ಸಂತೋಷವನ್ನು ಕನಸಲ್ಲಿ ಅರಸಬೇಕಿಲ್ಲ …
ಪೂರ್ಣಿಮಾ ಗಿರೀಶ್
ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ, ಎಷ್ಟು ಜನರ ಬಾಳಲ್ಲಿ ಈ ರೀತಿಯ ಏಕಾಂತದ, ಬೇಸರದ ಸಂಜೆ ಬರುವುದಿಲ್ಲ? ನಮ್ಮ ನಾಯಕನಿಗೂ ಆ ದಿನ ಬಲು ಬೇಸರದ ದಿನ, ಮನದಲ್ಲಿ ಸಂತಸಕ್ಕೆ ನೆಲೆಯೇ ಇಲ್ಲ. ಕಾರಣ ಅರಿತವರಿಲ್ಲ. ಜಡ್ದು ಹಿಡಿದ ಮನಸ್ಸು, ದೇಹ..
ತಾರಸಿ ದಿಟ್ಟಿಸಿ ಮಲಗಿದ್ದವನಿಗೆ ಯಾವಾಗ ನಿದ್ದೆ ಹತ್ತಿತೋ ತಿಳಿಯದು. ಸುಂದರ ಉದ್ಯಾನವನ,ಮಧ್ಯೆದಲ್ಲಿ ನೀರಿನ ಚಿಲುಮೆ, ಬಣ್ಣ ಬಣ್ಣದ ಹೂವುಗಳ ಸುಗಂಧ ಮತ್ತೇರಿಸುವಂತಿತ್ತು ಅವನಿಗೆ. ಆ ಹೂವಿನ ಹಾಸಿಗೆಯ ಮಧ್ಯದಿ ಅವಳ ಕಂಡ. ಮೈಮುರಿದು ಹೂನಗೆ ಚೆಲ್ಲಿ, ಹೂವೆಲ್ಲಿ ಬಾಡುವುದೋ ಎಂಬಂತೆ ಮೆಲ್ಲನೆ ಅಡಿಯಿಟ್ಟು ಬಂದವಳ ಕಂಡು ಇವನ ಉತ್ಸಾಹಕ್ಕೆ ಕೊನೆಯೇ ಇಲ್ಲ. ಇಂತಹ ಚೆಲುವಿಗೆ ಪ್ರತೀಕವಾದ, ಅಪ್ರತಿಮ ಚೆಲುವನ್ನು ಕಂಡು ಮೊದಲಬಾರಿಗೆ ಮನ ಅರಳಿತು. ಬಳಿ ಬಂದ ಅವಳ ಹೆಸರು ಕೇಳಿದ “ನನ್ನ ಹೆಸರು ಖುಷಿ, ಸದ್ಯದಲ್ಲೇ ನಿಮ್ಮಲ್ಲಿಗೆ ಬರುವೆ”ಎಂದಳು. ಇವನ ಆನಂದಕ್ಕೆ ಪಾರಿಲ್ಲದಾಯಿತು. ನನ್ನೊಡನೆ, ಈಗಲೇ ಬಾ ಎಂದವಳ ಕೈ ಹಿಡಿದೆಳೆದವನ ಕೈಯಲ್ಲಿದ್ದಿದು, ಅವನು ಹೊದ್ದು ಮಲಗಿದ್ದ ಚಾದರ.
ಹಕ್ಕಿಯ ಕಲರವ ಬೆಳಗಾಯಿತೆಂಬ ಸೂಚನೆ. ಅ ಕನಸು ಅವನ ಮನಸ್ಸಿನಲ್ಲಿ ಭದ್ರವಾಗಿ ನೆಲೆಸಿತ್ತು. ಮನೆಯನ್ನು ಓರಣಗೊಳಿಸಿ, ಬಾಗಿಲಿಗೆ ತೋರಣ ಕಟ್ಟಿ, ಬಗೆ ಬಗೆಯ ಅಡುಗೆ ಮಾಡಲು ಅಣಿಮಾಡುತ್ತಿದ್ದ ಆ ಚೆಲುವೆಯ ಆಗಮನಕ್ಕಾಗಿ. ಯಾರೋ ಮೆಲ್ಲಗೆ ಬಾಗಿಲ ಬಡಿದ ಸದ್ದು, ಯಾರೆಂದ. ಆ ಕಡೆಯಿಂದ ಒಂದು ಪುಟ್ಟ ಹೆಣ್ಣು ಮಗುವಿನ ಧ್ವನಿ, ” ಬಾಗಿಲು ತೆಗೆಯಿರಿ, ನಾನು ಒಳಗೆ ಬರಬೇಕು”. ಇವನಿಗೆ ಕೈತುಂಬ ಕೆಲಸ. “ನನಗೆ ಬಹಳ ಕೆಲಸವಿದೆ ಮಗು, ಸ್ವಲ್ಪ ಸಮಯದ ನಂತರ ಬಾ” ಮತ್ತೆ ಕೆಲಸ ಮುಂದುವರೆಸಿದ. ಕೆಲವು ಸಮಯದ ನಂತರ ಮತ್ತೊಮ್ಮೆ ಬಾಗಿಲು ಬಡಿದ ಸದ್ದು “ಬೇಗ ಬಾಗಿಲು ತೆಗೆದು, ನನ್ನನ್ನು ಒಳಗೆ ಬರಮಾಡಿಕೊಳ್ಳಿ, ನಿಮ್ಮ ಮನೆಯ ಹೊಸಿಲಿನಿಂದಾದ್ರು ಒಳಗೆ ಕರೆದುಕೊಳ್ಳಿ, ಸುಮ್ಮನೆ ಕುಳಿತುಕೊಳ್ಲುವೆ, ನಿಮ್ಮ ಆತಿಥ್ಯ, ಆರೈಕೆ ಯಾವುದೂ ಬೇಡ”, “ನೋಡು ಮಗು, ನನಗೆ ತುಂಬ ಕೆಲಸವಿರುವುದರಿಂದ ನನಗೆ ತೊಂದರೆ ಮಾಡದೆ ಹೊರಟು ಹೋಗು” ಎಂದ.

