ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ತಿಂಗಳ ಬೆಳಕಿನಲ್ಲಿ ತಲೆ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

24

ಈ ಕಾಲದಲ್ಲಿ ಬಟ್ಲರ್‌ಗೆ ಸಮಾಧಾನ ತರುತಿದ್ದದ್ದು ಯುದ್ಧವೆಂಬ ಕಾವ್ಯವೊಂದೇ. ಕೆಲಸದ ಹೊತ್ತಿನಲ್ಲಿ ಮಾತ್ರವಲ್ಲ ಖಾಸಗಿ ಸಮಯದಲ್ಲೂ ಬಟ್ಲರ್‌ ಯುದ್ಧವೆಂಬ ಕಾವ್ಯಕ್ಕೆ ತನ್ನನ್ನು ತೆತ್ತುಕೊಂಡಿದ್ದ. ಸಿರ್ಕಾಸಿಯನ್ ದಿರಿಸು ಧರಿಸಿ ಸವಾರಿ ಮಾಡುತಿದ್ದ, ಎದೆ ಉಬ್ಬಿಸಿಕೊಂಡು ನಡೆಯುತಿದ್ದ. ಬೋಗ್ದಾನೊವಿಚ್‌ನ ಜೊತೆಯಲ್ಲಿ ಎರಡು ಸಾರಿ ಅಡಗು ದಾಳಿ ನಡೆಸಲು ಹೋಗಿದ್ದ. ಒಮ್ಮೆಯೂ ಅವನು ಒಬ್ಬ ಶತ್ರುವನ್ನೂ ಪತ್ತೆ ಮಾಡಿರಲಿಲ್ಲ, ಕೊಂದೂ ಇರಲಿಲ್ಲ. ಧೈರ್ಯಶಾಲಿಯೆಂದೇ ಪ್ರಸಿದ್ಧನಾಗಿದ್ದ ಬೋಗ್ದಾನೊವಿಚ್‌ನ ಸಮೀಪದಲ್ಲಿರುವುದು, ಅವನ ಗೆಳೆತನ ಸಂಪಾದಿಸುವುದು ಇವೇ ಅವನಿಗೆ ಬಹಳ ಸಂತೋಷದ, ಯುದ್ಧಸಮಾನ ಸಂಗತಿಗಳಾಗಿ ಕಂಡಿದ್ದವು. ಸಾಲ ತೀರಿಸಿದ್ದ. ಅದಕ್ಕಾಗಿ ಅತಿ ಹೆಚ್ಚು ಬಡ್ಡಿಯ ದರಕ್ಕೆ ಯಹೂದಿಯೊಬ್ಬನಿಂದ ಸಾಲ ಪಡೆದಿದ್ದ. ಅಂದರೆ ಅವನು ಕಷ್ಟಗಳನ್ನು ಮುಂದೂಡಿದ್ದನೇ ಹೊರತು ಪರಿಹಾರ ಮಾಡಿಕೊಂಡಿರಲಿಲ್ಲ. ತಾನಿರುವ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡದೆ ಯುದ್ಧದ ಕಾವ್ಯದಲ್ಲಿ ಹಾಗೆಯೇ ಮದಿರೆಯಲ್ಲಿ ಮೈಮರೆಯಲು ಪ್ರಯತ್ನಪಡುತಿದ್ದ. ಕುಡಿತ ದಿನ ದಿನವೂ ಹೆಚ್ಚುತಿತ್ತು, ಅವನ ಮನಸು ದಿನ ದಿನವೂ ದುರ್ಬಲವಾಗುತಿತ್ತು. ಮೇರಿ ದ್ಮಿತ್ರಿಯೇವ್ನಾಳ ಬಗ್ಗೆ ಅವನೀಗ ಪವಿತ್ರ ಜೋಸೆಫ್‍ನ ಹಾಗಿರಲಿಲ್ಲ, ಬದಲಾಗಿ ಅವಳನ್ನು ಸೆಳೆಯಲು ಬಹಳ ಒಡ್ಡೊಡ್ಡಾಗಿಯೇ ಪ್ರೇಮ ನಿವೇದನೆ ಮಾಡುತಿದ್ದ. ಮೇರಿ ದ್ಮಿತ್ರಿಯೇವ್ನಾ ಅವನ ಪ್ರಣಯಾಕಾಂಕ್ಷೆಯನ್ನು ದೃಢವಾಗಿ ತಿರಸ್ಕಾರ ಮಾಡಿದ್ದಳು, ಅವನಿಗೆ ಸಿಗ್ಗಾಗಿತ್ತು. 

