‘ಸಾಗರ ಫೋಟೋಗ್ರಫಿ ಸೊಸೈಟಿ’ಯ ಶಿಬಿರ
ಕಿರಣ್ ಭಟ್
ಚಿತ್ರಗಳು: ನಾಗೇಂದ್ರ ಮುತ್ಮುರ್ಡು
ಆ ದಿನ ನಾನು ಉತ್ತರಾಖಂಡದ ಅಂಚಿನ ಹಳ್ಳೀಲಿದ್ದೆ. ಹಳೆಯ ಮನೆಗಳಿಂದಲೇ ತುಂಬಿದ ಚೆಂದವಾದ ಹಳ್ಳಿ ಅದು. ಕ್ಯಾಮರಾ ಹೆಗಲಿಗೇರಿಸ್ಕೊಂಡು ಸುಮ್ನೆ ಸುತ್ತಾಡ್ತಿದ್ದೆ. ಎಲ್ಲೂ ಜನ ಕಾಣಿಸ್ತಿರಲಿಲ್ಲ. ಹೀಗೇ ಹೋಗ್ತಾ ಹೋಗ್ತಾ ಒಂದು ಮನೆಯೆದುರು ನನ್ನ ಕಾಲುಗಳು ಥಟ್ಟನೆ ನಿಂತವು. ಮನೇ ಜಗ್ಲೀ ಮೇಲೆ ಒಬ್ಬ ಮುದುಕಿ ಹುಕ್ಕಾ ಸೇದ್ತಾ ಕೂತ್ಕೊಂಡಿದ್ಲು. ಸುಮಾರು ತೊಂಭತ್ತರ ಪ್ರಾಯದ ಹಣ್ಣು ಮುದುಕಿ ಆಕೆ. ಆಕೇನೂ ಆಕೆ ಹುಕ್ಕಾ ಸೇದ್ತಾ ಕೂತ ಭಂಗೀನೂ ಫೋಟೋ ತೆಗೆಯೋಕೆ ಒಂದು ಅದ್ಭುತ ಸನ್ನಿವೇಶ.
ಸ್ವಲ್ಪ ಹೊತ್ತು ಆಕೇನ ಮಾತಾಡಿಸ್ತಾ ಕೂತೆ. ‘ಅಜ್ಜೀ ನಿಮ್ದೊಂದು ಫೋಟೋ ತಕ್ಕೊಳ್ಲಾ? ಅಂತ ಕೇಳ್ತಾನೇ ಚಕ ಚಕಾಂತ ಹಲವಾರು ಫೋಟೋ ತಗೊಂಡೆ. ಅಷ್ಟರಲ್ಲಿ, ಬಹುಶಃ ಆಕೆಯ ಮೊಮ್ಮಗಳಿರ್ಬೇಕು, ಹುಡುಗಿಯೊಬ್ಳು ಓಡ್ತಾ ಓಡ್ತಾ ಬಂದ್ಲು. ಕ್ಯಾಮರಾನೇ ಬೆರಗುಗಣ್ಣುಗಳಿಂದ ನೋಡ್ತಾ, ಅಜ್ಜೀ ಫೋಟೋ ತೋರ್ಸೀ ಅಂತ ದುಂಬಾಲು ಬಿದ್ಲು.

