
-ನಾ ದಿವಾಕರ
42 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಒಂದು ಮಸೂದೆ ಮತ್ತು ಆಳ್ವಿಕರ ಚಿಂತನಾ ಕ್ರಮದಲ್ಲಿ ಎಂದೂ ಎಲ್ಲಿಯೂ ಕಾಣಿಸಿಕೊಳ್ಳದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಇವರೆಡರ ಬಗ್ಗೆಯೂ ರಾಷ್ಟ್ರ ಮಟ್ಟದಲ್ಲಿ ಜನದನಿಯನ್ನು ಮೂಡಿಸಿ, ಆಳುವ ಪಕ್ಷವನ್ನೂ, ರಾಜಕೀಯ ನಾಯಕರನ್ನೂ ಮತ್ತು ಕೊಂಚ ಮಟ್ಟಿಗೆ ಪ್ರಜೆಗಳ ಪ್ರಜ್ಞೆಯನ್ನೂ ಬಡಿದೆಬ್ಬಿಸಿದ ಅಣ್ಣಾ ಹಜಾರೆ ಈಗ ತಮಗೇ ಅರಿವಿಲ್ಲದಂತೆ ತಮ್ಮದೇ ಆದ ಜಾಲದಲ್ಲಿ ಸಿಲುಕಿ ಕವಲು ಹಾದಿಯಲ್ಲಿ ಬಂದು ನಿಂತಿದ್ದಾರೆ. ಈ ಟೀಕೆ ತೀಕ್ಷ್ಣ ಎನಿಸಬಹುದು. ಅವಾಸ್ತವ ಎನಿಸಲೂಬಹುದು. ಆದರೆ ವಸ್ತುನಿಷ್ಠವಾಗಿ ಯೋಚಿಸಿ ನೋಡಿದಾಗ ಅಣ್ಣಾ ಹಜಾರೆ ತಮ್ಮ ಹೋರಾಟದ ಮೂಲ ಸ್ವರೂಪದಿಂದ ಬಹಳ ದೂರ ಸಾಗಿರುವುದು ಸ್ಪಷ್ಟವಾಗುತ್ತದೆ. ಏಪ್ರಿಲ್ನಲ್ಲಿ ಪ್ರಥಮ ಬಾರಿಗೆ ಅಣ್ಣಾ ಸತ್ಯಾಗ್ರಹದಲ್ಲಿ ತೊಡಗಿದ್ದು ಸಮಸ್ತ ಪ್ರಜೆಗಳಿಗೆ ಒಪ್ಪಿಗೆಯಾಗುವಂತಹ ಒಂದು ಜನಲೋಕಪಾಲ್ ಮಸೂದೆಯ ಜಾರಿಗಾಗಿ. ಸಕರ್ಾರ ರೂಪಿಸಿದ್ದ ಲೋಕಪಾಲ್ ಮಸೂದೆಯಲ್ಲಿದ್ದ ನ್ಯೂನತೆಗಳನ್ನು ಪರಿಗಣಿಸಿ, ಭ್ರಷ್ಟಾಚಾರ ನಿಯಂತ್ರಣಕ್ಕೆ ಸಮಗ್ರತೆ, ಸಮರ್ಪಕತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ತಾವೇ ರಚಿಸಿದ್ದ ಜನಲೋಕಪಾಲ್ ಮಸೂದೆಯನ್ನು ಯಥಾವತ್ ಜಾರಿಗೊಳಿಸಲು ಆಗ್ರಹಿಸಿ ಅಣ್ಣಾ ಸತ್ಯಾಗ್ರಹ ಹೂಡಿದ್ದರು. ತದನಂತರದ ಬೆಳವಣಿಗೆಗಳ ವಿವರಣೆ ಇಲ್ಲಿ ಅನಗತ್ಯ. ಆದರೆ ಸೂಕ್ಷ್ಮವಾಗಿ ಹೇಳುವುದಾದರೆ ಅಣ್ಣಾ ತಂಡದ ಮೂಲಭೂತ ಬೇಡಿಕೆಗಳೆಂದರೆ ಪ್ರಧಾನಮಂತ್ರಿಗಳನ್ನು, ನ್ಯಾಯಾಂಗದ ಉನ್ನತಾಧಿಕಾರಿಗಳನ್ನು ಮತ್ತು ಸಂಸತ್ತಿನ ಒಳಗೆ ಸಂಸದರ ವರ್ತನೆಯನ್ನು ಲೋಕಪಾಲ್ ವ್ಯಾಪ್ತಿಗೆ ಒಳಪಡಿಸುವುದು. ಈ ಮೂರು ಬೇಡಿಕೆಗಳನ್ನು ಒಪ್ಪದೆ ಹೋದಲ್ಲಿ ಆಮರಣಾಂತ ಉಪವಾಸ ಮಾಡುವುದಾಗಿ ಘೋಷಿಸಿ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಅವರ ಹನ್ನೆರಡು ದಿನಗಳ ಉಪವಾಸ ನಿರಶನ ಸಾಧಿಸಿದ್ದೇನು ? ಸಕರ್ಾರ ಎಚ್ಚೆತ್ತುಕೊಂಡು ಮಧ್ಯ ಪ್ರವೇಶಿಸಿ ನಿರಶನವನ್ನು ಕೊನೆಗೊಳಿಸುವ ಉದ್ದೇಶದಿಂದ ಕೆಲವು ಷರತ್ತುಗಳಿಗೆ ಒಪ್ಪಿಕೊಂಡಿತ್ತು. ಆದರೆ ಈ ಮೇಲಿನ ಮೂರೂ ಷರತ್ತುಗಳು ನೇಪಥ್ಯಕ್ಕೆ ಸರಿದಿದ್ದವು. ಈ ಬೇಡಿಕೆಗಳ ಸುತ್ತಲಿನ ವಾದವಿವಾದಗಳೇನೇ ಇದ್ದರೂ ಸಕರ್ಾರದ ವತಿಯಿಂದ ಇವುಗಳನ್ನು ಮಾನ್ಯ ಮಾಡುವ ಯಾವುದೇ ಆಶ್ವಾಸನೆ ಹೊರಬರಲಿಲ್ಲ. ಬದಲಾಗಿ ಅಷ್ಟೇನೂ ಪರಿಣಾಮಕಾರಿಯಲ್ಲದ ಮೂರು ಷರತ್ತುಗಳಿಗೆ ಸಕರ್ಾರ ಮನ್ನಣೆ ನೀಡಿತ್ತು.
ಅಸ್ಪಷ್ಟ ನಿಲುವುಗಳು
ಇರಲಿ, ಸಕರ್ಾರ ತನ್ನ ಹಠಮಾರಿ ನಿಲುವಿನಿಂದ ಹಿಂದೆ ಸರಿದು ಅಣ್ಣಾ ತಂಡದ ಷರತ್ತುಗಳಿಗೆ ಮಣಿದಿದ್ದು ಐತಿಹಾಸಿಕ ಸಂದರ್ಭವೇ ಆದರೂ ಈ ವಿಜಯೋತ್ಸವದ ನಂತರ ಅಣ್ಣಾ ಮಾಡಬೇಕಾಗಿದ್ದೇನು ? ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಒಪ್ಪಿತ ಷರತ್ತುಗಳಿಗೆ ಅನುಗುಣವಾಗಿ ಲೋಕಪಾಲ್ ಮಸೂದೆಯನ್ನು ಮಂಡಿಸಲಾಗುವುದು ಎಂದು ಸಕರ್ಾರ ಹಾಗೂ ವಿರೋಧ ಪಕ್ಷಗಳು ಆಶ್ವಾಸನೆ ನೀಡಿರುವುದರ ಹಿನ್ನೆಲೆಯಲ್ಲಿ ಅಣ್ಣಾ ಚಳುವಳಿ ಸ್ಥಗಿತಗೊಂಡಿದೆ. ದೇಶದ ಯುವಜನತೆಯಲ್ಲಿ ಸಂಚಲನ ಮೂಡಿಸಿದ್ದ ಈ ಅಂದೋಲನ ತನ್ನ ಉತ್ಸಾಹ ಮತ್ತು ಉನ್ಮಾದಗಳನ್ನು ಕಾಪಾಡಿಕೊಂಡು ಹೋಗುವಲ್ಲಿ ವಿನೂತನ ಪ್ರಯತ್ನಗಳನ್ನು ಮಾಡಬಹುದಾಗಿತ್ತು. ದೇಶಾದ್ಯಂತ ಪ್ರಚಾರಾಂದೋಲನಗಳನ್ನು ಕೈಗೊಳ್ಳುವ ಮೂಲಕ ಭ್ರಷ್ಟಾಚಾರದ ಮೂಲ ಕಾರಣಗಳನ್ನು ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಕುರಿತು ಜನತೆಯಲ್ಲಿ ಪ್ರಜ್ಞೆ ಮೂಡಿಸಬಹುದಿತ್ತು. ಭ್ರಷ್ಟಾಚಾರ ಎಂದರೆ ಕೇವಲ ಸಕರ್ಾರಿ ಕಛೇರಿಗಳಲ್ಲಿ ನಡೆಯುವ ಲಂಚಗುಳಿತನ ಮಾತ್ರವಲ್ಲ ಅದಕ್ಕೂ ಮೀರಿದ ವ್ಯಾಪ್ತಿ ಮತ್ತು ಹರಹು ಈ ಪಿಡುಗಿಗೆ ಇದೆ ಎಂಬ ಸಂಗತಿಯನ್ನು ದೇಶದ ಜನತೆಗೆ ತಿಳಿಸಬಹುದಿತ್ತು.ಇಲ್ಲಿ ಭ್ರಷ್ಟಾಚಾರವನ್ನು ಎರಡು ವಿಧಗಳಾಗಿ ಪರಿಗಣಿಸಬಹುದು. ಮೊದಲನೆಯದಾಗಿ, ದೇಶದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಕಾನೂನು ಬದ್ಧವಾಗಿ ನಡೆಯಲೇ ಬೇಕಾದ ಕೆಲವು ಕ್ರಿಯೆಗಳ ಸಂಬಂಧ ಪ್ರಜೆಗಳು ಮತ್ತು ಆಡಳಿತ ವ್ಯವಸ್ಥೆಯ ನಡುವೆ ಏರ್ಪಡುವ ಅನೈತಿಕ ವ್ಯವಹಾರಗಳು. ಇದನ್ನು ಲಂಚಗುಳಿತನ, ಸ್ವಜನಪಕ್ಷಪಾತ ಇತ್ಯಾದಿಗಳಾಗಿ ವಿಂಗಡಿಸಬಹುದು. ಆಥರ್ಿಕ ನೆಲೆಗಟ್ಟಿನಲ್ಲಿ ವ್ಯಕ್ತವಾಗುವ ಈ ಪ್ರವೃತ್ತಿ ಆಡಳಿತ ವ್ಯವಸ್ಥೆಯೊಳಗೇ ನಿಮರ್ಿತವಾಗುವಂತಹ ಒಂದು ವಿದ್ಯಮಾನವಾಗಿದ್ದು, ಸರ್ವವ್ಯಾಪಿಯಾಗಿ ಕಂಡುಬರುತ್ತದೆ. ಭ್ರಷ್ಟಾಚಾರದ ಈ ಸ್ವರೂಪ ಸಾಮಾನ್ಯವಾಗಿ ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ಕಾಡುತ್ತದೆ. ಆಳ್ವಿಕರಿಗೆ ಮತ್ತು ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಅಧಿಕಾರಶಾಹಿಗೆ ಭ್ರಷ್ಟಾಚಾರದ ಈ ಸಾಂಸ್ಥಿಕ ಸ್ವರೂಪ ಪ್ರಜಾ ಸಮೂಹಗಳನ್ನು ನಿಯಂತ್ರಿಸುವ ಒಂದು ಪ್ರಬಲ ಅಸ್ತ್ರವಾಗಿ ಪರಿಣಮಿಸುತ್ತದೆ. ಸಕರ್ಾರಿ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವೆನಿಸುವ ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಅನಧಿಕೃತ ಶುಲ್ಕ ವಿಧಿಸುವ ಒಂದು ಪರಂಪರೆ ಈ ಭ್ರಷ್ಟಾಚಾರದ ಅಂಶಿಕ ಭಾಗವಾಗಿ ರೂಪುಗೊಂಡು ಸಾರ್ವಜನಿಕರ ಗಮನಕ್ಕೆ ಬರುತ್ತದೆ.ಇದನ್ನೂ ಮೀರಿದ ಒಂದು ಭ್ರಷ್ಟ ಪರಂಪರೆ ಎಂದರೆ ಧಾಮರ್ಿಕ ಸಂಸ್ಥೆಗಳಲ್ಲಿ, ದೇವಾಲಯಗಳಲ್ಲಿ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಮತ್ತು ಸಾಂಸ್ಕೃತಿಕ ವಲಯದಲ್ಲಿ , ವೈದ್ಯಕೀಯ ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ಬೇರೂರಿರುವ ಭ್ರಷ್ಟಾಚಾರ. ಈ ಭ್ರಷ್ಟಾಚಾರವೂ ಜನಸಾಮಾನ್ಯರ ದೈನಂದಿನ ಜೀವನದ ಒಂದು ಭಾಗವಾಗಿಯೇ ಬೆಳೆದುಬಂದಿದೆ. ಯಾವುದೇ ಮಾನದಂಡವಿಲ್ಲದೆ, ನಿಯಂತ್ರಣ-ನಿಗ್ರಹ ಇಲ್ಲದೆ ನಿಗದಿಪಡಿಸಲಾಗುವ ಶೈಕ್ಷಣಿಕ ಶುಲ್ಕ-ಡೊನೇಷನ್-ಕ್ಯಾಪಿಟೇಷನ್ ಶುಲ್ಕ ಒಂದೆಡೆಯಾದರೆ, ಜನಸಾಮಾನ್ಯರ ಧಾಮರ್ಿಕ ಶ್ರದ್ಧೆಗಳಿಗೇ ಮಾರುಕಟ್ಟೆ ಮೌಲ್ಯಗಳನ್ನು ನಿಗದಿಪಡಿಸಿ ದೇವಾಲಯಗಳಲ್ಲಿ ಪೂಜಾ ವಿಧಿವಿಧಾನಗಳಿಗೆ ನಿಗದಿ ಪಡಿಸುವ ಶುಲ್ಕಗಳು ಮತ್ತೊಂದೆಡೆ. ದೇಶದ ಆಡಳಿತ ವ್ಯವಸ್ಥೆ ತನ್ನ ಅರ್ಥವ್ಯವಸ್ಥೆಗನುಗುಣವಾಗಿ ನಿಗದಿಪಡಿಸುವ ವರಮಾನ ಆಧಾರಿತ ತೆರಿಗೆ ಪದ್ಧತಿಯ ಹಿನ್ನೆಲೆಯಲ್ಲಿ ನೋಡಿದಾಗ, ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಸಕ್ರಿಯವಾಗಿರುವ ವಿವಿಧ ಕ್ಷೇತ್ರಗಳ ಉತ್ತರದಾಯಿತ್ವ ಮತ್ತು ನೈತಿಕ ಹೊಣೆಗಾರಿಕೆಯ ದೃಷ್ಟಿಯಿಂದ ನೋಡಿದಾಗ ಈ ವಿದ್ಯಮಾನಗಳು ಅಕ್ರಮ ಎಂದೆನಿಸದಿರದು. ಈ ಗಂಭೀರ ವಿದ್ಯಮಾನಗಳ ಬಗ್ಗೆ ಅಣ್ಣಾ ತಂಡ ಯಾವುದೇ ಸ್ಪಷ್ಟ ನಿಲುವು ತಾಳದಿರುವುದು ಇಡೀ ಚಳುವಳಿಯ ವ್ಯಾಪ್ತಿ ಮತ್ತು ಆಳವನ್ನು ಪ್ರಶ್ನಾರ್ಹವಾಗಿಸುತ್ತದೆ. ಜಾಗತೀಕರಣದ ಸಂದರ್ಭದಲ್ಲಿ ದೇಶದ ಉದ್ಗಗಲಕ್ಕೂ ಹರಡಿರುವ ಎನ್ಜಿಒ ರಾಜಕೀಯದಲ್ಲಿ ಅಂತರ್ಗತವಾಗಿರುವ ಭ್ರಷ್ಟಾಚಾರದ ಸ್ವರೂಪವೇ ಇಂದು ಚಚರ್ೆಗೊಳಗಾಗಬೇಕಿದೆ. ಆದರೆ ಈವರೆಗೆ ಕಂಡುಬಂದಿರುವ ಸಂಕಥನಗಳಲ್ಲಿ ಈ ಕುರಿತ ಚಚರ್ೆ ಗಂಭೀರ ಸ್ವರೂಪದಲ್ಲಿ ಕಂಡುಬಂದಿಲ್ಲ. ಭ್ರಷ್ಟಾಚಾರ ನಿಯಂತ್ರಣದ ದೃಷ್ಟಿಯಿಂದ ದೇಶದ ಯುವಜನತೆಗೆ ಐಕಾನ್ ಆಗಿರುವ ಅಣ್ಣಾ ಹಜಾರೆ ಈ ಬಗ್ಗೆ ಹೆಚ್ಚು ಆಸಕ್ತಿ ತೋರದಿರುವುದು ಸೋಜಿಗವೇ ಆದರೂ ಅಚ್ಚರಿಯೇನಲ್ಲ. ಏಕೆಂದರೆ ಅಣ್ಣಾ ತಂಡದ ಸದಸ್ಯರೇ ಎನ್ಜಿಒ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಎನ್ಜಿಒ ರಾಜಕಾರಣದ ಬಗ್ಗೆ ಸವಿಸ್ತಾರವಾಗಿ ಉಲ್ಲೇಖಿಸಲು ಇಲ್ಲಿ ಸಾಧ್ಯವಿಲ್ಲವಾದರೂ, ಸಂಕ್ಷಿಪ್ತವಾಗಿ ಹೇಳುವುದಾದರೆ, ವಿದೇಶಿ ಹಣದ ಪ್ರಭಾವದಿಂದ ಭಾರತದಲ್ಲಿ ಬೇರೂರಿರುವ ಲಕ್ಷಾಂತರ ಎನ್ಜಿಒಗಳ ಅಕ್ರಮ ವ್ಯವಹಾರಗಳು, ತೆರಿಗೆ ವಂಚನೆ, ಜನಪರ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ, ಸಕರ್ಾರದ ಯೋಜನೆಗಳ ಅನುಷ್ಠಾನಕ್ಕೆ ನೆರವಾಗುವ ನೆಪದಲ್ಲಿ ಹಣ ದುರುಪಯೋಗ ಇತ್ಯಾದಿ ಚಟುವಟಿಕೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ದುರಾದೃಷ್ಟವಶಾತ್ ಅಣ್ಣಾ ತಂಡದ ಪ್ರಣಾಳಿಕೆಯಲ್ಲಿ ಈ ವಿದ್ಯಮಾನಗಳಿಗೆ ಸ್ಥಾನವೇ ಇರುವುದಿಲ್ಲ.
