ಮಲ್ಲಿಕಾರ್ಜುನ ದಳವಾಯಿ
ಎಲ್ಲರೂ ಕೂಡ ಜೀವನದಲ್ಲಿ ಒಮ್ಮೆಯಾದರೂ ಯಾರನ್ನಾದರೂ ಉದ್ದೇಶಿಸಿ `ನಮ್ಮ ಅಪ್ಪಂಗೆ ಹೇಳ್ತೀನೀ ನೋಡೂ… ಎಂಬಂತಹ ತೊದಲ್ನುಡಿಯ ಧಮಕಿ ಹಾಕಿರುತ್ತೇವೆ. ಅಪ್ಪ ಎಂದರೆ ಭಯ, ಭದ್ರತೆ. ಅಪ್ಪ ಎಂದರೆ ದೂರ. ಅಪ್ಪನೆಂದರೆ ಅಮ್ಮ ಮಕ್ಕಳ ನಡುವಿನ ತೂಗು ಸೇತುವೆ. ತನ್ನ ಕುಟುಂಬಕ್ಕೋಸ್ಕರ ಏನೆಲ್ಲ ಮಾಡಿದರೂ, ಅಡುಗೆ ಮನೆ ಮೇಲೆ ಅಧಿಪತ್ಯ ಸಾಧಿಸಲಾಗದ ಹಾಲ್ಗೆ ಸೀಮಿತ ಕಾಯಂ ಅತಿಥಿ. ಟಿವಿಯಲ್ಲಿ ಮೂಡಿಬರುವ ಹಳೇ ಸಿನಿಮಾ ಇಷ್ವವಾದರೂ ಹೆಂಡತಿಯ ಕೈಯಲ್ಲಿನ ರಿಮೋಟ್ ಕಿತ್ತುಕೊಳ್ಳಲಾಗದ ಧೀರ. ಅಮ್ಮನ ಮಾತಿಗೆ ಎದುರಾಡಿದರೆ ದಿನಗಟ್ಟಲೇ ಮೌನದ ಈಟಿಗೆ ಬಲಿಯಾಗಬೇಕಾದ ತಾಳ್ಮೆ ರಹಿತ ಮುಕುಟ ಮಣಿ. ಹಾಗಿದ್ದರೂ ಕುಟುಂಬವೆಂಬ ದೋಣಿಯ ಹುಟ್ಟು ಮಾತ್ರ ಅವನದ್ದೇ. ದೋಣಿಯನ್ನು ದಡ ಸೇರಿಸುವವಳು ಅಮ್ಮನೇ ಆಗಿದ್ದರೂ ಲೋಕದ ಕಣ್ಣಿಗೆ ಮಾತ್ರ `ಅಪ್ಪಾ ಈಸ್ ಹೀ ಮ್ಯಾನ್. ಅವರವರಿಗೆ ಅವರವರ `ಪಪ್ಪಾ ಈಸ್ ಗ್ರೇಟ್. ನೂರಲ್ಲ ಸಾವಿರ ಸಲ ನೆಲಕ್ಕೆ ಬಿದ್ದರೂ, ಮೀಸೆ ಮಣ್ಣಾಗಿ, ಹಣ್ಣಾದರೂ ಚಟಕ್ಕನೆ! ಮೇಲೆದ್ದು ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡ ಸ್ವಯಂ ಘೋಷಿತ ಆ್ಯಂಗ್ರಿ ಯಂಗ್ಮ್ಯಾನ್! ಎಂದರೆ ಅದು ಅಪ್ಪ ಮಾತ್ರ. ನಮ್ಮೂರು ಬೆಳಗಾವಿಯ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಟ್ಟಕಡೆಯ ಹಳ್ಳಿ ಬುಡರಕಟ್ಟಿ. `