ಕ್ಯಾಮರಾದ ಡಿಸ್ ಪ್ಲೇನಲ್ಲಿ ಅಜ್ಜೀ ಚಿತ್ರ ನೋಡ್ತಿದ್ದಂತೆ, ಆಕೆಗೆ ಏನು ಹೊಳೀತೋ ಏನೋ, ಅಂಕಲ್ ಐದು ನಿಮಿಷ, ಬಂದೆ ಅಂತ ಬೆಟ್ಟದ ಕಡೆ ಓಡಿದ್ಲು. ಆಕೆ ಹಿಂದಿರುಗಿ ಬರೋವಾಗ ಆಕೆಯ ಜೊತೆ ಒಬ್ಬ ಮುದುಕನೂ ಇದ್ದ. ನನ್ನ ಅಜ್ಜ ಇವ್ರು. ಇವರ್ನ ಅಜ್ಜೀ ಜೊತೆ ಕೂರ್ಸಿ ಒಂದು ಫೋಟೋ ತೆಗೀತೀರಾ? ಅಂತ ಗೋಗರೆಯೋಕೆ ಶುರು ಮಾಡಿದ್ಲು. ಸರಿ, ಇಬ್ಬರ್ನೂ ಕಟ್ಟೆ ಮೇಲೆ ಕೂರ್ಸಿ ಫೋಟೋಗಳನ್ನ ತೆಗೆದೆ.
ಕ್ಯಾಮರಾದಲ್ಲಿ ಅವುಗಳನ್ನ ನೋಡ್ತಿದ್ದಂತೆ ಅಜ್ಜಿ ಕಣ್ಣುಗಳಿಂದ ನೀರು. ಅಜ್ಜನೂ ಅಳೋಕೆ ಶುರುಮಾಡಿದ. ಮೊದಲು ನನಗೆ ಇದು ಯಾಕೆ ಅಂತ ಗೊತ್ತಾಗ್ಲಿಲ್ಲ. ಮೊಮ್ಮಗಳನ್ನ ನೋಡಿದೆ. ಆಕೆ ಹೇಳಿದ್ಲು..’ ಅಂಕಲ್ ಇವರ ಮದುವೆಯಾಗಿ ಎಷ್ಟು ವರ್ಷಗಳಾದ್ವೋ ಗೊತ್ತಿಲ್ಲ. ಆದ್ರೆ ಇವ್ರು ಒಟ್ಟಿಗಿರೋ ಫೋಟೋ ಒಂದೂ ಇರ್ಲಿಲ್ಲ. ಇದೇ ಅವರ ಜೀವಮಾನದ ಮೊದಲ ಜೋಡಿ ಫೋಟೋ. ನಾನು ಮೂಕನಾಗಿದ್ದೆ. ಕ್ಯಾಮರಾ ಹಿಡಿದದ್ದು ಸಾರ್ಥಕ ಎನಿಸತೊಡಗಿತ್ತು. ಇದಕಿಂತ ದೊಡ್ಡ ಯಾವ ಪ್ರಶಸ್ತಿಗಳೂ ಇಲ್ಲ ಎಂದೆನಿಸತೊಡಗಿತು. ನಾನೂ ಭಾವುಕನಾಗಿದ್ದೆ.

ಫೊಟೋಗ್ರಫಿಗಾಗಿ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ ನಾಗೇಂದ್ರ ಮುತ್ಮುರ್ಡು ಹೇಳಿದ ಕಥೆ ಹೀಗಿದ್ದರೆ ಇಂಥದೇ ಇನ್ನೊಬ್ಬ ಕಲಾವಿದ ಹೇಮಂತ್ ಹೇಳಿದ ಕಥೆ ಇನ್ನೂ ವಿಭಿನ್ನವಾದದ್ದು.
ಅದು ಹಿಮಾಚಲ ಪ್ರದೇಶಕದ ‘ಕಲ್ಪಾ’ ಎನ್ನೋ ಹಳ್ಳಿ. ಊರ ತುಂಬ ಕಟ್ಟಿಗೆಯ ಮನೆಗಳೇ. ನಮಗೋ ಮನೆಗಳನ್ನ ನೋಡೋ ಕುತೂಹಲ. ಆ ಮನೆ ತುಸು ತಗ್ಗಿನಲ್ಲಿತ್ತು. ನಿಧಾನಕ್ಕೆ ಕಟ್ಟಿಗೆಯ ಹಳೆಯ ಗೇಟ್ ಸರಿಸಿ ಕೆಳಗಿಳಿದೆ. ಮನೆಯ ಬಾಗಿಲಿಗೆ ಬಂದೆ. ಕಟ್ಟಿಗೆಯ ಬಹುದೊಡ್ಡ ಬಾಗಿಲು ಅದು. ತುಸು ಹಿಂಜರಿಕೆಯಿಂದ್ಲೇ ಬಾಗಿಲು ಬಡಿದೆ. ಒಳಗಿಂದ ಏನೂ ಪ್ರತಿಕ್ರಿಯೆ ಬರಲಿಲ್ಲ. ಸ್ವಲ್ಪ ಹೊತ್ತು ನಿಂತೆ.
ಇನ್ನೇನು ಹೊರಡಬೇಕು ಅಂದುಕೊಳ್ಳೋದ್ರಲ್ಲಿ ಕಿರ್ ಅಂತ ಶಬ್ದ. ಮನೆಯ ಅರ್ಧ ಬಾಗಿಲು ನಿಧಾನವಾಗಿ ತೆರೆಕೊಂಡ್ತು. ಮಧ್ಯವಯಸ್ಕರೊಬ್ಬರು ಮುಖ ಹೊರಗೆ ಹಾಕಿ ಪ್ರಶ್ನಾರ್ಥಕ ನೋಟದಲ್ಲಿ ನನ್ನನ್ನ ನೋಡಿದ್ರು. ಕ್ಯಾಮರಾಗಳನ್ನ ಹೆಗಲಿಗೆ ಹಾಕಿಕೊಂಡ ಹೊಸ ನಮೂನೆಯ ಜೀವವೊಂದನ್ನು ಕಂಡು ಅವರಿಗೆ ಆಶ್ಚರ್ಯವಾಗಿರ್ಬೇಕು. ಅವರ ನೋಟದಲ್ಲೇ ಅದನ್ನ ಕಂಡ ನಾನು ನನ್ನ ಕುರಿತು ಹೇಳ್ಕೊಂಡೆ. ಅವರ ಮುಖದಲ್ಲಿ ಮೆಲು ನಗೆಯೊಂದು ಕಾಣಿಸ್ಕೊಂಡ್ತು. ಈಗ ಪೂರ್ತಿ ಬಾಗಿಲು ತೆಗೀತು. ಬನ್ನಿ, ಬನ್ನಿ ಅಂತ ನೇರ ಅಡುಗೆ ಮನೆಗೇ ಕರ್ಕೊಂಡು ಹೋದ್ರು.
ನಾನು ಹೋದ ಸಮಯಾನೂ ಒಳ್ಳೇದೇ. ಮನೇಲಿ ತಿಂಡಿಯ ತಯಾರಿ ನಡೀತಿತ್ತು. ಘಮ್ ಅನ್ನೋ ಪರಿಮಳ. ಎಷ್ಟೋ ಹಳೆಯ ಪರಿಚಯದವ್ರಂತೆ ಮನೆ ಜನ ಎಲ್ಲಾ ಮಾತಾಡಿಸಿದ್ರು. ಮಣೆ ಹಾಕಿ ತಿಂಡಿಗೆ ಕೂರಿಸಿದ್ರು. ನನ್ ಜೊತೆ ಗೆಳೆಯರೂ ಇದಾರೆ ಅಂದೆ. ಅಯ್ಯೋ ಅವರನ್ನೂ ಕರೀರಿ ಮತ್ತೆ ಅಂತ ಅವರನ್ನ ಕರ್ಕೊಂಡು ಬರೋಕೆ ನನ್ ಜೊತೇನೇ ಬಂದ್ರು. ನಮಗೆಲ್ಲ ಒಳ್ಳೆ ತಿಂಡಿ. ಮಾತು, ಮಾತು, ಮಾತು.
ಅವರು ನಮ್ಮನ್ನ ಬೇಗ ಬಿಡೋ ಥರ ಕಾಣ್ತಿರಲಿಲ್ಲ. ಊಟ ಮಾಡ್ಕೊಂಡೇ ಹೋಗೋದು ಅಂತ ಕೂರಿಸಿಬಿಟ್ರು. ನಾವೂ ಅಷ್ಟೇ ಈ ಹಳ್ಳೀ ಊಟ ಉಂಡೇ ಹೋಗೋಣ ಅಂತ ಕೂತೇಬಿಟ್ವು. ಮನಸೋಇಚ್ಷೆ ಚಿತ್ರಾನೂ ತೆಗೆದದ್ದಾಯ್ತು.ಇದಾಗಿ ಸುಮಾರು ಮೂರು ನಾಲ್ಕು ವರ್ಷ ಕಳೆದಿರ್ಬಹುದು. ನಾನು ಪ್ರತಿ ವರ್ಷ ಅಲ್ಲಿಗೆ ಹೋದಾಗ ಅವರ ಮನೆಗೆ ಭೆಟ್ಟಿ ಕೊಡ್ತೀನಿ. ಒಮ್ಮೆ ನನ್ನ ಮನೆಯವ್ರನ್ನೂ ಕರ್ಕೊಂಡು ಹೋಗಿದ್ದೆ. ಅವರ ಮನೆ ಮದುವೆಗೂ ಆಮಂತ್ರಣ ಇತ್ತು ಹೋಗೋಕಾಗ್ಲಿಲ್ಲ. ಈ ವರ್ಷ ಮತ್ತೆ ಅವರ ಮನೆಗೆ ಹೋಗ್ಬೇಕು… ಅದೊಂಥರಾ ವಿಶಿಷ್ಟ ಅನುಬಂಧ.
ಇಂಥ ಹಲವಾರು ಅನುಭವಗಳನ್ನು ನಾವು ಕೇಳಿದ್ದು ‘ಸಾಗರ ಫೋಟೋಗ್ರಫಿ ಸೊಸೈಟಿ’ಯ ಫೋಟೋಗ್ರಫಿ ಶಿಬಿರದಲ್ಲಿ. ಛಾಯಾಚಿತ್ರಗ್ರಹಣ ಎಂದರೆ ಬರೇ ಕ್ಲಿಕ್ಕಿಸೋದಲ್ಲ. ಅದು ಹೊಸ ಮನುಷ್ಯ ಸಂಬಂಧಗಳನ್ನ ಬೆಳೆಸ್ತದೆ. ಸಂಬಂಧಗಳನ್ನ ಗಟ್ಟಿಗೊಳಿಸ್ತದೆ. ಹಲವು ಬಾರಿ ಭಾವಪರವಶಗೊಳಿಸ್ತದೆ.. ಅದೊಂದು ಭಾವಯಾನ ಎನ್ನುತ್ತಲೇ ಅನುಭವೀ ಛಾಯಾಚಿತ್ರ ಕಲಾವಿದರು ಸ್ವಾನುಭವದ ಕಥೆಗಳನ್ನ ಹೇಳುತ್ತಲೇ ಹೋದರು. ಹೊರಗೆ ಸೋನೆ ಮಳೆ ಸುರಿಯುತ್ತಿದ್ದರೆ ನಾವು ಸುಮಾರು ನಲವತ್ತು ಜನ ಮೈಯೆಲ್ಲ ಕಿವಿಯಾಗಿ ಇಂಥ ಅನುಭವಗಳನ್ನ ಕೇಳ್ತಾ, ಅವರು ಕ್ಲಿಕ್ಕಿಸಿದ ಚಿತ್ರಗಳಿಗೆ ಬೆರಗಾಗ್ತಾ ಹೆಗ್ಗೋಡಿನ ರಂಗಮಂದಿರದೊಳಗೆ ಕುಳಿತಿದ್ದೆವು.
‘ಎಸ್.ಪಿ.ಎಸ್. ನ ಫೋಟೋಗ್ರಫಿ ಶಿಬಿರ ‘ಉಳಿದವುಗಳಿಗಿಂತ ಭಿನ್ನವಾಗೋದು ಈ ಕಾರಣಕ್ಕೇ. ಎಸ್.ಪಿ.ಎಸ್ ಪ್ರತೀ ವರ್ಷ ನಡೆಸೋ ಮೂರು ದಿನಗಳ ಈ ಶಿಬಿರದಲ್ಲೂ ಅದೇ ರೀತಿ ಹೊಸ ಸಂಬಂಧಗಳು ಹುಟ್ಟಿಕೊಳ್ತವೆ. ಆಪ್ತವಾಗ್ತವೆ. ಕಲಿಸೋ ಪ್ರಕ್ರಿಯೆಯೂ ಕಲಿಯೋ ಪ್ರಕ್ರಿಯೆಯೂ ಒಂದೇ ಆಗಿಬಿಡ್ತದೆ. ಒಂದೇ ಮನೆಯವರು ಕೂತು ಪಟ್ಟಾಂಗ ಹೊಡೆದ ಹಾಗೆ ಮಾತುಕತೆ, ಚರ್ಚೆ, ಕಲಿಕೆ. ಒಟ್ಟಿಗೇ ಊಟ, ವಾಸ.
ಸೂರಿನಡಿಯ ಪಾಠವನ್ನೂ ಮೀರಿಸೋ ಹೊರಗಡೆಯ ಚಟುವಟಿಕೆ. ಭರತನಾಟ್ಯ, ಡೊಳ್ಳು ಕುಣಿತ, ಯಕ್ಷಗಾನ, ಕುಂಭ ಕಲೆ, ಕಸೂತಿ, ಹೊರಾಂಗಣ ಕೂಡ. ಇಕ್ಕೇರಿ ದೇವಸ್ಥಾನ, ಹೊಳೆಬಾಗಿಲು.. ಏನೆಲ್ಲಾ ಕ್ಲಿಕ್ಕಿಸುತ್ತಲೇ ಕಲಿಯೋ ವಿಶಿಷ್ಟ ರೀತಿ ಇದು. ಅಲ್ಲೇ ಕ್ಲಿಕ್, ಅಲ್ಲೇ ರಿಸಲ್ಟ್, ಅಲ್ಲೇ ಸಮಸ್ಯೆಗಳಿಗೆ ಪರಿಹಾರ. ಹೊಸದಾಗಿ ಕ್ಯಾಮರ ಹಿಡಿದವರಿಗಂತೂ ಇದೊಂದು ಅದ್ಭುತ ಕಲಿಕೆ.
ಇಂದು ವಿಶ್ವ ಛಾಯಾಚಿತ್ರಗ್ರಹಣ ದಿನ- world photography day. ಶಿಬಿರದ ಸಂಬಂಧಗಳ ನೆನಪಾಯ್ತು.
ಧನ್ಯವಾದಗಳು: ಕೆ.ಎಸ್.ರಾಜಾರಾಮ್, ಎ.ಜಿ.ಲಕ್ಷ್ಮೀನಾರಾಯಣ, ಜಿ.ಆರ್.ಪಂಡಿತ








ಚಂದದ ಲೇಖನ ಒಂದು ಒಳ್ಳೆ ಫೋಟೊ ಹಾಗೆ..ಕಿರಣ್
ಚಂದದ ಲೇಖನ ಒಂದು ಒಳ್ಳೆ ಫೋಟೊ ಹಾಗೆ. ಕಿರಣ್..ಪುಟ್ಟದು ಅನ್ಸೋದಿಲ್ಲ. ಅನೇಕ ಹಳ್ಳಿಗಳಲ್ಲಿ ಓಡಾಡಿಸ್ತು.
ತುಂಬ ಆಸಕ್ತಿಕರ ಲೇಖನ ಸರ್ ❤❤