೆ ಚಿಕಿತ್ಸೆಗೊಳಗಾಗಿದ್ದ ಕೊಂಬೆ ಎಲ್ಲವನ್ನು ಸವರಿ, ಒಂದಷ್ಟು ನೀರು ಹನಿಸಿ ಧನ್ಯವಾದ ಸಮರ್ಪಿಸಿದ ಮೇಲೆ ನನ್ನ ಜೀವಕ್ಕೆ ಹಾಯೆನಿಸಿತು. “ಅದೆಷ್ಟು ಜನ್ಮ ದಾಟಿ ಈ ಸವಿ ಸಿಹಿಯುಣಿಸುವ ಮರದ ಹುಟ್ಟಿಗೆ ಬಂದೆಯೋ. ನೀನು ನಿಜಕ್ಕೂ ಪ್ರಬುದ್ಧೆ. ಈಗ ಬುದ್ಧ ಹಲಸಿನ ಅವತಾರ ತೊಟ್ಟಿರುವೆ.” ಈ ರೀತಿ ಆ ಮರದೊಡನೆ ಹೃದಯ ಸಂವಾದ ಪೂರೈಸಿದೆ. ಲಲಿತಮ್ಮನವರ ಊಟದ ಆತಿಥ್ಯ ತೋಟದ ಕಲ್ಲುಬೆಂಚಿನ ಮೇಲೆ ಸ್ವೀಕರಿಸಿದೆವು. ಸ್ವಾದಿಷ್ಟ ವನಭೋಜನ.
ವಾಪಸ್ ಆಗುವಾಗ ಅವರಲ್ಲಿ ಒಂದು ಬಿನ್ನಹವಿಟ್ಟೆ. “ಅಮ್ಮ ಈ ಹಲಸಿನಗಿಡದ ಬೀಜವನ್ನು ಸಸಿ ಮಾಡಿಕೊಡಿ. ನಾನು ನನ್ನ ಇಷ್ಟಮಿತ್ರರ ತೋಟದಲ್ಲಿ ಇದನ್ನು ಬೆಳೆಸಲು ಇದರ ಸಂತತಿ ಹರಡಲು ವ್ಯವಸ್ಥೆ ಕಲ್ಪಿಸುವೆ”
ಲಲಿತಮ್ಮ ತಮ್ಮ ನೆನಪಿನ ಕಡಲಿಂದ ಅನುಭವದ ಅಲೆಯೊಂದನ್ನು ಹೊರತೆಗೆದರು.

“ನಾವು ಅನೇಕ ವರುಷ ರಾಯಚೂರಿನ ಶಕ್ತಿನಗರದಲ್ಲಿದ್ದೆವು. ನಮ್ಮವರು ಪವರ್ ಕಾರ್ಪೋರೇಶನ್ ಸಂಸ್ಥೆಯಲ್ಲಿ ಇಂಜನೀಯರಾಗಿದ್ದವರು. ನಮಗೆ ಪುಣ್ಯಾತ್ಮರೊಬ್ಬರು ಈ ಹಲಸಿನ ಗಿಡದ ಬೀಜ ಚೆನ್ನಾಗಿದೆ ಬೆಳೆಸಿ ಅಂತಾ ಕೊಟ್ಟರು. ಅದು ಸೊಂಪಾಗಿ ಬೆಳೆದು ಹಣ್ಣು ತೊಟ್ಟಿತು. ಎಲ್ಲರಿಗೂ ಕೊಟ್ಟು ಸಂತೋಷ ಪಟ್ಟೆವು. ರಿಟೈರ್ ಆಗಿ ನಾವು ಈ ಊರಿಗೆ ಹೊರಟಾಗ ಸ್ನೇಹಿತರೊಬ್ಬರು ಬೀಳ್ಕೊಡುವಾಗ ಈ ಹಲಸಿನ ಗಿಡ ಕುಂಡದಲ್ಲಿ ಬೆಳೆಸಿದ್ದು ತಂದು ಕಾಣಿಕೆಯಾಗಿ ಕೊಟ್ಟರು. ನಮಗೆ ತೋಚಿರಲಿಲ್ಲ. ಅಲ್ಲಿಂದ ತಂದು ಇಲ್ಲಿ ನೆಟ್ಟಿದ್ದು. ಇದರ ಮರಿಗಳು ಇನ್ನೆಲ್ಲೆಲ್ಲಿ ಬಾಳಿ ಸಿಹಿ ಹಂಚಬೇಕೋ. ಖಂಡಿತ ನಿಮಗೆ ಗಿಡ ಮಾಡಿ ಮುಟ್ಟಸತೀನಿ”.
ಅದಾಗಿ ತಿಂಗಳೇ ಕಳೆದುಹೋಗಿದ್ದವು. ನಾನು ಈ ಸಂಗತಿ ಸಂಪೂರ್ಣವಾಗಿ ಮರೆತುಬಿಟ್ಟಿದ್ದೆ. ಹೀಗಿರುವಾಗ ಒಂದು ದಿನ ಲಲಿತಮ್ಮನವರ ಸೊಸೆಯಿಂದ ಪೋನ್ ಬಂತು. “ನಮ್ಮತ್ತೆ ನಿಮಗೆ ಹಲಸಿನ ಗಿಡ ಕಳಿಸಿದಾರೆ. ಬರ್ತೀರಾ”. ಯಾರಿಗೆ ಕೊಡಲಿ ಎಂದು ಯೋಚಿಸಿದಾಗ ನೆನಪಾದವರು ಗೆಳತಿ ಕೋಕಿಲಾ. ಮನೆಯೂ ಸಮೀಪ. ಗಿಡ ತಲುಪಿಸುವುದೂ ಸುಲಭ.