ಸುತ್ತಮುತ್ತ ಸುಡುಗಾಡುಗಟ್ಟಿ ನಟ್ಟ ನಡುವೆ ಬುಡರಕಟ್ಟಿ’ ಎಂದು ನಾವೆಲ್ಲ ಇವತ್ತಿಗೂ ತಮಾಷೆ ಮಾಡುತ್ತೇವೆ. ಆದರೆ ಆ ತಮಾಷೆಯ ಮಾತಿನ ಹಿಂದೆ ಒಂದು ಕಥೆಯಿದೆ. ನಮ್ಮೂರನ್ನು ಎಲ್ಲ ಸಮುದಾಯದವರ ಸ್ಮಶಾನಗಳು ಸುತ್ತುವರೆದಿವೆ. ಆಯಾ ದಿಕ್ಕಿಗೆ ಒಂದೊಂದು ಜಾತಿಯವರ ಸ್ಮಶಾನಗಳಿರುವುದರಿಂದ ನಮ್ಮೂರಿನ ಕುರಿತು ಮಾತು ಬಂದಾಗ, ರಾಜಕೀಯ, ಜಾತ್ರೆ ಸೇರಿದಂತೆ ಊರಲ್ಲಿ ಘಟಿಸುವ ಒಳ್ಳೆಯ ಹಾಗೂ ಕೆಟ್ಟ ಕಾರ್ಯಗಳಿಗೆ ಕುರಿತಂತೆ ಆಕ್ರೋಶ ಮತ್ತು ಮೆಚ್ಚುಗೆಯಾಗಿಯೂ ಆ ವಿಶೇಷಣ ಬಳಕೆಯಲ್ಲಿದೆ. ಎರಡು ದಶಕಗಳ ಹಿಂದೆ ನಮ್ಮ ಮನೆಯಲ್ಲಿ ಸುಮಾರು ಮೂರು ನೂರು ಕುರಿಗಳಿದ್ದವು. ಮನೆಯ ಎಲ್ಲ ಸದಸ್ಯರ ಕಾಯಂ ಉದ್ಯೋಗವೆಂದರೆ ಅದು ಕುರಿ ಮೇಯಿಸೋದು. ಅಪ್ಪನೆಂದರೆ ಊರಲ್ಲಿ ಎಲ್ಲರಿಗೂ ಪ್ರೀತಿ. ಅವನು ಮುಖ ಗಂಟಿಕ್ಕಿಕೊಂಡಿದ್ದನ್ನು, ಜೋರಾಗಿ ಮಾತಾಡಿದ್ದನ್ನು ಕೇಳಿದವರು ಕಡಿಮೆ. ಹುಟ್ಟಾ ಅನಕ್ಷರಸ್ಥನಾದರೂ ನಗಿಸುವ, ರಂಜಿಸುವ, ಹಾಡುವ ಕಲೆ ಆತನನ್ನು ಉತ್ಸಾಹಿಯನ್ನಾಗಿ ರೂಪಿಸಿರಬಹುದು. ಅಷ್ಟಕ್ಕೂ ಮನುಷ್ಯ ತನಗೆ ಯಾರೂ ದಿಕ್ಕಿಲ್ಲ, ನೆರವಿಗೆ ಆಗುವವರಿಲ್ಲ ಎಂದಾದಾಗ ಹೆಚ್ಚು ಗಟ್ಟಿಯಾಗುತ್ತಾನೆ. ತನ್ನೊಳಗೆ ತಾನೇ ಮಾತಾಡಿಕೊಳ್ಳುತ್ತಾನೆ. ಕತ್ತಲು ತುಂಬಿದ ಗುಹೆಯೊಳಗೆ ನಿಂತುಕೊಂಡೇ, ಸುತ್ತಮುತ್ತಲಿನವರಿಗೆ ಬೆಳಕು ಕೊಡಲು ಹಂಬಲಿಸುತ್ತಾನೆ. ತಾನು ಹಾಡುವ ಡೊಳ್ಳಿನ ಪದಗಳು, ರಾತ್ರಿಯಾದರೆ ಕೊಂಚ ಹಳದಿ ದ್ರವ, ಅಮ್ಮನ ಸಿಡಿಮಿಡಿ, ಗೌಡರ ಮನೆಯ ಅಜ್ಜಿಯೊಂದಿಗಿನ ಹರಟೆ, ಉರೂರು ಸುತ್ತಿ ಡೊಳ್ಳಿನ ಪದ ಕಲಿಸುವ ಹುಕಿಗೆ ಬಿದ್ದಿದ್ದ ಅಪ್ಪನಿಗೆ ಹೆಂಡತಿ ಮಕ್ಕಳ ಕಡೆಗೆ ಗಮನ ಕೊಡಲು ಟೈಮೇ ಸಿಗುತ್ತಿರಲಿಲ್ಲ.