ಏಪ್ರಿಲ್ ಕೊನೆಯ ಹೊತ್ತಿಗೆ ಹೊಸ ಸೈನಿಕ ತುಕಡಿಯೊಂದು ಕೋಟೆಗೆ ಬಂದಿತ್ತು. ಆ ಪಡೆಯನ್ನು ಬಳಸಿಕೊಂಡು ಇದುವರೆಗೆ ಭೇದಿಸಲು ಆಗಿರದಿದ್ದ ಚೆಚೆನ್ಯಾದ ಪ್ರದೇಶಗಳ ಮೇಲೆ ದಾಳಿ ನಡೆಸಬೇಕೆಂದು ಬಾರ್ಯಾತಿನ್ಸ್‌ಕಿ ಯೋಜನೆ ರೂಪಿಸಿದ್ದ. ಈಗ ಬಂದ ಸೈನ್ಯದ ತುಕಡಿಯಲ್ಲಿ ಕಬರ್ಡ ರೆಜಿಮೆಂಟಿನ ಎರಡು ಕಂಪನಿಗಳಿದ್ದವು. ಕಕೇಶಿಯನ್ ಸಂಪ್ರದಾಯಕ್ಕೆ ಅನುಗುಣವಾಗಿ ಈ ಸೈನಿಕರನ್ನು ಕುರೆನ್ ಕಂಪನಿಯ ಅತಿಥಿಗಳ ಹಾಗೆಯೇ ನೋಡಿಕೊಂಡರು. ಸೈನಿಕರಿಗೆ ಬ್ಯಾರಕ್ಕುಗಳಲ್ಲಿ ವಸತಿ ಏರ್ಪಾಟಾಯಿತು, ರಾತ್ರಿಯ ಊಟಕ್ಕೆ ಗೋಧಿಯ ಪಾರಿಜ್, ಬೀಫ್ ಜೊತೆಗೆ ವೋಡ್ಕಾವನ್ನೂ ನೀಡಲಾಯಿತು. ಆಫೀಸರುಗಳು ಕುರೆನ್ ಕಂಪನಿಯ ಅಧಿಕಾರಿಗಳೊಡನೆ ವಸತಿಯನ್ನು ಹಂಚಿಕೊಂಡರು. ಹೊಸದಾಗಿ ಬಂದ ಅಧಿಕಾರಿಗಳಿಗೆ ಮಾಮೂಲಿನ ಹಾಗೆ ಮಧ್ಯಾಹ್ನದ ಭೋಜನ ಏರ್ಪಾಟಾಗಿತ್ತು. ರೆಜಿಮೆಂಟಿನ ಸಂಗೀತಗಾರರು ಹಾಡು ಹೇಳಿದರು. ಕೊನೆಗೆ ಮದ್ಯದ ಸಮಾರಾಧನೆಯೂ ಇತ್ತು. ಅತಿಯಾಗಿ ಕುಡಿದಿದ್ದರಿಂದ ಮೇಜರ್ ಪೆಟ್ರೋವ್‍ನ ಮುಖ ಕೆಂಪಲ್ಲ, ಬೂದಿಯ ಬಣ್ಣಕ್ಕೆ ತಿರುಗಿತ್ತು. ಕುರ್ಚಿಯ ಮೇಲೆ ಅಡ್ಡಡ್ಡಲಾಗಿ ಕೂತು ಕತ್ತಿ ಬೀಸುತ್ತಾ ಕಾಲ್ಪನಿಕ ಶತ್ರುಗಳನ್ನು ತುಂಡರಿಸುತಿದ್ದ. ಈಗ ಬೈಯುತ್ತಾ ಈಗ ನಗುತ್ತಾ ಈಗ ಯಾರನ್ನೋ ಅಪ್ಪುತ್ತಾ ಈಗ ಪ್ರಿಯವಾದ ಹಾಡಿಗೆ ಹೆಜ್ಜೆ ಹಾಕುತಿದ್ದ. 

ಒಂದಾನೊಂದು ಕಾಲದಲ್ಲೀ

ದಂಗೆ ಎದ್ದಾ ಶಮೀಲ್‌

ತರರಂಪಂ ತರರಂಪಂ

ಒಂದಾನೊಂದೂ ಕಾಲದಲ್ಲೀ…

ಬಟ್ಲರ್ ಕೂಡ ಅಲ್ಲಿದ್ದ. ಇದರಲ್ಲಿ ಕೂಡ ಯುದ್ಧದ ಕಾವ್ಯವನ್ನು ಕಾಣಲು ಪ್ರಯತ್ನಪಟ್ಟ. ಆದರೂ ಅವನ ಮನಸಿನ ಆಳದಲ್ಲಿ ಮೇಜರ್‍ ಬಗ್ಗೆ ಅಯ್ಯೋ ಅನಿಸುತಿತ್ತು. ಅವನನ್ನು ತಡೆಯುವುದಂತೂ ಸಾಧ್ಯವಾಗದ ಮಾತು. ಕುಡಿದದ್ದು ನನ್ನ ತಲೆಗೂ ಏರುತಿದೆ ಅನ್ನಿಸಿ ಬಟ್ಲರ್ ಸದ್ದಲ್ಲದೆ ಅಲ್ಲಿಂದ ಎದ್ದು ಮನೆಗೆ ಹೊರಟು ಹೋದ.  

ತಿಂಗಳ ಬೆಳಕು ಬೀದಿ, ಮನೆ, ರಸ್ತೆಗೆ ಜೋಡಿಸಿದ್ದ ಕಲ್ಲಿಟ್ಟಿಗೆಗಳನ್ನೂ ಬೆಳಗಿತ್ತು. ಒಂದೊಂದೂ ಕಲ್ಲು, ಒಂದೊಂದೂ ಹುಲ್ಲು ಕಡ್ಡಿ, ಮಣ್ಣಿನ ಪುಟ್ಟ ಗುಪ್ಪೆ ಕೂಡ ಸ್ಪಷ್ಟವಾಗಿ ಕಾಣುತಿದ್ದವು. ಮನೆ ಹತ್ತಿರವಾಗುತಿದ್ದ ಹಾಗೆ ತಲೆ, ಕತ್ತು ಮುಚ್ಚುವ ಹಾಗೆ ಶಾಲು ಹೊದ್ದಿದ್ದ ಮೇರಿ ದ್ಮಿತ್ರಿಯೇವ್ನಾ ಬಟ್ಲರನಿಗೆ ಎದುರಾದಳು. ಅವಳಿಂದ ಬೈಯಿಸಿಕೊಂಡ ಮೇಲೆ ಬಟ್ಲರನಿಗೆ ಸಿಗ್ಗಾಗಿ ಅವಳ ಕಣ್ಣಿಗೆ ಬೀಳದೆ ತಪ್ಪಿಸಿಕೊಂಡು ಓಡಾಡುತಿದ್ದ. ಹುಣ್ಣಿಮೆಯ ಬೆಳಕು, ತಲೆಗೇರಿದ್ದ ಮದ್ಯ, ಈಗ ಕಂಡ ಅವಳು—ಅವನಿಗೀಗ ಖುಷಿಯಾಗಿತ್ತು. ಮತ್ತೆ ಅವಳ ಗೆಳೆತನ ಸಂಪಾದಿಸಲು ಪ್ರಯತ್ನ ಪಟ್ಟ. 

‘ಯಾವ ಕಡೆ ಹೊರಟಿರಿ?’ ಕೇಳಿದ.

‘ನಮ್ಮ ಮನೆಯವರು ಎಲ್ಲಿ ಹೋದರೋ ನೋಡುವುದಕ್ಕೆ ಹೊರಟೆ,’ ಆಕೆ ಹಿತವಾದ ದನಿಯಲ್ಲಿ ಉತ್ತರ ಹೇಳಿದಳು.

ಬಟ್ಲರನ ಪ್ರಣಯಾಕಾಂಕ್ಷೆಯನ್ನು ಅವಳು ನಿರಾಕರಿಸಿ ಬೈದದ್ದು ನಿಜವಾಗಿತ್ತು, ದೃಢವಾಗಿತ್ತು.ಆದರೂ ಇತ್ತೀಚೆಗೆ ಅವನು ತಲೆ ತಪ್ಪಿಸಿಕೊಂಡು ತಿರುಗುವುದು ಇಷ್ಟವಾಗುತ್ತಿರಲಿಲ್ಲ.  