ಅರಾಜಕೀಯ ರಾಜಕಾರಣ
ಅಣ್ಣಾ ತಂಡದ ಒಂದು ನ್ಯೂನತೆ ಎಂದರೆ ತನ್ನ ಹೋರಾಟಕ್ಕೆ ಒಂದು ನಿದರ್ಿಷ್ಟ ಚೌಕಟ್ಟನ್ನು ಒದಗಿಸದೆ ಇರುವುದು. ತಮ್ಮ ಮೂಲ ಧ್ಯೇಯ ಭ್ರಷ್ಟಾಚಾರದ ನಿಮರ್ೂಲನ ಎಂದು ಘೋಷಿಸುತ್ತಾ ರಂಗ ಪ್ರವೇಶ ಮಾಡಿದ ಟೀ ಆಣ್ಣಾ ಭ್ರಷ್ಟಾಚಾರದ ಮೂಲವನ್ನೇ ಈವರೆಗೂ ಪ್ರಶ್ನಿಸದಿರುವುದು ಇಲ್ಲಿ ಗಮನಾರ್ಹ. ಜನಲೋಕಪಾಲ್ ಮಸೂದೆ ಜಾರಿಗೊಂಡ ನಂತರ ಚುನಾವಣಾ ಸುಧಾರಣೆ ಮತ್ತಿತರ ವಿಚಾರಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳುವುದೇ ಆಂದೋಲನದ ಸಮಗ್ರತೆಯ ಕೊರತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಅಣ್ಣಾ ತಂಡದ ಈ ಅಸ್ಪಷ್ಟ ನಿಲುವುಗಳೇ ಆಳ್ವಿಕರಿಗೆ ಅನುಕೂಲಕರವಾಗಿ ಪರಿಣಮಿಸುತ್ತದೆ. ಈ ಅಸ್ಪಷ್ಟತೆಯ ನೇರ ಪರಿಣಾಮವೆಂದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಆಳುವ ವರ್ಗಗಳ ಪ್ರತಿನಿಧಿಗಳನ್ನೇ ಅವಲಂಬಿಸುವ ಸ್ಥಿತಿಗೆ ಬಂದು ತಲುಪುವುದು. ಅಣ್ಣಾ ತಂಡ ಈಗ ಇದೇ ತಂತ್ರ ಅನುಸರಿಸುತ್ತಿದೆ. ಹರಿಯಾಣದ ಹಿಸ್ಸಾರ್ ಉಪಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಜನಲೋಕಪಾಲ್ಗೆ ತಮ್ಮ ಸಮ್ಮತಿ ವ್ಯಕ್ತಪಡಿಸಿದ ಪ್ರಮಾಣೀಕರಿಸುವಂತೆ ಅಣ್ಣಾ ತಂಡ ಒತ್ತಾಯಿಸುತ್ತಿದೆ. ಹೀಗೆ ಸಮ್ಮತಿ ನೀಡದ ಪಕ್ಷಗಳಿಗೆ ಮತ ನೀಡಬಾರದೆಂದೂ ಜನರನ್ನು ಪ್ರೇರೇಪಿಸುತ್ತಿದೆ. ಇಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಪ್ರಮಾಣ ಪತ್ರ ನೀಡಿಲ್ಲವಾಗಿ ಕಾಂಗ್ರೆಸ್ಗೆ ಮತ ನೀಡಬಾರದೆಂದು ಪ್ರಚಾರ ಮಾಡಲಾಗುತ್ತಿದೆ. ಅಣ್ಣಾ ತಂಡಕ್ಕೆ ಭಾರತದ ರಾಜಕೀಯ ವ್ಯವಸ್ಥೆಯ ಮೂಲ ಪರಿಕಲ್ಪನೆಯೇ ಇಲ್ಲವೇನೋ ಎಂದು ಕಾಣುತ್ತಿದೆ. ಇಲ್ಲಿ ಅಣ್ಣಾ ತಂಡ ಕೆಲವು ನಿದರ್ಿಷ್ಟ ಊಹೆಗಳಿಗೆ ಬದ್ಧವಾಗಿದೆ ಎನಿಸುತ್ತದೆ. ಜನಲೋಕಪಾಲ್ಗೆ ಸಮ್ಮತಿಸುವ ಪಕ್ಷಗಳು ಭ್ರಷ್ಟಾಚಾರದ ನಿಮೂರ್ಲನೆಗಾಗಿ ಬದ್ಧವಾಗಿರುತ್ತವೆ, ಚುನಾವಣೆಯ ಸಂದರ್ಭದಲ್ಲಿ ಈ ಪಕ್ಷಗಳು ಯಾವುದೇ ಭ್ರಷ್ಟ ವ್ಯವಹಾರಗಳಲ್ಲಿ ಪಾಲ್ಗೊಳ್ಳುವುದಿಲ್ಲ, ಈ ಪಕ್ಷಗಳ ನಿರ್ವಹಣೆ ಮತ್ತು ಕಾರ್ಯವೈಖರಿ ಪಾರದರ್ಶಕವಾಗಿರುತ್ತದೆ, ಇಂತಹ ಪಕ್ಷಗಳ ಅಭ್ಯಥರ್ಿಗಳು ಸಂವಿಧಾನ ನಿಷ್ಠರಾಗಿರುತ್ತಾರೆ ಇತ್ಯಾದಿ ಇತ್ಯಾದಿ. ಈ ಊಹೆಗಳಿಗೆ ಆಧಾರವೇನೂ ಇಲ್ಲವಾದರೂ ಹಜಾರೆ ಆಂದೋಲನ ಸೃಷ್ಟಿಸಿರುವ ಭ್ರಮಾಲೋಕದಲ್ಲಿ ಇವುಗಳು ವಿಜೃಂಭಿಸುತ್ತವೆ. ಆದರೆ ಅಣ್ಣಾ ತಂಡದ ತಂತ್ರಗಳ ಅಪಾಯ ಇರುವುದು ಇಲ್ಲೇ. ತಮ್ಮ ಪಕ್ಷದ ಇತಿಹಾಸದಲ್ಲಿ ಎಂದೂ ಕಂಡಿರದ ಪ್ರಾಮಾಣಿಕತೆ, ಪಾರದರ್ಶಕತೆಯ ಪ್ರಮಾಣಪತ್ರವನ್ನು ಕೆಲವು ರಾಜಕೀಯ ಪಕ್ಷಗಳು ಅಣ್ಣಾ ತಂಡದ ಈ ಕ್ರಮದ ಮೂಲಕ ಪಡೆದುಕೊಳ್ಳುವ ಅಪಾಯವನ್ನು ಗ್ರಹಿಸುವುದಾದರೂ ಹೇಗೆ ? ಇತ್ತೀಚೆಗೆ ಬಿನಾಯಕ್ ಸೆನ್ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋಟರ್್ ನಕ್ಸಲ್ ಸಿದ್ಧಾಂತದ ಸಾಹಿತ್ಯ ಹೊಂದಿರುವವರೆಲ್ಲರೂ ಮಾವೋವಾದಿಗಳಲ್ಲ, ಗಾಂಧಿ ಸಾಹಿತ್ಯ ಹೊಂದಿರುವವರೆಲ್ಲರೂ ಗಾಂಧಿವಾದಿಗಳಲ್ಲ ಎಂದು ಹೇಳಿತ್ತು. ಇದನ್ನೇ ಆಧರಿಸಿ ಹೇಳುವುದಾದರೆ ಅಣ್ಣಾ ಟೋಪಿ ಧರಿಸಿದವರೆಲ್ಲರೂ ಪ್ರಾಮಾಣಿಕರಲ್ಲ ಎಂದೂ ಹೇಳಬಹುದಲ್ಲವೇ ? ಆದರೆ ಹಿಸ್ಸಾರ್ ಚುನಾವಣೆಯ ಸಂದರ್ಭದಲ್ಲಿ ಕೆಲವು ರಾಜಕೀಯ ಪಕ್ಷಗಳು ಈ ಪ್ರಾಮಾಣಿಕತೆಯನ್ನು ಅಣ್ಣಾ ಕೃಪೆಯಿಂದ ಪಡೆದುಕೊಳ್ಳುತ್ತಿವೆ. ಇದೇ ತಂತ್ರವನ್ನು ಮುಂಬರುವ ಚುನಾವಣೆಗಳಲ್ಲೂ ಅನುಸರಿಸುವುದಾಗಿ ಅಣ್ಣಾ ತಂಡ ಹೇಳುತ್ತಿದೆ. ಇದರ ಪರಿಣಾಮ ಏನಾಗಬಹುದು ? ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ರೂಪುಗೊಂಡ ಒಂದು ಆಂದೊಲನ ಕ್ರಮೇಣ ಕಾಂಗ್ರೆಸ್ ವಿರೋಧಿ ಚಳುವಳಿಯಾಗಿ ರೂಪುಗೊಳ್ಳುತ್ತದೆ. ಚುನಾವಣೆಗಳಲ್ಲಿ ಕಾಂಗ್ರೆಸ್ನ ಸೋಲು ಗೆಲುವುಗಳು ಒತ್ತಟ್ಟಿಗಿರಲಿ, ಇತರ ರಾಜಕೀಯ ಪಕ್ಷಗಳು ಈ ಬೆಳವಣಿಗೆಯ ಲಾಭ ಪಡೆಯುತ್ತವೆ. ಈಗಾಗಲೇ ಬಿಜೆಪಿ ಈ ನಿಟ್ಟಿನಲ್ಲಿ ತನ್ನದೇ ಆದ ಕಾರ್ಯತಂತ್ರ ರೂಪಿಸಿದೆ. ತಮ್ಮ ಉಪವಾಸ ನಿರಶನದ ಮೂಲಕ ಕೇಂದ್ರ ಸಕರ್ಾರವನ್ನೇ ಮಂಡಿಯೂರುವಂತೆ ಮಾಡಿದ ಮಹಾನ್ ಗಾಂಧಿವಾದಿ ನಾಯಕ ಹಜಾರೆ ಕಾಂಗ್ರೆಸ್ಗೆ ಮತ ಚಲಾಯಿಸಬೇಡಿ ಎಂದು ಹೇಳಿದಾಗ ಸ್ವಾಭಾವಿಕವಾಗಿಯೇ ಪ್ರಧಾನ ವಿರೋಧ ಪಕ್ಷ ಇದರ ಉಪಯೋಗ ಪಡೆದುಕೊಳ್ಳುತ್ತದೆ. ಆದರೆ ಇದರಿಂದ ಭ್ರಷ್ಟಾಚಾರ ನಿಮರ್ೂಲನೆಯಾಗುವುದೇ ? ಅಥವಾ ಸಾಂಸ್ಥಿಕ ಭ್ರಷ್ಟಾಚಾರವನ್ನು ಮತ್ತೊಂದು ರೀತಿಯಲ್ಲಿ ಕಾಪಾಡಿಕೊಂಡು ಹೋಗಲು ಉದಾರವಾದಿ ಬಂಡವಾಳ ವ್ಯವಸ್ಥೆಗೆ ಮತ್ತೊಂದು ಆಯಾಮ ದೊರೆಯುವುದೇ ? ಆರೆಸ್ಸೆಸ್-ಜನಸಂಘ ಫ್ಯಾಸಿಸ್ಟ್ ಆದರೆ ನಾನೂ ಒಬ್ಬ ಫ್ಯಾಸಿಸ್ಟ್ ಎಂಬ ಉನ್ಮಾದ ಹೇಳಿಕೆಯ ಮೂಲಕ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ಸಿಲುಕಿ, ಜನಸಂಘವನ್ನು ದೇಶದ ಅಧಿಕಾರದ ಗದ್ದುಗೆಯ ಬಳಿ ತಂದು ನಿಲ್ಲಿಸಿದ ಸಂಪೂರ್ಣ ಕ್ರಾಂತಿಯ ಹರಿಕಾರ ಜೆಪಿ ಮಾಡಿದ ಪ್ರಮಾದವನ್ನೇ ಅಣ್ಣಾ ಹಜಾರೆ ಸಹ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ.