ಅಡುಗೆ ಕೆಲಸ ಮುಗಿಯಿತು , ಬಾಗಿಲ ಬಳಿ ಬಂದು ಇಣುಕಿ ನೋಡಿದ, ದೂರದ ದಾರಿ ಕಣ್ಣು ಹಾಯುವಷ್ಟು ದೂರ. ಎಲ್ಲಿಂದೆಲ್ಲಿಗು ನಿಬಿಡ. ಯಾರ ಸುಳಿವು ಇಲ್ಲ. ಒಳ ನಡೆದ, ಮಲಗಿದ, ಉಯ್ಯಾಲೆಯಲ್ಲಿ ಕುಳಿತು ಆ ಚೆಲುವೆಯ ಆಗಮನಕ್ಕೆ ಚಡಪಡಿಸುತ್ತ ಕಾದ. ದಿನ ಉರುಳಿತು. ಸೂರ್ಯ ಮುಳುಗಿದ, ಇವನ ಆಸೆಯನ್ನು ತನ್ನೊಡನೆ ಹೊತ್ತು ಮುಳುಗಿದ. ಮತ್ತೆ ನಿರಾಸೆ, ದು:ಖ ಇವನ ಬದುಕಿನಲ್ಲಿ ಆವರಿಸಿತು. ಮತ್ತೆಂದಿಗೂ ಯಾರೂ ಅವನ ಮನೆಯ ಬಾಗಿಲ ಬಳಿ ಬರಲಿಲ್ಲ, ಕದ ತಟ್ಟಲಿಲ್ಲ.
ಮಾರನೆಯ ದಿನ, ಅದೇ ಹುರುಪಿನಿಂದ ಅವಳ ಆಗಮನಕ್ಕೆ ಕಾಯುತ್ತಾ ಕುಳಿತ. ಹೆಜ್ಜೆಯ ಸದ್ದಿಲ್ಲ, ಗೆಜ್ಜೆಯ ನಾದವಿಲ್ಲ, ಬರೀ ಮೌನ. ದಿನ ಉರುಳಿತು, ತಿಂಗಳುಗಳು ಕಳೆಯಿತು, ಇವನ ಮನಸ್ಸಿನಲ್ಲಿ ಅವಳ ಬಗೆಗಿನ ಅಸೆ? ಮನೆ ಗೋಡೆಗಳು ಬಣ್ಣ ಕಳೆದುಕೊಂಡವು. ಅಡುಗೆ ಹಳಸಿತ್ತು, ಮಾವಿನ ತೋರಣದ ಚಿಗುರು ಬಾಡಿ ಮುದುಡಿತ್ತು. ಇವನ ಮನಸ್ಸೂ ಕೂಡ ಹತಾಶೆ, ನೋವಿನಿಂದ ತುಂಬಿತ್ತು.