ಪ್ರತಿದಿನ ಮನೆಗೆ ಬಂದರೂ ಅದು ಸಟ್ಟಸರಹೊತ್ತಿಗೆ. ಓಣಿಯಲ್ಲಿನ ನಾಯಿಗಳು ಬೊಗಳಲು ಶುರು ಮಾಡಿದರೆ `ಒಂದೋ ಕಳ್ಳರು ಬಂದಿರಬೇಕು. ಇಲ್ಲ.. ಬ್ಯಾಡರ ಮಲ್ಲ ಬಂದಿರಬೇಕು’ ಎಂದು ಕೇರಿಯ ಜನರೆಲ್ಲರೂ ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಅಪ್ಪನ ರಾತ್ರಿ ಪ್ರಯಾಣ ಫೇಮಸ್ಸಾಗಿತ್ತು. ಅವಿಭಕ್ತ ಕುಟುಂಬ, ಅಣ್ಣತಮ್ಮಂದಿರ ಹೆಂಡತಿಯರ ನಾನ್ಸ್ಟಾಪ್ ರಗಳೆ ಇತ್ಯಾದಿಗಳಿಂದಾಗಿ ಅಪ್ಪ ಮನೆ ಸಂಭಾಳಿಸುವಲ್ಲಿ ಹೈರಾಣಾಗುತ್ತಿದ್ದ. ಕೆಲವೊಮ್ಮೆ ಇದೇ ಕಾರಣಕ್ಕೆ ಅಮ್ಮ ಅಪ್ಪನಿಗೆ ಜಗಳವಾಗುತ್ತಿತ್ತು. `ಮಾತೆತ್ತಿದರೆ ಅಣ್ಣತಮ್ಮಂದಿರ ಸುಖಕ್ಕೆ ಸಾಯುವ ನೀನೂ… ನಾನೂ ಸೇರಿದಂತೆ ನನ್ನ ಮಗನಿಗೋಸ್ಕರ ಏನಯ್ಯ.. ಮಾಡಿದೀಯಾ’ ಎಂದು ಅಮ್ಮ ಜೋರು ದನಿಯಲ್ಲಿ ಜಾಡಿಸುತ್ತಿದ್ದರೆ, ಅಪ್ಪ ಮಾತ್ರ ತಣ್ಣಗೆ ಒಡಲು ಸುಡುವ ವೇದನೆ ಸಹಿಸಿಕೊಳ್ಳುತ್ತಿದ್ದ. ಅವನಿಗೆ ಆ ಬೈಗುಳ, ನಿಂದನೆ, ವಕ್ರದೃಷ್ಟಿ ಎಲ್ಲವೂ ಅಭ್ಯಾಸವಾಗಿದ್ದವಾ? ಅಥವಾ ಭೂತಾಯಿಯ ಮಡಿಲಲ್ಲಿ ಹುಟ್ಟಿರುವ ತಾನು ಯಕಃಶ್ಚಿತ್ ಅನ್ನಕ್ಕೋಸ್ಕರ ಬಡಿದಾಡೋ ಈ ಜನರ ಮಾತಿಗೇಕೆ ತಲೆ ಕಡಿಸಿಕೊಳ್ಳಬೇಕು ಎಂದು ಸುಮ್ಮನಿರುತ್ತಿದ್ದನಾ? ಗೊತ್ತಿಲ್ಲ. `ನೀನೂ.. ಡೊಳ್ಳಿನ ಪದ ಹಾಡಿ ಊರು ಉದ್ಧಾರ ಮಾಡಿದ್ದೂ ಸಾಕು. ನನ್ ಮಗನ್ನ.. ಸಾಲಿಗಿ ಹಚ್ಚು ಅಂದ್ಲು’ ಅಮ್ಮ. ನಾನು ಶಾಲೆಗೆ ಹೊರಟೆ. ಒಂದನೇಯ ತರಗತಿಗೆ ನನ್ನನ್ನು ಸೇರಿಸಿದ ಅಪ್ಪ `ಗುರುಗೋಳ.. ನಮ್ಮ ಹುಡುಗ ಬಾಳ್ ಶಾಣ್ಯಾ ಆಗಬೇಕ್. ನಮ್ಮ ವಂಶದಾಗ ಯಾರೂ ಸಾಲಿ ಕಲತಿಲ್ಲ. ಇಂವನ್ನ್ ಒಬ್ಬನ್ನಾದ್ರೂ ಶಾಣ್ಯಾನ್ ಮಾಡ್ರೀ.. ಎಂದು ನೊರಜನವರ ಎಂಬ ಹಿರಿಯ ಶಿಕ್ಷಕರ ಕಾಲಿಗೆ ಬಿದ್ದಿದ್ದ. ಅಪ್ಪ ಅಷ್ಟೊಂದು ಮ್ಯಾನ್ಲಿ ಆಗಿದ್ದರೂ ಕೆಲವೊಮ್ಮೆ ರೇಗುತ್ತಿದ್ದ. ಆದರೆ ಅಮ್ಮನನ್ನು ಕಂಡರೆ ಮಾತ್ರ ಗಪ್ಚುಪ್. ಹಾಗಂತ ಅಮ್ಮ ಘಟವಾಣಿಯಲ್ಲ. ಆದರೆ ಅಪ್ಪ ಕಟ್ಟಿಕೊಂಡ ಜೇಡರ ಬಲೆಯಿಂದ ಅವನನ್ನು ಮುಕ್ತಗೊಳಿಸಲು ಅವಳು ದುಗರ್ಿಯಾಗುತ್ತಿದ್ದಳು; ಮತ್ತೊಮ್ಮೆ ತಿಳಿ ತಿಳಿ ಗಂಗೆ. ಆದರೆ ಕುರಿ ಹಿಂಡಿನೊಂದಿಗೆ ಸಿಕ್ಕ ಸಿಕ್ಕ ಮರಗಳಿಗೆ ಕಲ್ಲು ಹೊಡೆಯುತ್ತ, ಸಂಗಟಿ, ಬೆಲ್ಲ, ಕುರಿ ಹಾಲು ಮೆಲ್ಲುತ್ತ ದಿನಕ್ಕೆ ಸರಾಸರಿ ಹದಿನೈದು ಮೈಲಿ ದೂರವನ್ನು ನಲಿಯುತ್ತ ಕ್ರಮಿಸುತ್ತಿದ್ದ ಉಡಾಳನಾದ ನಾನು ಶಾಲೆಯಲ್ಲಿ ನಿಲ್ಲದಾದೆ.
ನನ್ನನ್ನು ನಾಲ್ಕನೇ ಕ್ಲಾಸು ಪಾಸ್ ಮಾಡಿಸಿದ ಹಡಪದ ಮಾಸ್ತರ್ರು, ಅಪ್ಪನನ್ನು ಕರೆದು `ಮಲ್ಲಾ… ಮೊದ್ಲು ನಿನ್ ಮಗನ್ನ್ ಊರು ಬಿಡಿಸು. ಇಲ್ಲೇ ಇದ್ರ ನಿನ್ ಥರಾ ಕುರಿ ಮೇಯಿಸಿಕ್ಕೊಂತ ಹೊಕ್ಕಾನ… ನಾ ಹೇಳೂದ ತಿಳ್ಕೊ.. ಮೊದಲ್ಲು ಅವನ್ನ ಬ್ಯಾರೇ ಊರಾಗ ಹಾಸ್ಟೆಲ್ಲಿಗೆ ಸೇರಿಸು` ಅಂದುಬಿಟ್ಟರು. ಹಾಗಾಗಿ ಅನಿವಾರ್ಯವಾಗಿ ಅಪ್ಪ ನನ್ನನ್ನು ನಾಲ್ಕನೇ ಇಯತ್ತೆ ಮುಗಿದ ಬಳಿಕ ದೂರದ ಊರಿನಲ್ಲಿ ಓದಲು ಹಾಸ್ಟೆಲ್ಲಿಗೆ ಸೇರಿಸಿದ. ಅಪ್ಪ ಪ್ರತಿಸಾರಿ ನನ್ನ ನೋಡಲು ಬಂದಾಗಲೂ ಹಸಿರು ಟವೆಲ್ಲಿನಲ್ಲಿ ಬಾಳೆಹಣ್ಣು ಸೇರಿದಂತೆ ವಿವಿಧ ತಿನಿಸು ತರುತ್ತಿದ್ದ. ಶಾಲೆಯ ಬೆಲ್ ಬಾರಿಸಿದಾಕ್ಷಣ ಶಾಲೆಯ ಮೈದಾನದ ಮೂಲೆಯಲ್ಲಿದ್ದ ಆಲದ ಮರದ ಕೆಳಗೆ ಅಪ್ಪ ನನ್ನೊಂದಿಗೆ ಕುಳಿತು ಮಾತನಾಡುತ್ತಿದ್ದ. `ನಿಮ್ಮವ್ವಾ… ಹಂಗ್.. ವಟಾ ವಟಾ ಅಂತಾಳ. ತಲಿಗೆ ಹಚ್ಕೊಬ್ಯಾಡ. ನಾ ಅದೇನ್. ನೀ ಚೆಂದಗೆ ಓದು` ಅಂದಂವನೇ, ಪಟಾಪಟ್ಟಿ ಚಡ್ಡಿಯಿಂದ ಐವತ್ತರ ನೋಟು ಕೈಗಿಟ್ಟು ಒಮ್ಮೆ ನನ್ನನ್ನು ಅನಾಮತ್ತು ಎತ್ತಿಕೊಂಡು ಮುತ್ತಿಕ್ಕಿ ಹೊರಡುತ್ತಿದ್ದ. ಕೈ ಬೀಸುವ ದಾರಿಯಲ್ಲಿ ನಾನು ಒಳಗೊಳಗೆ ಅದೆಷ್ಟು ಅತ್ತೇನೋ ದೇವರೇ ಬಲ್ಲ. ಶಾಲೆಯಲ್ಲಿನ ಎಲ್ಲ ಹುಡುಗರು ಅಪ್ಪನ ಮೈಮೇಲೆ ಇರುತ್ತಿದ್ದ ಕರಿ ಕಂಬಳಿ, ಕಾಲಲ್ಲಿನ ಜಿರುಕಿ ಜೋಡು ಕಂಡು `ಇಂವಾ ಯಾರಲೇ.. ವಳೇ.. ಕಾಡ ಮನಶ್ಯಾ ಇದ್ದಾಂಗದಾನಲ್ಲ…’ ಅಂತಿದ್ರು. ಆದರೆ ಅಪ್ಪ ಮಾತ್ರ ಅಪ್ಪನೇ. ಬಾಯಿತುಂಬ ಎಲೆ ಅಡಿಕೆ ಹಾಕಿಕೊಂಡು ಕೈ ಬೀಸಿ ನಡೆಯತೊಡಗಿದರೆ ಕಿಲೋಮೀಟ್ರ್ ದೂರಗಳೆಲ್ಲ ಲೆಕ್ಕಕ್ಕಿಲ್ಲದ ನಡಿಗೆ. ಆರು ವರ್ಷಗಳ ಕಾಲ ನನ್ನ 5 ರಿಂದ 10ನೇಯ ತರಗತಿವರೆಗಿನ ವಿದ್ಯಾಭ್ಯಾಸ ಮುಗಿಯುವವರೆಗೆ ಅಪ್ಪ ಅಮ್ಮನಿಗೆ ತೊಂದರೆ ನೀಡಿದನೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಹರಿದು ತಿಂದದ್ದು ಮಾತ್ರ ಅಪ್ಪನನ್ನ.
ಪಕ್ಕಾ ಗಡಿನಾಡಿನ ಹುಡುಗನಾಗಿದ್ದ ನಾನು ಕುರಿ ಹಾಲು ಕುಡಿದು ಕೊಂಚ ಬಿರುಸಾಗಿದ್ದೆ; ಮೈಕೈಯಿಂದಲೂ, ಬಾಯಿಯಿಂದಲೂ. ಹಾಗಾಗಿ ,ಅದೇನೂ ಯಬರೇಶಿತನವೋ ಅಥವಾ ನನ್ನೂರಿನ ಮಣ್ಣೇ ಅಂತಹುದು ಕಾಣೇ ಒಟ್ಟಿನಲ್ಲಿ ಶಾಲೆ, ಹಾಸ್ಟೆಲ್ನಲ್ಲಿ ಕಾಲು ಕೆದರುತ್ತಿದ್ದ ಹುಡುಗರನ್ನು ತುಸು ಬಿರುಸಾಗಿಯೇ ತಡವಿಕೊಳ್ಳುತ್ತಿದ್ದೆ. ಪ್ರತಿಸಲ ಜಗಳವಾದಾಗಲೂ ಅಪ್ಪ ಅದನ್ನು ಬಗೆಹರಿಸಲು ಹಾಸ್ಟೆಲ್ಲಿಗೆ ಬರುತ್ತಿದ್ದ. ಎಲ್ಲ ಹುಡುಗರು ನನ್ನೆಡೆಗೆ ಒಂದು ತಿರಸ್ಕರಾದ ನೋಟ ಬೀರುತ್ತಿದ್ದರೇ, ಅವರೆಲ್ಲರನ್ನು ಜತೆ ಕರದುಕೊಂಡು ಹೋಗಿ, ಅವರಿಗಿಷ್ಟವೋ ಇಲ್ಲವೋ ಎಂಬುದನ್ನು ಅರಿಯದೇ ತಿಂಡಿ ತಿನಿಸು ಕೊಡಿಸಿ `ಯಪ್ಪಾ… ಜಗಳಾ ಮಾಡಬ್ಯಾಡ್ರೋ.. ಸಂಭಾಳಿಸಿಕೊಂಡ ಹೋಗ್ರೀ.. ಚೆಂದಗೆ ಕಲೀರಿ.. ‘ಎಂದು ಎಲ್ಲರ ಕೈಯಲ್ಲೂ ಚಿಲ್ಲರೆ ಕೊಟ್ಟು ಮರಳುತ್ತಿದ್ದ. ಇನ್ನೂ ಗುರುಗಳಿಗಂತೂ ಮನೆಯಿಂದ ಬರುವಾಗ ತರಹೇವಾರಿ ತರಕಾರಿ ತಂದುಕೊಟ್ಟು `ಗುರುಗೋಳ.. ನನ್ ಮಗನ್ನ…’ ಎಂದು ಕೈ ಜೋಡಿಸುತ್ತಿದ್ದ. ನನಗೆ ಅಪ್ಪನ ಕೋಪ ಕಾಣುತ್ತಿರಲಿಲ್ಲ. ಅದು ಒತ್ತರಿಸಿ ಬಂದರೂ ಅಪ್ಪ ನನ್ನ ಮೇಲೆ ರೇಗುತ್ತಿರಲಿಲ್ಲ; ರೇಗಿಲ್ಲ. ಎಸ್ಎಸ್ಎಲ್ಸಿ ಮುಗೀತು. ಮತ್ತೆ ನನ್ನ ವಾಸಸ್ಥಳಕ್ಕೆ ಮರಳಿದೆ. ಹೋಗುವಾಗ ಗಡಿನಾಡಿನ ಹುಂಬತನವಿತ್ತು. ಆದರೆ ಮರಳುವಾಗ ಮಾತ್ರ ಮಲೆನಾಡಿನ ಹೂ ಮನಸ್ಸು ಸೃಷ್ಟಿಯಾಗಿತ್ತು. ಆರು ವರ್ಷವೆಂದರೆ ಸುಮ್ಮನೇ ಮಾತಲ್ಲ. ಆ ಸುದೀರ್ಘ ಅವಧಿಯಲ್ಲಿ ನನ್ನಲ್ಲಿ ಶಾಶ್ವತ ಬದಲಾವಣೆಗಳಾಗಿದ್ದವು. ನಯ ನಾಜೂಕು ರೂಢಿಯಾಗಿತ್ತು. ತಕ್ಕಮಟ್ಟಿಗೆ ವಿದ್ಯೆ, ಅಂಕಗಳನ್ನು ಹೊತ್ತು ತಂದಿದ್ದೆ. ಅಪ್ಪ ದೇವರಿಗೆ ಈಡುಗಾಯಿ ಒಡೆಯಲಿಲ್ಲ. ಸ್ವೀಟು ಗೀಟು ಕೊಡಲಿಲ್ಲ. ಆದರೆ ಅಮ್ಮನ ಎದುರು ನನ್ನನ್ನು ನಿಲ್ಲಿಸಿ, `ನೋಡು…ಬುಡರಕಟ್ಟಿಯ ಅಷ್ಟು ಜಮೀನ್ದಾರರ ಮನೆಯಲ್ಲಿ ಸಗಣೆ ಎತ್ತಿದವನ ಮಗಾ… ಇಡೀ ಬೆಳಗಾವಿಯ ಒಂದು ತಲೆಮಾರಿಗೆ ಸಾವಿರಾರು ಡೊಳ್ಳಿನ ಹಾಡು ಕಲಿಸಿದವನ ಮಗಾ… ಮೂರು ಕುರಿಗಳಿಂದ ಆರಂಭಿಸಿ ನೂರಾರು ಕುರಿಗಳಿರುವ ಬಲಿಷ್ಠ ಹಿಂಡು ಕಟ್ಟಿದವನ ಮಗಾ…ಹತ್ತನೇ ಇಯತ್ತೆ ಪಾಸ್ ಆಗ್ಯಾನ… ನನ್ ಮನ್ಯಾಗೂನೂ ಸರಸ್ವತಿ ಕಾಲೂರಿ ನಿಂತ್ಲು..’ ಎಂದು ಎದೆಯುಬ್ಬಿಸಿದ.