ಹೌದು, ಸರ್ ಭ್ಷಷ್ಟಾಚಾರ ಅನ್ನುವುದು ಜನಜೀವನದ ಎಲ್ಲಾ ಮೂಲೆಗಳನ್ನು ಆವರಿಸಿದೆ. ಅದು ಸಾರ್ವಜನಿಕ ಗ್ರಂಥಾಲಯ, ನ್ಯಾಯಬೆಲೆ ಅಂಗಡಿ, ದೇವಮಂದಿರ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳು, ಭವಿಷ್ಯದ ಪ್ರಜೆಗಳನ್ನು ರೂಪಿಸಬೇಕಾಗಿರುವ ಶೈಕ್ಷಣಿಕ ಸಂಸ್ಥೆಗಳು ಎಲ್ಲೆಡೆಯೂ ತುಂಬಿ ತುಳುಕುತ್ತಿದೆ. ಆದರೆ ಅಣ್ಣಾ ಅವರು ಈ ಚಳವಳಿಗೆ ಇಲ್ಲಿ ತಾವು ಹೆಕ್ಕಿ ಮುಂದಿಟ್ಟಂತಹ ವ್ಯಾಪ್ತಿ ಮತ್ತು ಆಳವನ್ನು ಒದಗಿಸಲು ಮುಂದಾಗಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಣ್ಣಾ ಅವರಂತಹ ವ್ಯಕ್ತಿಗಳು ದುರ್ಲಭ. ಅವರು ತಮ್ಮ ಸತ್ಯಾಗ್ರಹ ಚಳವಳಿಯ ಪ್ರನಾಳಿಕೆಯಲ್ಲಿ ಭ್ರಷ್ಟಾಚಾರದ ಮೂಲ ಬೇರನ್ನು ಹುಡುಕಿ ಎಬ್ಬಿ ಹಾಕಲು ಸಹಾಯಕವಾಗುವಂತಹ ಗುದ್ದಲಿಯಂತಹ ತಂತ್ರವನ್ನು ಅಳವಡಿಸಿ ಯುವಜನಾಂಗಕ್ಕೆ ಮಾರ್ಗದರ್ಶಕರಾಗಬೇಕಿದೆ.
ಸ್ವಾಮೀ, ಹಜಾರೆ ಅವ್ರ ಇತಿಹಾಸ ನೋಡಿ. ಅವರ ಬೆಳವಣಿಗೆ ಹಿಂದೆ ಕೆಲಸ ಮಾಡಿರುವ ಮಂದಿಯ ಹಿನ್ನೆಲೆ ಗಮನಿಸಿ. ಕಾಂಗ್ರೆಸ್ ವಿರೋಧಿ ಹಜಾರೆ ಆತ್ಮ ಇಂದಲ್ಲ ನಾಳೆ ಈ ನಿಲುವು ತಳೆಯುತ್ತದೆ ಎಂಬ ವಿಶ್ವಾಸ ನಮಗೆ ಮೊದಲೇ ಇತ್ತು. ಇವರಿಗೆ ಸಮಾಜದ ಸರ್ವರ ಹಿತ ಬೇಕಾಗಿಲ್ಲ. ಅವರ ಆರ್ ಎಸ್ಸೆಸ್ ಪ್ರೇರಿತ ಚಿಂತನೆಯ ಹಿತ ಮುಖ್ಯ. ಇವರಿಗೆ ಗಾಂಧಿ ಗೊತ್ತಿಲ್ಲ. ಗಾಂಧೀ ನಾಮ ಇವರ ಪಾಲಿಗೆ ರಕ್ಷಾಕವಚ ಅಷ್ಟೇ.
Neither individuals nor movements are perfect no use finding faults,what is more important is better law and its proper implementation.
ಒಳ್ಳೆಯ ವಿಷ್ಲೇಷಣೆ ಮತ್ತು ಒಳನೋಟಗಳಿಂದ ಕೂಡಿದ ಬರಹ. ಮೊನ್ನೆ ಅಣ್ಣಾ ಹೇಳಿಕೆ ಕೊಟ್ಟಾಗ ನನಗೂ ಅನಿಸಿತು, ಅವರ ಮುಗ್ಧತನ ಮತ್ತು ತಾತ್ವಿಕ ಸಿಟ್ಟು ಇವೆಲ್ಲವೂ ಬೇರೆಯವರ ಸ್ವಾಥ ಕ್ಕೆ ದುರುಪಯೋಗವಾಗುತ್ತಿದೆ ಎಂದು ಅನಿಸತೊಡಗಿದೆ.