‘ಅವನ ವಿಚಾರ ಚಾರ ಯಾಕೆ ಚಿಂತೆ ಮಾಡತೀರಿ? ಬರತಾನೆ ಬಿಡಿ, ಅಂದ.

‘ಖಂಡಿತ ಬರತಾರಾ?’

‘ಅವನು ಬರದೆ ಇದ್ದರೆ ಅವರೇ ಹೊತ್ತುಕೊಂಡು ಬರತಾರೆ.’

‘ಅಂದುಕೊಂಡಿದ್ದೆ…ಸರಿಯಲ್ಲ ಇದು! ನಾನು ಹೋಗದೆ ಇರುವುದೇ ವಾಸಿಯಾ ಹಾಗಾದರೆ?’

‘ಬೇಡ, ಹೋಗಬೇಡಿ. ಮನೆಗೆ ಹೋಗಣ.’

ಮೇರಿ ದ್ಮಿತ್ರಿಯೇವ್ನಾ ವಾಪಸ್ಸು ತಿರುಗಿ ಅವನ ಜೊತೆಯಲ್ಲಿ ಹೆಜ್ಜೆ ಹಾಕಿದಳು.

ತಿಂಗಳ ಬೆಳಕು ಎಷ್ಟು ಪ್ರಖರವಾಗಿತ್ತೆಂದರೆ ರಸ್ತೆಯ ಮೇಲೆ ಅವರ ನೆರಳು ಬಿದ್ದಿತ್ತು, ಅವರ ಜೊತೆಯಲ್ಲೇ ಸಾಗುತಿದ್ದ ನೆರಳಿನ ತಲೆಯ ಸುತ್ತಲೂ ಬೆಳಕಿನ ವರ್ತುಲ ಸೃಷ್ಟಿಯಾಗಿದೆ ಅನಿಸುತಿತ್ತು. ಈ ನೆರಳನ್ನೇ ನೋಡುತ್ತಾ ಮೊದಲಿನ ಹಾಗೇ ʼಮೇರೀ, ನಿಮ್ಮ ಬಗ್ಗೆ ನನಗೆ ಸ್ನೇಹವಿದೆ,ʼ ಅನ್ನಬೇಕು ಅನಿಸಿತು ಬಟ್ಲರನಿಗೆ. ಮಾತು ಶುರು ಮಾಡುವುದು ಹೇಗೆಂದು ತಿಳಿಯಲಿಲ್ಲ. ಅವನು ಏನು ಹೇಳುತ್ತಾನೋ ಎಂದು ಅವಳೂ ಕಾಯುತಿದ್ದಳು. ಹೀಗೇ ಮೌನವಾಗಿ ನಡೆಯುತ್ತ ಅವರು ಮನೆಯ ಹತ್ತಿರಕ್ಕೇ ಬಂದುಬಿಟ್ಟರು. ಆಗ ಮೂಲೆಯ ತಿರುವಿನಲ್ಲಿ ಯಾರೋ ಕುದುರೆ ಸವಾರ ಕಾಣಿಸಿದ. ಅವನು ಯಾರೋ ಅಧಿಕಾರಿ. ಅವನ ಜೊತೆಗೆ ಕಾವಲಿನವನೊಬ್ಬನಿದ್ದ. 

‘ಯಾರದು?’ ಸ್ವಲ್ಪ ಪಕ್ಕಕ್ಕೆ ಸರಿಯುತ್ತ ಮೇರಿ ದ್ಮಿತ್ರಿಯೇವ್ನಾ ಕೇಳಿದಳು. ಚಂದ್ರ ಕುದುರೆಯ ಸವಾರನ ಹಿಂಬದಿಯಲ್ಲಿದ್ದ. ಹಾಗಾಗಿ ಅವನು ಬಟ್ಲರನ ತೀರ ಸಮೀಪಕ್ಕೆ ಬರುವವರೆಗೆ ಅದು ಯಾರೆಂದು ಅವಳಿಗೆ ಗುರುತು ಸಿಗಲಿಲ್ಲ. ಪೀಟರ್‌ ನಿಕೊಲಯೆವಿಚ್ ಕಮನೇವ್‌,  ಮೊದಲೇ ಮೇಜರ್ ಕೈ ಕೆಳಗೆ ಸೇವೆ ಸಲ್ಲಿಸಿದ್ದವನು, ಅವನ ಪರಿಚಯ ಮೇರಿಗೆ ಚೆನ್ನಾಗಿಯೇ ಇತ್ತು.

