ಸಮಯ ಎಲ್ಲವನ್ನೂ ಮೀರಿದ್ದು
-ಸರಸ್ವತಿ ಕೆ ನಾಗರಾಜ್
ನಾನೇ ಸರಿ ಎಂದು ವಾದ ಮಾಡುವ ಮನಸಿಲ್ಲ,
ವಾದ ಮಾಡುವ ಹಠಕ್ಕಿಂತ
ಗೆಲ್ಲುವ ಹಂಬಲಕ್ಕಿಂತ ಶಾಂತಿ ಮುಖ್ಯವೆಂದುಕೊಂಡೆ,
ಮಾತುಗಳ ಗದ್ದಲಕ್ಕಿಂತ ಮೌನವೇ ಸಾಕು,
ಅಲ್ಲಿ ಸತ್ಯ ತನ್ನದೇ ಧ್ವನಿಯಲ್ಲಿ ಮಾತಾಡುತ್ತದೆ.
ತಪ್ಪು, ಸರಿ ಎನ್ನುವ ಲೆಕ್ಕವನ್ನೇ ಮೀರಿಸಿ,
ಅನುಭವವೇ ಬದುಕಿನ ಗುರುವಾಗುತ್ತದೆ ಎಂದುಕೊಂಡೆ.
ಅಹಂಕಾರ ಬಿಟ್ಟು ತಾಳ್ಮೆ ಹಿಡಿದಾಗ,
ಮನಸ್ಸು ಹಗುರವಾಗುವುದನ್ನು ತಿಳಿದುಕೊಂಡೆ.
ನಾನೇ ಸರಿ ಎಂದು ನಿಂತುಕೊಳ್ಳುವುದಕ್ಕಿಂತ,
ಬದುಕನ್ನು ಅರ್ಥಮಾಡಿಕೊಳ್ಳುವುದೇ ಸಾಕೆಂದು ಕಲಿತುಕೊಂಡೆ.
ಬದುಕು ಉತ್ತರಗಳನ್ನೆಲ್ಲ ನೀಡುವುದಿಲ್ಲ,
ಕೆಲವು ಪ್ರಶ್ನೆಗಳೊಂದಿಗೆ ಜೊತೆಯಾಗಿಯೇ ನಡೆಯುತ್ತದೆ.
ಸಮಯ ಕಲಿಸುವ ಪಾಠಕ್ಕೆ ಶಬ್ದವಿಲ್ಲ,
ಎಲ್ಲವನ್ನೂ ಹಿಡಿದುಕೊಳ್ಳಬೇಕೆಂಬ ಆಸೆ,
ಕೊನೆಗೆ ಕೈ ಖಾಲಿಯಾಗುವುದನ್ನೇ ಕಲಿಸಿತು.
ಬಿಟ್ಟುಕೊಡುವ ಧೈರ್ಯ ಬಂದಾಗಲೇ,
ಮನಸ್ಸಿಗೆ ನಿಜವಾದ ವಿಶ್ರಾಂತಿ ಸಿಕ್ಕಿತು.
ಪ್ರತಿ ಹೆಜ್ಜೆಯೂ ಗೆಲುವಾಗಲೇ ಬೇಕೆಂದಿಲ್ಲ,
ಕೆಲವು ಹಾದಿಗಳು ಕಲಿಯಲು ಮಾತ್ರ.
ಬದುಕು ನನಗೆ ಹೇಳಿದ್ದು ಇಷ್ಟೇ
ಕೊನೆಗೆ ತಾಳ್ಮೆಯೇ ಅತ್ಯಂತ ಶಕ್ತಿಶಾಲಿ ಅಸ್ತ್ರವೆಂದು.






0 Comments