ಬಸವರಾಜ ಹೂಗಾರ
( ಹೈದ್ರಾಬಾದ್ ಕರ್ನಾಟಕ ಕುರಿತಾದ ಕವಿತೆ)
ಲೋಕವೆಂಬ ಲೋಕದಲಿ
ಎಳೆದ ಕೆಂಪುಗೆರೆ
ಓಣಿ, ಉಸಿರು ಗಾಳಿಗೂ ಕಷ್ಟ
ಸಂದಿ ಕಿಟಕಿಯಲಿ ಕಾಮಕಿಡಿ
ಬಸಿದು ಬದುಕುವ ಹೃದಯ ಹೂವು.
ಬಣ್ಣವಿದೆ
ಕಣ್ಣು ಇದೆ ಕಾಣುವುದಿಲ್ಲ
ಸುಟ್ಟ ಜೀವ ಸುಣ್ಣದಲಿ
ಹೊಳೆವ ದೇಹ ಬೆಳಕು
ಕಾಯ ಗಾಯದ ಹೂವು
ಚುಚ್ಚಿ ಚುಚ್ಚಿ
ದಿನ ದಿನ ಕನಸು ಕಾಮನಬಿಲ್ಲು
ದೇಹ ಕಮಾನು.
ಹೆಗಲ ವಾಸನೆಯ ಬಗಲ ಪರಿಮಳ
ಮುಲುಕಿ ಮುಲುಕಿ ಸವೆದ
ಚಿಪ್ಪಿನಂಥ ಉಪ್ಪರಿಗೆಯ ಗಾದಿಗೆ
ಸದಾ ಬೆನ್ನ ಸಂಕಟ,
ತೊಡೆ ಸಂದಿಯಲಿ ಸೋರುವ
ಹನಿ ಹನಿ ನೋವಿಗೆ
ಬಾಗಿ ಸಂತೈಸುವ ನನ್ನ
ಪತ್ತಲದ ಹೂವು.
ಗಂಟೆ ಗಂಟೆಗೆ
ನನ್ನ ದೇಹಕ್ಕೆ ಬಿದ್ದ ಮುದ್ರೆ
ಕುದ್ದ ದೇಹದಲಿ ಇಳಿಬಿದ್ದ
ನನ್ನ ಮೊಲೆಗಳ ಕಣ್ಣೀರು
ಸವೆದ ಸೊಂಟದಲಿ ಬಿಟ್ಟು ಹೋದ
ನಿಮ್ಮ ಉಸಿರಿನ ಗುರುತುಗಳು
ಯಾವಕ್ಕೂ ಸಾಕ್ಷಿ ಇಲ್ಲ !
ಲಕ್ಷದಲ್ಲಿರಲಿ
ನಮ್ಮ ಎದೆ ಹೊತ್ತ ಹೃದಯ
ಮಿಡಿವ ಕರುಳು,
ಉರಿವ ಉಡಿ,
ಚಡಪಡಿಸುವ ಜೀವ
ನಿಮ್ಮ ತಾಯಂದಿರದೆ !
ನೀವು ಕೇಳುವ ಪುರಾವೆಗಳನ್ನು
ನೀಡೋಣವೆಂದರೆ
ನಮ್ಮ ಗರ್ಭಕ್ಕೆ ಮಾತ್ರ ಕನಸಿಲ್ಲ !
ಮನದ ಮೈಲಿಗೆಯ ತೊಳೆದು ಕೂಡುವ ಬದುಕು ಬಾಳು
ನೋಟವೊಂದೇ ದೃಷ್ಠಿಯಲ್ಲ
ನಮ್ಮೆದೆಯ ಕಡಲಿಗೆ ವ್ಯಾಪ್ತಿಗೆ ಇಲ್ಲ
ನೀವು ಅಳೆಯುವ ಸೇರಿಗೆ, ನೀವೇ ಪ್ರಮಾಣು !
ಬಿನ್ನಹ
ಕ್ರಿಸ್ತನ ನೆಪದಲ್ಲಿ
ಭಾನುವಾರಕ್ಕೊಮ್ಮೆ
ಚರ್ಚಿನ ಅಂಗಳದಲ್ಲಿ
ಕುಲುಕುಲು ನಗೆ ಅರಳುತ್ತಿದ್ದರೆ
ಚರ್ಚಿಗಳು ಏಳಲಿ ಬಿಡಿ ;
ಅಲ್ಲಾನ ನೆನಪಲ್ಲಿ
ಶುಕ್ರವಾರಕ್ಕೊಮ್ಮೆ ಮಸೀದಿಯಂಗಳದಲ್ಲಿ
ಧ್ಯಾನ ಎದೆ ತುಂಬುತ್ತಿದ್ದರೆ
ನಮಾಜು ಮಾಡಲಿ ಬಿಡಿ ;
ದೇವರ ಮೂರ್ತಿಗೆ
ಮುಗಿದ ಕೈಗೆ
ಬಾರಿಸಿದ ಗಳ್ಳಾಗಂಟಿ
ಗುಡಿಯಲ್ಲಿ ಹಚ್ಚಿಟ್ಟ ಊದಿನ ಕಡ್ಡಿ
ಮನಸ್ಸೆಲ್ಲಾ ಸ್ವಚ್ಛವಾಗುತ್ತಿದ್ದರೆ
ಗುಡಿಗಳನ್ನು ಕಟ್ಟಲಿ ಬಿಡಿ ;
ಚರ್ಚು ಮಸೀದಿ ಮಂದಿರ
ಏಳಲು ಬಿಟ್ಟು
ಅವು ಬೆಂಕಿ ಹಚ್ಚುವ
ತಾಣವಾದರೆ ಮಾತ್ರ
ಅವೆಲ್ಲವುಗಳನ್ನು ಬೀಳಿಸಿಬಿಡಿ.
ಭೂಮಿ ಕೊರಗಿದ ಹಾಡು
ಭೋರ್ಗರೆವ ಬಿಸಿಲನದಿ
ಬಯಲ ತುಂಬ ಕಣ್ಣು ಗೀಚಿದ ಮರೀಚಿಕೆ
ಬೆವರು ಮುಖದ ಮೇಲೆ ಹರಿವ
ಉರಿವ ಬಿಸಿಲ ಮಾತು ಎದೆ ಕೆಂಡ
ಒಡಲು ಪ್ರೀತಿ ಒರತೆ
ಮಾಮೂಲು ಆಗಷ್ಟನಲ್ಲೊಂದು
ಸೆಪ್ಟೆಂಬರಿನಲ್ಲೊಂದು
ಎರೆಡೆರಡು ಸ್ವಾತಂತ್ರ್ಯದಿನವಿಲ್ಲಿ
ಧ್ವಜ ಹಿಡಿದವರ ದನಿಯಲ್ಲಿ
ಇಂದಿಗೂ ಅನಾಥ ಕೂಗು.
ಹೈದ್ರಾಬಾದು ಫರ್ಲಾಂಗುದೂರ
ದಾರಿ ಬಹುದೂರ ವಿಧಾನಸೌಧ
ಕತ್ತರಿಸಲು ಬಾರದ ಕರುಳಬಳ್ಳಿ
ಈ ಬೇರ.
ತುಂಗೆ ನಿನ್ನ ಮಕ್ಕಳಿಗಿಲ್ಲ ನೀರು
ಅಲ್ಲಿ ಯಾರದೋ ಕಾರಬಾರು
ಬೇಸಿಗೆಗೆ ಕಾಣುವುದಿಲ್ಲ ಅಕ್ಕ ಭೀಮಕ್ಕ
ಎಲ್ಲಿ ನೀನು ?
ಕಾರಂಜಾದ ಕಾರಂಜಿ ವಾಟಗ ನೀರಿಗೆ ತತ್ವಾರ
ಮುಗಿಯುವುದಿಲ್ಲ ಸೋತು ಸೊರಗಿ ಹೋದ
ಭೂಮಿ ಕೊರಗಿನ ಹಾಡು.
ಅಲ್ಲಿ ಕೆಟ್ಟ ಕಲ್ಯಾಣದ ಕೋಟೆಯಲಿ
ಗಟಾರದ ನೀರು
ಬೀದಿ ಬೀದಿಯಲಿ
ಬೋಧಿವೃಕ್ಷದ ನೆರಳು.