‘ನಾನು,’ ಅಂದ ಕಮನೇವ್‌. ‘ಆಹಾ, ಬಟ್ಲರ್! ಹೇಗಿದ್ದೀ? ಇನ್ನೂ ಮಲಗಿಲ್ಲವಾ? ಮೇರಿ ದ್ಮಿತ್ರಿಯೇವ್ನಾ ಜೊತೆಯಲ್ಲಿ ವಾಕ್ ಹೋಗುತಿದ್ದೀಯಾ? ಹುಷಾರಾಗಿರು, ಮೇಜರ್ ನೋಡಿದರೆ ಆಮೇಲೆ ಏನಿಲ್ಲಾ ಮತ್ತೆ…ಎಲ್ಲಿ ಮೇಜರ್?’ ಅಂದ.

‘ಅಗೋ, ಅಲ್ಲಿ…ಕೇಳಿಸಿಕೋ!’ ಅನ್ನುತ್ತಾ ಮೇರಿ ದ್ಮಿತ್ರಿಯೇವ್ನಾ ತುಲುಂಬಾ ನಗಾರಿ ಸದ್ದು, ಹಾಡು ಎಲ್ಲಾ ಕೇಳಿಸುತಿದ್ದ ದಿಕ್ಕಿನತ್ತ ಕೈ ತೋರಿ, ‘ಪಾರ್ಟಿ ಮಾಡುತ್ತಾ ಗಲಾಟೆ ಎಬ್ಬಿಸಿದಾರೆ,’ ಅಂದಳು.

‘ಏನು, ನಿಮ್ಮನಿಮ್ಮವರೇ ಪಾರ್ಟಿ ಮಾಡುತಿದ್ದಾರಾ?’ 

‘ಇಲ್ಲ. ಹಸಾವ್-ಯರ್ಟ್‌ನಿಂದ ಆಫೀಸರುಗಳು ಬಂದಿದ್ದಾರೆ. ಅವರ ಖುಷಿಗೆ ಈ ಏರ್ಪಾಟು.’

‘ಒಳ್ಳೆಯದಾಯಿತು. ನಾನೂ ಅಲ್ಲಿಗೇ ಹೋಗತೇನೆ. ಮೇಜರ್ ಜೊತೆ ಒಂದೇ ನಿಮಿಷದ ಕೆಲಸ.’

‘ಯುದ್ಧದ ವಿಚಾರ?’ ಬಟ್ಲರ್ ಕೇಳಿದ.’

‘ಹ್ಞೂಂ. ಸಣ್ಣ ವಿಚಾರ ಅಷ್ಟೇ.’

‘ಒಳ್ಳೆಯ ವಿಚಾರವೋ ಕೆಟ್ಟದ್ದೋ?’

‘ನಮ್ಮ ಪಾಲಿಗೆ ಒಳ್ಳೆಯದು. ಬೇರೆ ಕೆಲವರಿಗೆ ಕೆಟ್ಟದ್ದು,’ ಅನ್ನುತ್ತ ಕಮನೇವ್‌ ನಕ್ಕ.

ಅಷ್ಟು ಹೊತ್ತಿಗೆ ಅವರು ಮೇಜರ್ ಮನೆಯ ಹತ್ತಿರಕ್ಕೆ ಬಂದಿದ್ದರು. 

‘ಚಿಖಿರೇವ್‌, ಬಾ ಇಲ್ಲಿ!’ ತನ್ನ ಜೊತೆಯಲ್ಲಿ ಬಂದಿದ್ದ ಕೊಸಾಕ್‍ನನ್ನು ಜೋರಾಗಿ ಕೂಗಿದ ಕಮನೇವ್‌ 

ಜೊತೆಯಲ್ಲಿ ಬಂದಿದ್ದವರ ತಂಡದಿಂದ  ಕೊಸಾಕ್ ಒಬ್ಬಾತ ಮುಂದೆ ಬಂದ. ಅವನು ಡಾನ್ ಕೊಸಾಕ್ ಸಮವಸ್ತ್ರ ತೊಟ್ಟಿದ್ದ. ಅವನ ಕುದುರೆಯ ಬೆನ್ನಿನಲ್ಲಿ ಚೀಲಗಳು ನೇತಾಡುತಿದ್ದವು. 