ಆ ಮೇಲೆ ನನ್ನ ಡಿಗ್ರಿ ಮುಗೀತು. ಡಿ.ಇಡಿ ಆಯಿತು. ಎಂಎ ಪತ್ರಿಕೋದ್ಯಮವೂ ಆಗಿ ಹೋಯಿತು. ಒಂದೊಳ್ಳೆಯ ಕೆಲಸವೂ ಸಿಕ್ಕಿತು. ಆದರೆ ಇಷ್ಟೆಲ್ಲ ಆಗುವುದರ ನಡುವೆ ಅಪ್ಪ ಪಟ್ಟ ಪಡಿಪಾಟಲು ಮಾತ್ರ ತುಂಬ ದೊಡ್ಡದು. ಈಗ ಪ್ರತಿವಾರ ರಜೆಯ ದಿನ ಮನೆಗೆ ಹೋದಾಗ `ನನ್ನ ಜತೆ ಬಾ…’ ಅನ್ನುತ್ತೇನೆ. ಆದರೆ ಅಪ್ಪ ಮಾತ್ರ ಬಳಲಿದ ತೋಳುಗಳನ್ನು ಒಮ್ಮೆ ನೋಡಿಕೊಂಡು `ನಿಮ್ವ್ವಾ.. ಬಂದ್ರ ಕರಕೊಂಡ್ ಹೋಗ್. ಆದ್ರ ಯಪ್ಪಾ… ನಾನ್ ಮಾತ್ರ… ಶಾರಕ್ಕ ಬರೂದಿಲ್ಲ… ಅಂತಾನೆ. ಯಾಕ ಬರಲ್ಲ..? ಅಂತ ಕೇಳಿದರೆ, `ತೂಗಿ ತಿನ್ನೋ… ನಿಮ್ಮಂತಹ ನೌಕ್ರೀ ಮಾಡೋ ಮಂದಿಗೂ, ನಮಗೂ ಆಗಿ ಬರೂದಿಲ್ಲಲ್ಲೇ ಮರೀ’ ಎಂದು ನಗುತ್ತಾನೆ. ಮೊದಲಾದರೆ ಅಮ್ಮನೊಂದಿಗಿನ ಮಾತು, ಸೆಡವು, ಪಾಪಚ್ಚಿ ಪಾಪಚಿ!್ಚ ಮುದ್ದು ಎಲ್ಲವೂ ನನಗೆ ಮಾತ್ರ ಸಿಗಲಿ ಎನಿಸುತ್ತಿತ್ತು. ಆದರೆ ಈಗ್ಯಾಕೋ `ಅವೆಲ್ಲವನ್ನೂ ಅಪ್ಪನಿಗೆ ಕೊಡು. ಅಪ್ಪನ್ನ ಮಗು ತರಾ ನೋಡ್ಕೋ’ ಅನ್ನಬೇಕೆನಿಸುತ್ತದೆ. ವಯಸ್ಸಾದಂತೆ ಹುಲಿ ಕೂಡ ಮೆತ್ತಗಾಗುವಂತೆ ಅಪ್ಪನೂ ಜಬಡಿದಂತಾಗಿದ್ದಾನೆ. ಆದರೆ ಅವನ ಮುಖದ ಮೇಲಿನ ಆ ಚೆಲುವು ಕುಂದಿಲ್ಲ. ಸುಮಾರು ಎರಡು ದಶಕಗಳಿಂದ ಅವನ ಹೆಗಲ ಮೇಲೆ ಹಸಿರು ಟವೆಲ್ಲೊಂದು ಸದಾ ಇರುತ್ತದೆ. ಹೋರಾಟ, ಬಂಡಾಯ, ಹಸಿರು, ಉಸಿರಿನ ಸಂಕೇತವಾಗಿ ಅದನ್ನು ಇಟ್ಟುಕೊಂಡಿರಬೇಕು ಅಂದುಕೊಳ್ಳುತ್ತೇನೆ.