ಮಲಗಿದ್ದವನ ಕಣ್ಣಲ್ಲಿ ಮತ್ತದೇ ಕನಸು, ಉದ್ಯಾನವನ, ವಿವಿಧ ಬಣ್ಣದ ಸುವಾಸನೆ ಭರಿತ ಹೂಗಳು, ತಣ್ಣನೆಯ ಗಾಳಿ, ಹೂ ರಾಶಿಯ ಮಧ್ಯದಲ್ಲಿ ಮುಗ್ಧ ನಗೆ ಹೊತ್ತು ಕುಳಿತಿರುವ ಚೆಲುವೆ. ಇವನ ಕಂಗಳಲ್ಲಿ ಕಣ್ಣೀರ ಧಾರೆ. ಅವಳೆಡೆಗೆ ಧಾವಿಸಿದ, ಕೈ ಹಿಡಿದು ಕೇಳಿದ “ಆ ದಿನದಿಂದ ಇಂದಿನವರೆಗು ನಿನಗಾಗಿ ಕಾದು, ಕಲ್ಲು ಬಂಡೆಯಾಗಿರುವೆ, ನೀನೇಕೆ ಬರಲಿಲ್ಲ , ಹೀಗೇಕೆ ಮಾಡಿದೆ?” ಮಾಡಿದೆ?”. ನಸುನಕ್ಕು ನುಡಿದಳು, “ನಾನು ಖುಷಿ, ನನ್ನ ರೂಪ ಹಲವು, ನಾನು ಆ ದಿನವೇ ನಿನ್ನಲ್ಲಿಗೆ ಬಂದು ಕದವ ಹಲವಾರು ಬಾರಿ ತಟ್ಟಿದೆ, ನೀ ನನ್ನ ಒಳಗೆ ಕರೆಯಲಿಲ್ಲ, ಕದವ ತೆಗೆಯಲಿಲ್ಲ. ನಿನ್ನ ಮನೆಯಿಂದ ನನ್ನ ಪುಟ್ಟ ಕಾಲ್ಗಳನ್ನು ಬಡಿಯುತ್ತ ಹೊರಟೆ, ನನ್ನನ್ನು ಹಲವರು ಅಲಂಗಿಸಿದರು, ಅವರ ಮನೆಗೆ ಕರೆದೊಯ್ದರು, ನನ್ನನ್ನು ಅವರ ಮನೆಯಲ್ಲಿ, ಮನದಲ್ಲಿ ಹಿಡಿದಿಟ್ಟುಕೊಂಡರು, ನಾ ಅಲ್ಲೇ ಉಳಿದೆ. ನೀ ಇಂದಿಗೂ ಜೀವನದಲ್ಲಿ ಖುಷಿ ಏನೆಂಬುದ ತಿಳಿಯದೆ ನಿರಾಸೆಯ ಜೀವನ ನಡೆಸುತ್ತಿರುವೆ”.
ಖುಷಿ ಮಾನವನಿಗೆ ಹಲವು ರೂಪದಲ್ಲಿ, ಕ್ಷಣ ಕ್ಷಣಕ್ಕೂ ಬರುತ್ತಿರುತ್ತದೆ. ಮಗುವಿನ ನಗುವಿನಲ್ಲಿ, ಅಮ್ಮ ಹಾಕುವ ಕೈ ತುತ್ತಿನಲ್ಲಿ, ಗೆಳೆಯರ ಸನಿಹದಲ್ಲಿ, ಅಪ್ಪನ ಹಿತನುಡಿಯಲ್ಲಿ, ಸಂಗಿತದಲ್ಲಿ, ಸಾಹಿತ್ಯದಲ್ಲಿ, ದೇವರ ಸ್ಮರಣೆಯಲ್ಲಿ, ಅನ್ನ ನೀಡುವ ಕಾಯಕದಲ್ಲಿ, ಕೈಲಾಗದವರಿಗೆ ನೀಡುವ ಸಹಾಯದಲ್ಲಿ, ವಯಸ್ಸಾದ ಹಿರಿಯರ ಆಶೀರ್ವಚನದಲ್ಲಿ ಹೀಗೇ ಹತ್ತಾರು ಹಲವಾರು ರೂಪದಲ್ಲಿ.. ಇವೆಲ್ಲವನ್ನೂ ನಮ್ಮ ಮನಸಾರೆ ಒಪ್ಪಿಕೊಂಡರೆ ಖುಷಿಯನ್ನು, ಸಂತೋಷವನ್ನು ಕನಸಲ್ಲಿ ಅರಸಬೇಕಿಲ್ಲ….
ಮೂಲ : ಹಿಂದಿ






ಹೌದಲ್ಲವಾ? ಎಷ್ಟು ನಿಜ. ಚಂದದ ಬರಹ/ಅನುವಾದ ಪೂರ್ಣಿಮಾ
Dhanyvadagalu malathi avare..
ಧನ್ಯವಾದಗಳು ಮಾಲತಿ ಅವರೆ…
Nice
ಚೆನ್ನಾಗಿದೆ ಅಕ್ಕ ಅನುವಾದ
ಮೂಲ ಹಿಂದೀ ಹೇಗಿತ್ತೋ ಗೊತ್ತಿಲ್ಲ. ಹೇಗಿದ್ದರೂ ಓದು ಆಪ್ತವಾಗುತ್ತಿರಲಿಲ್ಲ ಬಿಡಿ.
ಓದು ಮನಸ್ಸಿಗೆ ಆಪ್ತವಾಗುವಂತೆ ನಮ್ಮ ಕನ್ನಡದಲ್ಲಿ ನೀಡಿದ್ದೀರಿ. ಖುಷಿ ಆಯ್ತು.
ಈ ಮನದ ಬಾಗಿಲು ಬಡಿಯದೇ ಖುಷಿ ಒಳಬಂತು.
ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ…
Nice and effective