‘ಎಲ್ಲಿ, ಅದನ್ನ ತೆಗಿ’ ಕುದುರೆ ಇಳಿಯುತ್ತ ಕಮನೇವ್‌ ಹೇಳಿದ.

ಕೊಸಾಕ್ ಕೂಡ ಕುದುರೆ ಇಳಿದಿದ್ದ. ಕುದುರೆಯ ಬೆನ್ನಿನ ಮೇಲಿನ ಚೀಲ ತೆಗೆದುಕೊಂಡ. ಅದರೊಳಕ್ಕೆ ಕೈ ಹಾಕಿದ. 

‘ಸರಿ, ನಿಮಗೇನೋ ತೋರಿಸಿದರೆ, ನೀವು ಹೆದರಿಕೊಳ್ಳಲ್ಲ ತಾನೇ ಮೇರಿ ದ್ಮಿತ್ರಿಯೇವ್ನಾ?’

‘ನನಗೆ ಯಾಕೆ ಭಯ ಆಗಬೇಕು?’ ಅಂದಳು ಅವಳು.

‘ಇಗೋ ನೋಡಿ!’ ಅನ್ನುತ್ತ  ಕತ್ತರಿಸಿದ ತಲೆಯೊಂದನ್ನು ಚೀಲದಿಂದೆತ್ತಿ ಬೆಳುದಿಂಗಳು ಅದರ ಮೇಲೆ ಬೀಳುವ ಹಾಗೆ ಹಿಡಿದು ತೋರಿಸಿದ. ‘ಗುರುತು ಸಿಕ್ಕಿತಾ?’ ಅಂದ.  

ಬೋಳಿಸಿದ ತಲೆ. ಎದ್ದು ಕಾಣುವ ಹಣೆ, ಚಿಕ್ಕದಾಗಿ ಕತ್ತರಿಸಿದ ಗಡ್ಡ, ಮೀಸೆ, ಒಂದು ಕಣ್ಣು ತೆರೆದಿತ್ತು, ಇನ್ನೊಂದು ಅರ್ಧ ಮುಚ್ಚಿತ್ತು. ಬೋಳಿಸಿದ ತಲೆ ಸೀಳುಬಿಟ್ಟಿತ್ತು, ಪೂರಾ ಅಲ್ಲ, ಸ್ವಲ್ಪ. ಮೂಗಿನ ಕೆಳಗೆ ರಕ್ತ ಹೆಪ್ಪುಗಟ್ಟಿತ್ತು. ಕೊರಳಿಗೆ ಸುತ್ತಿದ್ದ ಟವೆಲು ರಕ್ತದಲ್ಲಿ ನೆನೆದು ವದ್ದೆಯಾಗಿತ್ತು. ತಲೆಯ ಮೇಲೆ ಅಷ್ಟೊಂದು ಗಾಯವಿದ್ದರೂ ನೀಲಿಗಟ್ಟಿದ್ದ ತುಟಿಯ ಮೇಲೆ ಮಗುವಿನ ನಗುವಂಥ ನಗುವಿತ್ತು. 

ಮೇರಿ ದ್ಮಿತ್ರಿಯೇವ್ನಾ, ನೋಡಿದಳು. ಒಂದೂ ಮಾತಾಡದೆ ತಟ್ಟನೆ ಮನೆಯೊಳಕ್ಕೆ ಹೋಗಿಬಿಟ್ಟಳು.

ಭಯಂಕರವಾದ ತಲೆಯ ಮೇಲೆ ನೆಟ್ಟಿದ್ದ ದೃಷ್ಟಿ ಕದಲಿಸಲು ಆಗಲೇ ಇಲ್ಲ ಬಟ್ಲರನಿಗೆ. ತೀರ ಇತ್ತೀಚೆಗಷ್ಟೆ ಅಷ್ಟು ಚೆನ್ನಾಗಿ ಗೆಳೆತನದ ಮಾತಾಡಿದ್ದ ಹಾಜಿ ಮುರಾದ್‍ನ ತಲೆ ಅದು.