ಮನೆಯ ಪಡಸಾಲೆಯಲ್ಲಿ ಏಕಾಂಗಿಯಾಗಿ ಕುಳಿತುಕೊಳ್ಳುವ ಅಪ್ಪ, ಎದುರಾಳಿಗಳಿಂದ ಗೆಲುವು ಕಸಿದುಕೊಳ್ಳಲು ಆಟಗಾರರನ್ನು ಮೈದಾನಕ್ಕೆ ಕಳಿಸಿದ ಕೋಚ್ನಂತೆ ಕಾಣುತ್ತಾನೆ. ಅಪ್ಪನಿಂದ ನಾವು ಅನುಭವಿಸಿದ ಎಲ್ಲ ನೋವುಗಳನ್ನು ಬದಿಗಿಟ್ಟು ನೋಡುವುದಾದರೆ, ಯಾವ ಅಪ್ಪಂದಿರೂ ಕೆಟ್ಟವರಲ್ಲ. ಆದರೆ ನೋವುಗಳನ್ನೇ ಲೆಕ್ಕ ಹಾಕುತ್ತ ಕೂತರೆ ಅಪ್ಪ ಒಬ್ಬರೇ ಅಲ್ಲ; ನಮ್ಮ ಸಂಪರ್ಕಕ್ಕೆ ಬಂದ ಯಾರೊಬ್ಬರೂ ಮಾಡಿದ ಸಣ್ಣ ಉಪಕಾರವನ್ನು ನೆನಪಿಡುವ ತಾಳ್ಮೆ ಹಾಗೂ ಒಳ್ಳೆಯತನವನ್ನು ಕಳೆದುಕೊಂಡುಬಿಡುತ್ತೇವೆ. ಅನಕ್ಷರಸ್ಥನಾಗಿದ್ದರೂ, ಆರು ಶಾಸ್ತ್ರ, ಹದಿನೆಂಟು ಪುರಾಣಗಳನ್ನು ಓದದಿದ್ದರೂ, ಎದೆಯುದ್ದ ಬೆಳೆದ ಮಗನೊಂದಿಗೆ ಮಗುವಿನಂತಹ ಬಾಂಧವ್ಯ ಹೊಂದಿರುವ, ಸ್ನೇಹಿತನಂತೆ ವತರ್ಿಸುವ ಅಪ್ಪನೊಂದಿಗೆ ನಾನು ಸುಖಿ. ಕೇಳಿದಾಗ ಗರಿಗರಿ ನೋಟು ಕೊಡದಿದ್ದರೂ, ಬಿರಿಬಿರಿ ಆತ್ಮವಿಶ್ವಾಸ ತುಂಬಿ ದುಡಿಯಲು, ಬದುಕಲು ಕಲಿಸಿದ ಅಪ್ಪನ ಋಣವನ್ನು ಅವಕಾಶ ಸಿಕ್ಕರೂ ತೀರಿಸಲೊಲ್ಲೆ. ಅವನ ಋಣದ ಭಾರ ಹೊತ್ತುಕೊಂಡೇ ಈ ದೇಹ ಮಣ್ಣಾಗಲೀ. ಅಷ್ಟಕ್ಕೂ ಬಟ್ಟೆ, ಅನ್ನ, ಮನೆ ಇವಿಷ್ಟೇನಾ? ನೀ ಮಾಡಿದ ಉಪಕಾರಗಳು. ದಶಜನ್ಮವೆತ್ತಿದರೂ ತೀರಿಸಲಾರೆನೇನೋ. ನಿನ್ನ ನೆನೆಯೋಕೆ ಒಂದೇ ದಿನ ಸಾಕಾ ಅಪ್ಪಾ…….






ಮಲ್ಲಿಕಾರ್ಜುನ್…ಅಪ್ಪನ ಬಗ್ಗೆ ನಿಮ್ಮ ನೆನಪಿನ ಅಂಗಳದಲ್ಲಿ ತುಂಬಾ ಬಣ್ಣಬಣ್ಣದ ನೆನಪುಗಳು ಇವೆ… ಓದಿ ತುಂಬಾ ಖುಷಿಯಾಯಿತು.
Tumba olleya lekhana.
The best tributes to the father’s day.