ಬಂದೇನವಾಜನ ಬೆಂಡು ಬೆತ್ತಾಸು
ಶರಣಬಸಪ್ಪನ ಜೋಳದ ನುಚ್ಚು
ದಾಸರ ಹರಿನಾಮದಲ್ಲಿ
ತತ್ವ ಬುತ್ತಿಯ ಬೆಳಕು.
ಬಿಸಿಲ ಬೆಟ್ಟಕ್ಕೆ ಎದೆಕೊಟ್ಟು
ಸೋತ ರಟ್ಟೆಯಲಿ ಹಲ್ಲು ಕಚ್ಚಿ
ದಿನ ದೂಡುವ ಬದುಕು
ನಕಾಶೆಯಲಿ ಬರೆದಿಟ್ಟ ಜೀವಗಳಿಗೆ
ಪ್ರತಿ ವರ್ಷವೂ ಪ್ಯಾಕೇಜುಗಳು
ಅಲ್ಲಲ್ಲಿ ಕಮಾನುಗಳು, ಸಭಾಂಗಣಗಳು
ಚಪ್ಪಾಳೆಗಳೋ ಚಪ್ಪಾಳೆ.
ನೊಣ ಮುಕುರಿದ ಓಣಿಯಲಿ
ಬಂದು ನಿಂತ ಕಾರಿನ ಕಥೆ ಹೇಳಲು
ದೊಡ್ಡದಿದೆ; ಹರಿವ ನದಿಗಳೇ;
ನೀವು ಹೇಳಿ,
ನಿಮಗೇಕೆ ಬಯಲುಗಳ ಮೇಲೆ.
ಇಷ್ಟೊಂದು ಮುನಿಸು ?









ಕಾಡುವ ಕವಿತೆಗಳು ಮನಸಿನಾಳಕ್ಕಿಳಿದುಬಿಡುತ್ತವೆ
Hy ka Bhagada nenepugalu kadiviye
‘ಜವಾರಿ ಕವಿತೆಗಳು..’
Ondakkondu paipoti needuva kavanagalu. Samajamukhiyagive. Congrats.
ಶಬ್ದ ಮಾಂತ್ರಿಕತೆಯಲ್ಲಿ ಹಿಡಿದಿಟ್ಟ ಬದುಕ ಹಂದರ…ಸಾಲು ಸಾಲಿಗೂ ಪ್ರತಿಮೆಗಳ ಬೆಳಕು ..
ಮಣ್ಣ ವಾಸನೆಯ ಸೂಸುವ ,ಪ್ರಸಕ್ತ ಜ್ವಲಂತತೆಗೆ ಕನ್ನಡಿಯಾದ ಕವಿತೆಗಳು……….
ಆದರೆ ಭಾರತದ ದೇವತೆಗಳ ಸಂಖ್ಯೆ ಮತ್ತು ಭಾವದ್ವಂದವೇ ಬೇಕಾದಷ್ಟಿರುವಾಗ ಈಜಿಪ್ತಿನ ದೇವತೆ ‘ರಾ’ ಮತ್ತು ಫೇರೋಗಳ ಚಿತ್ರ ಇಲ್ಲಿ ಯಾಕೆ ಬಂತೋ…..
ಈಜಿಪ್ತಿನ ದೇವತೆ ‘ರಾ’ ಮತ್ತು ಫೇರೋಗಳ ಚಿತ್ರ -ನೋಡಿ…ಈಜಿಫ್ಟ ಭೇಟಿಯ ಫಲ…ಹಾಗಾಗಿ ಇದನ್ನ ಬೇಗ ಗುರುತಿಸಿದಿರಿ
Ahaa, estolle kavitegalu, manassanu naatuttavve. Odi khushiyaytu.
Last poem haunts me lot. good poems .
ಉರಿವ ಎದೆ ನೆಲದಲ್ಲಿ ಅರಳಿದ ಸೂಫಿಗಳ,ಬುದ್ಧನ & ತತ್ವ ಪದಕಾರರ ಸತ್ವ ಇನ್ನು ಇದೆ ಬಸವರಾಜ್ ಸರ್. ಉತ್ತಮ ಕವಿತೆಗಳ ಗುಚ್ಛ .
ಕೆಲ ಪ್ರತಿಮೆಗಳು ಚಿಂತನೆಗೆ ದೂಡುತ್ತವೆ.