‘ಹೇಗಾಯಿತು? ಯಾರು ಕೊಂದರು? ಕೇಳಿದ. 

‘ನಮಗೆ ಕೈ ಕೊಟ್ಟು ಓಡಿ ಹೋಗುವುದಕ್ಕೆ ನೋಡಿದ, ನಾವು ಹಿಡಿದೆವು,’ ಅಂದ ಕಮನೇವ್‌, ತಲೆಯನ್ನು ಕೊಸಾಕ್‍ ಕೈಗೆ ವಾಪಸು ಕೊಟ್ಟು ಬಟ್ಲರನ ಹಿಂದೆ ಮನೆಯೊಳಕ್ಕೆ ಕಾಲಿಟ್ಟ. ‘ಹೀರೋ ಥರ ಸತ್ತ,’ ಅನ್ನುವ ಮಾತು ಸೇರಿಸಿದ. 

‘ಹೇಗಾಯಿತು ಇದೆಲ್ಲಾ?’

‘ಸ್ವಲ್ಪ ತಾಳು. ಮೇಜರ್ ಬರಲಿ. ಆ ವಿಚಾರ ಎಲ್ಲಾರಿಗೂ ಒಟ್ಟಿಗೆ ಹೇಳತೇನೆ. ಅದಕ್ಕೇ ನನ್ನ ಕಳಿಸಿದ್ದಾರೆ. ನಮ್ಮ ಎಲ್ಲ ಕೋಟೆಗಳಿಗೆ, ಔಲ್‍ಗಳಿಗೆ ಈ ತಲೆ ತಗೊಂಡು ಹೋಗಿ ತೋರಿಸಬೇಕು.’ 

ಮೇಜರ್ ಗೆ ಹೇಳಿ ಕಳಿಸಿದರು. ಅವನು ಇನ್ನಿಬ್ಬರು ಆಫೀಸರುಗಳ ಜೊತೆಯಲ್ಲಿ ಬಂದ, ಕಮನೇವ್‌ನನ್ನು ಬಿಗಿದಪ್ಪಿಕೊಂಡ.

‘ಹಾಜಿ ಮುರಾದ್‍ನ ತಲೆ ತಂದಿದೇನೆ,’ ಅಂದ ಕಮನೇವ್‌.

‘ಹ್ಞಾ? ಸುಳ್ಳು! ಹೌದಾ? ಕೊಂದರಾ?’ 

‘ಹ್ಞೂಂ. ತಪ್ಪಿಸಿಕೊಳ್ಳುವುದಕ್ಕೆ ನೋಡಿದ.’

‘ಅವನು ನಮಗೆ ಕೈ ಕೊಡುತಾನೆ ಅಂತ ಯಾವಾಗಲೂ ಹೇಳತಾನೇ ಇದ್ದೆ ನಾನು! ಎಲ್ಲಿ ಅದು…ಅದೇ ತಲೆ…ತೋರಿಸು ನೋಡಣ!’

ಕೊಸಾಕ್‍ನನ್ನು ಕರೆದರು. ಅವನು ತಲೆ ಇದ್ದ ಚೀಲವನ್ನು ತಂದ. ಮೇಜರನ ಕುಡುಕ ಕಣ್ಣು ಬಹಳ ಹೊತ್ತು ಆ ತಲೆಯನ್ನೇ ದಿಟ್ಟಿಸಿದವು. 

‘ಏನಾದರೂ ಹೇಳು, ಒಳ್ಳೆಯ ಮನುಷ್ಯ ಪಾಪ. ಅವನಿಗೊಂದು ಮುತ್ತು ಕೊಡಬೇಕು!’ ಅಂದ ಮೇಜರ್.

‘ನಿಜ. ಬಹಳ ಗಟ್ಟಿಗ. ವೀರ,’ ಅಂದ ಅಲ್ಲಿದ್ದ ಒಬ್ಬ ಅಧಿಕಾರಿ.