ನಮ್ಮ ಗಟ್ಟಿ ಭಾಂದವ್ಯದಲ್ಲಿ ಅವರ ತೋಟದ ಸಸ್ಯೋತ್ಪನ್ನಗಳ ಒಳಹರಿವು ನಮ್ಮ ಪಾಕಶಾಲೆಯಲ್ಲಿ ಅಗಾಗ ನಡೆಯುತ್ತಲೇ ಇರುತ್ತದೆ. ಅಲ್ಲಿಂದ ತಂದ ಗಿಡವನ್ನು ಕೋಕಿಲಾ ಉಡಿಯಲ್ಲಿಟ್ಟು ಆ ಬುದ್ಧ ಹಲಸಿನ ರುಚಿಯ ಮಹಿಮೆ ವಿವರಿಸಿದೆ. ಗಿಡಗಳೆಂದರೆ ಕೋಕಿಲಾ ರವಿ ದಂಪತಿಗೆ ಜೀವ. ಕೇಳಬೇಕೇ ಅವರ ಖುಷಿ. “ಮೊದಲನೆಯ ಫಸಲು ನಿಮಗೇ” ಎಂದು ನಗುನಗುತ್ತ ಹಲಸಿನ ಗಿಡವನ್ನು ಮಗುವಂತೆ ಎತ್ತಿಕೊಂಡರು. ಕೋಕಿಲಾಗೆ ನಾನು ಗಿಡ ದಾಟಿಸಿ ನಾಲ್ಕೈದು ವರುಷವಾಗಿರಬೇಕು. ಈ ವಿಷಯ ನೆನಪಿಂದ ಹಾರಿಹೋಗಿತ್ತು ಸಹ.
ಒಂದು ದಿನ ಕೋಕಿಲಾ ಮನೆಗೆ ಬಂದರು. ಕೈಯಲ್ಲೊಂದು ಸ್ಟೀಲ್ ಡಬ್ಬಿ. ನನಗೆ ಕೊಟ್ಟು ತೆಗೆದು ನೋಡಲು ಹೇಳಿದರು. ಮುಚ್ಚಳ ತೆರೆದೆ. ಅಲೌಕಿಕ ಬಣ್ಣ ಪರಿಮಳದ ಹಲಸಿನ ತೊಳೆಗಳು. ಕೋಕಿಲಾ ನನ್ನ ಆಶ್ಚರ್ಯ ತಣಿಸಿದರು.
“ನಮ್ಮ ತೋಟದಲ್ಲಿ ನಿಮ್ಮ ಬುದ್ಧಹಲಸು ಬಿಟ್ಟ ಮೊದಲ ಫಲ. ರವಿ ನಿಮಗೆ ಕೊಟ್ಟ ಹೊರತು ಯಾರು ತಿನ್ನೋ ಹಾಗಿಲ್ಲ ಅಂದರು. ಬಿಡಿಸಿದ ತಕ್ಷಣ ತುಂಬಿಸಿ ತಂದೆ ತಗೊಳ್ಳಿ”. ಕೋಕಿಲಾರವಿ ಅವರ ಸ್ನೇಹ, ಔದಾರ್ಯಕ್ಕೆ ಮೂಕಳಾದೆ.
ಆ ಉಡುಗೊರೆಯಾಗಿ ಬಂದ ಬುದ್ಧಹಲಸಿನ ಬೀಜವನ್ನು ಈಗ ಸಸಿ ಮಾಡಿರುವೆ. ಮನೆಯ ಬಳಿ ಇರುವ ಹಿರಿಯ ಗೆಳತಿ ನಾಗರತ್ನಮ್ಮ ಅವರ ಮಗನ ಶ್ರೀನಿವಾಸಪುರದಲ್ಲಿರುವ ತೋಟಕ್ಕೆ ಅದು ವಲಸೆ ಹೊರಡಬೇಕಿದೆ. ಅದರ ವಾಸ್ತವ್ಯಕ್ಕೆಂದು ಚಾಲನೆ ದೊರೆಯುವುದೋ ಕಾದು ನೋಡಬೇಕಿದೆ.
ಒಂದು ಹಲಸಿನ ಗಿಡ ತನ್ನ ನಿಸ್ವಾರ್ಥ ಪ್ರೀತಿಯಿಂದ ಒಂದು ಆತ್ಮೀಯ ಮೈತ್ರಿ ಜಾಲವನ್ನು ಸೃಷ್ಟಿಮಾಡಿ ಅನೇಕ ಹೃದಯಗಳನ್ನು ನೆನಪಿನ ಹಾರದಲ್ಲಿ ಸೊತ್ತಾಗಿ ಬಂಧಿಸಿದೆ. ಅದರ ಅಗಾಧ ಚೈತನ್ಯಶಕ್ತಿಗೆ ನಾ ಋಣಿ.






ಸಾಯಿ ಲಕ್ಷ್ಮಿಯವರೇ ನನಗೂ ಗಿಡ ಅಥವಾ ಬೀಜ ಬೇಕಿತ್ತು. ಸಿಗಬಹುದಾ?
Madam,
Nanagu ondu gida bekittu. Koduvira?
ಮೇಡಂ ನನಗೂ ಒಂದು ಗಿಡ ಬೇಕು…
9880234365
ಎಷ್ಟು ಆಪ್ತ ಬರಹ