ಬಂದ್ ದರವಾಜಾ
ಹಲ್ವಾದ ತಾಜಾ ತಾಜಾ ಸಿಹಿಗಾಳಿ ತೇಲಿ ಬಂತು. ಮಗುವಿನ ಮುಖ ಅರಳತೊಡಗಿತು. ಮಿಠಾಯಿ ಗಾಡಿಯವ ಹತ್ತಿರದ ಹಾದಿಯಲ್ಲಿ ಸಾಗುತ್ತಿದ್ದ. ಮಗು ವಿನಯದ ಕಂಗಳಲ್ಲಿ ನನ್ನನ್ನೇ ನೋಡತೊಗಿತು. ಮಿಠಾಯಿ ಗಾಡಿಯವ ದೂರ ದೂರ ಸಾಗುತ್ತಿದ್ದಂತೆ ಮಗುವಿನ ವಿನಯದ ಕಂಗಳು ರೋಷಕ್ಕೆ ತಿರುಗತೊಡಗಿದವು. ಮಿಠಾಯಿ ಗಾಡಿ ಮರೆಯಾಗುತ್ತಿದ್ದಂತೆ ಮಗುವಿನ ರೋಷದ ಕಂಗಳು ಸಿಡಿಯತೊಡಗಿದವು. ಮುಖದಲ್ಲಿ ಗಟ್ಟಿ ದನಿಯ ಬೇಡಿಕೆಯೊಂದು ಮಾರ್ದನಿಸತೊಡಗಿತು.
ಆದರೆ, ಹ್ಞೂ ಹ್ಞೂ ನಾನು ಹಾದಿ ಬೀದಿಯ ಮಿಠಾಯಿಯನ್ನು ಮಕ್ಕಳಿಗೆ ಕೊಡೊದೇ ಇಲ್ಲ. ಹೀಗಾಗಿ ಮಗುವಿನ ನಿವೇದನೆ ನನ್ನ ಮೇಲೆ ಪರಿಣಾಮ ಬೀರಲಿಲ್ಲ. ಮುಂದಿನದನ್ನು ಯೋಚಿಸುತ್ತಾ ಮತ್ತಷ್ಟು ವಿಚಲಿತನಾದೆ. ಈ ಬಗ್ಗೆ ಅಮ್ಮನ ನ್ಯಾಯಾಲಯದಲ್ಲಿ ಅಪೀಲು ಮಾಡುವ ಅವಶ್ಯಕತೆಯ ಬಗ್ಗೆ ಮಗು ಯೋಚಿಸಿತೋ ಏನೋ ನಾನರಿಯೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲೆಲ್ಲ ಮಕ್ಕಳು ಅಮ್ಮನ ಮುಂದೆ ಅಪೀಲು ಮಾಡುತ್ತವೆ. ಮಗು ಬಹುಶಃ ಫಿರ್ಯಾದು ನೀಡುವುದನ್ನು ಮುಂದೂಡಿರಬಹುದೆಂದುಕೊಂಡೆ. ಆದರೆ, ಅದು ಬಾಗಿಲಿನತ್ತ ಸಾಗುವ ಗೋಜಿಗೇ ಹೋಗಲಿಲ್ಲ. ಬಾಗಿಲು ತೆರೆದೇ ಇತ್ತು!…
ಅಳುವ ಕಂದನ ಕಣ್ಣೊರೆಸುವ ಯೋಚನೆಯಿಂದ ಫೌಂಟೆನ್ ಪೆನ್ ಅನ್ನು ಮಗುವಿನ ಕೈಗಿತ್ತೆ. ಸಂಭ್ರಮಗೊಂಡಿತು. ಜಗತ್ತಿನ ಸುಖದ ಗಣಿಯೇ ಕೈಸೇರಿತೇನೋ! ಅದರ ಇಂದ್ರಿಯಗಳೆಲ್ಲ ಹೊಸ ಸಮಸ್ಯೆಯ ಪರಿಹಾರಕ್ಕಾಗಿ ಸಾಂಘಿಕ ಯತ್ನಕ್ಕಿಳಿದಂತೆನಿಸಿತು. ಅಚಾನಕ್ ಬೀಸಿದ ಜೋರು ಗಾಳಿಗೆ ಬಾಗಿಲು ಧಡ್ ಅಂತ ಮುಚ್ಚಿಕೊಂಡ ಭಾರಿ ಸದ್ದೊಂದು ಮಗುವಿನ ಕಿವಿಗಪ್ಪಳಿಸಿತು. ಬೆಚ್ಚಿದ ಮಗು ಬಾಗಿಲಿನೆಡೆ ಗಾಬರಿಯಿಂದ ನೋಡಿತು. ಅದರ ಸಂಭ್ರಮದ ಕ್ಷಣಗಳು ಕ್ಷಣಾರ್ಧದಲ್ಲೇ ಕಳೆದುಹೋದವು.
ಅದೀಗ ಫೌಂಟೆನ್ ಪೆನ್ ಅನ್ನು ಎಸೆದು ಜೋರಾಗಿ ಅಳುತ್ತ, ಗಾಬರಿಯಿಂದ ಬಾಗಿಲಿನತ್ತ ಧಾವಿಸಿತು. ಯಾಕೆಂದರೆ ಬಾಗಿಲು ಮುಚ್ಚಿಕೊಂಡಿತ್ತು!
* ಮಗುವಿನ ತಾಯಿಪ್ರೀತಿ ಬಯಕೆಯ ತೀವ್ರತೆಯನ್ನು ಧ್ವನಿಸುವ ಮುನ್ಶಿ ಪ್ರೇಮಚಂದರ ’ಬಂದ್ ದರವಾಜಾ’ ಸಣ್ಣ ಕಥೆ.







0 Comments