ಎಲ್ಲರೂ ತಲೆಯನ್ನು ನೋಡಿ ಆದಮೇಲೆ ಕೊಸಾಕ್‍ನ ಕೈಗೆ ವಾಪಸು ಕೊಟ್ಟರು. ಆ ತಲೆ ನೆಲಕ್ಕೆ ಜೋರಾಗಿ ಬಡಿಯದ ಹಾಗೆ ಬಹಳ ಹುಷಾರಾಗಿ ಅದನ್ನು ಚೀಲಕ್ಕೆ ಹಾಕಿದ. 

‘ಅಲ್ಲಾ, ಕಮನೇವ್‌, ಈ ತಲೆ ತಗೊಂಡು ಹೋದ ಕಡೆಯೆಲ್ಲ ಏನಂತ ಭಾಷಣ ಮಾಡುತ್ತೀಯ ನೀನು?’ ಇನ್ನೊಬ್ಬ ಅಧಿಕಾರಿ ಕೇಳಿದ.

‘ಇಲ್ಲಾ!…ಅವನಿಗೆ ಮುತ್ತು ಕೊಡತೇನೆ. ನನಗೆ ಅವನು ಅದ್ಭುತವಾದ ಕತ್ತಿ ಕೊಟ್ಟಾ!’ ಮೇಜರ್ ಚೀರಿದ.

ಬಟ್ಲರ್ ವೆರಾಂಡಕ್ಕೆ ಹೋದ.

ಮೇರಿ ದ್ಮಿತ್ರಿಯೇವ್ನಾ ಎರಡನೆಯ ಮೆಟ್ಟಿಲ ಮೇಲೆ ಕೂತಿದ್ದಳು. ಬಟ್ಲರನತ್ತ ತಿರುಗಿ ನೋಡಿದಳು. ಸಿಟ್ಟು ತೋರುತ್ತ ಮತ್ತೆ ಮುಖ ತಿರುವಿದಳು. 

‘ಏನಾಯಿತು, ಮೇರಿ ದ್ಮಿತ್ರಿಯೇವ್ನಾ?’ ಬಟ್ಲರ್ ಕೇಳಿದ. 

ಕೊರಳು ಕೊಯ್ಯುತ್ತೀರಿ ನೀವೆಲ್ಲ!…ನಿಮ್ಮನ್ನ ಕಂಡರೆ ಆಗಲ್ಲ ನನಗೆ…ಕೊರಳು ಕೊಯ್ಯುವ ಜನ ನೀವು,’ ಅನ್ನುತ್ತ ಎದ್ದಳು.

ಏನು ಹೇಳಬೇಕು ತೋಚದೆ, ‘ಯಾರಿಗೆ ಬೇಕಾದರೂ ಹೀಗಾಗಬಹುದು. ಇದು ಯುದ್ಧ…’ ಅಂದ ಬಟ್ಲರ್.

‘ಯುದ್ಧ? ಯುದ್ಧ ನಿಜ!…ಕೊರಳು ಕೊಯ್ಯುವ ಕೆಲಸ. ಸತ್ತ ದೇಹವನ್ನ ಭೂಮಿಗೆ ವಾಪಸು ಕೊಡಬೇಕು. ಅವರು ಇಲ್ಲಿ ಅದನ್ನ ನೋಡತಾ ಹಲ್ಲು ಕಿರೀತಾ ಇದಾರೆ. ಕೊರಳು ಕೊಯ್ಯುವ ಜನ,’ ಮತ್ತೆ ಮತ್ತೆ ಅನ್ನುತ್ತ ಮೆಟ್ಟಲಿಳಿದು, ಹಿತ್ತಿಲ ಬಾಗಿಲಿನಿಂದ ಮನೆಯೊಳಕ್ಕೆ ಹೋದಳು. 

ಬಟ್ಲರ್ ಎಲ್ಲರೂ ಇದ್ದ ಕೋಣೆಗೆ ಹೋದ. ಎಲ್ಲಾ ಹೇಗೆ ನಡೆಯಿತು ಎಂದು ಕಮನೇವ್‌ನನ್ನು ಕೇಳಿದ.

ಕಮನೇವ್‌ ಕಥೆ ಹೇಳಿದ. 

ಅದೆಲ್ಲಾ ಹೀಗಾಗಿತ್ತು—

| ಮುಂದುವರೆಯುವುದು |

‍ಲೇಖಕರು avadhi

March 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: